ಫ್ಯಾಶನ್ ಯುಗದಲ್ಲಿ ಹೂ ಮುಡಿವ ಹೆಣ್ಣು ಅಪರೂಪ…ಕವಿ ರೂಪಶ್ರೀ ಎಂ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಜೀವನಕ್ಕೆ ನಾಲ್ಕು ಕಾಸು ಬೇಕೆಂದು
ಕನಸನೆಲ್ಲ ದಾರದಲ್ಲಿ ಪೋಣಿಸಿ
ಮಾರಲು ಕೂತಿದೆ
ಕಮರಿ ಹೋಗಿರುವ ಬದುಕಿನ ಮೌನ
ಎಳೆಯ ಬಾಲೆಯ ಕಣ್ಣು ಪುಸ್ತಕದ
ಅಕ್ಷರಗಳಲಿ ಮಗ್ನ
ಕನಸ ಬಿತ್ತಿ ಬೆಳೆಸುತ್ತಿರುವ ಅಮ್ಮ-ಮಗಳ
ಜ್ಞಾನದಾಹ ” ತೀರದ ಧ್ಯಾನ ”
ಫ್ಯಾಶನ್ ಯುಗದಲ್ಲಿ ಹೂ ಮುಡಿವ
ಹೆಣ್ಣು ಅಪರೂಪ ; ಸಂಗಾತಿಯ ಮೇಲೆ ಪ್ರೀತಿ
ಸುರಿಸಬಾರದು ಹೂವ ಕೈಲಿಟ್ಟು ಎಂದು !
ದೇವರೂ ಕೊಟ್ಟಿರಬಹುದೇ ಈ ಶಾಪ !?
ಪ್ರಶ್ನೆ…
ಸ್ವಾರ್ಥ ತುಂಬಿರುವ ಸಮಾಜಕ್ಕೂ
ನಗುವ ಹೂ ಮಾರುವಾಕೆಗೆ
ನಿಂತು ಉತ್ತರ ನೀಡಬೇಕು ನೀವು
ನಮ್ಮ ಸಹಾಯಕ್ಕೆ ಬರಲಿಲ್ಲವೇಕೆ ?
- ರೂಪಶ್ರೀ ಎಂ – ಸಾಗರ, ಶಿವಮೊಗ್ಗ ಜಿಲ್ಲೆ.
