ನನ್ನ ಅಜ್ಜಿ ಆಕಾಲದಲ್ಲೆಯೇ ಟಿಸಿಎಚ್ ಓದಿದಾಕೆ, ಆದರೆ ಮನುಷ್ಯನ ಸ್ವಭಾವ ಹೇಗಿದೆ ಅಂದ್ರೆ ಹಿತ್ತಲ ಗಿಡ ಮದ್ದಲ್ಲ ಅಂತರಲ್ಲ ಹಾಗೆ ನಮ್ಮನೆಯ ಸಾಧಕಿಯನ್ನು ಬಿಟ್ಟು ಹೊರಗಿನ ಸಾಧಕಿಯರ ಬಗ್ಗೆ ಹೆಮ್ಮೆ ಪಡುತ್ತೇವೆ. ಈ ಕತೆ ಪೂರ್ತಿ ಕಾಲ್ಪನಿಕವಾಗಿದ್ದರೂ, ಅಲ್ಲಲ್ಲಿ ಐತಿಹಾಸಿಕ ವಾಸ್ತವಾಂಶಗಳಿವೆ, ಗುರುರಾಜ ಕುಲಕರ್ಣಿ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಲೇಖನ ತಪ್ಪದೆ ಮುಂದೆ ಓದಿ…
“ಹೊಲ ತಗೊಳ್ಳೋದು ಏನಾತು?” ಎಂದು ಅಜ್ಜಿ ಕೇಳುವುದಕ್ಕೂ ನನಗೆ ಎಚ್ಚರಾಯಿತು. ಈಗ ಕೆಲ ದಿನಗಳಿಂದ ಇಪ್ಪತ್ತೈದು ವರ್ಷಗಳ ಹಿಂದೆ ತೀರಿ ಹೋಗಿದ್ದ ನಮ್ಮ ಅಜ್ಜಿ ಅಂದರೆ ನನ್ನ ತಂದೆಯ ತಾಯಿ – ಅಜ್ಜಿ ನನ್ನ ಕನಸಿನಲ್ಲಿ ಬಂದು “ಹೊಲ ತಗೋ” “ಹೊಲ ತಗೋ” ಎಂದು ತಲೆ ತಿನ್ನುತ್ತಿದ್ದಾಳೆ.
ದೇಶದ ಖ್ಯಾತ ಪತ್ರಿಕೆಯ ವರದಿಗಾರಳಾಗಿ ನಾನು ಒಂದಿಷ್ಟು ಹೆಸರು ಮಾಡಿಕೊಂಡಿದ್ದೇನೆ. ಪತ್ರಿಕೆಯಲ್ಲಿ ಬೈಲೈನ್ ನಲ್ಲಿ ನನ್ನ ಹೆಸರು ಬಂದಿರುತ್ತಿದ್ದದ್ದರಿಂದ ಒಂದಿಷ್ಟು ಜನರಿಗೆ ನನ್ನ ಬಗ್ಗೆ ಗೊತ್ತಿದೆ. ನಾನು ಮಾಡಿದ ವರದಿಗಳಿಗಾಗಿ ಒಂದೆರಡು ಬಹುಮಾನಗಳೂ ಬಂದಿವೆ. ಮೂವತ್ತರ ಸನಿಹ – ಸನಿಹ ಬಂದಿರುವ ನಾನು ಈಗಾಗಲೇ ಕಾರು ಕೊಂಡು, ಫ್ಲ್ಯಾಟಿಗೆ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿ ಇಟ್ಟಿದ್ದೇನೆ. ಅವ್ವ- ಅಪ್ಪನಿಗೆ ನನ್ನ ವಿಷಯ ಗೊತ್ತಿರುವುದ್ದರಿಂದ ಅವರೇನೋ ವಿಚಾರ ಮಾಡದಿದ್ದರೂ, ಸಂಬಂಧಿಕರೂ ಪರಿಚಿತರೂ “ಯಾವಾಗ ಬುಂದೇ ಊಟ ಹಾಕಿಸುತ್ತೀ?” ಎಂದು ಮದುವೆಯ ಬಗ್ಗೆ ಕೇಳುತ್ತಿರುತ್ತಾರೆ. ಅವರೆಲ್ಲರಿಗಿಂತ ಒಂದೆರಡು ತಲೆಮಾರು ಹಿಂದಿನವಳಾದ ಅಜ್ಜಿ ಮದುವೆ ಮಕ್ಕಳ ಬಗ್ಗೆ ನನ್ನನ್ನು ಕೇಳದೇ ʼಹೊಲ ತಗೋʼ ಅಂತ ನನಗೆ ಗಂಟು ಬಿದ್ದಿರುವುದು ಒಂಚೂರು ಸೋಜಿಗದ ವಿಷಯವೇ. ಅಜ್ಜಿ ನಾನು ತುಂಬಾ ಚಿಕ್ಕವಳಿದ್ದಾಗಲೇ ತೀರಿ ಹೋಗಿದ್ದರಿಂದ ನನ್ನಲ್ಲಿರುವ ಅವಳ ನೆನಪು ಅತ್ಯಲ್ಪ. ಅವಳು ತೀರಿಕೊಂಡ ಎಷ್ಟೋ ವರ್ಷಗಳ ನಂತರವೂ ಅವಳ ಕೈಯ್ಯಲ್ಲಿ ಕಲಿತವರು “ಭಾರತಿ ಅಕ್ಕೋರು” ಎಂದು ಅವಳನ್ನು ನೆನೆಸಿಕೊಳ್ಳುತ್ತಿದ್ದುದನ್ನು ನೋಡಿದ್ದೇನೆ. ನನ್ನ ಅಜ್ಜ ಬಹು ಬೇಗ ತೀರಿಹೋಗಿದ್ದರಿಂದ ಅಜ್ಜಿಯೊಬ್ಬಳೇ ಕಷ್ಟಪಟ್ಟು ಅಪ್ಪನನ್ನು ಬೆಳೆಸಿದ್ದಳಂತೆ. ಅಪ್ಪನನ್ನೂ ಶಿಕ್ಷಕನಾಗಿ ಮಾಡಿ, ಅವನಿಗೆ ಮದುವೆ ಮಾಡಿ ತನ್ನ ಜವಾಬ್ದಾರಿ ತೀರಿಸಿಕೊಂಡಿದ್ದಳು. ನಮ್ಮಜ್ಜನೂ ಮಾಸ್ತರಿಕೆ ಮಾಡಿದ್ದನಂತೆ. ಹೀಗಾಗಿ ಹಿಂದೆಂದೋ ಒಕ್ಕಲುತನದ ಮನೆತನವಾಗಿದ್ದರೂ ಈಗ ನಮ್ಮ ಕುಲಕಸುಬು ಮಾಸ್ತರಿಕೆಯೇ ಆಗಿಹೋಗಿದೆ.. ಹೀಗಾಗಿ ಭಾರತಿ ಅಕ್ಕೋರು ಎಂದು ಹೆಸರಾಗಿದ್ದ ನಮ್ಮಜ್ಜಿ ನನಗೆ ಕೃಷಿಕಳಾಗು ಎಂದು ಕನಸಿನಲ್ಲಿ ದುಂಬಾಲು ಬೀಳುವುದು ಸೋಜಿಗವಲ್ಲವೇ?
ಈ ವಿಷಯವನ್ನು ನನ್ನ ಹುಡುಗ ಸಂದೀಪನೊಂದಿಗೆ ಚರ್ಚಿಸಬೇಕೆಂದಿದ್ದರೆ, ಅವನು ಅಮೇರಿಕದಲ್ಲಿ ತನ್ನ ಪಿಎಚ್ ಡಿ ಪ್ರಬಂಧಕ್ಕೆ ಕೊನೆಯ ತಿದ್ದುಪಡಿ ಮಾಡುತ್ತಿದ್ದಾನೆ.
ಸಂದೀಪ, ನಾನು ಶಾಲೆಯಿಂದಲೇ ಕ್ಲಾಸ್‌ಮೇಟುಗಳು. ಪಿಯುಸಿಯಲ್ಲಿಯೂ ಜೊತೆಗೇ ಓದಿದ್ದು. ಆವಾಗಿನಿಂದಲೇ ನಮ್ಮದು ಸ್ನೇಹಕ್ಕಿಂತ ಹೆಚ್ಚಿನ ಅನುಬಂಧ. ಪಿಯುಸಿ ಮುಗಿದ ಮೇಲೆ ಅವನು ಎಂಬಿಬಿಎಸ್ ಓದಲು ಹೋದರೆ ನಾನು ನನ್ನ ಕನಸಿನ ಪತ್ರಿಕೋದ್ಯಮ ಓದಲು ತೊಡಗಿದ್ದೆ. ಡಿಗ್ರೀ ಓದುವ ದಿನಗಳಲ್ಲೂ ಸಹ ನಮ್ಮ ಸಹಚರ್ಯ ಮುಂದುವರೆದಿತ್ತು. ನಾನು ಪತ್ರಕರ್ತೆಯಾಗಿ ಉದ್ಯೋಗ ಪ್ರಾರಂಭಿಸಿದೆನಾದರೂ ಅವನು ಎಂಬಿಬಿಎಸ್ ಮುಗಿಸಿ, ಮನೋವಿಜ್ಞಾನದಲ್ಲಿ ಎಂ ಡಿ ಮಾಡಿ, ಈಗ ಪಿಎಚ್‌ಡಿ ಮಾಡಲು ಅಮೇರಿಕೆಗೆ ಹೋಗಿದ್ದಾನೆ. “ಅಲ್ಲೋ, ಪಿಎಚ್ ಡಿ ಮಾಡಿದರ ನಿನ್ನ ಹೆಸರಿನ ಮುಂದ ಡಾಕ್ಟರ್-ಡಾಕ್ಟರ್ ಎಂದು ಎರಡೆರಡು ಉಪಾಧಿ ಬರತಾವೇನು? ಇಲ್ಲ… ಹೌದಲ್ಲ? ಮತ್ತ ಉದ್ದಕ ಯಾಕ ಓದತೀ? ವಾಪಸ್ ಬಾ” ಎಂದು ಫೋನು ಮಾಡಿದಾಗಲೆಲ್ಲ ನಾನು ಹೇಳುತ್ತಿರುತ್ತೇನೆ.
ಫೋಟೋ ಕೃಪೆ : google
“ಮೊನ್ನೆ ಮಹಿಳಾ ದಿನದಂದು ಮಹಿಳಾ ಸಾಧಕಿಯರ ಬಗ್ಗೆ ಬರೆದಿದ್ದೆಲ್ಲಾ ಭಾಳ ಛಲೋ ಆಗಿತ್ತು. ಅದು ಆ ಕವಿತಾ ಮಿಶ್ರಾ ಎನ್ನುವ ಹೆಣ್ಣುಮಗಳ ಬಗ್ಗೆ ಬರೆದದ್ದು ಭಾಳ ಭಾಳ ಚನ್ನಾಗಿತ್ತು” ಎಂದು ಅಜ್ಜಿ ಒಂದು ಕ್ಷಣ ತಡೆದಳು. “ಏನು, ನೀನು ನಾ ಬರದದ್ದ ಆ ಇಂಗ್ಲೀಷ ಪೇಪರಿನ್ಯಾಗಿಂದು ಓದಿದಿ? “ ಎಂದು ಅಚ್ಚರಿಯಿಂದ ಕೇಳಿದೆ. ನನಗೆ ಅಜ್ಜಿಯ ನೆನಪು ಎಂದರೆ ಅವಳೊಬ್ಬ ಸುಕ್ಕುಗಟ್ಟಿದ, ಮಾಸಿದ ದಿನ ಬಳಕೆಯ ಸೀರೆಯಲ್ಲಿಯೇ ಇರುತ್ತಿದ್ದ ಮುದುಕಿ. ಅವಳಿಗೆ ಇಂಗ್ಲೀಷು ಓದಲು ಬರುತ್ತಿತ್ತು ಎನ್ನುವುದು ನನ್ನ ಕಲ್ಪನೆಯಲ್ಲಿ ಇರಲಿಲ್ಲ. “ಹೂಂ ಮತ್ತ….ನನಗೇನ ಇಂಗ್ಲೀಷು ಬರುದುಲ್ಲ ಅಂತ ಅನಕೊಂಡೀ ಏನ?” ಎಂದು ಜಬರಿಸಿ, “ನಾನು ಆಗಿನ ಕಾಲದ ಟಿಸಿಎಚ್ ಓದಿಕೊಂಡಾಕಿ. ಮಕ್ಕಳಿಗೆ ಇಂಗ್ಲೀಷು ಪಾಠನೂ ಮಾಡಿದಾಕಿ. ಅಷ್ಟ ಯಾಕ ನಿನಗ ಈಗ ಮರತೈತಿ ಅನಸತ್ತ ನಿನಗೂ ಸಹಿತ ಎಬಿಸಿಡಿ ಕಲಿಸಿದಾಕಿ ಕೂಡ ನಾನ” ಅಂದಳು.
ನನಗೋ ಏನೂ ನೆನಪಿರಲಿಲ್ಲ “ಅಲ್ಲಾ, ಹೆಣಮಕ್ಕಳಿಗೆ ಅಷ್ಟ ಯಾಕ, ಗಂಡು ಹುಡುಗರನ್ನ ಕೂಡ ಸಾಲಿಗೆ ಕಳಿಸಿ, ಕಲಿಸಲಾರದ ಕಾಲದಾಗ ಹುಟ್ಟಿದ ನೀನು, ಅದ್ಹೆಂಗ ಬ್ಯಾರೆಯವರಿಗೆ ಇಂಗ್ಲೀಷು ಕಲಿಸುವಷ್ಟು ಶ್ಯಾಣ್ಯಾಕಿ ಆದಿ?” ಎಂದೆ. ಅದಕ್ಕೆ ಅವಳು, “ನನ್ನ ಕತಿನೂ ಏನು ಕಡಿಮಿ ಇಲ್ಲ…ನೀನು ಬರೆದ ಆ ಮಹಿಳಾ ಸಾಧಕಿಯರಕಿಂತ ಒಂದು ಗುಂಜಿ ಹೆಚ್ಚಿಗೆ ಅದ” ಅಂದಳು. ನನಗೂ ಅಜ್ಜಿಯ ಜೀವನದ ವಿವರಗಳು ಚೂರು ಪಾರಾಗಿ ಗೊತ್ತಿದ್ದವು. ಆಕಿ ಪಟ್ಟ ಕಷ್ಟಗಳ ಕತೆಗಳು ನಮ್ಮ ಮನೆಯ ಮೌಖಿಕ ಸಾಹಿತ್ಯದ ಭಾಗವೇ ಆಗಿದ್ದವು. ಆದರೆ ಹಿತ್ತಲ ಗಿಡ ಮದ್ದಲ್ಲ ನೋಡಿ, ಸಾಧಕಿಯರನ್ನು ಹುಡುಕಿಕೊಂಡು ಹೋಗುತ್ತೇವೆ. ಹೊರತು ನಮ್ಮವರ, ನಮ್ಮ ಸುತ್ತ-ಮುತ್ತಲೇ ಇರುವವರ ಬಗ್ಗೆ ಹೆಮ್ಮೆ ಪಡುವದಿಲ್ಲ ಎಂದು ನೆನೆಸಿಕೊಂಡು ನಾನೇ ಕಸಿವಿಸಿಗೊಂಡೆ. ಆದರೂ ಸಾವರಿಸಿಕೊಂಡು, “ಅಜ್ಜಿ, ಉಳದದ್ದು ಇರಲಿ, ನೀ ಇಂಗ್ಲೀಷು ಹೆಂಗ ಕಲತಿ ಅನ್ನೂದನ್ನ ಹೇಳು” ಎಂದೆ.
ಅಜ್ಜಿ “ಅದನ್ನ ಹೆಂಗ ಕಲತಿ, ಇದನ್ನ ಹೆಂಗ ಕಲತಿ ಅಂತ ಕೇಳಿದರ ಅದನಷ್ಟ ಹೇಳಿ ಮುಗಸೂದಕ್ಕ ಆಗೂದುಲ್ಲ. ನಾನರ ಮಾಸ್ತರಿಕಿ ಮಾಡಿದ ಹೆಣಮಗಳು- ಒಂದು ಸಲ ಮಾತಾಡಾಕ ಚಾಲು ಮಾಡಿದರ ಪಿರಿಯಡ್ಡಿನ ಗಂಟೆ ಹೊಡಿಯುತನಕಾ ನಿಲ್ಲಿಸುವಾಕಿ ಅಲ್ಲ. ನೀನರ ಈಗಿನ 180 ಅಕ್ಷರದಾಗ ಸುದ್ದಿ ಮುಗುಸುವ ಟ್ವಿಟ್ಟರ್ ಕಾಲದ ಹುಡಿಗಿ.
ನನ್ನ ಕತಿ ಪೂರ್ತಿ ಹೇಳತೇನಿ ಕೇಳತಿದ್ದರ ಪೂರ್ತಿಕೇಳು, ಇಲ್ಲಾತಂದರ ಎದ್ದು ನಡಿ” ಎಂದು ಸೆಟಗೊಂಡಳು. ಅವಳನ್ನು ಸಮಾಧಾನ ಮಾಡಿ, ಅವಳ ಪೂರ್ತಿ ಕತೆ ಕೇಳಲು ತಯಾರಾದೆ.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಅವಳು ಹೇಳಹತ್ತಿದಳು “ನಾನು ನಿಮ್ಮಜ್ಜನ್ನ ಮದವ್ಯಾಗಿ ಬಂದಾಗ ದಣೇ ಹದಿನಾಕು ವರ್ಷದ ಹುಡಿಗಿ. ನಿಮ್ಮಜ್ಜನಿಗೋ ಮೂವತ್ತು-ಮೂವತ್ತೈದರ ವಯಸ್ಸು. ಅದಾಗಲೇ ಒಂದು ಮದುವೆಯಾಗಿ ಹೆಂಡತಿ ಸತ್ತು ಹೋಗಿದ್ದಳು. ನಾನು ಅವನಿಗೆ ಎರಡನೇ ಹೆಂಡತಿ. ನಿಮ್ಮ ಅಜ್ಜನೂ ಸಾಲಿ ಮಾಸ್ತರನೇ ಇದ್ದ. ಮದುವಿಗಿಂತ ಮೊದಲು ಸ್ವಾತಂತ್ರ್ಯ ಚಳುವಳಿಯೊಳಗೂ ಭಾಗವಹಿಸಿದ್ದನಂತ. ಜೈಲಿಗೂ ಹೋಗಿ ಬಂದಿದ್ದನಂತ. ಸ್ವಾತಂತ್ರ್ಯ ಬಂದ ನಂತರ ಊರಿನ್ಯಾಗ ಸಾಲಿ ಶುರು ಮಾಡಿ ಮಾಸ್ತರಿಕಿ ಮಾಡಿಕೊಂಡು ಇದ್ದ. ನಾನು “ಯಾಕಜ್ಜಿ, ಸ್ವಾತಂತ್ರ್ಯಕ್ಕ ಹೋರಾಡಿದವರು ಭಾಳ ಮಂದಿ ಸ್ವಾತಂತ್ರ್ಯ ಬಂದ ಮ್ಯಾಲ ಪುಢಾರಿಗಿರಿ ಮಾಡಿಕೊಂಡು ಸರಕಾರದಾಗ ಜಬರದಸ್ತ ಪದವಿ ಪಡಕೊಂಡಿದ್ದರ ನಿನ್ನ ಗಂಡ ಯಾಕ ಮಾಸ್ತರಿಕಿಗೆ ಗಂಟು ಬಿದ್ದಾ?” ಎಂದು ಕೇಳಿದೆ. ಅದಕ್ಕೆ ಅವಳು “ಅವ ಆದರ್ಶವಾದಿ ಇದ್ದ, ಮುಗ್ಧ ಇದ್ದ. ಲಫಂಗತನ ಮಾಡುದು ಅವಗ ಗೊತ್ತಿರಲಿಲ್ಲ. ದೇಶಕ್ಕ, ಸಮಾಜಕ್ಕ ಸೇವಾ ಮಾಡಬೇಕು ಅಂದರ ಅಧಿಕಾರ ಬೇಕು ಎನ್ನುವುದು ಸರಿ ಅಲ್ಲ ಅಂತ ಹೇಳತಿದ್ದ. ಗೆಳ್ಯಾರನ್ನ ಸೇರಿಸಿಗೊಂಡು ಸ್ವಂತ ರೊಕ್ಕಾ ಹಾಕಿ ಊರಾಗ ಸಾಲಿ ಶುರು ಮಾಡಿದ್ದ. ಮನಿಯೊಳಗ ದೊಡ್ಡವರನ್ನೂ-ಸಣ್ಣವರನ್ನೂ ಸೇರಿಸಿ ಸಂಜಿಕ ಪಾಠ ಹೇಳಿಕೊಡತಿದ್ದ. ಮದುವೆಯಾಗಿ ಬಂದ ನನಗೂ ಪಾಠ ಹೇಳಿ ಕೊಡತಿದ್ದ. ತನ್ನ ಆದರ್ಶದ ಪ್ರಭಾವದೊಳಗ ನನ್ನನ್ನೂ ತೊಡಗಿಸಿಕೊಂಡಿದ್ದ. ನನ್ನದೂ ಸಣ್ಣ ವಯಸ್ಸು, ಲೋಕಾನುಭವ ಇಲ್ಲದ ಮನಸ್ಸು….ಅವನ ಆದರ್ಶದ ಕನಸಿನೊಳಗ ಸೇರಿ ಹೋತು. ಆದರ ಕನಸು ಹರಿದು ವಾಸ್ತವದ ಕಠೋರತೆ ಮುಂದೆ ಬರಲು ಎಷ್ಟು ಹೊತ್ತು ಬೇಕು? “ ಎಂದು ಉಸಿರು ತೆಗೆದುಕೊಳ್ಳಲು ನಿಂತಳು. ನಾನು “ಕನಸು ಹರೀತಾ? ಯಾಕ?” ಎಂದು ಉದ್ವೇಗದಿಂದ ಕೇಳಿದೆ.
ಅವಳು, “ ಅದಿರಲಿ, ಮೊದಲು ನಾನು-ನಿಮ್ಮಜ್ಜ ವಯಸ್ಸಿನ್ಯಾಗ ಎಷ್ಟು ಮುಗ್ಧರೂ, ಆದರ್ಶವಾದಿಗಳೂ ಆಗಿದ್ದೆವೆಂತ ಹೇಳತೇನಿ ಕೇಳು. ನಿಮ್ಮ ಅಜ್ಜನ ಕಡೆ ನಾಲ್ಕೈದು ತಲೆಮಾರುಗಳಿಂದ ಒಂದೊಂದೇ ಸಂತಾನ. ಹಿಂಗಾಗಿ ಆಸ್ತಿ ಭಾಗವಾಗದೇ ನಿಮ್ಮಜ್ಜನಿಗೇ ಪಿತ್ರಾರ್ಜಿತವಾಗಿ ದೊಡ್ಡ ಆಸ್ತಿಯೇ ಬಂದಿತ್ತು. ಇಡೀ ಓಣಿಯ ತುಂಬ ನಮ್ಮದೇ ಕಳ್ಳು-ಬಳ್ಳಿಯ ಗಡ್ಡಿಯ ಮನೆತನಗಳಿದ್ದವಾದರೂ ಎಲ್ಲರಿಗೂ ಪಾಲಾಗುತ್ತ ಬಂದು ಅವರಿಗೆಲ್ಲಾ ನಮಗಿಂತ ಕಡಿಮೆ ಆಸ್ತಿಯೇ ಉಳಿದಿತ್ತು. ಹಿಂಗಾಗಿ ನಿಮ್ಮಜ್ಜನ ಮೇಲೆ ಉಳಿದವರಿಗೆ ಹೊಟ್ಟೆಕಿಚ್ಚು. ನಿಮ್ಮಜ್ಜನಿಗೆ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ-ಅಮ್ಮ ತೀರಿಕೊಂಡಿದ್ದರಿಂದ ಅವನು ಆಡಿದ್ದೇ ಆಟವಾಗಿತ್ತು. ನಮ್ಮ ಮದುವೆಯಾದ ಮೇಲೆ ನನಗೂ ಆದರ್ಶದ ಹುಚ್ಚು ಹಿಡಿಸಿದ್ದನಾದ್ದರಿಂದ ನಾನೂ ಅವನ ತಾಳಕ್ಕೇ ಕುಣಿಯುತ್ತಿದ್ದೆ. ಇಲ್ಲವಾದರೆ- ಅದೆಷ್ಟೋ ಎಕರೆ ಹೊಳೆದಂಡೆಯ
ಹೊಲಗಳನ್ನು ವಿನೋಭಾ ಭಾವೆಯವರ ಭೂದಾನ ಚಳುವಳಿಯಲ್ಲಿ ಭೂಮಿ ಇಲ್ಲದವರಿಗೆ ದಾನಮಾಡಿ ಹೆಮ್ಮೆ ಪಡುತ್ತಿದ್ದೆವಾ?” ಎಂದಳು.
ನಾನು “ಏನು? ನೀವು ಭಾವೆಯವರ ಭೂದಾನ ಚಳುವಳಿಯಲ್ಲಿ ಭೂದಾನ ಮಾಡಿದ್ದಿರಾ?” ಎಂದು ಅಚ್ಚರಿಯಿಂದ ಕೇಳಿದೆ.
ಅಜ್ಜಿ “ಭೂದಾನ ಮಾಡಿದ್ದಷ್ಟೇ ಅಲ್ಲ, ಕರ್ನಾಟಕದಿಂದ ಭೂದಾನ ಚಳುವಳಿಯ ಮಹಿಳಾ ಕಾರ್ಯಕರ್ತೆಯರ ತಂಡದಲ್ಲಿ ಭಾಗವಹಿಸಿ, ಸರ್ವೋದಯ ಸಮ್ಮೇಳನಕ್ಕೆ ಕೂಡ ಹೋಗಿದ್ದೆ. ಸರ್ವೋದಯ ಚಳುವಳಿಯ ಮೂಲಕ ನಾವು ಭೂಮಾಲೀಕರಿಂದ ಸುಮಾರು ಹತ್ತು ಸಾವಿರ ಎಕರೆ ಭೂಮಿಯನ್ನು ದಾನಮಾಡಿಸಿದ್ದೆವು. ಆದರೆ ಕೆಲವೇ ದಿನಗಳಲ್ಲಿ ನಾವು ಮಾಡಿದ ಕೆಲಸ ಎಷ್ಟು ಮೂರ್ಖತನದ್ದೆಂದು ಗೊತ್ತಾಗಿ, ಆ ನಮ್ಮ ದಾಯಾದಿಗಳ ಮುಂದೆ ನಗೆಪಾಟಲಾಗುವ ಸರದಿ ಬಂತು” ಎಂದಳು.
ನಾನು “ಏನು ಅವರ ಮುಂದೆ ನಗೆಪಾಟಲಿಗೀಡಾದಿರಾ? ಯಾಕ?” ಎಂದು ಅಚ್ಚರಿಯಿಂದ ಕೇಳಿದೆ.
ಅಜ್ಜಿ “ನಾವು ದಾನ ಕೊಟ್ಟ ಜಮೀನನ್ನು ದಾನ ತೆಗೆದುಕೊಂಡಿದ್ದ ಕೂಲಿಕಾರರು ಅದನ್ನು ಒತ್ತೆ ಇಟ್ಟು ಅದರ ಮೇಲೆ ಸಾಲ ಮಾಡಿ, ಅದನ್ನು ಬಿಡಿಸಿಕೊಳ್ಳಲಾಗದೇ ಹೊಲ ಮಾರಿದರು. ಇದ ನಿಮ್ಮಜ್ಜನ ದಾಯಾದಿಗಳ ಆ ಹೊಲಗಳನ್ನು ಸಸ್ತಾದಾಗ ಹೊಡಕೊಂಡರು. ಅಷ್ಟ ಅಲ್ಲ ನಾವು ಗಂಡ-ಹೆಂಡತಿಯ ಹುಚ್ಚತನ ನೋಡಿ ಆಡಿಕೊಂಡು ನಕ್ಕರು.” ಎಂದು ಅಜ್ಜಿ ವಿಷಾದದಿಂದ ನಿಟ್ಟುಸಿರು ಬಿಟ್ಟಳು. ನಾನು ಕೂಡ ಅವಳ ವಿಷಾದದ ನಿಟ್ಟುಸಿರಿಗೆ ದನಿ ಸೇರಿಸಿದೆ.
ಅಜ್ಜಿ ಮುಂದುವರೆಸಿ, “ಆದರ ಅವು ನನ್ನ ಜೀವನದ ಅತ್ಯಂತ ಖುಷಿಯ ದಿನಗಳು. ನಿಮ್ಮಪ್ಪ ಹುಟ್ಟಿ, ಮನಿ-ಮನಸ್ಸು ತುಂಬ ಸಂತೋಷ ತುಂಬಿಸಿದ್ದ. ಅದೆಷ್ಟೋ ಹೊಲ ದಾನ ಕೊಟ್ಟರೂ ನಮಗಾಗಿ ಉಳಿಸಿಕೊಂಡಿದ್ದ ಹನ್ನೆರಡು ಎಕರೆ ಹೊಲದಲ್ಲಿ ಕಾಳು ಕಡಿ ಬರತಿದ್ವು. ನಿಮ್ಮಜ್ಜ ಹೊಲಮನಿಯ ದೇಖರೇಕಿ ನೋಡುತ್ತ, ಸಾಲಿಯನ್ನೂ ನಡೆಸುತ್ತ ಇದ್ದ. ಆಧುನಿಕ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಹೊಲದಲ್ಲಿ ಅದರಂತೆ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದ. ಅವನನ್ನು ಪ್ರಗತಿಪರ ರೈತ ಎಂದು ಎಲ್ಲರೂ ಗುರ್ತಿಸುತ್ತಿದ್ದರು. ಮನೆಯಲ್ಲಿ ಹಾಲು-ಹೈನು, ಆಳು-ಕಾಳುಗಳಿಗೆ ಕಡಿಮೆಯಿರಲಿಲ್ಲ. ನಮ್ಮ ಮನೆಯ ಹೊರಗಿನ ಕೋಣೆಯಲ್ಲಿ ʼಸರಸ್ವತಿ ಭಂಡಾರʼ ಎಂದು ಬೋರ್ಡು ಬರೆಸಿದ್ದ ನಿಮ್ಮಜ್ಜ, ಉಚಿತ ಗ್ರಂಥಾಲಯ ತೆಗೆದು, ಊರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಪ್ರಯತ್ನ ನಡೆಸಿದ್ದ. ಅದಕ್ಕಾಗಿ ಎಲ್ಲೆಲ್ಲಿಂದಲೋ ಪುಸ್ತಕಗಳನ್ನು ತರಿಸಿದ್ದ. ದಿನ ಪತ್ರಿಕೆಗಳನ್ನು ತರಿಸುತ್ತಿದ್ದ. ನಾನೂ ಕೂಡ ನಿಮ್ಮಜ್ಜನ ಹತ್ತಿರ ಓದು ಬರಹ ಕಲಿತು, ಅವನು ನಡೆಸುತ್ತಿದ್ದ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದೆ. ಅವನದೇ ಸ್ಫೂರ್ತಿಯಿಂದ ನಾನು ಮಹಿಳಾಮಂಡಳದ ಮೂಲಕ ಏನೇನೋ ಚಟುವಟಿಕೆ ಹಮ್ಮಿಕೊಂಡಿರುತ್ತಿದ್ದೆ.” ಎಂದು, ಆ ಕಳೆದು ಹೋದ ದಿನಗಳ ಸುಖವನ್ನು ನೆನೆಸಿಕೊಳ್ಳುತ್ತಾ ಹೇಳಿದಳು. “ಆದರೆ ನಮ್ಮ ಸಂತೋಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಮ್ಮ ಜೀವನದ ದಿಕ್ಕು ಒಮ್ಮಿಂದೊಮ್ಮೆಲೇ ಬದಲಾಯಿತು.” ಎಂದು ಎನ್ನುತ್ತಲೇ ನನಗೆ ಎಚ್ಚರಾಯಿತು. ಎಚ್ಚರವಾದರೂ ನಾನು ನನ್ನ ಅಜ್ಜ ಅಜ್ಜಿಯರ ದಾಂಪತ್ಯದ ಬಗ್ಗೆಯೇ ಯೋಚಿಸುತ್ತಿದ್ದೆ. ಗಂಡು ಹೆಣ್ಣಿನ ಯಜಮಾನ, ಹೆಂಡತಿಯಾದವಳಿಗೆ ಅಡಿಗೆಮನೆಯೇ ಸರಿಯಾದ ಜಾಗ ಎನ್ನುವ ನಂಬಿಕೆ ಸಾಮಾನ್ಯವಾಗಿರುತ್ತಿದ್ದ ದಿನಗಳಲ್ಲಿ ಅಜ್ಜ ತನ್ನ ಹೆಂಡತಿಗೆ ಅಕ್ಷರಾಭ್ಯಾಸ ಮಾಡಿಸಿ, ಓದಿನ ಹವ್ಯಾಸ ಬೆಳೆಸಿ ಅವಳನ್ನು ತನ್ನ ಸಮಾಜಸೇವೆಯ ಕೆಲಸಗಳಲ್ಲಿ ಪಾಲುದಾರಳನ್ನಾಗಿ ಮಾಡಿಕೊಂಡಿದ್ದರ ಬಗ್ಗೆ ಹೆಮ್ಮೆಯಾಯಿತು. ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಬೀಸಿದ ಹೊಸಗಾಳಿಯಲ್ಲಿ ಅಂದಿನ ಯುವಕರಿಗೆ ಆದರ್ಶದ ಕನಸು ಬಿತ್ತಿದ್ದ ಅಂದಿನ ನಾಯಕರ ಬಗ್ಗೆ ಗೌರವ ಮೂಡಿತು.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಅದ್ಯಾವುದೋ ಹಗರಣ ಹೊರಬಿದ್ದು ಅದರ ವರದಿಗಳನ್ನು ಬರೆಯುವುದರಲ್ಲಿ ನಾನು ಮುಳುಗಿಹೋದೆ. ಅಜ್ಜಿಯ ವಿಷಯ ನೆನಪಿನಿಂದ ಒಂಚೂರು ಆಚೆ ಹೋಗಿತ್ತು. ಕೆಲಸದ ಒತ್ತಡ ಕಡಿಮೆಯಾದ ತಕ್ಷಣ ಅಜ್ಜಿ “ಹೊಲಾ ತಗೊಳ್ಳೋದು ಎಲ್ಲಿಗೆ ಬಂತು?” ಎಂದು ಕನಸಿನಲ್ಲಿ ಹಾಜರು.
ನಾನು “ಹೊಲದ ವಿಷಯ ಇರಲಿ, ನಿನ್ನ ಜೀವನದ ಕತಿ ಹೇಳ್ತಾ ಇದ್ದೀಯಲ್ಲ ಅದನ್ನ ಮುಂದುವರೆಸು” ಎಂದೆ.
ಅಜ್ಜಿ ನಾನು ಪ್ಲೇಟ್ ಬದಲಿಸಿದ್ದಕ್ಕೆ ಒಂಚೂರು ಅಸಮಾಧಾನ ಗೊಂಡರೂ ತನ್ನ ಕತೆಯನ್ನು ನಾನು ಆಸಕ್ತಿಯಿಂದ ಕೇಳುತ್ತಿದ್ದುದು ತಿಳಿದು ಉತ್ಸಾಹಗೊಂಡು ಹೇಳತೊಡಗಿದಳು.
“ನಮ್ಮ ಜೀವನದಲ್ಲಿ ತಿರುವು ಬಂತು ಅಂತಾ ಹೇಳಿದ್ದೆನಲ್ಲಾ …. ಅದು ನಿಮ್ಮಜ್ಜನಿಗೆ ಕ್ಷಯರೋಗ ರೂಪದೊಳಗ ಬಂತು. ಆವಾಗ ಕ್ಷಯರೋಗ ಒಂದು ಮಾರಣಾಂತಿಕ ರೋಗ ಅಂತಾನೆ ತಿಳಿದುಕೊಂಡಿದ್ದುರು. ಅವನನ್ನು ತೋರಿಸಲು ನಾನು ಯಾವು ಯಾವುದೋ ಊರಿಗೆ ಅಡ್ಡಾಡಿದೆ. ಹುಬ್ಬಳ್ಳಿಯ ಕೆಎಂಸಿನ್ಯಾಗ ಆಡ್ಮಿಟಮಾಡಿ ತಿಂಗಳಾನುಗಟ್ಟಲೆ ಇದ್ದರೂ ಬದುಕಲಿಲ್ಲ. ಹುಬ್ಬಳ್ಯಾಗ ಅವನ ಅಂತ್ಯ ಕರ್ಮ ಮುಗಿಸಿ ಹೊರಳಿ ಊರಿಗೆ ಬಂದರ, ಅಲ್ಲಿ ನೋಡಿದ್ದೇನು?” ಎಂದು ಉಸಿರು ತೆಗೆದುಕೊಳ್ಳಲು ನಿಂತಳು.
ನಾನು ಆತಂಕ ಕುತೂಹಲದಿಂದ “ಏನಾಗಿತ್ತು?” ಎಂದು ಕೇಳಿದೆ. ಅವಳು ಸುಧಾರಿಸಿಕೊಂಡು “ನಿಮ್ಮಜ್ಜ ನನಗ ಗಂಡ ಅಷ್ಟ ಆಗಿರಲಿಲ್ಲ. ನನಗ ಗುರುವೂ,ಗೆಳೆಯನೂ ಆಗಿದ್ದ. ಸರ್ವೋದಯ ಚಳುವಳಿಯೊಳಗ,ಮಹಿಳಾಮಂಡಳದ ಕಾರ್ಯಕ್ರಮಕ್ಕ ಹೋಗಬೇಕಾದರ ಊರ ಜನಾ ಏನಂತಾರೋ ಎಂಬ ಹಿಂಜರಿಕಿ ಆದಾಗ ಅದ ಧೈರ್ಯ ತುಂಬುವ ಹಿರಿಯನೂ ಆಗಿದ್ದ. ಅವನ ಸಾವು ನನಗ ಜೀವನದೊಳಗ ದಿಕ್ಕು ಕೆಡಿಸಿ ಬಿಟ್ಟಿತ್ತು. ಆತ್ಮಹತ್ಯಾ ಮಾಡಿಕೊಳ್ಳೋಣ ಅನ್ನಿಸಿದರೂ ಮಗನ ಮುಖ ನೋಡಿ ಮನಸ್ಸು ಬದಲಿಸಿದ್ದೆ.” ಎಂದು ಕಣ್ಣಿರು ತಂದು ಕೊಂಡಳು.
ದನಿ ಸರಿ ಪಡಿಸಿಕೊಂಡು “ ಇಂತಹದರಲ್ಲಿ ಮನೆಗೆ ಬಂದರೆ ಮನೆಯು ಕಳುವು ಆಗಿತ್ತು. ಮನೆಗೆ ಕನ್ನ ಹಾಕಿ ಬೆಳ್ಳಿ ಬಂಗಾರ, ಅರಿವಿ ಎಲ್ಲಾ ಹೊತಗೊಂಡ ಹೋಗಿದ್ದರು. ನನ್ನ ಮದುವಿಯ ರೇಶ್ಮಿ ಮಡಿ ಸೀರಿ ಚೂರು ಚುರಾಗಿ ಹರಿದು ಅದನ್ನು ಕಟ್ಟಿಗೆಗೆ ಝೇಂಡಾ ಕಟ್ಟಿ ಊರ ಮುಂದಿನ ಹೊಳೆಯ ಉಸುಕಿನಲ್ಲಿ ಊರಿ ಹೋಗಿದ್ದರಂತ. ಭರ್ ಭರ್ತಿ ಓಣಿಯ ನಟ್ಟ ನಡುವೆ ಮನೆಗೆ ಕಳ್ಳರು ಕನ್ನ ಹಾಕಲು ಬಂದರ ಓನ್ಯಾಗಿನವರಿಗೆ ಹ್ಯಾಂಗ ಗೊತ್ತಾಗದ ಇದ್ದೀತು? ಅದಕ್ಕ ನಮ್ಮ ದಾಯಾದಿಗಳ ಈ ತುಡುಗು ಮಾಡಿಸಿದ್ದರು ಅಂತಾ ನನಗೂ ಅನ್ನಿಸ್ತು , ಜನರೂ ಮಾತಾಡಿಕೊಂಡರು. ಅಷ್ಟೇ ಅಲ್ಲ ನಮ್ಮ ಸರಸ್ವತಿ ಭಂಡಾರ ಪುಸ್ತಕಗಳನ್ನ ಮನಿ ಮುಂದ ಸುರುದ ಅದಕ್ಕ ಬೆಂಕಿ ಹಚ್ಚಿದ್ದರಂತ. ಕಳ್ಳರಿಗೆ ಪುಸ್ತಕದಿಂದ ಏನೂ ಉಪಯೋಗ ಇಲ್ಲ ಅಂದರ ಹಂಗ ಬಿಟ್ಟ ಹೋಗತ್ತಿದ್ದರು. ಆದರ ಬೆಂಕಿ ಹಚ್ಚುವ ಕಿಡಿಗೇಡಿತನ ಯಾಕ ಮಾಡ ತ್ತಿದ್ದರು? ಹಿಂಗಾಗಿ ಅದು ನಿಕ್ಕಿ ನಮ್ಮ-ನಮ್ಮವರದ ಕೈವಾಡ” ಎಂದಳು.
ನಾನು “ಖಿಲ್ಜಿ ಸಾವಿರ ವರ್ಷದ ಹಿಂದೆ ನಾಲಂದಾ ವಿಶ್ವ ವಿದ್ಯಾಲಯದೊಳಗ ಇರುವ ಪುಸ್ತಕ ಗಳಿಗೆ ಧರ್ಮಾಂಧತೆ ಯಿಂದ ಬೆಂಕಿ ಹಚ್ಚಿದ್ದನಂತೆ …” ಎನ್ನುವ ಮಾತನ್ನ ಮುಂದುವರೆಸಿ ಅಜ್ಜಿ ಹೇಳಿದಳು.
“ಮನಶ್ಯಾನ ಸಣ್ಣತನ, ಅಸೂಯೆ, ಅಜ್ಞಾನಗಳೂ ಖಿಲ್ಜಿಯ ಪುನರಾವತಾರದಂತೆ ಆಗಾಗ ಅಕ್ಷರ ದಹನ ಮಾಡಲು ಪ್ರಯತ್ನ ಮಾಡತಿರತಾವು. ಆದರ ಅದರ ಹೆಸರ ʼಅಕ್ಷರʼ.. ಅಂದರ ಕ್ಷಯಿಸಲಾರದ್ದು ಅಂತ….ಒಂದು ಪುಸ್ತಕಾ ಸುಟ್ಟರ ಇನ್ನೊಂದು ಪುಸ್ತಕದಾಗ ಬಂದು ಕೂಡತಾವ ಅಕ್ಷರ. ನನ್ನ ಗಂಡನ ಗ್ರಂಥಾಲಯ ಅವರು ಸುಟ್ಟರೂ, ನನ್ನ ಮಗ ಮುಂದ ತನ್ನದೇ ಗ್ರಂಥಾಲಯ ಮಾಡಿಕೊಂಡ, ಇರಲಿ” ಎಂದು ಸಾಕ್ಷಾತ್ ಭಗವಾನ್ ಶ್ರೀ ಬುದ್ಧನಂತೆ ಹೇಳಿದಳು.
ನಾನು ಅಜ್ಜಿಯ ತತ್ವಜ್ಞಾನದ ಮಾತನ್ನು ಮೆಲುಕುಹಾಕುತ್ತಿರುವಾಗ ಅವಳು ಮುಂದುವರಿಸಿದಳು “ನಿನಗೆ ಹೇಳಿದ್ನೆಲಾ..ನಿಮ್ಮಜ್ಜನಿಗೆ ಖಾಸ ಯಾರೂ ಅಣ್ಣತಮ್ಮಂದರು ಇರಲಿಲ್ಲ, ನನ್ನ ತೌರುಮನ್ಯಾಗೂ ನಮ್ಮಪ್ಪ-ಅವ್ವಾ ಇಷ್ಟೊತ್ತಿಗೆ ತೀರಿ ಹೋಗಿದ್ದರು. ಹಿಂಗಾಗಿ ನಾನು ಏನ ಮಾಡಬೇಕು, ಎಲ್ಲಿಗೆ ಹೋಗಬೇಕಂತ ವಿಚಾರ ಮಾಡತಿದ್ದಾಗ ಧಾರವಾಡದ ಭಾಗೀರಥೀಬಾಯಿ ಪುರಾಣಿಕ ಅವರು ಬಂದರು. ಜನರೆಲ್ಲಾ ಅವರಿಗೆ ಮಾಯಿ ಅಂತ ಕರೀತಿದ್ದರು. ಅವರು ವರ್ಷಾ ವರ್ಷಾ ತಾವು ಸ್ಥಾಪಿಸಿದ್ದ ವನಿತಾ ಸೇವಾ ಸಮಾಜಕ್ಕ ವರ್ಗಣಿ ಕೂಡಿಸಲು ಬರುತ್ತಿದ್ದರು. ಪ್ರತಿ ವರ್ಷನೂ ನಿಮ್ಮಜ್ಜ ಅವರಿಗೆ ಒಂದು ಚೀಲ ಜೋಳಾನೂ, ಒಂದಿಷ್ಟು ದುಡ್ಡು ಕೊಟ್ಟು ಕಳಿಸಿರತಿದ್ದ. ಈ ಸಲ ಬಂದ ಅವರು ಮನಿಯ ಪರಿಸ್ಥಿತಿ ಬದಲಾದದ್ದನ್ನ ನೋಡಿದರು. ನಾನು ನನ್ನ ಮನಸ್ಸಿನ ತಳಮಳ ಹೇಳಿಕೊಂಡೆ. ಅವರು ಮಗನನ್ನು ಕರೆದುಕೊಂಡು ತಮ್ಮ ಜೊತೆ ಬರಲು ಸಲಹೆ ಕೊಟ್ಟರು. ವೈರ ಸಾಧಿಸುವ ದಾಯಾದಿಗಳ ನಡುವೆ
ಇರೋದಕ್ಕಿಂತ ಅದೇ ಒಳ್ಳೆಯದೆಂದು ನನಗೂ ಅನಿಸಿತು. ಹಿಂಗಾಗಿ ವರ್ಷಾ ವರ್ಷಾ ದುಡ್ಡು-ಕಾಳು ತೆಗೆದುಕೊಂಡು ಹೋಗುತ್ತಿದ್ದ ಮಾಯಿ ಆ ವರ್ಷ ನಮ್ಮ ಮನೆಯಿಂದ ಎರಡು ಜೀವಗಳ ಜವಾಬ್ದಾರಿ ಹೊತ್ತುಕೊಂಡು ಧಾರವಾಡಕ್ಕೆ ನಡೆದರು”. ಎಂದು ಹೇಳುವ ಹೊತ್ತಿಗೆ ನನಗೆ ಎಚ್ಚರವಾಯಿತು.
ಎದ್ದರೂ ನನ್ನ ಮನಸ್ಸಿನ ತುಂಬ ವಿಷಾದ ಭಾವ. ತನ್ನದೇ ಮನೆಯಲ್ಲಿ ನಾಲ್ಕು ಜನಕ್ಕೆ ಅನ್ನದಾನ-ಅಕ್ಷರದಾನ ಮಾಡುತ್ತಿದ್ದ ಅಜ್ಜಿ, ಆಶ್ರಮದಲ್ಲಿ ಯಾರೋ ಕೊಟ್ಟ ದಾನದ ದಾಸೋಹದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಹಂತಕ್ಕೆ ಹೋಗಿದ್ದು ಎಂತಹ ವಿಪರ್ಯಾಸ….!!
ರಾತ್ರಿ ಕಣ್ಣು ಮುಚ್ಚಿದ ತಕ್ಷಣ ಅಜ್ಜಿ ಬಂದು “ಹೊಲಾ ತೊಗೊಳ್ಳೋದು ಎಲ್ಲಿಗೆ ಬಂತು?” ಎಂದು ಅದೇ ರಾಗದ ಅದೇ ಹಾಡನ್ನು ಹೇಳಿದಳು. ನಾನು ಒಂಚೂರು ತಮಾಷೆ ಮಾಡೋಣವೆಂದು “ನೀನು ಇಂಗ್ಲೀಷು ಹ್ಯಾಂಗ ಕಲತಿ ಅಂದ ಒಂದು ಪ್ರಶ್ನೆಗೆ ಉತ್ತರಾ ಕೊಟ್ಟಿಲ್ಲ, ಮತ್ತ ಮತ್ತ ಹೊಲದ ವಿಷಯಾನ ತಗೀತಿ, ನೀನು ನಿನ್ನ ಕತಿ ಮುಗಸತೀಯೋ ಇಲ್ಲೋ?” ಎಂದು ದಬಾಯಿಸಿದೆ.
ಅಜ್ಜಿ ಒಂಚೂರು ಮೆತ್ತಗಾಗಿ “ನಾನು ಮೊದಲ ಬಡಕೊಂಡೆ, ಮಲ್ಟಿಪಲ್ ಚಾಯ್ಸ ಪ್ರಶ್ನೆಗೆ ಉತ್ತರಾ ಟಿಕ್ ಮಾಡಿ ಪರೀಕ್ಷೆ ಪಾಸು ಮಾಡಿದ ಹುಡುಗಿ ನೀನು. ನಿನಗ ನಮ್ಮ ಎಸ್ಸೆ ಟೈಪ್ ಉತ್ತರಾ ಸರಿ ಬರೂದುಲ್ಲ ಅಂತ” ಎನ್ನುತ್ತಿರುವಾಗಲೇ ನಾನು ಬಾಯಿ ಹಾಕಿ “ಹತ್ತು ವರ್ಷದಿಂದ ನೂರಾರು ಮಂದಿಯ ಸಂದರ್ಶನ ಮಾಡಿ, ಅವರ ಮಾತುಗಳನ್ನು ಸಮಾಧಾನದಿಂದ ಕೇಳಿ, ಅವಕ್ಕ ಅಕ್ಷರ ರೂಪಾ ಕೊಡತಾ ಬಂದಿದೀನಿ ನಾನು. ಆತುರದ ಹುಡುಗಿ ಅಂತ ನನಗ ಹೇಳಿದರ ದೇವರು ಮೆಚ್ಚುದಿಲ್ಲ ನೋಡು, ಹೊಲದ ವಿಷಯ ತಗೀತಿಯಲ್ಲ, ಅದಕ್ಕ ಕಿರಿಕಿರಿ ಆಗತ್ತ.ನೀನು ಮೊದಲು ನಿನ್ನ ಕತಿ ಮುಗಸು ಆಮೇಲೆ ಬೇರೆ ವಿಷಯ” ಎಂದು ಕಟ್ಟು-ನಿಟ್ಟು ಮಾಡಿದೆ. ಅಜ್ಜಿ ಮತ್ತೂ ಮೆತ್ತಗಾಗಿ “ಸರಿವಾ ನೀ ಹೇಳಿದಂಗ ಮಾಡತೇನಿ …ಹಾ ಎಲ್ಲಿ ತನಕ ಬಂದಿತ್ತು ನನ್ನ ಕತಿ?” ಎಂದಳು. ನಾನು “ಧಾರವಾಡದ ವನಿತಾ ಸೇವಾ ಸಮಾಜ ಸೇರಿಕೊಂಡ ಸುದ್ದಿ ಹೇಳತಾ ಇದ್ದಿ…” ಎಂದೆ. ಅಜ್ಜಿ “ಹಾಂ ನಾನು ನಿಮ್ಮಪ್ಪನ್ನ ಕರಕೊಂಡು ವನಿತಾ ಸಮಾಜದ ಆಶ್ರಮ ಸೇರಿದೆ. ನಾನು ತಕ್ಕಷ್ಟು ಓದು-ಬರಿ ಕಲಿತಿದ್ದೆನಾದರೂ, ಅದು ಸಾಲಿಗೆ ಹೋಗಿ ಕಲತದ್ದಲ್ಲ. ಈಗ ಸಮಾಜದಲ್ಲಿ ನಾನು ಮ್ಯಾಟ್ರಿಕ್ ಪರೀಕ್ಷೆಗೆ ಕಟ್ಟಿ, ನನಗಿಂತ ಚಿಕ್ಕ ಹುಡಗಿಯರೊಂದಿಗೆ ಓದಿ, ಅಲ್ಲಿನ ಶಿಕ್ಷಕರ ಮಾರ್ಗದರ್ಶನದಲ್ಲಿ ಪಾಸಾದೆ. ಆನಂತರ ಸಮಾಜದಲ್ಲಿಯೇ ನಡೆಯುತ್ತಿದ್ದ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ತರಬೇತಿ ಮುಗಿಸಿ ಅಲ್ಲಿಯ ಶಾಲೆಯಲ್ಲಿಯೇ ಶಿಕ್ಷಕಿಯಾದೆ. ಇಂಗ್ಲೀ಼ಷು ಆವಾಗಲೇ ಕಲಿತದ್ದು. ನಿಮ್ಮಪ್ಪನೂ ಸಮಾಜದ ಶಾಲೆಗೆ ಹೋಗಿ ಅಲ್ಲಿಯೇ ಕಲಿತ. ನನ್ನ ನೌಕರಿಗೆ ಸಮಾಜದಿಂದ ಸಣ್ಣ ಪಗಾರನೂ ಬರತಿತ್ತು ಊರಾಗಿನ ಹೊಲದ
ಲಾವಣಿ ದುಡ್ಡು ಬರತಿತ್ತು. ಇರುವ ನಾವಿಬ್ಬರಿಗೆ ಸಾಕಾಗತಿತ್ತು.” ಎಂದು ಹೇಳಿ “ಇದ ನೋಡವಾ ನನ್ನ ಕತಿ “ ಎಂದು ಮಾತು ಮುಗಿಸಿದಳು. ನಾನು “ ʼಮೇಕಿಂಗ ಆಫ್ ಭಾರತಿ ಅಕ್ಕೋರುʼ ಕತಿ ಭೇಶಿ ಐತಿ ಬಿಡು. ಈಗ ಹೇಳು ನೀನು ನನಗ ದಿನಾ ಕನಸಿನ್ಯಾಗ ಬಂದು “ಹೊಲಾ ತೊಗೋ ತೊಗೋ ಅಂತ ತಲಿ ತಿನ್ನೋದು ಯಾಕ?” ಎಂದೆ.
ಅಜ್ಜಿ “ಯಾಕ ಅಂದ್ರ ʼತಲೆ ಮೇಲೆ ಒಂದು ಸೂರು, ನೆಲೆಗಾಗಿ ಒಂದು ಹೊಲʼ ಇರಬೇಕೆನ್ನುವುದು ನನ್ನ ನಂಬಿಕೆ. ನಾವಂತೂ ಎರಡೂ ಕಳೆದುಕೊಂಡು ತಳಬ್ರಷ್ಟರಾಗಿದ್ದೆವು. ನಮ್ಮ ಮುಂದಿನ ತಲೆಮಾರಾದರೂ ಅವನ್ನು ಪಡೆಯಲಿ ಅಂತ ಆಶೆ.” ಎಂದಳು. ನಾನು “ಮತ್ತ ನಿಮ್ಮ ಹೆಸರಿಗಷ್ಟು ಅಂತ ದಾನ ಮಾಡಲಾರದ ಉಳಿಸಿಕೊಂಡಿದ್ದರೆಲ್ಲಾ ಜಮೀನು, ಅದೇನಾಯ್ತು?” ಎಂದೆ. ಅಜ್ಜಿ “ಅದಾ? ಅದು ಇನ್ನೊಂದು ಕತಿ” ಎಂದು ಮತ್ತೊಂದು ಪಿರಿಯಡ್ ಕ್ಲಾಸ್ ತೆಗೆದುಕೊಳ್ಳಲು ತಯಾರಾದಳು. “ನಿಮ್ಮಪ್ಪ ಇನ್ನೂ ಹೈಸ್ಕೂಲು ಓದುತ್ತಿದ್ದ ಅನಿಸುತ್ತ, ಆವಾಗ ಸಮಾಜದೊಳಗ ಏನೇನೋ ಗದ್ದಲಗಳಾಗಿ, ಸ್ಥಾಪಕಿ ಮಾಯಿಯ ಜೊತೆ ಇದ್ದ ನಮ್ಮನ್ನು ಹೊಸ ಮ್ಯಾನೇಜ್ಮೆಂಟು ನೌಕರಿಯಿಂದ ತೆಗೆಯಿತು. ಅದ ಸಮಯಕ್ಕ ಟೆನೆನ್ಸಿ ಕಾನೂನು ಬಂದು ಉಳಿದ ಜಮೀನೆಲ್ಲಾ ಹೋಗಿ, ಹೊಟ್ಟೆ-ಬಟ್ಟೆಯದೇ ಸಮಸ್ಯೆಯಾಯಿತು. ಊಳುವವನೇ ನೆಲದೊಡೆಯ ನೀತಿಯಿಂದಾಗಿ ನಮ್ಮಂತವರು ಬದುಕುವದೇ ಕಷ್ಟವಾಯಿತು.” ಎಂದಳು.
ನಾನು “ ಆ ನೀತಿಯಿಂದ ಅನೇಕ ಭೂರಹಿತರಿಗೆ ಭೂಮಿ ಸಿಕ್ಕು ಅವರು ಸ್ವಾವಲಂಬಿಗಳಾದರು. ಆಮೇಲೆ ಹಿಂದಿನ ರಾಜಮಹಾರಾಜರ ಕಾಲದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಉಂಬಳಿಯನ್ನಾಗಿ ಪಡೆದು, ಅದರಲ್ಲಿ ಜೀತದಾಳುಗಳನ್ನು ದುಡಿಸುತ್ತಾ ಶೋಷಣೆ ಮಾಡತ್ತಿದ್ದರು, ಅವರಿಗೆ ಇದರಿಂದ ಶಾಸ್ತಿಯಾಯಿತು ಎಂದು ಹೇಳುತ್ತಾರಲ್ಲ?” ಎಂದು ಪಾಟಿ ಸವಾಲು ಹಾಕಿದೆ.
ಅಜ್ಜಿ ಸಮಾಧಾನದಿಂದಲೇ “ಅವೆರಡೂ ಅರ್ಧಸತ್ಯಗಳು. ನಾವು ಆಗಿನ ಕಾಲದ ಧಾರವಾಡ ಜಿಲ್ಲೆಯನ್ನೇ ತೆಗೆದುಕೊಂಡರೆ ಸುಮಾರು ಎರಡು ಲಕ್ಷ ನಲವತ್ತು ಸಾವಿರ ಜನರ ಭೂಮಿ ೨೫ ಎಕರೆಗಿಂತ ಕಮ್ಮಿ ಇತ್ತು. ೨೦೦ ಎಕರೆಗಿಂತ ಹೆಚ್ಚು ಇದ್ದವರು ಕೇವಲ ೨೫೦ ಮಂದಿ. ಇನ್ನು ಸಾವಿರ ಎಕರೆ ಹೊಂದಿದವರು ಕೈಬೆರಳಲ್ಲಿ ಎಣಿಸಬಹುದಾದಷ್ಟು ಇತ್ತು. ಆ ಬೆರಳೆಣಿಕೆಯವರನ್ನು ಹೊಡೆಯುವ ಸಲುವಾಗಿ ಎಲ್ಲರನ್ನೂ ಕೂಡಿಸಿ ಒಂದು ಕಾನೂನು ಮಾಡಿದ್ದು ಶುದ್ಧ ಜನದ್ರೋಹ” ಎಂದು ಹಲ್ಲು ಕಡಿದಳು. “ಅಷ್ಟೇ ಅಲ್ಲ, ಆ ಕಾನೂನು ತಂದದ್ದು ಬಡವರ ಉದ್ಧಾರಕ್ಕಲ್ಲ, ಆದರೆ ತಮ್ಮ ರಾಜಕೀಯ ವಿರೋಧಿಗಳಾಗಿದ್ದ ಭೂಮಾಲಿಕ ವರ್ಗದ ಮಗ್ಗಲು ಮುರಿಯುವುದೇ ಉದ್ದೇಶವಾಗಿತ್ತು ಎಂದು ಜನ ಹೇಳುತ್ತಾರೆ.” ಎಂದಳು.
ನನಗೆ ಥಟ್ಟನೆ ಡಿಮಾನೆಟೈಜನೇಶನ್ ಮೇಲೆ ನಾನು ಬರದಿದ್ದ ವರದಿ ನೆನಪಾಯಿತು. ಅದರಲ್ಲಿಯೂ ಸಾರ್ವಜನಿಕವಾಗಿ ಹೇಳಿದ ಉದ್ದೇಶ ಕಪ್ಪು ಹಣದ ಕುಳಗಳನ್ನು ಬಲಿಹಾಕುವುದು ಎಂದಿದ್ದರೂ, ಒಳಗಿನ ಉದ್ದೇಶ ಚುನಾವಣೆಗೆ ಮೊದಲು ರಾಜಕೀಯ ವಿರೋಧಿಗಳ ತಿಜೋರಿ ಖಾಲಿ ಮಾಡಿಸುವುದಾಗಿತ್ತು. ಮೊನ್ನೆ ರಿಜರ್ವ್ ಬ್ಯಾಂಕ್ ಒಪ್ಪಿಕೊಂಡಿರುವಂತೆ ಅಮಾನ್ಯಗೊಂಡಿರುವ ಶೇಕಡಾ ೯೯ ನೋಟುಗಳು ವಾಪಸು ಬಂದಿವೆಯಂತೆ. ಅಂದರೆ ನಮ್ಮ ಸರಕಾರ ದೇಶದ ನೂರಾಮುತ್ತು ಕೋಟಿ ಜನರನ್ನು ಬ್ಯಾಂಕಮುಂದೆ ನಿಲ್ಲುವ ತರ ಮಾಡಿ ಸಾಧಿಸಿದ್ದು ಶೇಕಡಾ ೧ ಕಪ್ಪುಹಣದ ಅಮಾನ್ಯೀಕರಣ! ಒಟ್ಟಿನಲ್ಲಿ ಇಲಿ ಹಿಡಿಯಲು ಬೆಟ್ಟ ಅಗಿಯುವ ಕೆಲಸ!! ನಾನು ಡಿಮಾನೆಟೈಜನೇಶನ್ ಮತ್ತು ಟೆನನ್ಸಿ ಕಾಯದೆಯ ನಡುವಿನ ಹೋಲಿಕೆಯನ್ನು ಅಜ್ಜಿಗೆ ಹೇಳಿದೆ.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಅವಳು ಮುಗುಳು ನಗುತ್ತಾ “ಒನ್ ಸೈಜ್ ಫಿಟ್ಸ್ ಆಲ್ ಎಂದು ಕೇಂದ್ರೀಕೃತ ಪಾಲಿಸಿ ಮಾಡುವ ಅಯೋಗ್ಯರ ಹಣೆಬರಹ ಇಷ್ಡೇ. ʼ ನಾಕಾಣೆ ಮಂಗ್ಯಾ ಹನ್ನೆರಡಾಣೆ ಬೆಲ್ಲಾ ನುಂಗಿದʼ ಕತೆಗಳು. ಯಾವ ಜನರಿಗೆ ಯೋಜನೆಗಳು ಅನುಕೂಲ ಮಾಡುವ ಉದ್ದೇಶ ಹೊಂದಿರುತ್ತವೆಯೋ, ಅದೇ ಜನರಿಗೆ ಕಾಟಕೊಡುವಂತೆ ಮಾಡುವಲ್ಲಿ ನಮ್ಮ ಸರಕಾರ, ಅಧಿಕಾರಶಾಹಿ ಎತ್ತಿದ ಕೈ. ಬಲವಾನರು ಮೆರೆದಾಡಿದರೆ, ಬಲಹೀನರು ನರೆಳಾಡುವುದು ತಪ್ಪೋದಿಲ್ಲ.” ಎಂದಳು. ಮುಂದುವರಿಸಿ “ಜಮೀನು ಹಂಚಿಕೆ ವಿಚಾರದಲ್ಲಿ ನಾವು ಸರ್ವೋದಯದ ಮೂಲಕ, ಭೂಮಾಲಿಕರ ಮನ ಒಲಿಸಿ ಭೂದಾನ ಮಾಡಿಸಿದಷ್ಟು ಪ್ರಯೋಜನ ಟೆನೆನ್ಸಿ ಕಾಯ್ದೆಯಿಂದ ಆಗಿರಲಿಲ್ಲ ಅನಿಸುತ್ತದೆ. ಧಾರವಾಡ ಜಿಲ್ಲೆಯಲ್ಲಿ ೧೯೬೧ರಲ್ಲಿ ಜಮೀನು ಇರುವ ರೈತರ ಸಂಖ್ಯೆ ಮೂರು ಲಕ್ಷ ಅರವತ್ತೊಂಭತ್ತು ಸಾವಿರವಿದ್ದರೆ, ೧೯೭೧ರಲ್ಲಿ ಅದು ಈ ಭೂಸುಧಾರಣೆ ಕಾಯದೆಗಳು ಬಂದ ಮೇಲೆ ಆ ಸಂಖ್ಯೆ ಎರಡು ಲಕ್ಷ ನಲವತ್ತೋಂಭತ್ತು ಸಾವಿರವಾಗಿತ್ತು. ಅದ್ಯಾಕೆ ಅಂದರೆ ಆಗ ಭೂಮಿ ಇರೋ ರೈತರೇ ನಮ್ಮಂತವರ ಹಿರಿಯರು ಮಾಡಿಟ್ಟಿದ್ದ ಆಸ್ತಿಯನ್ನು ನುಂಗಿ ನೀರು ಕುಡಿದಿದ್ದರು.” ಎಂದು ನಿಟ್ಟುಸಿರು ಬಿಟ್ಟಳು. ಹಾಗೆಯೇ ಮುಂದುವರಿಸಿ “ಇನ್ನೊಂದು ವಿಷಯ – ಆ ಹತ್ತು ವರ್ಷಗಳಲ್ಲಿ ಭೂಮಿ ಇಲ್ಲದ ರೈತರ ಸಂಖ್ಯೆ ಇನ್ನೂ ಹೆಚ್ಚೇ ಆಗಿತ್ತು. ಪಾಪ ಆ ರೈತ ಕಾರ್ಮಿಕರದು ʼಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸವೆ ಗತಿʼ ಎನ್ನುವಂತಹ ಸ್ಥಿತಿ.” ಎಂದು ಮಾತು ಮುಗಿಸಿದಳು.
ಅಜ್ಜಿ ಹೀಗೆ ಪುಂಖಾನುಪುಂಖವಾಗಿ ಅಂಕಿ-ಅಂಶಗಳನ್ನು ಹೇಳುವುದನ್ನು ನೋಡಿ ನನ್ನ ವೃತ್ತಿ ಧರ್ಮ ಜಾಗ್ರತವಾಯಿತು. ಅಜ್ಜಿಗೆ “ನೀನು ಇಷ್ಟೆಲ್ಲಾ ಅಂಕಿ ಅಂಶ ಹೇಳುತ್ತಿಯಲ್ಲಾ ನಂಬೋದು ಹ್ಯಾಗೆ ?” ಎಂದು ಪ್ರಶ್ನಿಸಿದೆ.
ಅವಳು “ ನಿನ್ನ ಪ್ರೆಸ್ ಬುದ್ಧಿ ಇಲ್ಲಿಯೂ ತೋರಿಸಿಯೇ ಬಿಟ್ಟಿಯಾ ? ನಾನು ಈಗ ಹೇಳಿದ ಎಲ್ಲಾ ಅಂಶಗಳು ಧಾರವಾಡ ಜಿಲ್ಲಾ ಗ್ಯಾಜೆಟಿಯರ್‌ನ್ಯಾಗ ಪ್ರಕಟ ಆಗಿದ್ವು. ನೀನೂ ಪತ್ರಕರ್ತ ಇದ್ದೀ, ಹೋಗಿ ಗ್ಯಾಜೆಟಿಯರ್ ತಗದು ನೋಡು. ನಾನು ಹೇಳಿದ್ದು ಖರೆ ಇರದೇ ಇದ್ದರ ನನ್ನ ಕಿವಿಗೆ ಹಳ್ಳ್ ಹಚ್ಚಿಯಂತ..” ಎಂದು ನನಗೇ ಸವಾಲೆಸೆದಳು.
ನಾನು ಅಜ್ಜಿಯ ಮಾತಿಗೆ ಗೋಣು ಹಾಕಿ, ಫೋನಿನಲ್ಲಿ ಗೂಗಲಿಸಿ ʼಧಾರವಾಡ ಜಿಲ್ಲಾ ಗ್ಯಾಜೆಟಿಯರ್ ೧೯೯೫ʼ ಹುಡುಕಿ ತೆಗೆದು ಅವಳು ಹೇಳಿದ್ದನ್ನು ತಾಳೆ ನೋಡತೊಡಗಿದೆ.ಅವಳು ಮುಂದುವರಿಸಿ “ಮೊನ್ನೆ ಡಿಮಾನೆಟೈಜನೇಶನ್ ಆಗಿ ಕೈಯಲ್ಲಿದ್ದ ನೋಟು ನಡೆಯದೇ, ಬ್ಯಾಂಕಿನಲ್ಲಿದ್ದ ಕಾಸು ತೆಗೆಯಲಾಗದೇ ತಿಂಗಳ ಕಿರಾಣಿಗೆ ಏನು ಮಾಡಬೇಕೆಂದು ಜನಸಾಮಾನ್ಯರು ತಲೆಮೇಲೆ ಕೈ ಹೊತ್ತುಕೊಂಡು ಕೂತಿದ್ದರೆ, ಅದ್ಯಾರೋ ರಡ್ಡಿ ಅಷ್ಟು ಅದ್ದೂರಿಯಾಗಿ ಮಗಳ ಮದುವೆ ಮಾಡಲು ಹ್ಯಾಗೆ ಸಾಧ್ಯ? ಅದೆಷ್ಟೋ ಬ್ಯಾಂಕುಗಳ ಸಿಬ್ಬಂದಿ ಹೊರಗೆ ಕಾಯ್ದುನಿಂತ ಗ್ರಾಹಕರಿಗೆ “ಹೊಸ ನೋಟುಗಳಿಲ್ಲ” ಅಂತ ಸುಳ್ಳು ಹೇಳಿ ದೊಡ್ಡಕುಳಗಳ ಮನೆಗೆ ಹೋಗಿ ನೋಟು ಬದಲಿಸಿ ಬಾರಲಿಲ್ಲವೇ? ಟೆನೆನ್ಸಿ ಕಾಯ್ದೆ ಬಂದಾಗಲೂ ಹೀಗೆ ಆಗಿತ್ತು. ಬಲಾಢ್ಯ ಜಮೀನ್ದಾರರು ತಮ್ಮದೇ ಒಂದು ಸಂಘ ಮಾಡಿಕೊಂಡು ತಮ್ಮ ಹಿತಾಸಕ್ತಿಗಾಗಿ ಹೋರಾಡಿದರು. ಈ ವಿಷಯವಾಗಿ ವರದಿ ಮಾಡಲು ನಿಯಮಿಸಿದ್ದ ಬಿ.ಡಿ ಜತ್ತಿ ಸಮೀತಿಯೂ ತಮ್ಮ ಜಮೀನನ್ನು ಊಳುತಿದ್ದ ರೈತರನ್ನು ಒಕ್ಕಲೆಬ್ಬಿಸಿ ಸ್ವತಃ ಕೃಷಿಮಾಡಲು ಅನುಮತಿ ಕೊಟ್ಟಿತು. ನಮ್ಮ ದಾಯಾದಿಗಳು ಕೂಡ ಊರಲ್ಲಿ ಬಂದೂಕು ಹಿಡಿದು “ಯಾರ ಬರತೀರಿ ಬರ್ರಿ” ಎಂದು ಹೆದರಿಸಿ ತಮ್ಮ ನೂರಾರು ಎಕರೆ ಜಮೀನು ಉಳಿಸಿಕೊಂಡಿದ್ದರು. ಅಷ್ಟೇ ಅಲ್ಲ, ನಿಯಮದ ಮಿತಿಗಿಂತ ಹೆಚ್ಚಿನ ಜಮೀನನ್ನು ತಮ್ಮ ಸಂಬಂಧಿಕರ, ಚಿಕ್ಕಮಕ್ಕಳ, ಕೊನೆಗೆ ಮನೆಯ ಆಳಿನ ಹೆಸರಿಗೆ ವರ್ಗಾಯಿಸಿ, ತಮ್ಮದೇ ಕಬ್ಜಾದಲ್ಲಿ ಇಟ್ಟುಕೊಂಡಿದ್ದರು. ಇದಕ್ಕೆಲ್ಲ ಅಂದಿನ ಅಧಿಕಾರ ವರ್ಗ ಅನುಕೂಲ ಮೂಡಿಕೊಟ್ಟಿತು. ಎಲ್ಲ ಕಷ್ಟವಾದದ್ದು ನಮ್ಮಂತಹ ಬಡಪಾಯಿಗಳಿಗೆ ಮಾತ್ರ” ಎಂದು ಇನ್ನೊಮ್ಮೆ ಆಕ್ರೋಶಿಸಿದಳು.
ನಾನು, ಡಿಮೊನಿಟೈಜೇಷನ್ ಕಾಲದಲ್ಲಿ ದುಡ್ಡಿದ್ದವರು ತಮ್ಮ ಕಾರ್ ಡ್ರೈವರು, ಮಾಲಿಗಳು, ಅಡಿಗೆಯವರು ಇತ್ಯಾದಿಗಳವರ ಬ್ಯಾಂಕ್ ಖಾತೆಯಲ್ಲಿ ಹಳೇ ನೋಟು ಜಮಾ ಮಾಡಿಸಿ ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಿಕೊಂಡರು ಎಂದು ಹೇಳಿ ಟೆನೆನ್ಸಿ ಕಾಯ್ದೆಯೂ, ಡಿಮೊನಿಟೈಜೇಷನ್ನೂ ಒಂದಕ್ಕೊಂದು ಪೂರ್ಣೋಪಮೆಗಳು ಎಂದು ಹೇಳಿದೆ. ಅಜ್ಜಿ ಮನಸಾರೆ ಒಪ್ಪಿ ತಲೆ ಅಲ್ಲಾಡಿಸಿ ಅನುಮೋದಿಸಿದಳು. ಅಜ್ಜಿಗೆ ಇನ್ನೂ ಮಾತು ಮುಗಿಸುವ ಉಮೇದಿ ಇರಲ್ಲಿಲ್ಲ. ಮಾತು ಮುಂದು ವರಿಸುತ್ತಾ ಹೇಳಿದಳು “ಭೂಮಿರಹಿತರ, ಹಿಂದುಳಿದವರ ದೇವದೂತ ಎಂದು ಬಿಂಬಿತವಾಗುವ ನಾಯಕರ ಬಗ್ಗೆ ಒಂದು ವಿಷಯ ಹೇಳತೇನಿ- ಹಳೆಯ ಪತ್ರಿಕೆ ಹುಡುಕಿದರೆ ನಿನಗೇ ಸಿಕ್ಕೀತು, ಅವರು ʼಅಗಸರ ಕತ್ತೆಯನ್ನು ಡೊಂಬರಿಗೆ ದಾನ ಮಾಡಿದಂತೆʼ ನಮ್ಮಂಥ ಅಬಲರ ಭೂಮಿಯನ್ನು ಹಂಚಿ ತಮ್ಮ ಅಧಿಕಾರವನ್ನು ಭದ್ರಮಾಡಿಕಂಡರು. ಆದರೆ, ದಲಿತರೂ, ಹಿಂದುಳಿದವರೂ ತಮ್ಮ ಜಾನುವಾರು ಮೇಯಿಸುತ್ತಿದ್ದ ಸರ್ಕಾರಿ ಗೋಮಾಳವನ್ನು ತಮ್ಮ ಅಳಿಯನಿಗೆ ಮಂಜೂರು ಮಾಡಿದ್ದರು. ಆ ರೌಡಿ ಅಳಿಯ ಅಲ್ಲಿ ಸರ್ಕಾರಿ ಗೋಮಾಳಕ್ಕೆ ಬೇಲಿ ಸುತ್ತಿ, ಅದೇ ದಲಿತರೂ, ಹಿಂದುಳಿದವರೂ ಬರದಂತೆ ಮಾಡಿ, ತನ್ನ ಫಾರ್ಮ್‌ಹೌಸ್ ಕಟ್ಟಿಕೊಂಡ”.
ನಾನು ಗಾಬರಿಯಾಗಿ “ಅಜ್ಜಿ ಏನೇನೋ ಹೇಳಬೇಡ, ನೀ ಹೇಳಿದ್ದಕ್ಕ ಏನ ಆಧಾರ ಅದ? ಈಗ ಹಿಂಗೇನರ ಮಾತಾಡಿದರ ಮಾನಹಾನಿ ಕೇಸ್ ಹಾಕತಾರ.” ಎಂದೆ. ನನ್ನ ಮಾತು ಅವಳಿಗೆ ಯಾಕೋ ಚುಚ್ಚಿತು.
ಅವಳು, “ನಾನು-ನನ್ನ ಗಂಡ ಹಿರಿಯರಿಂದ ಬಂದ ಆಸ್ತಿಯನ್ನು ಭೂದಾನದೊಳಗ ದಾನ ಮಾಡೇವಿ. ನಾನು ಅಡ್ಯಾಡಿ ಭೂದಾನ ಮಾಡಿಸೇನಿ. ಯಾವ ನಿಮ್ಮ ನಾಯಕರು, ಯಾವ ನಿಮ್ಮ ಸೋಷಲಿಸ್ಟ್ ಬುದ್ಧಿಜೀವಿಗಳು ಎಷ್ಟು ಎಕರೆ ದಾನ ಮಾಡ್ಯಾರ ಹೇಳು. ಅವರೆಲ್ಲಾ ಆದರ್ಶದ ಮಾತು ಮಾತ್ರ ಆಡುತ್ತಾ ಕಾಲ ಕಳದರ, ನಾನು ಆದರ್ಶದ ಬದುಕು ಬದಕೇನಿ. ಇಪ್ಪತ್ತೈದು ವರ್ಷ ಮಕ್ಕಳಿಗೆ ನಿರ್ವಂಚನೆಯಿಂದ ಪಾಠ ಮಾಡೇನಿ. ನನ್ನ ಆತ್ಮ ಸಾಕ್ಷಿ ಅಗದೀ ಸ್ವಚ್ಛ ಅದ, ಯಾವ ಕೋರ್ಟಿಗೂ ನಾನು ಹೆದರಂಗಿಲ್ಲ.” ಎಂದು ಅಬ್ಬರಿಸತೊಡಗಿದಳು. ನನಗೆ ಎಚ್ಚರವಾಯ್ತು.
ಅಜ್ಜಿ ಕನಸಿನಲ್ಲಿ ಹೇಳಿದ್ದ ವಿಷಯಗಳು ಬಹಳ ಕಾಂಟ್ರೊವರ್ಸಿಯಲ್ ಆಗಿದ್ದವು. ಅವುಗಳ ಬಗ್ಗೆ ನಾನು ಈಗ ಬರೆಯುವುದು ಅಷ್ಟೇನೂ ಯೋಗ್ಯ ಅನಿಸಲಿಲ್ಲ. ಈಗ ಸತ್ಯವನ್ನು ಹುಡುಕಿ ಬರೆಯುವ ಪತ್ರಕರ್ತರಿಗೆ ಅಷ್ಟೇನೂ ಅಚ್ಛೇದಿನ” ಗಳು ನಡೆಯುತ್ತಿರಲಿಲ್ಲ. ಹಿಂಗಾಗಿ ನಾನು ಮುಂದೆ ಎಂದಾದರೂ ವಿವರವಾಗಿ ಸಂಶೋಧನೆ ಮಾಡಿ ಬರೆಯಬೇಕೆಂದು ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡೆ.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಸಂದೀಪ ತನ್ನ ಪಿ ಎಚ್ ಡಿಯನ್ನು ಮುಗಿಸಿ, ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿ, ಅದರ ಸಂದರ್ಶನಕ್ಕಾಗಿ ಬೆಂಗಳೂರಿಗೆ ಬರುವವನಿದ್ದ. ಅವನ ಈ ಸಾಲದ ಭೇಟಿಯಲ್ಲಿಯೇ ನಮ್ಮಿಬ್ಬರ ಮದುವೆಯನ್ನು ಮಾಡಿಬಿಡಬೇಕೆಂದು ನಮ್ಮಿಬ್ಬರ ತಂದೆ ತಾಯಿಗಳು ಮಾತನಾಡಿಕೊಂಡಿದ್ದರು. ನಿಮ್ಹಾನ್ಸ್ ನೌಕರಿ ಸಿಗುತ್ತದೋ ಇಲ್ಲವೋ, ಅಲ್ಲಿ ಏನು ರಾಜಕೀಯವೋ ಏನೋ, ಅವರು ಕೊಡುವ ಸಂಬಳ, ಸೌಲಭ್ಯಕ್ಕೆ ಸಂದೀಪ ಒಪ್ಪದೇ ವಾಪಸ್ಸು ಅಮೆರಿಕಾಕ್ಕೆ ಹೋಗುತ್ತೇನೆ ಎನ್ನುತ್ತಾನೇನೋ ಎಂದು ಮುಂದಾಲೋಚನೆ ಮಾಡಿ ಪಾಲಕರು ಮದುವೆಯ ಹಂಚಿಕೆ ಹಾಕಿದ್ದರು. ನಾವಿಬ್ಬರೂ ಕೂಡ, ಇನ್ನೇನು ಮದುವೆಯಾಗಿ ಮುಂದಿನ ಜೀವನದ ಯೋಜನೆ ಮಾಡುವ ಎಂದುಕೊಂಡಿದ್ದೆವು.
ಅಂತಹದೇ ದಿನಗಳಲ್ಲಿ ಕನಸಿನಲ್ಲಿ ನಮ್ಮಜ್ಜಿ ಮತ್ತೆ ಬಂದಳು.
ನಾನು ಅಜ್ಜಿಗೆ “ನಾನು ಮದುವೆಯಾಗಬೇಕಾದ ಹುಡುಗನ ಕನಸು ಕಾಣಬೇಕೆಂದರೆ, ಕನಸಿನಲ್ಲಿ ನೀನು ಬಂದು ತಲೆ ತಿನ್ನುತ್ತೀಯಾ” ಎಂದು ದಬಾಯಿಸಿದೆ. ಅಜ್ಜಿ ಅನ್ಯೂನ್ಯದಿಂದಲೇ “ಹೊಲ ತೊಗೊಳ್ಳೋದು ಎಲ್ಲಿಗೆ ಬಂತು” ಎಂದು ಹಳೆಯ ಗ್ರಾಮೊಫೋನಿನಂತೆ ಅದೇ ಪ್ರಶ್ನೆಗೆ ಬಂದಳು.
ನಾನು “ನಿನ್ನದು ಅದೇ ಮಾತು, ಅದೇ ಪ್ರಶ್ನೆ….ನಾನಿನ್ನೂ ನನ್ನ ಮದುವೆ-ಮನೆ ಅಂತ ವಿಚಾರ ಮಾಡತಿದ್ದರ, ನೀನು ಹೊಲದ ವಿಷಯ ತಲಿ ತಿಂತಿ” ಎಂದು ಸಿಟ್ಟಿನಿಂದ ಹೇಳಿದೆ.
ಅವಳು ಸಮಾಧಾನ ಕಳೆದುಕೊಳ್ಳದೇ “ಭಾರತಿ ಅಕ್ಕೋರಿಗೆ ಸತ್ತರೂ ಹೋಗದ ಭೂದಾಹ” ಅಂತ ನಿನ್ನ ಪತ್ರಿಕೆಯೊಳಗ ಬರದ ಗಿರದಿ ಮತ್ತ, ನಾ ಏನು ನಿನಗ ನೂರು ಎಕರೆ, ಇನ್ನೂರು ಎಕರೆ ತೊಗೊ ಅನ್ನಂಗಿಲ್ಲಾ. ಅಷ್ಟೋ ಇಷ್ಟೋ ಒಟ್ಟ ಎಷ್ಟಾದರೂ ಭೂಮಿ ಮಾಡಕೋ ಅಂತ” ಎಂದು ಹೇಳುತ್ತಿದ್ದಳು.
ನಾನು ಅವಳ ಮಾತನ್ನು ತಡೆದು, “ನೀನು ನನಗ ಹೊಲ ತೊಗೊ ಅಂತ ಹೇಳುವ ಬದಲು ನಿನ್ನ ಮಗ ಅಂದರ ನಮ್ಮಪ್ಪಗ ಹೇಳಬೇಕಿತ್ತಲ್ಲೋ?” ಎಂದು ದಬಾಯಿಸಿದೆ.
ಆಕೆ ಈ ಸಲವೂ ಅಷ್ಟೇ ಸಮಾಧಾನದಿಂದಲೇ “ಅವನಿಗೆ ಅದೆಷ್ಟು ಸಲ ಹೇಳಿದೆನೋ ಲೆಕ್ಕಿಲ್ಲ. ಅವನೂ ಅವರಪ್ಪನಂಗ ನಿಯಮಕ್ಕ ತಪ್ಪಿ ನಡ್ಯಾವಲ್ಲ. ಕರ್ನಾಟಕ ಭೂಸುಧಾರಣೆ ನಿಯಮ-೧೯೬೧ರ ಪ್ರಕಾರ ನಾವು ಕೃಷಿ ಭೂಮಿ ಕೊಂಡುಕೊಳ್ಳುವ ಹಾಗಿಲ್ಲ, ಬಾಡಿಗೆ ಪಡೆದು ಕೃಷಿ ಮಾಡುವಂತಿಲ್ಲ’ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದ.”
ನಾನು “ಅದ್ಯಾಕೆ ಹಾಗೆ ಹೇಳತಿದ್ದಾ? ” ಎಂದು ಕೇಳಿದೆ.
ಅಜ್ಜಿ ನನ್ನ ಕಡೆಗೆ “ಅಷ್ಟ ಗೊತ್ತಿಲ್ಲವೇ” ಲುಕ್ಕು ಕೊಟ್ಟು “ಆ ಕಾನೂನಿನ ಪ್ರಕಾರ ಕೃಷಿಕರಲ್ಲದವರು ಜಮೀನು ಕೊಂಡುಕೊಳ್ಳಬೇಕೆಂದರೆ ಅವರ ಆದಾಯ ಒಂದು ಮಿತಿಗಿಂತ ಕಡಿಮೆ ಇರಬೇಕಿತ್ತು.”
ನಾನು “ಹೌದಾ, ಭೂಮಿ ಕೊಂಡುಕೊಳ್ಳಬೇಕಾದರೆ ಒಂದು ಮಟ್ಟದ ಬಡತನವಿರಬೇಕಾಗುತ್ತಿತ್ತಾ? ” ಎಂದೆ.
ಅಜ್ಜಿ “ಹೌದು, ಅಂತಹದೊಂದು ತಲೆಕೆಟ್ಟ ಕಾನೂನು ಇತ್ತು. ಆ ಮಿತಿಯೊಳಗೆ ಯಾವ ಜಮೀನು ಮಾರಲು ಸಿಗುತ್ತಿರಲಿಲ್ಲ. ಅಷ್ಟು ಕಡಿಮೆ ಆದಾಯವಿದ್ದವರು ಭೂಮಿ ಕೊಳ್ಳಲು ಆಸಕ್ತಿ ಹೊಂದಿರಲಿಲ್ಲ. ಆದರೆ ನಿಮ್ಮ ಹತ್ತಿರ ಈಗಾಗಲೇ ಕೃಷಿ ಜಮೀನು ಇದ್ದರೆ ಆ ನಿಯಮ ಅನ್ವಯಿಸುತ್ತಿರಲಿಲ್ಲ. ಹಿಂಗಾಗಿ ಕೃಷಿ ಅನ್ನೋದು ಒಂದು ರೀತಿಯ ಏಕ-ಮುಖ ರಸ್ತೆ ಆಗಿತ್ತು. ಹೊಸದಾಗಿ ಒಳಬರಲು ಕಾನೂನುಬದ್ಧ ದಾರಿಯೇ ಇರಲಿಲ್ಲ. ಇದು ಒಂದು ರೀತಿಯ “ರೈತನ ಮಗನಷ್ಟೇ ರೈತನಾಗಬಹುದು ” ಎಂಬ ವರ್ಣಾಶ್ರಮದ ನಿಯಮವಿದ್ದಂತೆ ಇತ್ತು ” ಎಂದಳು
ನಾನು “ಆದರೆ ಅದರಿಂದ ಯಾರೋ ರೊಕ್ಕುಳ್ಳ ಕುಳಗಳು ರೈತರಿಗೆ ದುಡ್ಡಿನ ಆಶೆ ತೋರಿಸಿ ಜಮೀನು ಲಪಟಾಯಿಸುವದು ತಪ್ಪುತ್ತಿತ್ತಲ್ಲ?” ಎಂದೆ .
ಅಜ್ಜಿ ತುಂಟತನದಿಂದ “ದುಡ್ಡಿನ ಆಶೆ ಪತ್ರಕರ್ತರಿಗೆ ಇರಬಹುದು, ರಾಜಕಾರಣಿಗಳಿಗೆ ಇರಬಹುದು, ಅಧಿಕಾರಿಗಳಿಗೆ ಇರಬಹುದು, ಅವರು ದುಡ್ಡಿಗಾಗಿ ಕೆಲಸ ಮಾಡಬಹುದು, ಆದರೆ ರೈತ ಮಾತ್ರ ದುಡ್ಡಿನ ಆಶೆ ಮಾಡಬಾರದಲ್ಲಾ?” ಎಂದು ಕುಹಕದ ದನಿಯಲ್ಲಿ ಕೇಳಿದಳು.
ನಮ್ಮೆಲ್ಲರಿಗೂ ಹೆಚ್ಚಿನ ಗಳಿಕೆ – ಅವಕಾಶ ಕ್ಕಾಗಿ ನ್ಯಾಯ ಬುದ್ಧ ದಾರಿ ಹುಡುಕಿಕೊಳ್ಳುವ ಹಕ್ಕಿರುವಂತೆ ರೈತನಿಗೂ ಇರಬೇಕಾದದ್ದು ನ್ಯಾಯ ಎಂದು ಒಪ್ಪಿದೆ. ಈ ಭೂ ಸುಧಾರಣೆ ಕಾಯ್ದೆಗಳು ರೈತನ ಆಯ್ಕೆಯ ಸ್ವಾತಂತ್ರ್ವವನ್ನು ಮೊಟಕುಗೊಳಿಸಿ ಅವನಿಗೆ ಅನ್ಯಾಯವನ್ನು ಮಾಡಿವೆ ಎಂದು ನನಗೆ ಹೊಳೆಯಿತು. ಇಷ್ಟಾಗಿ ರೈತ ಎಂದರೆ ಯಾರದೋ ಬಲೆಗೆ ಬೀಳುವ ದಡ್ಡ ಎಂದುಕೊಳ್ಳುವುದು ಆ ಸಮುದಾಯಕ್ಕೆ ಮಾಡುವ ಅವಮಾನ ಎಂದುಕೊಂಡು ಅಜ್ಜಿಗೆ ಹ್ಞೂಂಗುಟ್ಟಿದೆ.
ಅಜ್ಜಿ ಮುಂದುವರಿಸಿ “ಈಗ ಸರಕಾರ ಭೂಸುಧಾರಣೆ ಕಾಯದೆಯಲ್ಲಿನ ಕಟ್ಟಲೆಗಳನ್ನು ಹಿಂದೆ ತೆಗೆದುಕೊಂಡಿದೆ. ನಿನಗೆ ಜಮೀನು ಕೊಳ್ಳಲು ಕಾನೂನಿನ ಅಡ್ಡಿ ಇಲ್ಲ. ಅದಕ್ಕಾಗಿಯೇ ನಿನಗೆ ಹೇಳತಾ ಇದೀನಿ” ಎಂದಳು.
ಅಜ್ಜಿಯ ವಾದ ಸರಣಿ ಒಂದು ಪೂರ್ಣ ಸುತ್ತು ಬಂದಿತ್ತಾದರೂ ಹೊಲ ಕೊಳ್ಳುವ ವಿಚಾರ ನನಗಿನ್ನೂ ಒಪ್ಪಿಗೆಯಾಗಿರಲಿಲ್ಲ. ಹೀಗಾಗಿಯೇ ನಾನು – “ದಿನಾ ಪತ್ರಿಕೆಗಳೊಳಗ ನೀರಿಗಾಗಿ ರೈತರ ಹಾಹಾಕಾರವೆಂದೋ, ಅತಿವೃಷ್ಟಿಯಿಂದ ಬೆಳೆಹಾನಿಯಂದೋ ಸುದ್ದಿ ಬಂದೇ ಬರತಾವು. ಬಿತ್ತನೆಯ ಬೀಜಗಳು ಖೋಟಾ ಎಂದೋ, ಗೊಬ್ಬರ-ಕೀಟನಾಶಕದ ಅಭಾವವೆಂದೋ ರೈತರ ಸಮಸ್ಯೆ ಇದ್ದೇ ಇರತಾವು. ಎಲ್ಲಾ ಗಂಡಾಂತರ ದಾಟಿ ಅಕಸ್ಮಾತ ಒಳ್ಳೆ ಇಳುವರಿ ಬಂದರೂ ಬೆಲೆ ಕುಸಿದು, ಹಾಕಿದ ಖರ್ಚೂ ಹುಟ್ಟದ ರೈತರು ಆತ್ಮಹತ್ಯೆ ಮಾಡಿಕೊಂಡ ಎಷ್ಟು ಸುದ್ದಿಗಳಿಲ್ಲಾ ? ಇಂತಾದರಾಗ ನಾನು ತಿಂಗಳ ಕೊನೆಗೆ ನೀಯತ್ತಿನಿಂದ ಸಂಬಳ ತಂದು ಕೊಡುವ ನೌಕರಿ ಬಿಟ್ಟು ಒಕ್ಕಲುತನ ಮಾಡಲು ಹೋಗಲಾ ?” ಎಂದು ಕೇಳಿದೆ.
ಅಜ್ಜಿ ಹೌಹಾರಿ “ನಾನೆಲ್ಲಿ ಆ ಮಾತು ಹೇಳಿದೆ ನನ್ನವ್ವ ?” ಎಂದಳು. ಅನುನಯದ ದನಿಯಲ್ಲಿ ಮುಂದುವರಿಯುತ್ತಾ “ ಈಗಿನ ಕಾಲದಾಗ ಒಂದು ಸಣ್ಣ ಹೊಲದ ಆದಾಯದ ಮ್ಯಾಲ ಬದುಕೋದು ಸಾಧ್ಯನ ಇಲ್ಲ. ನೀನು-ನಿನ್ನ ಗಂಡ ತುಸು ವರ್ಷ ದುಡಿದು ಉಳಿತಾಯ ಮಾಡರಿ. ಒಂದು ಆದಾಯದ ಮೂಲ ಖಾತರಿ ಮಾಡಿಕೊಂಡು ಕೃಷಿಗೆ ಇಳಿಯಿರಿ. ಒಂದು ವಿಷಯ ನೆನಪಿನ್ಯಾಗ ಇಟಗೋರಿ – ಮನಷ್ಯಾನ ಅತೀ ಅಮೂಲ್ಯ ಆಸ್ತಿ ಅಂದರ ಅವನ ಹೊಲ-ಮನಿ-ಫ್ಲಾಟು-ಕಾರು ಅಲ್ಲ, ಅದು ಅವನ ಆರೋಗ್ಯ. ನಿಮ್ಮಜ್ಜ ಹುಟ್ಟುವಾಗ ನೂರಾರು ಎಕರೆ ಜಮೀನು ಹೊಂದಿದ್ದಾವ ಮದ್ಯವಯಸ್ಸಿನಾಗ ಕೆಎಂಸಿ ದವಾಖಾನೆದಾಗ ನರಳಕೋತ ಮಲಗಿದಾಗ ಯಾವ ಆಸ್ತಿನೂ ಅವನ ಉಪಯೋಗಕ್ಕ ಬರಲಿಲ್ಲ. ಈ ದೊಡ್ಡ ಊರಿನ್ಯಾಗ ಹೊಗಿ ಕುಡಕೋತ, ಕೆಮಿಕಲ್ ಬಳಸಿ ಬೆಳೆದ ಆಹಾರ ತಿನ್ನಕೋತ ಬದುಕುವ ಬದಲು, ಶುದ್ಧ ಗಾಳಿ,
ನಿಸರ್ಗದ ವಾತಾವರಣ ಇರೋವಲ್ಲಿಗೆ ಹೋಗಿ. ಬದುಕಿ. ಹಳ್ಳಿಗಳಲ್ಲಿಯೂ ವಾತಾವರಣ ಕೆಟ್ಟಿದೆಯಾದರೂ, ಆದರೆ ಇಲ್ಲಿಗಿಂತ ಪಾಡು. ಅಲ್ಲಿ ಸಾಧ್ಯವಾದಷ್ಟು ನಿಮ್ಮ ಆಹಾರವನ್ನು ನೀವೆ ಬೆಳೆದುಕೊಂಡು ತಿನ್ನಿ, ಸರಳ ಜೀವನ ನಡೆಸಿ. ನಿಮ್ಮ ಸುತ್ತಲಿನವರಿಗೆ ನೀವು ಕಲಿತ ವಿದ್ಯೆ, ಗಳಿಸಿದ ಸಂಪತ್ತಿನಿಂದ ಉಪಯೋಗ ಆಗುವುವ ಹಾಗೆ ಬದುಕಿ. ನಾನೂ-ನಿಮ್ಮಜ್ಜನೂ ಅರ್ಧ ಬದುಕಿದ ಜೀವನವನ್ನು ನೀವು ಪೂರ್ತಿ ಬದುಕಿ” ಎಂದು ಎರಡೂ ಕೈಯತ್ತಿ ಆಶೀರ್ವದಿಸಿದಳು.
ನನಗೆ ಎಚ್ಚರವಾಯಿತು – ಅಜ್ಜಿ ಕನಸಿನಲ್ಲಿ ನನಗೊಂದು ಕನಸು ಕೊಟ್ಟು ಹೋಗಿದ್ದಳು- ಹೊಲವೇ ಜೀವನ ಸಾಕ್ಷಾತ್ಕಾರ !. “ಹೊಲವೇ ವಿಸ್ಮಯ” ಎಂದು ಗುನುಗುತ್ತ ಎದ್ದು ದಿನವನ್ನು ಶುರು ಮಾಡಿದೆ.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
ಸಂದೀಪ ತನ್ನ ಪಿಎಚ್‌ಡಿ ಡಿಫೆನ್ಸ್ ಮುಗಿಸಿ ವಾಪಸು ಬಂದ. ಅವರಪ್ಪ-ಅಮ್ಮನೂ, ನಮ್ಮ ಅಪ್ಪ-ಅಮ್ಮನೂ ಅವನನ್ನು ಎದುರುಗೊಳ್ಳಲು ಮೊದಲೆ ಬಂದು ನನ್ನ ಫ್ಲಾಟಿನಲ್ಲಿ ಉಳಿದುಕೊಂಡಿದ್ದರು. ಸಂದೀಪ ಬಂದ ಮೇಲೆ ಮನೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತು. ವರ್ಷಗಳ ನಂತರ ಮಗನನ್ನು ನೋಡುತ್ತಿದ್ದ ಅವರಪ್ಪ-ಅಮ್ಮ ಅವನನ್ನು ಬಿಟ್ಟೂ ಬಿಡದೆ ಅಚ್ಛೇ ಮಾಡತಾ ಇದ್ದದ್ದು ನನಗೆ ತಮಾಷೆ ಎನಿಸಿದರೆ ಅವನಿಗೆ ಇರಿಸು-ಮುರಿಸಾಗುತ್ತಿತ್ತು. ಇದೆಲ್ಲದರ ನಡುವೆ ನಮ್ಮಿಬ್ಬರಿಗೆ ಏಕಾಂತದಲ್ಲಿ ಮಾತನಾಡಲು ಅವಕಾಶವೇ ಸಿಗಲಿಲ್ಲ.
ಅವನು ಬಂದ ಮೂರನೆ ದಿನ ಅವನ ಇಂಟರ್‌ವ್ಯೂ ಇತ್ತು- ಆ ದಿನ ನಾನು ಅವನನ್ನು ಇಂಟರ್‌ವ್ಯೂಗೆ ಬಿಟ್ಟು ಕಚೇರಿಗೆ ಹೋಗುವುದು ಎಂದಾಯ್ತು. ಕಾರಿನಲ್ಲಿ ಕುಳಿತ ಮೇಲೆ ನಮಗೆ ಏಕಾಂತದಲ್ಲಿ ಮಾತನಾಡುವ ಅವಕಾಶ ಸಿಕ್ಕಿತು. ಅದು-ಇದು ಮಾತನಾಡಿದ ಮೇಲೆ ನಾನು ಅಜ್ಜಿಯ ಕನಸಿನ ವಿಷಯವನ್ನು ಸಾದ್ಯಂತವಾಗಿ ಹೇಳಿದೆ. ಸಂದೀಪ ಮೊದಲಿನಿಂದಲೂ ಮೌನಿ. ಈಗಂತೂ ಮನೋವೈದ್ಯನಾದ ಮೇಲೆ ಎದುರಿದ್ದವರ ಮಾತನ್ನು ಗಮನಗೊಟ್ಟು ಕೇಳುವುದು ಅವನ ಉದ್ಯೋಗದ ಭಾಗವೇ ಆಗಿದೆ. ಅವನು ನನ್ನ ಮಾತನ್ನು ಲಕ್ಷ್ಯಕೊಟ್ಟು ಕೇಳಿದ. ನಾನು ನನ್ನ ಪುರಾಣ ಮುಗಿಸುವುದಕ್ಕೆ ಸರಿಯಾಗಿ ಅವನ ಇಂಟರ್‌ವ್ಯೂ ಜಾಗ ಬಂದಿತು. ಅವನಿಗೊಂದು ಹೂಮುತ್ತು ಕೊಟ್ಟು “ಆಲ್ ದ ಬೆಸ್ಟ್ʼ ಎಂದು ಹೇಳಿ, ನನ್ನ ಕಚೇರಿಗೆ ಹೋದೆ.
ಮದ್ಯಾಹ್ನದ ನಂತರ ಇಂಟರ್‌ವ್ಯೂ ಮುಗಿಸಿ ಸಂದೀಪ ನಮ್ಮ ಕಚೇರಿಗೆ ಬಂದ. ನಮ್ಮ ಎಡಿಟೋರಿಯಲ್ ಮೀಟಿಂಗಿಗೆ ಹೊರಟಿದ್ದ ನಾನು ಅವನನ್ನು ನನ್ನ ಕೋಣೆಯಲ್ಲಿ ಕೂಡಿಸಿ ಮೀಟಿಂಗಿಗೆ ಹೋದೆ. ನಾನು ಮರಳಿ ಬಂದಾಗ ಸಂದೀಪ ನನ್ನ ಕಪಾಟಿನಲ್ಲಿದ್ದ ಫೈಲುಗಳನ್ನು ಆಚೆ ತೆಗೆದಿಟ್ಟಿದ್ದ. ನನ್ನ ಕಂಪ್ಯೂಟರಿನಲ್ಲಿ ಏನೋ ನೋಡತಾ ಕುಳಿತಿದ್ದ.
ನಾನು “ಏನೋ ಕಳ್ಳ, ನನ್ನ ಪಾಸ್‌ವರ್ಡ್ ಹೆಂಗೋ ಕಂಡುಹಿಡಿದೆ?” ಎಂದು ಕೇಳಿದೆ.
ಅವನು “ನಿನ್ನನ್ನು ಇಷ್ಟು ವರ್ಷದಿಂದ ಪ್ರೀತಿಸ್ತಾ ಇದ್ದೀನಿ. ಇಷ್ಟು ವರ್ಷದಿಂದ ನೋಡ್ತಾ ಇದ್ದೀನಿ ಪಾಸ್‌ವರ್ಡ ಊಹಿಸೋದು ಏನು ಕಷ್ಟ? ಎಂದು ಕಣ್ಣು ಮಿಟಿಕಿಸಿದ.
ಅಷ್ಟೇ ಅಲ್ಲದೇ ಮುಂದುವರೆದು “ಆದರೆ ನಾನು ನಿನ್ನ ಕಂಪ್ಯೂಟರು-ಕಪಾಟು ಹುಡುಕಿದ್ದು ನಿನ್ನ ಪ್ರೇಮಿಯಾಗಿ ಅಲ್ಲ, ಒಬ್ಬ ಮನೋವೈದ್ಯನಾಗಿ. ಈಗ ಇಲ್ಲಿ ಕುಳಿತುಕೋ, ಮಾತನಾಡಬೇಕಾಗಿದೆ” ಎಂದ.
ನಾನು ಅವನ ಪಕ್ಕ ಕುರ್ಚಿ ಎಳೆದುಕೊಂಡು ಕುಳಿತೆ.
ಅವನು “ನಿಮ್ಮ ಅಪ್ಪ ಹುಟ್ಟಿದ್ದು ಯಾವ ವರ್ಷ ಅಂತ ನಿಮ್ಮ ಅಜ್ಜಿ ಕನಸಿನಲ್ಲಿ ಹೇಳಿದ್ದಳು ?” ಎಂದ.
ನಾನು ಗೊತ್ತಿಲ್ಲ ಎನ್ನುವಂತೆ ತಲೆಯಾಡಿಸಿದೆ.
ಅವನು “ನಿಮ್ಮ ಅಜ್ಜಿ ರಿಟೈರಾದದ್ದು ಯಾವ ವರ್ಷ ಅಂತ ಹೇಳಿದಳು ?” ಎಂದ.
ನಾನು ಈ ಸಲವೂ ತಲೆಯಾಡಿಸಿದೆ.
ಅವನು “ಯಾವ ಇಸ್ವಿಯಲ್ಲಿ ಭೂಸುಧಾರಣೆ ಕಾಯ್ದೆ ಬಂತು, ಆವಾಗಿನ ಕೃಷಿ ಭೂಮಿಯ ಲೆಕ್ಕವನ್ನು ಸರಿಯಾಗಿ ನೆನಪಿಟ್ಟುಕೊಂಡು ಹೇಳಿದ್ದ ನಿಮ್ಮಜ್ಜಿ ತನ್ನದೇ ಜೀವನದ ಮುಖ್ಯ ಘಟನೆಗಳ ಇಸವಿ ಹೇಳಿರಲಿಲ್ಲ ಯಾಕೆ “ ಎಂದು ತುಂಟ ನಗೆ ನಕ್ಕ.
ನಾನು ಪ್ಯಾಲಿ ನಗೆ ನಕ್ಕು ಅವನನ್ನೇ ನೋಡುತ್ತಾ ಕುಳಿತೆ.
ಅವನು “ಯಾಕೆಂದರೆ ಕಾಯದೆ ಬಗೆಗಿನ ಮಾಹಿತಿ ಗೂಗಲ್ಲಿನಲ್ಲಿ ಸಿಗುತ್ತದೆ, ಆದರೆ ನಿಮ್ಮಜ್ಜಿಯ ವಿವರಗಳು ಸಿಗುವುದಿಲ್ಲ” ಎಂದು ಹೇಳಿ “ನೀನು ಈ ಕೆಲ ದಿನಗಳ ಹಿಂದೆ ಬರೆದ ವರದಿಗಳನ್ನು ನೋಡಿದೆ. ನೀನು ಯಾವ-ಯಾವ
ವಿಷಯವನ್ನು ಗೂಗಲ್ಲಿನಲ್ಲಿ ಹುಡುಕಿದ್ದೀಯಾ ಅನ್ನೋದನ್ನ ನೋಡಿದೆ, ಅದರಿಂದ ನಿನ್ನ ಅಜ್ಜಿಯ ಕನಸಿನ ಬಗೆಗೆ ನನಗೆ ಒಂದು ವಿಷಯ ಖಾತ್ರಿಯಾಯಿತು”.
ನಾನು “ಏನೂ?” ಎಂದು ಆತುರದಿಂದ ಕೇಳಿದೆ.
ಅವನು “ಕಾರ್ಪೋರೇಟ್ ಕೆಲಸ ಬಿಟ್ಟು ಕೃಷಿಗೆ ಇಳಿದ ಕವಿತಾ ಮಿಶ್ರಾ ಅವರ ಸಂದರ್ಶನ ಮಾಡಲು ನೀನು ಅವರ ಮನೆ-ಹೊಲಕ್ಕೆ ಹೋಗಿದ್ದಿ. ಅವರನ್ನು ನೋಡಿ ನಿನಗೂ ಕೃಷಿಗೆ ಇಳಿಯಬೇಕೆಂಬ ಆಕಾಂಕ್ಷೆ ಹುಟ್ಟಿದೆ. ಅದೇ ವಿಷಯ ನಿನ್ನ ತಲೆಯಲ್ಲಿ ಇದ್ದು ನಿಮ್ಮಜ್ಜಿ ಹೇಳಿದಂತೆ ಕನಸು ಬಿದ್ದಿದೆ. ಮೊನ್ನೆ ಕರ್ನಾಟಕ ಸರಕಾರ “ಭೂ ಸುಧಾರಣೆ ಮಸೂದೆ-೨೦೨೦” ಜಾರಿಗೆ ತಂದಾಗ ನೀನು ಅದರ ಸಾಧಕ-ಬಾಧಕಗಳ ಬಗ್ಗೆ ವಿಷಯ ಸಂಗ್ರಹ ಮಾಡಿ ಲೇಖನ ಬರೆದಿದ್ದಿ. ಅವಾಗ ನೀನು ಸಂಗ್ರಹಿಸಿದ ಅಂಕಿ-ಅಂಶಗಳೇ ನಿಮ್ಮ ಅಜ್ಜಿ ಹೇಳಿದಂತೆ ಕನಸಾಗಿತ್ತು” ಎಂದ.
ನನ್ನ ಕನಸಿನ ರಹಸ್ಯವನ್ನು ಬಿಡಿಸಿದ ಅವನ ಜಾಣತನದ ಬಗ್ಗೆ ಮೆಚ್ಚುಗೆಯಾಯಿತು. ಆದರೂ ಒಂದು ಸಂದೇಹ – “ಹಾಗಾದರೆ ನಮ್ಮದೇ ಒಂದು ಹೊಲ ಮಾಡಬೇಕೆನ್ನುವುದು ನನ್ನ ಹುಚ್ಚು ಕನಸಷ್ಟೇ ಅಂತಿಯಾ?” ಎಂದು ಅವನನ್ನು ಕೇಳಿದೆ.
ಅವನು “ ಅದು ನಿನ್ನ ಕನಸಷ್ಟೇ ಅಲ್ಲ, ನನ್ನ ಕನಸೂ ಹೌದು, ನಮ್ಮಿಬ್ಬರ ಕನಸೂ ಹೌದು” ಎಂದು ಒಗಟಿನ ಮಾತನಾಡಿದ.
ನನ್ನ ಮುಖದಲ್ಲಿ ಮೂಡಿದ ಪ್ರಶ್ನೆಗೆ ಉತ್ತರಿಸುತ್ತಾ ಅವನು “ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳು ಸಿಗೋದೇ ಕಷ್ಟ. ಇನ್ನು ಮಾನಸಿಕ ಆರೋಗ್ಯದ ಸವಲತ್ತುಗಳು ಇಲ್ಲವೇ ಇಲ್ಲ ಎಂದರೂ ನಡೆದೀತು. ರೈತರ ಆತ್ಮಹತ್ಯೆ ಬಗ್ಗೆ ನೀನು ಒಂದು ಲೇಖನ ಬರೆದಿದ್ದೆ. ಒಂದು ವಿಷಯ ನೀನು ಮರೆತಿದ್ದೆ – ಇಷ್ಟು ಆತ್ಮಹತ್ಯೆಗಳು ಆಗಲು ನಮ್ಮ ಹಳ್ಳಿಗಳಲ್ಲಿ ಮಾನಸಿಕ ಆರೋಗ್ಯದ ಸವಲತ್ತುಗಳು ಇಲ್ಲದೇ ಇರೋದು ಒಂದು ಕಾರಣ. ಆದುದರಿಂದ ಬೆಂಗಳೂರಿನಲ್ಲಿ ಕೆಲ ವರ್ಷ ಕೆಲಸ ಮಾಡಿ, ನಂತರ ನಮ್ಮಪ್ಪನ ಹುಟ್ಟೂರಲ್ಲಿ ಪಿತ್ರಾರ್ಜಿತವಾಗಿ ಬಂದ ಹೊಲದಲ್ಲಿ ಇದ್ದು ಅಲ್ಲಿಯ ಸುತ್ತಲಿನ ಹಳ್ಳಿಗಳಲ್ಲಿ ನಾನು ಗಳಿಸಿದ ನೈಪುಣ್ಯವನ್ನು ಉಪಯೋಗಿಸಿ ಸೇವೆ ಸಲ್ಲಿಸಬೇಕೆಂದು ನನ್ನ ಆಸೆ. ರಾಣಿ ಸಾಹೇಬರಿಗೆ ಒಪ್ಪಿಗೆಯಾ? “ ಎಂದು ಕೇಳಿದ.
ನಾನು ಅದು ಆಫೀಸು ಅನ್ನೋದನ್ನು ದರಕಾರ ಮಾಡದೆ ಅವನಿಗೆ ತೆಕ್ಕೆ ಬಿದ್ದು ತುಟಿಗೆ ತುಟಿ ಹಚ್ಚಿ ಒಪ್ಪಿಗೆ ಸೂಚಿಸಿದೆ.
ಟಿಪ್ಪಣಿಗಳು :
ಕತೆ ಪೂರ್ತಿ ಕಾಲ್ಪನಿಕವಾಗಿದ್ದರೂ, ಅಲ್ಲಲ್ಲಿ ಐತಿಹಾಸಿಕ ವಾಸ್ತವಾಂಶಗಳಿವೆ:
ಆಚಾರ್ಯ ವಿನೋಬಾ ಭಾವೆ ೧೯೫೭-೫೮ರ ಕರ್ನಾಟಕ ಭೂದಾನ ಪಾದಯಾತ್ರೆಯಲ್ಲಿ ೧೦ ಸಾವಿರ ಎಕರೆ ಭೂಮಿಯನ್ನು ದಾನವಾಗಿ ಸಂಗ್ರಹಿಸಿದ್ದರು. ಶ್ರೀಮತಿಯರಾದ ಭಾಗಿರಥಿ ಬಾಯಿ ಪ್ರಭು, ಮೀರಾಬಾಯಿ ಕೊಪ್ಪಿಕರ, ಚೆನ್ನಮ್ಮ ಹಳ್ಳಿಕೇರಿ ಮುಂತಾದವರು ಮಹಿಳಾ ಭೂದಾನ ಪಡೆ ಮಾಡಿಕೊಂಡು ಈ ಚಳುವಳಿಯಲ್ಲಿ ಭಾಗವಹಿಸಿದ್ದರು. ಧಾರವಾಡ ಜಿಲ್ಲಾ ಗೆಜೆಟೀಯರ್‌ನಲ್ಲಿಯ ಅಂಕಿ-ಅಂಶಗಳು ಇಲ್ಲಿವೆ :
· ಶ್ರೀಮತಿ ಭಾಗಿರಥಿಬಾಯಿ ಪುರಾಣಿಕ – “ಮಾಯಿ”- ಸ್ಥಾಪಿಸಿದ ʼವನಿತಾ ಸೇವಾ ಸಮಾಜʼ ಇನ್ನೂ ಧಾರವಾಡದಲ್ಲಿದೆ.
- ಗುರುರಾಜ ಕುಲಕರ್ಣಿ – ಹುಟ್ಟಿದ್ದು ಹಳೆ ಧಾರವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ. ಓದಿದ್ದು ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ. ಹವ್ಯಾಸಿ ಬರಹಗಾರರು. ಪತ್ರಿಕೆಗಳಲ್ಲಿ ಲಲಿತ ಪ್ರಬಂಧಗಳು, ಸಣ್ಣ ಕಥೆಗಳು ಪ್ರಕಟವಾಗಿವೆ. “ದನಿಪಯಣ” ಎಂಬ ನಮ್ಮ ಊರು-ನಾಡುಗಳ ಇತಿಹಾಸ ತಿಳಿಸುವ ಪಾಡ್‌ಕಾಸ್ಟ್‌ನ ಕರ್ತೃರಾಗಿದ್ದಾರೆ.