ಹೋಳಿ ಹುಣ್ಣಿಮೆ ಹೋಳಿ ಕುಣಿತ

ಕುಡುಬಿ ಜನಾಂಗದಲ್ಲಿ ಹೋಳಿ ಹುಣ್ಣಿಮೆ ಪ್ರಾತಃ ಕಾಲದಲ್ಲೆದ್ದು ಎಣ್ಣೆ ಅಭ್ಯಂಜನ ಸ್ನಾನಗೈದು ಶುಚಿಯಾಗಿ ಹೋಳಿ ವೇಷ ಕಟ್ಟಿಕೊಳ್ಳಲು ತೊಡಗಿದರೆ ಮೂರ್ನಾಲ್ಕು ಗಂಟೆ ಇವರು ಬ್ಯುಸಿ. ಶಕುಂತಲಾ ಸವಿ ಅವರು ಕುಡುಬಿ ಜನಾಂಗದಲ್ಲಿ ಹೋಳಿ ಹುಣ್ಣಿಮೆ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಹೋಳಿ ಹುಣ್ಣಿಮೆಗೆ ವಾರಗಳು ಇರುವಂತೆಯೇ ಹಿರಿಯರು ನಿರ್ಧರಿಸಿದ ಶುಭ ಮೂಹೂರ್ತವೊಂದರಲ್ಲಿ ಕುಡುಬಿ ಜನಾಂಗದ ಆಯಾಯ ಕೂಡುಕಟ್ಟಿನ ಎಲ್ಲಾ ಸದಸ್ಯರು ಮಂಡಕಾರಿ ನಾಯ್ಕರ ಮನೆಯಲ್ಲಿ ಒಗ್ಗೂಡುತ್ತಾರೆ. ಪ್ರಾತಃ ಕಾಲದಲ್ಲೆದ್ದು ಎಣ್ಣೆ ಅಭ್ಯಂಜನ ಸ್ನಾನಗೈದು ಶುಚಿಯಾಗಿ ಹೋಳಿ ವೇಷ ಕಟ್ಟಿಕೊಳ್ಳಲು ತೊಡಗಿದರೆ ಮೂರ್ನಾಲ್ಕು ಗಂಟೆ ಇವರು ಬ್ಯುಸಿ. ಹೋಳಿ ಕುಣಿತಕ್ಕೆ ಬರುವ ಸರ್ವಸದಸ್ಯರನ್ನು ಶೃಂಗರಿಸಿದ ಮೇಲೆಯೇ ಮಂಡಕಾರಿ ನಾಯ್ಕ ತಾನು ಗೆಜ್ಜೆ ಕಟ್ಟಿಕೊಳ್ಳಲು ಅಣಿಯಾಗುತ್ತಾನೆ. ಅವರ ವೇಷ ಮುಗಿಯುತ್ತಿದ್ದಂತೆಯೇ ಕುಡುಬಿಯರ ಕೂಡುಕಟ್ಟಿನಲ್ಲಿ ಹಬ್ಬದ ವಾತವರಣ ಕಳೆಗಟ್ಟುತ್ತಾ ಹೋಗುತ್ತದೆ.

‘ಕೃಷ್ಣ ದೇವತೊಕ ಕೇಳು ಕೇಳಾಯ್ತಾ…
ನಾಗದೇವತೊಕ ಕೇಳು ಕೇಳಾಯ್ತಾ…
ಗಂಗಾದೇವಿ ತೊಕ ಕೇಳು ಕೇಳಾಯ್ತಾ’…

ಇಂತಹ ನೂರಾರು ಅವರ ಮಾತೃಭಾಷೆ ಕೊಂಕಣಿಯನ್ನು ಹೋಲುವ ಕುಡುಬಿ ಭಾಷೆಯ ಸಾಲುಗಳೊಂದಿಗೆ ಸಮಸ್ತ ದೇವರ ಹೊಗಳುವಿಕೆಯೊಂದಿಗೆ ಹೋಳಿ ಕುಣಿತ ಆರಂಭಗೊಳ್ಳುತ್ತದೆ. ಆರತಿ ದೀಪವನ್ನು ಬೆಳಗುತ್ತಾ ತಮ್ಮ ಕುಲದೇವರು ಶ್ರೀ ಮಲ್ಲಿಕಾರ್ಜುನನ್ನು ಮನದಲ್ಲಿ ನೆನವ ಮಂಡಕಾರಿ ನಾಯ್ಕ ಹೋಳಿ ವೇಷ ತೊಟ್ಟ ಗುಂಪಿನ ಸರ್ವಸದಸ್ಯರ ಹಣೆಗೆ ಕುಂಕುಮ ಹಚ್ಚಿ ನಿರ್ವಿಘ್ನವಾಗಿ ಹೋಳಿ ನೆಡೆಯುವಂತೆ ಕೋರಿಕೊಳ್ಳುತ್ತಾನೆ. ಮಂಡಕಾರಿ ನಾಯ್ಕರ ಮನೆಯಲ್ಲಿ ಹೋಳಿ ಕುಣಿತದ ಮೊದಲ ಪ್ರದರ್ಶನ ನಡೆದ ನಂತರ ಊರಗ್ರಾಮ ದೇವತೆಯ ಗುಡಿ, ಪ್ರಮುಖ ದೇವಸ್ಥಾನ, ಊರಿನ ಪರಂಪರೆಯ ಮನೆತನದ ಮನೆಗಳಿಗೆ ಸಾಗಿ ಬರುವ ಹೋಳಿ ಕುಣಿತದ ಪ್ರದರ್ಶನವನ್ನು ನೀಡುತ್ತಾರೆ. ಬೆಲ್ಲ ನೀರಿನೊಂದಿಗೆ ಕುಡುಬಿಯರ ತಂಡವನ್ನು ಸ್ವಾಗತಿಸಿ ಅವರ ಆಕರ್ಷಕ ಹೋಳಿ ಕುಣಿತ ಕೋಲಾಟದ ಸೊಬಗನ್ನು ಸವಿದು ಅವರಿಗೆ ಬೆಳ್ತಿಗೆ ಅಕ್ಕಿ, ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಕಾಣಿಕೆಗಳನ್ನು ನೀಡಿ ಗೌರವದಿಂದ ಬೀಳ್ಕೊಡಲಾಗುತ್ತದೆ.

ಪ್ರತಿ ವರ್ಷ ಐದು ದಿನಗಳ ಕಾಲ ನೆಡೆಯುವ ಕುಡುಬಿಯರ ಹೋಳಿ ಆಚರಣೆ ಮೊದಲೆರಡು ದಿನ ಪಕ್ಕದೂರುಗಳಲ್ಲಿ ವಾಸ್ತವ್ಯ ಹೊಂದಿರುವ ಸ್ವಜಾತಿ ಭಾಂದವರ ಮನೆಯಲ್ಲಿ ಪ್ರದರ್ಶನ ನೀಡುವ ಮೂಲಕ ನೆಡೆಯುತ್ತದೆ. ಅಲ್ಲಿ ಇಡೀ ತಂಡಕ್ಕೆ ಸೊಗಸಾದ ಭೋಜನದ ವ್ಯವಸ್ಥೆಯನ್ನು ಮಾಡಿ ಗೌರವಾಧರಗಳಿಂದ ನೋಡಿಕೊಳ್ಳಲಾಗುತ್ತದೆ.

ಕೊನೆಗೆರಡು ದಿನ ಇರುವಂತೆಯೇ ತಮ್ಮೂರಿನ ಸ್ವಜಾತಿಯ ಮನೆಗಳಿಗೂ ಸಾಗಿ ಬಂದು ತಮ್ಮ ಗುಮ್ಟೆಯನ್ನು ಬಡಿಯುತ್ತಾ ಆಕರ್ಷಕ ಎನಿಸಿರುವ ಹೋಳಿ ನೃತ್ಯ, ಕೋಲಾಟಗೈದು ಎಲ್ಲರ ಮನವನ್ನು ತಣಿಸುತ್ತಾರೆ. ಎಷ್ಟೂ ಅನ್ಯಜಾತಿ ಮನೆಗಳಲ್ಲೂ ಕುಡುಬಿಯರ ಹೋಳಿ ಕುಣಿತದ ಪ್ರದರ್ಶನ ಮಾಡುವಂತೆ ಸ್ವತಃ ಹರಕೆಯನ್ನು ಕಟ್ಟಿಕೊಳ್ಳುವುದು ಉಂಟು. ಇದು ಊರಿನ ನಡುವಿನ ಒಗ್ಗಟ್ಟಿನ ಸಂಕೇತ.

ಹೋಳಿ ಹುಣ್ಣಿಮೆಯ ದಿನ ಮತ್ತೆ ಪುನಃ ಮಂಡಕಾರಿ ನಾಯ್ಕರ ಮನೆಯಲ್ಲಿ ಒಗ್ಗೂಡುವ ತಂಡ ಪ್ರದರ್ಶನಗೈದು ವೇಷ ಕಳಚಿ ಕಾಮದಹನ ನಡೆಸಿ ಸಿಹಿ ಭೋಜನ ಉಂಡು ಕಳಚಿದ ವೇಷಗಳನ್ನು ಒಗೆದು ಪೆಟ್ಟಿಗೆಗೆ ಸೇರಿಸಿ ಮಾಳಿಗೇಗೆರಿಸಿದರೆ ಮತ್ತೆ ಅದನ್ನು ತೆಗೆಯುದು ಮುಂದಿನ ವರ್ಷವೇ. ಇಲ್ಲಿಗೆ ಕುಡುಬಿಯರ ವಾರ್ಷಿಕ ಹೋಳಿ ಹಬ್ಬ ಸಮಾಪ್ತಿಗೋಳ್ಳುತ್ತದೆ.

ಹೋಳಿ ಹಬ್ಬ ಪೂರ್ವ ತಯಾರಿ

ಹೋಳಿ ಹಬ್ಬಕ್ಕೆ ಮೂರು ತಿಂಗಳು ಇರುವಂತೆಯೇ ಕುಡುಬಿಹಾಗೂ ಮರಾಠಿ ಜನಾಂಗದವರು ಹೋಳಿ ಕುಣಿತಕ್ಕೆ ತಯಾರಿ ಆರಂಭಿಸುತ್ತಾರೆ. ತಮ್ಮ ಸಮುದಾಯದ ಗುರಿಕಾರ ಅಥವಾ ಮಂಡಕಾರಿ ನಾಯ್ಕರ(ಪಂಗಡದಯಜಮಾನ) ಮನೆಯಲ್ಲಿ ಒಟ್ಟಾಗುವ ‘ಸಮುದಾಯದ ಹಿರಿ-ಕಿರಿಯ ಸದಸ್ಯರು’ ಹಬ್ಬದ ಕುರಿತು ಸುಧೀರ್ಘವಾಗಿ ಚರ್ಚಿಸುತ್ತಾರೆ. ನಂತರ ಹಗಲಿಡಿ ಬಿಸಿಲಿನಲ್ಲಿ ಬೆವರು ಬಸಿದು ಬದುಕಿನ ಕರ್ಮವನ್ನು ಮಾಡಿ ಮನೆ ಸೇರುವ ಕುಡುಬಿಯರು ರಾತ್ರಿಯ ಸಮಯದಲ್ಲಿ ಪಂಗಡದ ಯಜಮಾನನ ಮನೆಯಲ್ಲಿ ಒಟ್ಟಾಗುತ್ತಾರೆ. ಅಲ್ಲಿ ಸಮುದಾಯದ ಕಿರಿಯರಿಗೆ ಹೋಳಿ ಆಚರಣೆಯ ಮುಖ್ಯ ಆಕರ್ಷಣೆ ‘ಗುಮ್ಟೆ ಕುಣಿತ’(ಗುಮಟೆ), ಕೋಲಾಟದ ಹೆಜ್ಜೆಗಳನ್ನು ಕಲಿಸಿ ಹೋಳಿ ಹಬ್ಬಕ್ಕೆ ಅವರನ್ನು ತಯಾರಿಗೊಳಿಸಲಾಗುತ್ತದೆ. ಸಂಜೆಯ ಸೂರ್ಯ ಪಡುವಣದಲ್ಲಿ ಕಂತುವಾಗಲೇ ಕುಡುಬಿಯರ ಕೇರಿಯಿಂದ ಹೊರಡುವ ಢಂ..ಢಂ..ಗುಮ್ಟೆಯ ಸದ್ದು ಊರಿಡೀ ಮೊಳಗುತ್ತದೆ.

ಕುಡುಬಿ ಮತ್ತು ಮರಾಠಿ ಜನಾಂಗದ ಹೋಳಿ ಹಬ್ಬದ ವೇಷ ಭೂಷಣ

ಹೋಳಿ ವೇಷದಾರಿಗಳು ನೆರಿಗೆ ತೆಗೆದ ಸೀರೆಯನ್ನುಟ್ಟು ಕಾಲಿಗೆ ಗೆಜ್ಜೆಕಟ್ಟುತ್ತಾರೆ. ತುಂಬು ತೋಳಿನ ಬಿಳಿ ಅಂಗಿ ಧರಿಸಿ ತಲೆಗೆ ಬಿಗಿಯಾದ ಮುಂಡಾಸ್ಸನ್ನು ಸುತ್ತಿಕೊಳ್ಳುತ್ತಾರೆ. ಅದಕ್ಕೆ ಕೆಂಪು ಬಣ್ಣದ ಕಾಗದದ ಹೂಗಳನ್ನು ಸುತ್ತಿ.(ಹಿಂದೆ ಅಬ್ಬಲಿಗೆ(ಕನಕಾಂಬರ), ಸುರಿಗೆ ಹೂಗಳನ್ನು ಸುತ್ತಿಕೊಳ್ಳುತಿದ್ದರು) ಕಪ್ಪು ಬಣ್ಣದ ಭೀಮರಾಜ ಹಕ್ಕಿ ಹಾಗೂ ಬಿಳಿ ಮತ್ತು ಕೆಂಪು ಬಣ್ಣದ ಹಟ್ಟಿಮುದ್ದಾ ಹಕ್ಕಿಯ ಗರಿಯನ್ನು ಸಿಕ್ಕಿಸಿ ಬಣ್ಣ ಬಣ್ಣದ ಪಟ್ಟೆಗಳನ್ನು ಹೊದ್ದು ಕೈಯಲ್ಲಿ ಗುಮ್ಟೆಗಳನ್ನು ಹಿಡಿದು ಮನೆ ಮನೆಗೆ ಹೋಗಲು ಅಣಿಯಾಗುತ್ತಾರೆ. ಇದು ಕುಡುಬಿಯರ ಸೊಗಸಾದ ಹೋಳಿ ವೇಷ-ಭೂಷಣ.

ಗುಮ್ಟೆ

ಆವೆ ಮಣ್ಣಿನಿಂದ ತಯಾರಿಸಿದ ವಿಶಿಷ್ಟ ಮಡಿಕೆ. ಒಂದು ಕಡೆ ದೊಡ್ಡದಾದ ಬಾಯಿಯಿದ್ದರೆ ಇನ್ನೊಂದೆಡೆ ಸಣ್ಣ ತೂತಿರುತ್ತದೆ. ಉಡ ಜಾತಿಗೆ ಸೇರಿದ ಹರ್ಗದ ಚರ್ಮವನ್ನು ಸುಲಿದು ನಿರ್ಧಿಷ್ಟ ಹದ ಬರುವವರೆಗೆ ಬಿಸಿಲಲ್ಲಿ ಒಣಗಿಸಿ ಮಡಕೆಯ ಅಗಲದ ಬಾಯಿ ಇರುವ ಕಡೆ ಬಿಗಿಯಾಗಿ ಎಳೆದು ಹಗ್ಗದಿಂದ ಕಟ್ಟಲಾಗುತ್ತದೆ. ಇದನ್ನು ನುಡಿಸಿದರೆ ಅದ್ಬುತವಾದ ಶಬ್ದ ಹೊರಡುತ್ತದೆ. ಇದು ಹೋಳಿಯ ಆಕರ್ಷಕ ವಿಶೇಷ ಸಾಧನವೇ ಗುಮ್ಟೆ.


  • ಶಕುಂತಲಾ ಸವಿ

Leave a Reply

Home
Search
Menu
Recent
About
×