ವೀರ ಪರಂಪರೆ “ಹವಾಲ್ದಾರ್ ಬಚಿತ್ತರ್ ಸಿಂಗ್”

ಪಂಜಾಬಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಹವಾಲ್ದಾರ್ ಬಚಿತ್ತರ್ ಸಿಂಗ್ 17ನೇ ವಯಸ್ಸಿನಲ್ಲಿಯೇ ಬ್ರಿಟಿಷ್ ಇಂಡಿಯನ್ ಆರ್ಮಿಗೆ ಸೇರಿದರು. ಮುಂದೆ ಅವರಿಗೆ “ಹವಾಲ್ದಾರ್ ಬಚಿತ್ತರ್ ಸಿಂಗ್” “ಅಶೋಕ ಚಕ್ರ” ನೀಡಿ ಗೌರವಿಸಲಾಗಿದೆ, ತಪ್ಪದೆ ಮುಂದೆ ಓದಿ….

1947 ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟಾದ ನಂತರ ಸಂಸ್ಥಾನಗಳ ವಿಲೀನ ಪ್ರಕ್ರಿಯೆ ಶುರುವಾಯಿತು. ಹೆಚ್ಚಿನವರು ಸ್ವ ಇಚ್ಛೆಯಿಂದ ವಿಲೀನಗೊಳಿಸಿದರು. ಕೆಲವರಿಗೆ ತಿಳಿ ಹೇಳಿದ ಮೇಲೆ ವಿಲೀನಕ್ಕೊಪ್ಪಿದರು. ಆದರೆ ಕೆಲವೊಂದಿಷ್ಟು ಸಂಸ್ಥಾನಿಕರು ಮಾತ್ರ ಅದಕ್ಕೊಪ್ಪದೇ ತಕರಾರು ತೆಗೆದರು. ಅವರಲ್ಲಿ ಹೈದರಾಬಾದಿನ ನಿಜಾಮನೂ ಒಬ್ಬ. ಕೊನೆಗೆ ಸರ್ಕಾರವು ಇದಕ್ಕೆ ಸೈನಿಕ ಕಾರ್ಯಾಚರಣೆಯೊಂದೇ ಪರಿಹಾರವೆಂದು ತೀರ್ಮಾನಿಸಿದಾಗ ಹೈದರಾಬಾದ್ ವಿಮೋಚನೆಯ ಅಂಗವಾಗಿ ರೂಪುಗೊಂಡಿದ್ದೇ “ಆಪರೇಷನ್ ಪೋಲೋ” .ಇದರ ಭಾಗವಾಗಿ ನಲದುರ್ಗ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸಿಖ್ ರೆಜಿಮೆಂಟಿನ 2ನೇ ಬೆಟಾಲಿಯನ್ನಿನ ತಂಡವೊಂದರ ನಾಯಕರಾಗಿದ್ದವರು. ಹವಾಲ್ದಾರ್ ಬಚಿತ್ತರ್ ಸಿಂಗ್ ಎಂಬ ಯೋಧ.

1917ರ ಜನವರಿಯಲ್ಲಿ ಪಂಜಾಬಿನ ಹಳ್ಳಿಯೊಂದರಲ್ಲಿ ಜನಿಸಿದ ಬಚಿತ್ತರ್ ಸಿಂಗರು ಚಿಕ್ಕಂದಿನಿಂದಲೇ ಸೈನ್ಯದತ್ತ ಆಕರ್ಷಿತರಾಗಿ ತಮ್ಮ17ನೇ ವಯಸ್ಸಿನಲ್ಲಿಯೇ ಬ್ರಿಟಿಷ್ ಇಂಡಿಯನ್ ಆರ್ಮಿಗೆ ಸೇರಿದರು. 2ನೇ ಮಹಾಯುದ್ಧದಲ್ಲೂ ಭಾಗವಹಿಸಿ ಗ್ರೀಸ್, ಆಫ್ರಿಕಾ ಮುಂತಾದ ಕಡೆ ಕಾರ್ಯಾಚರಿಸಿದ ಅನುಭವ ಅವರದಾಗಿತ್ತು.1947ರಲ್ಲಿ ಭಾರತ ಸ್ವತಂತ್ರವಾದಾಗ ಹವಾಲ್ದಾರ್ ಹುದ್ದೆಗೇರಿ ಸಿಖ್ ರೆಜಿಮೆಂಟಿನ 2ನೇ ಬೆಟಾಲಿಯನ್ನಿಗೆ ನೇಮಕಗೊಂಡರು.

1948ರ ಸೆಪ್ಟೆಂಬರ್ 13ರಂದು ನಲದುರ್ಗ ಪ್ರದೇಶದ ರಸ್ತೆಯೊಂದನ್ನು ಕಾಯುತ್ತಿದ್ದ ಸಿಂಗರ ಪಡೆಗೆ ದೂರದಿಂದ ಬರುತ್ತಿದ್ದ ವಾಹನಗಳೆರಡು ಕಂಡವು. ಇವರ ತಡೆಗಳನ್ನು ಹಾದು ಹೋಗುವ ಅವುಗಳ ಉದ್ದೇಶ ಸ್ಪಷ್ಟವಾದಾಗ ಸಿಂಗರು ಅವುಗಳತ್ತ ಗುಂಡು ಹಾರಿಸಲು ನಿರ್ದೇಶಿಸಿದರು. ಆ ವಾಹನಗಳಿಂದ ಪ್ರತಿದಾಳಿ ಆರಂಭವಾದಾಗ ಮತ್ತೊಬ್ಬರನ್ನು ಜತೆಗೆ ಕರೆದುಕೊಂಡು ಚಾಕಚಕ್ಯತೆಯಿಂದ ಅಪಾಯದ ಮಧ್ಯೆಯೇ ಅವೆರಡನ್ನೂ ವಶಪಡಿಸಿಕೊಳ್ಳುವುದರಲ್ಲಿ ಸಿಂಗರು ಯಶಸ್ವಿಯಾದರು.

ಇದು ಅಲ್ಲಿಗೇ ಮುಗಿಯಲಿಲ್ಲ, ಸ್ವಲ್ಪಹೊತ್ತಿಗೇ ಮತ್ತೆ ಶತ್ರುಗಳ ದಾಳಿ ಆರಂಭವಾಯಿತು. ಈ ಸಲ ಶತ್ರುಗಳು ಸುರಕ್ಷಿತ ಜಾಗವೊಂದರಿಂದ ದಾಳಿ ಶುರುಮಾಡಿದ್ದರು. ಮರೆಯಲ್ಲೇ ಕೂತರಾಗುವುದಿಲ್ಲವೆಂದು ಮನಗಂಡ ಸ್ವಭಾವತಃ ವೀರರಾದ ಸಿಂಗರು ನಾಯಕನಿಗೆ ತಕ್ಕಂತೆ ತಾವೇ ಮುನ್ನುಗ್ಗಿ ದಾಳಿ ಮಾಡಿ ತಕ್ಕಮಟ್ಟಿಗೆ ಅದರಲ್ಲಿ ಯಶಸ್ವಿಯೂ ಆಗಿರಬೇಕಾದರೆ ಎದುರಿನ LMG ಗನ್ ಪೋಸ್ಟಿನಿಂದ ಹಾರಿ ಬಂದ ಗುಂಡೊಂದು ಅವರ ತೊಡೆಯನ್ನು ಹೊಕ್ಕಿ ಕೆಳಗೆ ಕೆಡವಿತು. ಬಿದ್ದೆನೆಂದು ಸುಮ್ಮನಾಗುವ ಜೀವವೇ ಅದು!? ಖಂಡಿತಾ ಅಲ್ಲ!!! ಬಿದ್ದಲ್ಲಿಂದ ತೆವಳಿಕೊಂಡೇ ಸಾಗಿದ ಸಿಂಗರಿಗೆ ಆ ಪೋಸ್ಟಿನೊಳಗೆ ಎರಡು ಗ್ರೆನೇಡುಗಳನ್ನೆಸೆದು ಅವು ಢುಂಢುಮ್ಮೆಂದು ಅಲ್ಲಿದ್ದವರೊಂದಿಗೆ ಸಿಡಿದು ಹೋದ ಮೇಲೇ ತೃಪ್ತಿಯಾಗಿದ್ದು!
ಅಷ್ಟೆಲ್ಲ ಗಾಯಗೊಂಡರೂ ಅಲ್ಲಿಂದ ನಿರ್ಗಮಿಸುವುದಿರಲಿ ಔಷಧಿಗಳನ್ನೂ ತೆಗೆದುಕೊಳ್ಳಲೊಪ್ಪದ ಸಿಂಗರು ಜೊತೆಗಾರರಿಗೆ ನಿರ್ದೇಶನಗಳನ್ನು ನೀಡುತ್ತ ಹುರಿದುಂಬಿಸಿದರು. ಇವರ ಶೌರ್ಯದಿಂದ ಪ್ರೇರಿತರಾದ ಉಳಿದವರು ಅತೀವ ಸಾಹಸದಿಂದ ತಮ್ಮ ಗುರಿ ತಲುಪುವುದರಲ್ಲಿ ಯಶಸ್ವಿಯಾದರು.

ಅತ್ತ ಸಿಖ್ ಪಡೆ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದರೆ, ಇತ್ತ ಹೈದರಾಬಾದಿನ ತುಂಗಭದ್ರಾ ರೈಲ್ವೆ ಸೇತುವೆಯ ಹತ್ತಿರ ಕಾರ್ಯಾಚರಿಸುತ್ತಿದ್ದುದು ಅರಿಭಯಂಕರರೆಂದೇ ಖ್ಯಾತನಾಮರಾದ ಗೋರ್ಖಾಗಳು! 5/5 ನೇ ಗೋರ್ಖಾ ರೆಜಿಮೆಂಟು ತುಂಗಭದ್ರಾ ಸೇತುವೆಯ ಎಡಭಾಗದಲ್ಲಿರುವಾಗಲೇ ಎದುರಿನಿಂದ ಬಡಬಡನೆ ಶತ್ರುಗಳ ಗುಂಡುಗಳು ಹಾರಿಬಂದವು. ಆಗ ಅಲ್ಲಿದ್ದವರೇ ‘ನರ್ ಬಹಾದ್ದೂರ್ ಥಾಪಾ’. ಹೆಸರಿನಲ್ಲಿ ಮಾತ್ರವಲ್ಲದೇ ಸ್ವಭಾವದಲ್ಲೂ ಬಹದ್ದೂರರಾಗಿದ್ದ ಥಾಪಾರು ಅದಕ್ಕೆ ತಕ್ಕಂತೆ 1940ರಲ್ಲಿ ಸೇನೆ ಸೇರಿದ್ದರು.
ಇಲ್ಲಿ ಗುಂಡುಗಳ ವಿನಿಮಯ ನಡೆದೇ ಇತ್ತು. ಎದುರಿನ ಗನ್ ಪೋಸ್ಟನ್ನು ಸುಮ್ಮನಾಗಿಸದಿದ್ದರಿದು ಮುಗಿಯುವ ಕಥೆಯಲ್ಲವೆಃದು ಎಲ್ಲರಿಗು ಮನದಟ್ಟಾಗಿತ್ತು. ಇರುವುದು ಸ್ವಲ್ಪ ದೂರವೇ ಆದರೂ ಮರೆಯೆನ್ನುವುದೇ ಇಲ್ಲ ಆ ಜಾಗದಲ್ಲಿ. ಹೋಗುವವನು ಜೀವದಾಸೆ ಬಿಟ್ಟೇ ಹೋಗಬೇಕು!! ಆದರೆ ಸೈನ್ಯಕ್ಕೆ ಸೇರುವವರು ಜೀವಕ್ಕೆ ಹೆದರಿಯಾರೇ,ಅದರಲ್ಲೂ ಗೋರ್ಖಾಗಳು, ಅದರಲ್ಲೂ ಹೆಸರಿನಲ್ಲೇ ಬಹದ್ದೂರ್ ಎಂದಿದ್ದ ಥಾಪಾರವರು ಈ ಅವಕಾಶ ಬಿಟ್ಟಾರೆಯೇ! ಹಿಂದೆಮುಂದೆ ನೋಡದೆ ಕೇವಲ ಧೈರ್ಯ,ದೇಶಸೇವೆಯ ಹಂಬಲಗಳಿಂದಲೇ ನುಗ್ಗಿದ ಥಾಪಾರವರು ಆ ಗುಂಡುಗಳಿಂದ ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುತ್ತಲೇ ಆ 100 ಯಾರ್ಡುಗಳನ್ನು ಕ್ರಮಿಸಿ ಆ ಗನ್ ಚಲಾಯಿಸುತ್ತಿದ್ದವರನ್ನು ತಮ್ಮ ಗೋರ್ಖಾ ಆಯುಧ ‘ಖುಕ್ರಿ’ಗೆ ಬಲಿಕೊಟ್ಟರು!! ಅವರ ಆ ಅಸೀಮ ಸಾಹಸದಿಂದ ಭಾರತೀಯ ಸೇನೆಯು ತುಂಗಭದ್ರಾ ಸೇತುವೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಯಿತು.

ಶಾಂತಿಕಾಲದಲ್ಲಿ ನೀಡುವ ಅತ್ಯುನ್ನತ ಸೈನಿಕ ಗೌರವ “ಅಶೋಕ ಚಕ್ರ” ವನ್ನು 1952ರಲ್ಲಿ ಸ್ಥಾಪಿಸಿದಾಗ ಮೊದಲೆರಡು ಪದಕಗಳನ್ನು “ಹವಾಲ್ದಾರ್ ಬಚಿತ್ತರ್ ಸಿಂಗ್” ಹಾಗೂ “ನಾಯಕ್ ನರ್ ಬಹಾದುರ್ ಥಾಪಾ” ರವರಿಗೆ ಅವರ ಶೌರ್ಯ ಸೇವೆಗಳಿಗಾಗಿ ಪ್ರಧಾನಿಸಿ ಗೌರವಿಸಲಾಯಿತು.
.
ಜೈಹಿಂದ್ ವಂದೇ ಮಾತರಮ್


  • ಶಿವರಾಜ್ ಉಡುಪ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW