ಹಣ್ಣಾಗಿ ಉದುರುತ್ತಿವೆ ಎಲೆ ಮರೆಯ ಕಾಯಿಗಳು

ಸಾಹಿತಿ ಸಮಾಜದ ನಿರ್ಲಕ್ಷಕ್ಕೆ ಒಳಗಾಗಿದ್ದಾನೆಯೇ? ಹೌದು ಎಂದೇ ಹೇಳಬಹುದು. ಸರಿಯಾಗಿ ಸಮೀಕ್ಷೆ ನಡೆಸಿದಲ್ಲಿ ಕರ್ನಾಟಕದಲ್ಲಿ ಪ್ರತಿ ಹಳ್ಳಿಯಲ್ಲೂ ಕನಿಷ್ಠ ಒಬ್ಬ ಸಾಹಿತಿಯಾದರೂ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. – ರವಿನಾಗ್‌ ತಾಳ್ಯ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಸಾಹಿತಿಯು ಜಗತ್ತಿನ ಹದ್ದಿನ ಕಣ್ಣಿನ ಕಾವಲುಗಾರ. ಜಗದ ಸಕಲ ಆಗು ಹೋಗುಗಳನ್ನು, ಬದಲಾವಣೆಗಳನ್ನು ತನ್ನ ಒಳಗಣ್ಣಿನ ಮೂಲಕ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾನೆ. ಅವಶ್ಯಕತೆ ಬಿದ್ದಾಗಲೆಲ್ಲ ತನ್ನ ಲೇಖನಿಯ ಪದ ಪ್ರಹಾರದಿಂದ ಜಗದ ತಪ್ಪು ನಡೆಗಳನ್ನು ತಿದ್ದುವ ಕೆಲಸ ಮಾಡುತ್ತಲೇ ಇರುತ್ತಾನೆ. ಸಾಹಿತಿಯು ಜಗವನ್ನು ತಿದ್ದುವ ಕೆಲಸ ಬರಿಗಣ್ಣಿಗೆ ಕಾಣಿಸದು. ಅದು ಅಗಣಿತ ಮನಸುಗಳ ಧನಾತ್ಮಕ ಬದಲಾವಣೆಯ ಕೆಲಸವನ್ನು ಸಕ್ರಿಯವಾಗಿ ಮಾಡುತ್ತಲೇ ಇರುತ್ತದೆ. ಸಾಹಿತಿ ಜಗದ ಕಣ್ಣಿನಿಂದ ಸದಾ ಅಂತರ ಕಾಯ್ದುಕೊಂಡ ವಿಭಿನ್ನ ವ್ಯಕ್ತಿ. ಯಾವುದೇ ಭಾಷೆಯ ಶ್ರೀಮಂತಿಕೆಯನ್ನು ವೃದ್ಧಿಸುವಲ್ಲಿ ಆ ಭಾಷೆಯ ಸಾಹಿತಿಯ ಪಾತ್ರ ಪ್ರಮುಖವಾಗಿರುತ್ತದೆ. ಬಹುತೇಕ ಸಾಹಿತಿಗಳು ಮುನ್ನೆಲೆಗೆ ಬರುವುದು ಕೂದಲು ಬೆಳ್ಳಗಾದ ಮೇಲೆಯೇ. ಕೆಲ ವೃತ್ತಿ-ಪ್ರವೃತ್ತಿಗಳೇ ಹಾಗೆ, ಬದುಕಿನ ಮುಸ್ಸಂಜೆಯಲ್ಲಿ ಅವರು ಒಂದಿಷ್ಟು ಬೆಳಕಿಗೆ ಬರುತ್ತಾರೆ. ಅಲ್ಲಿಯವರೆಗೂ ಯೋಗಿಯಂತೆ ಅವರು ತಮ್ಮ ಲೇಖನಿಯೊಂದಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಜ್ಞಾನ ಸಮಾಧಿಸ್ಥರಾಗಿರಬೇಕು. ಸಮಾಜದ ಕನ್ನಡಿಯಾಗಿದ್ದ ಸಾಹಿತಿಗೆ ತನ್ನ ಬದುಕಿನ ಮುಸ್ಸಂಜೆಯಲ್ಲಿ ದೊರೆಯುವ ಒಂದಿಷ್ಟು ಸನ್ಮಾನ, ಪಾರಿತೋಷಕಗಳು ಸಾಟಿಯಾಗಬಲ್ಲವೇ ಎಂಬುದನ್ನು ಯೋಚಿಸಬೇಕಿದೆ. ಅಷ್ಟಕ್ಕಾಗಿ ಆತ ಜೀವಮಾನ ಪೂರ್ತಿ ಎದುರಿಸಿದ ಸವಾಲುಗಳು, ಅನುಭವಿಸಿದ ನೋವುಗಳು, ಅವಮಾನ ಆ ಸಾಹಿತಿಗೆ ಮಾತ್ರ ಗೊತ್ತು.

ಈ ಸಾಹಿತ್ಯ ಕ್ಷೇತ್ರವೇ ಹಾಗೆ. ಇದನ್ನೇ ವೃತ್ತಿಯಾಗಿ ರೂಢಿಸಿಕೊಂಡರೆ ದೇಹ ಮಾಗುವವರೆಗೂ ತಾಳ್ಮೆಯಿಂದ ಫಲಕ್ಕಾಗಿ ಕಾಯಬೇಕು. ಪ್ರವೃತ್ತಿಯಾಗಿ ರೂಢಿಸಿಕೊಂಡವರು ತಮ್ಮ ವೃತ್ತಿ, ಪ್ರವೃತ್ತಿ, ಕುಟುಂಬ, ಸಾಮಾಜಿಕ ಸಹಭಾಗಿತ್ವ ಎಲ್ಲದರಲ್ಲೂ ತಮ್ಮ ಸಮತೋಲನ ಕಾಯ್ದುಕೊಳ್ಳಬೇಕು.

ತಂದೆ ತಾಯಿಯರನ್ನು ತಮ್ಮ ಮಕ್ಕಳು ಭವಿಷಯದಲ್ಲಿ ಏನಾಗಬೇಕು ಎಂದು ಕೇಳಿದರೆ ಸಾಮಾನ್ಯವಾಗಿ ನೀಡುವ ಉತ್ತರ ಡಾಕ್ಟರು, ಇಂಜಿನಿಯರ್‌, ಲಾಯರ್‌ ಅಂತಲೇ. ಯಾವೊಬ್ಬ ಪೋಷಕರೂ ತಮ್ಮ ಮಕ್ಕಳು ಒಳ್ಳೆಯ ಸಾಹಿತಿಗಳಾಗಲಿ ಎಂದು ಬಯಸುವುದಿಲ್ಲ ಅಥವಾ ರೈತನಾಗಲಿ ಎಂದೂ ಬಯಸುವುದಿಲ್ಲ. ಒಂದು ವೇಳೆ ಹಾಗೆ ಬಯಸಿದರೆ ಆ ಪೋಷಕರೂ ಸಾಹಿತಿಯಾಗಿರಬೇಕು ಅಷ್ಟೇ.

ಹಾಗಾದರೆ ಸಾಹಿತಿ ಇಷ್ಟೊಂದು ಸಮಾಜದ ನಿರ್ಲಕ್ಷಕ್ಕೆ ಒಳಗಾಗಿದ್ದಾನೆಯೇ? ಹೌದು ಎಂದೇ ಹೇಳಬಹುದು. ಈ ಸಾಹಿತ್ಯದ ಮೇಲಿನ ಪ್ರೀತಿ ಎಲ್ಲರಲ್ಲೂ ಹುಟ್ಟುವುದಲ್ಲ. ಭಾಷೆಯ ಮೇಲೆ ಅತೀವ ಕಾಳಜಿ, ಸಮಾಜದ ಆಗು ಹೋಗುಗಳನ್ನು ಅಳೆದು ತೂಗುವ ಮನೋಗುಣ, ಭಾವನಾತ್ಮಕತೆ ಇವೆಲ್ಲವು ಸಾಹಿತಿಯಲ್ಲಿರುವ ಕೆಲ ಮೂಲಭೂತ ಸ್ವಭಾವಗಳು. ಹವ್ಯಾಸಕ್ಕೆಂದು ಬಾಲ್ಯದಲ್ಲಿಯೋ, ಯೌವನದಲ್ಲಿಯೋ ಬರೆದ ಒಂದು ಕವಿತೆ, ಒಂದು ಲೇಖನ ಹಲವರ ಮೆಚ್ಚುಗೆ ಗಳಿಸಿದರೆ ಸಾಕು. ಆ ವ್ಯಕ್ತಿಗೆ ಅದೇ ಪ್ರೇರಣೆಯಾಗುತ್ತದೆ. ಮತ್ತಷ್ಟು ಮಗದಷ್ಟು ಬರಹಗಳು ಆತನಿಂದ ಹೊರಬರಲು ಪ್ರಾರಂಭಿಸುತ್ತವೆ. ಆತನ ಬದುಕಿನ ಪ್ರತಿ ನೋವು, ನಲಿವಿನ ಕ್ಷಣಗಳಿಗೆ ಸಾಹಿತಿಯ ಹೃದಯ ಮತ್ತು ಲೇಖನಿ ಸ್ಪಂದಿಸುತ್ತಾ ಸಾಗುತ್ತದೆ. ತನ್ನೊಳಗಿನ ನೋವನ್ನು ಸಾಹಿತಿಯಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರೆ ಯಾರೂ ಹೊರ ಹಾಕಲಾರರು. ಬಡತನವು ಸಾಹಿತಿಗೆ ಬರೆಯಲು ಪ್ರೇರಣೆ ನೀಡುತ್ತದೆ, ಸಿರಿತನ ಬಡ ಸಾಹಿತಿಯು ಬರೆದ ಪುಸ್ತಕ ಖರೀದಿಗೆ ನೆರವಾಗುತ್ತದೆ ಎಂದು ಎಲ್ಲೋ ಓದಿದ ನೆನಪು. ಏಕೆಂದರೆ, ಭಾವಿಜೀವಿ ಸಾಹಿತಿಯು ತನ್ನ ಬದುಕಿನಲ್ಲಿ ಸಾಂಸಾರಿಕವಾಗಿ ಮತ್ತು ಸಾಮಾಜಿಕವಾಗಿ ಅನುಭವಿಸಿದ ನೋವು ಹಾಗೂ ಬಡತನವೇ ಬರೆಯಲು ಹೆಚ್ಚಿನ ಪ್ರೇರಣೆ ನೀಡಿರುತ್ತದೆ. ಸಾಹಿತಿಯ ಪ್ರತಿ ಬರಹದೊಳಗೆ ಆತ ಕಂಡುಂಡ ನೋವು ನಲಿವಿನ ಪ್ರತಿಫಲನ ಇದ್ದೇ ಇರುತ್ತದೆ. ಅದು ಬಾಹ್ಯ ಜಗತ್ತಿಗೆ ಅರಿವಾಗದೇ ಇದ್ದರೂ ಆ ನೋವನ್ನು ಪರೋಕ್ಷವಾಗಿ ಹೊರಹಾಕಿದ ಆತ್ಮ ಸಂತೃಪ್ತಿ ಸಾಹಿತಿಯದ್ದಾಗಿರುತ್ತದೆ.

ಸಾಹಿತಿ ಯಾವಾಗಲೂ ಅಲ್ಪತೃಪ್ತ. ಸಾಹಿತಿಯ ಬರಹಗಳಿಗೆ ಒಂದಿಷ್ಟು ಮೆಚ್ಚುಗೆಯ ನುಡಿಗಳು ಬೇಗನೆ ಸಿಗಬಹುದೇ ಹೊರತು ಸಾಹಿತ್ಯದಿಂದಲೇ ಆತ ತನ್ನ ಜೀವನ ನಡೆಸಲಾರ. ಬದುಕಿಗೊಂದು ಸಾಹಿತ್ಯೇತರ ವೃತ್ತಿ ಅನಿವಾರ್ಯವಾಗಿಬಿಡುತ್ತದೆ. ಹಾಗಾಗಿಯೇ ಬಹುತೇಕ ಪೋಷಕರು ಎಲ್ಲಿ ತಮ್ಮ ಮಗ ಅಥವಾ ಮಗಳು ಸಾಹಿತ್ಯದ ಗೀಳು ಹಚ್ಚಿಕೊಂಡು ಓದಿನಲ್ಲಿ ಹಿಂದೆ ಬೀಳುತ್ತಾರೋ, ಎಲ್ಲಿ ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲಾಗುತ್ತಾರೋ ಎಂಬ ಭಯ ಹೊಂದಿರುತ್ತಾರೆ. ಹಾಗಾಗಿ ತಮ್ಮ ಮಕ್ಕಳಲ್ಲಿರುವ ಸಾಹಿತ್ಯಾಸಕ್ತಿಯನ್ನು ಬಹುತೇಕರು ಪೋಷಿಸುವುದೇ ಇಲ್ಲ.

ಇನ್ನು ಮದುವೆಯಾದ ಸಾಹಿತಿಯ ಪಾಡು ದೇವರಿಗೇ ಪ್ರೀತಿ. ಬದುಕಿಗೊಂದು ಯಾವುದೋ ಕೆಲಸ ಮಾಡಿಕೊಂಡಿರುವ ಆತ ಮನೆಗೆ ಬಂದ ತಕ್ಷಣ ತನ್ನ ಲೇಖನಿ, ಪುಸ್ತಕದೊಂದಿಗೆ ಒಂದಷ್ಟು ಸಮಯ ಕಳೆಯಲು ಹಾತೊರೆಯುತ್ತಿರುತ್ತಾನೆ, ಬರೆಯಲು ಕುಳಿತಾಗ ಜಗತ್ತನ್ನೇ ಮರೆಯುತ್ತಾನೆ. ಮನೆಯಲ್ಲಿನ ಮಕ್ಕಳ ಗಲಾಟೆ, ಟಿ.ವಿ ಸೀರಿಯಲ್ಲುಗಳ ಗದ್ದಲ, ಸಂಗಾತಿಯ ಸಿಡಿಮಿಡಿ ಇವುಗಳ ಪರಿವೇ ಇಲ್ಲದೆ ತನ್ನ ಅಕ್ಷರ ಲೋಕದಲ್ಲಿ ಆತ ಆನಂದದಿಂದ ತೇಲುತ್ತಿರುತ್ತಾನೆ. ಗಂಡನ ದುಡಿಮೆ ತಕ್ಕಮಟ್ಟಿಗೆ ಇದ್ದು ಸಂಸಾರ ಚಕ್ರ ಸುಗಮವಾಗಿ ಉರುಳುತ್ತಿದ್ದರೆ ಪರವಾಗಿಲ್ಲ. ಒಂದು ವೇಳೆ ಆತನ ದುಡಿಮೆ ಕಡಿಮೆ ಇದ್ದು ಸಂಸಾರ ನಡೆಸುವುದು ಕಷ್ಟಕರವಾಗಿದ್ದಲ್ಲಿ, ಅಂತಹ ಸಾಹಿತಿಯ ಗತಿ ಅಧೋಗತಿ. ದುಡಿಮೆ ಕಡಿಮೆ ಇದ್ರೂ ಸಂಸಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬರೆಯುತ್ತಾ ಕೂರುತ್ತಾನೆ, ಹೀಗೆ ಬರೀತಾ ಕೂತ್ರೆ ಹೊಟ್ಟೆ ತುಂಬುತ್ತಾ? ಎಂದು ಹೀಗಳೆಯುವ ಕುಟುಂಬಸ್ಥರ ಕುಟುಕು ಮಾತುಗಳನ್ನು ಪದೇ ಪದೇ ಆತ ಕೇಳಿಸಿಕೊಳ್ಳಲೇಬೇಕು. ಇತ್ತ ತನ್ನ ಸಾಹಿತ್ಯಾಭಿರುಚಿಯನ್ನು ಕೈಬಿಡಲೂ ಆಗದೆ ಮುಂದುವರೆಸಲೂ ಆಗದೆ ಆ ಸಾಹಿತಿ ಅನುಭವಿಸುವ ನೋವು ಆತನ ಆತ್ಮ ಸ್ಥೈರ್ಯವನ್ನು ತೀರಾ ಕುಗ್ಗಿಸಿಬಿಡುತ್ತದೆ. ತಾನು ಅತಿಯಾಗಿ ಪೀತಿಸುವ ತನ್ನಲ್ಲಿನ ಪ್ರತಿಭೆಯನ್ನು ತನ್ನವರಿಗಾಗಿ ತ್ಯಾಗ ಮಾಡಲೇಬೇಕಾದ ಪರಿಸ್ಥಿತಿ ಬಂದಾಗ ತನ್ನ ಹೃದಯದಲ್ಲಾಗುವ ವೇದನೆಯನ್ನು ಹೊರ ಜಗತ್ತಿಗೆ ಮುಚ್ಚಿಟ್ಟು ಮುನ್ನಡೆಯಬೇಕು. ಹೀಗೆ ಅದೆಷ್ಟೋ ಸಾಹಿತ್ಯ ಪ್ರತಿಭೆಗಳು ಬೆಳೆಯುವ ಹಂತದಲ್ಲಿಯೇ ತನ್ನ ಆಪ್ತರ ವೈರುಧ್ಯದಿಂದ ಕಮರಿಹೋಗುತ್ತವೆ. ಒಂದು ವೇಳೆ ಏನಾದರೂ ಬರೆಯಬೇಕಾದರೂ ತನ್ನವರ ಕಣ್ಣಿಗೆ ಕಾಣಿಸದಂತೆ ಮರೆಮಾಚಿ ಬರೆದು ಖುಷಿಪಡುವ ಶೋಚನೀಯ ಸ್ಥಿತಿ ಹಲವರದ್ದು.

ಪರಿಸ್ಥಿತಿಗಳು ಹೀಗೆಯೇ ಮುಂದುವರೆದರೆ, ಅರಳುವ ಕನಸು ಹೊತ್ತ ಅನೇಕ ಸಾಹಿತ್ಯ ಪ್ರತಿಭೆಗಳು ಮೊಗ್ಗಾಗಿರುವಾಗಲೇ ನೆಲಕಚ್ಚಿ ಬಿದ್ದು ಮಣ್ಣಾಗುವುದರಲ್ಲಿ ಎರಡು ಮಾತಿಲ್ಲ. ಕನ್ನಡ ನುಡಿಸೇವೆಗೈಯ್ಯುತ್ತ, ಸಮಾಜಕ್ಕೆ ತನ್ನ ಅಕ್ಷರ ಕೊಡುಗೆ ನೀಡಲು ಉತ್ಸುಕತೆ ಹೊಂದಿದ ಸಾಹಿತ್ಯ ಮನಸುಗಳನ್ನು ಹುರಿದುಂಬಿಸುವ, ಪೋಷಿಸುವ ಕಾರ್ಯ ಸರ್ಕಾರದಿಂದ, ಕನ್ನಡಪರ ಸಂಘಟನೆಗಳಿಂದ, ಸಾಹಿತ್ಯ ವೇದಿಕೆಗಳಿಂದ ಆಗಬೇಕಿದೆ. ಖಾಲಿ ಹೊಟ್ಟೆ ಇಟ್ಟುಕೊಂಡು ಪುಸ್ತಕ ತುಂಬಾ ಅಕ್ಷರ ತುಂಬಿಸುವ ಅರೆ ಹೊಟ್ಟೆಯ ತೆರೆ ಮರೆಯ ಸಾಹಿತಿಗಳ ಕುಟುಂಬ ನಿರ್ವಹಣೆಗೆ ಸರ್ಕಾರ ತನ್ನ ಸಹಾಯ ಹಸ್ತ ಚಾಚಬೇಕಿದೆ. ಕನ್ನಡಕ್ಕಾಗಿ ಕನಸು ಹೊತ್ತ ಆ ಅಕ್ಷರ ಮನಸುಗಳು ಮಾನಸಿಕವಾಗಿ ನಲುಗುವುದು ಕನ್ನಡ ಸಾಹಿತ್ಯ ಲೋಕಕ್ಕೆ ಆಗುವ ತುಂಬಲಾರದ ನಷ್ಟವೆಂದೇ ಹೇಳಬಹುದು. ಅದೆಷ್ಟೋ ಸಾಹಿತ್ಯ ಪ್ರತಿಭೆಗಳು ತಾವು ಬರೆದಿಟ್ಟುಕೊಂಡಿರುವುದನ್ನು ಪುಸ್ತಕ ರೂಪಕ್ಕೆ ತರಲಾರದೇ ಮಾನಸಿಕವಾಗಿ ತೊಳಲಾಡುತ್ತಿವೆ. ಅದೆಷ್ಟೋ ಉತ್ತಮ ಸಾಹಿತ್ಯ ಸೃಜನೆ ಮಾಡಿರುವ ಹಿರಿಯ ಜೀವಗಳು ಬದುಕಿನ ಮುಸ್ಸಂಜೆ ತಲುಪಿದರೂ ತಮ್ಮ ಕೃತಿ ಹೊರ ತರಲಾಗದೆ, ತಮ್ಮ ಜೊತೆಗೆ ತಮ್ಮ ಬರಹಗಳೂ ಮಣ್ಣಾಗುವ ಆತಂಕ ಹೊಂದಿರುತ್ತಾರೆ. ಕೆಲವೊಂದು ಸಾಹಿತ್ಯಪರ ವೇದಿಕೆಗಳು, ಸಂಘ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು, ಪುಸ್ತಕ ಪ್ರಾಧಿಕಾರಗಳು ಹಿಂದುಳಿದ ವರ್ಗದವರ ಮತ್ತು ಆರ್ಥಿಕವಾಗಿ ಹಿಂದುಳಿದವರ ಪುಸ್ತಕಗಳನ್ನು ಹೊರತರಲು ಸಹಾಯ ಮಾಡುತ್ತಿವೆ. ಆದರೆ ಅದರ ಪ್ರಮಾಣ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ ಎಂದೇ ಹೇಳಬಹುದು. ಚೊಚ್ಚಲ ಕೃತಿ ಬಿಡುಗಡೆಗೆ ಕೊಡಮಾಡುವ ಧನ ಸಹಾಯಕ್ಕೆ ವಯಸ್ಸಿನ ಮಿತಿಯ ಕಡಿವಾಣವೂ ಇದೆ.

ಸರಿಯಾಗಿ ಸಮೀಕ್ಷೆ ನಡೆಸಿದಲ್ಲಿ ಕರ್ನಾಟಕದಲ್ಲಿ ಪ್ರತಿ ಹಳ್ಳಿಯಲ್ಲೂ ಕನಿಷ್ಠ ಒಬ್ಬ ಸಾಹಿತಿಯಾದರೂ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಸ್ತಕಗಳನ್ನು ಹೊರತರುವುದು, ಸಾರ್ವಜನಿಕವಾಗಿ ಪ್ರಚಾರಪಡಿಸುವುದು, ಸೂಕ್ತ ಮಾರುಕಟ್ಟೆ ಒದಗಿಸಿ ಮಾರಾಟ ಮಾಡುವುದು ತಳಮಟ್ಟದ, ಬಡತನ ರೇಖೆಯಲ್ಲಿರುವ ಸಾಹಿತಿಗೆ ಸಾಧ್ಯವಾಗದ ಸಂಗತಿ. ಇಂತಹ ಸಾಹಿತಿಗಳನ್ನು ಗುರುತಿಸಿ ಪೋಷಿಸುವ ಕಾರ್ಯ ಸಂಬಂಧಿಸಿದವರಿಂದ ಇನ್ನೂ ಸಮರ್ಪಕವಾಗಿ ಆಗುತ್ತಿಲ್ಲ.

ಮತ್ತೊಂದು ಮುಖ್ಯ ವಿಷಯವೆಂದರೆ, ಸಾಹಿತಿಗಳಿಗೆ ಶಾಲು ಹೊದಿಸಿ, ಮುತ್ತಿನ ಹಾರ ಹಾಕಿ ಸನ್ಮಾನ ಮಾಡುವ ಪರಿಪಾಠ. ಸನ್ಮಾನ ಸಾಹಿತಿಯ ಬರವಣಿಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಶಾಲು, ಹಾರ, ಪಾರಿತೋಷಕಗಳು ಸಾಹಿತಿಯ ಹೊಟ್ಟೆ ತುಂಬಿಸುತ್ತವೆಯೇ, ಬದುಕು ರೂಪಿಸುತ್ತವೆಯೇ ಎಂಬುದನ್ನು ಎಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ. ಸಾಹಿತಿಯು ತನ್ನ ಕುಟುಂಬವನ್ನು ಸಮರ್ಪಕವಾಗಿ ನಿರ್ವಹಿಸಲು ಬೇಕಾದ ಪೂರಕ ಸಹಾಯವನ್ನು ಮಾಡಿದಲ್ಲಿ ಅದು ಸಾಹಿತಿಯ ಅತಂತ್ರದ ಬದುಕಿಗೆ ಆಸರೆಯಾದೀತು.

ಒಂದು ವೇಳೆ ಪ್ರಶಸ್ತಿ, ಪಾರಿತೋಷಕ ಕೊಡುವುದಾದರೆ ಸಾಹಿತಿಯ ಕುಟುಂಬಸ್ಥರಿಗೆ ಕೊಡುವುದು ಸೂಕ್ತ. ಏಕೆಂದರೆ ಸಾಹಿತಿಯ ಕುಟುಂಬಸ್ಥರಿಗೆ ವೇದಿಕೆಯಲ್ಲಿ ಮಾಡುವ ಸನ್ಮಾನದಿಂದ ಪ್ರೇರಿತರಾಗಿ ಅವರು ತಮ್ಮ ಕುಟುಂಬದ ಸಾಹಿತಿಯು ಬರೆಯಲು ಹೆಚ್ಚಿನ ಪ್ರೋತ್ಸಾಹ ನೀಡಬಹುದು. ಸಾಹಿತಿಯ ಬರವಣಿಗೆಯನ್ನು ಬೆಂಬಲಿಸಿದ ಆತ್ಮತೃಪ್ತಿ ಅವರದ್ದಾಗಬಹುದು. ಇದರಿಂದ ಸಾಹಿತಿಯು ನೆಮ್ಮದಿಯಿಂದ ತನ್ನನ್ನು ತಾನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ನೆರವಾದೀತು.

ಪ್ರಯುಕ್ತ ಸಾಹಿತ್ಯ ಬಂಧುಗಳೇ ಸಾಹಿತ್ಯ ಪ್ರತಿಭೆಗಳನ್ನು ಕಡೆಗಣಿಸಿ ಚಿವುಟಿಹಾಕುವುದು ಪುಸ್ತಕಗಳನ್ನು ಹರಿದು ಹಾಕಿದಷ್ಟೇ ಅಮಾನವೀಯ ಪಾಪಕೃತ್ಯ. ಬಡವನ ಸಾಹಿತ್ಯದ ಶ್ರೀಮಂತಿಕೆಗೆ ಬಡತನ ಮುಳ್ಳಾಗದಿರಲಿ. ಬಡವನಿಗೆ ಬರಹಗಳು ಬದುಕು ನೀಡಲಿ. ಸಾಹಿತ್ಯ ಪೋಷಕ ಮನಸ್ಸುಗಳು, ಸಾಹಿತಿಯ ಕುಟುಂಬವೂ ಸಹ ಗೌರವಯುತ ಹಾಗೂ ನೆಮ್ಮದಿ ಬದುಕು ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತಾಗಲಿ. ಸಾಹಿತಿ ಬಡವನಾದರೂ ಸಾಹಿತಿಯ ಮಕ್ಕಳು ಬಡವರಾಗದಿರಲಿ.


  • ರವಿನಾಗ್‌ ತಾಳ್ಯ – ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW