ಬಾಳೆ ನಾರಿನಿಂದ ಕಟ್ಟಿದ ಹರಿವೆ ಸೊಪ್ಪನ್ನು ತಂದು ಮನೆಯಲ್ಲಿ ಚನ್ನಾಗಿ ತೊಳೆದು ಪಲ್ಯ ಮಾಡಿ ತಿಂದರೆ ನಾಲಿಗೆಗೆ ಪರಮಾನಂದ. ಪಲ್ಯ ಮಾಡುವ ವಿಧಾನವನ್ನು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ, ಮಾಡಿ ಸವಿಯಿರಿ…
ಈಗೆಲ್ಲ ಕೊಳಚೆ ನೀರಲ್ಲಿ ಕೆಮಿಕಲ್ ಗೊಬ್ಬರ ಕೀಟನಾಶಕ ಬಳಸಿ ಬೆಳೆದ ಹುಲ್ಲು ತಿಂದಂತ ಅನುಭವದ ಬೇಕಾರ್ ರುಚಿಯ ಹರಿವೆ ಈಗ ಮಾರಾಟಕ್ಕೆ ಬರುತ್ತದೆ.
ಒಂದು ಕಾಲದಲ್ಲಿ ಅಂದರೆ 1980-90ರ ತನಕ ಹಸಿರು, ಕೆಂಪು ಬಣ್ಣದ ದಂಟು ಹರಿವೆ ಎಲ್ಲಾ ರೈತರ ಕಬ್ಬಿನ ಗದ್ದೆಯಲ್ಲಿ ಮತ್ತು ಹಳ್ಳಿಯ ಎಲ್ಲರ ಮನೆಯ ಹಿತ್ತಲಲ್ಲಿ ಬೇಸಿಗೆ ತರಕಾರಿ ಆಗಿರುತ್ತಿತ್ತು. ಇದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರಲಿಲ್ಲ, ಮಾಡಿದರೂ ಖರೀದಿಸುವವರಿರಲಿಲ್ಲ. ಮತ್ತೆ ಇದರ ರುಚಿ ಎಲ್ಲರಿಗೂ ಗೊತ್ತಿರಲಿಲ್ಲ. ಒಂದಾಳು ಎತ್ತರ ಬೆಳೆಯುತ್ತಿದ್ದ ರಟ್ಟೆ ಗಾತ್ರದ ಒಂದು ದಂಟು ಹರಿವೆ ಗಿಡದಿಂದ ಎರೆಡು ದಿನ ಸಾಂಬಾರ್ ಮಾಡಬಹುದಿತ್ತು. ಬೆಳೆದರೂ ದಂಟಿನ ಒಳಗೆ ಮೃದುವಾಗಿರುತ್ತಿದ್ದ ದಂಟನ್ನು ಜಗಿದು ಆಸ್ವಾದಿಸುತ್ತಿದ್ದ ಕಾಲ ಈಗ ನೆನಪಾಗಿ ಬಾಯಿಯಲ್ಲಿ ನೀರು ಬರುತ್ತದೆ.
ಬೀಜಕ್ಕಾಗಿ ಕೆಲ ಗಿಡ ಹಾಗೇ ಬಿಡುತ್ತಿದ್ದರು. ನಂತರ ಅದರಲ್ಲಿ ಹೂವಾಗಿ ಬೀಜವಾದಾಗ ಒಣಸಿ ತೆಗೆದಿಡುತ್ತಿದ್ದರು. ದಂಟು ಹರಿವೆ ಮಳೆಗಾಲದಲ್ಲಿ ನೀರು ತುಂಬಿ ಸವಳು ಸವಳು ಆಗುವುದರಿಂದ ಬೇಸಿಗೆಯಲ್ಲಿಯೇ ದಂಟು ಹರಿವೆ ರುಚಿಕರ. ಈಗೆಲ್ಲ ಕೆಮಿಕಲ್ ಗೊಬ್ಬರದಿಂದ ಕೊಳಚೆ ನೀರಲ್ಲಿ ಬೆಳೆಸುವ ನೋಡಲು ಆಕರ್ಷಕವಾಗಿ ಕಾಣುವ ಹರಿವೆ ಸೊಪ್ಪು ನಿತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತೆ ಆದರೆ ಅದರಲ್ಲಿ ಹರಿವೆ ಸೊಪ್ಪಿನ ಘಮವೂ ಇಲ್ಲ ರುಚಿಯೂ ಇಲ್ಲ ಒಂದು ತರ ಹಸಿ ಹುಲ್ಲು ತಂದು ಬೇಸಿದಂತೆ ಅದರ ಬೇಕಾರ್ ರುಚಿ.

ಫೋಟೋ ಕೃಪೆ : ಅಂತರ್ಜಾಲ
ನಮ್ಮ ತಂದೆ ವಿವಿಧ ತರದ ದಂಟು ಹರಿವೆ ಬೀಜದಿಂದ ಅನೇಕರಿಗೆ ದಂಟು ಹರಿವೆ ಬೆಳೆಸಿ ಕೊಡುತ್ತಿದ್ದರು. ಕಾಲ ಕ್ರಮೇಣ ಹಳ್ಳಿಗಳು ಹಾಲು – ಕೋಳಿ – ಮಾಂಸಕ್ಕೆ ಪೇಟೆಯ ಮೇಲೆ ಅವಲಂಬಿಸಿದಂತೆ ತರಕಾರಿಗೂ ಪೇಟೆಗೆ ಅವಲಂಬಿಸಿ ಈ ದಂಟಿನ ಹರಿವೆಯ ತಳಿಯ ಬೀಜವನ್ನೆ ಕಳೆದುಕೊಂಡಿದ್ದು ಸತ್ಯ. ಆದರೆ ಕರಾವಳಿಯ ಜನರಿಗೆ ಪಶ್ಚಿಮ ಘಟ್ಟದಲ್ಲಿನ ಗುಡ್ಡಗಾಡಿನ ಹಾಲಕ್ಕಿ ಮಹಿಳೆಯರು ಸಂಪ್ರದಾಯಿಕ ನೂರಾರು ಮೂಲ ತಳಿಯ ತರಕಾರಿ ಬೆಳೆದು ಈಗಲೂ ಮಾರಾಟ ಮಾಡುತ್ತಾರೆ.
ನಾನು ಸ್ವತಃ ನೋಡಿದ್ದೇನೆ, ಹೊನ್ನಾವರದ ಬಂದರಿನ ಹತ್ತಿರ, ಅಂಕೋಲದ ಚಿತ್ರ ಮಂದಿರದ ಎದರು, ಕುಮಟಾದ ರೈಲು ನಿಲ್ದಾಣದ ತಿರುವಿನಲ್ಲಿ ಬೆಳಿಗ್ಗೆ 5 ಕ್ಕೆ ಅವರು ದಂಟು ಹರಿವೆಯ ಹೊರೆ ಹೊತ್ತು ತರುತ್ತಾರೆ. ವಿಶೇಷವಾಗಿ ಕರಾವಳಿಯ ಕೊಂಕಣಿ ಗೌಡ ಸಾರಸ್ವತರು ಇದಕ್ಕೆ ಕಾದು ನಿಂತಿರುತ್ತಾರೆ. ತಕ್ಷಣದಲ್ಲಿ ಹಾಲಕ್ಕಿ ಮಹಿಳೆಯರು ತಂದ ದಂಟು ಹರಿವೆ ಖಲಾಸ್. ಇದೇ ರೀತಿ ಗೋವಾದಲ್ಲಿ ಕುಣುಬಿ ಜನರು ಈ ರೀತಿ ದಂಟು ಹರಿವೆ ಬೆಳೆದು ಮಾರಾಟಕ್ಕೆ ತರುತ್ತಾರೆ. ಗೋವನ್ನರಿಗೆ ಕೂಡ ಇದು ಬಲು ಪ್ರಿಯ.
ಯಾವುದೇ ಕೆಮಿಕಲ್ ಗೊಬ್ಬರ-ಔಷಧಿ ಇಲ್ಲದೆ ಬೆಳೆಸುವ ಹರಿವೆ ಸೊಪ್ಪಿನ ರುಚಿ ಮತ್ತು ಘಮ ವಿಶೇಷವಾಗಿರುತ್ತದೆ. ಹರಿವೆ ಸೊಪ್ಪಿನ ಸರಳವಾದ ಸುಲಭವಾದ ಪಲ್ಯ ತಯಾರಿಸಿ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಿಡಿ ಮಾವಿನ ಉಪ್ಪಿನಕಾಯಿ ಜೊತೆ ನಂಜಿಕೊಂಡು ಊಟ ಮಾಡುವುದು ನನಗೆ ಬಲು ಇಷ್ಟ.


ಫೋಟೋ ಕೃಪೆ : ಅಂತರ್ಜಾಲ
ಹರಿವೆ ಸೊಪ್ಪಿನ ಪಲ್ಯದ ಸುಲಭ ರೆಸಿಪಿ :
ಕಡಾಯಿಯಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಇಂಗು ಹಾಕಿ ಹುರಿದು 5-6 ಒಣ ಮೆಣಸು ತುಂಡು ಮಾಡಿ ಹಾಕಿ. ಕರಿಬೇವಿನ ಎಲೆ ಸೇರಿಸಿ ಕರಿಯುವುದು ನಂತರ ಬೆಳ್ಳುಳ್ಳಿ ಮತ್ತು ನೀರುಳ್ಳಿ ಸಣ್ಣದಾಗಿ ತುಂಡರಿಸಿ ಹಾಕಿ ಬಾಡಿಸಿ ಅದಕ್ಕೆ ತೊಳೆದು ಕತ್ತರಿಸಿದ ಹರಿವೆ ಸೊಪ್ಪು ಹಾಕಿ ತಿರುಗಿಸುತ್ತಾ ಕೆಲ ನಿಮಿಷದ ನಂತರ ಕಾಯಿ ತುರಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಬೆರೆಸಿ ಬೇಯುವ ತನಕ ಉರಿಯಲ್ಲಿ ಇಟ್ಟು ಇಳಿಸಿದರೆ ರುಚಿಕರ ಸೊಪ್ಪಿನ ಪಲ್ಯ ರೆಡಿ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
