ಹಿಂದೂಧರ್ಮ ಮತ್ತು ಜೀವನದರ್ಶನ ಪ್ರಶ್ನೋತ್ತರ ರೂಪದಲ್ಲಿ

ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ. ಎಚ್. ವಿ. ನರಸಿಂಹ ಮೂರ್ತಿಯವರ ಎಪ್ಪತ್ತಾರನೆಯ ಪುಸ್ತಕ ಹಿಂದೂಧರ್ಮ ಮತ್ತು ಜೀವನದರ್ಶನ ಪ್ರಶ್ನೋತ್ತರ ರೂಪದಲ್ಲಿ, ರಶ್ಮಿ ಉಳಿಯಾರು ಅವರು ಈ ಪುಸ್ತಕದ ಕುರಿತು ಬರೆದ ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ….

ಪುಸ್ತಕ : ಹಿಂದೂಧರ್ಮ ಮತ್ತು ಜೀವನದರ್ಶನ ಪ್ರಶ್ನೋತ್ತರ ರೂಪದಲ್ಲಿ
ಲೇಖಕರು : ಡಾ. ಎಚ್. ವಿ. ನರಸಿಂಹ ಮೂರ್ತಿ
ಪ್ರಕಾಶನ : ವಿಕಾಸ ಪ್ರಕಾಶನ, ಕೋಟೇಶ್ವರ, ಕುಂದಾಪುರ
ಖರೀದಿಗಾಗಿ :: ೦೮೨೫೪ ೨೬೧೧೪೫
ಮೊದಲ ಮುದ್ರಣ ೨೦೧೪
ಬೆಲೆ : ೧೦೦/-
ಪುಟಗಳು : ೧೧೨

ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ. ಎಚ್. ವಿ. ನರಸಿಂಹ ಮೂರ್ತಿಯವರ ಎಪ್ಪತ್ತಾರನೆಯ ಪುಸ್ತಕವಿದು. ಇದರಲ್ಲಿ ಒಟ್ಟು ನೂರು ಪ್ರಶ್ನೋತ್ತರಗಳಿವೆ. ಇವು ವಿಶ್ವವಾಣಿ, ವಿಪ್ರನುಡಿ, ವಿಪ್ರಧ್ವನಿ, ವಿಪ್ರಭಾರತಿ ಮುಂತಾದ ಪತ್ರಿಕೆಗಳಿಗೆ ಪ್ರಶ್ನೋತ್ತರ ರೂಪದಲ್ಲಿ ಬರೆದ ಲೇಖನ ಮಾಲೆಯಾಗಿವೆ. ಲೇಖಕರು ಹೇಳಿದಂತೆ ನಮ್ಮ ಪೂರ್ವಿಕರ ವಿಚಾರಧಾರೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥೈಸುವ ಒಂದು ಪ್ರಯತ್ನವಾಗಿದೆ. ಕ್ಲಿಷ್ಟಕರವಾದ ವಿಷಯಗಳನ್ನು ಹಿತಮಿತವಾಗಿ ಸರಳವಾಗಿ ನಿರೂಪಿಸಿರುವುದು ಇಲ್ಲಿ ಮೆಚ್ಚುಗೆ ಆಗುವ ಅಂಶವಾಗಿದೆ. ಇದನ್ನು ಓದಿ ಅನಂತರ ಹುಟ್ಟಿದ ಕುತೂಹಲದಿಂದ ಮತ್ತಷ್ಟು ಸದ್ಗ್ರಂಥಗಳ ಅಧ್ಯಯನದತ್ತ ಜನರು ಆಕರ್ಷಿತರಾದರೆ ಅದುವೇ ಒಂದು ದೊಡ್ಡ ಪ್ರಯೋಜನ. ಪುಸ್ತಕದ ಕೊನೆಯ ಪುಟಗಳಲ್ಲಿ ಹಿಂದೂ ಧರ್ಮದ ಕುರಿತು ಪ್ರಮುಖ ಪಾಶ್ಚಾತ್ಯ ಮತ್ತು ಪೌರಸ್ತ್ಯ ವಿದ್ವಾಂಸರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ.
ನಮ್ಮ ಆಧುನಿಕ ಪೀಳಿಗೆಯ ಅತಿ ದೊಡ್ಡ ಕೊರತೆಯೆಂದರೆ ನಮ್ಮ ಧರ್ಮದ ಅಂತಃಸತ್ವದ ಬಗ್ಗೆ ಸರಿಯಾದ ತಿಳುವಳಿಕೆ, ಜ್ಞಾನ ಇಲ್ಲದೇ ಇರುವುದು. ಇದಕ್ಕೆ ಅನಾಸಕ್ತಿ ಅಥವಾ ಅಸಡ್ಡೆಯೂ ಕಾರಣವಾಗಿರುವಷ್ಟೇ ಸೂಕ್ತ ಪುಸ್ತಕಗಳ ಲಭ್ಯತೆ ಇಲ್ಲದಿರುವುದು, ಇದ್ದರೂ ಮಾಹಿತಿ ಸಿಗದಿರುವುದೂ ಕಾರಣ ಎನ್ನಬಹುದು. ದೇವಾಲಯ, ಮಠಗಳಲ್ಲಿ ನಡೆಯುವ ಸತ್ಸಂಗ, ಪ್ರವಚನಗಳತ್ತ ಯುವ ಪೀಳಿಗೆಯ ನಿರಾಸಕ್ತಿಯೂ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ.

ಹಿಂದೂ ಧರ್ಮದ ಅಸಂಖ್ಯಾತ ವಿಷಯಗಳ ಬಗ್ಗೆ ಎಲ್ಲರಿಗೂ ಜಿಜ್ಞಾಸೆ ಮೂಡುವುದು ಸಹಜ. ಅಂತಹ ಜಿಜ್ಞಾಸುಗಳಿಗೆ ಒಂದು ಮಟ್ಟಿಗಿನ ಕುತೂಹಲ ತಣಿಸುವ ಹಾಗೂ ಅರಿವಿನ ಬೆಳಕನ್ನು ಹೆಚ್ಚಿಸುವ ಒಳ್ಳೆಯ ಕಾರ್ಯವನ್ನು ಈ ಕೃತಿಯು ಮಾಡುತ್ತದೆ. ಈ ಪುಸ್ತಕಕ್ಕೆ ಪಾದೇಕಲ್ಲು ವಿಷ್ಣು ಭಟ್ ಅವರ ಮೆಚ್ಚುಗೆಯ ಮಾತಿದೆ. ಅವರ ಮಾತಿನಂತೆ ಪ್ರಾಚೀನ ಭಾರತೀಯ ಕಾಲದಿಂದಲೂ ಗುರು ಶಿಷ್ಯರ ನಡುವೆ ಪ್ರಶ್ನೆ ಹಾಕಿ ಉತ್ತರ ಪಡೆದುಕೊಳ್ಳುವ ವಿಧಾನವಿದೆ. ಇದಕ್ಕೆ ಪ್ರಶ್ನೋಪನಿಷತ್ತಿನ ಹಿನ್ನೆಲೆಯೂ ಇದೆ. ನಮ್ಮ ಮಹಾನ್ ಕೃತಿಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚಿತವಾದದ್ದೇ ಪ್ರಶ್ನೆಗಳಿಗೆ ಉತ್ತರ ಹುಡುಕುವ ಹಿನ್ನೆಲೆಯಲ್ಲಿ.

ಮನು ಸ್ಮೃತಿಯಲ್ಲಿ ಹೇಳಿದಂತೆ (ಏಷ ಧರ್ಮಃ ಸನಾತನಃ) ಹಿಂದೂ ಧರ್ಮದ ಸರಿಯಾದ ಹೆಸರು ಸನಾತನ ಧರ್ಮ. ಏಕೆಂದರೆ ಬದುಕನ್ನು ಬಂಗಾರಗೊಳಿಸುವ ಶಾಶ್ವತ ಮೌಲ್ಯಗಳು ಇರುವುದರಿಂದ ಅತ್ಯಂತ ಪ್ರಾಚೀನವಾದ ಇದು ಸನಾತನ ಧರ್ಮ. ಇದು ವೇದ ಪ್ರಣೀತ ಧರ್ಮ ಹಾಗಾಗಿ ‘ವೈದಿಕ ಧರ್ಮ’. ಹಾಗೆಯೇ ಇದರ ಮತ್ತೊಂದು ಹೆಸರು ಆರ್ಯ ಧರ್ಮ. ದೂರದರ್ಶನದಲ್ಲಿ ಬರುವ ಮಹಾಭಾರತದಲ್ಲಿ ಸ್ತ್ರೀಯರು ತಮ್ಮ ಪತಿಯನ್ನು ಆರ್ಯ ಎಂದು ಸಂಭೋದಿಸುವುದನ್ನು ಗಮನಿಸಿರಬಹುದು. ಏನೆಲ್ಲ ಸಭ್ಯತೆ, ಸಂಸ್ಕೃತಿ, ಶ್ರೇಷ್ಠತೆಯುಂಟೋ ಅದೆಲ್ಲವನ್ನೂ ಮೈಗೂಡಿಸಿಕೊಂಡವನು ಆರ್ಯ. ಇಂತಹ ಆರ್ಯನು ಯಾವ ವಿಶಿಷ್ಟ ಜೀವನವಿಧಾನವನ್ನು ಅನುಸರಿಸುವನೋ ಅದೇ ಆರ್ಯಧರ್ಮ… ಎಂದು ಲೇಖಕರು ಬರೆದಿರುವರು.

ಕೃತಿಯ ತುಂಬೆಲ್ಲ ಉತ್ತರಗಳಿಗೆ ಸೂಕ್ತವಾಗುವಂತೆ ಅಲ್ಲಲ್ಲಿ ಪುರಾಣ, ವೇದ ಗ್ರಂಥ, ಉಪನಿಷತ್ತುಗಳಿಂದ ಉದ್ಧರಿಸಿದ ಸಂಸ್ಕೃತ ಸಾಲುಗಳನ್ನು ಹಾಗೂ ಅವುಗಳ ಕನ್ನಡಾನುವಾದವನ್ನೂ ನೀಡಲಾಗಿದ್ದು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಈ ಪುಸ್ತಕವನ್ನು ಒಮ್ಮೆ ಓದಿ ಎಲ್ಲವೂ ತಿಳಿಯಿತು ಎನ್ನುವ ಹಾಗಿಲ್ಲ. ಆಗೀಗ ಒಂದಿಷ್ಟು ಓದುತ್ತಾ ಮನನ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ನಮ್ಮ ಧರ್ಮವೆಂಬ ಅಗಾಧ ಸಾಗರದಿಂದ ಆರಿಸಿದ ಒಂದೊಂದು ಮುತ್ತಿನ ಹನಿಗಳು ಇಲ್ಲಿ ಪೋಣಿಸಲ್ಪಟ್ಟಿವೆ. ಉದಾಹರಣೆಗೆ ಪುರುಷಾರ್ಥಗಳೆಂದರೇನು, ಚತುರ್ವರ್ಣ ವ್ಯವಸ್ಥೆ, ಆಶ್ರಮಗಳು, ಋಣತ್ರಯಗಳು, ಯೋಗ, ಯಮ ಮತ್ತು ನಿಯಮ ಎಂದರೇನು, ಕರ್ಮ ಸಿದ್ಧಾಂತ, ಪುನರ್ಜನ್ಮ, ಪುಣ್ಯ ಪಾಪಗಳೆಂದರೇನು, ಪ್ರಾತಃಸ್ಮರಣೆ, ಪ್ರಾರ್ಥನೆ, ದೇವರ ಸ್ವರೂಪ, ದೇವಾಲಯಗಳಲ್ಲಿ ನಡೆದುಕೊಳ್ಳುವ ರೀತಿ, ನೀತಿ, ಓಂಕಾರದ ಮಹತ್ವ, ಜಪ, ಅಭಿವಾದನ, ಸಂಸ್ಕಾರಗಳು… ಇತ್ಯಾದಿ ಬಹಳಷ್ಟು ಅಂಶಗಳ ಬಗ್ಗೆ ವಿಚಾರಪೂರ್ಣವಾಗಿ ಬರೆದ ಮಾಹಿತಿಗಳಿವೆ. ಓದುತ್ತಾ ಹೋದಂತೆ ಅದೆಷ್ಟೋ ವಿಚಾರಗಳ ಬಗ್ಗೆ ಈ ಮೊದಲು ತಿಳಿದೇ ಇರಲಿಲ್ಲ ಅಥವಾ ಇಷ್ಟೊಂದು ಆಳವಾಗಿ ಗೊತ್ತಿರಲಿಲ್ಲ ಎಂಬ ಅರಿವೂ ಆಯಿತು. ಅಲ್ಲದೇ ಈ ರೀತಿಯಲ್ಲಿ ತಿಳಿಯುವುದು ಸಂತೋಷ ಕೊಟ್ಟಿತು. ಒಟ್ಟಿನಲ್ಲಿ ಇದು ಎಲ್ಲರ ಮನೆಯಲ್ಲಿ ಇರಲೇಬೇಕಾದ ಅತ್ಯಪೂರ್ವ ಪುಸ್ತಕ ಎನ್ನಬಹುದು. ನಾವಷ್ಟೇ ಅಲ್ಲ, ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಜರೂರಾಗಿ ಹಲವಾರು ವಿಷಯಗಳ ಬಗ್ಗೆ ಕಾರಣ ಸಹಿತವಾಗಿ ಹೇಳಲು ಇದನ್ನು ಆಕರ ಗ್ರಂಥವಾಗಿ ಬಳಸಬಹುದಾಗಿದೆ.


  • ರಶ್ಮಿ ಉಳಿಯಾರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading