ಅದೆಷ್ಟೋ ಕಷ್ಟ ಕೋಟಲೆಗಳ ದಾಟಿ ಬಂದ ನನಗೆ ನನ್ನ ಸಂಸಾರ ಬಂಡಿಯ ಸರಿ ದಾರಿಗೆ ತರುವ ಹೊತ್ತು…ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಅರಳಿದ ಕವನದ ಸುಂದರ ಸಾಲುಗಳನ್ನು ತಪ್ಪದೆ ಓದಿ…
ಅಂದು ಹೊತ್ತಿರದ ಹೊತ್ತಿನಲ್ಲಿ
ಗತ್ತು ಗರಿಗೆದರಿತ್ತು
ಮತ್ತೆ ಮತ್ತೇ ಸತ್ತು ಹುಟ್ಟಿದ
ನನ್ನೊಳಾತ್ಮ ತರಗುಟ್ಟುತ್ತಿತ್ತು
ಮಡುಗಟ್ಟಿದ ಅವನೆದೆಯ
ಬಗೆದು ಕೇಳಬೇಕೆಂದಿದ್ದೆ
ಕರುಳಿಗೆ ಉರುಳು ಬೀಗಿದ
ಆ ಪ್ರಸಂಗ ಮರೆಯಲಾಗುತ್ತಿಲ್ಲ
ಮರು ಹುಟ್ಟಿನಲಿ ಮಬ್ಬುಗತ್ತಲು
ಸೀಳಿ ಬಂದ ಮಿಣುಕ ಹುಳು
ಮಿಣಿ ಮಿಣಿ ಮಿಂಚಿದಾಗ
ನೋಡಿದೆ ಅವನೆದೆ ಖಾಲಿ…ಖಾಲಿ…!
ಅದೆಷ್ಟೋ ಕಷ್ಟ ಕೋಟಲೆಗಳ
ದಾಟಿ ಬಂದ ನನಗೆ
ನನ್ನ ಸಂಸಾರ ಬಂಡಿಯ
ಸರಿ ದಾರಿಗೆ ತರುವ ಹೊತ್ತು
ಸುತ್ತಣ ಜಗದ ಪರಿವೆಯಿಲ್ಲದೇ
ಮನ ತವಕಿಸುತ್ತಿತ್ತು
ಚಿತ್ತ ಚಂಚಲತೆಯಲ್ಲಿ
ಪಿತ್ತ ನೆತ್ತಿಗೇರಿಸಿಕೊಳ್ಳದೇ
ನಾನಾಗ ಸ್ತಂಭಿಭೂತ
ಅದೆತ್ತಲಿಂದಲೋ ಬಂದ
ಸಂತನಂತ ಹೃದಯ ಕನಿಕರಿಸಿತು
ಹೊತ್ತು ಬಂದಾಗ
ಕತ್ತೆ ಕಾಲು ಹಿಡಿದಂತನುಭವ
ಎತ್ತಲಿಂದ ಹೋದರು ಜಾಡಿಸಿ ಒದೆತ
ಕತ್ತೆಗೆ ಲತ್ತಿಪೆಟ್ಟು ಬೇಕು
ಪಟ್ಟು ಬಿಡದ ನಾನೀಗ
ಛಲದಂಕ ಮಲ್ಲನವತಾರ ತಾಳಿ ನಿಂತೆ
ಅಂವ ಕೊಡುವ ಪಟ್ಟಿಗೆ
ಪ್ರತ್ಯುತ್ತರವಾಗಿ ಪಟ್ಟುಗಳ ಧ್ಯೇನಿಸಿ
ಅಖಾಡದಲ್ಲಿಳಿದು ಕುಸ್ತಿಪಟುವಾದೆ
ಕಲಿಗೆ ಕಲಿಕೆ ಬೇಕು
ಆದರೂ ಅತ್ತಲಿಂದಂವ ಬಿಡುತ್ತಿಲ್ಲ
ಮತ್ತದೇ ಯಾಮಾರಿಕೆ
ಕತ್ತಿನ ಮೇಲೊಂದ ಕೈ ಹಾಕಿ
ಜಾಗೃತದಿ ಮತ್ತೊಂದು ಕೈ ಕೆಳಗೆ ಹಾಕಿ
ಅನಾಮತ್ತಾಗಿ ಮೇಲೆತ್ತಿ ಒಗೆದೆ
ಬಿದ್ದ ರಭಸಕ್ಕೆ
ಅಯ್ಯೋ…ಎಂದವನ ಮೆಲ್ಲನೆಬ್ಬಿಸಿ
ಕೈಗೆ ಮೆತ್ತಿದ ಕಮಟು ಬೆವರನು
ಉಟ್ಟರವಿಗೆ ವರಸಿ
ಮಾನವೀಯ ತುಡಿತದಲಿ
ಕಪಾಳಕ್ಕೆರಡು ಬಾರಿಸಿ ಕೇಳಿದೆ
ಲೋ! ಹಿಂಗ್ಯಾಕ ಮಾಡಿದಿ?
ಏನಾದರೂ ಬುದ್ದಿಗಿದ್ದಿ ಐತಿ
ಮಂಗ್ಯಾ ಮನಸ್ಸು ನಿಂದು
ಮಾಣಿಕ್ಯದ ಬೆಲೆ ತಿಳದೈತೇನು
ಮರುಮಾತಿಲ್ಲ ಕಪಾಳ ಸವರುತ್ತ
ತಿರುಗಿಯು ನೋಡದೆ ನಡೆದನವನು
ತಾಳ್ಮೆ ಮೈಗೂಡಿಸಿಕೊಂಡವನಂತೆ
- ಪೀರಸಾಬ ನದಾಫ