ಶಿಕ್ಷಕಿ, ಲೇಖಕಿ ಅನುಸೂಯ ಯತೀಶ್ ಅವರ ‘ಹಲೋ ಟೀಚರ್’ ಕೃತಿಯಲ್ಲಿನ ಮೊದಲ ಎರಡು ಲೇಖನವನ್ನು ಓದುತ್ತಿದ್ದಂತೆ ನಿಮ್ಮ ಕರ್ತವ್ಯದ ಬದ್ಧತೆ ಮತ್ತು ಮಕ್ಕಳೊಂದಿಗಿನ ಒಡನಾಟ ಶಿಕ್ಷಕರಿಗೆಲ್ಲಾ ಮಾದರಿ ಎನಿಸಿತ್ತದೆ. ಈ ಕೃತಿಯ ಕುರಿತು ಶಂಕರ್ ಗೌಡ ಎನ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹಲೋ ಟೀಚರ್
ಲೇಖಕರು : ಅನುಸೂಯ ಯತೀಶ್
ಪ್ರಕಾಶನ : ಅವ್ವ ಪ್ರಕಾಶನ
ನಿಮ್ಮ ಮತ್ತು ನಿಮ್ಮ ವಿದ್ಯಾರ್ಥಿನಿಯ ಓದಿನಿಂದ ನಿಜಕ್ಕೂ ಈ ಟೀಚರ್ ತೃಪ್ತಳಾದಳು ಸರ್. ನಿಮ್ಮ ವಿದ್ಯಾರ್ಥಿಗಳಲ್ಲೂ ಓದುವ ಅಭಿರುಚಿ ಮೂಡಿಸಿರುವ ನಿಮಗೆ ಶರಣು ಸರ್.
ಪುಸ್ತಕ ನಿನ್ನೆಯೇ ತಲುಪಿತು. ಅಂಚೆ ಬಂದಾಗ ಪ್ರಥಮ ಪಿಯುಸಿ ಸೈನ್ಸ್ ತರಗತಿಯಲ್ಲಿದ್ದೆ. ಪುಸ್ತಕದ ಶೀರ್ಷಿಕೆ ಮತ್ತು ಮುಖಪುಟ ನೋಡಿ ನಂದಿನಿ ಎಂಬ ವಿದ್ಯಾರ್ಥಿನಿ ಸಾರ್ ನಾನು ಓದಬೇಕು ಕೊಡಿ ಎಂದು ಕೈಯಿಂದ ಕಿತ್ತುಕೊಂಡೇಬಿಟ್ಟಳು.
ಇವತ್ತು ಸಿಕ್ಕಿ ಸಾರ್… ಒಂದು ಲೇಖನ ಓದಿದೆ ತುಂಬಾ ಚೆನ್ನಾಗಿದೆ ಎಂದವಳು ವಿವರಿಸುವಷ್ಟು ಸಮಯವಿಲ್ಲದೇ ಮತ್ತೊಂದು ಕ್ಲಾಸಿಗೆ ಓಡಿದಳು. ನನ್ನ ವಿದ್ಯಾರ್ಥಿನಿ ನಂದಿನಿ ಪರೀಕ್ಷೆಗಳ ಒತ್ತಡ ನಡುವೆಯೇ ನಿಮ್ಮ ಹಲೋ ಟೀಚರ್ ಓದಿ, ನಿಮ್ಮ ಶ್ರದ್ಧೆ ಮತ್ತು ಅಂತಃಕರಣದ ವಿಷಯಗಳನ್ನು ನನ್ನೊಂದಿಗೆ ಹಂಚಿ ಹಗುರಾದಳು. ನಿಮ್ಮ ಬಗ್ಗೆ ವ್ಯಕ್ತಪಡಿಸಲಾಗದ ಸಂತಸ ಅವಳಿಗೆ. ಡಾ. ಸತ್ಯನಾರಾಯಣ ಅವರ ಬೇಂದ್ರೆ ಬಗೆಗಿನ *ಅಂಬಿಕಾತನಯದತ್ತನ ಹಾಡಾ..ಬೆಳದಿಂಗಳು ನೋಡ* ಪುಸ್ತಕ ಓದಿ ಅದರಲ್ಲಿನ ಬೇಂದ್ರೆ ಕುರಿತ ಪುಟ್ಟಪುಟ್ಟ ಘಟನೆಗಳನ್ನು ಓದಿ, ಮೆಲುಕು ಹಾಕುತ್ತಿರುವ ಗಳಿಗೆಯ ನಡುವೆ, ವಿದ್ಯಾರ್ಥಿನಿ ನಂದಿನಿಯಿಂದ ನಿಮ್ಮ *ಹಲೋ ಟೀಚರ್* ಕೈಗೆತ್ತಿಕೊಂಡೆ.

ಮೊದಲ *ಎರಡು ಲೇಖನ* ಓದುತ್ತಿದ್ದಂತೆ ನಿಮ್ಮ ಕರ್ತವ್ಯದ ಬದ್ಧತೆ ಮತ್ತು ಮಕ್ಕಳೊಂದಿಗಿನ ಒಡನಾಟ ಶಿಕ್ಷಕರಿಗೆಲ್ಲಾ ಮಾದರಿ ಎನಿಸಿತು. ಇವು ಓದುತ್ತಿದ್ದಂತೆ ನಾನು ಕಾಲೇಜಿನ ದೊಡ್ಡ ಮಕ್ಕಳಿಗೆ ಮೇಷ್ಟ್ರಾಗುವ ಬದಲು ಪುಟಾಣಿ ಮಕ್ಕಳಿಗೆ ಗುರುವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಒಂದು ಕ್ಷಣ ಅನಿಸಿಬಿಡ್ತು.
ನಿಮ್ಮ ತಂದೆ, ಅಕ್ಕನ ವಿಚಾರ, ನಾಲ್ಕನೇ ತರಗತಿಯಲ್ಲಿ ಶಿಕ್ಷಕಿಯಾಗುವ ಕನಸು ಮೊಳೆಯಲು ಕಾರಣ, ಕೆಲಸಕ್ಕೆ ಸೇರಿದ ಆರಂಭದಲ್ಲೇ ಮೂರನೇ ತರಗತಿಯಲ್ಲಿ ಮಕ್ಕಳಿಂದಾದ ಅನುಭವ, ನೀವು ಎದುರಿಸಿದ ತಿದ್ದಿ ತೀಡಿದ ಸಂದರ್ಭ,
ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಹಾಡು ಹೇಳಿ ಕುಣಿದದ್ದು, ಅವರು ಇಷ್ಟಪಟ್ಟಿದ್ದು, ನಾಗವೇಣಿ ಲಕ್ಷಕ್ಕೆ ಸೊನ್ನೆ ಬರೆಯುವುದರ ಹಿಂದಿನ ಘಟನೆ ಇವೆಲ್ಲ *ಶಿಕ್ಷಕ ವೃತ್ತಿ ಕಲಿಸಿದ ಮೊದಲ ಪಾಠ* ದಲ್ಲಿ ಪೋಣಿಸಿದ ರೀತಿ ಚೆಂದ.

ಇನ್ನು ಎರಡನೆಯ ಲೇಖನವಂತೂ ವಿಶೇಷ ಚೇತನ *ತಿಕ್ಕಲು ಮಂಜನ* ಬಗ್ಗೆ ನೀವು ತೋರಿದ ತಾಯಿ ಪ್ರೀತಿ, ಮಂಜು, ಮಂಜುನಾಥ ಎಂದು ಕರೆದು ಉಳಿದ ವಿದ್ಯಾರ್ಥಿಗಳಲ್ಲೂ ಅವನ ಬಗ್ಗೆ ಗೌರವ ಮೂಡಿ, ಅವನನ್ನು ಪರಿವರ್ತನೆ ಮಾಡಲು ಪ್ರಯತ್ನ ಮಾಡಿದ್ದರ ಬಗ್ಗೆ ಅಭಿಮಾನ ಮೂಡಿತು. ಮುಂದೆ ಇವನು ಎಲ್ಲರಂತಾಗಿ ಬದುಕುತ್ತಾನೆಂಬ ನಿರೀಕ್ಷೆ ನನ್ನಲ್ಲಿ ಮೂಡಿತ್ತಾದರೂ ಅವನ ತಾಯಿಯ ನಿರ್ಲಕ್ಷ್ಯದಿಂದ ಕೊನೆಗೆ ಮರಣ ಹೊಂದಿದ್ದು ಮಾತ್ರ ಓದಿ ದುಃಖ ಕಣ್ತುಂಬಿ ಬಂತು. ನಿಮ್ಮ ಮಗಳ ಜೀವಿತಾಳನ್ನು ಚಿನ್ನಮ್ಮ ಎಂದು ಮುದ್ದಿಸಿದ ಮಂಜ ಮಂಜಿನಂತೆ ಕರಗಿ ಹೋದದ್ದು ಮಾತ್ರ ದುರಂತ.
ಘಟನೆಗಳಿಗೆ ಜೀವ ತುಂಬಿದ ನಿಮ್ಮ ಬರವಣಿಗೆ ಇಷ್ಟವಾಯಿತು, ಧನ್ಯವಾದಗಳು ಮೇಡಮ್. ಎಲ್ಲವೂ ಓದಿ ಪ್ರತಿಕ್ರಿಯೆ ನೀಡುವೆ. ವೃತ್ತಿಯಲ್ಲಿ ಇಪ್ಪತ್ತೈದು ವರ್ಷ ಕಳೆದ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು.
ನಿಮ್ಮ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಎಂದು ಆಶಿಸುವೆ.
- ಶಂಕರೇಗೌಡ – ಲೇಖಕರು, ಉಪನ್ಯಾಸಕರು, ಕೋಲಾರ
