ಪ್ರಾಚೀನ ಕಾಲದಲ್ಲಿ ಹಾನಗಲ್ಲು ಪಟ್ಟಣವು, “ವಿರಾಟಪುರ” ಎಂಬ ಪೌರಾಣಿಕ ಹೆಸರನ್ನು ಹೊಂದಿದ್ದು, ಇತಿಹಾಸ ಪ್ರಸಿದ್ಧ ಬನವಾಸಿ ಕದಂಬರು, ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಗೊಳಪಟ್ಟು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಐತಿಹಾಸಿಕ ಪ್ರಾಮಖ್ಯತೆಯನ್ನು ಪಡೆದುಕೊಂಡಿದೆ. ಇನ್ನಷ್ಟು ವಿಷಯಗಳನ್ನು ಖ್ಯಾತ ವಿಮರ್ಶಕ ಡಾ.ವಡ್ಡಗೆರೆ ನಾಗರಾಜಯ್ಯ ಅವರ ಲೇಖನದಲ್ಲಿ ತಪ್ಪದೆ ಮುಂದೆ ಓದಿ…
ಕರ್ನಾಟಕದ ಹಾವೇರಿ ಜಿಲ್ಲೆಯ ಹಾನಗಲ್ಲಿನಲ್ಲಿರುವ ತಾರಕೇಶ್ವರ ದೇವಾಲಯವು ದ್ರಾವಿಡ ಮತ್ತು ನಾಗರ ಎಂಬ ವಾಸ್ತುಶಿಲ್ಪ ಶೈಲಿಗಳಿಂದ ಅತ್ಯಂತ ಸುಂದರವಾಗಿದೆ. ಪ್ರಾಚೀನ ಕಾಲದಲ್ಲಿ ಹಾನಗಲ್ಲು ಪಟ್ಟಣವು, “ವಿರಾಟಪುರ” ಎಂಬ ಪೌರಾಣಿಕ ಹೆಸರನ್ನು ಹೊಂದಿದ್ದು, ಇತಿಹಾಸ ಪ್ರಸಿದ್ಧ ಬನವಾಸಿ ಕದಂಬರು, ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಗೊಳಪಟ್ಟು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಐತಿಹಾಸಿಕ ಪ್ರಾಮಖ್ಯತೆಯನ್ನು ಪಡೆದುಕೊಂಡಿದೆ.

ಬನವಾಸಿ ಕದಂಬರ ವಂಶದ ಹಾನಗಲ್ ಕಂಪಣವನ್ನು ‘ಹಾನಗಲ್ ಕದಂಬರು’ ಎಂದೇ ಕರೆಯಲಾಗಿದೆ. ಪಾನುಂಗಲ್ -500 ಎಂಬ ಕಂಪಣದ ಈ ಹಾನಗಲ್ ಕದಂಬರು, ಅ ಕಾಲದ ರಾಜಕೀಯ ಚರಿತ್ರೆಯಲ್ಲಿ ವಾಸ್ತುಶಿಲ್ಪದ ಕೊಡುಗೆ ದೃಷ್ಟಿಯಿಂದ ತಮ್ಮದೇ ಛಾಪು ಮೂಡಿಸಿದ್ದಾರೆ. ಪಾನುಂಗಲ್-500 ಕದಂಬ ವಂಶದ ಅರಸರ ಕಾಲದಲ್ಲಿ ಆರಂಭವಾದ ತಾರಕೇಶ್ವರ ದೇವಾಲಯದ ನಿರ್ಮಾಣ ಕಾರ್ಯವು ಮುಂದೆ ಕ್ರಿ.ಶ 1050 ರಲ್ಲಿ ಕಲ್ಯಾಣಿ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯನ ಆಡಳಿತದ ಕಾಲದಲ್ಲಿ ಪೂರ್ಣಗೊಂಡು, ಆ ನಂತರದ 12 ನೇ ಶತಮಾನದಲ್ಲಿ ಹೊಯ್ಸಳರ ಅರಸನಾದ ವೀರಬಲ್ಲಾಳನ ವಶಕ್ಕೆ ಬಂದಿದೆ. ಹೊಯ್ಸಳರು ಕೂಡಾ ಈ ದೇವಾಲಯದ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆಂಬುದಕ್ಕೆ ಸಾಕ್ಷಿಯಾಗಿ ದೇವಸ್ಥಾನದ ಮುಂಭಾಗದ ದ್ವಾರದ ಕುಂಬಿಯ ಮೇಲೆ ಸ್ಥಾಪಿಸಲಾಗಿರುವ ಹೊಯ್ಸಳರ ರಾಜ ಲಾಂಛನವನ್ನು ಗಮನಿಸಬಹುದು. ಸಳನು ಹುಲಿಯೊಂದಿಗೆ ಕಾದಾಡುತ್ತಿರುವ ರಾಜಲಾಂಛನ ಚಿತ್ರವಿದು. ಈ ದೇವಾಲಯವು ಒಂದೇ ದೇವಾಲಯವಾಗಿರದೆ ದೇವಾಲಯಗಳ ಸಮುಚ್ಛಯವಾಗಿ ಹಲವು ಹಂತಗಳ ಶಿಲ್ಪಕಲಾ ವಿನ್ಯಾಸದಲ್ಲಿ ಅಡಕವಾಗಿರುತ್ತದೆ. ಇದು ವಿವಿಧ ಕಾಲಘಟ್ಟಗಳಲ್ಲಿ, ವಿವಿಧ ಕಲಾ ಶೈಲಿಯ ಪರಿಕಲ್ಪನೆಗಳ ಕೂಟಸ್ಥಲವಾಗಿರುತ್ತದೆ. ದೇವಾಲಯದ ಎದುರಿನಲ್ಲಿ ನಿಂತು ನೋಡಿದಾಗ ಅಷ್ಟೇನೂ ಎತ್ತರವಾಗಿ ಮತ್ತು ಬೃಹತ್ತಾಗಿ ಕಾಣಿಸುವುದಿಲ್ಲವಾದರೂ ಒಳಗಡೆ ಪ್ರವೇಶಿಸಿದಾಗ ದೇವಾಲಯವು ತುಂಬಾ ಉದ್ದವಾಗಿದ್ದು ಗರ್ಭಗೃಹ, ಅಂತರಾಳ, ನವರಂಗ ಮತ್ತು ಸಭಾಮಂಟಪ ಎಂಬ ಐದು ಹಂತಗಳಲ್ಲಿ ಶಿಲ್ಪವೈಭವವಿರುವ ಸಂಕೀರ್ಣ ಸಮುಚ್ಚಯವಾಗಿರುತ್ತದೆ.

ಹಾನಗಲ್ಲಿನ ತಾರಕೇಶ್ವರ ದೇವಾಲಯದ ಸಭಾ ಮಂಟಪದ ಮೇಲ್ಛಾವಣಿಯಲ್ಲಿರುವ ಕಮಲದ ರಚನೆಯು ನೋಡಲು ನಯನ ಮನೋಹರವಾಗಿದ್ದು, ಆ ಕಾಲದ ಶಿಲ್ಪಿಗಳ ಪ್ರತಿಭೆ ಮತ್ತು ತಾಂತ್ರಿಕ ಕಲಾನೈಪುಣ್ಯತೆಗೆ ಸಾಕ್ಷಿಯಾಗಿರುತ್ತದೆ. ಅತ್ಯಂತ ಸೂಕ್ಷ್ಮವಾದ ಕುಸುರಿ ಕೆತ್ತನೆಗಳಲ್ಲಿರುವ ವೃತ್ತಾಕಾರ ಚೌಕಕಾರ ಕೋನಾಕೃತಿ ಕರ್ಣ ಬಾಹು ತ್ರಿಜ್ಯಗಳು ಈಗಿನ ನಮ್ಮ ಕಾಲದ ರೇಖಾಗಣಿತಜ್ಞರನ್ನು ಕೂಡಾ ಬೆರಗಾಗಿಸುತ್ತವೆ. ತಂತ್ರಜ್ಞಾನದ ನೆರವಿನ ಇಂದು ನಾವು, ಒಣಮರದ ಕೆತ್ತನೆಯಲ್ಲಿ ಟರ್ನರುಗಳಿಂದ ತಿರುಗಿಸಿ ನುಣುಪು ಮತ್ತು ಹೊಳಪು ತರುವುದಕ್ಕಿಂತಲೂ ಮಿಗಿಲಾಗಿ ಆ ಕಾಲದ ಶಿಲ್ಪಿಗಳು ಬೃಹತ್ ಶಿಲಾಕಂಭಗಳ ಮೇಲೆ ನುಣುಪು ಮತ್ತು ಹೊಳಪು ಹೇಗೆ ತಂದರೆಂಬುದು ಬಹುದೊಡ್ಡ ಕೌತುಕ ಮೂಡಿಸುತ್ತದೆ.
ಭಾರತದ ಪ್ರಾಚ್ಯವಸ್ತು ಮತ್ತು ಪುರಾತತ್ತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿರುವ ಹಾನಗಲ್ ತಾರಕೇಶ್ವರ ದೇವಾಲಯವು ಪ್ರಧಾನವಾಗಿ ಕಲ್ಯಾಣಿ ಚಾಲುಕ್ಯರ ಮಹತ್ವದ ಕೊಡುಗೆಯಾಗಿದೆ ಎಂದು ಇತಿಹಾಸಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹನ್ನೆರಡನೇ ಶತಮಾನದ ಮಧ್ಯಭಾಗದ ಕಲ್ಯಾಣಿ ಚಾಲುಕ್ಯರ ಅರಸನಾದ ಆರನೇ ವಿಕ್ರಮಾದಿತ್ಯ ಕಟ್ಟಿಸಿದ ದೇವಾಲಯ ಇದೆನ್ನಲಾಗಿದೆ. ಇಟಗಿ, ಗದಗ, ಲಕ್ಕುಂಡಿ ಮುಂತಾದ ಕಡೆಗಳಲ್ಲಿ ನಿರ್ಮಿಸಲಾಗಿರುವ ದೇಗುಲಗಳ ವಾಸ್ತುಶಿಲ್ಪದ ಶೈಲಿ ಇಲ್ಲಿಯೂ ಪ್ರಧಾನವಾಗಿ ಕಾಣಿಸುವುದರಿಂದಾಗಿ ಇತಿಹಾಸಕಾರರು ತಾರಕೇಶ್ವರ ದೇವಾಲಯವನ್ನು ನಿರ್ಮಿಸಿದ ಕಾಲಘಟ್ಟ ಮತ್ತು ಕಟ್ಟಿಸಿದ ಅರಸನನ್ನು ಕುರಿತು ನಿರ್ಣಯಿಸಲು ಸಾಧ್ಯವಾಗಿದೆ.

ತಾರಕ ಮತ್ತು ಈಶ್ವರ ಎಂಬ ಎರಡು ಶಬ್ದಗಳು ಸೇರಿ ತಾರಕೇಶ್ವರ ಶಬ್ದ ಬಂದಿದೆ. ತಾರಕಾಸುರ ಎಂಬ ಅಸುರನೊಬ್ಬನಿದ್ದಾನೆ. ಇವನು ಶಿವನನ್ನು ಕೊಲ್ಲಲು ತಪಸ್ಸು ಮಾಡಿದವನು. ತಾರಕೇಶ್ವರನ ದೇವಾಲಯದಲ್ಲಿ ಅಂತಹ ಕುರುಹುಗಳಿವೆಯೋ ಎಂಬ ಬಗ್ಗೆ ವಾಸ್ತುಶಿಲ್ಪ ಶಾಸ್ತ್ರವದ ಅಧ್ಯಯನಕಾರರು ಹೇಳಬೇಕು. ಶಿವಗಣಗಳಲ್ಲಿ ತಾರಕ ಎಂಬುವವನು ಶಿವನ ಪರಿಚಾರಕನಾಗಿದ್ದಾನೆ. ತಾರಕ ಎಂದರೆ ಮಾರ್ಗದರ್ಶಿ, ನಾವಿಕ ಎಂಬ ಅರ್ಥವೂ ಇದೆ. ಹಾನಗಲ್ಲಿನ ಗುಡಿಯಲ್ಲಿ ತಾರೆಯಂತೆ ಕಂಗೊಳಿಸುವ ಲಿಂಗಸ್ವರೂಪಿ ಈಶ್ವರನ ಸೌಂದರ್ಯ ತಾರಕ ಮುಟ್ಟಿದೆ. ಹಾಗೆಂದೇ ಇವನು ತಾರಕೇಶ್ವರನಾಗಿದ್ದಾನೆ. ತಾರಕೇಶ್ವರ ದೇವಾಲಯದ ವಾಸ್ತುಶಿಲ್ಪವು ಪ್ರಧಾನವಾಗಿ ಕಲ್ಯಾಣಿ ಚಾಲುಕ್ಯರ ಶೈಲಿಯನ್ನು ಹೊಂದಿದೆ. ಚಾಲುಕ್ಯರ ಪತನದ ನಂತರದಲ್ಲಿ ಹೊಯ್ಸಳರು ಈ ದೇವಾಲಯವನ್ನು ನವೀಕರಿಸಿದ್ದಾರೆ. ದೇವಾಲಯದ ರಚನಾತ್ಮಕ ವಿನ್ಯಾಸದಲ್ಲಿ ಹೊಯ್ಸಳರ ಪ್ರಭಾವವು ಕೂಡ ಗೋಚರಿಸುತ್ತದೆ. ಗರ್ಭಗುಡಿಯಲ್ಲಿ ತಾರಕೇಶ್ವರ ಹೆಸರಿನ ಶಿವಲಿಂಗವಿದೆ. ದೇವಾಲಯದ ಹೊರ ಗೋಡೆಗಳ ಸುತ್ತಲೂ ರಾಮಾಯಣ- ಮಹಾಭಾರತ ಕಾವ್ಯಗಳ ಅನೇಕ ದೃಶ್ಯಗಳನ್ನು ಚಿತ್ರಿಸಿರುವ ಕಲಾಕುಸುರಿಯ ಶಿಲ್ಪಗಳಿವೆ. ಈಗಾಗಲೇ ಹೇಳಿದಂತೆ ತಾರೆ ಎಂದರೆ ನಕ್ಷತ್ರ. ತಾರಕ ಎಂದರೆ ನಕ್ಷತ್ರ ಪುಂಜಗಳಿರುವ ಮುಗಿಲು ಎಂದರ್ಥ. ತಾರಕೇಶ್ವರ ಎಂದರೆ ನಕ್ಕತ್ರ ಪುಂಜಗಳ ಆಕಾಶದ ಚೆಲುವಿನಂತೆ ಕಂಗೊಳಿಸುವ ಈಶ್ವರ. ತಾರಕೇಶ್ವರ ದೇವಾಲಯದ ಸಭಾ ಮಂಟಪದ ಮೇಲ್ಛಾವಣಿಯಲ್ಲಿರುವ ಕಮಲದ ಕೆತ್ತನೆಯು ನೋಡಲು ನಕ್ಷತ್ರ ಪುಂಜದಂತೆಯೇ ಆಕರ್ಷಕವಾಗಿದೆ. ಇಂತಹ ಕಮಲದ ಕೆತ್ತನೆಯನ್ನು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಇಲ್ಲಿರುವ ಶಿವಲಿಂಗವನ್ನು ‘ತಾರಕೇಶ್ವರ’ ಎಂದು ಕರೆಯಲಾಗಿದೆ. ಹಾನಗಲ್ಲಿನ ತಾರಕೇಶ್ವರ ದೇವಾಲಯದಲ್ಲಿರುವ ಸುಂದರ ಕೆತ್ತನೆಗಳ ಶಿಲ್ಪವೈಭವದ ರೂವಾರಿ ಜಗತ್ಪ್ರಸಿದ್ಧ ಅಮರಶಿಲ್ಪಿ ಜಕಣಾಚಾರಿ ಎಂದು ಇಲ್ಲಿನ ಐತಿಹ್ಯಗಳು ತಿಳಿಸುತ್ತವೆ. ಕರ್ನಾಟಕ ಸರ್ಕಾರ ಶಿಲ್ಪಕಲೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶಿಲ್ಪಿಗಳಿಗೆ ಜಕಣಾಚಾರಿ ಪ್ರಶಸ್ತಿ ನೀಡುತ್ತಾ ಬಂದಿದೆ. ತಾರಕೇಶ್ವರ ದೇವಾಲಯವು ಕ್ರಿ.ಶ 11 ರಿಂದ 13 ನೇ ಶತಮಾನದಲ್ಲಿ ವಿವಿಧ ಹಂತಗಳಲ್ಲಿ ನಿರ್ಮಾಣವಾಗಿರುವುದರಿಂದ ಜಕಣಾಚಾರಿಯೊಬ್ಬನ ಖಾತೆಗೆ ಇಲ್ಲಿನ ಶಿಲ್ಪಕಲಾ ಕೊಡುಗೆಯ ಕೀರ್ತಿಯನ್ನು ಸೇರಿಸಲು ಬರುವುದಿಲ್ಲ. ಈ ದೇವಾಲಯವು ಪಾನುಂಗಲ್-500 ಕದಂಬರ, ಕಲ್ಯಾಣಿ ಚಾಲುಕ್ಯರ ಮತ್ತು ಹೊಯ್ಸಳರ ವಾಸ್ತುಶಿಲ್ಪ ಶೈಲಿಯ ಕೆತ್ತನೆಗಳ ಸಂಗಮವಾಗಿದೆ.

ಸ್ಥಳಪುರಾಣ, ಐತಿಹ್ಯ ಮತ್ತು ದಂತಕಥೆಗಳ ಪ್ರಕಾರ ವಿರಾಟಪುರ ಎಂದು ಕರೆಯಲಾಗುತ್ತಿದ್ದ ಹಾನಗಲ್ ಪಟ್ಟಣದ ಸಮೀಪದಲ್ಲಿದ್ದ ಕಾಡಿನಲ್ಲಿ ಪಾಂಡವರು ಸ್ವಲ್ಪ ಕಾಲ ವನವಾಸದಲ್ಲಿದ್ದರು. ಕ್ರಿ.ಶ 1197 ರಲ್ಲಿ ಹೊಯ್ಸಳರ ವೀರಬಲ್ಲಾಳನು ಹಾನಗಲ್ ಹತ್ತಿರ ಬೀಡು ಬಿಟ್ಟಿದ್ದನೆಂದು ಶಾಸನಗಳು ತಿಳಿಸುತ್ತವೆ. ಹೊಯ್ಸಳರು ಈ ದೇವಾಲಯದ ವಾಸ್ತುಶಿಲ್ಪಕ್ಕೆ ತಮ್ಮ ಕೊಡುಗೆಯೆಯನ್ನು ನೀಡಿ ದೇವಾಲಯವನ್ನು ವಿಸ್ತರಿಸಿದ್ದಾರೆ. ಮೊದಲ ಮುಖ ಮಂಟಪದಲ್ಲಿ 16 ಭವ್ಯ ಶಿಲಾಸ್ತಂಭಗಳಿವೆ. ವೃತ್ತಾಕಾರದ ಈ ಕಂಭಗಳ ಮೇಲೆ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಮುಖ ಮಂಟಪದಲ್ಲಿ ಇರಿಸಲಾಗಿರುವ ಶಾಸನಗಳು ಮತ್ತು ವೀರಗಲ್ಲು ದೇವಾಲಯದ ಇತಿಹಾಸದ ಮೇಲೆ ಬೆಳಕು ಚಲ್ಲುತ್ತವೆ.

ಎರಡನೆಯ ಮುಖ ಮಂಟಪದಲ್ಲಿ 64 ಶಿಲಾಸ್ತಂಭಗಳಿವೆ. ಕಮಲದ ಕೆತ್ತನೆಯಿರುವ ಸುಕನಾಸಿಯಲ್ಲಿ ಆರು ಮೀಟರ್ ಸುತ್ತಳತೆಯಲ್ಲಿ ಅರಳಿದ ಕಮಲವನ್ನು ಬಿಡಿಸಲಾಗಿದೆ. ಮಂಟಪದ ಮೇಲ್ಚಾವಣಿಯಲ್ಲಿ ಬಿಡಿಸಲಾಗಿರುವ ಅಷ್ಟ ಭುಜಾಕೃತಿಯ ಕಮಲವನ್ನು ಅಂಗಾತ ಮಲಗಿ ನೋಡಿದಷ್ಟೂ ಕಣ್ಣುಗಳಿಗೆ ಹಬ್ಬ. ಇದನ್ನು “ಹಾನಗಲ್ ಕಮಲ” ಎಂದೇ ಕರೆಯುತ್ತಾರೆ. ಈ ಕಮಲವು 12 ದೊಡ್ಡ ಶಿಲಾಕಂಭಗಳ ಮೇಲೆ ನಿಂತಿದೆ. ದೇವಾಲಯದ ಶಿಲ್ಪವೈಭವದ ಹೊರ ಗೋಡೆಗಳಲ್ಲಿ ರಾಮಾಯಣ ಮಹಾಭಾರತ ಪುರಾಣೇತಿಹಾಸಗಳ ಚಿತ್ರಗಳನ್ನು ಕೆತ್ತಲಾಗಿದೆ. ಪ್ರಧಾನ ದೇವಾಲಯದ ಮುಂದೆ ಈಶಾನ್ಯ ದಿಕ್ಕಿನಲ್ಲಿ ಗಣಪತಿಯ ದೇವಾಲಯವಿದೆ. ಇದರ ಗೋಪುರ ನಾಗರ ಶೈಲಿಯಲ್ಲಿದ್ದು ಆಕರ್ಷಕ ಚಿತ್ರಗಳ ಕೆತ್ತನೆಗಳಿವೆ. ತಾರಕೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ನಕ್ಷತ್ರದಂತೆ ಕಂಗೊಳಿಸುತ್ತಿರುವ ಶಿವಲಿಂಗವಿದ್ದರೆ, ಮುಂಭಾಗದ ಗಣಪತಿ ದೇವಾಲಯದಲ್ಲಿ ಗಣಪತಿಯ ಮೂರ್ತಿಯಿದೆ. ಎರಡೂ ದೇಗುಲಗಳ ಗರ್ಭಗುಡಿ ಬಾಗಿಲುಗಳ ಮೇಲೆ ಅನೇಕ ಕುಸುರಿ ಕೆತ್ತನೆಗಳಿವೆ. ನೀವು ಹಾವೇರಿ ಜಿಲ್ಲೆಯ ಹಾನಗಲ್ ಕಡೆಗೆ ಹೋದಾಗ ತಾರಕೇಶ್ವರ ದೇವಾಲಯವನ್ನು ನೋಡಲು ಮರೆಯಬೇಡಿರಿ.
- ಡಾ.ವಡ್ಡಗೆರೆ ನಾಗರಾಜಯ್ಯ
