“ಐಕ್ಯತೆಯ ಅರಿವು “ಮೂಡಿಸಬೇಕಿದೆ

ಪುರಂದರದಾಸರು, ಕನಕದಾಸರಂತಹ ಶ್ರೇಷ್ಠ ದಾಸವರ್ಯರು, ಬಸವಣ್ಣ, ಅಲ್ಲಮ ಪ್ರಭುವಂತಹ ಶರಣರು ತಮ್ಮ ಕೀರ್ತನೆ, ವಚನ, ತತ್ತ್ವ ಪದಗಳ ಮೂಲಕ ಸಮಾಜದಲ್ಲಿ ಐಕ್ಯತೆ ಮೂಡಿಸಲು ಪ್ರಯತ್ನಿಸಿದರು.ಪ್ರೀತಿ, ವಿಶ್ವಾಸ, ನಂಬಿಕೆಗಳೇ ಐಕ್ಯತೆಯ ಆಧಾರ ಸ್ತಂಭಗಳು! ಇವುಗಳ ಮುಖಾಂತರ ಮನುಷ್ಯನಲ್ಲಿ ಆಲೋಚಿಸುವ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.ಶಾರದಾ ಶ್ರಾವಣಸಿಂಗ್ ರಜಪೂತ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

“Nature is the best example for the Unity”. ಇಂತಹ ನಿಸರ್ಗದ ಮಡಿಲಲ್ಲಿ ಬಾಳುವ ಮನುಷ್ಯ ಕೂಡ ಇದೇ ಭಾವದಲ್ಲಿ ಬದುಕಬೇಕಲ್ಲವೇ? ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸಂಸ್ಕೃತಿ ನಮ್ಮದು! ಈ ಏಕತೆಯಲ್ಲಿ ‘ಐಕ್ಯತೆ’ ಮೂಡಿಸುವುದು ಕಠಿಣವಾದರೂ ಕಷ್ಟ ಸಾಧ್ಯ ಎನ್ನುವುದು ಸುಳ್ಳಲ್ಲ! ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸ್ಥಿತಿಗಳಲ್ಲಿ ಆ ಭಾವನೆ ಮೂಡುವುದು ಪ್ರಥಮ ಯಶಸ್ವಿ ಹೆಜ್ಜೆಯಾಗಿದೆ!.

ಒಂದಾಗುವಂತಹ ಅವಸ್ಥೆ ಅಥವಾ ಭಾವವನ್ನು ನಾವು ‘ಐಕ್ಯತೆ’ ಎಂದು ಕರೆಯುತ್ತೇವೆ. ಐಕ್ಯತೆಯನ್ನು ಒಗ್ಗಟ್ಟು, ಏಕತೆ, ಐಕ್ಯ, ಕೂಡುವಿಕೆ, ಸಂಘಟನೆ, ಸಂಯೋಗ ಹೀಗೆ ಹಲವಾರು ಅರ್ಥಗಳನ್ನು ಅರ್ಥೈಸಬಹುದು. ‘ಶ್ರೀ ಸದ್ಗುರು’ ಹೇಳುವಂತೆ ಐಕ್ಯತೆ ಎಂದರೆ ನಮ್ಮಲ್ಲಿರುವ ಪ್ರತ್ಯೇಕ ವ್ಯಕ್ತಿತ್ವಗಳನ್ನು ಪ್ರಜ್ಞಾಪೂರ್ವಕವಾಗಿ ಅಳಿಸಿ ಹಾಕಿ ವಿಶ್ವದೊಂದಿಗೆ ಹೊಂದಿಕೊಳ್ಳುವುದು. ಲಿಂಗ, ಭಾಷೆ, ಧರ್ಮ, ಜಾತಿ, ಪಂಥ, ಆಹಾರ, ವೇಷಭೂಷಣ, ಸಂಪ್ರದಾಯ, ರೀತಿ -ರಿವಾಜುಗಳು, ಬಡವ-ಬಲ್ಲಿದ ಇವೆಲ್ಲವುಗಳು ದೊಡ್ಡ ಕಂದಕವನ್ನೇ ನಮ್ಮ ಮುಂದೆ ಸೃಷ್ಟಿಸಿದ್ದಿದೆ! ಇದನ್ನು ಮೊದಲು ಸರಿಪಡಿಸಿ ಏಕತೆ ಸಾಧಿಸಬೇಕಾದರೆ ಎಲ್ಲರ ಮನಗಳು ವಿಶಾಲ ಮನೋಭಾವ ಹೃದಯಗಳಾಗಬೇಕು.

ಈ ನಿಟ್ಟಿನಲ್ಲಿ ಪುರಂದರದಾಸರು, ಕನಕದಾಸರಂತಹ ಶ್ರೇಷ್ಠ ದಾಸವರ್ಯರು, ಬಸವಣ್ಣ, ಅಲ್ಲಮ ಪ್ರಭುವಂತಹ ಶರಣರು “ಈಶ್ವರ ಅಲ್ಲಾ ನೀನೇ ಎಲ್ಲಾ” ಎಂದ ಗುರು ಗೋವಿಂದ ಭಟ್ಟರು, ಶಿಶುನಾಳ ಶರೀಫರು ಮುಂತಾದವರೆಲ್ಲ ತಮ್ಮ ಕೀರ್ತನೆ, ವಚನ, ತತ್ತ್ವ ಪದಗಳ ಮೂಲಕ ಸಮಾಜದಲ್ಲಿ ಐಕ್ಯತೆ ಮೂಡಿಸಲು ಪ್ರಯತ್ನಿಸಿದರು. ಸಮಾಜದಲ್ಲಿ ಬೇರು ಬಿಟ್ಟಿದ್ದ ಮಾನವ ನಿರ್ಮಿತ ಬೇಧಭಾವ ಗಳ ಗೋಡೆಗಳನ್ನು ಕೊಡವಿ ಮಾನವೀಯ ಮೌಲ್ಯಗಳನ್ನು ಬಿತ್ತಲು ಪ್ರಯತ್ನಿಸಿದರು.

“ವಸುದೈವ ಕುಟುಂಬಕಂ” ಎಂದು ನಂಬಿಕೊಂಡ ಉನ್ನತೋನ್ನತ ಸಂಸ್ಕೃತಿ ಹೊಂದಿದ ಭಾರತದ ನೆಲ ನಮ್ಮದು! ನಾವೆಲ್ಲ ವಿಶ್ವದ ಪ್ರಜೆಗಳು ಅಂದರೆ ಈ ವಿಶ್ವವೇ ದೊಡ್ಡ ಕುಟುಂಬವೆನ್ನುವ ಅಮೋಘ ಕಲ್ಪನೆ ಹೊಂದಿದ ಸಹೃದಯಗಳಿಗೆ ಜನ್ಮ ನೀಡಿದ ಭಾರತದ ನೆಲ ನಮ್ಮದು! ಇಂತಹ ನೆಲದಲ್ಲಿ ಅನೇಕ ಧರ್ಮಗಳು ನೆಲೆಗೊಂಡಿದ್ದರೂ ಕೂಡ ‘ವಿವಿಧತೆಯಲ್ಲಿ ಏಕತೆ’ ಸಾರುವ ಧರ್ಮ ಸಹಿಷ್ಣುಗಳು ಭಾರತೀಯರು! ಇದಕ್ಕೆ ಕಾರಣ ಭಾರತೀಯರಲ್ಲಿರುವ ಐಕ್ಯತೆ ಮನೋಭಾವ! ಇತ್ತೀಚೆಗೆ ಕೆಲವೊಂದು ವಿಕೃತಿ ಮನಗಳಿಂದ ಮನೋವಿಕಾರ ಚಟುವಟಿಕೆಗಳು ಕೋಮುಗಲಭೆ, ಮತಾಂಧತೆಯ ಉಗ್ರರೂಪಗಳು ತಲೆದೋರುತ್ತಿರುವುದು ಶೋಚನೀಯ ವಿಚಾರಗಳಾಗಿವೆ. ಇವೆಲ್ಲ ಸಮಾಜಘಾತುಕ ಶಕ್ತಿಗಳನ್ನು ಕಿತ್ತು ಹಾಕಬೇಕೆಂದರೆ ಐಕ್ಯತೆ ಮನೋಭಾವ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಿಸಬೇಕು. ಪ್ರೀತಿ, ವಿಶ್ವಾಸ, ನಂಬಿಕೆಗಳೇ ಐಕ್ಯತೆಯ ಆಧಾರ ಸ್ತಂಭಗಳು! ಇವುಗಳ ಮುಖಾಂತರ ಮನುಷ್ಯನಲ್ಲಿ ಆಲೋಚಿಸುವ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.”ಒಗ್ಗಟ್ಟಿನಲ್ಲಿ ಬಲವಿದೆ”ಎಂಬ ನಾಣ್ಣುಡಿಯಂತೆ ಎಲ್ಲಿ ಐಕ್ಯತೆ ಇದೆಯೋ ಅಲ್ಲಿ ಮಾನವೀಯ ಮೌಲ್ಯಗಳು ಗಟ್ಟಿಗೊಳ್ಳುತ್ತವೆ.ಮಾನವೀಯ ದೃಷ್ಟಿ ತಾಳದೇ ಐಕ್ಯತೆಯನ್ನು ಮೂಡಿಸಲಾಗುವುದಿಲ್ಲ.ಇಂದಿನ ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರಂತಹ ಹಲವಾರು ದಾರ್ಶನಿಕರ ಜೀವನವನ್ನು ತಿಳಿಸಿ ಉದಾತ್ತ ಚಿಂತನದತ್ತ ಚಿತ್ತವನ್ನು ಹದಗೊಳಿಸಬೇಕಾಗಿದೆ.

ಆದ್ದರಿಂದ ಒಂದು ದೇಶ, ನಾಡು,ಸಮಾಜ, ಕುಟುಂಬ ಒಂದಾಗಿ ಸಮೃದ್ಧಿ ಹೊಂದಿ ಬಾಳಬೇಕಾದರೆ ಒಂದಾಗಿ ಐಕ್ಯತೆ ಎನ್ನುವುದು ತುಂಬಾ ಪರಿಣಾಮಕಾರಿಯಾದ ಮನೋಭಾವ ಎನ್ನುವುದರಲ್ಲಿ ಸಂಶಯವಿಲ್ಲ.ಆದ್ದರಿಂದ ಐಕ್ಯತೆಯ ಅರಿವು ಜನರಲ್ಲಿ ಜಾಗೃತವಾಗಬೇಕಾಗಿದೆ.


  • ಶಾರದಾ ಶ್ರಾವಣಸಿಂಗ್ ರಜಪೂತ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading