‘ವಿಸ್ಮೃತಿ’ ಫ್ಯಾಂಟಸಿ ನೀಳ್ಗತೆ (ಭಾಗ ೨) – ಭಾಗ್ಯ.ಕೆ.ಯುವಿಸ್ಮೃತಿ ಎಲ್ಲರಂತೆ ಸಹಜವಾಗಿಲ್ಲ, ಅವಳ‌ ಮರೆವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ, ಈ ವರ್ಷ ಕಡೆಯ ವರ್ಷ ಇದು ಮತ್ತೆ ಜರುಗಿದರೆ ಈ ಶಾಲೆಯಿಂದಲೂ ಮಗುವನ್ನು ಹೊರಹಾಕಬೇಕೆಂದು ಶಾಲಾ ಶಿಕ್ಷಕಿ ಹೇಳಿದಾಗ ವಿಸ್ಮೃತಿ ತಾಯಿ ತಲೆತಗ್ಗಿಸಿ ನಿಂತಿದ್ದಳು. ವಿಸ್ಮೃತಿ ಜನನವಾದಗಿನಿಂದ ಸುತ್ತಮುತ್ತಲೂ ಏನಾದರೊಂದು ಅಸಾಧಾರಣ ಸಂಗತಿಗಳು ಜರುತ್ತಲೇ ಇತ್ತು. ಅದೇನದು ಕತೆಗಾರ್ತಿ ಭಾಗ್ಯ.ಕೆ.ಯು ಅವರ ನೀಳ್ಗತೆಯ ಸಂಚಿಕೆಯನ್ನು ತಪ್ಪದೆ ಓದಿ…

ಆಯಾಸಗೊಂಡಿದ್ದ ಮಗು ವಿಸ್ಮೃತಿಯನ್ನು ಮಲಗಲು ಬಿಟ್ಟು, ತಮ್ಮ ಕೆಲಸದಲ್ಲಿ ನಿರತರಾಗಿದ್ದ ಪ್ರಭಲಾಂಭಿಕೆಗೆ ಮಗುವಿನ ಚೀರುವ ಧ್ವನಿ ಕೇಳಿ ಗಾಬರಿಮೂಡಿತ್ತು. ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೆ ಬಿಟ್ಟು ಓಡೋಡಿ ಬಂದಿದ್ದರು ಮಗುವಿನ ಬಳಿ.

ಕುಳ್ಳ ಜನರು ಮೇದಿನಿಯ ರಕ್ಷಣೆಗೆ ಮುಂದಾಗಿದ್ದಾರೆ. ಆ ವಿಹಂಗ ರಾಜನು ಅವಳನ್ನು ವರಿಸಲು ಮತ್ತೆ ಬರುತ್ತಾನೆ. ಹೀಗಾಗಬಾರದು ಕಾಪಾಡಿ ಎಂದು ಚೀರುತ್ತಿದ್ದ ಮಗುವಿನ ಬಗೆಗೆ ಭಯಬೀತರಾದರೂ, ಬಹುಶಃ ಕನಸ್ಸು ಕಂಡಿರಬಹುದೆಂದು ಎಚ್ಚರಗೊಳ್ಳುವರೆಗೂ ಕಾದು, ಆನಂತರ ಕನಸ್ಸು ಕಂಡೆಯಾ ಕಂದ ಎಂದು ಕೇಳುವಾಗ ಮಗುವಿನ ಉತ್ತರ ಏನೂ ಇಲ್ಲವೆಂಬಂತೆ ಸಹಜವಾಗಿ, ನಿರಾತಂಕವಾಗಿ ಇದ್ದದ್ದು ಮತ್ತಷ್ಟು ಭಯಬೀಳಿಸಿತ್ತಾದರೂ.. ಕನಸಿನ ಪ್ರಮಾದವೇ ಇರಬೇಕೆಂದು ಅಲ್ಲಿಗೆ ಆ ವಿಷಯವನ್ನು ಬಿಟ್ಟುಬಿಡುತ್ತಾ ಮಗುವಿನೊಡನೆ ಸಮಯ ಕಳೆಯುತ್ತಾರೆ ಪ್ರಭಲಾಂಭಿಕೆ.

ಕುಬ್ಜರಾಜನ ಮಾಯಾಲೋಕದ ಮುಖ್ಯದ್ವಾರದಲ್ಲಿ ಶ್ವೇತಾಶ್ವ ದೂತನು ತನ್ನ ಅನುಯಾಯಿಯೊಡನೆ ಕುಬ್ಜರಾಜನ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದ, ದ್ವಾರದಲ್ಲೆ ನಿಂತು ಕೈ ಬೀಸಿ ಕರೆಯುತ್ತಾ ತಾವು ಒಳಬರಲು ಅನುಮತಿ ನೀಡಿರೆಂಬ ಸಜ್ಞೆಯನ್ನು ಮಾಡುತ್ತಾ ನಿಂತಿರುತ್ತಾನೆ.

ಫೋಟೋ ಕೃಪೆ : scoopwhoop

ಮುಖ್ಯದ್ವಾರವು ವಿಭಿನ್ನ ಶೈಲಿಯ ವಿನ್ಯಾಸದಿಂದ ಅಲಂಕೃತವಾಗಿತ್ತು. ಅರ್ಧಚಂದ್ರಾಕಾರದ ಎರಡು ಪದರದ ಮೇಲೊಂದು ಲೋಕದ ಸೃಷ್ಟಿಯಂತೆ, ಮೋಡದ ವಿನ್ಯಾಸದಲ್ಲಿ ತೇಲುತ್ತಾ ಮೇಳೈಸುತ್ತಿದ್ದ ಪ್ರಕೃತಿಯ ಕೃತಕವಾಗಿ ಸೃಷ್ಟಿಸಲ್ಪಟ್ಟ ಮಾಯಾ ವಿನ್ಯಾಸವೊಂದು ಠೀವಿಯಾಗಿ ವಿಜೃಂಭಿಸುವ ಭಂಗಿಯಲ್ಲಿ ಸೃಷ್ಟಿಯಾಗಿರುತ್ತದೆ.

ಶ್ವೇತಾಶ್ವದೂತನಿಗೆ ಮಾಯಾಲೋಕದ ಒಳಹೋಗಲು ಕುಬ್ಜರಾಜನಿಂದ ಸೃಷ್ಟಿಸಲ್ಪಟ್ಟ ಅಷ್ಟಶಕ್ತಿವಲಯ ಅಡ್ಡಿಬರುವುದರಿಂದ, ಹೊರಗೆಯೆ ಕಾಯ್ದುನಿಲ್ಲುವ ಸ್ಥಿತಿ ಬಂದೊದಗಿದಾಗ.. ಸಮಯಪರಿಪಾಲಕನಾದ ದೂತನು ಕ್ರೋಧಗೊಂಡು ಮೇದಿನಿಗೆ ಶಾಪವೊಂದನ್ನು ನೀಡಿ ಪೊರಮಟ್ಟನು.

“ಮಾಯಾಲೋಕದ ಅಳಿವಿನ ಸಮಯ ಸನಿಹಿತವಾಗುವುದರಲ್ಲಿದೆ, ಪರಿವ್ರಾಜಿಕೆ ಮಾಯಾವಿನಿಯ ಶಕ್ತಿ ಅದಃಪತನದೆಡೆಗೆ ಸಾಗಿದೆ, ರಕ್ಷಿಸಬೇಕಿದ್ದ ಪರಿವ್ರಾಜಿಕೆ ಮಾಯಾವಿನಿಯ ಅಂತ್ಯವಾದೊಡನೆ ವಿಹಂಗ ರಾಜನು ತನ್ನ ಅಷ್ಟಸೈನ್ಯದಿಂದ ಪರಿವೇಷಿತನಾಗುವನು, ನಿನ್ನ ಉದರದಿಂದುದಯಿಸುವ ಜೀವಕಣ ದೇಹವಿಲ್ಲದೆ ಆತ್ಮವಾಗಿ ಅಲೆಯುವುದೇ ಆದದ್ದಲ್ಲಿ ಮುಂದೊಂದು ದಿನ ಒದಗುವ ಮಹದಾಪತ್ತನ್ನು ತಡೆಯಬಹುದು” ಎಂದು ನೀಡಿದ ಶಾಪ ಕುಬ್ಜರಾಜನ ಕಿವಿಯೊಳಗೆ ಉಸುರಿತ್ತು.

ಮೇದಿನಿಯನ್ನು ಅರಸಿ ಬಂದ ಕುಬ್ಜರಾಜ ನಡೆದ ಪ್ರಸಂಗವನ್ನು ತಿಳಿಸುವ ಮುನ್ನವೇ ಮೇದಿನಿಯು ತನ್ನ ದಿವ್ಯಶಕ್ತಿಯಿಂದ ಎಲ್ಲವನ್ನು ಗ್ರಹಿಸಿದ್ದಳು. ದೃಷ್ಟಿಹೀನಳಾದ ಮೇದಿನಿಗೆ ಲೋಕಪರಿಜ್ಞಾನದರಿವು ತನ್ನ ದಿವ್ಯ ಶಕ್ತಿಯಿಂದ ದೊರತದ್ದು. ವಿಹಂಗ ರಾಜನಿಂದ ಸಂಸ್ಥಾನದ ಅಳಿವಿನ ಪರಿಶಂಕೆಯಿಂದ ಕುಬ್ಜರಾಜನು ತನ್ನನ್ನು ಮಾಯಾಲೋಕದ ದಿವ್ಯತಥ್ಯ ಬೆಳಕಿನಡಿ ದಹಿಸಿಕೊಳ್ಳಲು ತಯಾರಾದನು.

ಕುಬ್ಜರಾಜನು ದಹನವಾಗುವ ಸಂದರ್ಭದಲ್ಲಿ ಮಾತಂಗ ಸೃಷ್ಟಿಯಾಗುವುದೆಂಬುದು ಮಾಯಾವಿನಿಯಿಂದ ತಿಳಿದಿದ್ದ ರಹಸ್ಯ.

ಮಾತಂಗನಿಗೆ ವಿಶಿಷ್ಟವಾದ ಶಕ್ತಿಯಿದೆ, ಅವನಿಂದ ಮೇದಿನಿಯ ರಕ್ಷಣೆ ಸಾಧ್ಯ. ಸಕಲಗ್ರಾಹಿಯಾದ ಮಾತಂಗನ ಪುಚ್ಛದ ರೋಮವೊಂದು ಜನನವಾಗುವ ಜೀವಾತ್ಮನನ್ನು ಸ್ಪರ್ಶಿಸಿದಾಗ, ಆ ಆತ್ಮ ಕಾಯ ಪ್ರವೇಶಕ್ಕೆ ಸನ್ನದ್ಧವಾಗುತ್ತದೆ. ಆಗ ಉದಯಿಸಿದ ಮುಗುವಿನಿಂದ ಲೋಕದ ಸಂರಕ್ಷಣೆ ಸಾಧ್ಯವೆಂಬುದು ಪರಿವ್ರಾಜಿಕೆ ಮಾಯಾವಿನಿಯ ಉಕ್ತಿಯಾಗಿತ್ತು. ಹಾಗಾಗಿ ತಡಮಾಡದೆ ದಿವ್ಯತಥ್ಯ ಬೆಳಕಿನಲ್ಲಿ ದಹಿಸಿಕೊಂಡು ಲೀನವಾದನು ಕುಬ್ಜರಾಜ. ಅಷ್ಟಶಕ್ತಿವಲಯದ ಶಕ್ತಿ ಕ್ಷೀಣಿಸುತ್ತಾ, ಅಲ್ಲಿಯವರೆಗೆ ಅಗೋಚರವಾಗಿದ್ದ ಮಾಯಾವಲಯ ಸಂಸ್ಥಾನ ನಳನಳಿಸುತ್ತಾ ಗೋಚರವಾಯಿತು.

ಗಹಗಹಿಸಿ ನಕ್ಕು ಆರ್ಭಟಿಸಿ, ಪರಿಹಾಸ್ಯ ನಗೆಬೀರಿದ್ದ ವಿಹಂಗ ನ ಧ್ವನಿ ಕ್ಷಿತಿಗದಿಂದ ಪೊರಮಟ್ಟು ಮೇದಿನಿಯ ಕಿವಿಯೊಳಗೆ ಕಂಪಿಸಿತ್ತು.

ಫೋಟೋ ಕೃಪೆ : google

ಗಕ್ಕನೆ ಎದ್ದು ಕುಳಿತ ಮಗು ನಿದಿರೆಯಲ್ಲೆ ಎದ್ದು ನಡೆದಿತ್ತು. “ಪರುಷಾಟವಿಯತ್ತ ಹೆಜ್ಜೆಗಳು ಸಾಗಬೇಕು, ಅವನಿಂದೀಗ ರಕ್ಷಣೆಬೇಕು, ಪರಿವ್ರಾಜಕರನ್ನು ಕಾಣಬೇಕು, ಆತ್ಮ ಸಂರಕ್ಷಣೆಗೆ ಮುಂದಾಗಬೇಕು, ಜಗದೊದ್ಧಾರಕ್ಕೆ ಸನ್ನದ್ಧಾರಗಬೇಕೆಂದು ಘೋಷಣೆ ಕೂಗುತ್ತಿದ್ದ ಮಗುವಿನ ಧ್ವನಿಗೆ ಅದಾವುದೋ ಕೆಲಸದಲ್ಲಿದ್ದ ಪ್ರಭಲಾಂಭಿಕೆ ಓಡೋಡಿ ಬಂದು ಮಗುವನ್ನು ನೋಡಿ ಗಾಬರಿಗೊಂಡು, ಬಾಗಿಲು ತೆಗೆದು ಗುಡ್ಡದ ಮನೆಯಿಂದ ಹೊರಹೊರಟ ಮಗುವಿನ ಕೈಯನ್ನು ಭದ್ರವಾಗಿ ಹಿಡಿದೆಳೆದರು.
ಮಗು ಆ ತಕ್ಷಣ ತಲೆದಿರುಗಿ ತಾಯಿಯ ಹೆಗಲಮೇಲೆ ಜಾರಿತ್ತು.

ರಾತ್ರಿಯಿಡೀ ಮಗುವಿನ ಬಗೆಗಿನ ಆಲೋಚನೆಗಳು ನಿದ್ರಾಹೀನಳನ್ನಾಗಿ ಮಾಡಿತು. ಪಾಪಭೀತಳಾದರು ಪ್ರಭಲಾಂಭಿಕೆ. ಎಂದಿನಂತೆ ಬೆಳಗು ಮೂಡಿತ್ತು, ದಿನಮಣಿ ಪ್ರಕರನಾಗುತ್ತಾ ಸಾಗಿದ್ದ. ಶಾಲೆಗೆ ಹೊರಡಲು ಅನುವಾದಳು ವಿಸ್ಮೃತಿ. ಹಿಂದಿನ ದಿನಗಳಲ್ಲಿ ಇದ್ದ ಹಾಗೆ ಇರದೆ, ಉಲ್ಲಾಸದಿ ಮಗುವು ತಾನೆ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ ಅಣಿಗೊಳ್ಳುವಾಗ.. ಇಂದು ಶಾಲೆಗೆ ಬೇಡ, ಈ ದಿನವೂ ವಿಶ್ರಾಂತಿಯ ಅವಶ್ಯಕತೆಯಿದೆ ಎಂದ ತಾಯಿಯ ಮಾತಿಗೆ ಮಗುವು ಆಗುವುದೇ ಇಲ್ಲವೆಂದು ಹಠವಿಡಿದು ಶಾಲೆಗೆ ಹೊರಡಲನುವಾಯಿತು.

ಜ್ವರ ತಗ್ಗಿದೆಯೆಂಬುದು ತಿಳಿದು ಪ್ರಭಲಾಂಭಿಕೆಯಲ್ಲಿ ನಿರಾಳತೆ ಮೂಡಿತ್ತಾದರೂ ನಿನ್ನೆಯ ಪ್ರಸಂಗ ಮನದಲ್ಲಿ ಹಾಗೆಯೇ ಉಳಿದಿತ್ತು. ಕಾರಿನಲ್ಲಿ ಕುಳಿತಾಗ ಮಗುವಿನ ಉತ್ಸಾಹುಕತೆ, ಮೊಗದಲ್ಲಿನ ಕಳೆ ಇಂದು ವಿಭಿನ್ನವೆನಿಸಿತು. ಎಂದೂ ಶಾಲೆಗೆ ಹೋಗಲು ಹಠವಿಡುವ ಮಗು, ಶಾಲೆಯೆಂದರೆ ತಾತ್ಸಾರದಿ ಕಾಣುವ ಮಗು ಇಂದು ಪುಟಿದೇಳುವ ರೀತಿಗೆ ಮನಸ್ಸು ಸಂತಸಿಸಿದರೂ ಏನೋ ಗಲಿಬಿಲಿ ಒಳಗೊಳಗೆ. ಶಾಲೆಯ ಆವರಣ ತಲುಪುತ್ತಲೂ ಮತ್ತಷ್ಟು ಹರ್ಷಿಸಿತ್ತು ಮಗು ವಿಸ್ಮೃತಿ. ಆಗತಾನೆ ಶಾಲೆಯ ಪ್ರಾರಂಭಾವದಿ ಶುರುವಿಟ್ಟದ್ದಾಗಿತ್ತು. ಅಂದಿನ ತರಗತಿಯಲ್ಲಿದ್ದ ತರಗತಿ ಶಿಕ್ಷಕಿಯ ಗಮನಕ್ಕೆ ಮಗು ಬಂದದ್ದು ತಿಳಿದಾಗ, ಬಾಗಿಲ ಬಳಿಯಿದ್ದ ಮಗುವಿನತ್ತ ನೀರಸ ನೋಟ ನೆಟ್ಟು, ಬಾ ಒಳಗೆ ಎಂದಿದ್ದರು ಸಾಧಾರಣವಾಗಿ.

ಫೋಟೋ ಕೃಪೆ : google

ಮಗು ಹರ್ಷಿಸುತ್ತಲೇ ಕುಣಿದು ಒಳಹೋಗಿ ಕುಳಿತೊಡನೆ ಅವಳ ಬಳಿ ಬಂದ ಶಿಕ್ಷಕಿ ನಿನ್ನೆಯ ಮನೆಗೆಲಸದ ಪಠ್ಯಪುಸ್ತಕ ತೋರಲು ತಿಳಿಸಿದರು. ಶಿಕ್ಷಕಿಯ ಮಾತಿಗೆ ಮಗು ಸಪ್ಪೆಯಾದದ್ದನ್ನು ಆಗತಾನೆ ಕಿಟಕಿಯ ಬಳಿ ಸಾರಿ ಹೋದ ಪ್ರಭಲಾಂಭಿಕೆ ಗಮನಿಸಿ ನಿಂತರು. ತಕ್ಷಣ ಒಂದು ಕರೆ ತರಗತಿಯ ಶಿಕ್ಷಕಿಯಿಂದ ಬಂದಿತ್ತು. ಮೇಡಂ ಸ್ವಲ್ಪ ಬಂದುಹೋಗಿ ಎಂಬದ್ದು ಕಿವಿಗಳು ನಿಮಿರಿಸಿ ಆಲಿಸಿಕೊಂಡಾಗ.. ಎಂದಿನಂತೆ ಬೇಸರದ ಭಾವ ತೊನೆದಾಡಿತ್ತಲ್ಲಿ. ಸರಿ ಎನ್ನುತ್ತಲೇ ತಲೆಯಾಡಿಸಿ ತರಗತಿಯ ಬಳಿ ನಿಂತವರಿಗೆ ಪ್ರತೀ ನಿತ್ಯವೂ ಸಿಗುವ ಅದೇ ಮಾತಿನೌತಣ.

ಎಂದಿನಂತೆ ಇಂದೂ ಸಹ ಅವಳಿಗೆ ನೆನಪಿಲ್ಲ!, ಪ್ರತೀ ನಿತ್ಯವೂ ಇದೇ ಆಗಿದೆ, ನೀವು ಮನೆಯಲ್ಲಿ ಮಗುವನ್ನು ಗಮನಿಸುತ್ತಿರೋ ಇಲ್ಲವೋ?. ಪ್ರತೀ ನಿತ್ಯ ಇದೇ ಸಮಸ್ಯೆ, ಒಮ್ಮೆ ವೈದರನ್ನು ಭೇಟಿಮಾಡಿರಿ ಎಂದರೆ ಕೋಪಿಸಿಕೊಳ್ಳುತ್ತೀರಿ, ನನ್ನ ಮಗಳು ಎಲ್ಲರ ಹಾಗೆ ಸಹಜವಾಗಿಯೇ ಇದ್ದಾಳೆಂದು ನಮ್ಮೊಡನೆಯೆ ಜಗಳವಾಡುತ್ತಿರಿ. ಆದರೆ ನೋಡಿ ಅವಳ‌ ಮರೆವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಹೊರಟಿದೆಯೆ ಹೊರತು, ಯಾವ ಬದಲಾವಣೆಯೂ ಇಲ್ಲ. ಹೆಸರನ್ನು ಬಹಳ ಸೂಕ್ತವಾಗಿಯೇ ಇಟ್ಟಿದ್ದೀರಿ!.ಈ ವರ್ಷ ಕಡೆಯ ವರ್ಷ ಇದು ಮತ್ತೆ ಜರುಗಿದರೆ ಈ ಶಾಲೆಯಿಂದಲೂ ಮಗು ಹೊರಬೀಳಬೇಕಾದಿತು ಎಂದು ನಿರ್ದಾಕ್ಷಿಣ್ಯವಾಗಿ ಆಡಿದ ಶಿಕ್ಷಕಿಯ ಮಾತಿಗೆ ತಲೆ ಬಗ್ಗಿಸಿಯೇ ನಿಂತಿದ್ದ ಪ್ರಭಲಾಂಭಿಕೆ, ಕಡೆಯದಾದ ಆ ಒಂದು ಸಾಲಿಗೆ ಮಗುವಿನತ್ತ ನೋಟ ಬೀರಿದ್ದರು. ಮಗು ತನ್ನ ಸಹಪಾಠಿಯೊಡನೆ ಅಷ್ಟೇ ಮುಗ್ಧವಾಗಿ ಇದ್ಯಾವುದರ ಅರಿವಿಲ್ಲದೆ ನಿರ್ಮಲವಾಗಿ ಆಟವಾಡುತ್ತಾ ಇತ್ತು.‌ಜಾರಿಬೀಳಲನುವಾದ ಹನಿಬಿಂದುಗಳನ್ನು ತೋರುಬೆರಳ ತುದಿಮೊನೆಯಲ್ಲಿ ಸರಿಯಲುಬಿಟ್ಟು ನಾಳೆಯಿಂದ ಖಂಡಿತ ಹೀಗೆ ಆಗದೆಂದು ನುಡಿದು ಅಲ್ಲಿಂದ ಅವರ ಕಛೇರಿಗೆ ತೆರಳಿದ್ದರು ಪ್ರಭಲಾಂಭಿಕೆ. ಕಾರ್ಯೋನ್ಮುಕವಾಗುವ ಮನಸ್ಸಿಲ್ಲ, ಎಂದಿನಂತೆ ನೀರಸ ವದನದಲ್ಲಿ ಕೆಲಸದಲ್ಲಿ ತೊಡಗಿದ್ದರು. ಎರಡು ಮೂರು ಗಂಟೆಗಳ ತರುವಾಯ ಶಾಲೆಯಿಂದ ಕರೆ ಬಂದಿತ್ತು, ಮಗು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ ಇಲ್ಲಿಯೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದೇವೆ ತಡಮಾಡದೆ ಬನ್ನಿರೆಂದು ನುಡಿದ್ದರು ಶಿಕ್ಷಕರೋರ್ವರು. ಆತಂಕಿತಳಾದ ಪ್ರಭಲಾಂಭಿಕೆ ಕಛೇರಿಯಲ್ಲಿ ರಜೆಗೆ ಬೇಡಿಕೆಯಿಟ್ಟು ಬಹುಬೇಗ ಅನುಮತಿ ಪಡೆದು ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದರು.

ಮಗುವನ್ನು ಪರೀಕ್ಷಿಸಿದ ಡಾಕ್ಟರ್ ಏನೂ ತೊಂದರೆಯಿಲ್ಲವೆಂದು ಸಹಜವಾಗಿ ನುಡಿದು ಮನೆಗೆ ಕರೆದೊಯ್ಯಲು ತಿಳಿಸಿದ್ದರು. ಬಹುಶಃ ನಿನ್ನೆಯ ವಿಪರೀತ ಜ್ವರಕ್ಕೆ ಆಯಾಸಗೊಂಡ ಮಗುವಿಗೆ ಹೀಗಾಗಿದ್ದಿರಬಹುದೆಂದು ನೆನೆದು ಮನೆಗೆ ವಾಪಸ್ ಕರೆತಂದರು. ಮಗು ಮಲಗಿಯೇ ಇತ್ತು. ಡಾಕ್ಟರ್ ನೀಡಿದ ಸಲಹೆಯಂತೆ ಕೆಲವು ಔಷಧಿಗಳನ್ನು ನೀಡಿ ಮಗುವಿನ ಮುಂದೆಯೇ ಕುಳಿತರು.
ತಾವಿರುವ ಜಾಗವನ್ನೊಮ್ಮೆ ಸುತ್ತುವರೆದಿದ್ದವು ಕಣ್ಣುಗಳು. ತಮ್ಮ ಸುತ್ತಮುತ್ತಲೂ ಏನಾದರೊಂದು ಅಸಾಧಾರಣ ಸಂಗತಿಗಳು ಜರುತ್ತಲೇ ಇವೆ ಎಂಬುದು ವಿಸ್ಮೃತಿಯ ಜನನದಿಂದಲೇ ಅರಿವಾಗಿತ್ತು ಅವರಿಗೆ.‌ ಮಗುವಿನ ಜನನಕ್ಕು ಹಿಂದಿನ ದಿನ ವಿಸ್ಮೃತಿಯ ತಂದೆ ಅಶ್ವತ್ಥಾಮರು ತಮಗೆ ಹೆಣ್ಣುಮಗುವೇ ಜನಿಸುವುದೆಂದು.. ಆ ಮಗುವಿಗೆ ವಿಸ್ಮೃತಿಯೆಂದೇ ನಾಮಾಂಕಿತವಾಗಬೇಕೆಂದು ನುಡಿದಿದ್ದರು. ಆದರೆ ಮಗು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಜನಕನ ಕೈಸೇರಿದಾಗ ಅಶ್ವತ್ಥಾಮರ ಮರಣ ಸಂಭವಿಸಿದ್ದು ಘೋರ.

ಮುಂದುವರೆಯುವುದು…


  • ಭಾಗ್ಯ.ಕೆ.ಯು (ಗೃಹಿಣಿ, ಹವ್ಯಾಸಿ ಬರಹಗಾರ್ತಿ), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW