ಕೂದಲು ಉದುರುವಿಕೆ ಎಂದಾಗ ಮೊದಲೆಲ್ಲ ಹೆಣ್ಣು ಮಕ್ಕಳು ಚಿಂತಿತರಾಗುತ್ತಿದ್ದರು. ಈಗ ಹಾಗಲ್ಲ. ಜೀವನಶೈಲಿ, ಆಹಾರ ಕ್ರಮ ಬದಲಾಗಿರುವ ಕಾರಣ ಗಂಡು ಮಕ್ಕಳು ಕೂಡ ಈ ಸಮಸ್ಯೆ ಎದುರಿಸಿದ್ದಾರೆ. ಪರಿಹಾರವೇನು? ಮುಂದೆ ಓದಿ…
ಕಲುಷಿತ ವಾತಾವರಣ, ಅಸಮರ್ಪಕ ಆಹಾರ ಕ್ರಮ, ದೈಹಿಕ ಚಟುವಟಿಕೆಯ ಕೊರತೆ ಸೇರಿ ಹಲವು ಅಂಶಗಳು ಕೂದಲು ಉದುರುವಿಕೆಗೆ ಕಾರಣವಿರಬಹುದು. ಕೂದಲಿಗೆ ಅವಶ್ಯ ಎನ್ನಿಸುವ ಪೋಷಕಾಂಶ ಇರುವಂಥ ಆಹಾರ ಸೇವನೆಯಿಂದ ಕೂದಲು ಉದುರುವುದನ್ನು ತಡೆಯಬಹುದು. ಅಷ್ಟೇ ಅಲ್ಲ, ಸೊಂಪಾದ, ಆರೋಗ್ಯಕರ ಹಾಗೂ ಹೊಳಪಿನ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಅಂತಹ ಕೆಲವು ಆಹಾರಗಳಿವು-
ಡ್ರೈ ಫ್ರುಟ್ಸ್ :
ಸಸ್ಯಾಹಾರಿಗಳು ಒಮೆಗಾ- 3 ಕೊಬ್ಬನಾಮ್ಲ ಪಡೆಯಲು ಬಾದಾಮಿ, ವಾಲ್‌ನಟ್, ಗೋಡಂಬಿ, ಕುಂಬಳಬೀಜ, ಸೂರ್ಯಕಾಂತಿ ಬೀಜ, ಜತೆಗೆ ಫ್ಲ್ಯಾಕ್ಸ್ ಸೀಡ್ ಸೇವನೆಯನ್ನು ರೂಢಿಸಿಕೊಳ್ಳಬೇಕು. ವಾಲ್‌ನಟ್‌ನಲ್ಲಿ ವಿಟಮಿನ್ ಇ ಅಂಶ ಸಮೃದ್ಧವಾಗಿದೆ. ಇದರಲ್ಲಿರುವ ಬಯೋಟಿನ್ ಅಂಶ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ವಾಲ್‌ನಟ್‌ನ ತಾಮ್ರದ ಅಂಶ ಕೂದಲಿನ ನೈಸರ್ಗಿಕ ಬಣ್ಣ ಉಳಿಯುವಂತೆ ಮಾಡಿ, ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
ಸೊಪ್ಪು ತರಕಾರಿ :
ಹಸಿರು ಸೊಪ್ಪುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಕೂದಲ ಅಂದ ಹೆಚ್ಚುತ್ತದೆ. ಹಸಿರು ಸೊಪ್ಪುಗಳು ಕೂದಲು ಆರೋಗ್ಯಕ್ಕೆ ಉತ್ತಮ. ಪಾಲಾಕ್, ಪಾರ್ಸ್ಲಿಯಂತಹ ಹಸಿರು ಸೊಪ್ಪಿನಲ್ಲಿ ಕಬ್ಬಿಣಾಂಶ ಅಧಿಕ. ಇದು ಕೂದಲು ಉದುರುವಿಕೆ, ತುಂಡಾಗುವಿಕೆಯನ್ನು ತಡೆಯುತ್ತದೆ.
ಕ್ಯಾರೆಟ್ :
ಕಣ್ಣಿಗಷ್ಟೇ ಅಲ್ಲ ಕೂದಲಿನ ಆರೋಗ್ಯಕ್ಕೂ ಕ್ಯಾರೆಟ್ ಬೆಸ್ಟ್. ಇದರಲ್ಲಿ ಬೀಟಾ ಕ್ಯಾರೊಟಿನ್ ಅಂಶ ಸಮೃದ್ಧ. ಇದು ವಿಟಮಿನ್ ಎಯನ್ನು ಒದಗಿಸುತ್ತದೆ. ವಿಟಮಿನ್ ಎ ಇಲ್ಲದೆ ನಿಮ್ಮ ದೇಹದಲ್ಲಿನ ಯಾವುದೇ ಜೀವಕೋಶಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ, ಆಹಾರದಲ್ಲಿ ವಿಟಮಿನ್ ಎ ಕೊರತೆಯು ಕೂದಲು ಉದುರುವಿಕೆ, ತೆಳುವಾಗುವುದು ಮತ್ತು ಬೋಳಾಗಲು ಕಾರಣವಾಗಬಹುದು. ಸಿಹಿಗೆಣಸು, ಕುಂಬಳಕಾಯಿ, ಮಾವಿನಹಣ್ಣು ಹಾಗೂ ಏಪ್ರಿಕಾಟ್‌ಗಳಲ್ಲಿ ವಿಟಮಿನ್ ಎ ಸಮೃದ್ಧ.
ಮೊಟ್ಟೆ :
ಮೊಟ್ಟೆಯಲ್ಲಿ ವಿಟಮಿನ್ ಬೇಕಾದಷ್ಟಿದೆ. ಬಯೊಟಿನ್ ಅಥವಾ ವಿಟಮಿನ್ ಬಿ7 ಅಂಶ ಅಧಿಕವಾಗಿದ್ದು, ಇದು ಕೂದಲ ಬೆಳವಣಿಗೆ ಹೆಚ್ಚಲು ಇದು ಪೂರಕ. ಸತು, ಸಲ್ಫರ್, ಕಬ್ಬಿಣಾಂಶ ಹಾಗೂ ಸೆಲೇನಿಯಂ ಅಂಶಗಳು ಸಮೃದ್ಧ. ಈ ಎಲ್ಲ ಅಂಶ ಕೂದಲ ಬೆಳವಣಿಗೆಗೆ ಸಹಕಾರಿ.
ಮೀನು :
ಮೀನಿನಲ್ಲಿ ಪ್ರೊಟೀನ್ ಅಂಶ ಸಮೃದ್ಧ. ಸಾಲ್ಮಾನ್, ಬೂತಾಯಿ, ಸಾರ್ಡಿನ್ ಮುಂತಾದ ಮೀನುಗಳಲ್ಲಿ ಒಮೆಗಾ- 3 ಕೊಬ್ಬಿನಾಮ್ಲ ಪ್ರಮಾಣ ಹೆಚ್ಚಿದೆ. ಇವು ಶರೀರಕ್ಕೆ ಹಾಗೂ ಕೂದಲಿನ ಬುಡಕ್ಕೆ ನೈಸರ್ಗಿಕ ಎಣ್ಣೆಯಂಶ ದೊರಕುವಂತೆ ಮಾಡುತ್ತದೆ. ಇದರಿಂದ ಬುಡದಿಂದಲೇ ಕೂದಲು ಸದೃಢವಾಗುತ್ತದೆ.
ನೀರು :
ಸಾಕಷ್ಟು ನೀರು ಕುಡಿಯುವುದರಿಂದ ಕೂಡ ಕೂದಲು ಉದುರುವುದನ್ನು ತಪ್ಪಿಸಬಹುದು.
ಇವಿಷ್ಟನ್ನೂ ಪ್ರಾಥಮಿಕ ಮಾಹಿತಿಗೋಸ್ಕರ ಹೇಳಬಹುದು. ಕೆಲವೊಮ್ಮೆ ನೀವು ಕೂದಲಿಗೆ ಏನು ಹಚ್ಚುತ್ತಿದ್ದೀರಿ ಎಂಬುದಕ್ಕಿಂತ, ಏನು ತಿನ್ನುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಯಾವುದಕ್ಕೂ ಆರೋಗ್ಯ ಸಮಸ್ಯೆ ಎದುರಾದಾಗ ತಜ್ಞರ ಸಲಹೆ ಪಡೆದು ನಡೆದುಕೊಳ್ಳುವುದು ಉತ್ತಮ.
- ಆಕೃತಿ ನ್ಯೂಸ್