‘ಬದುಕೆಂಬುದು ಮನುಷ್ಯ ಮನುಷ್ಯರ ನಡುವೆ ನಡೆಯುವ ಸಂಘರ್ಷ’…ಗೀತಾ ಜಿ ಹೆಗಡೆ ಕಲ್ಮನೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಓದಿ…
ಬದುಕಿರುವವರೆಗೆ
ನಾನು ನನದೆಂಬ ಮಮಕಾರ
ಪ್ರತಿ ದಿನ ಪ್ರತಿ ಕ್ಷಣ ಎಷ್ಟಿದ್ದರೂ
ಇನ್ನೂ ಬೇಕು ಇನ್ನೂ ಬೇಕು
ಎಂಬ ಹಪಾಹಪಿ ತೀರದ ದಾಹ.
ಬದುಕೆಂಬುದು
ಮನುಷ್ಯ ಮನುಷ್ಯರ ನಡುವೆ
ನಡೆಯುವ ಸಂಘರ್ಷ
ಅರಿವಾಗುತ್ತ ನಡೆಯುವುದು
ಬದುಕಿನ ಅರ್ಥ, ಅನರ್ಥಗಳ ಮೌಲ್ಯ.
ಬದುಕೆಂದರೆ ಇಷ್ಟೇನಾ?
ಎಂಬ ಜಿಜ್ಞಾಸೆ ಮನವನಾವರಿಸಲು
ಮಮಕಾರ ಕಳೆದುಕೊಳ್ಳುತ್ತ
ನಡೆಯುವುದು ಕಾಲನ ಕೋಲು
ಬೀಸುವ ಗಳಿಗೆ ಹತ್ತಿರವಾದಂತೆಲ್ಲ.
ಶರಣಾಗುತ್ತ ಸಾಗುವುದು ಜೀವನದ ಗಾಥೆ
ಕುಳಿತು ಧ್ಯಾನದಲಿ ತನ್ನತನದ ವಿಮರ್ಶೆ
ಸರಿತಪ್ಪುಗಳ ಪರಿವೀಕ್ಷಣೆ
ಅರಿವಾಗುವುದು ಮಾಡಿದ ತಪ್ಪಿಗೆ
ಪ್ರಾಯಶ್ಚಿತವೊಂದೇ ದಾರಿ.
ಮನುಜಾ
ನೀನು ಮಾಡಿದ ಪಾಪ ಕರ್ಮಗಳಿಗೆ
ನೀನೆ ಹೊಣೆ
ಜೊತೆಗಿರುವವರಾರೂ ಆಗುವುದಿಲ್ಲ
ಇದು ಸತ್ಯ.
ಜೊತು ಬಿದ್ದ ಆಗು ಹೋಗುಗಳ ಹಿಡಿಗಂಟು
ಮುಖವಾಡದ ಬದುಕಿನ ನಿರಾಸಕ್ತಿ
ಒಂಟಿತನ ಬೆಂಬತ್ತಿ
ನಿರ್ಜನ ನಿರವ ಮೌನದಲಿ ಸಾಗುವುದು
ದಿಕ್ ದಿಗಂತದ ಕಡೆಗೆ
ಇಳಿ ಸಂಜೆಯ ಪಯಣ!
- ಗೀತಾ ಜಿ ಹೆಗಡೆ ಕಲ್ಮನೆ
