ಖ್ಯಾತ ನಾಟಕಕಾರ, ಸಾಹಿತಿಗಳಾದ ಡಾ.ಗಜಾನನ ಶರ್ಮಾರವರ ‘ಚೆನ್ನಭೈರಾದೇವಿ’ ಕುರಿತು ಲೇಖಕಿ ಸೌಮ್ಯ ಸನತ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…
ಕೃತಿ : ಚೆನ್ನಭೈರಾದೇವಿ
ಲೇಖಕರು : ಡಾ. ಗಜಾನನ ಶರ್ಮಾ
ಮುದ್ರಣ ವರ್ಷ : 2021
ಪ್ರಕಾಶಕರು : ಅಂಕಿತ ಪ್ರಕಾಶನ
ಪುಟಗಳು : 432
ಬೆಲೆ : 395.00 ರೂ
ಲೇಖಕರ ಪರಿಚಯ :
ಡಾ.ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು.ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. ‘ನಾಣಿ ಭಟ್ಟನ ಸ್ವರ್ಗದ ಕನಸು’, ‘ಗೊಂಬೆ ರಾವಣ’, ಆಗ ಮತ್ತು ಸುಂದರಿ’, ‘ಹಂಚಿನಮನೆ ಪರಸಪ್ಪ’, ‘ಪುಸ್ತಕ ಪಾಂಡಿತ್ಯ’ ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, ‘ಕನ್ನಂಬಾಡಿಯ ಕಟ್ಟದಿದ್ದರೆ’, ‘ದ್ವಂದ್ವ ದ್ವಾಪರ’, ‘ಬೆಳ್ಳಿಬೆಳಕಿನ ಹಿಂದೆ’ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಮಹಾರಾಣಿ ಚೆನ್ನಭೈರಾದೇವಿಯನ್ನು ನಮಿಸುತ್ತಾ, ಈ ಅದ್ಭುತ ಸಾಹಿತ್ಯ ರತ್ನವನ್ನು ನಮಗೆ ನೀಡಿದ ಶ್ರೀ ಗಜಾನನ ಶರ್ಮಾ ಅವರಿಗೆ ಈ ಪುಸ್ತಕದ ಲೇಖಕರಿಗೆ ನನ್ನ ನಮನಗಳು. ಬೇರೆಲ್ಲ ರಾಣಿಯರ ಬಗ್ಗೆ ಇತಿಹಾಸದ ಪುಟಗಳಲ್ಲಿ ಸಾಕಷ್ಟು ವಿವರಗಳಿದ್ದರೂ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಅನೇಕ ಭಾಗಗಳನ್ನು ಸಮರ್ಥವಾಗಿ ಮತ್ತು ಜನಾನುರಾಗಿಯಾಗಿ 54 ವರ್ಷಗಳವರೆಗೆ (ಕ್ರಿ.ಶ. 1552 ರಿಂದ 1606) ಆಳಿದ ಅವಳ ಮೇಲೆ ಪದೇಪದೇ ಯುದ್ಧ ಮಾಡಿ ಸೋತ ಪೋರ್ಚುಗೀಸರಿಂದಲೇ ‘ಕಾಳುಮೆಣಸಿನ ರಾಣಿ’ ಎಂಬ ಹೆಗ್ಗಳಿಕೆಯನ್ನು ಪಡೆದ ಚೆನ್ನಭೈರಾದೇವಿಯ ಬದುಕಿನ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆದಿಲ್ಲ. ಅವಳು ಬಾಳಿದ, ಆಳಿದ ನಾಡಿನಿಂದ ಬಂದ ಗಜಾನನ ಶರ್ಮರು ಚೆನ್ನಭೈರಾದೇವಿಯ ಬಗ್ಗೆ ಸಂಶೋಧನೆ, ಕ್ಷೇತ್ರಕಾರ್ಯ ನಡೆಸಿ ಅಪರೂಪದ ಸಾಹಿತ್ಯ ಕೃತಿ ನೀಡಿದ್ದಾರೆ.

ರಾಜ ಅಥವಾ ರಾಣಿಯ ಕುರಿತ ಐತಿಹಾಸಿಕ ಕಾದಂಬರಿಯೆಂದಾಕ್ಷಣ ಕೃತಿಯು ಅವರ ಬದುಕಿನ ಏರಿಳಿತಗಳ ಚೌಕಟ್ಟಿನೊಳಗೇ ಉಳಿದುಬಿಡುವ ಸಾಧ್ಯತೆಗಳಿವೆ. ಆದರೆ ಚೆನ್ನಭೈರಾದೇವಿ ಅಂಥ ಸಾಮಾನ್ಯ ಚೌಕಟ್ಟನ್ನು ಮೀರಿ ಯುದ್ಧತಂತ್ರ, ಸಾಮಾನ್ಯರ ಬದುಕು, ಅಂದಿನ ಸಾಮಾಜಿಕ ಸ್ಥಿತಿಗತಿ, ಆರ್ಥಿಕ ವ್ಯವಹಾರ, ರಾಜಕೀಯ ತಂತ್ರಗಾರಿಕೆ ಸೇರಿದಂತೆ ಅಂದಿನ ಬದುಕಿನ ಸಮಗ್ರ ಚಿತ್ರಣವನ್ನೂ ಓದುಗನ ಮುಂದಿಡುತ್ತದೆ.
ನಾಡು ಹೆಮ್ಮೆ ಪಡಬೇಕಾದ ರಾಣಿಯೊಬ್ಬಳ ಬದುಕಿನ ಬಗ್ಗೆ ಸಾಹಿತ್ಯಿಕವಾಗಿ ಸಂಪದ್ಭರಿತವಾದ, ಪರಿಪೂರ್ಣವಾದ ಕೃತಿಯನ್ನು ಶರ್ಮರು ನೀಡಿದ್ದಾರೆ.
*****
ಪ್ರಪಂಚದಲ್ಲಿ ಹೆಣ್ಣನ್ನು ಪರಮಪೂಜ್ಯಳೆಂದು ಗೌರವಿಸುವ ಯಾವುದಾದರು ದೇಶ ಇದ್ದಲ್ಲಿ ಖಂಡಿತವಾಗಿಯೂ ನಮ್ಮ ಭಾರತದೇಶ ಅದರಲ್ಲಿ ಪ್ರಥಮ ಎಂದು ಹೆಮ್ಮೆಯಾಗಿ ಹೇಳಬಹುದು. ಅದಕ್ಕಾಗಿಯೇ ನಮ್ಮ ಪೂರ್ವಜರು,
“ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ
ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ”
ಎಲ್ಲಿ ನಾರಿಯರು ಪೂಜಿಸಲ್ಪಡುವಳೊ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಅದೇ ರೀತಿ ಎಲ್ಲಿ ಸ್ತ್ರೀಯರನ್ನು ಅವಮಾನ ಮಾಡುತ್ತಾರೋ ಅಲ್ಲಿ ಸಮಾಜವು ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಿಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿ ತಂದರೆ ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದಲ್ಲದೇ, ತಮ್ಮ ಮನೆಯ ಗಂಡಸರು ದುಡಿದು ತಂದ ಸಂಪತ್ತಿನ ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸರು ಮಾಡುತ್ತಿದ್ದರು. ಹಾಗಾಗಿಯೇ ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ನೂರಾರು ರಾಜ್ಯಗಳನ್ನು ಸುಮಾರು ರಾಣಿಯರು ಆಳ್ವಿಕೆ ನಡೆಸಿದ್ದಾರೆ. ಅದೆಷ್ಟೋ ರಾಜರನ್ನು ಅದೆಷ್ಟೋ ರಾಜಮನೆತನಗಳನ್ನು ಉಳಿಸಿ ಕೆಚ್ಚೆದೆಯಿಂದ ಹೋರಾಡಿದ ಉದಾಹರಣೆಗಳು ಭಾರತೀಯ ಇತಿಹಾಸದಲ್ಲಿ ಸಾಲು ಸಾಲುಗಳು ದೊರೆಯುತ್ತದಲ್ಲವೇ..
ಹೌದು ನಾನೀಗ ಹೇಳ ಹೊರಟಿರುವುದು ಅದೇ ರೀತಿ ಒಬ್ಬ ಧೀರೆಯ ಕಥೆಯನ್ನ. ಪೋರ್ಚುಗೀಸರ ಪಾಲಿಗೆ ರಣಚಂಡಿ, ಆರ್ಥಿಕತೆಯನ್ನು ಸಬಲವಾಗಿಸಿದ ಚಿನ್ನ, ವಿದೇಶಿ ವ್ಯಾಪಾರವನ್ನು ಸುಲಲಿತವಾಗಿ ನಿಭಾಯಿಸಿದ ವ್ಯವಹಾರಿಕ ತಜ್ಞೆ, ಐವತ್ತಾರು ವರ್ಷಗಳ ಕಾಲ ರಾಮರಾಜ್ಯ ನೀಡಿದ ರಾಜಮಾತೆ. ಪೋರ್ಚುಗೀಸರಿಂದ “ದಿ ಕ್ವೀನ್ ಆಫ್ ಪೆಪ್ಪರ್ ” ಎಂಬ ಹೆಸರನ್ನು ಪಡೆದ ಹದಿನಾರನೇ ಶತಮಾನದ ಜೈನ ರಾಣಿ, ನಮ್ಮ ನಾಡು ಹೆಮ್ಮೆ ಪಡಲೇಬೇಕಾದ ರಾಣಿ ಅವಳೇ “ಗೇರುಸೊಪ್ಪೆಯ ಕಾಡು ಮೆಣಸಿನ ರಾಣಿ ಮಹಾಮಂಡಲೇಶ್ವರಿ ಚೆನ್ನಬೈರಾದೇವಿ”.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೋಗಾರ್ ಅರಣ್ಯ ಪ್ರದೇಶದಲ್ಲಿ ಕಾನೂರು ಎಂಬ ಊರಿದೆ. ಹೆಸರಿಗೆ ತಕ್ಕಂತೆ ಇದು ಕಾನೂರೇ..! ಸಾರಿಗೆ – ಸಂವಹನ ಇಲ್ಲದ, ವಿದ್ಯುತ್ ಕಾಣದ ಗೋಂಡಾರಣ್ಯದಲ್ಲಿ ಅಲ್ಲಲ್ಲಿ ಚದುರಿಕೊಂಡ ಮನೆಗಳಿರುವ ಗ್ರಾಮ. ಶರಾವತಿ ವನ್ಯಜೀವಿ ಸೂಕ್ಷ್ಮ ವಲಯದಲ್ಲಿರುವ ಈ ಹಳ್ಳಿಯಲ್ಲಿ ಆರು ಶತಮಾನಗಳ ಹಿಂದಿನ ಅದ್ಭುತವಾದ ಕೋಟೆ ಇದೆ.

ಗೇರುಸೊಪ್ಪಾ ಪ್ರದೇಶವನ್ನ ಕೇಂದ್ರವಾಗಿರಿಸಿಕೊಂಡಿದ್ದ ಚೆನ್ನಭೈರಾದೇವಿ ಸುರಕ್ಷತೆಯ ದೃಷ್ಟಿಯಿಂದ ಈ ಕಾನೂರು ಕೋಟೆ ನಿರ್ಮಾಣ ಮಾಡಿಕೊಂಡಿದ್ದಳು. ಇಂದಿಗೂ ಈ ಬೆಟ್ಟವೇರಿ ಕೋಟೆ ಮುಟ್ಟುವುದಕ್ಕೆ ಹರಸಾಹಸಪಡಬೇಕು. ಅಂದು ಭಾರತಕ್ಕೆ ದಾಳಿ ಇಟ್ಟಿದ್ದ ಪೋರ್ಚುಗೀಸರ ಸಾಹಸ ಅರಿತಿದ್ದ ರಾಣಿ, ಶರಾವತಿ ಕಣಿವೆಯ ಕಾನೂರು ನೆತ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದಳು. ಅಲ್ಲಿನ ದೈತ್ಯ ಬಂಡೆಗಳನ್ನೇ ಬಳಸಿ, ಅಡಗುತಾಣ, ಸುರಂಗ ಮಾರ್ಗ, ರಹಸ್ಯ ಹಾದಿಗಳನ್ನೆಲ್ಲಾ ಸೃಷ್ಟಿಸಿದ್ದಳು. ಗುಡ್ಡ ಹತ್ತಿ ನೋಡಿದರೆ ಈಗಲೂ ಸುತ್ತಲ ಅರಣ್ಯದ ಮಧ್ಯೆ ದ್ವೀಪದಂತೆ ಭಾಸವಾಗುತ್ತೆ.
ಐವತ್ನಾಲ್ಕು ವರ್ಷ ರಾಜ್ಯವಾಳಿದ ಈ ದಿಟ್ಟ ಜಿನವನಿತೆಯನ್ನು ದುರದೃಷ್ಟವಶಾತ್ ಕರುನಾಡು ಮರೆತಿದೆ. ಹಾಡುವಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ದಾಲ್ಚಿನ್ನಿ, ಕರಿಮೆಣಸನ್ನು ನಿರ್ಯಾತು ಮಾಡುತ್ತ, ತಾನು ಹುಟ್ಟಿದ ನಾಡಿಗೆ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿಕೊಟ್ಟ ಈಕೆ ಗೋವೆಯ ಪರಂಗಿಗಳನ್ನು ಕಾಳಿ ನದಿಯನ್ನು ದಾಟಗೊಡದ ಧೀರೆ.
ಕ್ರಿಸ್ತ ಶಕ ೧೫೫೨ ರಿಂದ ೧೬೦೬ ರವರೆಗೆ ಒಟ್ಟು ಐವತ್ನಾಲ್ಕು ವರ್ಷಗಳ ಕಾಲ ಇಂದಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪೆಯಿಂದ, ಕೊಂಕಣ ಹೈವ ತುಳು ಪ್ರಾಂತ್ಯಗಳನ್ನಾಳಿದ ಸಾಳುವ ವಂಶದ ಈ ವೀರ ಜಿನವನಿತೆ, ತಾನು ಬದುಕಿದ್ದಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ಅಂದಿನ ಕಾಲದಲ್ಲಿ ಉತ್ತರಕನ್ನಡ ಸಾಂಬಾರು ಪದಾರ್ಥಗಳಿಗೆ ಹೆಸರುವಾಸಿಯಾಗಿದ್ದ ಕಾರಣ ಯುರೋಪಿಯನ್ನರು ಇದೇ ಸಾಂಬಾರು ಪದಾರ್ಥಗಳನ್ನು ಕೊಳ್ಳುವ ಸಲುವಾಗಿ ಅರಬ್ಬೀ ಸಮುದ್ರದ ಮಾರ್ಗವಾಗಿ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಬಂದು ವ್ಯಾಪಾರ ನಡೆಸುತ್ತಿದ್ದರು. ಹಾಗೆ ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ನಂತರ ಗೋವಾವನ್ನು ವಸಾಹತು ಮಾಡಿಕೊಂಡು ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ಅನುವಾಗಿದ್ದಲ್ಲದೇ, ತಮ್ಮ ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು, ಸುರಹೊನ್ನೆ, ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟ ಅಡವಿಯನ್ನು ಅಂದೇ ಬೆತ್ತಲಾಗಿಸಲು ಮುಂದಾಗಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ ಸಿಂಹಿಣಿಯಂತೆ ತಡೆಗೋಡೆಯಾಗಿ ಅಡ್ಡ ನಿಂತು ಇಡೀ ಕರಾವಳಿ ಪ್ರದೇಶವನ್ನು ಸಂರಕ್ಷಿಸಿದ ಕೀರ್ತಿ ಚೆನ್ನಭೈರಾದೇವಿಗೆ ಸಲ್ಲುತ್ತದೆ.
ಪೋರ್ಚುಗೀಸರ ಜೊತೆಗೆ “ಅಗತ್ಯವಿದ್ದಲ್ಲಿ ಸ್ನೇಹ, ಅನಿವಾರ್ಯವಿದ್ದಲ್ಲಿ ಸಮರ ಎರಡಕ್ಕೂ ಸೈ ಎಂದವಳು”. ರಾಜಕೀಯವಾಗಿ ಅವರನ್ನು ವಿರೋಧಿಸುತ್ತಲೇ ಅವರೊಂದಿಗೇ ಚಾಣಾಕ್ಷತೆಯಿಂದ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು, ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಬೆಲ್ಲ, ಬೆತ್ತ, ಗಂಧ, ಶುಂಠಿ, ದಂತವೇ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ‘ರೈನಾ ದ ಪಿಮೆಂಟಾ’ (The pepper Queen) ಎಂಬ ಬಿರುದು ಪಡೆದ ಮಹಾ ಮುತ್ಸದ್ದಿ.

ಪತ್ನಿಯ ಜೊತೆ ಡಾ. ಗಜಾನನ ಶರ್ಮಾ
ಪೋರ್ಚುಗೀಸರು ತಮ್ಮ ವಸಾಹತನ್ನು ಉಳಿಸಿಕೊಳ್ಳಲು ಸ್ಥಳೀಯರನ್ನು ಆಮಿಷ, ಒತ್ತಡ, ಭಯ, ವಂಚನೆಗಳ ಮೂಲಕ ಮತಾಂತರಕ್ಕೆ ಒಳಪಡಿಸಿ ತಮ್ಮವರನ್ನಾಗಿಸಿ ಕೊಳ್ಳತೊಡಗಿದ್ದ ಸಮಯ. ಮತಾಂತರಕ್ಕಾಗಿ ಹಿಂಸೆ, ಅತ್ಯಾಚಾರ ಅನಾಚಾರಕ್ಕಿಳಿದಿದ್ದರು. ಅಂತಹ ದುರ್ಭರ ಪರಿಸ್ಥಿತಿಯಲ್ಲಿ ಪರಂಗಿಗಳ ದಬ್ಬಾಳಿಕೆಗೆ ಸಿಲುಕಿ ನಿರಾಶ್ರಿತರಾಗಿ ವಲಸೆ ಬಂದ ಹಲವು ಹತ್ತು ಸಮುದಾಯದವರಿಗೆ ತನ್ನ ರಾಜ್ಯದಲ್ಲಿ ಸುರಕ್ಷಿತ ಆಶ್ರಯವಿತ್ತು ವಾತ್ಸಲ್ಯದಿಂದ ಪರಿಪೋಷಿಸಿದವಳು ಚೆನ್ನಭೈರಾದೇವಿ.
ಎಲ್ಲ ಧರ್ಮ, ಜಾತಿ, ಮತದವರನ್ನು ಒಳಗೊಂಡಂತೆ ಸುಸ್ಥಿರ ಆಡಳಿತ ನಡೆಸುವ ಧರ್ಮಸಮನ್ವಯತೆಗೆ ಆಕೆಯೊಂದು ಗಟ್ಟಿ ಉದಾಹರಣೆ. ಹಾಡುವಳ್ಳಿಯಲ್ಲಿ ಹುಟ್ಟಿದ ಈ ಹೆಣ್ಣುಮಗಳ ವಿದ್ಯಾಭ್ಯಾಸ ನಡೆದದ್ದು ಹಾಡುವಳ್ಳಿಯ ಜೈನರ ಅಕಳಂಕ ಗುರುಕುಲದಲ್ಲಿ. ಬಾಲ್ಯದಲ್ಲಿ ಅವಳ ವ್ಯಕ್ತಿತ್ವವನ್ನು ರೂಪಿಸಿದವರು ಜೈನ ಗುರುಗಳು. ಆಡಳಿತದಲ್ಲಿ ಅವಳಿಗೆ ಮಾರ್ಗದರ್ಶನ ನೀಡಿ ರಾಜಕೀಯ ವ್ಯಕ್ತಿತ್ವ ಕಟ್ಟಿಕೊಟ್ಟವರು ಹವ್ಯಕರು, ಸಾರಸ್ವತರು. ‘ಅವ್ವರಸಿ’ ಎಂದು ಪ್ರೀತಿ ಮತ್ತು ಗೌರವದಿಂದ ಆಕೆಯನ್ನು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬೆಂಬಲಿಸಿದವರು ಗೊಂಡರು, ಖಾರ್ವಿಗಳು, ಬೆಸ್ತರು, ಹಾಲಕ್ಕಿಗಳು. ಆರಂಭದ ಅವಳ ವಾಣಿಜ್ಯ ವ್ಯವಹಾರಕ್ಕೆ ಬೆಂಬಲವಿತ್ತು ಮಧ್ಯಪ್ರಾಚ್ಯದ ಮಹ್ಮದೀಯರೊಂದಿಗೆ ವ್ಯಾವಹಾರಿಕ ಸಂಬಂಧ ಬೆಸೆಯಲು ನೆರವಾದವರು ಭಟ್ಕಳದ ನವಾಯಿತರು. ಉದ್ದಕ್ಕೂ ಅವಳ ಮೈತ್ರಿ ಬಿಜಾಪುರದ ಸುಲ್ತಾನರೊಂದಿಗೆ. ಅವಳಿಗೆ ಗೇರುಸೊಪ್ಪೆ ಗದ್ದುಗೆಯನ್ನು ವಹಿಸಿಕೊಟ್ಟು, ಉದ್ದಕ್ಕೂ ಬೆಂಬಲಕ್ಕೆ ನಿಂತವರು ವಿಜಯನಗರದ ಚಕ್ರವರ್ತಿಗಳು. ಅವಳ ವ್ಯಾವಹಾರಿಕ ಸ್ನೇಹ ಮತ್ತು ರಾಜಕೀಯ ಸಂಘರ್ಷ ಇದ್ದುದು ಪೋರ್ಚುಗೀಸರೊಂದಿಗೆ. ಅವಳ ದೀರ್ಘಕಾಲದ ಒಡನಾಟ ಮಲಬಾರದ ಜಾಮೋರಿನ್ನನ ಜೊತೆಗೆ. ಇನ್ನು ಅವಳ ಪ್ರಜೆಗಳು ಜೈನರು, ಸಾರಸ್ವತರು, ದೈವಜ್ಞರು, ಬೆಸ್ತರು ಮಡಿವಾಳರು, ಬ್ರಾಹ್ಮಣರು, ಹಾಲಕ್ಕಿಗಳು, ಗೊಂಡರು, ಮುಕ್ರಿಗಳು, ಖಾರ್ವಿ ಮುಂತಾಗಿ ಹತ್ತು ಹಲವು ಜಾತಿಗಳು. ಈ ಎಲ್ಲ ಜಾತಿ ಧರ್ಮಗಳ ಜೊತೆ ಸಾಮರಸ್ಯ ಕಾಪಾಡಿಕೊಂಡು, ಸಮಾನ ಪ್ರೀತಿ ವಿಶ್ವಾಸದಿಂದ ಎಲ್ಲರನ್ನೂ ಒಳಗೊಂಡು ಐವತ್ನಾಲ್ಕು ವರ್ಷಗಳಿಗೂ ಹೆಚ್ಚುಕಾಲ ಪ್ರಜಾವತ್ಸಲಳಾಗಿ ಆಕೆ ರಾಜ್ಯಭಾರ ನಡೆಸಿದಳೆಂದರೆ ಅವಳ ಸರ್ವಧರ್ಮ ಸಮಭಾವ ಎಷ್ಟು ಗಟ್ಟಿ ಮತ್ತು ಪ್ರಭಾವಶಾಲಿಯಾಗಿದ್ದಿರಬೇಡ?
“ಸ್ವಾಭಿಮಾನ ಮತ್ತು ಕೆಚ್ಚಿನ ಜೊತೆಗೆ ಚಾಣಾಕ್ಷತೆಯೂ ಸೇರಿಕೊಂಡರೆ ಎಂಥ ಸಮಸ್ಯೆಯನ್ನಾದರೂ ಗೆಲ್ಲಬಹುದು” ಎಂಬುದಕ್ಕೆ ನಮ್ಮ ಕಣ್ಣ ಮುಂದಿನ ದಿಟ್ಟ ಕೆಚ್ಚೆದೆಯ ಜೀವಂತ ನಿದರ್ಶನವೇ ಈಕೆಯೆಂದರೆ ತಪ್ಪಾಗಲಾರದು. ಪೋರ್ಚುಗೀಸರಂತಹ ಬಲಿಷ್ಠ ಶತ್ರುವನ್ನು ಕೂಡ ಚೆನ್ನಭೈರಾದೇವಿ ಶರಣಾಗತರಾಗುವಂತೆ ಮಾಡುವುದು ಅವಳ ಬುದ್ಧಿಮತ್ತೆಯನ್ನು ಸೂಚಿಸುತ್ತದೆ. ವಿರೋಧಿಗಳನ್ನು ಅನಗತ್ಯವಾಗಿ ಕೊಲ್ಲದೇ ಜೀವ ಉಳಿಸುವ ಒಳ್ಳೆಯತನ, ತನ್ನ ಪ್ರಜೆಗಳ ರಕ್ಷಣೆಯ ಜೊತೆಗೆ ಶತ್ರುವನ್ನು ಮಟ್ಟಹಾಕುವ ಧೈರ್ಯವನ್ನೂ ಹೊಂದಿರುವ ರಾಣಿಯ ನಿಲುವು ಅದ್ಭುತವಾದುದೇ ಸರಿ.
ಚೆನ್ನಭೈರಾದೇವಿ ಎಂದೂ ಯಾರ ಮೇಲೂ ತಾನಾಗಿ ಯುದ್ದ ಘೋಷಿಸಿದವಳಲ್ಲ. ಪರಂಗಿಗಳೂ ಸೇರಿದಂತೆ ಮೇಲೆ ಬಿದ್ದ ಯಾರನ್ನೂ ಮಣ್ಣುಮುಕ್ಕಿಸದೆ ಬಿಟ್ಟವಳೂ ಅಲ್ಲ. ಅಹಿಂಸೆಯೇ ಪರಮ ಧರ್ಮವೆನ್ನುವ ಜೈನಸಿದ್ಧಾಂತವನ್ನು ಚಾಚೂ ತಪ್ಪದ ನಿಷ್ಠಾವಂತೆ. ಶತ್ರುಗಳೆದುರು ಧೈರ್ಯ, ಆಪತ್ತಿನೆದುರು ಆತ್ಮಸ್ಥೈರ್ಯ, ಸಂದಿಗ್ಧ ಸಂದರ್ಭಗಳಲ್ಲಿ ದಿಟ್ಟನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ದಾರ್ಢ್ಯತೆಗಳ ಜೊತೆಗೆ, ಆತ್ಮಕ್ಕೆ ವ್ರತ, ದೇಹಕ್ಕೆ ಸಂಯಮ, ಮನಸ್ಸಿಗೆ ನಿಯಂತ್ರಣ, ಹೃದಯದಲ್ಲಿ ದಯೆ, ವರ್ತನೆಯಲ್ಲಿ ನೇರ ನೈಷ್ಠುರ್ಯ, ವ್ಯವಹಾರದಲ್ಲಿ ನ್ಯಾಯ, ಕರ್ತವ್ಯದಲ್ಲಿ ನಿಷ್ಠೆ, ಧರ್ಮದಲ್ಲಿ ಶ್ರದ್ಧೆ, ಪ್ರಜೆಗಳಲ್ಲಿ ವಾತ್ಸಲ್ಯ ಮತ್ತು ಸಿಂಹಾಸನಕ್ಕೆ ಬದ್ಧತೆಯನ್ನು ಮೈಗೂಡಿಸಿಕೊಂಡವಳು.
“ನಮ್ಮ ಅನ್ನವನ್ನು ನಾವು ತಿನ್ನಲು ಮತ್ಯಾರಿಗೂ ನಾವ್ಯಾಕೆ ಕಪ್ಪ ಕೊಡಬೇಕು” ಎನ್ನುವುದು ಅದೆಷ್ಟು ಕೋಪ ತರಿಸುವ ವಿಷಯ. ನಮ್ಮ ಸಂಪತ್ತನ್ನೇ ದೋಚಿಕೊಂಡು ನಮ್ಮತನವನ್ನೇ ಕೊಳ್ಳೆ ಹೊಡೆದು, ತಮ್ಮ ದೇಶಕ್ಕೆ ಸಾಗಿಸುತ್ತಿದ್ದ, ಪರಮ ಪಾಪಿಗಳು ಅಷ್ಟಕ್ಕೆ ಸುಮ್ಮನಾಗದೆ ಅದೆಷ್ಟೋ ಸಾವು ನೋವುಗಳು ಕಾರಣವಾಗಿ, ಧರ್ಮವನ್ನು ಬುಡಮೇಲು ಮಾಡಲು ಹೊರಟಿದ, ಕೊನೆಗೆ ರಾಣಿಯ ಏಳಿಗೆಯನ್ನು ಸಹಿಸದೆ ಅವಳಚಾರಿತ್ರಕ್ಕೆ ಮಸಿ ಬೆಳೆದು ಅವಳ ಅಂತಃ ಶಕ್ತಿಯನ್ನು ಕುಂದಿಸಿ ರಾಜ್ಯವನ್ನು ಕಬಳಿಸಲು ನೋಡಿದ ಸೀಳು ನಾಯಿಗಳನ್ನು ಕಣ್ಣಕುಡಿಯಲ್ಲೇ ತಿರಸ್ಕರಿಸಿ ಗಟ್ಟಿಯಾಗಿ ನಿಂತ ದಿಟ್ಟ ಹೆಣ್ಣು.
ಹೊರಗಿನ ಶತ್ರುಗಳನ್ನು ಗುರುತಿಸಿ ಅವರೊಂದಿಗೆ ಹೋರಾಟ ಮಾಡುವುದು ಸುಲಭ ಆದರೆ ತಮ್ಮೊಂದಿಗೆ ಮಿತ್ರರಾಗಿದ್ದು ಕೊಂಡು ಸಮಯ ಸಾಧಕರಾಗಿ ಅದೊಂದು ದಿನ ನಮಗೇ ಅರಿವಿಲ್ಲದಂತೆ ತಮ್ಮ ಬೆನ್ನಿಗೆ ಚೂರಿ ಇರಿಯುವ ಹಿತಶತ್ರುಗಳನ್ನು ಗುರುತಿಸುವುದು ಬಹಳ ಕಷ್ಟಕರವೇ ಸರಿ. ರಾಣಿ ಚನ್ನಬೈರಾದೇವಿಯ ವಿಷಯದಲ್ಲೂ ಇದೇ ರೀತಿಯಾಗಿ ಕಾಳುಮೆಣಸಿನ ವ್ಯಾಪಾರದಲ್ಲಿ ವಿದೇಶೀಯರೊಂದಿಗಿದ್ದ ರಾಣಿಯ ಏಕಸ್ವಾಮ್ಯವನ್ನು ಹತ್ತಿಕ್ಕಲು ಕೆಳದಿ ನಾಯಕರು ಮತ್ತು ಬಿಳಗಿ ಅರಸರು ಹರಸಾಹಸ ಪಡುತ್ತಿದ್ದರು.ಹಾಗಾಗಿ ರಾಣಿಯನ್ನು ಮಣಿಸಲೆಂದೇ, ೧೬೦೬ ರಲ್ಲಿ ಕೆಳದಿಯ ಅರಸು ಹಿರಿಯ ವೆಂಕಟಪ್ಪ ನಾಯಕ ಮತ್ತು ಬಿಳಿಗಿಯ ಅರಸರು ಇಬ್ಬರೂ ಪರಸ್ಪರ ಒಂದಾಗಿ ದಳವಾಯಿ ಲಿಂಗಣ್ಣ ಎನ್ನುವ ಸರದಾರನಿಗೆ ಆಮಿಷವೊಡ್ಡಿ ಅವನ ಮೂಲಕ ಮೋಸದಿಂದ ರಾಣಿಯನ್ನು ಸೆರೆ ಹಿಡಿಸಿ ಆಕೆಯನ್ನು ಹಳೆ ಇಕ್ಕೇರಿ ಕೋಟೆಯಲ್ಲಿ ಸುಮಾರು ಕಾಲ ಬಂಧನಲ್ಲಿಟ್ಟರು. ಅ ಸಮಯದಲ್ಲಿ ಆಕೆ ಸಲ್ಲೇಖನದ ವ್ರತಕೈಗೊಂಡು ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ. ಇವಳಷ್ಟು ಸುದೀರ್ಘ ಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿ ಅಖಂಡ ಭಾರತದ ಚರಿತ್ರೆಯಲ್ಲೇ ಇಲ್ಲ. ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ, ನಾಡು ಹೆಮ್ಮೆ ಪಡಬೇಕಾದ ರಾಣಿಯೊಬ್ಬಳ ಬದುಕಿನ ಬಗ್ಗೆ ಬಗ್ಗೆ ಯಾವ ಇತಿಹಾಸವೂ ಮಾತನಾಡದಿರುವುದು ವಿಷಾದಕರ ಸ್ಥಿತಿ.
ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ದಿನೋತ್ಸವದಲ್ಲಿ ಇಂತಹ ಪವಿತ್ರ ಪ್ರಾತಃಸ್ಮರಣೀಯ ಮೂರ್ತಿಯನ್ನು ಸ್ಮರಿಸಿ, ಗೌರವ ಪೂರ್ಣ ನಮನಗಳನ್ನು ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.
- ಸೌಮ್ಯ ಸನತ್
