ಡಾ.ವಿರೂಪಾಕ್ಷ ದೇವರಮನೆ ಅವರ ‘ಹೋಗಿ ಬಾ ಮಗಳೇ’ ಪುಸ್ತಕವೊಂದು ಜತೆಗಿದ್ದರೆ ದಾಂಪತ್ಯ ಜೀವನ ಖಂಡಿತವಾಗಿಯೂ ಸುಖವಾಗಿರಬಹುದು. ರಶ್ಮಿ ಉಳಿಯಾರು ಅವರು ಪುಸ್ತಕದ ಕುರಿತು ಓದುಗರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಶೀರ್ಷಿಕೆ: ಹೋಗಿ ಬಾ ಮಗಳೇ
ಲೇಖಕರು: ಡಾ. ವಿರೂಪಾಕ್ಷ ದೇವರಮನೆ
ಬೆಲೆ: ೨೦೦/-
ಪುಟಗಳು: ೧೮೮
ಮುದ್ರಣಗಳು: ೨೦೧೭, ೨೦೧೮, ೨೦೧೯, ೨೦೨೧
ಪ್ರಕಟನೆ: ಸಾವಣ್ಣ ಎಂಟರ್ಪ್ರೈಸಸ್
ಇದು ಈ ಬಾರಿಯ ಭೇಟಿಯಲ್ಲಿ ನನ್ನ ತಂದೆ ನೀಡಿದ ಉಡುಗೊರೆ. ನನ್ನ ಮದುವೆಯ ಸಮಯದಲ್ಲಿ ಈ ತರಹದ ಪುಸ್ತಕಗಳು ಲಭ್ಯವಿದ್ದವೋ ತಿಳಿಯದು. ಆದರೆ ಆಗಲೇ ಇದ್ದಿದ್ದರೆ ವೈವಾಹಿಕ ಬದುಕಿಗೆ ಬಹಳಷ್ಟು ಸಹಾಯವಾಗುತ್ತಿತ್ತು ಎಂದು ಅಂದುಕೊಳ್ಳುವಂತೆ ಮಾಡಿತು. ಅಪ್ಪನಿಗೆ ಥ್ಯಾಂಕ್ಯೂ. ಇದರಲ್ಲಿ ಲೇಖಕರು ಒಬ್ಬ ಮದುವೆಯ ಹೊಸ್ತಿಲಲ್ಲಿ ಇರುವ ಹೆಣ್ಣುಮಗಳ ತಂದೆಯಾಗಿ ತಮ್ಮ ಮಗಳಿಗೆ ಪತ್ರವನ್ನು ಬರೆಯುವ ರೀತಿಯಲ್ಲಿ ಸುಮಾರು ಇಪ್ಪತ್ತೈದು ಬಿಡಿ ಲೇಖನಗಳ ರೂಪದಲ್ಲಿ ತಮ್ಮ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಮನಃಶಾಸ್ತ್ರ ಪರಿಣಿತರಾದ ಲೇಖಕರು ಇಡೀ ಕೃತಿಯನ್ನು ಮಗಳಿಗೆ ಉದ್ದೇಶಿಸಿಯೇ ಅಥವಾ ಸಂಬೋಧಿಸಿಯೇ ಬರೆದಿದ್ದಾರೆ. ಹಾಗಾಗಿ ಇದು ಒಂದು ಹಿರಿಯರು ಎದುರು ಕುಳಿತು ಆಡಿದ ಸುಂದರ ಹಿತವಚನಗಳ ಗುಚ್ಛದಂತಿದೆ. ವಿರೂಪಾಕ್ಷ ಅವರ ‘ಮಕ್ಕಳತ್ರ ಮಾತಾಡಿ ಪ್ಲೀಸ್’ ಪುಸ್ತಕ ಸಹ ಓದಿದ್ದೇನೆ.

ಸಾಮಾನ್ಯವಾಗಿ ಮದುವೆ ನಿಶ್ಚಯವಾದ ಹೆಣ್ಣಿನ ತಳಮಳ ಹೇಳತೀರದ್ದು. ಏನೋ ಅವ್ಯಕ್ತ ಮಿಶ್ರ ಭಾವ. ಸಂತಸ, ಪುಳಕ, ಆತಂಕ, ಗಾಬರಿ, ವೇದನೆ… ಅಷ್ಟು ವರ್ಷಗಳಿಂದ ಇದ್ದ ಮನೆ, ಮನೆಯವರು, ಊರು, ಸ್ನೇಹಿತರು… ಎಲ್ಲವನ್ನೂ ಬಿಟ್ಟು ಹೋಗುವ ಸಂದರ್ಭ. ಎಷ್ಟೋ ಸಮಯದಲ್ಲಿ ಆಹಾರ, ಭಾಷೆ, ಸಂಪ್ರದಾಯ, ಆಚರಣೆ, ದಿನಚರಿ… ಸಹಿತ ಬದಲಾವಣೆ ಆಗುವುದಿರುತ್ತದೆ. ಅಷ್ಟೂ ವರ್ಷಗಳ ಅವಳ ಬದುಕು ಒಂದು ತೂಕದ್ದಾದರೆ ಇನ್ನುಳಿದ ಮುಕ್ಕಾಲು ಪಾಲು ಬದುಕಿನ ಲೆಕ್ಕವೇ ಬೇರೆ. ಇದರ ಬಗ್ಗೆ ಬರೆದಷ್ಟೂ ಮುಗಿಯದು. ಆದರೆ ಆ ಹಂತದಲ್ಲಿ ಅಥವಾ ಅದಕ್ಕೆ ಮುಂಚಿತವಾಗಿಯೂ ಇದಕ್ಕೆಂದು ಮಾನಸಿಕ ಸನ್ನದ್ಧತೆ, ಸಿದ್ಧತೆ ಅಷ್ಟೇನೂ ಇರುವುದಿಲ್ಲ ಎಂದೇ ಹೇಳಬೇಕು. ಹೆಚ್ಚೆಂದರೆ ಮನೆಯ ಹಿರಿಯ ಹೆಂಗಸರು ನಾಲ್ಕಾರು ಕಿವಿಮಾತುಗಳನ್ನು ಹೇಳಿಯಾರು. ಅಥವಾ ಅದಾಗಲೇ ಮದುವೆಯಾದ ಓರಗೆಯ ಆಪ್ತ ಗೆಳತಿಯರು, ಅಕ್ಕಂದಿರು ಒಂದಿಷ್ಟು ವಿಷಯಗಳನ್ನು ತಿಳಿಸಿಯಾರು. ಬಿಟ್ಟರೆ ಒಂದು ರೀತಿಯ ಗೊಂದಲದ ಮನಸ್ಥಿತಿ. ಕನಸಿನ ರಾಜಕುಮಾರನ ಪ್ರೇಮದ ಮಡದಿಯಾಗುವ ಭಾಗ್ಯ ಒಂದೆಡೆ, ಅವನ ಪ್ರೀತಿಯ ಕುಟುಂಬಕ್ಕೆ ತಾನು ಹೊಂದಿಕೊಳ್ಳುವ ಕರ್ತವ್ಯ ಹಾಗೂ ಅನಿವಾರ್ಯತೆ ಮತ್ತೊಂದೆಡೆ. ಗಂಡಿಗೂ ಹೀಗೆಲ್ಲ ಒಂದಿಷ್ಟು ಅನ್ನಿಸಬಹುದಾದರೂ ಇಂದಿಗೂ ಹೆಣ್ಣೇ ವಿವಾಹವಾದ ಮೇಲೆ ಗಂಡನ ಮನೆಗೆ ಹೋಗುವುದರಿಂದ ಅದರ ತೀವ್ರತೆ ಅವನಿಗೆ ಕಡಿಮೆ.
ಹಾಗಾಗಿ ಇಂತಹ ಪುಸ್ತಕವೊಂದು ಜತೆಗಿದ್ದರೆ ಕೈದೀವಿಗೆಯಾಗಬಲ್ಲದು. ಏಕೆಂದರೆ ಮುಂದಿನ ವಿಷಯಗಳ ಬಗ್ಗೆ ಮೊದಲೇ ಅರಿವಿದ್ದರೆ ನಂತರದ ದಾಂಪತ್ಯ ಜೀವನ ಖಂಡಿತವಾಗಿ ಸುಲಭವಾಗುತ್ತದೆ. ಒಂದು ಮಟ್ಟಿಗಿನ ಪ್ರಬುದ್ಧತೆ ಬರುತ್ತದೆ. ಕಾಲೇಜುಗಳಲ್ಲಿ ಪಡೆದ ವಿದ್ಯೆ ನಮ್ಮನ್ನು ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರನ್ನಾಗಿಸಬಹುದು. ಆದರೆ ಈ ವಿವಾಹ, ದಾಂಪತ್ಯ, ಕೌಟುಂಬಿಕ ಸಾಮರಸ್ಯ, ಮಕ್ಕಳು, ಅವುಗಳ ಲಾಲನೆ ಪಾಲನೆ ಇವುಗಳ ಬಗ್ಗೆ ಯಾವ ಜ್ಞಾನ ಕೂಡ ಸಿಕ್ಕಿರುವುದಿಲ್ಲ. ಈಗ ಉನ್ನತ ವಿದ್ಯಾಭ್ಯಾಸ ಪಡೆದವರ ಮದುವೆಗಳೇ ಕ್ಷುಲ್ಲಕ ಕಾರಣಗಳಿಗಾಗಿ ಮುರಿದು ಬೀಳುತ್ತಿರುವಾಗ ಅಷ್ಟೆಲ್ಲಾ ಓದಿ ಇವರು ಕಲಿತದ್ದೇನು ಎಂಬ ಪ್ರಶ್ನೆ ಬರುತ್ತದೆ. ಉತ್ತರ ವಿದ್ಯೆಗೂ ಈ ವಿಷಯಗಳಿಗೂ ಸಂಬಂಧವೇ ಇರುವುದಿಲ್ಲ ಎನ್ನುವುದೇ ಆಗಿದೆ.

ಸ್ವರ್ಗದಲ್ಲೇ ನಿಶ್ಚಯವಾದ ಮದುವೆಗಳನ್ನು ನಡೆಸಿಕೊಂಡು ಹೋಗಬೇಕಾದ್ದು ಭೂಮಿಯಲ್ಲೇ ತಾನೇ! ಹಾಗಾಗಿ ವಿವಾಹವೆಂಬ ಬದುಕಿನ ಮಹತ್ತರ ನಿರ್ಧಾರವು ಎರಡು ವ್ಯಕ್ತಿಗಳನ್ನು ಮತ್ತು ಎರಡು ಕುಟುಂಬಗಳನ್ನು ಸೌಹಾರ್ದತೆಯಿಂದ ಸುಖವಾಗಿ ಇರುವಂತೆ ಮಾಡಬೇಕು. ಅದಕ್ಕಾಗಿ ಭವಿಷ್ಯ ಜೀವನದ ಬಗ್ಗೆ ಇರುವ ಆತಂಕಗಳನ್ನು ಸ್ವಲ್ಪಮಟ್ಟಿಗಾದರೂ ದೂರ ಮಾಡಿ, ದಂಪತಿಗಳ ನಡುವೆ ಉಂಟಾಗುವ ಮನಸ್ತಾಪಗಳಿಗೆ ಕಾರಣವಾಗುವ ಸಂವಹನದ ಕೊರತೆಯನ್ನು ನೀಗಿಸಲು ಅಗತ್ಯವಾದ ಕೌಶಲಗಳನ್ನು ತಿಳಿಸುವುದು ಈ ಪುಸ್ತಕದ ಉದ್ದೇಶ.
ಲೇಖಕರು ಇಲ್ಲಿ ತಮಗೆ ಬಂದ ಕೇಸ್ ಸ್ಟಡಿಗಳ ಆಧಾರದ ಮೇಲೆ ಹಲವಾರು ಉದಾಹರಣೆಗಳನ್ನು ಕೊಡುತ್ತಾ ಹೋಗುತ್ತಾರೆ. ವಾಸ್ತವ ಬದುಕಿನಲ್ಲಿ ನಡೆಯುವ ಘಟನೆಗಳ ಬಗ್ಗೆ ಓದುತ್ತಾ ಹೋದಂತೆ ಅರೇ! ಹೌದಲ್ಲಾ ಹೀಗೆ ನಮ್ಮ ಮನೆಯಲ್ಲೂ ನಡೆದಿತ್ತಲ್ಲಾ… ನಾನು ಹೀಗೆ ವರ್ತಿಸಬಹುದಾಗಿತ್ತು ಬಹುಶಃ… ಎಂದು ಅನ್ನಿಸತೊಡಗುತ್ತದೆ. ಲೇಖಕರು ನಾವು ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಲು ತಿಳಿಸುತ್ತಾರೆ. ನನಗೆ ಮನೋವಿಜ್ಞಾನ ಆಸಕ್ತಿಯ ವಿಷಯವಾದ ಕಾರಣ ಈ ಪುಸ್ತಕ ಮತ್ತಷ್ಟು ಹಿಡಿಸಿತು.
ಇದು ಹೆಣ್ಣುಮಕ್ಕಳಿಗೆ ಮಾತ್ರ ಬರೆದ ಪುಸ್ತಕವಲ್ಲ. ಕಡೆಯ ಅಧ್ಯಾಯ ‘ಯುವಮಿತ್ರನಿಗೊಂದು ಪತ್ರ’ವು ಗಂಡಸರಿಗೇ ಮೀಸಲಾಗಿದೆ. ಅಲ್ಲದಿದ್ದರೂ ಇಡೀ ಪುಸ್ತಕವನ್ನು ಓದಿದರೆ ಅವಳು ಹೇಳದೇ ಉಳಿದ ಒಡಲಾಳದ ದನಿಗಳು ಅವನ ಕಿವಿ ತಲುಪಿ ತನ್ಮೂಲಕ ಸಾನುಭೂತಿ/ತಾದಾತ್ಮ್ಯಾನುಭೂತಿ
(ಎಂಪಥಿ) ಸಾಧ್ಯವಾಗುತ್ತದೆ.
ಇದು ಮುಕ್ತದಾರಿದಾರಿಗೊಂದು ಅಕ್ಷಯಪಾತ್ರೆಯಷ್ಟೇ. ಕಟ್ಟಿಕೊಟ್ಟ ಬುತ್ತಿಯಲ್ಲ. ಅನುಭವಜನ್ಯ ನುಡಿಗಳು… ಎಂಬುದು ಲೇಖಕರ ಮಾತು. ನನಗನ್ನಿಸಿದ್ದು: ವಿವಾಹವಾಗಿ ಕೆಲ ವರ್ಷಗಳನ್ನು ಕಳೆದವರೂ ಸಹ ಖಂಡಿತವಾಗಿ ಓದಲೇಬೇಕಾದ ಪುಸ್ತಕವಿದು. ದಾಂಪತ್ಯ ಬದುಕನ್ನು ಸುಂದರ ಹೂ ಬನ ಮಾಡಿಕೊಳ್ಳೋಣ.
- ರಶ್ಮಿ ಉಳಿಯಾರು
