ಮೋಹನ ರಾಗವೊಂದು ಹೊಮ್ಮಿ… ಕಣ್ಮುಚ್ಚಿ ಧ್ಯಾನಕ್ಕೆ ಕೂತ ಬುದ್ಧನಾಗಿ… ಮುಗುಳ್ನಗುತ್ತ ತಲೆದೂಗುತ್ತೇನೆ…ತಪ್ಪದೆ ಮುಂದೆ ಓದಿ…
ಬೆಟ್ಟದ ಇಳಿಜಾರಿನ ದೇವದಾರು ವೃಕ್ಷದ
ಹಣ್ಣೇಲೆ ನಾನಾಗಿ
ಹರಿವ ತೊರೆಯ ಮೇಲಣ ನಾವೆಯಾಗುತ್ತೇನೆ
ಸಾರ್ಥಕ ಬದುಕಿನ ಕಿರು ನಗುವಾಗಿ
ಬಯಲಿಗೆ ಜಿಗಿದು ಕರಗಳ ಮೇಲೆತ್ತಿ
ತಕ ತಕ ಥೈ ತಕ ಕುಣಿಯುತ್ತೇನೆ
ಹಾರುವ ಪಟವಾಗಿ
ಮುಗಿಲ ಮೇಘದ ಗುಳಿಗೆನ್ನೆಗೆ
ಮುತ್ತು ನೀಡಿ
ರೆಕ್ಕೆ ಮುರಿದ ಹಕ್ಕಿಯಾಗಿ
ಆನಂದದಿಂ ಧರೆಗೆ ಮರಳುತ್ತೇನೆ
ಬಿದಿರ ಕಾಡಿನ ನಡುವೆ
ಸುಳಿದ ಗಾಳಿ ಉಸಿರ ತುಂಬಿ
ಮುರಿದ ಕೊಳವೆಗಳಲ್ಲಿ
ಮೋಹನ ರಾಗವೊಂದು ಹೊಮ್ಮಿ
ಕಣ್ಮುಚ್ಚಿ ಧ್ಯಾನಕ್ಕೆ ಕೂತ ಬುದ್ಧನಾಗಿ
ಮುಗುಳ್ನಗುತ್ತ ತಲೆದೂಗುತ್ತೇನೆ
ಕಾಲ ಉರುಳುತ್ತೆ ಹೀಗೆ
ಹಗಲಿರುಳುಗಳಾಗಿ
ಮಗುವಿನ ಕೈಯಿಂದ ಜಾರಿದ ಕಪ್ಪು ಬಿಳುಪು
ಚಂಡಿನ ಹಾಗೆ
ನಿಶ್ಯಬ್ಧವಾಗಿ ನೋಡುತ್ತ ಖುದ್ದು ಕರಗುತ್ತೇನೆ
ಕವಿತೆಯ ಸಾಲೊಂದು ಹುಟ್ಟಿ
ಭಾವಗಳ ಬುತ್ತಿ ಕಟ್ಟುವ ಕವಿಯಾಗುತ್ತೇನೆ
- ಜಬೀವುಲ್ಲಾ ಎಂ ಅಸದ್