ಸರ್ವರಿಗೂ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು … ನಿವೃತ್ತ ಶಿಕ್ಷಕರು ಮತ್ತು ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ವಿಶ್ವತೋಮುಖಿಯಾಗಿ ಹೆಮ್ಮೆಯಲಿ ಬೆಳಗಿಸುತಿಹ ಭಾರತದ
ಸ್ವಾತಂತ್ರ್ಯ ಪುರುಷನಿಗೆ
ನನ್ನ ನಮನ
ದಿಗ್ದಿಗಂತದಲಿ ಜಯಘೋಷ
ಮಾಡುತಿಹ
ಭಾರತೀಯರ ಆತ್ಮಶಕ್ತಿಗಿದೋ
ಮುಡಿಪೆನ್ನ ಸಮಸ್ತ ಚೇತನ
ಹಾಡುವೆನು ಹೊಗಳುವೆನು
ತಾಯೆ ಉತ್ಕಂಠದಲಿ ನಿನ್ನ
ತಣಿಯದಾ ದಾಹವಿದೆ
ನಿನ್ನ ಹಿರಿಮೆಯ ಪರಂಪರೆಯ ಮೇಲೆ
ಬಹುವೇಷ ಬಹು ಭಾಷೆ
ಬಹುತರದ ಇತಿಹಾಸ
ಬಹುತರದ ಜ್ಞಾನವಿಜ್ಞಾನಗಳ
ನಿಧಿಯ ಮೇಲೆ
ಬಗೆದಷ್ಟೂ ಅರಿತಷ್ಟೂ
ಬೆರಗೂಡುವ ಖಜಾನೆಯಿದೆ
ತಿಳಿದೂ ತಿಳಿಯದಂತಿರುವ
ನಿನ್ನಗಾಧ ಧೀಶಕ್ತಿಯ ಮೇಲೆ
ಕಲೆಯ ವಿಜ್ಞಾನದ ಸಾಹಿತ್ಯ ಸಂಪದದ
ಖಗೋಳ ಭೂಗೋಳಗಳ
ಅಚ್ಚರಿಯ ತೆರೆದಿಟ್ಟ
ಅನೂಹ್ಯ ಜ್ಞಾನಗಳ ಸಂತ
ಸಾಧಕರ ಮೇಲೆ
ಕಲ್ಲಿನೆದೆಯಲಿ ವಿಸ್ಮಯದ ಕಲೆಯೂಡಿ
ಸಂಗೀತ ಹರಿಸಿದ ಕುಶಲಿಗಳ
ಒಳನೋಟದ ಮೇಲೆ
ಸಾಹಿತ್ಯ ಸರಸ್ವತಿಯ ದಿವ್ಯತೆಯ
ವರ್ಧಿಸಿದ
ಅಂತರಂಗದಲಿ ದಿವ್ಯ ಸಾಕ್ಷಾತ್ಕಾರ ಪಡೆದ
ದೃಷ್ಟಾರರ ಮೇಲೆ
ಧರ್ಮಸಮನ್ವಯದ ರಸಭೋಜ್ಯ ಮಾಡಿಸಿದ
ಈ ನೆಲದ ಮಕ್ಕಳ ಸಹಿಷ್ಣುತೆಯ ಔದಾರ್ಯದ ಮೇಲೆ
ಎಷ್ಟೆಷ್ಟು ದೋಚಿದರೂ ಪುಟಿದು ನಿಲ್ಲುವ ನಿನ್ನ ಅಸೀಮ
ಧೀಶಕ್ತಿ ಸಾಮರ್ಥ್ಯದ ಮೇಲೆ
ಹೆಮ್ಮೆಯಿಂದಿದೊ ಬೀಗುವುದು
ನಮ್ಮೆದೆಯ ಧನುವಿಂದು
ಠೇಂಕಾರ ಮಾಡುತ್ತ ವಿಶ್ವಚೇತನವಾಗಿ
ಹೊರಡುತಿದೆ ಕಣೆಯದೊ
ಶ್ರೀರಾಮ ಕಣೆಯಿಂದ
ಸಲ್ಲದುದರೆದೆಗೆ ವಿನಾಶಸೂಚಕವಾಗಿ
ಎಷ್ಟೆಷ್ಟು ಅಸಾಧ್ಯಗಳ ಸಾಧ್ಯವಾಗಿಸಿದೆಯಿಂದು
ನೈರಾಶ್ಯದಲಿ ಮಲಗಿದ್ದ ರೆಪ್ಪೆಯರಳಸಿ ಎರೆದು
ದಿವ್ಯ ಕಾಂತಿಯ ನಿನ್ನ ಮಕ್ಕಳ ಕಂಗಳಿಗೆ ಇಂದು
ಕಂಕಣವ ತೊಟ್ಟೆವು ದೀಕ್ಷೆಯಲಿ ಪಣತೊಟ್ಟು
ಅಜೇಯವಾಗಲಿ ಅನಂತವಾಗಲಿ
ಅಸೀಮವಾಗಲಿ ನಿನ್ನ ಆತ್ಮಬಲವೆಂದೆಂದು
ಎಂದು ಹಾರೈಸುತ ನಿಂದು
ವೀರಯೋಧರ ಸಮರ್ಪಣೆಯ ಕವಚವಿದೆ ನಿನಗಿದೋ
ಸ್ವಾಭಿಮಾನದ ಕೆಚ್ಚು
ತುಂಬಿ ತುಂಬಿ
ಪಾವನ ನದೀ ಕ್ಷೇತ್ರಗಳ ಪುಣ್ಯರಕ್ಷೆಯಿದೆ ಹುತಾತ್ಮರ
ನೆತ್ತರೋಕುಳಿಯ ನೆನಪಲ್ಲಿ ಮಿಂದು
ಮೇಧಾವಿಗಳ, ರಾಷ್ಟ್ರಭಕ್ತರ ಪಡೆಯಲಿದೆ ನಿರುತ ನಿನ್ನೆದೆಯ ಮಂದಿರದ ಪೂಜಾ ದೀಕ್ಷೆಯಲಿ ನಿಂದು
ಮಣ್ಣಿನ ಮಕ್ಕಳ ತೋಳ್ಬಲದ ಹರಕೆಯಿದೆ ಉಪವಾಸವಿಡದಂತೆ ನಿರುತ
ಕಾಯಕವ್ರತದಲಿ ನಿಂದು
ನಮನವಿದೊ ನಿನ್ನ ಪದತಲಕೆ
ನಮನ ಪುಷ್ಪವೃಷ್ಟಿಯು ನಿನ್ನ
ಘನ ಶಿರದ ಹಿರಿತನಕ್ಕೆ
ನಮನ ನಿನ್ನ ಕಾಯುವ ನಿತ್ಯ
ಮಹೋನ್ನತ ಪರ್ವತಕ್ಕೆ
ನಮನ ನಿನ್ನ ಆವೃತ ಶರಧಿದೊರೆಗೆ
ನಮನ ನಿನಗಾಗಿ ಅಹರ್ನಿಶಿ
ಸ್ತುತಿಸಿ ನಲಿಯುವ ಕರ್ಮಯೋಗಿಗಳಿಗೆ
- ಶಿವದೇವಿ ಅವನೀಶಚಂದ್ರ