ಕನ್ನಡ ನಾಡಲ್ಲೇ ಕನ್ನಡ ಮಾತಾಡೋಕೆ ಕಷ್ಟ ಪಡೋ ಜನರಿದ್ದಾರೆ, ಅಂತದರಲ್ಲಿ ಲಡಾಕ್ ನಲ್ಲಿ ಕನ್ನಡದಲ್ಲಿ ಮಾತಾಡೋ ಹುಡುಗ ಸಿಕ್ಕಾಗ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ಸಂತೋಷವಾಗುತ್ತೆ. ಅಂತಹ ಸಂತೋಷವನ್ನು ಕೋಳಾಲ ಗೀತಾ ಓದುಗರ ಮುಂದೆ ಹಂಚಿಕೊಂಡಿದ್ದಾರೆ.
ಮಧ್ಯಾಹ್ನ ಊಟದ ಸಮಯವಾದರಿಂದ ಡ್ರೈವರ್ ಗೆ ಎಲ್ಲಾದರೂ ಒಳ್ಳೆಯ ಊಟ ಸಿಗುವ ಕಡೆ ಕಾರ್ ನಿಲ್ಲಿಸಿ ಎಂದು ಹೇಳಿದೆವು. ಅವನು ಅಲ್ಲೇ ಸಮೀಪವಿದ್ದ ಒಂದು ಡಾಬಾ ತರದ ಹೋಟೆಲ್ ನ ಮುಂದೆ ನಿಲ್ಲಿಸಿ ಮತ್ತೆಲ್ಲೂ ಒಳ್ಳೆಯ ಊಟ ಸಿಗುವುದಿಲ್ಲ. ಇಲ್ಲೇ ಊಟ ಮುಗಿಸಿದರೆ ಒಳ್ಳೆಯದು ಎಂದ. ನಾವು ಲೇ..ಯಿಂದ ನುಬ್ರ ಕಡೆಗೆ ಹೊರಟಿದ್ದೆವು.
ನಾವುಗಳೆಲ್ಲ ಮೆನು ಕಾರ್ಡನ್ನು ಜಾಲಾಡುತ್ತಾ… ಏನು ಆರ್ಡರ್ ಮಾಡುವುದು ಎಂದು ಡಿಸ್ಕಸ್ ಮಾಡುತ್ತಿದ್ದೆವು. ಅಷ್ಟರಲ್ಲಿ ಒಂದು ನಿಮಿಷ ಬಂದೇ ಮೇಡಂ ಎಂಬ ಅಚ್ಚ ಕನ್ನಡದ ಪದ ಕಿವಿಗೆ ಬಿತ್ತು. ಸುತ್ತಮುತ್ತ ನೋಡಿದೆ, ಯಾರಾದರೂ ಕನ್ನಡದವರು ಇದ್ದಾರ ಎಂದು, ಯಾರು ಕಾಣಲಿಲ್ಲ.

ಬಹುಶಃ ಇದು ನನ್ನ ಭ್ರಮೆ ಇರಬೇಕೆಂದುಕೊಂಡು ಸುಮ್ಮನೆ ಕೂತುಕೊಂಡೆ . ಒಂದೆರಡು ನಿಮಿಷದಲ್ಲೇ ನನ್ನ ಮುಂದೆ ಹಾಜರಾದ ಕುರುಚಲು ಗಡ್ಡದ ಲಡಾಕಿಯೋಬ್ಬರು ಹೇಳಿ ಮೇಡಂ. ಏನು ಬೇಕು ?? ಮುದ್ದೆ ಬಸ್ಸಾರು ಬೇಕಾ !! ರಾಗಿ ರೊಟ್ಟಿ ಬೇಕಾ!!ಎಂದು ಕೇಳಿದರು. ಅವರ ಬಾಯಲ್ಲಿ ಅಚ್ಚ ಕನ್ನಡದ ಪದ ಕೇಳಿ ಆಶ್ಚರ್ಯ ಸಂತೋಷ ಎರಡೂ ಒಟ್ಟಿಗೆ ಆಯಿತು.
ಇಲ್ಲಿ ಮುದ್ದೆ ಬಸ್ಸಾರು, ರಾಗಿ- ರೊಟ್ಟಿ ಸಿಗುತ್ತದಾ!! ಎಂದೆ ಬಾಯಲ್ಲಿ ಆಗಲೇ ನೀರುರೂತ್ತಿತ್ತು. ಇಲ್ಲ ಮೇಡಂ… ತಮಾಷೆಗೆ ಹೇಳಿದೆ ಎಂದು ನಗುತ್ತಾ ಮೆನುನಲ್ಲಿ ಇರುವುದೆಲ್ಲ ಸಿಗುತ್ತದೆ ಎಂದರು. ತುಂಬಾ ಹೊಟ್ಟೆ ಹಸಿವಾಗುತ್ತಿದ್ದರು ಏನು ಬೇಕೆಂದು ಆರ್ಡರ್ ಮಾಡದೆ ಅವರನ್ನು ಎನ್ಕ್ವೈರಿ ಮಾಡಲು ಶುರು ಮಾಡಿದೆ. ಅವರ ಹೆಸರು ,”ಸ್ತಂಝಿನ್ ಸುದ್ಧೋ” ಮೈಸೂರಿನ ಮಹಾ ಬೋಧಿ ಸ್ಕೂಲ್, ಪಿಯುಸಿ ಹಾಗೂ ಪದವಿಯನ್ನು ಮಹಾಜನ ಕಾಲೇಜಿನಲ್ಲಿ ಮುಗಿಸಿ ತನ್ನ ತವರಾದ ಲಡಾಕಿನಲ್ಲಿ ಹೊಟ್ಟೆಪಾಡಿಗೆ ಸಣ್ಣದೊಂದು ಹೋಟೆಲ್ ತೆಗೆದು ನಾಲ್ಕಾರು ಜನರಿಗೆ ಕೆಲಸ ಕೊಟ್ಟು ಜೀವನ ಮಾಡುತ್ತಿದ್ದಾರೆ.

ಮೈಸೂರಿನಲ್ಲಿ ಓದಿದ್ದರಿಂದ ಕನ್ನಡ ಕಲಿತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಳ್ಳುತ್ತೀರಾ.. ಇಲ್ಲೇ ಇರೋದು ವಿಶೇಷ ..ಅವರು ಕನ್ನಡ ಮಾತನಾಡಿದ್ದು ವಿಶೇಷವಲ್ಲ, ಆದರೆ ಅವರು ತಮ್ಮ ಹೋಟೆಲ್ ನ ಮುಂಭಾಗದಲ್ಲಿ ಕರ್ನಾಟಕದ ಭಾವುಟವನ್ನು ಹಾಕಿದ್ದಾರೆ !! ತನಗೆ ವಿದ್ಯೆ ಬುದ್ಧಿ ಹಾಗೂ ಅನ್ನವನ್ನು ಕೊಟ್ಟ ಕರ್ನಾಟಕದ ಮೇಲೆ ಅವರಿಗೆ ವಿಶೇಷ ಅಭಿಮಾನವಿದೆ. ಇಲ್ಲೇ ಹುಟ್ಟಿ ಬೆಳೆದ ಎಷ್ಟು ಜನ ಕನ್ನಡಿಗರ ಮನೆ ಮೇಲೆ ಕರ್ನಾಟಕದ ಭಾವುಟವಿದೆ ಹೇಳಿ ??.
ದೂರದ ಊರಿನಲ್ಲಿ ಇದ್ದುಕೊಂಡೇ ಕನ್ನಡದ ಮೇಲೆ ಅಭಿಮಾನವನ್ನು ಬೆಳೆಸಿಕೊಂಡಿರುವ ಇವರ ಬಗ್ಗೆ ನನಗೆ ವಿಶೇಷ ಗೌರವ ಭಾವ ಮೂಡಿತು. ನಂತರ ಅವರ ಹೋಟೆಲಿನಲ್ಲಿ ಅತ್ಯಂತ ರುಚಿಯಾದ ಶುಚಿಯಾದ ಊಟವನ್ನು ಸವಿದು ಅವರಿಗೆ ಶುಭ ಕೋರುತ್ತಾ ಮುಂದಿನ ಪ್ರಯಾಣವನ್ನು ಬೆಳೆಸಿದೆವು.
- ಕೋಳಾಲ ಗೀತಾ
