ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’ ಸಂಕಲನದ ಬಹುತೇಕ ಅಂಕಣಗಳು ಕೂಡಾ ಸಮಕಾಲೀನ ಜೀವನವೇ ಆಗಿದೆ. ಈ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪಿಟ್ಕಾಯಣ
ಲೇಖಕರು : ರಾಜಾರಾಂ ತಲ್ಲೂರು
ಪ್ರಕಾಶಕರು : ಬಹುರೂಪಿ ಪ್ರಕಾಶನ
ಬೆಲೆ : ೩೦೦.೦೦
ಸಾಮಾನ್ಯವಾಗಿ ಅಂಕಣಗಳ ಜೀವದ್ರವ್ಯ ಸಮಕಾಲೀನ ಜೀವನವೇ ಸರಿ. ಈ ಸಂಕಲನದ ಬಹುತೇಕ ಅಂಕಣಗಳು ಕೂಡಾ ಸಮಕಾಲೀನ ಜೀವನವೇ. ಆದರೆ ಉಳಿದ ಅಂಕಣಗಳಿಗೂ ಇವಕ್ಕೆ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು ಈ ಬರಹದ ಉದ್ದೇಶ. ಇದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಕೇಂದ್ರ ಎಂದರೂ, ಅದು ವಾಸ್ತವದ ನೆಲೆಯಲ್ಲಿ ಆಳುವವರ ಮರ್ಜಿಗೆ ಅನುಗುಣವಾಗಿ ವ್ಯಾಖ್ಯಾನಿಸಲ್ಪಡುತ್ತದೆ. ಅಂತಹ ಸಂದರ್ಭದಲ್ಲಿ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಇರುವವರು ಮತ್ತು ಇಲ್ಲದವರು ಎಂದು ಗ್ರಹಿಸಿದರೆ ಆಗ ಸಹಜವಾಗಿಯೇ ಪೂರಕವಾಗಿ ಇರುವವರಿಗೆ ಪ್ರಾಮುಖ್ಯತೆ ದೊರೆತು,ಇಲ್ಲದವರನ್ನು ತಮ್ಮ ವಿರೋಧಿ ಬಣಗಳೆಂದು ಪರಿಗಣಿಸುತ್ತಾರೆ. ಆಗ ಅವರಿಗೆ ಅನ್ಯಾಯ ಮಾಡಲು ಅವರ ಧರ್ಮ ಜಾತಿ ಪಕ್ಷ ಇತ್ಯಾದಿಗಳು ಒದಗಿಬರುತ್ತದೆ. ಆಗ ಇಡಿ ಸಮಾಜವನ್ನು ಒಡೆದು ಆಳುವ ನೀತಿ ರೂಪುಗೊಳ್ಳುತ್ತದೆ. ಇದರ ಭೀಕರ ಪರಿಣಾಮದ ಅಭಿವ್ಯಕ್ತಿಯೇ ಈ ಅಂಕಣಗಳ ಹೂರಣವಾಗಿದೆ. ಇಂತಲ್ಲಿ ಸರಕಾರದ ಅಂಗಗಳು ಅವರ ಕೈಯಲ್ಲಿ ಸಿಕ್ಕ ಕೈಗೊಂಬೆಗಳಾಗುತ್ತವೆ. ಇದಕ್ಕೆ ನಿದರ್ಶನಗಳಾಗಿ ಇಲ್ಲಿನ ಅಂಕಣಗಳನ್ನು ಗಮನಿಸಬಹುದು 1: ಜನಗಣತಿ ಎನ್ನುವುದು ಹತ್ತು ವರ್ಷಗಳಿಗೆ ಒಮ್ಮೆ ಸರಕಾರ ಕೈಗೊಳ್ಳಬೇಕಾದ ಕಾರ್ಯ. 1951 ರಲ್ಲಿ 2021 ರ ವರೆಗೆ ನಿರಂತರವಾಗಿ ಇದನ್ನು ನಡೆಸಲಾಗಿದ್ದು ನಂತರ ಸ್ಥಗಿತಗೊಂಡಿದೆ. ಇದನ್ನು ನಡೆಸದೆ ಇರುವುದಕ್ಕೆ ಕೋವಿಡ್ ಕಾರಣ ಎಂದರೂ ಈಗ ಅದರ ಆನಂತರ ಕೂಡಾ , ಅದನ್ನು ಕೈಗೊಳ್ಳದಿರಲು ಕಾರಣವೇನು ಎಂಬ ಪ್ರಶ್ನೆಯನ್ನು ಎತ್ತಿ; ಅದರ ಪರಿಣಾಮ ನಂತರದ ಜನಸಂಖ್ಯೆಯ ಲೆಕ್ಕ ಸಿಗದೆ ಇರುವುದರಿಂದ , ಅಷ್ಟು ಜನರು ಸರ್ಕಾರದ ಲೆಕ್ಕದಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂದಂತಾಗುತ್ತದೆ ಎಂದು ಸಾಬೀತು ಪಡಿಸುತ್ತಾರೆ.ಇದು ಸರಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

2: ಚುನಾವಣಾ ಆಯೋಗ, ಆಧುನಿಕ ತಂತ್ರಜ್ಞಾನದ ಯಂತ್ರದ ಬಳಕೆಯಿಂದ ಪ್ರಜಾಪ್ರಭುತ್ವದ ಮೂಲಾಧಾರವಾದ ಗುಪ್ತ ಮತದಾನವನ್ನು ಬಟಾಬಯಲಾಗಿಸಿದ ದುರಂತವನ್ನು, ಅದು ಆಳುವವರ ಕೈಗೊಂಬೆಯಾಗಿರುವುದನ್ನು ಬಯಲಿಗೆ ಎಳೆದಿದ್ದಾರೆ.
3: ಬಂಡವಾಳ ಶಾಹಿಗಳ ಪರವಾಗಿ ನಿಂತ ಸರ್ಕಾರದ ಹುನ್ನಾರಕ್ಕೆ, ಮೊದಲ ಬಾರಿಗೆ ರಾಜ್ಯ ಸಭೆಗೆ ನೇಮಕಗೊಂಡ ಸುಧಾಮೂರ್ತಿಯವರಿಗೆ ದೊರೆತ ಪ್ರಾಶಸ್ತ್ಯವನ್ನು _ ಅವರ ಮಾತುಗಳಿಗೆ ಹನ್ನೆರಡು ನಿಮಿಷಗಳು. ಸ್ವತಃ ಪ್ರಧಾನಿ ಅವರ ಮಾತುಗಳನ್ನು ಶ್ಲಾಘಿಸಿದ್ದು ಇದಕ್ಕೆ ನಿದರ್ಶನ.
4: ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಕೈಗಾರಿಕಾ ನೀತಿ ಮತ್ತು ಖಾಸಗಿ ವಲಯಕ್ಕೆ ಅದನ್ನು ಲೆಕ್ಕಿಸದೆ ಅನುಮತಿ ನೀಡುವ ಸರಕಾರದ ಧೋರಣೆಯ ಪರಿಣಾಮವನ್ನು ಬಯಲುಗೊಳಿಸಿದ್ದಾರೆ. ( ಉಡುಪಿ)
5. ಬಂಡವಾಳ ಶಾಹಿಗಳಗೆ ಬೇಕು ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ಸರ್ಕಾರ, ಸ್ಥಳೀಯರಿಗೆ ಅವರು ಸ್ಥಾಪಿಸುವ ಉದ್ದಿಮೆಗಳಲ್ಲಿ ಅವಕಾಶ ಕೊಡಲು ಒತ್ತಾಯಿಸುವಲ್ಲಿ ವಿಫಲಗೊಂಡಿರುವುದನ್ನು ಸೂಚಿಸುವಲ್ಲಿ ಹಿಂಜರಿಯುವುದಿಲ್ಲ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕುರಿತ ಶರತ್ತನ್ನು ಮೂಲದಿಂದ ಉಲ್ಲೇಖಿಸಿದ್ದಾರೆ.
ಮೇಲಿನ ಉಲ್ಲೇಖಗಳು ಅವರಿಗೆ ಇರುವ ಸಾರ್ವಜನಿಕ ಕಾಳಜಿಯನ್ನು, ಜೊತೆಗೆ ಸರ್ಕಾರದ ದ್ವಿಮುಖ ನೀತಿಯನ್ನು ಟೀಕಿಸುವ ನಿರ್ಭೀತಿಗೆ ಸಾಕ್ಷಿ. ಇದನ್ನೆಲ್ಲಾ ಅವರು ಅಧಿಕೃತ ಅಂಕಿಅಂಶಗಳನ್ನು ಒದಗಿಸುವ ಮೂಲಕ ಬಯಲಿಗೆ ಎಳೆಯುವುದು. ಇದಕ್ಕೆ ಬೇಕಾದ ಅಪಾರವಾದ ಅಧ್ಯಯನ ಶೀಲತೆ , ಇಂದು ಮಾಯವಾಗಿರುವ ಪ್ರಾಮಾಣಿಕತೆ ಅವರಲ್ಲಿ ಧಾರಾಳವಾಗಿ ಇರುವುದು ಖಚಿತಪಡಿಸುತ್ತದೆ. ಅಲ್ಲದೆ ಅವರು ಎತ್ತಿಕೊಂಡ ಸಮಸ್ಯೆಗಳು ಇಂದಿಗೂ ಚರ್ಚೆಯಲ್ಲಿ ಇರುವುದು ಅದಕ್ಕೆ ಇರುವ ಸಮಕಾಲೀನ ಮಹತ್ವವನ್ನು ಬಿಂಬಿಸುತ್ತದೆ.

ಉದಾಹರಣೆಗೆ: ಎ ಐ ( ಕೃತಕ ಬುದ್ಧಿಮತ್ತೆ) .ಅದರ ಅಪಾಯಗಳನ್ನು ( ಪ್ರಜೆಗಳ ಖಾಸಗಿತನಕ್ಕೆ ಧಕ್ಕೆ ತರುವ) ಆದ್ದರಿಂದಲೇ ಇಂದಿನ ಪ್ರಜಾಪ್ರಭುತ್ವದ ಮೌಲ್ಯಗಳ ತಳಹದಿಯ ಮೇಲೆ ನಿಂತ, ಅವರ ಸಾರ್ವಜನಿಕ ಜೀವನದ ಸರ್ವಾಂಗೀಣ ಸ್ವಾಸ್ಥ್ಯದ ಬಗೆಗಿನ ಕಾಳಜಿಗೆ, ಅವರ ಈ ಅಂಕಣಗಳು ಜೀವಂತ ಸಾಕ್ಷಿಯಾಗಿವೆ. ಇದನ್ನು ಕಳುಹಿಸಿ ನನ್ನ ಅರಿವಿನ ಎಲ್ಲೆಗಳನ್ನು ವಿಸ್ತರಿಸಿದ ಅವರಿಗೆ ಅಭಿನಂದನೆಗಳು. ಅವರ ಅಂಕಣಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ನನ್ನ ಮೆಚ್ಚಿನ ಶಿಷ್ಯ ಬಶೀರ್ ಅವುಗಳ ಮಹತ್ವವನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಚೆರ್ರಿ ಪಿಕ್ ಅಂತಹ ಇಂಗ್ಲೀಷ್ ನಾಣ್ಣುಡಿಗಳ ಬಳಕೆ ನಮ್ಮಂತಹ ಇಂಗ್ಲಿಷ್ ಬಾರದವರ ಗ್ರಹಿಕೆಗೆ ತೊಡಕನ್ನುಂಟು ಮಾಡುತ್ತವೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
