ಗಂಡ ಮಾಡಿಕೊಂಡಿದ್ದ ಸಾಲವನ್ನು ಗೌರಿ ತೀರಿಸಲು ಸೆಣೆಸಾಡುತ್ತಿದ್ದಳು, ಆದರೆ ಗಂಡ ಅವಳಿಗೆ ನೆಮ್ಮದಿ ಕೊಡಲೇ ಇಲ್ಲಾ, ಕೊನೆಗೆ ಗೌರಿ ತಗೆದುಕೊಂಡ ನಿರ್ಧಾರ ಮಗ ರಾಮುವಿಗೆ ಜೀವನ ಪರ್ಯಂತ ಕಾಡಿತು. ತನ್ನವ್ವ ಪಡುತ್ತಿದ್ದ ಕಷ್ಟಗಳ ನೆನಪಾಗಿ ಕಣ್ಣು ತುಂಬಿಕೊಂಡ, ಮುಂದೇನಾಯಿತು ಸ್ವರ್ಣಲತಾ ಎ ಎಲ್ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ರಾಮನಿಗೆ ಈಚೆಗೆ ಸರಿಯಾಗಿ ನಿದ್ದೆ ಹತ್ತುತ್ತಿರಲಿಲ್ಲ. ಚೆನ್ನಾಗಿ ತಿಂದುಂಡು , ಓಡಾಡಿಕೊಂಡಿರಬೇಕಾದ ವಯಸ್ಸಿನಲ್ಲಿ ನೂರಾರು ಯೋಚನೆಗಳು ಅವನನ್ನು ಎಡೆಬಿಡದೇ ಕಾಡುತ್ತಿದ್ದವು. ಅವ್ವನ ಸಾವು ಇನ್ನಿಲ್ಲದಂತೆ ಅವನ ಮನಸ್ಸನ್ನು ಆವರಿಸಿಕೊಂಡಿತ್ತು. ಅಪ್ಪ ಮಗನ ಮೇಲೆ ಮಮತೆ ಇಲ್ಲದೇ, ಮಲಗಿದ್ದ ಮನೆಯನ್ನೇ ರಾತ್ರೋರಾತ್ರಿ ಹರಾಜು ಹಾಕಿ, ಬಂಧನವನ್ನು ಕಡಿದುಕೊಂಡು ಓಡಿಹೋಗಿದ್ದು, ಇದರ ಜೊತೆಗೆ ಇಲ್ಲದ ಅಪ್ಪ ಅವ್ವನ ಬಗ್ಗೆ ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದುದು, ಇವೆಲ್ಲವೂ ಅವನ ಚಿಂತೆಗೆ ಕಾರಣವಾಗಿದ್ದವು.
ವತ್ತಾರೆ ಏಳದಿದ್ದರೆ ಇನ್ನು ಗೌಡನ ಕೈಯಲ್ಲಿ ಬೈಗುಳ ತಿನ್ನಬೇಕಾಗುತ್ತದೆ ಎಂದುಕೊಂಡು ಮೈಮೇಲಿಂದ ಸರಿದು ಹೋಗಿದ್ದ ದುಪ್ಪಟಿಯನ್ನು ಎಳೆದುಕೊಂಡು ಮಲಗಲು ಯತ್ನಿಸಿದ. ಆದರೆ ನಿದ್ದೆ ಹತ್ತಿರ ಸುಳಿಯಲು ಒಲ್ಲೆ ಎನ್ನುತ್ತಿತ್ತು. ತನ್ನ ಅವ್ವ ಗೌರಿ ಸಂಸಾರವನ್ನು ಒಂದು ಹದಕ್ಕೆ ತರಲು ಮಾಡುತ್ತಿದ್ದ ಪ್ರಯತ್ನ, ಅದನ್ನು ವಿಫಲಗೊಳಿಸಲೋ ಎಂಬಂತೆ ಅಪ್ಪ ಒಡ್ಡುತ್ತಿದ್ದ ತಡೆಗಳು. ಇದರ ಮಧ್ಯೆ ಸಂಸಾರ ಇನ್ನೇನು ಒಂದು ಹದಕ್ಕೆ ಬಂತು ಎನ್ನುವಷ್ಟರಲ್ಲಿ ಒಂದು ಸಣ್ಣ ಕಾರಣಕ್ಕೆ ಅಪ್ಪ ಅವ್ವನ ಬದುಕನ್ನೇ ಬಲಿ ತೆಗೆದುಕೊಂಡಿದ್ದು, ಎಲ್ಲ ಯೋಚನೆಗಳೂ ಅವನನ್ನು ಕಾಡತೊಡಗಿದವು.
ಶಾಲೆಯಲ್ಲಿ ಮಾಸ್ತರು ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕತೆಗಳ ಸೀತಾ, ದ್ರೌಪದಿಯರಿಗಿಂತ ತನ್ನವ್ವ ಗೌರಿ ಚೌತಿ ದೊಡ್ಡವಳೆಂದೇ ರಾಮನ ಭಾವನೆ. ತನ್ನವ್ವನಿಗೆ ಮದುವೆಯಾದಾಗಲೇ ವಯಸ್ಸಾಗಿತ್ತು. ಅವಳವ್ವ ಗಂಡು ಹುಡುಕಿ ಸಾಕಾಗಿ ಕೊನೆಗೆ ಗೂರಲು ರೋಗದಿಂದ ನರಳುತ್ತಿದ್ದ ಸಿದ್ದಯ್ಯನಿಗೆ ಕೊಟ್ಟು ಮದುವೆ ಮಾಡಿದ್ದಳು. ಗೌರಿಯನ್ನು ಮದುವೆಯಾಗುವ ವೇಳೆಗಾಗಲೇ ಅವನ ಇಬ್ಬರು ಹೆಂಡತಿಯರು ಶಿವನ ಪಾದ ಸೇರಿದ್ದರು. ತನ್ನವ್ವ ಅಪ್ಪನಿಂದ ಯಾವ ಸುಖವನ್ನೂ ಪಡೆಯಲಿಲ್ಲ , ಈಗಲಾದರೂ ಬದುಕಿದ್ದರೆ ನಾನೇ ದುಡಿದು ಸಾಕುತ್ತಿದ್ದೆ ಎಂದು ರಾಮ ಅಂದುಕೊಂಡ.
ಗಂಡ ಮಾಡಿಕೊಂಡಿದ್ದ ಸಾಲವನ್ನು ನೆನೆಸಿಕೊಂಡಾಗ ಗೌರಿ ಈ ಬದುಕನ್ನು ನನ್ನಿಂದ ಸರಿ ದಾರಿಗೆ ತರಲಾದೀತೆ ಎಂದು ಯೋಚಿಸುತ್ತಿದ್ದಳು. ಆದರೂ ಛಲಗಾತಿಯಾದ ಅವಳು ಒಂಟೆತ್ತಿನಂತೆ ದುಡಿಯುತ್ತಿದ್ದಳು. ಜಮೀನೆಲ್ಲವನ್ನೂ ಅವರಿವರಿಗೆ ಭೋಗ್ಯ ಮಾಡಿದ್ದ ಗಂಡ ಹದಿನೆಂಟು ಕುಂಟೆ ಮಾತ್ರ ಉಳಿಸಿಕೊಂಡಿದ್ದ ಅಥವ ಗೌರಿ ಕಷ್ಟಪಟ್ಟು ಉಳಿಸಿಕೊಂಡಿದ್ದಳು. ಅದರಲ್ಲೇ ವಸಿ ಅಳತೆಗೆ ರೇಷ್ಮೆ ಕಡ್ಡಿ ನೆಟ್ಟು, ಇನ್ನೊಸಿ ಅಳತೆಯಲ್ಲಿ ರಾಗಿ, ಭತ್ತ ಬೆಳೆಯುತ್ತಿದ್ದಳು. ಆಳು ಮಾಡಿಕೊಂಡರೆ ಕೂಲಿ ಕೊಡಬೇಕಾಗುತ್ತದೆ ಎಂದು ತಾನೆ ತೋಟವನ್ನು ಅಗೆಯುವುದು, ನಾಟಿ ಮಾಡುವುದು, ಕಳೆ ಕೀಳುವುದು ಹೀಗೆ ಎಲ್ಲವನ್ನೂ ಗಂಡಸರಿಗಿಂತ ಹೆಚ್ಚಾಗಿ ಮಾಡುತ್ತಿದ್ದಳು. ರಾಮನಿಗೆ ತನ್ನವ್ವ ಪಡುತ್ತಿದ್ದ ಕಷ್ಟಗಳ ನೆನಪಾಗಿ ಕಣ್ಣು ತುಂಬಿ ಬಂದು ಮಗ್ಗಲು ಬದಲಾಯಿಸಿದ.

ನಿದ್ದೆ ಹತ್ತಿರ ಸುಳಿಯದ ರಾಮನಿಗೆ ಮತ್ತೆ ಮತ್ತೆ ಅವ್ವನ ನೆನಪಾಗತೊಡಗಿತು. ಅವ್ವ ಹೀಗೆ ಸಂಸಾರದ ನೊಗವನ್ನು ಎಳೆದುಕೊಂಡು ಹೋಗುತ್ತಿದ್ದಾಗ ಒಂದು ಸಾರಿ ರೇಷ್ಮೆ ಬೆಳೆ ಕೈಹತ್ತಿ ಒಳ್ಳೆ ರೇಟು ಸಿಕ್ಕಿ, ಸಂತೆಗೆ ಸಾಮಾನು ತರಲು ಹೋಗಿದ್ದಳು. ಅಪ್ಪನಿಗೆ ಯಾವಾಗಲೂ ಗೂರಲು ಇರುತ್ತಿದ್ದುದರಿಂದ ಹೆಚ್ಚುಕಮ್ಮಿ ಮನೆ ವ್ಯವಹಾರವನ್ನು ಅವ್ವನೇ ಮಾಡುತ್ತಿದ್ದಳು. ನಿಡಘಟ್ಟದ ಸಂತೆಗೆ ಅಂದು ಅವ್ವನೊಂದಿಗೆ ರಾಮನೂ ಹೋಗಿದ್ದ. ಇದ್ದ ಮೂರು ಮಕ್ಕಳಲ್ಲಿ ಇವನೇ ದೊಡ್ಡವನಾದ್ದರಿಂದ, ಜೊತೆಯಲ್ಲಿ ಕರೆದು ಕೊಂಡಿದ್ದಳು.ಸಂತೆಯಲ್ಲಿ ಇವನು ಕೇಳಿದ ತಿಂಡಿಯನ್ನೆಲ್ಲಾ ಕೊಡಿಸಿದ್ದಳು. ಕೈಯಲ್ಲಿ ದುಡ್ಡಿದ್ದುದರಿಂದ ಕಷ್ಟ ಯಾವಾಗಲೂ ಇದ್ದುದ್ದೇ ಎಂದು ಕಡ್ಲೆ ಪುರಿ, ಮೈಸೂರು ಪಾಕು ಕಟ್ಟಿಸಿಕೊಂಡಳು.
ರಾಮನಿಗೆ ಆ ವೇಳೆಗಾಗಲೇ ಆರೇಳು ವರ್ಷಗಳಾಗಿದ್ದರೂ ‘ಬಾಲ ಮಗ ಕಾಲ್ನೋಯ್ತವೆ,ಅತ್ಲಿಂದ್ಲೂ ನಡ್ಕ ಬಂದಿದಿಯೇ’ ಎಂದು ಸ್ವಲ್ಪ ದೂರ ಎತ್ತಿಕೊಂಡಿದ್ದಳು. ತಾಯ ಪ್ರೀತಿ ನೆನಪಾದೊಡನೆ ರಾಮನಿಗೆ ದು:ಖ ಒತ್ತರಿಸಿ ಬಂತು. ಅಂಥ ಅವ್ವನೇ ಹೋದ ಮೇಲೆ ಈ ಬೀರಪ್ಪ ನನ್ನನ್ನು ಯಾಕೆ ಉಳಿಸಿದ ಎಂದು ಮನಸ್ಸಿನಲ್ಲೇ ದೇವರನ್ನು ಬೈಯ್ದುಕೊಂಡ.
ಮನೆಗೆ ಬಂದ ಗೌರಿ ಗಂಡನಿಗೆ ಚಿಕ್ಕಾಸೂ ಬಿಡದಂತೆ ಲೆಕ್ಕ ಕೊಟ್ಟಳು.ಸಿಂಬಿಯಿಂದ ಹಿಡಿದು ಮಕ್ಕಳಿಗೆ ತಂದ ಪುರಿಯವರೆಗೂ ಲೆಕ್ಕ ಕೊಟ್ಟಳು. ಆದರೆ ಕೊನೆಗೆ ಎಷ್ಟು ಲೆಕ್ಕ ಹಾಕಿದರೂ ಎರಡು ರೂಪಾಯಿ ಲೆಕ್ಕ ಸಿಗದೇ ಹೋಯಿತು. ಯಾರೂ ನಂಬಲಾಗದ ಎರಡು ರೂಪಾಯಿ, ಗೌರಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿತು.ಸಿದ್ದಯ್ಯ ಮಕ್ಕಳಿಗೆ ಪುರಿ,ಮೈಸೂರು ಪಾಕು ತಂದಿದ್ದಲ್ಲದೇ, ಎರಡು ರೂಪಾಯಿಗೆ ಲೆಕ್ಕ ಕೊಡುತ್ತಿಲ್ಲ ಎಂದು ಗೌರಿಗೆ ವರಾಕ್ಕೊಂದೊಂದು ಮಾತಾಡಿದ. ಗೌರಿಗೆ ರೋಸಿ ಹೋಯಿತು. ರಾತ್ರಿಯೆಲ್ಲಾ ಒಂದೇ ಸಮ ಯೋಚಿಸಿದಳು. ನಾನು ಈ ಮನೆಗಾಗಿ ಜೀವ ತೇಯ್ದೆ, ಎರಡು ರೂಪಾಯಿಗೆ ಲೆಕ್ಕ ಸಿಗ್ದೇ ಇರುದ್ಕೆ ಹಿಂಗಾಡ್ತನಲ್ಲ, ಇವ್ನ್ ಮಾತ್ರ ಐಕ್ಳು ಬಿಟ್ಬುಟ್ಟು ಓಗಿ ಮೇದ್ಬುಟ್ಟು ಬಂದ್ಬುಡ್ತನೆ,ಅದ್ ಮಾತ್ರ ಲೆಕ್ಕಕ್ಕಿಲ್ಲ. ಈಗ್ ಮಾತ್ರ ಹಿಂಗಾಡ್ತನಲ್ಲ ಎಂದು ಯೋಚಿಸಿದಳು. ಆಗಲೆ ಅವಳಿಗೆ ಸಾವಿನ ಯೋಚನೆ ಬಂತು.
ಅವತ್ತು ರಾತ್ರಿ ಗೌರಿಗೆ ಎಷ್ಟು ಹೊತ್ತಾದರೂ ನಿದ್ದೆ ಹತ್ತಲಿಲ್ಲ. ಯಾರೊಂದಿಗಾದರೂ ತನ್ನಮನಸ್ಸಿಗಾದ ನೋವನ್ನು ಹೇಳಿಕೊಂಡಿದ್ದರೆ ಮನಸ್ಸಿನ ತಹಮಳ ಕಡಿಮೆಯಾಗುತ್ತಿತ್ತೇನೋ, ಆದರೆ ಅವಳು ಹಾಗೆ ಮಾಡದೇ ಬೆಳಿಗಿನ ಜಾವ ನಾಕು ನಾಕುವರೆ ಘಂಟೆಯಲ್ಲಿ ರಾಮನೊಬ್ಬನನ್ನು ಬಿಟ್ಟು , ಉಳಿದ ಎರಡು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬೀರದೇವರ ಕೊಣದ (ಕೊಳ)ಕಡೆ ಹೊರಟುಬಿಟ್ಟಳು. ದಾರಿಯಲ್ಲಿ ಬರುವಾಗ ಮಗನ ನೆನಪಾದರೂ ಗಂಡೈದ ಎಲ್ಲಾರ ಬದಿಕತನೆ ಎಂದು ಸುಮ್ಮನಾದಳು.
ರಾಮ ದಢಾರನೆ ಎದ್ದು ಕುಳಿತ. ಅವ್ವನ ಸಾವಿನ ನೆನಪು ದಿನೇ ದಿನೇ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿತ್ತು. ಈ ಊರಿನಲ್ಲೇ ಇದ್ದರೆ ಹುಚ್ಚು ಹಿಡಿಯುತ್ತದೆ ಇಲ್ಲಾ ಅವ್ವನಂತೆ ಕೊಣಕ್ಕೆ ಮುಳುಗಿಕೊಳ್ಳುತ್ತೇನೆ ಎಂದುಕೊಂಡ.
ನಮ್ಮಪ್ಪ ರಾತ್ರಿಯೆಲ್ಲಾ ಜಗಳ ಕಾದಿದ್ನಲ್ಲ ಅವ್ನಾದ್ರುವೆ ಅವ್ವನ ಮೇಲೆ ಕಣ್ಣಿಡುಕ್ಕೆ ಆಯ್ತಿರಲಿಲ್ವೆ. ಅವನ್ಗೆ ಅವ್ಳು ಸಾಯುದೇ ಬೇಕಾಗಿತ್ತೇನೋ ಅಂದುಕೊಂಡ. ಬೆಳಿಗ್ಗೆಗೆ ಗೌರಿ ಮತ್ತು ಮಕ್ಕಳ ಶವಗಳನ್ನು ಸಾಲಾಗಿ ಇಟ್ಟಿದ್ದರು.ರಾಮನ ಅಪ್ಪ ಆರುಕ್ಕೋದವನಲ್ಲ,ಮೂರಕ್ಕೆ ಬಂದವನಲ್ಲ ಎನ್ನುವಂತೆ ಇದ್ದುದರಿಂದ ಯಾರೂ ಪೊಲೀಸರಿಗೆ ದೂರು ನೀಡಲಿಲ್ಲ.ಗೌರಿ ಕಷ್ಟಪಟ್ಟು ಉಳಿಸಿಕೊಂಡಿದ್ದ ಜಮೀನನ್ನು ಭೋಗ್ಯಕ್ಕಾಗಿ ತಿಥಿ ಮಾಡಿದ.ತಾಯಿ ಇಲ್ಲದ ತಬ್ಬಲಿ ಎಂದು ನಾಕು ದಿನ ಅವರಿವರು ಕರೆದು ರಾಮನಿಗೆ ಊಟ ಹಾಕಿದರು. ಅಪ್ಪ ಅವರಿವರ ಹತ್ತಿರ ಸಾಲ ಮಾಡಲು ಆರಂಭಿಸಿದ.ಕೊನೆಗೆ ಮಗ ಮಲಗಿದ್ದ ಮನೆಯನ್ನೇ ರಾತ್ರೋರಾತ್ರಿ ಹರಾಜಾಕಿ, ಮಗನಿಗೆ ಹೊದೆಸಿದ್ದ ದುಪ್ಪಟಿಯನ್ನು ಎಳೆದುಕೊಂಡು ಊರು ಖಾಲಿ ಮಾಡಿದ್ದ. ಕೊನೆಗೆ ರಾಮ, ತನ್ನ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಂಡಿದ್ದ ಪಟೇಲನ ಮನೆಯಲ್ಲೇ ಜೀತಕ್ಕೆ ಸೇರಿದ್ದ.
ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ರಾಮನ ಕಣ್ಣು ಉರಿಯುತ್ತಿದ್ದೋ. ಎದ್ದು ಕುಳಿತವನು ಏನೋ ತೀರ್ಮಾನಕ್ಕೆ ಬಂದವನಂತೆ ಹೊದ್ದಿದ್ದ ದುಪ್ಪಟಿಯನ್ನು ಅಲ್ಲೇ ಬಿಟ್ಟು ಊರಾಚೆ ಬಂದ.ಕೊನೆಗೆ ಅವ್ವನ ನೆನಪನ್ನು ಮರೆಯಲು ಒಂದೇ ಸಮನೆ ನಡೆಯಲಾರಂಭಿಸಿದ. ಇದರ ಮಧ್ಯೆ ಗೌಡತಿ ತೋರುತ್ತಿದ್ದ ತಾಯ ಮಮತೆ ನೆನಪಾಯಿತು. ಆದರೂ ನಡೆಯತೊಡಗಿದ. ಏಕೆಂದರೆ ಆ ಮಮತೆಗಿಂತ ಅವನಿಗೆ ಕಾಡುತ್ತಿದ್ದ ಅವ್ವನ ನೆನಪಿನಿಂದ ಬಿಡುಗಡೆ ಬೇಕಾಗಿತ್ತು.
( ಇದು ಮುವ್ವತೈದು ವರ್ಷಗಳ ಹಿಂದೆ ಬರೆದಿದ್ದು. ನನ್ನದೇ ಕಥಾಸಂಕಲನದಲ್ಲಿ ಪ್ರಕಟಗೊಂಡಿದೆ. ಅಲ್ಲಿಂದೀಚೆಗೆ ನಿಮಗೆಲ್ಲಾ ಗೊತ್ತಿರುವಂತೆ ಹಳ್ಳಿಗಳ ಜನಜೀವನದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮಹತ್ತರ ಬದಲಾವಣೆಗಳಾಗಿವೆ. ನಗರೀಕರಣದಿಂದಾಗಿ ಗ್ರಾಮೀಣ ಭಾಷೆಯಲ್ಲಿ ಈಗ ಹಿಂದಿನ ಸೊಗಡೂ ಇಲ್ಲ. ಹೋಗಮ್ಮಿ, ಬಾರಮ್ಮಿ ಪದಗಳು ಸಿನಿಮಾದಲ್ಲಿ ಮಾತ್ರ ಬಳಕೆಯಾಗುತ್ತಿವೆ. ಇಲ್ಲಿ ಹಾಕಿರುವ ಫೋಟೋ ಪುಸ್ತಕಕ್ಕೆ ಬಳಸಿದ್ದು. ಚಿತ್ರ ಕೃಪೆ : ಎಸ್ ರಮೇಶ್ ಅಂದರೆ ನಮ್ಮ ಲೇಖಕಿ ಎಂ.ಆರ್.ಕಮಲರ ಪತಿ ತೆಗೆದಿದ್ದು.)
- ಸ್ವರ್ಣಲತಾ ಎ ಎಲ್
