ಇಳಿಸಂಜೆ (ಭಾಗ-೨)

ನನ್ನ ಕಿರಿಮಗ, ಪೊಲೀಸ್‌ ಟ್ರೈನಿಂಗ್‌ ಹೋದಾಗ ಗುಲ್ಬರ್ಗದಿಂದ ತಂದಿದ್ದ ಸ್ವೇಟರ್ ಎಷ್ಟೋ ವರ್ಷಗಳಿಂದ ನಾನು ಅದನ್ನೇ ಹಾಕ್ತಿದ್ದೆ. ಅದು ಹಾಕೊಂಡರೆ ನನ್ನ ಮಗ ನನ್ನೊಂದಿಗಿದ್ದ ಹಾಗನಿಸುತ್ತೆ ಅಂದರು. ಮುಂದೇನಾಯಿತು, ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಹೊಸ ಅಂಕಣ ‘ಇಳಿಸಂಜೆ’ ಅಂಕಣದಲ್ಲಿ ‘ಆ ಸ್ವೆಟರಿನಲ್ಲೇನುಂಟು ಅಜ್ಜಿ?’ ತಪ್ಪದೆ ಮುಂದೆ ಓದಿ…

ಅತ್ತೆ ಇಂದೇಕೋ ಒಂದು ರೀತಿ ಮೌನಕ್ಕೆ ಶರಣಾಗಿದ್ದರು. ಬೆಳಗ್ಗೆ ಮಗ ಕಾಫಿ ಕೊಟ್ಟಾಗಿಂದಲೂ ಏನೋ ಗೊಣಗಾಟ. ಅವರು ಏನು ಕೇಳಿದರೂ ಎದ್ವಾತದ್ವಾ ಉತ್ತರಿಸಿ ಸಿಡಿಮಿಡಿಗೊಳ್ತಿದ್ದರು. ಇವರು ಏನಾಯಿತಮ್ಮ ಬೆಳಗ್ಗೆಯಿಂದಲೂ ನೋಡ್ತಾ ಇದ್ದೇನೆ. ಸಿಟ್ಟು ಮಾಡುವುದು, ಕಸುರುವುದು ಮಾಡ್ತಿರುವೆ. ನಿನ್ನ ಸಮಸ್ಯೆ ಏನು ಹೇಳು ಅಂದರು. ಊಹು… ಏನೂ ಹೇಳದೆ ಸುಮ್ಮನೆ ರಗ್ಗೊದ್ದು ಮಲಗಿಬಿಟ್ಟರು. ಅವರು ಆಫೀಸಿಗೆ ಹೊರಟಾದ ಮೇಲೆ ನಾನೆದ್ದು ತಿಂಡಿ ಕೊಡುವಾಗಲೂ, ಏನು ತಿಂಡಿ ಅಂದಾಗ ದೋಸೆ ಅಂದೆ, ನಂಗೆ ಬೇಡಾ ಅಂದರು. ನಾನೂ ಏಕೆ ಬೇಡ ಅಂದೆ. ಹಸಿವಿಲ್ಲ ಅಂದರು. ಹಸಿವೇಕಿಲ್ಲಾ, ದಿನವೂ ಇದು ನೀವು ತಿಂಡಿ ತಿನ್ನುವ ಸಮಯವೇ ಅಲ್ಲವಾ ಅಂದೆ.

ಆಗಲೂ ಗೊಣಗುತ್ತಲೇ ಮಲಗಿದರು. ಅವರಿಗೆ ಮಾರಿ ಬಿಸ್ಕತ್‌ ಇಷ್ಟ. ಹೋಗಲಿ ಕಾಫಿ ಮಾಡಿ ಬಿಸ್ಕತ್‌ ಕೊಡಲೇನು ಅಂದೆ. ಬಿಸ್ಕತ್ತು ಬೇಡ, ಮತ್ತೊಂದು ಬೇಡ ಅಂತ ಮಲಗಿದ್ದಲ್ಲಿಂದಲೇ ಗೊಣಗೊಣ ಶುರುವಿಟ್ಟುಕೊಂಡರು. ನಾನು ಸುಮ್ಮನಾಗಿ ಬೇಗ ಮುದ್ದೆ ಮಾಡಿಕೊಡೋಣ, ಅದಾದರೆ ತಿಂತಾರಂತ ಸುಮ್ಮನಾದೆ. ಅಷ್ಟರಲ್ಲಿ ನನ್ನ ಸಹಾಯಕಿ ಜ್ಯೋತಿ ಬಂದಳು. ದಿನ ಅವಳನ್ನೂ ಚೆಂದ ಮಾತಾಡೋರು ಸುಮ್ಮನೆ ಮಲಗಿದ್ದು ಕಂಡು, ಯಾಕಜ್ಜಿ ಮಲಗೇ ಇದ್ದೀರಿ ಅಂದಳು. ಸುಮ್ಮನೆ ಅಂತ ಮಗ್ಗುಲು ಬದಲಿಸಿದರು. ಅವಳಿಗೆ ಬೆನ್ನು ಹಾಕಿ ತುಂಬಾ ನಡುಗುವ ನಾಟಕವಾಡಿದರು.

ಅವಳು ಏಕೆ ಈ ಸ್ವೆಟರ್‌ ಬಿಚ್ಚಿ ಪಕ್ಕದಲ್ಲಿಟ್ಟುಕೊಂಡು ಹಾಗೆ ನಡಗ್ತೀರಾ, ಅದನ್ನು ಹಾಕೋಬಹುದಲ್ಲ ಅಂದಳು. ಅಷ್ಟರಲ್ಲಿ ನಾನು ಕಾಫಿ ಮಾಡಿ ಅವಳಿಗೂ ಕೊಟ್ಟು ಅತ್ತೆಗೂ ಬಿಸ್ಕತ್ತಿನೊಂದಿಗೆ ತೆಗೆದುಕೊಂಡು ಹೋದೆ.

ಫೋಟೋ ಕೃಪೆ : ಅಂತರ್ಜಾಲ

ಆ ಸ್ವೆಟರ್‌ ನನಗೆ ಬೇಡ, ಅದು ದಪ್ಪವಿದೆ. ನನ್ನದು ಇನ್ನೊಂದು ಕೆಂಪು ಬಣ್ಣದಿದೆ. ಅದಾದರೆ ನನಗೆ ತೆಳ್ಳಗಿರುತ್ತೆ, ಚೆನ್ನಾಗಿರುತ್ತೆ ಅಂತಿದ್ದರು. ನಾನು ಬಾಗಿಲಲ್ಲೇ ಸುಮ್ಮನೆ ನಿಂತಿದ್ದೇ.
ಅದೆಲ್ಲಿಟ್ಟೆ ನಿನಗೇನಾದರೂ ನೆನಪಿದೆಯಾ ಕೇಳಿದರು. ಚಳಿ ಜಾಸ್ತಿ ಇದೆ, ನಿನಗೆ ಬೆಚ್ಚಗಿರಲೀ ಅಂತ ತಾನೆ ಅಕ್ಕ ಇದನ್ನೆತ್ತಿಕೊಟ್ಟಿದ್ದು ಅಂದಳು ಜ್ಯೋತಿ. ಇಲ್ಲ, ನನಗೆ ಆ ಸ್ವೆಟರ್‌ ಬೇಕೆಂದರು.

ಆ ಸ್ವೆಟರ್‌ನಲ್ಲೇನಿಟ್ಟುರುವೆ, ಅಂತದ್ದೇನಿದೆ ಅದರಲ್ಲಿ ಅಂದಳು ಜ್ಯೋತಿ ನಗಾಡುತ್ತ, ಅವರ ಕಬೋರ್ಡಲ್ಲಿ ಸ್ವೆಟರ್‌ ಹುಡುಕುತ್ತಲೇ. ಅದು ನನ್ನ ಕಿರಿಮಗ, ಪೊಲೀಸ್‌ ಟ್ರೈನಿಂಗ್‌ ಹೋದಾಗ ಗುಲ್ಬರ್ಗದಿಂದ ತಂದಿದ್ದ. ಎಷ್ಟೋ ವರ್ಷಗಳಿಂದ ನಾನು ಅದನ್ನೇ ಹಾಕ್ತಿದ್ದೆ. ಅದು ಹಾಕೊಂಡರೆ ನನ್ನ ಮಗ ನನ್ನೊಂದಿಗಿದ್ದ ಹಾಗನಿಸುತ್ತೆ ಅಂದರು. ಅವಳು ಸುಮ್ಮನಿರದೆ, ನಾನು ನಿಮ್ಮನೆಗೆ ಬಂದು 2 ವರ್ಷಗಳಾಯಿತು. ಆ ನಿಮ್ಮ ಮುದ್ದು ಕಿರಿಮಗ ಒಂದು ದಿನಕ್ಕಾದರೂ ಬಂದು ನಿಮ್ಮನ್ನು ಕಾಣಲೇ ಇಲ್ಲ. ಬೆಳಗಾದರೆ, ಹಿರಿಮಗಸೊಸೆ ನಿಮ್ಮ ಬೇಕು ಬೇಡಗಳನ್ನು ನೋಡೋರು ಅಂದಳು.

ಅವರು ನೋಡಲ್ಲಾಂತಲ್ಲ. ಅವನಂತು ಬಂದು ನೋಡಲ್ಲಾ, ಅವನು ತಂದುಕೊಟ್ಟ ಬಟ್ಟೆ ಆದರೂ ಮೈಮೇಲಿದ್ದರೆ, ಅವನೂ ನನ್ನೊಟ್ಟಿಗಿದ್ದಾನೆಂಬ ಅಲ್ಪ ತೃಪ್ತಿ ಜ್ಯೋತಮ್ಮಾ ಅಂದರು.
ನನ್ನ ಕಣ್ಣಿಂದ ಎರಡು ಹನಿ ಕೆನ್ನೆ ಮೇಲೆ ಜಾರಿತು. ಕಾಫಿ, ಬಿಸ್ಕತ್ತು ಜ್ಯೋತಿ ಕೈಗಿತ್ತು, ಅವರಿಗೆ ಕೊಡಕ್ಕೇಳಿ ನಾನು ಅಡುಗೆ ಮನೆಯತ್ತ ಹೊರಟೆ. ಬೇಗ ಬೇಗ ಅಡುಗೆ ಮಾಡಿದೆ. ಯಾಕೋ ಮನಸಿಗೆ ತುಂಬಾ ನೋವಾಗ್ತಿತ್ತು. ರೂಮಲ್ಲಿ ಏನೋ ತೆಗೆದುಕೊಳ್ಳಲು ಹೊರಟದ್ದು ಅವರ ಗಮನಕ್ಕೆ ಬಂದು, ಅಡುಗೆಯಾಗಿದೆಯಾ ಅಂದರು. ಏಕೆ, ನಿಮಗೆ ಹಸಿವಿಲ್ಲವಲ್ಲಾ, ಬೆಳಗ್ಗೆಯಿಂದ ಏನು ತಿನ್ನದೆ, ದಿನವೆಲ್ಲಾ ಉಪವಾಸ ಮಾಡ್ತಿದ್ದೀರಲ್ಲವಾ ಅಂದೆ.

ಅಷ್ಟರಲ್ಲಿ ಆ ಸ್ವೆಟರ್‌ ಹಾಕಿದ್ದ ಕೈ ನೀವಿಕೊಳ್ತಿದ್ದರು. ಕಣ್ಕಾಲ್ಲವಲ್ಲ, ನಾನಲ್ಲಿರುವುದು ಅವರಿಗೆ ಗೊತ್ತಾಗಲಿಲ್ಲ. ಆ ಕಾಣಲು ಬರದ ಮಗನ ಮೇಲೆ ಏಕಿಷ್ಟು ವ್ಯಾಮೋಹ. ಕಣ್ಣೆದುರಿಗೆ ಹೆಣ್ಮಗಳಂತೆ ಅಮ್ಮನ ಆರೈಕೆ ಮಾಡುವ ಹಿರಿಮಗನ ಮೇಲಿಲ್ಲದ ಪ್ರೀತಿ, ಕಾಣದ ಮಕ್ಕಳ ಮೇಲೆ ಚಿಂತೆ. ಐವರು ಮಕ್ಕಳು ಹೆತ್ತ ಮಹಾತಾಯಿ. ಹೇಳಿಕೊಳ್ಳಲು 12 ಮೊಮ್ಮಕ್ಕಳು. ಅವೆಲ್ಲಾ ಹೆತ್ತಮ್ಮಗಳಿಗಿಂತ ಅಜ್ಜಿ ಒಡಲಲ್ಲಿಟ್ಟುಕೊಂಡೆ ಸಾಕಿ ಸಲುಹಿದ್ದು. ಆ ಜೀವವೀಗ ಹಾಸಿಗೆ ಹಿಡಿದಿದೆ. ಬಾರದ ಮಕ್ಕಳಿಗಾಗಿ ದಿನವೋ ಜಾತಕಪಕ್ಷಿಯಂತೆ ಕಾಯುವ ಅವರ ಮನದಲ್ಲಿ ಹೇಳಿಕೊಳ್ಳಲಾಗದ ಸಂಕಟ.

ನನ್ನ ಮನಸ್ಸಿಗೇಕೋ ಕೇಳಬೇಕೆನಿಸಿದ್ದು, ಕೇಳದೆ ಇರಲಾಗದು, ನಾನು ಹಾಗೆ ನೇರಾನೇರ. ಅವರಿಗೆ ಉಣಿಸಿದ ಮೇಲೆ, ಅಲ್ಲಾ ನೀವಿಲ್ಲಿ ಬಂದು 5 ವರ್ಷಗಳಾಗ್ತಿದೆ. ಯಾವೊಬ್ಬರಾದರೂ ಬಂದು ನಿನ್ನ ಪ್ರೀತಿಯಿಂದ ನಾಲ್ಕು ಮಾತಾಡಿ ಹೋಗುವರಾ. ನಿನಗಾಗಿ ಬಾರದವರಿಗಾಗಿ ನೀನ್ಯಾಕೆ ಕೊರಗುವೆ ಎಂದೆ. ಹೆತ್ತ ಕರುಳಲ್ಲವೇ, ನನಗೆ ಮಕ್ಕಳೆಲ್ಲಾ ಒಂದೆ ಅಂತ ಕಣ್ತುಂಬಿಕೊಂಡರು.

ಫೋಟೋ ಕೃಪೆ : ಅಂತರ್ಜಾಲ

ಆಗ ನನಗನಿಸಿದ್ದು, ಒಮ್ಮೆ ಎಲ್ಲರನ್ನು ಕರೆದು ನಾಲ್ಕು ಬಾರಿಸಿ ಕಳಿಸಬೇಕೆಂದು. ಆದರೂ ನಾವು ಬೈದೋ, ಹೊಡೆದೋ ಪ್ರೀತಿ ಬರಿಸುವಂತದ್ದಲ್ಲಾ. ಅದು ಅವರವರ ಮನದಲ್ಲಿ ಹುಟ್ಟಬೇಕು. ಅವರಿಗೆ ಅಮ್ಮ, ಅಜ್ಜಿ ಎಂಬ ಪ್ರೀತಿಯಿರಬೇಕು. ಅವರಾಕಿದ ಕೈತುತ್ತಿನ ಅರಿವಿರಬೇಕು. ಅವರು ಮೀಯಿಸಿದ ನೆನಪಿರಬೇಕು. ಅವರ ಸೆರಗಿನಾಸರೆಯಲ್ಲಿ ನಿದ್ರಿಸಿ ಮಮಕಾರವಿರಬೇಕು ಅಂತ ನಾನು ನನ್ನ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಹೊರಟುಬಿಟ್ಟೆ. ಹೋಗುತ್ತಲೂ ನನಗೆ ಅವರ ಮನದಲ್ಲಿ ವೇದನೆ ಕಾಡ್ತಿತ್ತು.

ಇಂಥ ಮಕ್ಕಳನ್ನೇನಾ 9 ತಿಂಗಳು ಹೊತ್ತು, ಹೆತ್ತು, ಸಾಕಿ ಸಲಹಿದ್ದು. ಅದು ಪೋಷಕರ ಕರ್ತವ್ಯ ಅಂತಲೂ ಇಟ್ಟುಕೊಳ್ಳೋಣ. ಆದರೆ, ಹೆತ್ತವರಿಗೆ ವಯಸಾದ ಮೇಲೆ ಅವರು ಗಂಡು ಮಕ್ಕಳ ಹೊಣೆ ಎಂಬ ಸಾಮಾಜಿಕ ಕಾನೂನನ್ನೂ ಪರಿಗಣಿಸೋಣ. ಆದರೆ, ವೃದ್ಧ ಮನದಲ್ಲಾಗುವ ಭಾವನಾತ್ಮಕ ತುಡಿತಗಳು ಈ ಮಕ್ಕಳಿಗೇಕೆ ಅರ್ಥವಾಗಲ್ಲ ಎಂಬ ನನ್ನ ಚಿಂತೆಗೆ ಉತ್ತರವೇ ಸಿಗುತ್ತಿಲ್ಲ. ನಿಮ್ಮ ಸಹೋದರರ ನಡುವೆ ಏನೇ ವಿಬೇಧಗಳಿದ್ದರೂ ಹೆತ್ತವರನ್ನು ಯಾರಾದರೂ ಒಬ್ಬರು ಜವಾಬ್ದಾರಿಯಿಂದ ನೋಡಿಕೊಳ್ಳುವವರಿಗೆ ಹೆಗಲಾಗಿರಬೇಕಾದುದು ಉಳಿದವರ ಹೊಣೆಗಾರಿಕೆ. ಆದರೆ, ಇಂದಿನ ಸ್ವಾರ್ಥ ದಿನಗಳಲ್ಲಿ ಅವೆಲ್ಲಾ ಹೇಳಲು ಕೇಳಲು ಚೆಂದ. ನಾವು ಹೋಗಿ ನೋಡಿದರೆ, ಎಲ್ಲಿ ನಮ್ಮ ತಲೆಗೆ ಬರುವಳೋ ಅಪ್ಪಮ್ಮನೆಂದು ನುಣುಚಿಕೊಳ್ಳುವಿಕೆ ಇದೆಯಲ್ಲಾ ಅದರಂತಹ ಅಮಾನವೀಯ ಆಲೋಚನೆಯಷ್ಟು ಕೀಳು ಮಟ್ಟದ್ದು ಮತ್ತೊಂದಿರುವುದಿಲ್ಲ.

ಅವರಿಗಷ್ಟೇ ವಯಸ್ಸಾಗಿಲ್ಲ, ನಾಳೆ ಆ ದಿನಗಳು ನಮ್ಮನಿಮ್ಮೆಲ್ಲವರಿಗೂ ಬರುತ್ತವೆ ನೆನಪಿರಲಿ. ಪ್ರತಿಯೊಬ್ಬರಲ್ಲೂ ಮಾನವತ್ವ ಇನ್ನೂ ಅಲ್ಪಸ್ವಲ್ಪವಾದರೂ ಉಳಿದಿದ್ದರೆ ಮೊದಲು ಹೋಗಿ ಹೆತ್ತಪ್ಪಮ್ಮನ್ನೊಮ್ಮೆ ಕಂಡು ಪ್ರೀತಿಯಿಂದ ನಾಲ್ಕು ಮಾತಾಡಿರಿ.


  • ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW