ಗೆಡ್ಡೆ ಗೆಣಸನ್ನು ಸಂರಕ್ಷಿಸಿಕೊಂಡು ಬಂದ ಕುಣುಬಿ ಜನಾಂಗ

ಕುಣುಬಿ ಜನಾ೦ಗ ಸಂರಕ್ಷಿಸಿದ ಗೆಡ್ಡೆ ಗೆಣಸುಗಳಲ್ಲಿ 38 ಜಾತಿಯ ಗೆಡ್ಡೆ ಗೆಣಸು ಗುರುತಿಸುವ ಕುಣುಬಿ ಜನಾಂಗದ ಮಹಾದೇವ ಬುದೋ ವೇಳಿಪ್ ಅವರಿಗೆ 2021 ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ದೊರೆತಿದ್ದು, ರಾಜ್ಯ ಪ್ರಶಸ್ತಿ ಕುಣುಬಿ ಜನಾಂಗದಲ್ಲಿ ಪಡೆದ 92 ರ ವಯೋಮಾನದ ಇವರು ಮೊದಲ ಮತ್ತು ಏಕೈಕ ವ್ಯಕ್ತಿ ಆಗಿದ್ದಾರೆ. ಕುಣುಬಿ ಜನಾ೦ಗದ ಕುರಿತು ಅರುಣ ಪ್ರಸಾದ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…

ಪತ್ರಕರ್ತ ಗೆಳೆಯರಾದ ಶೃಂಗೇಶ್ ರವಿ ಬೆಳೆಗೆರೆ ಅವರ ಹಾಯ್ ಬೆಂಗಳೂರಿನ ರೋವಿಂಗ್ ರಿಪೋರ್ಟರ್ ಅಂತ ಬೆಳಗೆರೆಯಿಂದಲೇ ಕರೆಸಿಕೊಂಡವರು, ಈಗ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ಸಂಪಾದಕರು. ಶೃಂಗೇರಿಯ ಪಿತ್ರಾರ್ಜಿತ ಅಡಿಕೆ ತೋಟದ ಕೃಷಿ ಮಾಡಿ ಅನುಭವದೊಂದಿಗೆ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದಲ್ಲಿ ಒಣ ಭೂಮಿ ಖರೀದಿಸಿ ಅನೇಕ ಕೃಷಿ ಪ್ರಯೋಗ ಮಾಡುತ್ತಿದ್ದಾರೆ.

ಮೊನ್ನೆ ದೂರದ ಜೋಯಿಡಾದಿಂದ ಕುಣುಬಿ ಜನರು ಸಂರಕ್ಷಿಸಿಕೊಂಡು ಬಂದಿರುವ ಕೆಸುವಿನ ಬೀಜ ತರಿಸಿ ನಾಟಿ ಮಾಡಿಸುತ್ತಿದ್ದಾರೆ. ನನಗಾಗಿ ಈ ಬೀಜದ ಕೆಸುವಿನ ಬೀಜ ನೀಡಿದ್ದಾರೆ.
ನಾನು ಅವರಿಂದ ಮಾಹಿತಿ ಪಡೆದು ಬೀಜದ ಕೆಸುವಿನ ಮೊಳಕೆ ಪಾಟಿನಲ್ಲಿ ನಾಟಿ ಮಾಡಿದ್ದೇನೆ. ಅದು ಬೀಜ ಮೊಳೆತು ಎಲೆ ಆಗಿ ದೊಡ್ಡದಾಗಲು 20 ರಿಂದ 25 ದಿನ ಬೇಕು. ಮೊದಲ ಮುಂಗಾರು ಮಳೆಗೆ ಒಂದು ಅಡಿ ಆಳದ ಟ್ರೆಂಚ್ ಮಾಡಿ, ಅದರ ಆಳದಲ್ಲಿ ಅದನ್ನು ನಾಟಿ ಮಾಡಿ ಒಣ ಎಲೆಗಳನ್ನು ಮುಚ್ಚಬೇಕು. ಕೆಸವಿನ ಗಿಡ ಮೇಲೆ ಬಂದಾಗಲೆಲ್ಲ ಮಣ್ಣು ಮುಚ್ಚುತ್ತಾ ಬರಬೇಕು.

ಒಂದು ಅಡಿಗಿಂತ ಜಾಸ್ತಿ ಆದ ಮೇಲೆ ತೆಗೆದರೆ ಈ ಕೆಸುವಿನ ಗಡ್ಡೆ ಬಳಸಲು ಯೋಗ್ಯವಾಗುತ್ತದೆ.

ಕೆಸುವಿನ ಗೆಡ್ಡೆಯಲ್ಲಿ ಪಿಷ್ಟದ ಅಂಶವಿರುವುದು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಕೆಸುವಿನ ನಾರಿನಂಶ ಜೀರ್ಣಿಸುವುದಿಲ್ಲ, ಅದು ಜಠರದಲ್ಲಿ ಉಳಿದು ನಂತರ ಕರಳನ್ನು ತಲುಪಿ ಆರೋಗ್ಯಕರ ಬ್ಯಾಕ್ಟೀರಿಯ ಉತ್ಪತ್ತಿಗೆ ಸಹಾಯ ಮಾಡುತ್ತದೆ, ಇದು ಕರಳಿನ ಉರಿಯೂತ ಮತ್ತು ಕರಳು ಕ್ಯಾನ್ಸರ್ ತಡೆಯುವ ದಿವ್ಯ ಔಷಧವಾಗಿದೆ. ಜೋಯಿಡಾ ತಾಲ್ಲೂಕಿನ ಜೋಯಿಡಾ ಮತ್ತು ರಾಮನಗರ ಈ ಗಡ್ಡೆ ಗೆಣಸುಗಳ ಪ್ರಮುಖ ಮಾರುಕಟ್ಟೆ.

ಹೊರ ಪ್ರಪ೦ಚಕ್ಕೆ ಗೊತ್ತೇ ಇರದ ಗೆಡ್ಡೆ ಗೆಣಸು ಸಂರಕ್ಷಿಸಿಕೊಂಡು ಬಂದಿರುವ ಜೋಯಿಡಾ ತಾಲ್ಲೂಕಿನ ಡೇರಿಯಾ, ಡಿಗ್ಲಿ, ಬಜಾರ ಕುಣ೦ಗ, ನಿಗಂಡಿ, ತೇರಾಳಿ, ನುಜ್ಜಿ, ಕುಂಡಲ, ಬಾಡ ಪೋಲಿ, ದುಮಾಳ, ಕರ೦ಜೋಯಿಡಾ, ಅಣಶಿ, ಕುಂಬಾರವಾಡ, ಕುವೇಶಿ ಮುಂತಾದ ಹಳ್ಳಿಗಳ ಕುಣುಬಿ ಜನರ ಹಿತ್ತಲಲ್ಲಿ ಗೆಡ್ಡೆ ಗೆಣಸು ಬೆಳೆಯುತ್ತಾರೆ.

ಕುಣುಬಿ ಜನರು ಗೆಣಸಿಗೆ ಕೋನ್ ಅನ್ನುತ್ತಾರೆ. ಅವರಲ್ಲಿ ಲಭ್ಯವಿರುವ ತಳಿಗಳು ಆಳೆಕೋನ್, ದಯೇ ಕೊನ್, ತಾಂಬ್ಡೆ ಕೊನ್, ದುಕರ್ ಕೋನ್, ನಾಗರ್ ಕೋನ್, ಮಾ೦ಡೆಕೋನ್, ಆಳೆಕೋನ್,ಜೇನಿಕೊನ್, ಹುಂಡು, ಕಾಳ್ಳೆಪೆರೊ, ದುರತಾಳಿ, ಕಾಟೆ ಕಣಗಾ, ಝಾಡಾಕಣಗಾ, ತಾರೇಟಿ ಕಣಗಾ ತಳಿಗಳು ಇದೆ. ಕುಣುಬಿ ಜನ ಸಂರಕ್ಷಿಸಿಕೊಂಡು ಬಂದಿರುವ ಕೆಸುವಿನ ಗೆಡ್ಡೆಗೆ ಮುಡ್ಲಿ ಅನ್ನುತ್ತಾರೆ ಇವರಲ್ಲಿ ಲಭ್ಯವಿರುವ ದಾವಾ ಮುಡ್ಲಿ, ಚೆಡ್ವಾಲಿ ಮುಡ್ಲಿ, ರಕ್ಯಾಮುಡ್ಲಿ, ಕುಣುಬಿ ಮುಡ್ಲಿ ಪ್ರಸಿದ್ಧಿ ಆಗಿದೆ.

ಇಂತಹ ಕುಣುಬಿ ಜನಾ೦ಗ ಸಂರಕ್ಷಿಸಿದ ಗೆಡ್ಡೆ ಗೆಣಸುಗಳಲ್ಲಿ 38 ಜಾತಿಯ ಗೆಡ್ಡೆ ಗೆಣಸು ಗುರುತಿಸುವ ಕುಣುಬಿ ಜನಾಂಗದ ಮಹಾದೇವ ಬುದೋ ವೇಳಿಪ್ ಗೆ 2021 ರ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯ ಪ್ರಶಸ್ತಿ ಕುಣುಬಿ ಜನಾಂಗದಲ್ಲಿ ಪಡೆದ 92 ರ ವಯೋಮಾನದ ಇವರು ಮೊದಲ ಮತ್ತು ಏಕೈಕ ವ್ಯಕ್ತಿ ಆಗಿದ್ದಾರೆ. ಪಕ್ಕದ ಗೋವಾದಲ್ಲಿ ಪರಿಶಿಷ್ಟ ಪಂಗಡ ಸವಲತ್ತು ಪಡೆದ ಈ ಗುಡ್ಡಗಾಡು ಕುಣುಬಿ ಜನಾಂಗದವರಿಗೆ ಕನಾ೯ಟಕ ರಾಜ್ಯದಲ್ಲಿ ಈ ಸವಲತ್ತು ಇಲ್ಲ ಇದಕ್ಕಾಗಿ ಮೊದಲ ಬಾರಿಗೆ 1995ರಲ್ಲಿ ಸಾಗರ ತಾಲ್ಲೂಕ್ ಕುಣುಬಿ ಜನಾಂಗದ ಸಮಾವೇಶ ಆನಂದಪುರಂನ ಶ್ರೀರಂಗನಾಥ ಸ್ವಾಮಿ ಕಲ್ಯಾಣ ಮಂದಿರದಲ್ಲಿ ಆಗಿನ ಜಿಲ್ಲಾ ಸಹಕಾರಿ ಸಂಘಗಳ ರಿಜಿಸ್ಟಾರ್ ಆಗಿದ್ದ ನನ್ನ ಗುರುಗಳಾದ ಕಾಳೇಶ್ವರ ಧಮ೯ಪ್ಪರಿಂದ ಉದ್ಘಾಟಿಸಿದ್ದೆವು. ಆಗ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯ ಈ ಸಮಾವೇಷದ ರೂವಾರಿ ಕಿರಿಯ ಗೆಳೆಯ ಬಳ್ಳಿಬೈಲು ಮಂಜಪ್ಪ . ಈಗ ಸಾಗರದಲ್ಲಿ ವಕೀಲರಾಗಿ ರಾಷ್ಟ್ರ ಮಟ್ಟದಲ್ಲಿ ಕುಣುಬಿ ಜನರ ಸಂಘಟನೆ ಮಾಡಿ ರಾಜ್ಯದಲ್ಲಿ ಕುಣುಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.

ಜೋಯಿಡಾ ತಾಲ್ಲೂಕಿನ ಬಹುಸಂಖ್ಯಾತ ಕುಣುಬಿ ಜನರ ಜನಜಾಗೃತಿಯ ಕಾಯ೯ಕ್ರಮಗಳಲ್ಲಿ ಭಾಗಿಯಾಗಿದ್ದಾರೆ, ನಾವೆಲ್ಲ ಸೇರಿ 1997 ರಲ್ಲಿ ಶಿವಮೊಗ್ಗ ಜಿಲ್ಲಾ ಕುಣುಬಿ ಜನಾ೦ಗದ ಜಿಲ್ಲಾ ಸಮಾವೇಷ ಸಾಗರ ತಾಲೂಕು ಮತ್ತು ಭಟ್ಕಳದ ಅಂಚಿನ ಕೋಗಾರು ಸಮೀಪದ ದೇವಗಾರು ಎಂಬ ಕುಗ್ರಾಮದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆಸಿದ್ದು ಒಂದು ದಾಖಲೆ.

ಸಾಗರ ತಾಲೂಕಿನ ಶರಾವತಿ ನದಿಯಾಚೆಯ ಕುಣುಬಿ ಜನವಸತಿ ಕೇಂದ್ರಗಳು ಮತ್ತು ಅವರ ಜಮೀನುಗಳು ಜೀವ ವೈವಿಧ್ಯ ತಾಣ ಮತ್ತು ಸಿ೦ಗಳೀಕ ಅಭಯಾರಣ್ಯಕ್ಕಾಗಿ ರಾಜ್ಯ ಸಕಾ೯ರ ಮರಾಠಿ, ಆವಿಗೆ ಇತ್ಯಾದಿ ಗ್ರಾಮಗಳ ಸುಮಾರು 3,800 ಎಕರೆ ಪ್ರದೇಶ ಅರಣ್ಯ ಎಂದು ಘೋಷಿಸಿ ಕುಣುಬಿ ಜನರ ಕೃಷಿ ಜಮೀನಿನ ಪಹಣಿಯಲ್ಲಿ ಅರಣ್ಯ ಎಂದು ಬದಲಿಸಿದೆ.
2012ರಲ್ಲಿ ಈ ಬಗ್ಗೆ ಜನ ಜಾಗೃತಿ ಮಾಡಿ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಗಳಿಗೆ ಆಗಿನ ಸಾಗರ ತಾಲ್ಲೂಕಿನ ಜಾತ್ಯಾತೀತ ಜನತಾದಳದ ಅಧ್ಯಕ್ಷನಾದ ನಾನು ಮತ್ತು ಸಾಗರ ಪಟ್ಟಿಣ ಜಾತ್ಯಾತೀತ ಜನತಾದಳದ ಅಧ್ಯಕ್ಷ ಮ೦ಜುನಾಥ್ ಸೇರಿಕೊಂಡು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿದ್ದ ಶ್ರೀಕಾಂತ್ ಮೂಲಕ ಮನವಿ ಮಾಡಿದಾಗ ಸ್ಥಳಿಯ ರಾಜಕೀಯ ಪಕ್ಷಗಳು ನಮ್ಮನ್ನು ಗೇಲಿ ಮಾಡಿದ್ದವು ಮತ್ತು ಮುಗ್ದ ಕುಣುಬಿ ಜನ ಅವರನ್ನು ನಂಬಿದರು.

ಆವಿಗೆ ಗ್ರಾಮದ ಜನಪರ ಹೋರಾಟಗಾರ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹಾಳಸಸಿ ಚಂದ್ರಕುಮಾರ್ ಜೈನ್ ಕುಣುಬಿ ಜನರ ಪಹಣಿ ಅರಣ್ಯ ಎಂದು ಬದಲಾದ ಸುದ್ದಿ ತಿಳಿಸಿದಾಗ ಬೇಸರ ಅನ್ನಿಸಿತು. ಸಿಂಗಳೀಕ ಸಂರಕ್ಷಣೆಯಷ್ಟೇ ವಿಶೇಷ ಕಾಳಜಿ ಈ ಗುಡ್ಡಗಾಡು ಜನಾಂಗವಾದ ಕುಣುಬಿ ಜನಾಂಗದ ಬಗ್ಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಅದನ್ನು ಸರ್ಕಾರದ ಗಮನ ಸೆಳೆಯಲಿಕ್ಕಾಗಿ ಈ ಭಾರಿಯ ಸಾಗರ ವಿಧಾನಸಭಾ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ.

ಅರಣ್ಯ ನಾಶ ಮಾಡದ ಈ ಜನಾಂಗ ಎನ್ನುವುದಕ್ಕೆ ಇವರು ಸಂರಕ್ಷಿಸಿಕೊಂಡು ಬಂದಿರುವ ಗೆಡ್ಡೆ ಗೆಣಸುಗಳ ಅಮೂಲ್ಯ ಭಂಡಾರವೇ ಸಾಕ್ಷಿ ಆಗಿದೆ. ಈ ಬಗ್ಗೆ ಜನಪರ ಸಂಘಟನೆಗಳು ಇವರಿಗೆ ದ್ವನಿಯಾಗಬೇಕಾಗಿದೆ.


  • ಅರುಣ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW