ಕರ್ಪೂರ ಹಚ್ಚೋರಿಗೆ ಕುಲುಮೆ ಕಾವು ತಿಳಿಯೋದಿಲ್ಲ.

ಬಹಳ ವರ್ಷಗಳ ನಂತರ ಕನ್ನಡದಲ್ಲಿ ಒಂದು ಗಟ್ಟಿಯಾದ ಕಥೆ, ಅದ್ಭುತವಾದ ಸಾಮಾಜಿಕ ಸಂದೇಶ ಹಾಗೂ ಎಲ್ಲಾ ಕಾಲಕ್ಕೂ ಪ್ರಸ್ತುತವೆನಿಸಬಹುದಾದ ಮಾನವೀಯ ಮೌಲ್ಯಗಳನ್ನುಳ್ಳ ಚಿತ್ರವೊಂದು ತೆರೆಕಂಡಿದೆ. ಅದುವೇ ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ..! – ಹಿರಿಯೂರು ಪ್ರಕಾಶ್, ತಪ್ಪದೆ ಮುಂದೆ ಓದಿ…

ರಾಷ್ಟ್ರಕವಿ ಕುವೆಂಪುರವರ ಮೂಲ ಆಶಯಗಳ ಬಹುತೇಕ ಅಂಶಗಳನ್ನು ಚಿತ್ರದುದ್ದಕ್ಕೂ ಆವರಿಸಿಕೊಂಡಿರುವ ಕಾಟೇರ, ಕುವೆಂಪುರವರ ಜನ್ಮದಿನದಂದೇ‌ ಬಿಡುಗಡೆಯಾಗಿರುವುದು ವಿಶೇಷ. ಜಾತೀಯತೆ, ದಬ್ಬಾಳಿಕೆ, ದೌರ್ಜನ್ಯ, ಅಸ್ಪೃಶ್ಯತೆ , ಅಸಮಾನತೆ ಮುಂತಾದ ಸಾಮಾಜಿಕ ವ್ಯಾಧಿಗಳ ಕುರಿತಾದ ಸಾವಿರ ಸಾವಿರ ಪುಸ್ತಕಗಳು ಬೀರದ ಪರಿಣಾಮವನ್ನು ‘ ಕಾಟೇರ’ ಅತ್ಯಂತ ಸ್ಪಷ್ಟವಾದ ದೃಶ್ಯ ನಿರೂಪಣೆಯಲ್ಲಿ ಕಟ್ಟಿಕೊಡುತ್ತದೆ. ಹಾಗೆ ನೋಡಿದಲ್ಲಿ ಒಬ್ಬ‌ ಜನಪ್ರಿಯ ಮಾಸ್ ಹೀರೋನಿಂದ ಕೊಡಿಸಿರುವ ಅನೇಕ ಸಾಮಾಜಿಕ ಸಂದೇಶಗಳಿಗೆ ಅದರದ್ದೇ ಆದ ತೂಕವಿದೆ, ಮೌಲ್ಯವಿದೆ ಹಾಗೂ ಸತ್ವವಿದೆ. ಈ ನಿಟ್ಟಿನಲ್ಲಿ ಟಿಪಿಕಲ್ ಕಮರ್ಶಿಯಲ್ ಚಿತ್ರಗಳ ಮಸಾಲೆ ಸೂತ್ರದ ಹಂಗನ್ನು ದಾಟಿನಿಂತ ನಿರ್ದೇಶಕ ತರುಣ್ ಸುಧೀರ್ ಹಾಗೂ ಅದನ್ನು ಸಮರ್ಥವಾಗಿ ಮೆಟ್ಟಿನಿಂತ ನಾಯಕನಟ ದರ್ಶನ್ ,ಜೊತೆಗೆ ಇಂತಹ ಕಥೆಯನ್ನು ನೆಚ್ಚಿ ನಿರ್ಮಾಣ ಮಾಡಿ ಚಿತ್ರವನ್ನು ಅದ್ದೂರಿಯಾಗಿ ತೆರೆ ಮೇಲೆ ತಂದ‌ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್… ಇವರೆಲ್ಲರೂ ಅಭಿನಂದನಾರ್ಹರು.

ಫೋಟೋ ಕೃಪೆ : google

ಅಸಲಿಗೆ ಇದು ಡಿ ಬಾಸ್ ನ‌ ಜನಪ್ರಿಯ ಮಾಮೂಲಿ ಚಿತ್ರಗಳಂತೆ ನಾಯಕನಟನ ಅದ್ದೂರಿ ಇಂಟ್ರಡಕ್ಷನ್ ಸಾಂಗು, ಫ಼್ರೇಮ್ ಟು ಫ಼್ರೇಮ್ ಹೀರೋ ವೈಭವೀಕರಣದ ದೃಶ್ಯಗಳು, ಅಥವಾ ಆತನ ಇಮೇಜಿಗೆ ಮಾಮೂಲಿ ಮೈಲೇಜು‌ ಕೊಡುವ ಅವಾಸ್ತವಿಕ ಘಟನೆಗಳ ದೃಶ್ಯ ಜೋಡಣೆಯಂತಿರದೇ ಜಾತಿ ಪದ್ದತಿಯ ಸೂಕ್ಷ್ಮ‌ಪದರಗಳು, ಮೇಲು‌-ಕೀಳು ವ್ಯವಸ್ಥೆಯ ವಾಸ್ತವ ಚಿತ್ರಣ , ಜಮೀನ್ದಾರೀ‌ ಪದ್ದತಿಯ‌ ಅಮಾನುಷ ಕ್ರೌರ್ಯ, ಭೂ ಸುಧಾರಣೆಯ ಮಹತ್ವ, ಮರ್ಯಾದೆ ಹತ್ಯೆಯ ಹಿಂದಿನ ಮೃಗತ್ವದ ಮನಸ್ಥಿತಿ, ಮೆಲ್ವರ್ಗದವರ ಶೋಷಣೆ, ದಬ್ಬಾಳಿಕೆ ಹಾಗೂ ಅಸ್ಪೃಶ್ಯತೆಯಿಂದುದಿಸಿದ ಅಂತರಾಳದ ಸಂಕಟ ಮುಂತಾದ ಜ್ವಲಂತ ವಿಷಯಗಳನ್ನು ಅತ್ಯಂತ ನವಿರಾಗಿ, ಸೂಕ್ಷ್ಮವಾಗಿ, ಪರಿಣಾಮಕಾರಿಯಾಗಿ ಹಾಗೂ ನೋಡುಗರೆದೆಗೆ ನೇರವಾಗಿ ನಾಟುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಕುಲುಮೆಕಾರ ಕಾಟೇರನಾಗಿ ಇಡೀ ಚಿತ್ರವನ್ನು ‌ಹೆಗಲಮೇಲೆ ಹೊತ್ತೇ ಸಾಗಿರುವ ದರ್ಶನ್ ತಮ್ಮ ಎರಡು ವಿಭಿನ್ನ ಶೇಡುಗಳಲ್ಲಿ ತಮ್ಮೆಲ್ಲಾ ಅಭಿನಯ ಸಾಮರ್ಥ್ಯವನ್ನು ಪ್ರತಿಭೆಯ ಕುಲುಮೆಯಲ್ಲಿ ಅದ್ದಿ ಸತ್ವಯುತ ಕಥೆಗೆ ಪರಿಪಕ್ವವಾಗಿ‌ ಜೀವ ತುಂಬಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶಕನ ಕಥೆಗೆ, ಕಲ್ಪನೆಗೆ, ಕನಸುಗಳಿಗೆ ತನ್ನನ್ನು ತಾನೇ ಒಪ್ಪಿಸಿಕೊಂಡು ಎರಡು ತರಹದ ವಯೋಮಾನದ ಪಾತ್ರಗಳಲ್ಲಿ ಮಾಗಿದ ಅಭಿನಯ ನೀಡಿರುವುದರ ಜೊತೆಗೆ ತಮ್ಮದೇ ಆದ ಖಡಕ್ ಮ್ಯಾನರಿಸಂ‌ ಗಳಿಂದಾಗಿ ಚಿತ್ರದ ಸಂದೇಶವನ್ನು ಅನುಮಾನಕ್ಕೆಡೆಯಿಲ್ಲದೇ ಸಮಾಜಕ್ಕೆ‌ ಮುಟ್ಟಿಸಿದ್ದಾರೆ.

ಇಡೀ‌ ಚಿತ್ರದುದ್ದಕ್ಕೂ ಆವರಿಸಿಕೊಂಡಿರುವ ಮೂರು‌ ಮುಖ್ಯ ಅಂಶಗಳೆಂದರೆ‌ ಎಲ್ಲಾ ಕಾಲಕ್ಕೂ ಪ್ರಸ್ತುತವೆನಿಸುವ ಸತ್ವಯುತ ಕಥೆ ಹಾಗೂ ಇಂತಹ ಸೂಕ್ಷ್ಮ‌ವಿಷಯಗಳನ್ನು ಎಲ್ಲಿಯೂ ನಾಟಕೀಯತೆಗೆ, ವಿವಾದಕ್ಕೆ ಅವಕಾಶ ಕೊಡದಂತೆ‌ ಪರಿಣಾಮಕಾರಿಯಾಗಿ ನಿರೂಪಿಸಿರುವ ನಿರ್ದೇಶಕನ ಕಸುಬುದಾರಿಕೆ . ಕಥೆಗೆ ಬೇಕಾದ ತೂಕವನ್ನು ನಾಯಕ ನಟ ದರ್ಶನ್‌ ಸೇರಿದಂತೆ ಮಿಕ್ಕೆಲ್ಲಾ ಕಲಾವಿದರು ಸಮರ್ಥವಾಗಿ ಅಭಿನಯಿಸುವ ಮೂಲಕ ಹೆಚ್ಚಿಸಿರುವುದು ಒಂದೆಡೆಯಾದರೆ ಚಿತ್ರದ ಆರಂಭದಿಂದ ಅಂತ್ಯದವರೆಗೂ ಎಡಬಿಡದೇ ಕಾಡುವ ಮಾಸ್ತಿಯವರ ಮೌಲ್ಯಯುತವಾದ ಸಂಭಾಷಣೆ.

ಫೋಟೋ ಕೃಪೆ : google

ಭೀಮನಹಳ್ಳಿ ಹಾಗೂ ಮಲ್ಲನಕೆರೆ ಎಂಬ ಎರಡು ಹಳ್ಳಿಗಳಲ್ಲಿನ ಜಮೀನ್ದಾರಿ ಪದ್ದತಿಯ ದಬ್ಬಾಳಿಕೆ, ಊರಿನವರ ಮೇಲಾಗುತ್ತಿರುವ ಶೋಷಣೆ, ಜಾತಿ ಸಂಕೋಲೆಗಳ ದಾರುಣ ಸಂಕಥನ, ಮೇಲ್ಜಾತಿಯ ಹುಡುಗಿ ಕೆಳವರ್ಗದ ಕಾಟೇರನ ಪ್ರೀತಿಗೆ ಸೋಲುವ ನವಿರಾದ ಪ್ರೇಮ, ಭೀಮನಹಳ್ಳಿಯಲ್ಲಿ ಕುಲುಮೆಕಾರನಾಗಿ ಜಮೀನ್ದಾರರಿಗಾಗಿ ಮಚ್ಚು ಮಾಡಿಕೊಡುವ ಕಾಟೇರ ಕೊನೆಗೆ ಅದನ್ನು ಅವರ ವಿರುದ್ಧವೇ ಝಳಪಿಸಬೇಕಾಗಿ ಬಂದ ತಿರುವುಗಳು, ಈ ಮಧ್ಯೆ ಪೊಲೀಸ್, ಕೋರ್ಟ್, ಅಸ್ತಿಪಂಜರಗಳ ತನಿಖೆ, ರಾಜಕೀಯ….ಇತ್ಯಾದಿಗಳೇ ಕಥೆಯ ಹೂರಣ.
ರೈತಶೋಷಣೆಯ ವಿರುದ್ಧ ಸೆಟೆದು ನಿಲ್ಲುವುದರೊಂದಿಗೆ, ಭೂ ಸುಧಾರಣೆಯ ಪರವಾಗಿ “ಉಳುವವನೇ‌ ಭೂಮಿಗೆ ಒಡೆಯ” ಎಂಬ ಜನಜಾಗೃತಿ ಮೂಡಿಸಿದ ಹಾಗೂ ತನ್ನನ್ನೇ ಬಾಲ್ಯದಿಂದಲೂ ಪ್ರೀತಿಸಿದ ಶಾನುಭೋಗರ ಮಗಳು ಕೊಟ್ಟ ಸಾಮಾಜಿಕ ಅರಿವಿನಿಂದಾಗಿ ಇಡೀ ವ್ಯವಸ್ಥೆಯ‌ ವಿರುದ್ಧವೇ ಕಾಟೇರ ಸಿಡಿದು ನಿಲ್ಲುತ್ತಾನೆ. ಕಾಟೇರನನ್ನು ಪ್ರೀತಿಸಿ ಅವನೊಂದಿಗೇ ಬಾಳು ಕಟ್ಟಿಕೊಳ್ಳಲು ಹೆತ್ತವರನ್ನೇ‌ ಬಿಟ್ಟು ಹೋಗುವ ಪ್ರಭಾ ( ಆರಾಧನ) ಕೊನೆಗೆ ತನ್ನವರಿಂದಲೇ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಾಳೆ.

ಭೂಸುಧಾರಣಾ ಕಾಯ್ದೆಯಡಿ‌ ರೈತರಿಗೆ ಭೂಮಾಲೀಕತ್ವದ ಹಕ್ಕುಪತ್ರಗಳನ್ನು‌ ನೀಡುವ ಸಂಧರ್ಭದಲ್ಲಿ ನಡೆದ ಜಮೀನ್ದಾರರ ಪಿತೂರಿಯ ಅಂಗವಾಗಿ ಉತ್ತರದಿಂದ ಇಲ್ಲಿನ ರೈತರನ್ನು ಮುಗಿಸಲು ಬಂದ‌ ನೂರೆಂಟು ಕೊಲೆಪಾತಕಿಗಳನ್ನು ಕಾಟೇರನೊಬ್ಬನೇ ಮುಗಿಸಿ ಊರವರ ಪ್ರಾಣ ಕಾಯುತ್ತಾನೆ. ತನ್ನನ್ನು‌ ಪ್ರೀತಿಸಿದ ತಪ್ಪಿಗಾಗಿಯೇ ಮರ್ಯಾದೆ ಹತ್ಯೆಗೀಡಾದ ನಾಯಕಿಯ ಸೇಡನ್ನು ಊರ ಜನರೆದುರೇ ತೀರಿಸಿಕೊಂಡು ” ಯಾರೂ ಇಲ್ಲಿಯೇ ಇಂತಹ ಕಡೇ ಹುಟ್ಟಬೇಕೆಂದು ಕೇಳಿಕೊಂಡು‌ ಹುಟ್ಟುವುದಿಲ್ಲ. ಮಕ್ಕಳೆಲ್ಲರೂ ದೇವರಿದ್ದಂತೆ. ಅವರಿಗೆ ಜಾತಿಯ ಮುದ್ರೆ ಬದಲು ಪ್ರೀತಿ ಸಮಾನತೆಯ ಮುದ್ರೆ ಒತ್ತಿ ” ಎನ್ನುವ ಸಾಮಾಜಿಕ ಸಂದೇಶವುಳ್ಳ ಮಾತುಗಳನ್ನು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೇಳುವ ಕಾಟೇರನ ಮಾತುಗಳು ಸದಾ ಕಾಲಕ್ಕೂ ಪ್ರಸ್ತುತ.

ಫೋಟೋ ಕೃಪೆ : google

ಹಿರಿಯ ಕಲಾವಿದರಾದ ಶೃತಿ, ಕುಮಾರ್ ಗೋವಿಂದ್, ಅವಿನಾಶ್, ಬಿರಾದರ್, ಅಚ್ಯುತ್ ಕುಮಾರ್ ಮುಂತಾದವರ ಪಕ್ವ ನಟನೆ ಚಿತ್ರದ ಕಥೆಗೆ ಪೂರಕವಾಗಿದ್ದರೆ, ತಾರೆ ಮಾಲಾಶ್ರೀಯವರ ಮಗಳು ಆರಾಧನಾ ತಮ್ಮ‌ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಕಾಟೇರನ ಸಂಗಡಿಗರಾಗಿ ಬಿರಾದರ್ ಹಾಗೂ ಮಾ.‌ರೋಹಿತ್ ರ ಪಾತ್ರಗಳಿಗೆ ಫ಼ುಲ್ ಮಾರ್ಕ್ಸ್. ಮಾಸ್ತಿಯವರ ಡೈಲಾಗ್ಸ್ ಇಡೀ ಚಿತ್ರದ ಆಸ್ತಿ. ಅದರಲ್ಲೂ ‘ಹೊಲೆಮಾರಿ ತರಲಿಕ್ಕೆ ಹೋದ್ರೆ ನಿನ್ನ ಬದುಕಲು ಬಿಡ್ತಾರಾ’.. ಎಂದು ಕಾಟೇರನ‌ ಅಕ್ಕ ಶೃತಿ ಕೇಳಿದ ಪ್ರಶ್ನೆಗೆ ದರ್ಶನ್‌ ಕೊಡುವ ಉತ್ತರ ಈ‌ ನೆಲದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆಗೆ ಹಿಡಿದ‌ ಕನ್ನಡಿಯಂತಿದೆ.

ಹರಿಕೃಷ್ಣ ತಮ್ಮ ಸಂಗೀತದಲ್ಲಿ ಒಂದನ್ನು ಬಿಟ್ಟರೆ ಮಿಕ್ಕ ಯಾವ ಹಾಡು ಸಹ ನೆನಪಿನಲ್ಲಿ ಉಳಿಯದಿರುವ ನೆಗೆಟೀವ್ ಅಂಶವನ್ನು‌‌ ಅದ್ಭುತ ಹಿನ್ನೆಲೆ ಸಂಗೀತದ ಮೂಲಕ ಸರಿದೂಗಿಸಿದ್ದಾರೆ. ಎಪ್ಪತ್ತರ ದಶಕದ ಸನ್ನಿವೇಶಗಳನ್ನು‌ ಮರುಸಷ್ಟಿಸಲು ಸುಧಾಕರ್ ರವರ ಕ್ಯಾಮೆರಾ ಕೈಚಳಕ ಯಶಸ್ವಿಯಾಗಿದೆ.

ಇನ್ನು ಈ ಚಿತ್ರ ಮೊದಲಾರ್ಧ ಅತ್ಯಂತ ವೇಗ ಪಡೆದು ಕುತೂಹಲ ಮೂಡಿಸುತ್ತಲೇ, ದ್ವಿತೀಯಾರ್ಧದಲ್ಲಿ ಅನಗತ್ಯ ಹಾಡು ಹೊಡೆದಾಟಗಳಿಂದಾಗಿ ರಬ್ಬರ್ ನಂತೆ ಎಳೆದುಕೊಂಡು ಹೋಗಿರುವುದು ದೊಡ್ಡ ದೌರ್ಬಲ್ಯ. ಹೀಗಾಗಿಯೇ ಇಡೀ ಚಿತ್ರ ಬರೋಬ್ಬರಿ ಮೂರು ಘಂಟೆಗಳಷ್ಟು ಸುಧೀರ್ಘವಾಗಿದೆ. ನಾಯಕ ತನ್ನ ಬಾಯಲ್ಲಿ ಮಚ್ಚು ಹಿಡಿದು ಎಲ್ಲರನ್ನೂ ಕೊಚ್ಚುವುದು, ಸ್ವಲ್ಪ ವಯಸ್ಸಾದವನ ಗೆಟಪ್ ಗೆ ಬದಲು ದರ್ಶನ್ ರನ್ನು ಮುದುಕನಂತೆ ಮೇಕಪ್ ಮಾಡಿ ತೋರಿಸಿರುವುದು, ಕೆಲವೊಂದು ಲಿಂಕೇ ಇಲ್ಲದ ದೃಶ್ಯಗಳೂ ಸೇರಿದಂತೆ ಕೆಲ ಅತೀ ಸಿನಿಮೀಯ ದೃಶ್ಯಗಳಿಗೆ ಕತ್ತರಿ ಹಾಕಿ ಸಿನಿಮಾವನ್ನು ಟ್ರಿಮ್ ಮಾಡಿದ್ದಲ್ಲಿ ಕಾಟೇರನ ತೂಕ ಇನ್ನಷ್ಟು ಹೆಚ್ಚುತ್ತಿತ್ತು.

ಆದರೂ ಸಾಮಾಜಿಕ ಪ್ರಜ್ಞಾವಂತಿಕೆಯ ಪರವಾಗಿರುವವರೆಲ್ಲರು, ಜಾತಿ ಜಾತಿ ಎಂದು ಬಾಯಿ‌ಬಡಿದುಕೊಂಡು ಸಾಯುತ್ತಲೇ ಇರುವವರು, ಅಸ್ಪೃಶ್ಯತೆಯ ಒಡಲಾಳದ ಸಂಕಟಗಳೇನೆಂಬುದನ್ನು ಅರಿಯದವರು ತೆರೆದ ಮನಸ್ಸಿನಿಂದ ಒಮ್ಮೆ‌ ನೋಡಲೇ ಬೇಕಾದ ಸಿನಿಮಾ… ಕಾಟೇರ.

ಇದು ಸಾಮಾಜಿಕ ಪ್ರಜ್ಞೆಯುಳ್ಳವರ ಹೆಮ್ಮೆ.

ಫೋಟೋ ಕೃಪೆ : google

** ಮರೆಯುವ ಮುನ್ನ **

ಇತ್ತೀಚೆಗೆ ಸಾಮಾಜಿಕ ಪರಿಣಾಮ ಬೀರುವಂತಹ ಸಬ್ಜೆಕ್ಟುಗಳು ಕೇವಲ ತಮಿಳು, ಮಲೆಯಾಳಂ ನಲ್ಲಿ ಹಾಗೂ ಅಲ್ಲಲ್ಲಿ ತೆಲುಗಿನಲ್ಲಿ ಮಾತ್ರವೇ ಬರುತ್ತಿದ್ದವು. ಜೈಭೀಮ್, ಮಾಮಣ್ಣನ್, ಅಸುರನ್, ಕರ್ಣನ್, ನಾರಪ್ಪ…..ಮುಂತಾದ ವಾಸ್ತವ ಪ್ರಜ್ಞೆಯ ಸತ್ವಕಥೆಗಳ ಚಿತ್ರಗಳು ಎಲ್ಲಾ ಭಾಷೆಯಲ್ಲೂ ಯಶಸ್ವಿಯಾಗಿದ್ದಷ್ಟೇ ಅಲ್ಲ, ಜನರಲ್ಲಿ ಅನಿಷ್ಠ ಜಾತಿಪದ್ದತಿಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದವು. ಇದೀಗ ಕನ್ನಡದಲ್ಲಿಯೂ ನಮ್ಮ ಕಾಟೇರ ಆ ಕೊರತೆಯನ್ನು‌‌ ನೀಗಿಸಿದೆ. ನಿಜ ಹೇಳಬೇಕೆಂದರೆ ಅನ್ಯಭಾಷೆಯ ಅಂತಹ ಮಿಕ್ಕೆಲ್ಲಾ ಸಿನಿಮಾಗಳಿಗಿಂತಲೂ ಕನ್ನಡದ ಕಾಟೇರ ಹೆಚ್ಚು ಸಂವೇದನಶೀಲವಾಗಿ, ಪರಿಣಾಮಕಾರಿಯಾಗಿ ಹಾಗೂ ಅದ್ಭುತವಾಗಿ ಮೂಡಿಬಂದಿದೆ. ಇದಕ್ಕಾಗಿ ಇಡೀ ಚಿತ್ರ ತಂಡಕ್ಕೊಂದು‌ ಹ್ಯಾಟ್ಸಾಫ಼್ !

ದರ್ಶನ್ ರ ಇಡೀ ಚಿತ್ರ ಜೀವನದಲ್ಲಿ ಇಲ್ಲಿಯವರೆಗಿನ‌ ಸಿನಿಮಾಗಳೇ ಬೇರೆ, ಕಾಟೇರನ‌ ತೂಕವೇ ಬೇರೆ. ಕಾಟೇರನ ಪಾತ್ರ ಅವರಲ್ಲಿ ಹುದುಗಿದ್ದ ಅದ್ಭುತ ಪ್ರತಿಭೆಯನ್ನು ಸಮರ್ಥವಾಗಿ ಹೊರಹಾಕಿದೆ ಮಾತ್ರವಲ್ಲ, ಒಬ್ಬ ಜನಪ್ರಿಯ ಮಾಸ್ ಹೀರೋ ಆದವನನ್ನು ನಾಡಿನ ಸಾಮಾಜಿಕ ಸಂಸ್ಕೃತಿಗಳ ರಕ್ಷಣೆಗಾಗಿ, ಸಾಮಾಜಿಕ‌ ಪಿಡುಗುಗಳ ಬಗೆಗೆ ಜಾಗೃತಿ ಮೂಡಿಸಲಿಕ್ಕಾಗಿ ಹೇಗೆಲ್ಲಾ ಸಮರ್ಥವಾಗಿ ಉಪಯೋಗಿಸಿಕೊಳ್ಳ ಬಹುದೆಂಬ ಸ್ಪಷ್ಟ ನಿದರ್ಶನ ಈ ಚಿತ್ರದಲ್ಲಿದೆ.

ಲವ್ಯೂ ದ ಎಂಟೈರ್ ಟೀಮ್ ಆಫ಼್ “ಕಾಟೇರ” ಅದರಲ್ಲೂ ವಿಶೇಷವಾಗಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ . !


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW