‘ಹೆಣ್ಣಿನ ಜೀವನ’ ಕವನ – ರವಿನಾಗ್ ತಾಳ್ಯ

ಸಂಸಾರ ರಾಜಕೀಯ ಚದುರಂಗವರಿಯಬೇಕು…ಎದೆಯೊಳಗೆ ನೋವ ಬಚ್ಚಿಟ್ಟು ನಗುತಿರಬೇಕು…ಕವಿ ರವಿನಾಗ್ ತಾಳ್ಯ ಅವರ ಈ ಕವನ ಹೆಣ್ಣಿನ ಅಂತರಾಳ ಕುರಿತು ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ… 

ಹೆಣ್ಣಾಗಿ ಬದುಕುವುದೆಂದರೆ ಸಣ್ಣ ವಿಷಯವಲ್ಲ
ಹೊರಬೇಕು ಹೆಜ್ಜೆ ಹೆಜ್ಜೆಗೂ ಸವಾಲಿನ ಸರಮಾಲೆಗಳನೆಲ್ಲ

ಮಗುವಾಗಿ ಜನಿಸಿ ಅದೃಷ್ಟ ತರಬೇಕು
ಬಾಲ್ಯದಲೇ ಹೆಣ್ತನದ ಸೂಕ್ಷ್ಮವರಿಯಬೇಕು

ಅರಿವಿರದ ವಯಸಲ್ಲಿ ಋತುಚಕ್ರ ರಕ್ತಸ್ರಾವ ನೋವ ಸಹಿಸಬೇಕು
ಕಟ್ಟು ಪಾಡುಗಳ ಕುಣಿಕೆಯೊಳಗೆ ಬಂಧಿಯಾಗಬೇಕು

ದೇಹ ಬೆಳೆದಂತೆ ಸಿರಿ ಸೂರೆಯಾಗದಂತೆ ಎಚ್ಚರವಿರಬೇಕು
ಮಾಂಸದಾಸೆಯ ರಣ ಹದ್ದುಗಳ ನಡುವೆ ಸದ್ದಡಗಿದಂತಿರಬೇಕು

ಜ್ಞಾನದ ಜೊತೆ ಜೊತೆಗೆ ಸಂಸ್ಕೃತಿ ಸಂಸ್ಕಾರವರಿಯಬೇಕು
ಸಕಾಲದಿ ಮದುವೆಯ ಬಂಧಕ್ಕೆ ಬೀಳಬೇಕು

ಹೆತ್ತವರ ಒಡ ಹುಟ್ಟಿದವರ ತೊರೆಯಬೇಕು
ತವರಿಂದ ದೂರಾದ ಕಣ್ಣೀರ ಹಿಂಗಿಸಬೇಕು

ಹೊಸ ಸ್ಥಳಕೆ ಹೊಸ ಜನಕೆ ಹೊಂದಿಕೊಳಬೇಕು
ಮನೆ ಮಂದಿಯ ಮನವ ಗೆಲಬೇಕು

ಸಂಸಾರ ರಾಜಕೀಯ ಚದುರಂಗವರಿಯಬೇಕು
ಎದೆಯೊಳಗೆ ನೋವ ಬಚ್ಚಿಟ್ಟು ನಗುತಿರಬೇಕು

ಅತ್ತೆ ಮಾವಗೆ ಮಗಳಾಗಬೇಕು
ನಾದಿನಿ ಓರಗಿತ್ತಿಗೆ ಒಳ್ಳೆಯ ಸಖಿಯಾಗಬೇಕು

ನವಮಾಸ ಗರ್ಭದ ಭಾರ ಹೊರಬೇಕು
ಪ್ರಸವ ವೇದನೆಯ ಸೈರಿಸಬೇಕು

ವರುಷದೊಳಗೊಂದು ಮಗುವ ಹೆರಬೇಕು
ತಡವಾದರೆ ಬಂಜೆತನದ ಕೊಂಕು ಕೇಳಬೇಕು

ಪರಿಸ್ಥಿತಿಗೆ ಒಗ್ಗಿ ನಡೆವುದ ಕಲಿತಿರಬೇಕು
ಸಿರಿತನ ಬಡತನ ಕಷ್ಟ ನಿಷ್ಠುರ ಎದುರಿಸಬೇಕು

ಗಂಡನಿಗೆ ಹೆಗಲಾಗಿ ದುಡಿಯಬೇಕು
ದಾಸಿ ಧರಿತ್ರಿ ಮಂತ್ರಿ ಮಾತೆ ಲಕ್ಷ್ಮಿ ರಂಭೆ ಪಾತ್ರ ವಹಿಸಬೇಕು

ಮಕ್ಕಳಿಗೆ ಮೊದಲ ಗುರುವಾಗಿ ಪಾಲಿಸಬೇಕು
ಅತ್ತೆಯಾಗಿ ಸೊಸೆಗೆ ಸಂಸಾರ ಸೂತ್ರ ಅರುಹಬೇಕು

ಬದುಕಿನ ಎಲ್ಲ ಜಂಜಡಗಳ ನಡುವೆ ತನ್ನ ಗುರಿ ಸಾಧಿಸಬೇಕು
ಆಗಾಗ ತವರ ನೆನೆ ನೆನೆದು ಕೊರಗಬೇಕು

ಬಂದೆರಗುವ ವೈಧವ್ಯಕೆ ವಿರಾಗಿಯಾಗಬೇಕು
ಒಬ್ಬಂಟಿಯಾಗಿ ಸಂಸಾರ ನೊಗಭಾರ ಹೊರಬೇಕು

ಅಜ್ಜಿಯಾಗಿ ಮೊಮ್ಮಕ್ಕಳಿಗೆ ಅಕ್ಕರೆಯ ನೀಡಬೇಕು
ವೃದ್ಧಾಪ್ಯದಿ ಸೊಸೆ ಮಕ್ಕಳ ಕಿಡಿ ನುಡಿಗೆ ಕಿವುಡಳಾಗಬೇಕು

ಎಲ್ಲೋ ಹೆಣ್ಣಾಗಿ ಹುಟ್ಟಿದವಳು ಜಗದ ಕಣ್ಣಾಗಿ ಬದುಕಬೇಕು
ಇನ್ನೆಲ್ಲೋ ಮಣ್ಣಾಗಬೇಕು ಸೃಷ್ಟಿ ತಾ ಸೃಷ್ಟಿಯೊಳು ಲೀನವಾಗಬೇಕು

ಹೆಣ್ಣಾಗಿ ಬದುಕುವುದೆಂದರೆ ಸಣ್ಣ ವಿಷಯವಲ್ಲ


  • ರವಿನಾಗ್ ತಾಳ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW