ಹಾಲೆರೆಯುವುದೆಂದರೆ ಊರಿನ ಸುತ್ತು-ಮುತ್ತು ಆ ಊರಿನ ಗಡಿಯಗುಂಟ ಹಾಲು ಹಾಕುತ್ತಿದ್ದರು. ಅದೊಂದು ರೋಮಾಂಚಕ ಪ್ರಕ್ರಿಯೆ.ಮಾನವ ಕುಲ-ಕೋಟಿಗೆ ಒಳ್ಳೆಯದಾಗಲಿ ಎಂದು ಹೋಮ-ಹವನಗಳನ್ನು ಮಾಡುತ್ತಿರಲಿಲ್ಲವೇ ಇದು ಸಹ ಅಂತಹುದೊಂದು ಮೂಢ ನಂಬಿಕೆ ಎಂದು ಹೇಳಬಹುದು.- ಕೊರಗಲ್ಲ ವಿರೂಪಾಕ್ಷಪ್ಪ ತಪ್ಪದೆ ಮುಂದೆ ಓದಿ…
ಇತ್ತೀಚಿಗೆ ನನ್ನ ಕೆಲವು ನೆನಪುಗಳನ್ನು ಗೆಳೆಯ ಹೂಲಿ ಶೇಖರ ಅವರ ಡಿಜಿಟಲ್ ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕಾಗಿ ಅವರ ಮಗಳು ಶಾಲಿನಿಯವರು ಪಡೆದುಕೊಂಡಿರುವ ಸಂದರ್ಭದಲ್ಲಿ, “ವಿರೂಪಾಕ್ಷಪ್ಪ ಕೊರಗಲ್ ಅವರು ನೆನಪುಗಳನ್ನು ಕೆಣಕುವ ವ್ಯಕ್ತಿ” ಎಂದು ಕರೆದಿದ್ದಾರೆ. ನನಗೂ ಇದು ಸೈ ಎನಿಸಿತು. ನಾನು ನೆನಪುಗಳನ್ನು ಆಗಾಗ ಮೆಲಕು ಹಾಕುತ್ತಿರುತ್ತೇನೆ. ನೆನಪುಗಳೆಂದರೆ ಅವು ಯಾರು ಮರು ತೆರೆಗೆ ತಂದುಕೊಳ್ಳುತ್ತಾರೆಯೋ ಅವರ ಇತಿಹಾಸದ ಪುಟಗಳು. ಈ ಇತಿಹಾಸದ ಪುಟಗಳು ಎಲ್ಲರ ಹತ್ತಿರವೂ ಇರುತ್ತವೆ. ಆದರೆ ಬಹಳ ಜನ
ಆ ನೆನಪಿನ ಅಂಗಳಕ್ಕೆ ಇಳಿಯುವುದೇ ಇಲ್ಲ. ಅಂಥವರ ನೆನಪುಗಳು ಆಲಸಿಗಳಾಗಿ ಕುಂತು ಕುಂತು ಬ್ಯಾಸರಾಗಿ ಸತ್ತು ಹೊಕ್ಕಾವು. ಅದಕ್ಕ ಆಗಾಗ ನಾವು ನಮ್ಮ ನೆನಪುಗಳನ್ನು ಮಾತಾಡಿಸಿಕೊಳ್ಳುತ್ತಿರಬೇಕು. ಯಾವತ್ತೋ ನಡೆದು ಹೋದ ಘಟನೆಗಳನ್ನು ನಾವು ಇತಿಹಾಸದ ಪುಸ್ತಕಗಳಲ್ಲಿ ಓದುವುದಿಲ್ಲವೇ ಹಾಗೆ ನಾನು ನನ್ನ ನೆಪುಗಳಿಗೆ ಮರು ಜೀವ ಕೊಟ್ಟು ನಿಮ್ಮ ಮುಂದಿಟ್ಟರೆ ಅದನ್ನು ನೀವು ಓದಿ ಖುಷಿ ಪಡಬಹುದು.
ಇಂದು ಒಂದು ಅರವತ್ತು-ಎಪ್ಪತ್ತು ವರ್ಷದ ಹಳೆಯ ನೆನಪನ್ನು ನಿಮ್ಮ ಮುಂದಿಡುತ್ತೇನೆ. ಇದು ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ಘಟಿಸಿದ ಒಂದು ಘಟನೆ. ಹಿಂದಿನ ಕಾಲದಲ್ಲಿ ಒಂದು ರಾಜ್ಯದಲ್ಲಿ, ಅಥವಾ ಒಂದು ಗ್ರಾಮದಲ್ಲಿ, ಆ ರಾಜ್ಯ ಅಥವಾ ಗ್ರಾಮಕ್ಕೆ ಸುಖ ಸಮೃದ್ಧಿಯನ್ನು ತಂದು ಕೊಡುವುದಕ್ಕಾಗಿ ಆ ಊರಿಗೆ ಹಾಲೆರೆಯುವ ಕಾರ್ಯ ಮಾಡುತ್ತಿದ್ದರು. ನಾನು ಏಳೆಂಟು ವರ್ಷದವನಿರುವಾಗ ನಮ್ಮ ಊರಲ್ಲಿ ಹಾಲೆರೆಯುವ ಕಾರ್ಯ ಮಾಡಿದ್ದರು. ಇದು ಸುಮಾರು 19೪೮-49 ರಲ್ಲಿ ನಡೆದ ಘಟನೆ.
ಹಾಲೆರೆಯುವುದೆಂದರೆ ಊರಿನ ಸುತ್ತು-ಮುತ್ತು ಆ ಊರಿನ ಗಡಿಯಗುಂಟ ಹಾಲು ಹಾಕುತ್ತಿದ್ದರು. ಅದೊಂದು ರೋಮಾಂಚಕ ಪ್ರಕ್ರಿಯೆ. ಮಾನವ ಕುಲ-ಕೋಟಿಗೆ ಒಳ್ಳೆಯದಾಗಲಿ ಎಂದು ಹೋಮ-ಹವನಗಳನ್ನು ಮಾಡುತ್ತಿರಲಿಲ್ಲವೇ ಇದು ಸಹ ಅಂತಹುದೊಂದು ಮೂಢ ನಂಬಿಕೆ ಎಂದು ಹೇಳಬಹುದು. ಇದು ನಾನು ಹುಡುಗನಿದ್ದಾಗ ನಮ್ಮ ಊರಲ್ಲಿ ನಡೆದದ್ದು ನನ್ನ ನೆನಪಿನಲ್ಲಿ ಅಸ್ಪಷ್ಟವಾಗಿ ಉಳಿದುಕೊಂಡಿದೆ.
ಈ ಪ್ರಕ್ರಿಯೆ ಮಾಡುವಾಗ ಮೊದಲು ಆ ಊರಿನ ಗಡಿಯನ್ನು ಗೊತ್ತು ಮಾಡುತ್ತಾರೆ. ಗೊತ್ತು ಮಾಡಿದ ಗಡಿಯನ್ನು ಸುಣ್ಣ, ಬಣ್ಣಗಳಿಂದ ಗುರುತು (ಮಾರ್ಕಿಂಗ್) ಮಾಡುತ್ತಾರೆ.ಹಾಲು ಹುಯ್ಯುವುದಕ್ಕಾಗಿ ಯಾವುದೇ ಅಂಗವೈಕಲ್ಯವಿಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಿರುತ್ತಾರೆ. ನಮ್ಮ ಊರಿನಲ್ಲಿ ಆಗ ಗೊತ್ತು ಮಾಡಿದ್ದ ವ್ಯಕ್ತಿ ಹುಚ್ಚಪ್ಪ ಎನ್ನುವ ಸೋಳಕ್ಯಾ ಇದ್ದ. ಅವನು ಯಾವ ಹುಚ್ಚಪ್ಪಾ, ಮತ್ತೆ ಯಾರ ಮನೆಯವನು ಎಂಬುದನ್ನು ಪತ್ತೆ ಹಚ್ಚಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ನಮ್ಮ ಊರಿನಲ್ಲಿ ಮನೆಗೊಬ್ಬ ಹುಚ್ಚಪ್ಪ ಹುಚ್ಚವ್ವ ಇದ್ದಾರೆ. ಬೆಳಿಗಿನ ಐದು ಗಂಟೆಗೆ ಈ ಹಾಲೆರೆಯುವ ಕಾರ್ಯಕ್ರಮ ಶುರು ಆಗಿತ್ತು. ಅದು ಹೇಗೆ ನಡೆಯುತ್ತಿತ್ತು ಅಂದರೆ ಸೀಮೆಗೆ ಹಾಲು ಎರೆಯುವ ಹುಚ್ಚಪ್ಪನ ಬರಿ ಮೈಯಲ್ಲಿದ್ದು , ವೀರಗಾಸೆ ಹಾಕಿ ಪಂಚೆ ಉಟ್ಟಿದ್ದ.ಸಣ್ಣ ರಂದ್ರ ಮಾಡಿದ ಹಾಲು ತುಂಬಿದ ಮಣ್ಣಿನ ಕೊಡ ಹೊತ್ತು ಆತ ಮೆಲ್ಲಗೆ ಓಡುತ್ತಿದ್ದ. ಆ ಸಣ್ಣ ರಂದ್ರದ ಮೂಲಕ ಹಾಲು ಎರೆಯಲ್ಪಡುತ್ತಿತ್ತು.ಆತನ ಮುಂದೆ ಮುಂದೆ ನೆಲವನ್ನು ಮಡಿ ಮಾಡುವುದಕ್ಕಾಗಿ ನೀರಿನ ಚಳೇ ಕೊಡುತ್ತಿದ್ದರು. ಹುಚ್ಚಪ್ಪ ಹೊತ್ತಿರುತ್ತಿದ್ದ ಕೊಡದಲ್ಲಿ ಹಾಲು ಖಾಲಿ ಆದ ಕೂಡಲೇ ಮತ್ತೆ ಮರು ಪೂರಣ ಮಾಡುತ್ತಿದ್ದರು. ಹಾಲು ಹೇರಿದ ಎತ್ತಿನ ಬಂಡಿ, ಹಾಲೆರೆಯುವಾತನ ಜೊತೆಗೆ ಸಾಗಿ ಹೋಗುತ್ತಿತ್ತು. ಬಡಿಗೆ, ಕತ್ತಿ, ಕೊಡಲಿ ಹಿಡಿದ ನೂರಾರು ಜನರು ನಮ್ಮ ಊರ ಸೀಮೆಯ ಕಾವಲಿಗೆ ನಿಂತಿರುತ್ತಿದ್ದರು. ಕನಿಷ್ಠ ನೂರಾರು ಕೊಡ ಹಾಲು ಅಂದು ಚೆಲ್ಲಿರಬೇಕು.ಅದು ಮಧ್ಯದಲ್ಲಿ ನಿಲ್ಲುವ ಹಾಗಿಲ್ಲ. ಬೆಳಗಿನ ಐದು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ವರೆಗೆ ತೊಯ್ದ ಬಟ್ಟೆ, ಬರಿ ಮೈಯಲ್ಲಿ ಆ ಹುಚ್ಚಪ್ಪ ನಮ್ಮ ಊರು ವದಗನಹಾಳಿನ ಸುಖ ಸಮೃದ್ಧಿಗಾಗಿ ಓಡಿದ್ದಾನೆ. ನಮ್ಮ ಊರಿನ ನೂರಾರು ಜನರು ಆತನ ಕಾವಲಿಗೆ ನಿಂತು ವೀರ ಯೋಧನನ್ನು ಯೋಧನನ್ನು ಮಾಡಿದ್ದರೆಂಬುದು ಮಾತ್ರ ಸುಳ್ಳಲ್ಲ.ಆ ವರ್ಷ ಸೀಮೆಗೆ ಹಾಲೆರೆದಿದೆ ಅದಕ್ಕೆ ಒಳ್ಳೆಯ ಮಳೆ ಬೆಳೆ ಬರುತ್ತದೆ ಎಂದು ಸಾರಿದ್ದು ಏನಾಯಿತು ಎಂಬುದು ಮಾತ್ರ ನನಗೆ ಗೊತ್ತಿಲ್ಲ.
ಅಂದು ಹಾಲೆರೆಯುವ ಸಂದರ್ಭದಲ್ಲಿ ನಮ್ಮ ಊರ ಸೀಮೆಯಿಂದ ಬೇರೆ ಸೀಮೆಗೆ ಯಾರಾದರೂ ದಾಟಿ ಹೋದರೆ ಅವರನ್ನು ಕೊಂದು ಹಾಕಬೇಕೆಂದು ಊರ ಸರಪಂಚನ ಆಜ್ಞೆಯಾಗಿರುತ್ತಿತ್ತು. ನಮ್ಮ ಊರ ಸೀಮೆಗೆ ಹತ್ತಿದ ಊರುಗಳಲ್ಲೆಲ್ಲ ಪರ ಊರವರು ನಮ್ಮ ಊರಿಗೆ ಯಾರೂ ಹೋಗಬಾರದೆಂದು ಡಂಗುರ ಸಾರಿ ಪ್ರಚಾರ ಮಾಡಿರುತ್ತಿದ್ದರು. ಯಾವುದೇ ಪ್ರಾಣಿ ಆಚೆ ಹೋದರು ಅಂದು ಅದು ಶಿವನ ಪಾದ ಸೇರುತ್ತಿತ್ತು. ಒಂದು ವೇಳೆ ಯಾರಾದರೂ ನಮ್ಮ ಊರ ಸೀಮೆಯಿಂದ ಆಚೆ ಹೋದರೆ,ನಮ್ಮ ಊರ ಹುಲುಸು ಆಚೆ ಹೋಗುತ್ತದೆ ಮತ್ತು ನಮ್ಮ ಊರಿಗೆ ಕೇಡಾಗುತ್ತದೆ ಎಂದು ಹೇಳುತ್ತಿದ್ದರು.
- ಕೊರಗಲ್ಲ ವಿರೂಪಾಕ್ಷಪ್ಪ, ಹಾವೇರಿ