‘ಹೂವರಳಿ ಬಾಡುವ ಮುನ್ನ’ ಸಣ್ಣಕತೆ

ಜಾನಕಿ ಎದ್ದು ನಿಂತು ಮೈಕಿನ ಬಳಿಗೆ ಬಂದಳು. ಗಂಡ ಮೋಹನನಿಗೆ ಅಚ್ಚರಿಯಾಯಿತು. ಒಂದೇ ಮನೆಯಲ್ಲಿ ಇದ್ದರೂ ತನ್ನ ಹೆಂಡತಿ ಅದ್ಬುತ ಬರಹಗಾರ್ತಿ ಎಂದು ತಿಳಿದಿರಲಿಲ್ಲ ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಶೋಭಾ ನಾರಾಯಣ ಹೆಗಡೆ ಅವರ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

‘ರೀ… ರೀ… ನನಗೊಂದು ಸ್ಮಾರ್ಟ್ ಪೋನ್ ಬೇಕಿತ್ತು’ ಅಳುಕುತ್ತಲೇ ಕೇಳಿದಳು ಜಾನಕಿ. ಯಾಕೆ ಹೊಸ ಪೋನೀಗ? ನಂದು ಹಳೆದೇ ಇದೆಯಲ್ಲ,ಸಾಕಾಗಲ್ವಾ ಅದು?ಪೋನ್ ಮಾಡೋದು ಬಿಟ್ರೆ ಇನ್ನೇನು ಕೆಲಸ ಹೆಂಗಸರಿಗೆ ?ಗಂಡ ಮೋಹನ, ಜಬರ್ದಸ್ತಿನಿಂದ ಹೇಳಿದಾಗ,ತುಳುಕುವ ಕಣ್ಣೀರನ್ನು ಜಾರದಂತೆ ತಡೆ ಹಿಡಿದು ಕೋಣೆಯೊಳಗೆ ಬಂದು ಬಿಕ್ಕಿದಳು.

ಗೆಳತಿ ವನಜಾ ಅದ್ಬುತ ಬರಹಗಾರ್ತಿ. ಅವಳು ಮುಖಪುಟ ತೆರೆದು, ಹತ್ತಾರು ಗ್ರೂಪ್ ಗಳಲ್ಲಿ ಕಥೆ, ಕವನ, ಕಾದಂಬರಿ ಬರೆದು ಹಾಕಿ, ಓದುಗರಿಂದ ಶಹಬ್ಬಾಶ್ ಗಿರಿ ತಗೊಂಡಾಗಲೆಲ್ಲ ಜಾನಕಿಗೂ ಅನಿಸುತ್ತಿತ್ತು.. ನಾನೂ ಇದೇ ರೀತಿ ಬರೀಬೇಕು ಅಂತ.ಆದರೆ ಅವಳ ಬಳಿ ಇದ್ದ ಪೋನು ಸ್ಮಾರ್ಟ್ ಪೋನ್ ಅಲ್ಲ. ಕೇವಲ ಪೋನ್ ಮಾಡಲು ಬಳಸಬಹುದಾದ ಚಿಕ್ಕ ಹಳೆಯ ಪೋನು.ಗಂಡನ ಬಳಿ ಹೇಳಿದರೆ ಬೈಗುಳ ಮಾತ್ರ ಉಚಿತ.. ತಾನೇ ತೆಗೆದುಕೊಳ್ಳೋಣವೆಂದರೆ ತನ್ನಲ್ಲಿ ಹಣವಿಲ್ಲ. ಒಂದು ರೂಪಾಯಿ ಬೇಕೆಂದರೂ ಗಂಡ ಮೋಹನನ ಬಳಿಯೇ ಕೈಯೊಡ್ಡಬೇಕು.ತನ್ನ ಆಸೆ ಈಡೇರದು ಎಂದು ಕೈ ಚೆಲ್ಲಿ ಬಿಟ್ಟಳು.ಎಷ್ಟೋ ಸಲ ಕಾಣದ ದೇವರಲ್ಲಿ ತನ್ನ ಆಸೆಯನ್ನು ತೋಡಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಳು.

ಅಂದು ಶುಕ್ರವಾರ.. ಬೆಳಿಗ್ಗೆ ಗೆಳತೀಯರೀರ್ವರೂ ಊರ ಹೊರಗಿರುವ ಅಮ್ಮನ ಗುಡಿಗೆ ಪೂಜೆಗೆ ಹೊರಟರು.ಹೋಗುತ್ತಿರುವಾಗ ಜಾನಕಿಯ ಕಾಲಿಗೆ ಏನೋ ಎಟಕಿದಂತಾಯಿತು.ಬಗ್ಗಿ ನೋಡಿದರೆ ,ದೊಡ್ಡದಾದ ಚಂದದ ಸ್ಮಾರ್ಟ್ ಪೋನ್. ಅಯ್ಯೋ ಪಾಪ,ಯಾರೋ ಬೀಳಿಸಿಕೊಂಡು ಹೋಗಿದಾರೆ.ಯಾರದೋ ಏನೋ ಅಂತ ಪೋನು ಕಳೆದುಕೊಂಡವರ ಬಗ್ಗೆ ಸಿಂಪತಿಯಾಯಿತು.ಸುತ್ತಲೂ ಒಮ್ಮೆ ನೋಡಿದಳು.ಮನುಷ್ಯರ ಸುಳಿವೂ ಇರಲಿಲ್ಲ.ಆದರೆ ವನಜಾ ತುಂಬಾ ಖುಷಿ ಪಟ್ಟಳು.ನೋಡೇ ಜಾನಕಿ,ಆ ತಾಯಿ ನಿನ್ನ ಪೂಜೆ ಸ್ವೀಕರಿಸುವ ಮೊದಲೇ ವರ ಕೊಟ್ಬಿಟ್ಟಳು.ನಿನ್ನ ಅದೃಷ್ಟ ತುಂಬಾ ಚೆನ್ನಾಗಿದೆ ಕಣೇ.ಎಂದು ವನಜಾ ಖುಷಿಯಿಂದ ನುಡಿದಾಗ,ಅಯ್ಯೋ ಪಾಪ ಕಣೇ ವನಜಾ..ಬೆಲೆ ಬಾಳುವ ಪೋನು.ಯಾರದೋ ಏನೋ..ಇದು ನನ್ನದು , ಅಂತ ಹೇಗೆ ಖುಷಿ ಪಡಲೇ?ಜಾನಕಿ,ಚಿಕ್ಕ ಮುಖ ಮಾಡಿ ನಿಂತಳು.ಅವಳ ಅಳುವ ಮುಖ ನೋಡಿ,ಅದಕ್ಕೆ ಪೆದ್ದು ಅನ್ನೋದು ನಿನ್ನ. ಯಾರದೋ ಕಳೆಯಿತು.ಆದರೆ ನಿನಗೆ ಸಿಕ್ಕಿತು.ಈಗ ಅವಶ್ಯಕತೆ ಇರುವುದು ನಿನಗೆ.ಒಳ್ಳೆಯದಾಯಿತು ಅಲ್ವಾ?ವನಜಾ ನುಡಿದಾಗ,ನೋಡೋಣ ಯಾರಾದರೂ ಕೇಳಿದ್ರೆ ಕೊಟ್ಟರೆ ಆಯಿತು ಅಂತ ನುಡಿದು ಜಾನಕಿ ಸುಮ್ಮಗಾದಳು.ಇಬ್ಬರೂ ಅಮ್ಮನ ಗುಡಿಗೆ ಹೋಗಿ ಪೂಜೆ ಮುಗಿಸಿ ಬಂದರು.ಬರುವತನಕವೂ ಪೋನು ಕಳೆದುಕೊಂಡವರು ಯಾರೂ ಸಿಗಲೇ ಇಲ್ಲ.

ಆಗಲೇ ಒಂದು ವಾರ ಆಯಿತು. ಪೋನ್ ಯಾರದು ಎಂದು ಗೊತ್ತಾಗಲೇ ಇಲ್ಲ. ವನಜಾಳ ಬಳಿ ಹೋಗಿ. ಏನು ಮಾಡುವುದು ಎಂದು ಕೇಳಬೇಕು.. ಅಂತ ಮನದಲ್ಲೇ ಅಂದುಕೊಂಡು,ಜಾನಕಿ,ಬೇಗ ಬೇಗ ಮನೆಗೆಲಸ ಮುಗಿಸಿ ಗೆಳತಿಯ ಮನೆ ಕಡೆ ನಡೆದಳು.ವನಜಾ ಗೆಳತಿ ಬರುವುದನ್ನು ನೋಡಿ ತುಂಬಾ ಖುಷಿಯಿಂದ ಬರಮಾಡಿಕೊಂಡಳು.ಏನಾಯ್ತು ಪೋನಿನ ಕಥೆ ಎಂದಳು ವನಜಾ.ಯಾರು ಬಂದೇ ಇಲ್ಲ ಕಣೇ ಅಂದಳು ಜಾನಕಿ.ಈಗಲಾದರೂ ಒಪ್ಪುವೆಯಾ?ನಿನ್ನ ಅಕ್ಷರದ ಪ್ರೀತಿಗೆ ತಾಯಿ ಸರಸ್ವತಿ ಕೊಟ್ಟ ವರ ಅಂತ ವನಜಾ ಕಕ್ಕುಲತೆಯಿಂದ ನುಡಿದಾಗ, ಅಲ್ವೇ ವನಜಾ,ಈಗ ಹೇಗೆ ಬಳಸಲಿ? ಪೋರ್ ಜೀ ಸಿಮ್ ಇಲ್ಲ ..ಹೊಸ ಸಿಮ್ ತರುವ ಶಕ್ತಿಯಂತೂ ಇಲ್ಲ ಎಂದಳು ಜಾನಕಿ… ಅಯ್ಯೋ ಅದಕ್ಕೆಲ್ಲಾ ಯಾಕೆ ನೀ ತಲೆಕೆಡಿಸಿಕೊಳ್ತಿ.ಮತ್ತೊಂದು ಸಿಮ್ ನಂದೇ ಇದೆ ..ತಾ ಇಲ್ಲಿ ಮೊಬೈಲ್ ,ಸಿಮ್ ಹಾಕೋಣ ಎನ್ನುತ್ತಾ ಜಾನಕಿಯ ಕೈಯಿಂದ ಪೋನ್ ಪಡೆದು ತನ್ನ ಹಳೆಯ ಸಿಮ್ ಹಾಕಿದಳು ವನಜಾ.

ಆದರೂ ವನಜಾ, ಏನೋ ಗಿಲ್ಟ್ ಕಣೇ..ಯಾರದೋ ಪೋನು ಪಾಪ ಅಂತ ಜಾನಕಿ ರಾಗ ಎಳೆದಾಗ ,ಅಯ್ಯೋ ಪೆದ್ದು, ಏನೂ ಆಗಲ್ಲ. ಆವತ್ತೇ ನಾನು ಅದರ ಸಿಮ್ ತೆಗೆದು ಬಿಸಾಕಿದೆ…ಯಾರು ಅದಕ್ಕೆ ಕಾಲ್ ಮಾಡೋಕೆ ಆಗುತ್ತೆ?.‌ಇನ್ನು ಕಂಪ್ಲೇಂಟ್ ಕೊಡುವಷ್ಟು ಬೆಲೆ ಬಾಳುವ ಪೋನ್ ಇದಲ್ಲ ಬಿಡು ಎಂದು ನಕ್ಕಳು ‌..ಹ್ಮ,..ಆಮೇಲೆ, ಸರೀಯಲ್ಲ ಕಣೇ ಇದು ಅನ್ಯಾಯ ಅನ್ಬೇಡ ಮಾರಾಯ್ತಿ. ದಾರಿಯಲ್ಲಿ ಅನಾಥವಾಗಿ ಸಿಕ್ಕಿದ್ದು ನಮಗೆ…ನಾವೇನು ಕದ್ದು ತಂದದ್ದಂತೂ ಅಲ್ಲ. ನೀ ಬಿಟ್ಟು ಬಂದಿದ್ರೂ,ಇನ್ಯಾರೋ ತೆಗೆದುಕೊಂಡಿರ್ತಾ ಇದ್ರು.ಮೊನ್ನೆ ನನ್ನದೇ ಪರ್ಸ್ ಎಲ್ಲೋ ಬಿದ್ದು ಹೋಯಿತು… ಎರಡು ಸಾವಿರ ನಗದು ಹಣ ಇತ್ತು. ನನ್ನ ಐಡೆಂಟಿ ಕಾರ್ಡ್ ಎಲ್ಲಾ ಇತ್ತು. ತಂದುಕೊಟ್ರಾ ಸಿಕ್ಕವರು.ಎಲ್ಲೋ ಅಪರೂಪ ಅಂತ ಮಹಾತ್ಮರು ಸಿಗೋದು…ಅದಕ್ಕೆ, ಯಾರು ಯಜಮಾನ ಇದಕ್ಕೆ ಅಂತ ತಿಳಿಯದೇ ಇರುವ ವಸ್ತು ದಾರಿಯಲ್ಲಿ ಅನಾಥವಾಗಿದ್ದರೆ ಅದು ನಮ್ಮದೇ…ಅದಕ್ಕೆ ದೋಷ ತಟ್ಟದು. …ಇನ್ನು ಸಿಮ್ ತೆಗೆದು ಹಾಕಿರುವುದು ತಪ್ಪೇ.ಒಪ್ಪಿಕೊಳ್ಳುವೆ..ಆದರೆ ಆ ಕ್ಷಣದಲ್ಲಿ ನಿನ್ನ ಅವಶ್ಯಕತೆಗೆ ಉಪಯೋಗ ಆಗುತ್ತೆ ಅಂತ ಮಾತ್ರ ನನಗೆ ಯೋಚನೆ ಬಂತು…ಯಾಕೆಂದರೆ ನನಗೂ ಇಂದಿನ ಪರಿಸ್ಥಿತಿಯಲ್ಲಿ,ನಿನಗೆ ಪೋನ್ ತೆಗೆದು ಕೊಡುವ ಶಕ್ತಿ ಇಲ್ಲ ಕಣೇ….ಇಂದಿನ ಕರೋನಾ ಹೆಮ್ಮಾರಿ ನಮ್ಮಂತ ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಕಲ್ಲನ್ನೇ ಎತ್ತಿ ಹಾಕಿದೆ.ದುಡಿಮೆ ಇಲ್ಲ… ಚೂರು ಪಾರು ಇಟ್ಟ ಗಂಟೂ ಕರಗಿ ನೀರಾಗ್ತಿದೆ…ಇದು ಮುಗಿಯದ ಕಥೆ….ಇನ್ನು ನಮ್ಮ ಬದುಕು ಮೊದಲಿನಂತಾಗೋದು ಎಂದೋ ಕಾಣೆ.ಅದಕ್ಕೆ ತಪ್ಪು ಎನಿಸಿದರೂ ,ನನಗೆ ಆ ಕ್ಷಣ ಅದು ತಪ್ಪಾಗಿ ಕಾಣಲಿಲ್ಲ…. ಅಕಾಸ್ಮಾತ್ ಆಗಿ ದೇವಸ್ಥಾನದಿಂದ ಮನೆಗೆ ಬರುವ ತನಕ,ಯಾರಾದರೂ ದಾರಿಯಲ್ಲಿ ನಿಮಗೇನಾದರೂ ಪೋನ್ ಸಿಕ್ಕಿದೆಯಾ ಅಂತ ಕೇಳಿದ್ದರೆ ಕೊಡಲೇಬೇಕಿತ್ತು…ಯಾರೂ ಕೇಳಲಿಲ್ಲ…ಈಗ ಚಿಂತೆ ಬಿಡು.ಅಮ್ಮ ಕೊಟ್ಟ ವರ ಪ್ರಸಾದ ಅಂತ ತಿಳಿ ಪೆದ್ದು… ಪ್ರೀತಿಯಿಂದ ಗೆಳತಿಯ ಕಿವಿ ಹಿಂಡಿದಳು ವನಜಾ.

ಗೆಳತಿಯ ಸಹಾಯ ನೋಡಿ ಜಾನಕಿಯ ಕಂಗಳು ತುಂಬಿಬಂದವು.ಏ ಹುಚ್ಚೀ,ಅಳಬೇಡ ಕಣೇ.ನಾ ನಿನ್ನ ಗೆಳತಿಯಾಗಿ ಇಷ್ಟೂ ಮಾಡದಿದ್ದರೆ ಹೇಗೆ?ನನಗೆ ಏನಿದೆ?ಗಂಡ,ಮಕ್ಕಳು,ಸಂಸಾರ,ಕೈಯಲ್ಲಿ ಒಂದು ಕೆಲಸ ಇದೆ.ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ. ಆದರೆ ನನ್ನ ಒಂಟಿತನ ಮರೆಯೋದಕ್ಕೆ ಈ ಪೋನು ಸಹಾಯ ಆಗಿದೆ.ನನ್ನೆದೆಯ ನೋವಿನ ಧ್ವನಿ ಅಕ್ಷರದ ರೂಪದಲ್ಲಿ ಹೊರ ಬಂದು,ಕಥೆ,ಕವನ ಆಗುತ್ತದಷ್ಟೇ…ಎಂದು ವನಜಾ ನೋವಿನಿಂದ ನುಡಿದಳು.ಸ್ವಾರೀ ಕಣೇ ವನಜಾ..ಗೆಳತಿಯಾಗಿ ನಾನಿದೀನಿ…ಬೇಜಾರು ಮಾಡಿಸಿದ್ದಕ್ಕೆ ಕ್ಷಮೆ ಇರಲಿ ಕಣೇ ಎಂದಳು ಜಾನಕಿ…ಈಗ ಕ್ಷಮೆಯ ಮಾತೆಲ್ಲ ಯಾಕೆ?ಬಾ ನಿನ್ನ ಪೋನಿಗೆ ಇಂಟರ್ನೆಟ್ ಹಾಕಿ ,ಒಂದು ಪೇಸ್ಬುಕ್ ಖಾತೆ ತೆರೆಯೋಣ ಅಂತ ಹೇಳಿ , ವನಜಾ,ತನ್ನ ಪೋನ್ ಪೇಯಿಂದ ಜಾನಕಿಯ ಪೋನಿಗೆ ಇಂಟರ್ನೆಟ್ ಹಾಕಿದಳು…ಹಾಗೇ ಪೇಸ್ಬುಕ್ ಖಾತೆಯೂ ಆಯಿತು..ವನಜಾ,ಪ್ರೊಪೈಲ್ ಗೆ ನನ್ನ ಪೋಟೋ ಬೇಡ.ಹಾಗೇ ನನ್ನ ಹೆಸರೂ ಹಾಕಬೇಡ.ಎಂದಳು ಜಾನಕಿ.ಅದೂ ಸರಿಯೇ..ನಿನ್ನ ಗಂಡ ಕೂಡಾ ಪೇಸ್ಬುಕ್ ಲ್ಲಿ ಇದಾರಲ್ವಾ?ಹ್ಮ.ಏನಂತ ಹೆಸರಿಡಲಿ?ಯೋಚಿಸುತ್ತಾ ವನಜಾ ಕೇಳಿದಾಗ, ಹೂವರಳಿ ಬಾಡುವ ಮುನ್ನ ಅಂತ ಇಡು ಎಂದಳು ಜಾನಕಿ.ಅಯ್ಯೋ ಇದೇನೆ ..ಜಾನಕಿ ಇದೆಂತಾ ಹೆಸರೇ ವನಜಾ ಸೊಟ್ಟ ಮೋರೆ ಮಾಡಿದಳು.ತಮಾಷೆ ಅಲ್ಲ ಕಣೇ.ನನ್ನ ಪರಿಸ್ಥಿತಿಯಲ್ಲಿ ನಾನು ಸಾಯುವುದರೊಳಗೆ ನಾನೂ ಬರೆಯುವೆ ಎಂದೆಣಿಸಿರಲಿಲ್ಲ.ನಿನ್ನ ಸಹಾಯದಿಂದ ಸಾಯುವ ಮುನ್ನ ಬರೆಯಲು ಶುರುಮಾಡಿರುವೆ ನಕ್ಕಳು ಜಾನಕಿ…ನಿನ್ನ ಇಷ್ಟಕ್ಕೆ ನಾನೇಕೆ ಅಡ್ಡಿಯಾಗಲಿ?ಹ್ಮ ಈ ಹೆಸರೇ ಇರಲಿ.ಹಾಗೇ ಗುಲಾಬಿ ಹೂವಿನ ಪೋಟೊ ಹಾಕೋಣ.ಹೆಸರಿಗೆ ತಕ್ಕ ಪೋಟೋ ಆಗುತ್ತದೆ ಎಂದಳು ವನಜಾ…ಹೂ ಸರೀ ಎಂದಳು ಜಾನಕಿ… ಅಕೌಂಟ್ ಕ್ರಿಯೇಟ್ ಮಾಡಿ ಆಯಿತು ಕಣೇ ಜಾನಕಿ…ಇರು,ನನ್ನ ಪ್ರೆಂಡ್ ಲೀಸ್ಟಿನಲ್ಲಿ ಇರುವವರಿಗೆ ರಿಕ್ವೆಸ್ಟ್ ಕಳಿಸುವೆ.ಆಮೇಲೆ ನಿನಗೆ ತೋಚಿದಂತೆ ಮಾಡಬಹುದು ಎಂದಳು ವನಜಾ…

ಜಾನಕಿ ತಗೋ,ಏನಾದರೂ ಬರೀ…ಒಂದು ಪೋಸ್ಟ್ ಮಾಡೇ ಬಿಡೋಣ… ಆಗಲೇ ಹತ್ತಾರು ಜನ ಪ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾರೆ ಎನ್ನುತ್ತಾ ಜಾನಕಿಯ ಕೈಯಲ್ಲಿ ಮೊಬೈಲ್ ಕೊಟ್ಟಳು ವನಜಾ…ಕೈಯಲ್ಲಿ ಪೋನ್ ಹಿಡಿದ ಜಾನಕಿಗೆ ಸಂಭ್ರಮ ಹೇಳತೀರದು.ಏನೋ ಸಂತೃಪ್ತಿ, ಖುಷಿಯ ಭಾವ..ಕಂಗಳಲ್ಲಿ ಒಂದು ತರಹದ ಉತ್ಸಾಹದ ಕೋಲ್ಮಿಂಚು….

ಮೊಗ್ಗರಳಿ ನಸು ಬಿರಿದು
ಹೂವಾಗಿ ನಕ್ಕಿತು ರವಿಯ
ರಂಗಿನ ಬೆಚ್ಚನೆಯ ಸ್ಪರ್ಶಕೆ
ಮನಸೋತು ಭೂರಮೆಯು
ಬದಲಾದಳು ಭಾಸ್ಕರನು
ನೀಡಿದ ಒಲವಿನ ಚಿನ್ನದ
ಕಾಣಿಕೆಯ ಹೊಂಬೆಳಕಿಗೆ!!

ಬರೆದು ಪೋಸ್ಟ್ ಮಾಡಿದಳು ಜಾನಕಿ. ಅದನ್ನು ನೋಡಿ, ವನಜಾ ವಾವ್…ಎಂತ ಚಂದ ಬರೆದೆ ಗೊತ್ತಾ ಜಾನಕಿ. ತುಂಬಾ ತುಂಬಾ ಅದ್ಭುತ ಕಣೇ. ಅಂತ ಅವಳೇ ಮೊದಲು ವಾವ್ ಅಂತ ಸಿಂಬಾಲ್ ಒತ್ತಿ ಕಾಮೆಂಟ್ ಕೊಟ್ಟಳು. ಇದರಿಂದ ಜಾನಕಿ ತುಂಬಾ ಖುಷಿ ಪಟ್ಟಳು. ಥ್ಯಾಂಕ್ಯೂ ಕಣೇ ವನಜಾ. ನನ್ನ ಗಂಡನೂ ಈಡೇರಿಸದ ನನ್ನ ಆಸೆಯನ್ನು ಗೆಳತಿಯಾಗಿ ನೀ ಈಡೇರಿಸಿದೆ. ತುಂಬಾ ತುಂಬಾ ಥ್ಯಾಂಕ್ಸ್ ಕಣೇ. ವನಜಾಳ ಕೈ ಅದುಮಿದಳು ಜಾನಕಿ… ತುಂಬಾ ದೊಡ್ಡ ಸಹಾಯ ಏನೂ ಮಾಡಿಲ್ಲ ಕಣಮ್ಮ…ನಿನ್ನ ಬರೆಯುವ ಪ್ರೀತಿ ಕಂಡು ‌ಸಹಾಯ ಮಾಡಿದೆ ಅಷ್ಟೇ. ದೊಡ್ಡ ಲೇಖಕಿ ಆಗಬೇಕು ನೀನು.ಇದೇ ನನ್ನ ಆಸೆ..ಎಂದು ಹಾರೈಸಿದಳು ಗೆಳತಿಯನ್ನು ತುಂಬು ಹೃದಯದಿಂದ.ಸರೀ ಕಣೇ..ಮನೆಗೆ ಹೋಗ್ತೀನಿ.. ಹಸು ಕರೆಯುವ ವೇಳೆ ಆಯಿತು.. ಲೇಟ್ ಆದರೆ ಬೈಸಿಕೊಳ್ಳಬೇಕು ಎನ್ನುತ್ತಾ ಲಗುಬಗೆಯಿಂದ ಮನೆ ಕಡೆ ನಡೆದಳು ಜಾನಕಿ.

ಈಗೇನೋ ವನಜಾ ಇಂಟರ್ನೆಟ್ ಹಾಕಿಸಿದಳು.ಮುಂದೆ ಯಾರನ್ನು ಕೇಳೋದು?ಏನು ಮಾಡುವುದು ಹಣಕ್ಕೆ ಅಂತ ಯೋಚಿಸುತ್ತಾ ಮನೆಗೆ ಬಂದಾಗ ಅಂಗಳದಲ್ಲಿ ಕಂಡ ನುಚ್ಚು ಮೆಣಸಿನ ಗಿಡಗಳು ದಾರಿ ತೋರಿಸಿತ್ತು…ಹಣ್ಣಾದ ನುಚ್ಚು ಮೆಣಸಿನ ಕಾಯಿ ಕೊಯ್ದು ಬಿಸಿಲಿನಲ್ಲಿ ಒಣಗಿಸಿ, ಡಬ್ಬಿ ತುಂಬಿ ಸಂಗ್ರಹಿಸಿ, ಗೆಳತಿ ವನಜಾಳ ಬಳಿ ಕೊಡುತ್ತಿದ್ದಳು.ವನಜಾ ಮಾರ್ಕೆಟ್ ನಲ್ಲಿ ಸೇಲ್ ಮಾಡಿ ಹಣವನ್ನು ಇವಳ ಕೈಗೆ ಕೊಡುತ್ತಿದ್ದಳು…ಅದರಿಂದ ಬಂದ ನೂರಾರು ರೂಪಾಯಿ ಪೋನಿನ ಹೊಟ್ಟೆ ತುಂಬುವಲ್ಲಿ ಯಶಸ್ವಿಯಾಗಿತ್ತು..ಹಾಗೇ ಪೋನ್ ಯಾರಿಗೂ.ಕಾಣದಂತೆ ,ಎರೋಪ್ಲೇನ್ ಮೂಡ್ ಲ್ಲಿ ಇರಿಸಿ, ರೂಮಿನ ಕಪಾಟಿನೊಳಗೆ ತನ್ನ ಹಳೆಯ ಬಟ್ಟೆಯ ಗಂಟಿನಲ್ಲಿ ಅಡಗಿಸಿ ಇಡುತ್ತಿದ್ದಳು. ಐಡಿಯಾ ಗೆಳತಿ ವನಜಾಳದೇ ಆಗಿತ್ತು.

ಮನೆಗೆಲಸ ಬೇಗ ಬೇಗ ಮುಗಿಸಿ, ಊಟೋಪಚಾರದಲ್ಲಿ ಯಾವ ಕುಂದೂ ಬರದಂತೆ,ಹೂವಿನ ತೋಟದ ಮೇಲುಸ್ತುವಾರಿಯ ನಡುವೆಯೂ,ಚಂದದ ಕಥೆ,ಕವನ ಬರೆಯುತ್ತಾ, ಓದುಗರ ಪ್ರೀತಿ ಪಾತ್ರಳಾದಳು ಜಾನಕಿ. ನಡುವೆ ಗಂಡ ಕೂಡಾ ಯಾರು ಎಂದು ಅರಿಯದೇ, ರಿಕ್ವೆಸ್ಟ್ ಕಳಿಸಿದ್ದ.ಏನು ತೋಚದೇ ಗೆಳತಿ ವನಜಾಳ ಬಳಿ ಹೇಳಿದಾಗ ತಗೋ ಪೆದ್ದು ಎಂದು ಬೈದಿದ್ದಳು…..ತನ್ನ ಪ್ರತೀ ಬರಹಕ್ಕೂ ತುಂಬಾ ಚಂದ ಬರೆಯುವಿರಿ ಮೇಡಂ… ಬಿಡಬೇಡಿ ಬರಹವನ್ನು.. ಹೀಗೇ ಮುಂದುವರೆಸಿ,ಒಳ್ಳೆಯ ಲೇಖಕಿ ಆಗುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಇದೆ ಎಂದು ಹೊಗಳಿ,ಉದ್ದುದ್ದ ಕಾಮೆಂಟ್ ತನ್ನ ಗಂಡನಿಂದಲೇ ಬಂದಾಗ, ಮನದಲ್ಲಿ ನಕ್ಕು ಸುಮ್ಮನಾಗಿದ್ದಳು.

ಒಂದು ವರ್ಷ ಕಳೆದಿತ್ತು. ಜಾನಕಿ, ಮುಖಪುಟದ ಅತ್ಯುತ್ತಮ ಲೇಖಕಿ ಎಂದು ಪ್ರಸಿದ್ಧಿಯಾಗಿದ್ದಳು. ಇತ್ತೀಚೆಗೆ ಬರೆದ ಒಂದು ಉತ್ತಮ ಕಾದಂಬರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ‘ಹೂವರಳಿ ಬಾಡುವ ಮುನ್ನ’ ಎಂಬ ಶಿರ್ಷಿಕೆಯಿಟ್ಟು,ಕಾದಂಬರಿ ಬರೆದಿದ್ದಳು. ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಪೇಪರಿನಲ್ಲಿ ನೋಡಿದ ಗಂಡ ಮೋಹನ್ ಗೆ ಯಾರಿವರು? ಉತ್ತಮ ಬರಹಗಾರ್ತಿ. ಈವರೆಗೂ ಮುಖ ತೋರಿಸದೇ, ನಿಜವಾದ ಹೆಸರನ್ನು ಗೊತ್ತು ಮಾಡದೇ ಬರೆಯುತ್ತಿದ್ದಾರಲ್ಲ ಎಂಬ ಕೂತೂಹಲದಿಂದ ಅವನೂ ಹೊರಡಲನುವಾದ. ಕಾರ್ಯಕ್ರಮ ಇದ್ದದ್ದು ಊರ ಹೊರಗಿನ ಅಮ್ಮನ ಗುಡಿ ಮುಂದೆಯೇ. ಧರಿಸಲು, ಹೊಸ ಶರ್ಟ್ ತರಲು ಹೆಂಡತಿಯನ್ನು ಕೂಗಿದ. ಆದರೆ ಜಾನಕಿ ಮನೆಯಲ್ಲಿ ಇರಲಿಲ್ಲ. ಎಲ್ಲಿ ಜಾನಕಿ ಅಮ್ಮ ಎಂದು ತಾಯಿಯನ್ನು ಕೇಳಿದ. ಅವಳು ವನಜಾನ ಜೊತೆಗೆ ದೇವಸ್ಥಾನಕ್ಕೆ ಹೋಗ್ತೀನಿ ಅಂದ್ಲಪ್ಪ. ನಿನ್ನ ಹೆಂಡತಿ ಎಲ್ಲಿ ಹೋಗ್ತಾಳೆ?ಏನ್ಮಾಡ್ತಾಳೆ ಅಂತ ನಿನಗೆ ಗೊತ್ತಿರಬೇಕು. ನನ್ನ ಕೇಳ್ತಾನೆ. ಇವರೆಲ್ಲ ಅದೇನು ಸಂಸಾರ ಮಾಡ್ತಾರೋ ಏನ್ ಕಥೆಯೋ ಗೊಣಗುತ್ತಾ ಕಮಲಮ್ಮ ಒಳ ಹೋದರು. ತಾಯಿಯ ಗೊಣಗುವಿಕೆಯನ್ನು ಕಿವಿ ಮೇಲೆ ಹಾಕಿಕೊಳ್ಳದೇ ಕೈಗೆ ಸಿಕ್ಕ ಶರ್ಟ್ ಏರಿಸಿಕೊಂಡು ಹೊರಟ ಮೋಹನ್.

ಊರ ಹೊರಗಿನ ಅಮ್ಮನ ಗುಡಿ ಮುಂದೆ, ಭರ್ಜರಿ ಜನ ಸೇರಿದ್ದರು.ಅನೇಕ ಮಹಾನ್ ಲೇಖಕ ಲೇಖಕಿಯರ ದಂಡೇ ಇತ್ತು. ಮೋಹನನಿಗೆ ಕುಳಿತುಕೊಳ್ಳಲೂ ಜಾಗ ಸಿಗದೇ ನಿಂತೇ ಕಾರ್ಯಕ್ರಮ ವೀಕ್ಷಿಸುವಂತಾಯಿತು. ಪ್ರಶಸ್ತಿ ಸ್ವೀಕರಿಸುವಾಗ ಜನ ಎಲ್ಲಾ ಎದ್ದು ನಿಂತು ಚಪ್ಪಾಳೆಗರೆದರು. ಯಾರೆಂದು ಸರೀಯಾಗಿ ಮೋಹನನಿಗೆ ಕಾಣಿಸಲೇ ಇಲ್ಲ.ಆ ಹೊತ್ತಿನಲ್ಲೂ, ಹೆಂಡತಿ ಜಾನಕಿಗೆ ಬೈಯ್ಯದೇ ಸುಮ್ಮನೆ ಇರಲಿಲ್ಲ ಮೋಹನ್. ಎಲ್ಲಾ ಇವಳಿಂದನೇ ಆಗಿದ್ದು. ಎಲ್ಲಿ ತಿರುಗೋಕೆ ಹೋಗಿದಾಳೋ. ಮನೆಯಲ್ಲಿ ಇದ್ದು,ಬೇಗ ಶರ್ಟ್ ಹುಡುಕಿ ಕೊಟ್ಟಿದಿದ್ರೆ, ಆರಾಮಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಿತ್ತು ಎಂದು ಸಿಡಿಮಿಡಿಗೊಂಡ ಹೆಂಡತಿಯ ಮೇಲೆ. ಅಷ್ಟರಲ್ಲೇ ಕಾರ್ಯಕ್ರಮ ಶುರುವಾಗಿ ಹೋಗಿತ್ತು. ನಿರೂಪಕರು, ಇಷ್ಟು ದಿನ ಹೂವರಳಿ ಬಾಡುವ ಮುನ್ನ ಕಾವ್ಯ ನಾಮದೊಂದಿಗೆ ನಮ್ಮೆಲ್ಲರ ಮನ ಸೂರೆಗೊಂಡ, ಅತ್ಯುತ್ತಮ ಲೇಖಕಿ ,ಕವಿಯತ್ರಿ ಇಂದು ನಮ್ಮೆಲ್ಲರ ಎದುರು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿದಾರೆ.ಅವರೀಗ ಒಂದೆರಡು ಮಾತನಾಡ ಬೇಕೆಂದು ಅವರಲ್ಲಿ ವಿನಂತಿಸುತ್ತೇನೆ ಎಂದು ಮೈಕಿನಲ್ಲಿ ಅನೌನ್ಸ್ ಮಾಡಿದರು.ಮೋಹನ ಕಾಲುಗಳನ್ನು ಎತ್ತರಿಸಿಕೊಂಡು ಯಾರಿರಬಹುದು ಎಂದು ನೋಡತೊಡಗಿದ…

ಜಾನಕಿ ಎದ್ದು ನಿಂತು ಮೈಕಿನ ಬಳಿಗೆ ಬಂದಳು. ಹೆಂಡತಿಯನ್ನು ನೋಡಿದ ಮೋಹನನಿಗೆ ಬವಳಿ ಬಂದ ಹಾಗಾಯಿತು. ತನ್ನ ಹೆಂಡತಿಯೇ? ಅಂತಹ ಅದ್ಭುತವಾದ ಬರಹಗಾರ್ತಿ ತನ್ನ ಹೆಂಡತಿ ಅಚ್ಚರಿ ಮೋಹನನಿಗೆ…ಅಂದು ಸ್ಮಾರ್ಟ್ ಪೋನ್ ಹೆಂಡತಿ ಕೇಳಿದ್ದು ,ಮೋಹನನ ಸೃತಿಪಟಲದಲ್ಲಿ ಹಾಯ್ದು ಹೋಯಿತು ವೇದಿಕೆ ಮೇಲೆ ನಿಂತ ಜಾನಕಿ ಎಲ್ಲರಿಗೂ ವಿನಯದಿಂದ ನಮಸ್ಕರಿಸಿದಳು. ಮೊದಲು ಗುಡಿಯೊಳಗಿನ ಅಮ್ಮನಿಗೆ ನಮಸ್ಕರಿಸಿ,ತನ್ನ ಗಂಡ,ಅತ್ತೆ,ಮಾವನನ್ನು ಸ್ಮರಿಸುತ್ತಾ,ಹಾಗೇ ತಾನು.ನಡೆದು ಬಂದ ಹಾದಿ,ತನ್ನ ಶ್ರಮ,ತನ್ನ ಗೆಳತಿ ವನಜಾಳ ಸಹಾಯ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತಾ ಹೋದಳು. ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ಹೆಂಗಸರು.. ಏನು ಸಾದ್ಯ ಇವರಿಂದ ದಯವಿಟ್ಟು ಮೂಗು ಮುರಿಯದಿರಿ. ಅಮ್ಮ, ಹೆಂಡತಿ, ಮಗಳು,ಅಕ್ಕ, ತಂಗಿಯಾಗಿ,ಎಲ್ಲಾ ಕರ್ತವ್ಯವನ್ನು ಚಾಚೂ ತಪ್ಪದೇ ,ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ,ತನ್ನ ಸಾಧನೆಯ ಹಾದಿಯಲ್ಲಿ ನಡೆಯುವ ಹೆಣ್ಣು ಮಗಳು ಅಬಲೆಯಲ್ಲ.ಅವಳು ನಿಜಕ್ಕೂ ಸಬಲೆ.ಎಂದು ಭಾವುಕಳಾಗಿ ಜಾನಕಿ ನುಡಿದಳು.ಎಷ್ಟೋ ಕಡೆ ಈಗಲೂ ಪೋನ್ ಯಾಕೆ ಹೆಂಗಸರಿಗೆ?ಎಂಬ ತುಚ್ಛ ದೃಷ್ಟಿ ಕೋನವಿದೆ. ಯಾರೋ ಒಂದಿಬ್ಬರು ಹೆಣ್ಣು ಜೀವಗಳು ಅನೈತಿಕತೆಯ ಹಾದಿಯಲ್ಲಿ ನಡೆದ ತಪ್ಪಿಗೆ,ಎಲ್ಲಾ ಹೆಣ್ಣು ಮಕ್ಕಳನ್ನೂ ತುಚ್ಛವಾಗಿ ಬಂಧಿಸುವುದು ತಪ್ಪಲ್ಲವೇ?ಒಳ್ಳೆಯ ಚೌಕಟ್ಟಿನಲ್ಲಿ, ಉತ್ತಮ ಸುಸಂಸ್ಕೃತ ನಡುವಳಿಕೆಯಲ್ಲಿ ನಡೆಯುವವರು ಯಾವುದನ್ನು ತಪ್ಪಾಗಿ ಬಳಸಲಾರರು…ಹೆಣ್ಣು ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಮೂರು ಹೊತ್ತು ಮೊಬೈಲ್ ಎಂಬ ಛೇಡಿಕೆಯ ಮಾತು.ಮೊಬೈಲ್ ಹಾಳು ಎಂದಾದರೆ ಅದು ಗಂಡಿಗೂ ಅನ್ವಯ ಆಗುತ್ತದೆ ಅಲ್ಲವೇ?ಇದರಲ್ಲೂ ಗಂಡು, ಹೆಣ್ಣು ಎಂಬ ಬೇಧ ಭಾವ ಏತಕ್ಕೆ?ತಪ್ಪು ಹೆಣ್ಣು ಮಾತ್ರ ಮಾಡಲು ಸಾದ್ಯವೇ?ಗಂಡಿನಿಂದ ತಪ್ಪೇ ಜರುಗದೇ?ಅವೇಶದಿಂದ ನುಡಿದಳು ಜಾನಕಿ..ಕ್ಷಮಿಸಿ…. ಎಂದು ಕೈ ಮುಗಿಯುತ್ತಾ,ಇಷ್ಟೊಂದು ಆಧುನಿಕತೆಯ ಮದ್ಯೆಯೂ ಹೆಣ್ಣು ಎಂಬ ತಾತ್ಸಾರದ ನುಡಿ ಕೇಳಿ ನನ್ನಿಂದ ಅರಗಿಸಿಕೊಳ್ಳಲಾಗಲಿಲ್ಲ.

ಹೆಣ್ಣು ಹುಟ್ಟಿದ ಕೂಡಲೇ ತವರಲ್ಲಿ ಹೆಣ್ಣು ಬೇರೆ ಮನೆಯ ಆಸ್ತಿ ಎಂಬಂತೆ ಬಿಂಬಿಸಿಯೇ ಬೆಳೆಸುತ್ತಾರೆ.ಅವಳ ಆಸೆ ಆಕಾಂಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಲಾರರು.ಏನಿದ್ದರೂ ಮದುವೆಯಾದ ಮೇಲೆ ನಿನ್ನ ಗಂಡ ನಿನ್ನ ಆಸೆ ಈಡೇರಿಸುತ್ತಾನೆ ಎಂಬ ಉತ್ತರ ತವರಲ್ಲಿ. ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಹೆಣ್ಣು ಕೆಲಸಕ್ಕೆ ಮಾತ್ರ ಸೀಮಿತ.. ಅಡುಗೆ ಮನೆ ಮಾತ್ರ ಅವಳ ಪರಿಧಿಯಾಗಿ ಬಿಡುತ್ತದೆ…. ಅವಳಿಗೂ ಮನಸಿದೆ.ಸಾಧಿಸುವ ಛಲವಿದೆ ಎಂಬುದನ್ನೇ ಎಲ್ಲರೂ ಮರೆತು ಬಿಡುತ್ತಾರೆ… ಗಂಡಿಗೆ ಸಿಗುವ ಪ್ರೋತ್ಸಾಹ ಹೆಣ್ಣಿಗೆ ಸಿಗಲಾರದು…ಹೊರಗಿನ ಹೆಣ್ಣು ಮಕ್ಕಳಿಗೆ ಹೇಗೆ ಪ್ರೋತ್ಸಾಹ ನೀಡುವಿರೋ,ಹಾಗೇ ನಿಮ್ಮ ಹೆಂಡತಿ, ಅಕ್ಕ ತಂಗಿಯರಿಗೂ ಪ್ರೋತ್ಸಾಹ ನೀಡಿ…ಪ್ರತೀಯೊಬ್ಬರ ಎದೆಯಲ್ಲೂ ಹೆಣ್ಣು ಅನ್ನುವ ತಾತ್ಸಾರ ಯಾವಾಗ ನೀಗುತ್ತದೋ ಅಂದು ರಾಮರಾಜ್ಯದ ಕನಸು ನನಸಾಗುತ್ತದೆ. ಕ್ಷಮೆ ಇರಲಿ ನನ್ನ ಮಾತಿನಿಂದ ಬೇಸರವಾದರೆ.ನಾನು ಅನುಭವಿಸಿದ ನೋವು,ದುಮ್ಮಾನಗಳು ನಾನು ಹೀಗೆ ಮಾತನಾಡುವಂತೆ ಪ್ರೇರೆಪಿಸಿತು….ಸಾಮಾನ್ಯ ಗೃಹಿಣಿಯಾದ ನನ್ನಗುರುತಿಸಿ, ನನ್ನ ಬರಹಗಳನ್ನು ಪ್ರೀತಿಯಿಂದ ಆಶೀರ್ವದಿಸಿ ,ಈ ಮಟ್ಟದ ಬೆಳವಣಿಗೆಗೆ ಕಾರಣರಾದ ನನ್ನ ಪ್ರೀತಿಯ ಓದುಗರಿಗೆ ತುಂಬು ಹೃದಯದ ಧನ್ಯವಾದಗಳು…ಎಂದು ಕೈ ಮುಗಿದಳು.ಕೊನೆತನಕ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ತುಂಬು ಹೃದಯದ ಕೃತಜ್ಞತೆಗಳು…ಹಾಗೇ ನನ್ನ ಗೆಳತಿ ವನಜಾ, ಸ್ನೇಹಿತೆಯಾಗಿ ನನ್ನ ಆಸೆಗಳಿಗೆ ಒತ್ತಾಸೆಯಾಗಿ ಅಮ್ಮನಂತೆ ನಿಂತಳು…ತುಂಬು ಪ್ರೋತ್ಸಾಹ ನೀಡಿದಳು..ಅವಳಿಗೂ ತುಂಬು ಹೃದಯದ ಕೃತಜ್ಞತೆಗಳು . ಎಂದು ಹೇಳುತ್ತಲೇ ಜಾನಕಿ,ವನಜಾಳನ್ನು ವೇದಿಕೆಗೆ ಕರೆದಳು .ವನಜಾಳನ್ನು ತಬ್ಬಿಕೊಂಡು ಆನಂದ ಭಾಷ್ಪ ಸುರಿಸಿದಳು…ಇಬ್ಬರೂ ಗೆಳತಿಯರ ಸ್ನೇಹದಾಲಿಂಗನದ ಅಭೂತಪೂರ್ವ ನೋಟಕ್ಕೆ ಪ್ರೇಕ್ಷಕರ ಚಪ್ಪಾಳೆ ಸಾಕ್ಷಿಯಾಯಿತು…

ಇದನ್ನೆಲ್ಲಾ ನೋಡಿದ ಮೋಹನನಿಗೆ ತನ್ನ ತಪ್ಪಿನ ಅರಿವಾಗಿತ್ತು….ಹಾಗೇ ಹೆಂಡತಿಯ ಸಾಧನೆ ಬಗ್ಗೆ ಹೆಮ್ಮೆ ಮೂಡಿತ್ತು. ಮನದಲ್ಲಿ ಏನೋ ದೃಢವಾಗಿ ನಿಶ್ಚಯಿಸಿ,ಸೀದಾ ಮೊಬೈಲ್ ಅಂಗಡಿಗೆ ಹೋಗಿ ಹೊಸದಾದ ಚಂದದ ಬೆಲೆ ಬಾಳುವ ಮೊಬೈಲ್ ಖರೀದಿಸಿ , ಮನೆಗೆ ನಡೆದ… ಹೆಂಡತಿ ಮನೆಗೆ ಬಂದರೂ ಏನೂ ಅರಿಯದವನಂತೆ ಇದ್ದ.ಇತ್ತ ಜಾನಕಿಯೂ ಏನೂ ಹೇಳಲಿಲ್ಲ ಗಂಡನಿಗೆ… ರಾತ್ರಿ ಮಲಗಲು ಜಾನಕಿ ಕೋಣೆಗೆ ಬಂದಾಗ,ಹಿಂದಿನಿಂದ ಹೆಂಡತಿಯನ್ನು ತಬ್ಬಿಕೊಂಡ…ಗಂಡನ ನಡೆ ಅಚ್ಚರಿ ತರಿಸಿದರೂ ಜಾನಕಿ ಏನೂ ಮಾತನಾಡದೇ ಸುಮ್ಮನೆ ನಿಂತಳು..ದರ್ಪ,ಬೈಗುಳಗಳೇ ಗಂಡನಲ್ಲಿ ಸದಾ ಕಾಣುತ್ತಿದ್ದವಳಿಗೆ,ಇಂತಹ ಮೃದು ಪ್ರೀತಿ ನಿಜಕ್ಕೂ ಸೋಜಿಗವೆನಿಸಿತು… ಕಣ್ಣು ಮುಚ್ಚು ಜಾನು ಎಂದ ಮೋಹನ್ ಪ್ರೀತಿಯಿಂದ.

ಫೋಟೋ ಕೃಪೆ : google

ಯಾಕ್ರೀ ಎಂದು ಅಳುಕುತ್ತಲೇ ಕೇಳಿದಳು. ಮೊದಲು ಕಣ್ಣು ಮುಚ್ಚು ಎಂದ. ಕಣ್ಣು ಮುಚ್ಚಿ ನಿಂತಳು ಜಾನಕಿ. ಇದು ನನ್ನ ಪೆವರೇಟ್ ಲೇಖಕಿ, ಹೂವರಳಿ ಬಾಡುವ ಮುನ್ನ ಅವರಿಗೆ ನನ್ನ ಕಡೆಯಿಂದ ಗಿಫ್ಟ್ ಎನ್ನುತ್ತಾ ಮೋಹನ್, ಜಾನಕಿಯ ಕೈಯಲ್ಲಿ ತಾನು ತಂದ ಮೊಬೈಲ್ ಮತ್ತು ಒಂದು ಕೆಂಗುಲಾಬಿ ಹೂವನ್ನು ಇಟ್ಟ. ಕಣ್ಣು ತೆರೆದು ನೋಡಿದ ಜಾನಕಿಗೆ ಅಚ್ಚರಿಯಿಂದ ಮಾತೇ ಹೊರಡಲಿಲ್ಲ. ರೀ… ನೀವು, ಇದು..ಮೊಬೈಲ್ ಎಂದು ತೊದಲಿದಳು. ಅವಳಿಗೆ ಭಯಾಶ್ಚರ್ಯ ಎರಡೂ ಒಟ್ಟೊಟ್ಟಿಗೆ. ನನಗೇನಾ!… ಎಂದು ಮತ್ತೊಮ್ಮೆ ಕೇಳಿದಳು. ಹೂ ಜಾನು, ನಿನಗೇನೆ. ನನ್ನ ತಪ್ಪಿನ ಅರಿವಾಗಿದೆ ..ಪಶ್ಚಾತ್ತಾಪದಿಂದ ನುಡಿದ.

ಆವತ್ತು ಸ್ಮಾರ್ಟ್ ಪೋನ್ ಬೇಕು ಅಂತ ನೀ ಕೇಳಿದಾಗ,ಯಾಕೆ?,ಏನು?ಎತ್ತ?ಅಂತ ಕೇಳದೇನೆ ಅಸಡ್ಡೆಯಿಂದ ರೇಗಿಬಿಟ್ಟೆ.ನನ್ನ ಹೆಂಡತಿಯ ಟ್ಯಾಲೆಂಟ್ ಏನು ಅಂತ ತಿಳಿದುಕೊಳ್ಳಲೇ ಇಲ್ಲ.ನನ್ನ ಕ್ಷಮಿಸಿ ಬಿಡು ಜಾನು.ನೀ ನನ್ನ ಕೃಷಿ ಚಟುವಟಿಕೆಗಳಿಗೆ,ಮನೆ ಏಳ್ಗೆಗೆಲ್ಲ ಬೆನ್ನೆಲುಬಾಗಿ ನಿಂತೆ.ಆದರೆ ನಾನೇ ನಿನ್ನ ಬೆನ್ನೆಲುಬಾಗಿ ನಿಲ್ಲಲೇ ಇಲ್ಲ.. ಎಂದ ಮೋಹನ್ ಹತಾಶೆಯಿಂದ. ರೀ ,ಹೋಗ್ಲಿ ಬಿಡಿ.ಆದದ್ದು ಆಯಿತು… ಅಷ್ಟೊಂದು ಬೇಸರ ಪಡಬೇಡಿ… ಇನ್ನು ಮುಂದೆ ನೀವೇ ನನ್ನ ಮೊದಲ ಓದುಗರು ಆಯ್ತಾ ? ನಿಮ್ಮ ಪ್ರೋತ್ಸಾಹ ನನಗೆ ಆನೆ ಬಲ ಎಂದು ಜಾನಕಿ ಖುಷಿಯಿಂದ ಗಂಡನ ಎದೆಗೊರಗಿದಳು….ಆಯಿತು ಜಾನು…ನಿನ್ನ ಆಸೆ ಇನ್ನೆಂದೂ ಮಣ್ಣು ಪಾಲಾಗದು .ನಾನಿರವರೆಗೂ ಎನ್ನುತ್ತಾ, ಕೆಂಗುಲಾಬಿಯನ್ನು ಜಾನಕಿಯ ಮುಡಿಗೇರಿಸುತ್ತಾ,ಅವಳ ಕೆನ್ನೆಗೆ ಹೂ ಮುತ್ತು ನೀಡಿದ ಮೋಹನ್…‌‌…ಕೊನೆಗೂ ಹೂವರಳಿ ಬಾಡುವ ಮುನ್ನ ,ಮೋಹನನ ಬಾಹು ಬಂಧನದಲ್ಲಿ,ಸಾರ್ಥಕತೆಯ ಬದುಕಿನ ಅನುರಾಗದ ಕ್ಷಣವನ್ನು ಉಂಡಳು ಜಾನಕಿ..


  • ಶೋಭಾ ನಾರಾಯಣ ಹೆಗಡೆ – ಕತೆಗಾರ್ತಿ, ಕಾದಂಬರಿಗಾರ್ತಿ, ಉದ್ಯಮಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW