ಸ್ವಚ್ಛ ಪರಿಸರಕ್ಕೆ ಶುದ್ಧ ಮನಸ್ಸು ಕನ್ನಡಿಯಂತೆ – ರಾಘವೇಂದ್ರ ಸಿ

ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲೇ ಎಸೆದು ಹೋಗುವುದು ತಿಳಿವಳಿಕೆ ಇರುವವರಲ್ಲ ಮಾನಸಿಕ ರೋಗಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳೋಣ – ರಾಘವೇಂದ್ರ ಸಿ, ಮುಂದೆ ಓದಿ…
ಹಿಂದಿನ ಕಾಲದಲ್ಲಿ ದಾರಿಹೋಕರು ಹಾಗೂ ಪ್ರಯಾಣಿಕರಿಗಾಗಿ ರಸ್ತೆಯ ಅಕ್ಕ ಪಕ್ಕಗಳಲ್ಲಿ ಹಣ್ಣಿನ ಮರಗಳನ್ನು ಬೆಳೆಸುತ್ತಿದ್ದರು. ಮರದ ನೆರಳಿನಲ್ಲಿ ದಾರಿಹೋಕರು ದಣಿವಾರಿಸಿಕೊಂಡು, ಮರದ ಹಣ್ಣಿನಿಂದ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು.

ಆದರೆ ಇಂದು ಕಾಲ ಬದಲಾಗಿದೆ ಹಣ್ಣಿನ ಮರಗಳನ್ನು ಬೆಳೆಸುವ ಮಾತಿರಲಿ, ಹಿಂದಿನವರು ಯಾರಾದರೂ ಬೆಳೆಸಿದ್ದರೆ ಅದನ್ನು ಮುಲಾಜಿಲ್ಲದೆ ಕಡಿಯುತ್ತಿದ್ದೇವೆ. ಇನ್ನು ಈಗಿನ ರಸ್ತೆ ಪ್ರಯಾಣಿಕರ ಕಥೆಯೇ ಬೇರೆ ದಣಿವಾರಿಸಿಕೊಳ್ಳಲು ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಆರೋಗ್ಯಕ್ಕೆ ಮಾರಕವಾಗಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಮದವೇರಿಸಿಕೊಂಡು. ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳ ತ್ಯಾಜ್ಯಗಳನ್ನು ಮಾನಸಿಕ ರೋಗಿಗಳ ಹಾಗೆ ರಸ್ತೆಯ ಪಕ್ಕದಲ್ಲೇ ಎಸೆದು ತಮ್ಮ ಕೆಲಸ ಮುಗಿಯಿತು ಎಂಬಂತೆ ಮುಂದೆ ಸಾಗಿ ಬಿಡುತ್ತಾರೆ.
ಪಾಪ ಇವರೆಲ್ಲ ತಮ್ಮ ದಿನನಿತ್ಯದ ಜಂಜಾಟದ ಬದುಕಿನ ಹತಾಶೆಗಳನ್ನು ಈ ರೀತಿ ರಸ್ತೆಯಲ್ಲಿ ವಿಸರ್ಜಿಸಲ್ಲೇಂದೆ ಬಂದವರೆನೊ ಎಂಬಂತೆ ಮರುಕ ಉಂಟಾಗುತ್ತದೆ.
ಇವರ್ಯಾರು ಹೊರಜಗತ್ತಿಗೆ ಅನಾಗರಿಕರೇನಲ್ಲ…! ಅಥವಾ ಅವರ ಈ ಕಾರ್ಯದಿಂದ ಎಷ್ಟೆಲ್ಲಾ ಅನಾಹುತ ಆಗುವುದೆಂದು ಅರಿಯದವರೇನಲ್ಲ…! ಆದರೂ ಸಹ ತಮ್ಮ ವಿಕೃತ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಒಂದು ಸಣ್ಣ ಪ್ರಯತ್ನ ಕೂಡ ಮಾಡುವುದಿಲ್ಲ.

ಎಷ್ಟೋ ಬಾರಿ ಈ ರೀತಿ ಮಾಡುವವರಿಗೆ ತ್ಯಾಜ್ಯಗಳನ್ನು ಹೀಗೆ ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ವಿನಂತಿಸಿ ಕೊಂಡಿದ್ದೇವೆ. ಪ್ರೀತಿಯಿಂದ ಹೇಳಿದ ಕಾರಣಕ್ಕೋ ಏನೊ ಇಲ್ಲ ಸರ್ ನಾವು ಹಾಗೆಲ್ಲ ಮಾಡುವವರಲ್ಲ, ಅಂಥವರಲ್ಲ ಎಂದು ಹೇಳುತ್ತಾ ಅಲ್ಲಿಂದ ಮುಂದೆ ಹೋಗಿ ನಿರ್ಜನ ಪ್ರದೇಶದಲ್ಲಿ ಎಸೆದುಬಿಡುತ್ತಾರೆ.ಯಾರೂ ನೋಡದ ಹಾಗೆ ಎಸೆಯುವ ಇವರ ಬುದ್ಧಿವಂತಿಕೆಯನ್ನು ಸಾರ್ವಜನಿಕ ಸ್ಥಳಗಳನ್ನು ಗಲೀಜು ಮಾಡದೇ ಇರಲು ಉಪಯೋಗಿಸಿದಲ್ಲಿ, ಈ ದೇಶದ, ಈ ಭೂಮಿಯ ಋಣವನ್ನು ತೀರಿಸಬಹುದಿತ್ತು.

ಇದು ತೀರ್ಥಹಳ್ಳಿಯ ಭಾರತಿಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 169 ರಸ್ತೆ ಪಕ್ಕದ ಚಿತ್ರಣ. ಇಲ್ಲಿ ಅನೇಕ ಪ್ರಯಾಣಿಕರು ವಾಹನವನ್ನು ನಿಲ್ಲಿಸಿ ಊಟ, ತಿಂಡಿ, ಕುಡಿತ ಹೀಗೆ ಅನೇಕ ಚಟುವಟಿಕೆಗಳನ್ನು ಪೂರೈಸಿದ ನಂತರ ತ್ಯಾಜ್ಯಗಳನ್ನು ಹೇಗೆ ಎಸೆದಿದ್ದಾರೆ ಎಂದು ಒಮ್ಮೆ ನೋಡಿ.

ವಿಪರ್ಯಾಸವೆಂದರೆ ಈ ಜಾಗದಲ್ಲಿ “ಸುಸ್ವಾಗತ” ಹಾಗೂ”ಶುಭ ಪ್ರಯಾಣ” ಎಂಬ ಫಲಕಗಳಿವೆ ಅದು ಕಸವನ್ನು ಹಾಕಲು ಸ್ವಾಗತ ಕೋರಿ, ಹಾಕಿದ ನಂತರ ಪ್ರಯಾಣ ಶುಭವಾಗಲಿ ಎಂಬುವಂತೆ ಸಾಕ್ಷಿಯಾಗಿದೆ. ಇಲ್ಲಿ ಕಸ ಹಾಕುವವರಿಗೆ ತಾವು ಸಾರ್ವಜನಿಕ ಜಾಗದಲ್ಲಿ ಗಲೀಜು ಮಾಡುತ್ತಿದ್ದೇವೆ, ಅವರ ನಂತರ ಬೇರೆಯವರಿಗೆ ತೊಂದರೆ ಆಗಬಹುದು ಅಥವಾ ಮುಂದೊಂದು ದಿನ ತಾವೇ ಆ ಜಾಗಕ್ಕೆ ಬಂದಾಗ ವಾಹನವನ್ನು ನಿಲ್ಲಿಸುವುದಕ್ಕೂ ಸಾಧ್ಯವಾಗದೆ ಇರಬಹುದು ಎಂಬ ಪರಿಜ್ಞಾನವೂ ಇಲ್ಲ. ಈ ರೀತಿ ಪರಿಸರಕ್ಕೆ ಸಮಾಜಕ್ಕೆ ಮಾರಕವಾಗಿ ಬದುಕುವ ಅವಶ್ಯಕತೆಯಾದರೂ ಏನು…?

ಇದು ಕೇವಲ ಈ ಒಂದು ಜಾಗದ ಸಮಸ್ಯೆಯಲ್ಲ ಮಲೆನಾಡಿನ ಬಹುತೇಕ ರಸ್ತೆಗಳ ಪರಿಸ್ಥಿತಿ ಹೀಗೆ ಆಗಿಹೋಗಿದೆ. ನಾವೇ ನಮ್ಮ ಮುಂದಿನ ಪೀಳಿಗೆಯವರ ಎದುರಿಗೆ ಈ ರೀತಿ ಅನಾಗರಿಕರಾಗಿ ಬದುಕಿದರೆ ಅವರು ನಮ್ಮಿಂದ ಕಲಿಯಬಹುದಾದ ಪಾಠ ವಾದರೂ ಏನು…? ಕೊನೆಪಕ್ಷ ನಮ್ಮ ವೈಯಕ್ತಿಕ ಮಟ್ಟಕ್ಕಾದರೂ ನಮ್ಮ ಪರಿಸರ, ಭೂಮಿಯನ್ನು ಹೊಲಸು ಮಾಡದೆ ಇರಲು ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಲೇಬೇಕಾಗಿದೆ.ಕೊಳಕು ಮಾಡಲು ಕಲಿತ ನಾವು, ಸ್ವಚ್ಛವಾಗಿರಲು ಕಲಿಯಲಾಗದೇ..?

ಅದಾಗಲೇ ನಾವು ಸ್ವಚ್ಛ ಭಾರತ ತೆರಿಗೆ ಹಣವನ್ನು ಕಟ್ಟುತ್ತಲೇ ಇದ್ದೇವೆ.ಮುಂದೊಂದು ದಿನ ಈ ತೆರಿಗೆ ನಾವು ಕೊಂಡುಕೊಳ್ಳುವ ವಸ್ತುವಿಗಿಂತ ಹೆಚ್ಚಾದರೂ ಆಶ್ಚರ್ಯವಿಲ್ಲ.
ಅಂದರೆ 20 ರೂಪಾಯಿ ನೀರಿನ ಬಾಟಲ್ ಬದಲಾಗಿ 30 ರೂಪಾಯಿ ತೆರಿಗೆ ಸೇರಿ ಐವತ್ತು ರೂಪಾಯಿ ಆಗಬಹುದು ಅದೇ ಬಾಟಲಿ ಹಿಂದಿರುಗಿಸಿದ್ದಲ್ಲಿ 30 ರೂಪಾಯಿ ಹಿಂಪಡೆಯುವಂತೆ. ಪರಿಸರವು ಸ್ವಚ್ಛ ವಾಗಿದ್ದಲ್ಲಿ ಮನಸ್ಸುಗಳು ಶುದ್ದವಾಗಿರುತ್ತದೆ.. ಮನಸ್ಸುಗಳು ಶುದ್ದವಾಗಿದ್ದಲ್ಲಿ ಸಮಾಜವು ಸದೃಢವಾಗಿರುತ್ತದೆ. ಹಾಗಾಗಿ ನಾವೂ ಹೊಲಸು ಮಾಡದೆ ಬೇರೆಯವರು ಹೊಲಸು ಮಾಡದಂತೆ ಪ್ರೀತಿಯಿಂದ ವಿನಂತಿಸಿಕೊಳ್ಳುತ್ತ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕನಿಷ್ಠ ಜವಾಬ್ದಾರಿಯನ್ನಾದರು ನಿಭಾಯಿಸೋಣ.

  • ರಾಘವೇಂದ್ರ ಸಿ (ಗೋಸಿರಿ ಪಂಚಗವ್ಯ ಹಾಗೂ ಸಾವಯವ ಉತ್ಪನ್ನ ಅಂಗಡಿ ಮಾಲೀಕರು, ಗೋಸಿರಿ ಸೇವಾ ಟ್ರಸ್ಟ್ ತಂಡದ ಆಯೋಜಕರು, ಮುಂದಿನ ದಿನಗಳಲ್ಲಿ ಗೋ ಸಂಪತ್ತನ್ನು ಈ ಟ್ರಸ್ಟ್ ಮೂಲಕ ಒಂದು ಮಾದರಿ ಗೋಶಾಲೆಯನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯುವ ಸಮಾಜಕಾರ್ಯಕರ್ತರು) ತೀರ್ಥಹಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW