‘ಸಮಾಗಮ’ ಕೃತಿ ಪರಿಚಯ : ಮಾಲತಿ ರಾಮಕೃಷ್ಣ ಭಟ್

ಕಾದಂಬರಿಕಾರ ದಯಾನಂದ ತೋರ್ಕೆ ಅವರ ಸಮಾಗಮ ಕಾದಂಬರಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಸಮಾಗಮ
ಲೇಖಕರು : ದಯಾನಂದ ತೋರ್ಕೆ 
ಆದಿತ್ಯ ಪಬ್ಲಿಕೇಶನ್ ಬೆಳಗಾವಿ
ಮುದ್ರಣದ ವರ್ಷ: ೨೦೧೮
ಬೆಲೆ : ರೂ. ೧೧೫
ಪುಟ : ೧೦೮

ಸಾಹಿತಿ ಶ್ರೀ ದಯಾನಂದ ತೋರ್ಕೆಯವರು ಬರೆದಿರುವ ಈ ಕಾದಂಬರಿಯ ಸಂಕ್ಷಿಪ್ತ ಸಾರಾಂಶ ಹೀಗಿದೆ…..

ಇಲೆಕ್ಟ್ರಿಶಿಯನ್ ಕೆಲಸ ಮಾಡಿಕೊಂಡಿರುವ ವಿಷ್ಣು ಮತ್ತವನ ಪತ್ನಿ ಸಾವಿತ್ರಿ ಬೆಂಗಳೂರಿನ ಆಶ್ರಯ ಕಾಲನಿಯ ನಿವಾಸಿಗಳು. ಅವನ ಸೀಮಿತ ಸಂಬಳದಲ್ಲಿ ಇಬ್ಬರು ಮಕ್ಕಳ ಖರ್ಚು- ವೆಚ್ಚಗಳನ್ನು ಸಾವಿತ್ರಿ ತೂಗಿಸಿ ಹೊಂದಿ ಕೊಂಡಿದ್ದಳು. ಅವರ ತವರಿನಲ್ಲೂ ಬಡತನವೇ. ಅವಳಿಗೆ ಸುಜಾತ ಮತ್ತು ಸುಮಿತ್ರಾ ಎನ್ನುವ ವಯಸ್ಸಿಗೆ ಬಂದ ಇಬ್ಬರು ತಂಗಿಯರು. ಅವಳ ತಂದೆ ಹೃದ್ರೋಗಿಯಾದ್ದರಿಂದ ಇರುವ ಹೊಲವನ್ನು ನೋಡಿ ಕೊಳ್ಳುವುದೂ ಕಷ್ಟವಾಗಿತ್ತು. ಆದರೆ ಇದೆಲ್ಲದರ ಮಧ್ಯೆಯೂ ತಂದೆಯ ಅನಾರೋಗ್ಯ ತಿಳಿದೂ ಯಾವುದೇ ಚಿಂತೆ ಇಲ್ಲದೇ ತನ್ನ ಗೆಳತಿಯರೊಡನೆ ಪಾನಿಪೂರಿ ತಿಂದು ತಿರುಗುತ್ತಾ, ತಂಗಿ ಸುಜಾತಾ ಮಾತ್ರ ನಿರಾತಂಕವಾಗಿದ್ದಳು!!

 

ಒಮ್ಮೆ ಊರಿಗೆ ಹೋದಾಗ ಅವಳ ಬಗ್ಗೆಯೇ ತಂದೆ ಚಿಂತಿಸುತ್ತಿರುವುದನ್ನು ಕಂಡು ಸಾವಿತ್ರಿ ತಂಗಿಗೆ ಏನಾದರೊಂದು ದಾರಿ ಮಾಡಬೇಕೆನಿಸಿ ತನ್ನೊಡನೆ ಬೆಂಗಳೂರಿಗೆ ಕರೆತಂದು ಹೊಲಿಗೆ ಕ್ಲಾಸಿಗೆ ಸೇರಿಸಿದ್ದಳು. ಕಲೆ -ಕಸೂತಿಯ ಬಗ್ಗೆ ಏನೂ ಆಸಕ್ತಿ ಇರದ ಸುಜಾತಳಿಗೆ ಹೊಲಿಗೆ ಬೇಸರ ತರಿಸಿದರೂ, ಅಲ್ಲಿ ಜ್ಯೋತಿ ಎಂಬ ಸ್ನೇಹಿತೆ ಸಿಕ್ಕಿದ್ದು ಸಂತೋಷವಾಗಿತ್ತು. ಜ್ಯೋತಿಯ ತಾಯಿ ಸಾವುಕಾರ ರಾಮೇಗೌಡರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ತಂದೆ ಇರದ ಅವಳಿಗೆ ತಾನೂ ಕ್ಲಾಸು ಮುಗಿಸಿ ಸಂಪಾದಿಸಿ,ತಾಯಿಗೆ ಏನಾದರೂ ಸಹಾಯ ಮಾಡಬೇಕೆನ್ನುವ ಆಶೆಯಿತ್ತು.

ಆದರೆ ಇಂಜಿನಿಯರಿಂಗ್ ಮಾಡುತ್ತಿದ್ದ ರಾಮೇಗೌಡರ ಮಗ ಶಶಿಧರನೊಂದಿಗೆ ಪ್ರೇಮದ ಬಲೆಯಲ್ಲಿ ಬಿದ್ದ ಜ್ಯೋತಿ ಅವನ ಶ್ರೀಮಂತಿಕೆಯ ಆಕರ್ಷಣೆಗೆ ಸಿಲುಕಿ ಅವನಿಂದ ಹಣ ಪೀಕಲಾರಂಭಿಸಿದ್ದಳು. ಸಿನೇಮಾ, ಮೋಜು -ಪಾರ್ಟಿ ಎಂದು ಹುಡುಗರೊಂದಿಗೆ ಓಡಾಡುವ ಅವಳು ಸುಜಾತಳಿಗೆ ‘ಜೀವನ ಇರುವುದೇ ಸುಖ ಪಡಲು’ ಎಂದು ಮನೆಯಲ್ಲಿ ಸುಳ್ಳು ಹೇಳಿಸಿ, ಆಗಾಗ ತನ್ನೊಂದಿಗೆ ಕರೆದೊಯ್ಯುತ್ತಾ, ಅವಳನ್ನೂ ಹಾದಿ ತಪ್ಪಿಸಿದ್ದಳು!!. ಸುಜಾತಳಿಗೆ ಜೊತೆಗಾರನಾಗಿ ಬಂದವನು ಚಂದನ್ ಎಂಬ ಹುಡುಗ.

ಅವನ ತಂದೆ ವ್ಯಾಪಾರಿ ಪುಟ್ಟಣ್ಣ. ಮಗ ಕೇಳಿದಾಗಲೆಲ್ಲಾ ಹಣ ಕೊಡುತ್ತಿದ್ದರಿಂದ ಸುಜಾತಾಳ ಬೇಡಿಕೆಯನ್ನು ಈಡೇರಿಸುವುದು ಚಂದನ್ ನಿಗೆ ಕಷ್ಟವಾಗುತ್ತಿರಲಿಲ್ಲ. ಆದರೆ ಒಮ್ಮೆ ತನಗೆ ‘ಸ್ಕೂಟಿ’ ಬೇಕೆಂದು ಅವಳು ಹಠ ಹಿಡಿದಾಗ, ತಾಯಿಗೆ ಸುಳ್ಳು ಹೇಳಿ ತನ್ನ ಮನೆಯಲ್ಲೇ ತಾನೇ ಕಳ್ಳತನ ಮಾಡುವಷ್ಟು ದುಷ್ಟನಾಗಿದ್ದ ಚಂದನ್.!!

ಅಲ್ಲದೇ ಗುಟ್ಟಾಗಿ ದೇವಸ್ಥಾನದಲ್ಲಿ ಸುಜಾತಾಳನ್ನು ಮದುವೆಯಾಗಿ ಅವರು ದಾಂಪತ್ಯ ಜೀವನ ನಡೆಸುತ್ತಿದ್ದರು. ಇದೆಲ್ಲಿ ತಂದೆಗೆ ಗೊತ್ತಾಗಿ ತಮಗೆ ಶಿಕ್ಷೆಯಾಗುವುದೋ ಎಂದು ಹೆದರಿ ಇಬ್ಬರೂ ಊರು ಬಿಟ್ಟು ಮುಂಬಯಿಯ ರೈಲು ಹತ್ತಿದರು. ಆ ಗುರಿಯಿಲ್ಲದ ಪಯಣದಲ್ಲಿ ಅವರಿಗೊಬ್ಬ ಅಪರಿಚಿತ ಹೆಂಗಸು ಪರಿಚಯವಾದಳು.

ತಾನು ನಿಮಗಿಬ್ಬರಿಗೂ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಕೆ ಅವರನ್ನು ಕರೆದು ಕೊಂಡು ಹೋಗಿದ್ದೆಲ್ಲಿಗೆ?.. ಎಲ್ಲವನ್ನೂ ಕಳೆದುಕೊಂಡು ಮೂರ್ಖರಾದ ಅವರಿಬ್ಬರೂ ಮುಂಬಯಿಯಲ್ಲಿ ಪಟ್ಟ ಕಷ್ಟ ನಷ್ಟವೇನು?… ಕೊನೆಗೆ ಅವರು ಅಲ್ಲಿಂದ ಪಾರಾಗಿ ಬಂದಿದ್ದು ಹೇಗೆ? … ಅವರಿಬ್ಬರ ಮನೆಯಲ್ಲಿ ಈ ತಪ್ಪನ್ನು ಕ್ಷಮಿಸಿ ಅವರನ್ನು ಸ್ವೀಕರಿಸಿದರೆ?…. ಎನ್ನುವುದನ್ನು ತಿಳಿಯಲು ಕಾದಂಬರಿ ಯನ್ನು ನೀವೂ ಓದಿ ನೋಡಿ…..

ಹದಿ ಹರಯದವರು ಹಿರಿಯರ ಬುದ್ಧಿ ಮಾತು ಕೇಳದೇ ಹೇಗೆಲ್ಲಾ ಜೀವನವನ್ನು ದುರಂತದ ಅಂಚಿಗೆ ತಂದು ನಿಲ್ಲಿಸುತ್ತಾರೆ ಎನ್ನುವ ಕುರಿತು ಲೇಖಕರು ಇಲ್ಲಿ ಸಾಮಾಜಿಕ ಸಂದೇಶವನ್ನು ನೀಡಿದ್ದಾರೆ.ಇದು ಸರಾಗವಾಗಿ ಓದಿಸಿ ಕೊಂಡು ಹೋಗುವ ಸುಂದರ ಸಾಮಾಜಿಕ ಕಾದಂಬರಿಯಾಗಿದೆ.


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×