ಬಿ.ಎ.ಶ್ರೀಧರ ಅವರು ಮೂಲತಃ ಮಾಧ್ಯಮದ ವಿದ್ಯಾರ್ಥಿ ಮತ್ತು ಅಧ್ಯಾಪಕರಾಗಿದ್ದು, ಅವರ ‘ಇಳೆಯ ಬೆಳಗು’ ಕೃತಿಯ ಕುರಿತು ಲೇಖಕರು ಮತ್ತು ಪ್ರಾಧ್ಯಾಪಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ :ಇಳೆಯ ಬೆಳಗು
ಲೇಖಕರು : ಬಿ.ಎ.ಶ್ರೀಧರ
ಪ್ರಕಾಶನ : ಕೌದಿ ಪ್ರಕಾಶನ
ಬೆಲೆ : 270.00
ಓದಿನ ಭಂಡಾರ ಖ್ಯಾತಿಯ ನಮ್ಮ ಸಹಪಾಠಿ ಸಿ.ಎಚ್.ಭಾಗ್ಯ ಈಚೆಗೆ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು ಬೆರಗು ಮೂಡಿಸಿದರಲ್ಲದೆ ಅವರ ಗೆಳತಿಯ ಸಂಗಾತಿ ಬರೆದ ಮೇಲಿನ ಪುಸ್ತಕವನ್ನು ನನಗೆ ಕೊಟ್ಟು , ಅದನ್ನು ಓದುವ ಮೂಲಕ ನನ್ನ ಅರಿವಿನ ವಿಸ್ತಾರಕ್ಕೆ ಕಾರಣರಾದರು. ಅದಕ್ಕೆ ಅವರಿಗೆ ಮೊದಲು ಋಣಿ.
ನನ್ನದು ಒಂದು ಬಗೆಯಲ್ಲಿ ಸೀಮಿತ ತಿಳಿವಳಿಕೆ. ಅದನ್ನು ಸ್ವಲ್ಪ ವಿಸ್ತರಿಸಲು ಕಾರಣವಾದುದು ನಮ್ಮ ಕನ್ನಡ ಅಧ್ಯಯನ ಕೇಂದ್ರದ ಮೇಷ್ಟ್ರುಗಳು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉಳಿದ ಭಾಷಾ ಸಾಹಿತ್ಯಗಳ ಅರಿವುಂಟಾಗಲಿ ಎನ್ನುವ ಸದುದ್ದೇಶದಿಂದ ನಮಗೆ ಭಾರತೀಯ ಮತ್ತು ಪಾಶ್ಚಾತ್ಯ ಸಾಹಿತ್ಯದ ಪ್ರಾತಿನಿಧಿಕ ಕೃತಿಗಳನ್ನು ಪಠ್ಯವನ್ನಾಗಿ ಇಟ್ಟಿದ್ದರು. ಅದರ ಪರಿಣಾಮವಾಗಿ ನಾವು ಕೂಪಮಂಡೂಕಗಳಾಗದೆ ಇರಲು ಸಾಧ್ಯವಾಯಿತು. ಆದರೂ ಕಲಾ ವಿಭಾಗದ ವಿದ್ಯಾರ್ಥಿಗಳಾದ, ನಮ್ಮ ಜ್ಞಾನ ಸಾಹಿತ್ಯಕ್ಕೆ, ಹೆಚ್ಚೆಂದರೆ ನಾವು ಪದವಿಯಲ್ಲಿ ಆಯ್ದುಕೊಂಡ ವಿಷಯಗಳ ಸೀಮಿತವಾಯಿತು.ಆದ್ದರಿಂದ ಅದರಿಂದ ಹೊರತಾಗಿ ವಿಶಾಲವಾದ ಜ್ಞಾನಾಂಭುಧಿ ಇದೆ ಎಂದು ಅರಿವಾದುದು ಮೇಲಿನ ಪುಸ್ತಕ ಓದಿದಾಗಲೇ.

ಬಿ.ಎ.ಶ್ರೀಧರ ಅವರು ಮೂಲತಃ ಮಾಧ್ಯಮದ ವಿದ್ಯಾರ್ಥಿ ಮತ್ತು ಅಧ್ಯಾಪಕರು. ತಮ್ಮ ಸ್ವಂತದ ಆಸಕ್ತಿಯಿಂದ ವಿಸ್ತಾರವಾದ ಜ್ಞಾನ ಲೋಕಕ್ಕೆ ಲಗ್ಗೆ ಇಟ್ಟು, ಅದರಿಂದ ತಮ್ಮ ವಿವಿಧ ಬಗೆಯ ಚಿಂತನೆ, ಶೋಧನೆಗಳಿಂದ ಇಳೆಯನ್ನು ಬೆಳಗಿದ ಮಹಾನುಭಾವರ ಚಿಂತನ ದೀಪ್ತಿಗಳನ್ನು ಕರಿಯನ್ನು ಕನ್ನಡಿಯಲ್ಲಿ ಅಡಗಿಸುವಂತೆ ಈ ಲೇಖನಗಳಲ್ಲಿ ಅಡಗಿಸಿ,ಬಿಂದುಗಳಲ್ಲಿ ಸಿಂಧುವನ್ನು ಸೆರೆಹಿಡಿದಿದ್ದಾರೆ. ಕ್ರಿಸ್ತ ಪೂರ್ವದಿಂದ ಹಿಡಿದು ಸಮಕಾಲೀನದವರೆಗೆ ಅವರ ವ್ಯಾಪ್ತಿಯಿದೆ. ಪ್ರಾಚೀನ ಅರ್ವಾಚೀನ ಎಂಬ ಭೇದವನ್ನು ಅಳಿಸಿ ಹಾಕಿ ಅವರನ್ನು ನಿಚ್ಚಂ ಪೊಸತಾಗಿಸಿದ್ದಾರೆ. ರಾಜಕೀಯ, ಪ್ರಕೃತಿ ವಿಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ಇತ್ಯಾದಿ ಅನ್ಯಾನ್ಯ ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಯಿತ್ತವರ ಚಿಂತನೆಗಳು ಸಾರವತ್ತಾಗಿ ಈ ಕಿರು ಬರಹಗಳಲ್ಲಿ ಮೂಡಿ ಬಂದಿವೆ.ಇದರಿಂದಾಗಿ ಪುಸ್ತಕಕ್ಕೆ ಇಟ್ಟಿರುವ ಶೀರ್ಷಿಕೆ ಸಾರ್ಥಕವಾಗಿದೆ.
ವಿವಿಧ ದೇಶಗಳ ಕಾಲಗಳ ಚಿಂತಕರ , ಅನ್ವೇಷಕರ, ಕೊಡುಗೆಗಳನ್ನು ಒಟ್ಟಿಗೆ ತರುವ ಮೂಲಕ, ಇದಕ್ಕೆ ಕಾಲಾತೀತ ಹಾಗೂ ಸಮಕಾಲೀನ ಎರಡನ್ನೂ ಸಾಧಿಸಲು ಸಾಧ್ಯವಾಗಿದೆ.
ಚೀನಾದ ಕನ್ಫ್ಯೂಷಿಯಸ್ ನಿಂದ ಪ್ರಾರಂಭವಾಗಿರುವ, ಗ್ರೀಕ್ ದೇಶದ ಪ್ರಾಥ: ಸ್ಮರಣೀಯರಾದ ಸಾಕ್ರೆಟಿಸ್, ಪ್ಲೇಟೋ ಅರಿಸ್ಟಾಟಲ್ ತ್ರಯರನ್ನು ಒಳಗೊಂಡು, ಮುಂದೆ ಹದಿನೈದನೇ ಶತಮಾನದಲ್ಲಿ ಅಪೂರ್ವ ಕೊಡುಗೆ ನೀಡಿದ ಗೆಲಿಲಿಯೋ, ಡ.ವಿಂಚಿ, ಲೂಯಿ ಪಾಶ್ಚರ್ ಹದಿನೆಂಟನೇ ಶತಮಾನದ ನ್ಯೂಟನ್, ಹತ್ತೊಂಬತ್ತು ಶತಮಾನದ ಐನ್ಸ್ಟೀನ್ ಮುಂತಾದ ಯುಗ ಪ್ರವರ್ತಕ ವಿಜ್ಞಾನಿಗಳ ಕೊಡುಗೆಯನ್ನು ನಿರೂಪಿಸಿದ್ದಾರೆ. ಇದರೊಟ್ಟಿಗೆ ಮನಶ್ಯಾಸ್ತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಫ್ರಾಯ್ಡ್, ಯೂಂಗ್ ರ ನೀಡಿದ ಕೊಡುಗೆ ಉಲ್ಲೇಖ ಮಾಡಿದ್ದಾರೆ.
ಬಂಡವಾಳ ಶಾಹಿಗಳ ಶೋಷಣೆಗೆ ಒಳಗಾದ ಕಾರ್ಮಿಕರನ್ನು ಒಂದುಗೂಡಿಸುವ ಉದ್ದೇಶದಿಂದ ಹುಟ್ಟಿದ ಮಾರ್ಕ್ಸ್ ಮತ್ತು ಎಂಗೆಲ್ಸ್ ರ ಮಹತ್ವದ ಕೃತಿ ದಾಸ್ ಕ್ಯಾಪಿಟಲ್ ನ ಪರಿಣಾಮ ಮತ್ತು ಪ್ರಭಾವಗಳನ್ನು ಕೂಡ ಈ ಕೃತಿಯಲ್ಲಿ ಸಮರ್ಥವಾಗಿ ಗುರುತಿಸಲಾಗಿದೆ.

ಆಧುನಿಕ ಯುಗದ ಪ್ರಭುತ್ವದ ಕಟು ಟೀಕಾಕಾರರಾದ ಇಬ್ಬರು ವೈಚಾರಿಕರಾದ ರಸೆಲ್ ಮತ್ತು ಚಾಮಸ್ಕಿ ಅವರ ಪರಿಚಯವನ್ನು ಈ ಕೃತಿ ಒಳಗೊಂಡಿರುವುದು ಲೇಖಕರ ಒಲವರಕ್ಕೆ ಸಾಕ್ಷಿ. ಇವರೊಂದಿಗೆ ಭಾರತೀಯ ಅಮಾನುಷ ಜಾತಿ ಪದ್ಧತಿಯ ಕಟು ವಿಮರ್ಶಕರಾದ ಅಂಬೇಡ್ಕರ್ ಅವರ ವಿಚಾರಗಳನ್ನು ಪರಿಚಯ ಮಾಡಿ ಕೊಟ್ಟಿರುವುದು ಅವರು ಈ ನೆಲದಲ್ಲಿ ಬೇರುಬಿಟ್ಟಿರುವುದಕ್ಕೆ ನಿದರ್ಶನ.
ಮೂಲತಃ ಮಾಧ್ಯಮದ ಅಧ್ಯಾಪಕರಾದ ಪ್ರೊ.ಬಿ.ಎ. ಶ್ರೀಧರ ಅವರ ಕೃತಿ ಅವರ ವಿಸ್ತೃತವಾದ ವೈಚಾರಿಕ ಪ್ರಜ್ಞೆಗೆ ಕನ್ನಡಿ ಹಿಡಿಯುತ್ತದೆ. ಕಿಟಕಿಗಳನ್ನು ತೆರೆದಿಟ್ಟರೆ ಮಾತ್ರ ಗಾಳಿ ಬೆಳಕುಗಳು ಪ್ರವೇಶಿಸಿ ನಾವು ಜೀವಂತವಾಗಿ ಉಳಿಯಲು ಸಾಧ್ಯ . ಅದನ್ನು ಮಾಡುವಲ್ಲಿ ಈ ಕೃತಿ ಯಶಸ್ಸು ಕಂಡಿದೆ. ಇಂತಹ ಅಪೂರ್ವ ಕೃತಿಯನ್ನು ರಚಿಸಿದ ಅವರಿಗೆ ಅಭಿನಂದನೆಗಳು, ಮತ್ತು ಇದನ್ನು ಕೊಡುವ ಮೂಲಕ ಓದಲು ಅವಕಾಶ ಒದಗಿಸಿದ, ಸಹಪಾಠಿ ಸಿ.ಎಚ್. ಭಾಗ್ಯ ಅವರಿಗೆ ವಂದನೆಗಳು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
