ಆಸೆ ಆಕಾಂಕ್ಷೆಗಳು ಗೂಡುಕಟ್ಟಿವೆ ಮನದಲಿ… ಕವಿ ಬೆಂಶ್ರೀ ರವೀಂದ್ರ ಅವರ ಸುಂದರ ಕವಿತೆಯ ಸಾಲುಗಳು ಓದುಗರೊಂದಿಗೆ ಹಂಚಿಕೊಡಿದ್ದಾರೆ, ತಪ್ಪದೆ ಮುಂದೆ ಓದಿ…
ಮೊನ್ನೆ ಮಡಿಲಲಿ ನಿನ್ನೆ ಅಂಬೆಗಾಲಲಿ
ಇಂದಾಗಲೇ ಮುಗಿಲೆತ್ತರ ಬೆಳೆದಿವ
ಇಂದ್ರವನದ ಮಂದಾರ ಹೂ ಬಿಡಿಸಿ
ಅಮ್ಮನ ಮುಡಿಗೆ ಮುಡಿಸುತ್ತಿದ್ದಾನೆ
ಕೆನ್ನೆ ಚಿವುಟಿ ದೃಷ್ಟಿಬಟ್ಟಿಟ್ಟು ಎತ್ತಾಡಿದ್ದಳಂದು ಮುದ್ದನಿತ್ತು ಲಾಲಿಸಿ ಹಾಡಿದ್ದಳು ಕೃಷ್ಣನೆಂದು
ಅಪ್ಪನಕ್ಕರೆಯ ಸಕ್ಕರೆಗೊಂಬೆ ಚಂದವೆಂದು
ಗೆಳೆಯರೊಡಿನಲಿದ ಉತ್ಸಾಹ ತೇಜದಲಿ
ಒತ್ತೊತ್ತಿ ಮುಖಕೆ ಮುದ್ದಿಕ್ಕುವ ಕೇಶರಾಶಿ
ಸುಂದರಮೊಗದೊಳು ಚೆಲ್ವ ನೀಳ ನಾಸಿಕ
ನುಡಿನುಡಿಗೆ ನಗೆಚೆಲ್ಲಿ ಅರಳಿ ಸ್ನೇಹದಲಿ
ಎಲ್ಲರೊಡಗೂಡಿ ಎಲ್ಲರೊಡನಾಡಿ ಬೆಳೆದವ
ಭಾರತ ಜನನಿಯ ತನುಜಾತೆಯ ಮಗನು
ಶಾರದೆಗೆ ನಮಿಸಿ ಹಾರಲಿದ್ದಾನೆ ವಿದೇಶಕ್ಕೆ
ಅಮ್ಮನ ಹೆಮ್ಮೆಯಾಗಿ ಮರಳಲಿ ತವರಿಗೆ
ಬೆಳಗಲಿ ಜನಮನಕೆ ಬೆಳಕು ಆಧಾರವಾಗಿ
ಆಶೆ ಆಕಾಂಕ್ಷೆಗಳು ಗೂಡುಕಟ್ಟಿವೆ ಮನದಲಿ
ಸವಾಲುಗಳು ಸುತ್ತಹುತ್ತಗಟ್ಟಿವೆ ಹಾದಿಯಲಿ
ಮಡಿಲನೆಂದೂ ಬಿಡದವ ಬಿಟ್ಟು ಸಾಗಬೇಕಿದೆ
ಹೊಸಹವಕೆ ಮೈ ಚಾಚಿ ಒಗ್ಗಿಕೊಳ್ಳಬೇಕಿದೆ
ಕೊಂಬೆಗಳು ಚಾಚುವುದು ಮುಗಿಲಿಗೆ
ಬೆಳೆಯುವುದು ಮರ ಬೇರಭಾಗ್ಯವಾಗಿ
ಹೂಹಣ್ಣಿಗೆ ಮಣ್ಣಋಣ ಕಣಕಣದಲಿರಲಿ
ಮನದಗುರಿ ಸಾಧನೆಗೆ ಶ್ರದ್ಧೆ ಶ್ರಮವಿರಲಿ
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು
