‘ಹನುಕಿಯಾ’ ಕೃತಿ ಪರಿಚಯ

ವಿಠಲ್ ಶೆಣೈ ಅವರ ಅಪರೂಪದ ಕಥಾ ವಸ್ತುವಿನೊಂದಿಗೆ ಅದ್ಭುತ ನಿರೂಪಣೆಯ ‘ಹನುಕಿಯಾ’ ಕಾದಂಬರಿಯನ್ನು ಸಮರ್ಥವಾಗಿ ಕಟ್ಟಿದ ಲೇಖಕರ ಪರಿಶ್ರಮ ಶ್ಲಾಘನೀಯವಾಗಿದ್ದು, ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಹನುಕಿಯಾ
ಲೇಖಕರು: ವಿಠಲ್ ಶೆಣೈ
ಸಾಹಿತ್ಯಲೋಕ ಪಬ್ಲಿಕೇಷನ್ ಬೆಂಗಳೂರು
ಮುದ್ರಣದ ವರ್ಷ:೨೦೨೩
ಪುಟಗಳು: ೪೦೦
ಬೆಲೆ: ರೂ. ೪೯೫

*ಮಂಗಳೂರು ಮೂಲದ ಲೇಖಕರಾದ ಶ್ರೀ ವಿಠಲ್ ಶೆಣೈ ಅವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ನೆಲೆಸಿದವರು. ಬರವಣಿಗೆ ಇವರ ಪ್ರವೃತ್ತಿ. ಅಪಾರ ಅಧ್ಯಯನದ ತಯಾರಿಯಿಂದ ಹಾಗೂ ಸತ್ಯಘಟನೆಯನ್ನು ಆಧರಿಸಿ, ತಮ್ಮ ಕಲ್ಪನೆಯಿಂದ ನಿರೂಪಿಸಿ ವಿಠಲ್ ಶೆಣೈಯವರು ಈ ವಿಶಿಷ್ಟ ಕಾದಂಬರಿಯನ್ನು ರಚಿಸಿದ್ದಾರೆ.

ಲೇಖಕರು ಹೇಳಿದಂತೆ ಇದು ಎರಡನೆಯ ವಿಶ್ವಯುದ್ಧ ಕಾಲದ ನೋವು -ನಲಿವು ಮತ್ತು ಗೆಲುವಿನ ಕಥನ.

೧೯೩೯ ರಿಂದ ೧೯೪೬ ಕಾಲಘಟ್ಟದಲ್ಲಿ ಎರಡನೇ ಮಹಾಯುದ್ಧ ನಡೆದ ಸಮಯದಲ್ಲಿ ತಮ್ಮ ಮನೆತನದ ಬೆಲೆಬಾಳುವ ಅಮೂಲ್ಯವಸ್ತುಗಳನ್ನು ಕಳೆದುಕೊಂಡು ಅದನ್ನು ಹೊತ್ತು, ನಾಪತ್ತೆಯಾದ ‘ನಾಜಿ ಗೋಲ್ಡ್’ ರೈಲನ್ನು ಹುಡುಕುವ ಪ್ರಯತ್ನದ ಹಿಂದಿನ ಕುಟುಂಬವೊಂದರ ಹಿನ್ನೋಟವನ್ನು ನಾವಿಲ್ಲಿ ಕಾಣಬಹುದು.

 

ಈ ಕಥೆಯ ಪ್ರಮುಖ ಪಾತ್ರಧಾರಿಣಿ ಮೀರಾ ಚಂದ್ರಕಾಂತ್. ಆಕೆ ಈಗ ೯೦ ವರ್ಷದ ಮುದುಕಿಯಾಗಿದ್ದರೂ, ಅದ್ಭುತ ಚಿತ್ರಗಾರ್ತಿ. ಕಂಪನಿಯೊಂದರಲ್ಲಿ ಇಂಜನೀಯರ್ ಆಗಿದ್ದ ಮೊಮ್ಮಗ ಆನಂದ್ ಜೊತೆ ಕೆಲವು ದಿನಕಳೆಯಲು ಆಕೆ ಅಹಮದಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದಳು.

‘ಪೋಲೆಂಡ್ ಟ್ರೈನ್ ಹುಡುಕುವ GPR’ ತಯಾರು ಮಾಡುವ ಕಾರ್ಯಾಚರಣೆಯಲ್ಲಿ ಆನಂದನ ಕಂಪನಿಯೂ ಭಾಗಿಯಾಗಲಿರುವ ಸುದ್ದಿ ತಿಳಿದು ಮೀರಾಳಿಗೆ ಅದೇನೋ ಆಶಾಭಾವ. ಪ್ರಾಜೆಕ್ಟ್ ಸಲುವಾಗಿ ಪೋಲೆಂಡ್ ಗೆ ಹೊರಟವನ ಜೊತೆಗೆ ತಾನೂ ಬರುವುದಾಗಿ ಹಠಹಿಡಿದು ನಿಂತಿದ್ದಳು. ವಾರ್ಸಾದತ್ತ ಹೊರಟ ಟೀಮ್ ಲೀಡರ್ ಮ್ಯಾಟ್ ಮತ್ತು ಹಿಲರಿಗೆ ಇವರು ಬರುವುದು ಇಷ್ಟವಿಲ್ಲದಿದ್ದರೂ ‘ಮೀರಾ ಅನೇಕ ಮಾಹಿತಿ ತಿಳಿದ ಯುದ್ಧಪೀಡಿತ ಸಂತ್ರಸ್ತೆ’ ಎಂದು ಒಪ್ಪಿರುತ್ತಾರೆ. ಅವರು ನಿಮಗೆ ನಮ್ಮ ಪ್ರಾಜೆಕ್ಟ್ ಬಗ್ಗೆ ಏನು ಗೊತ್ತು? ಎಂದು ಅಜ್ಜಿಯನ್ನು ಕೇಳಿದಾಗ,

೧೯೪೫ ರ ವಿಶ್ವಯುದ್ಧದ ಸೋಲಿನ ಭೀತಿಯಲ್ಲಿದ್ದ ಹಿಟ್ಲರ್ ಮತ್ತು ನಾಜಿ ಪಾರ್ಟಿಗಳು ಯಹೂದಿಗಳಿಂದ ಲೂಟಿ ಮಾಡಿದ ಸಂಪತ್ತನ್ನು ಒಟ್ಟುಹಾಕಿ ರೈಲಿನಲ್ಲಿ ಸಾಗಿಸುತ್ತಿದ್ದರು ಅದರಲ್ಲಿ ನಮ್ಮ ಮನೆಯ ಪೈಂಟಿಂಗ್ ಹಾಗೂ ‘ಹನುಕಿಯಾ’ ಅಂದರೆ ಯಹೂದಿಯರ ಪವಿತ್ರ ಚಿನ್ಹೆ. ಒಂಬತ್ತು ಸ್ತಂಭಗಳು ಇರುವ ಮೆನೋರ ದೀಪ ಇದೆ. ನನಗೆ ಅದು ಮಾತ್ರ ಬೇಕು. ಉಳಿದ ಹಣ -ಬಂಗಾರ ಏನೂ ಬೇಡ.ನನ್ನ ಹತ್ತಿರ ಶಿಬಿರದಲ್ಲಿದ್ದಾಗಿನ ಇದರ ಸ್ಥಳ ಸೂಚಿಸುವ ಬಗ್ಗೆ ಇಪ್ಪತ್ತು ನಕ್ಷೆ-ಮ್ಯಾಪ್ ಇದೆ. ಅದರಿಂದ ನಿಮಗೇನಾದರೂ ಉಪಯೋಗವಾಗಬಹುದು. ಎಂದು ತೋರಿಸಿದಳು.

ಮೂಲತಃ ಇಷ್ಟು ಬಾರಿಯ ಅನ್ವೇಷಣೆಯಲ್ಲಿ ವಿಫಲರಾಗಿದ್ದ ಹಿಲರಿ ಮತ್ತು ಮ್ಯಾಟ್ ಆಗ’ ನೀವು ಆ ಯಾತನಾ ಶಿಬಿರದಲ್ಲಿ ಬದುಕುಳಿದವರೇ? ಎಂದು ಅಚ್ಚರಿ ಪಡುತ್ತಾರೆ.
ಅವರು ಮೀರಾ ಹೇಳಿದ ಕಥೆಯನ್ನು ಸ್ಟುಡಿಯೋದಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ.

ಭಾಗ- ೧ ನೋವು

ಮುದುಕಿ ಮೀರಾಳ ಮೂಲ ಹೆಸರು ಮಿರಿಯಂ.ಆಕೆ ಪೋಲೆಂಡ್ ನ ಕೀಲ್ಸಾ ಪಟ್ಟಣದ ಸುಸಜ್ಜಿತ ಅಪಾರ್ಟ್ಮೆಂಟ್ ನಲ್ಲಿ ತಂದೆ -ತಾಯಿ- ಅಣ್ಣನೊಂದಿಗೆ ಸುಖವಾಗಿ ಬೆಳೆಯುತ್ತಿದ್ದ ತರುಣಿ. ನೇಥನ್ ಮತ್ತು ಮಿರಿಯಂ ಅವಳಿ ಮಕ್ಕಳು. ಅವಳ ತಂದೆ ಯಹೂದಿ ಬೆಂಜಮಿನ್. ತಾಯಿ ಇಸಬೆಲ್ ಕ್ರಿಶ್ಚಿಯನ್. ಜರ್ಮನ್ ಮೂಲದ ತವರನ್ನು ತೊರೆದು ಪ್ರೇಮ ವಿವಾಹವಾದ ಅವಳನ್ನು ಅಣ್ಣ ವಾಲ್ಟರ್ ವಿರೋಧಿಸುತ್ತಿದ್ದ. ಆಗವನು ಜರ್ಮನ್ ಸೈನಿಕರ ಪಡೆಯಲ್ಲಿ ಕೆಲಸ ಮಾಡುತ್ತಿದ್ದ.

ಅಂದು ರಸ್ತೆಯಲ್ಲಿ ಜರ್ಮನ್ ಸೈನಿಕರು ಮತ್ತು ಪೊಲೀಸರು ಶೆಪರ್ಡ್ ನಾಯಿಗಳೊಂದಿಗೆ ಯಹೂದಿಗಳನ್ನು ಬಂಧಿಸುತ್ತಾ, ಬರಲು ವಿರೋಧಿಸುತ್ತಿದ್ದವರನ್ನು ಪಿಸ್ತೂಲಿನಿಂದ ಉರುಳಿಸುತ್ತಾ , ಯುದ್ಧದ ಗಲಾಟೆಯ ಘೋಷಣೆಯೊಂದಿಗೆ ಸಾಗುತ್ತಿದ್ದರು. ಅಗತ್ಯದ ವಸ್ತುಗಳನ್ನು ಪ್ಯಾಕ್ ಮಾಡಿ ನೀವೆಲ್ಲಾ ಮನೆ ಬಿಡಬೇಕು. ನಿಮ್ಮ ಮರುವಸತಿಗೆ ಸರ್ಕಾರ ಏರ್ಪಾಟು ಮಾಡಿದೆ. ಬೇಗ ಬನ್ನಿ ಎಂದು ಎಲ್ಲರನ್ನೂ ಮಿಲಿಟರಿ ಟ್ರಕ್ ನಲ್ಲಿ ತುಂಬಿಕೊಂಡು ಹೋಗುತ್ತಾರೆ.

ಆದರೆ ಅವರು ಸುಳ್ಳು ಹೇಳಿ ಯಹೂದಿಯರನ್ನು ಕರೆದು ಕೊಂಡು ಹೋಗಿದ್ದೆಲ್ಲಿಗೆ?… ಹೀಗೆ ಅವರೆಲ್ಲಾ ಬೇರೆ ಬೇರೆಯಾಗಿ ಸೆರೆ ಶಿಬಿರದಲ್ಲಿ ಪಟ್ಟ ಶಿಕ್ಷೆ, ಹೊಟ್ಟೆಗೂ ತಿನ್ನಲು ಗತಿಯಿಲ್ಲದ ಸ್ಥಿತಿ, ಅವರ ತಂದೆ -ತಾಯಿಯನ್ನು ಗ್ಯಾಸ್ ಚೇಂಬರ್ ನಲ್ಲಿ ಸುಡುವ ಕ್ರೂರ ಸಾವಿನ ನೋವು, ಆಶ್ವಿಟ್ಸನ ಹೆಣ ಸುಡುವ ಜಾಗದ ಭೀಕರತೆ, ಜೊತೆಯಾದ ರುತ್ ಆಂಟಿ,ಅಲ್ಲಿಂದ ಪಾರಾಗಲು ಮಿರಿಯಂಳ ಹೋರಾಟ. ಇವೆಲ್ಲವೂ ಓದಿಯೇ ಕರಾಳತೆಯನ್ನು ಅರಿಯಬೇಕು.

ಹಿಟ್ಲರ್ ನಲ್ಲಿ ಆರ್ಯನ್ನೇತರ ಜನಾಂಗದ ಬಗ್ಗೆ ವಿಷಬೀಜ ಬಿತ್ತಲು ನೆರವಾಗಿದ್ದ ‘ಮೆಂಗಲ’ ಎಂಬ ವಿಚಿತ್ರ ವೈದ್ಯನ ಸೆರೆಗೆ ಸಿಕ್ಕಿ ಅವನ ‘ನೀಲಿ ಕಣ್ಣಿ’ನ ಪ್ರಯೋಗಕ್ಕೆ ಮಿರಿಯಂ ಮತ್ತು ನೇಥನ್ ದಾಳವಾಗಿದ್ದರು. ಆದರೆ ತನ್ನ ಚಿತ್ರಕಲೆಯಿಂದ ಅವನು ತೋರಿಸುವ ವಿಜ್ಞಾನ ಚಿತ್ರಗಳನ್ನು ಬಿಡಿಸಿ ಸಹಾಯಮಾಡುತ್ತಾ ಮಿರಿಯಂ ಎಷ್ಟೋ ಶಿಕ್ಷೆಯನ್ನು ತಪ್ಪಿಸಿಕೊಂಡಿದ್ದಳು. ತನ್ನ ಅಣ್ಣನನ್ನು ಆ ಶಿಬಿರದಿಂದ ಬಿಡಿಸುವ ಷರತ್ತಿನ ಮೇಲೆ ಚಿತ್ರ ರಚಿಸಲು ಅವಳು ಒಪ್ಪಿ ಕೊಂಡಿದ್ದಳು. ಬೆಲೆಯಿರುವ ತನ್ನ ಚಿತ್ರಗಳಿಂದಲೇ ಅವಳು ಅಲ್ಲಿ ಕೆಲವು ಉಪಯೋಗ
ಪಡೆದಳು. ಹಾಗಾದರೆ ಅವು ಏನು?. ಅತ್ತ ರಾಲ್ಫ್ ಎಂಬ ಕಾರು ರಿಪೇರಿ ಮಾಡುವ ಗೆಳೆಯನೊಂದಿಗೆ ನೇಥನ್ ಮತ್ತು ಮಿರಿಯಂ ಶಿಬಿರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರಿಗೆ ಸಿಕ್ಕಿ ಬಿದ್ದರು. ಮಿರಿಯಂ ಹರಿಯುತ್ತಿದ್ದ ವಿಸ್ತುಲಾ ನದಿಗೆ ಹಾರಿದಳು!. ಅವಳು ಭಾರತಕ್ಕೆ ಹೋಗುತ್ತಿರುವ ಹಡಗಿನಲ್ಲಿ ಬಂದಿದ್ದು ಹೇಗೆ?.

ಭಾಗ- ೨: ನಲಿವು

ಭಾರತದಲ್ಲಿ ಪೋಲೆಂಡ್ ನ ರಾಯಭಾರಿಯಾಗಿದ್ದ , ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಯಾಗಿ ಭಾರತದಲ್ಲಿ ನೆಲೆಸಿದ್ದ ‘ಕೀರಾ’ ಎಂಬಾಕೆಯ ಸಹಾಯಕನಾಗಿದ್ದ ಚಂದ್ರಕಾಂತ್ ಮಿರಿಯಂಳಿಗೆ ಮಾಡಿದ ಸಹಾಯಗಳು, ಅವನ ಜೊತೆ ಅವಳ ಪ್ರೇಮ, ಮದುವೆಗೆ ಧರ್ಮದ ಅಡ್ಡಿ, ಅವಳ ಕಾಯಿಲೆ, ನಿರಾಶ್ರಿತರಿಗೆ ಭಾರತದ ಮಹಾರಾಜರು ನೀಡುವ ನೆರವು, ಕಾರ್ಯನಿರತ ಹಡಗುಗಳು, ಅಣ್ಣ ಸತ್ತು ಹೋಗಿದ್ದಾನೆಂದು ತಿಳಿದ ಸುದ್ದಿ ತಂದ ದುಃಖ, ಆಕೆಗೆ ಮುಂದುವರೆದ ವಿದ್ಯಾಭ್ಯಾಸ, ನಂತರ ಬಾಲಚಡಿಯಲ್ಲಿ ಶಿಕ್ಷಕಿಯ ಕೆಲಸ, ಮಹಾರಾಜರ ಆಶ್ರಯ, ಇವೆಲ್ಲಾ ಸಂಗತಿಗಳ ವಿಸ್ತ್ರತ ಅಧ್ಯಾಯಗಳು ಬಹಳ ಚೆನ್ನಾಗಿದೆ. ಗಾಂಧೀಜಿಯ ಅಹಿಂಸಾವಾದದ ಭಾಷಣ ಕೇಳಿ ಮಿರಿಯಂ ತನ್ನ ಸೋದರ ಮಾವ ‘ವಾಲ್ಟರ್’ ಮೇಲಿನ ಸೇಡು ಮರೆತಳು.!

ಆದರೆ ಸುಭಾಷ್ ಚಂದ್ರ ಬೋಸ್ ರ ಬಂಡಾಯಗಳನ್ನು ಬೆಂಬಲಿಸಿದ ಚಂದ್ರನನ್ನು ಅವಳು ತಪ್ಪಾಗಿ ತಿಳಿದರೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಯಾದ ಅವನನ್ನು ಮಹಾರಾಜರ ಸಹಾಯದಿಂದ ಬಿಡಿಸುವಳು. ಭಾರತದಲ್ಲಿ ಅವಳ ಅವಿಸ್ಮರಣೀಯ ದಿನಗಳೆಲ್ಲವೂ ಈ ಭಾಗದಲ್ಲಿ ಹೃದಯಸ್ಪರ್ಶಿಯಾಗಿ ಮೂಡಿದೆ.

ಭಾಗ- ೩ : ಗೆಲುವು
ಅಂದು ಬೇರ್ಪಟ್ಟ ರಾಲ್ಫ್ ಮತ್ತು ನೇಥನ್ ಹಿಟ್ಲರನ ‘ನರಮೇಧ’ವನ್ನು ತಪ್ಪಿಸಿಕೊಂಡು ಅಮೇರಿಕಾದ ಮಿಲಿಟರಿಯಲ್ಲಿ ಸೇರ್ಪಡೆಗೊಂಡಿದ್ದು ಹೇಗೆ?.. ಪ್ರೇಯಸಿ ಪೈಲೆಟ್ ರೋಸಲಿನ್ ಮತ್ತು ಸ್ನೇಹಿತ ರಾಲ್ಫ್ ನನ್ನು ಕಳೆದುಕೊಂಡ ನಂತರ ತಂಗಿ ಮಿರಿಯಂಳನ್ನು ಹುಡುಕಿಕೊಂಡು ನೇಥನ್ ಭಾರತಕ್ಕೆ ಬಂದಿದ್ದು ಹೇಗೆ?. ಮರಳಿ ಅಣ್ಣನೊಂದಿಗೆ ಹನುಕಿಯಾದ ಅನ್ವೇಷಣೆಯಲ್ಲಿ ಪೋಲೆಂಡ್ ಗೆ ಹೋದ ಮಿರಿಯಂ ಅಲ್ಲಿ ತಮ್ಮ ಮೂಲಮನೆಯನ್ನು ನೋಡಲು ಹೋದಾಗ ಆದ ಗಲಾಟೆ ಏನು?.

ನೇಥನ್ ಸತ್ತಿದ್ದು, ಅದೇ ಸಮಯದಲ್ಲಿ ಚಂದ್ರಕಾಂತ ಅಲ್ಲಿ ಬಂದಿದ್ದು….ಅನಾಥಳಾಗಿ ಸಾಯಲು ಹೊರಟಿದ್ದ ಮಿರಿಯಂಳನ್ನು ಮತ್ತೆ ಭಾರತಕ್ಕೆ ಕರೆತಂದು ಮದುವೆಯಾಗಿ ನಲವತ್ತು ವರ್ಷಗಳ ಸುಖಾಸಂಸಾರ ಮಾಡಿ, ಎಪ್ಪತ್ತರ ವಯಸ್ಸಿನಲ್ಲಿ ತೀರಿ ಕೊಂಡಿದ್ದು, ಇವೆಲ್ಲಾ ಗೆಲುವಿನ ಒಂದು ಹೊಸ ಅಧ್ಯಾಯದ ಭಾಗದಲ್ಲಿದೆ.

ಹಿಂದೂ ಸಂಸ್ಕೃತಿಯಂತೆ ತನ್ನ ಹೆಸರನ್ನು ಮೀರಾ ಎಂದು ಬದಲಾಯಿಸಿ ಕೊಂಡ ಚಿತ್ರಗಾರ್ತಿ ಮಿರಿಯಂಗೆ ಅವಳ ಕೊನೆಯ ಆಶೆಯಾದ ಹನುಕಿಯಾ ಮತ್ತು ಹೂ ಬುಟ್ಟಿಯನ್ನು ಹಿಡಿದ ಹುಡುಗಿಯ ಪೈಂಟಿಂಗ್ ಸಿಕ್ಕಿದ್ದು ಎಲ್ಲಿ ಮತ್ತು ಹೇಗೆ?. ಆ ಒಂಬತ್ತು ದೀಪಗಳ ಸ್ತಂಬಗಳನ್ನು ತನ್ನ ಜೀವನದಲ್ಲಿ ಭರವಸೆ ತುಂಬಿದ ೯ ವ್ಯಕ್ತಿಗಳಿಗೆ ಸಮರ್ಪಿಸಿ. ‘ಇವರೆಲ್ಲಾ ಎಂದಿಗೂ ಆರಿ ಹೋಗದ ದೀಪಗಳು’ ಎನ್ನುವ ಮೀರಾಳ ಹೃದಯಪೂರ್ವಕ ಅನಿಸಿಕೆಗಳ ಸ್ಮರಣೆ ತುಂಬಾ ಭಾವಪೂರ್ಣವೆನ್ನಿಸುತ್ತದೆ.

ಅಪರೂಪದ ಕಥಾ ವಸ್ತುವಿನೊಂದಿಗೆ ಅದ್ಭುತ ನಿರೂಪಣೆಯ ಈ ಕಾದಂಬರಿಯನ್ನು ಸಮರ್ಥವಾಗಿ ಕಟ್ಟಿದ ಲೇಖಕರ ಪರಿಶ್ರಮ ಶ್ಲಾಘನೀಯ. ಕಾದಂಬರಿಯನ್ನು ನೀವೂ ಓದಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW