ಸಂಧ್ಯಾದಿನಗಳು ಇವೆಯಲ್ಲ ಅವನ್ನು ಕಳೆಯುವುದು ಅಷ್ಟು ಸುಲಭವಲ್ಲ. ನಾ ಕಂಡಂತೆ ಅದೊಂದು ನರಳಿಕೆ. ಸರ್ಕಾರಿ ನೌಕರರಿಗೇನೋ ಪಿಂಚಣಿ ಬರುತ್ತದೆ, ಖಾಸಗಿ ಬದುಕುಗಳ ಪಾಡೇನು? ತುತ್ತಿನ ಚೀಲಕ್ಕೆಂಬ ಚಿಂತೆ. ಹಿರಿಯರ ಒಡಲಾಳದ ನೋವು ಮಕ್ಕಳಿಗೆ ಅರಿಯದು. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ‘ಇಳಿಸಂಜೆ’ ಅಂಕಣದಲ್ಲಿ ‘ವೃದ್ಧಾಶ್ರಮ ಆರಂಭಿಸಬಾರದೇಕೆ?’, ತಪ್ಪದೆ ಮುಂದೆ ಓದಿ…
ಆದರೆ, ಅದು ಅವರಿಗೆ ವೃದ್ಧಾಶ್ರಮ ಅನ್ನಿಸಬಾರದು, ಅದೊಂದು ಕೌಟುಂಬಿಕ ಭಾವನೆ ಮೂಡಿಸಬೇಕು. ನನಗೆ ಆಗಾಗ ಅನಿಸುವುದಿತ್ತು. ಏನಾದರೂ ಮಾಡಬೇಕಲ್ಲಾಂತ, ಏನೇನೋ ಪ್ಲಾನ್ ಮಾಡಿ, ಅದು ಮಾಡಬೇಕು, ಇದು ಮಾಡಬೇಕು ಎಂದೆಲ್ಲಾ ಅಂದುಕೊಂಡು, ಮಾತಾಡಿಕೊಂಡು, ಅವೆಲ್ಲಾ ನೀರಲ್ಲದ್ದಿದ ಹೋಮದಂತೆ ಅಂದಂದಿಗೆ ಕೊಚ್ಚಿ ಹೋದವು. ಆ ಮೇಲೆ ನನ್ನ ಆರೋಗ್ಯವೂ ಕೈಕೊಡುತ್ತಿತ್ತು. ಆಗೆಲ್ಲಾ ಮನದಲ್ಲಿ ಒಂದು ಬೇಗುದಿ, ದುಗುಡ ತುಂಬಿಕೊಂಡು ಅತೀವ ನೋವುಂಟಾಗುತ್ತಿತ್ತು. ಏಕೋ ನಾನೇನೂ ಮಾಡದೆಯೇ ಏನಾದರೂ ಆಗಿಬಿಟ್ಟರೆ ಎಂಬ ತಳಮಳಕ್ಕೆ ಬೆವತುಬಿಡುತ್ತಿದ್ದೆ. ಆಗ ಇಷ್ಟೇನಾ ನಮ್ಮ ಬದುಕು ಅನ್ನಿಸಿ ಮನ ನೋಯುತ್ತಿತ್ತು. ನಾವು ಹುಟ್ಟಿ, ಬದುಕಿ, ಬಾಳಿದ ಭೂಮಿ ಮೇಲೆ ನಮ್ಮಿಂದ ಏನೂ ಮಾಡಲಾಗಲಿಲ್ಲವೇ? ಎಂತಲೂ ಬೇಸರ. ಅದೇ ಮೊದಲಿನ ಪ್ಲಾನುಗಳೆಲ್ಲಾ ಪ್ಲಾಪ್ ಆದ ಮೇಲೊಂದು ಆಲೋಚನೆ ಮನದೊಳಗೆ ಹೊಕ್ಕಿತು. ಅದೇನೆಂದರೆ ನಾನೇಕೆ ಒಂದು ವೃದ್ಧಾಶ್ರಮ ಆರಂಭಿಸಬಾರದು. ನಾಲ್ಕು ಜನ ಮುದಿಯರಿಗೆ ಆಸರೆಯಾಗಬಾರದು ಅನ್ನಿಸಿತು. ಇದು ಬೇರೆಲ್ಲಿಂದಲೋ, ಬೇರ್ಯಾರಿಂದಲೋ ಹುಟ್ಟಿದ್ದಲ್ಲ. ನಮ್ಮನೆಯ ಕೋಣೆಯಲ್ಲಿ ಮಲಗಿರುವ ನಮ್ಮತ್ತೆಯ ಸೇವೆ ಮಾಡ್ತಾಮಾಡ್ತಾ ಹುಟ್ಟಿಕೊಂಡಿದ್ದು. ಅದಕ್ಕೆ ನನ್ನತ್ತೆ, ನನ್ನವರ ಹೆತ್ತಮ್ಮನ ಜೀವ ಹೆಣಗಾಡುವುದು ಕಂಡು ಹುಟ್ಟಿಕೊಂಡ ಬೇರಿನಚಿಗುರು.
ನನ್ನತ್ತೆಗೆ 90+, ಅಮ್ಮನದ್ದು ಇಂಚುಮಿಂಚು 80+ ಇರಬಹುದು. ಇವರಿಬ್ಬರು ಹುಟ್ಟಿ ಬೆಳೆದಿದ್ದೆಲ್ಲಾ ಕುಗ್ರಾಮಗಳಲ್ಲಿ. ಅವರೆಂದೂ ನಾವೊಂದು ದಿನ ಮಹಾನಗರ ಬೆಂಗಳೂರಿನಲ್ಲಿ ಮುಸ್ಸಂಜೆಗಳನ್ನು ಕಳೆವೆವೆಂದು ಕನಿಷ್ಠ ಕನಸೂ ಕೂಡ ಕಂಡಿರಲಿಕ್ಕಿಲ್ಲ. ಅದನ್ನೇ ಹೇಳುವುದನಿಸುತ್ತೆ. ವಿಧಿ, ಹಣೆಬರಹ, ಸಮಯ ಎಂದೆಲ್ಲಾ. ಅವರೀಗ ಮಕ್ಕಳ ಆಸರೆಯಲ್ಲಿ ಬೆಂಗಳೂರಲ್ಲೇ ಕಳೆಯಬೇಕಾದ ಅನಿವಾರ್ಯ. ಬಾಲ್ಯ, ಯವ್ವನ, ವೈವಾಹಿಕ ಜೀವನವೆಲ್ಲವೂ ಹೇಗೋ ಕಳೆದುಬಿಡುತ್ತೆ. ಕಷ್ಟ-ಸುಖ ಹಂಚಿಕೊಂಡು, ಕೂಡಿಕಳೆದು ಬದುಕಿಬಿಡಬಹುದು. ಆದರೆ, ಈ ಸಂಧ್ಯಾದಿನಗಳು ಇವೆಯಲ್ಲ ಅವನ್ನು ಕಳೆಯುವುದು ಅಷ್ಟು ಸುಲಭವಲ್ಲ. ನಾ ಕಂಡಂತೆ ಅದೊಂದು ನರಳಿಕೆ. ನರಕವೆಂದೂ ಹೇಳಬಹುದು. ಅದನ್ನು ನೆಮ್ಮದಿಯಾಗಿ ಕಳೆಯಲು ಮಕ್ಕಳು ಮನಸು ಮಾಡಿದರೆ ಮಾತ್ರ ಸಾಧ್ಯ. ಆಗ ಮಾತ್ರ ಮುಪ್ಪಿನ ಜೀವನ ಸೊಪ್ಪಿನಂತೆ ನಳನಳಿಸುತ್ತದೆ.

ಆದರೆ, ಆ ಮಕ್ಕಳೆಲ್ಲಾ ಬದುಕನ್ನರಸಿ ಎಲ್ಲರೂ ನಗರಪಟ್ಟಣಗಳಲ್ಲಿ ವಲಸಿಗರಾಗಿ ನೆಲಯೂರಿ ಆಗಿದೆ. ಇಲ್ಲಿ ನಮಗೆ ನಾವೇ ಉಸಿರಾಡಲು ಸಮಯವಿಲ್ಲದ ಧಾವಂತ. ಅಂತದ್ದರಲ್ಲಿ ಆ ಹಿರಿ ಜೀವಗಳಿಗೆ ಸಮಯ ಕೊಡುವುದೆಲ್ಲಿ? ಸಾಲದ್ದಕ್ಕೆ ನೂರೆಂಟು ಕಾಯಿಲೆಗಳ ಬವಣೆ. ಕಾಡುವ ಉಪ್ಪು-ಸಕ್ಕರೆಯ ಹಾವಳಿ. ಮಕ್ಕಳ ಚಿಂತೆ, ನಾಳಿನ ಕಂತೆ ಸುತ್ತಿಕೊಂಡು ಉಸಿರುಗಟ್ಟುತ್ತಿದೆ ಬದುಕೆಂಬ ಜಟಕಾಬಂಡಿ. ಅತ್ತ ಮರಳಿ ಗೂಡು ಸೇರೋಣವೆಂದರೂ ಮಕ್ಕಳ ಭವಿಷ್ಯ. ಕಟ್ಟಿಕೊಂಡಿರುವ ಗೂಡು ಬಿಟ್ಟು ಹೋಗುವುದಾದರೂ ಎಲ್ಲಿಗೆ? ಸರ್ಕಾರಿ ನೌಕರರಿಗೋನೋ ಪಿಂಚಣಿ ಬರುತ್ತೆ ಬದುಕಿಯಾರು, ಖಾಸಗಿ ಬದುಕುಗಳ ಪಾಡೇನು ತುತ್ತಿನ ಚೀಲಕ್ಕೆಂಬ ಚಿಂತೆ. ಈ ಸಂಕಷ್ಟಗಳ ನಡುವೆ ಆ ಹಿರಿ ಜೀವಗಳ ಕೊರಗೊಂದು ಕಡೆ ನಮ್ಮೂರಾದರೆ, ನಮ್ಮೂರಲ್ಲಿದ್ದರೆ ಊರಿನ ನೆನಪುಗಳ ಮೆರವಣಿಗೆಯಲ್ಲಿ ಸಾಗುತ್ತಿದೆ.
ಹುಟ್ಟಿ ಬಾಳಿ-ಬದುಕಿದ ಊರಿನತ್ತ ಹೋಗಲಾಗದೆ, ಇಲ್ಲಿಯೂ ಇರಲಾಗದೆ, ಮಕ್ಕಳಿಗೆ ಹೇಳಲಾಗದ ತೊಳಲಾಟ. ಒಮ್ಮೆ ಆ ಹಿರಿಜೀವಗಳ ಮನದಾಳಕ್ಕಿಣಿಕಿ ನೋಡಿ ಮಕ್ಕಳೇ ಎಂದು ಜೋರಾಗಿ ಕೂಗಿ ಹೇಳಬೇಕೆನಿಸುತ್ತೆ. ಆದರೆ, ಬಹುತೇಕ ಮಕ್ಕಳ ಮನಸು ಸ್ವಾರ್ಥದ ತೆಕ್ಕೆಯಲ್ಲಿ ಬಿದ್ದು ಮುದುಡಿಕೊಂಡಿದೆ. ಅವರಿಗೆ ಹಿರಿಯರ ಮನದಾಳದ ಕೊರಗೆಲ್ಲಿ ಕೇಳುತ್ತೆ. ಅವರಿಗೆ ಅವರವರದೇ ಕಾರಣಗಳಿವೆ. ಹಿರಿಯರ ಒಡಲಾಳದ ನೋವು ಅರಿಯದು. ನೋವಿನಾಳದಲ್ಲೂ ಹಿರಿಯರ ಮನದಲ್ಲಿ ಎಷ್ಟು ಮೊಗೆದರೂ ಮಕ್ಕಳ ಮೇಲಿನ ಪ್ರೀತಿ ಬತ್ತಲಾರದು. ಅದು ಮಾತ್ರ ಮಕ್ಕಳಿಗೆ ಅರ್ಥವಾಗದು.
ಹೀಗೆ ಮೊನ್ನೆಮೊನ್ನೆ ಮಧ್ಯಾಹ್ನದ ಊಟಕ್ಕೆಂದು ನಮ್ಮತ್ತೆಗೆಬ್ಬಿಸಲು ಕೋಣೆಯತ್ತ ನಡೆದೆ. ಹೇ ಭಗವಂತ ನಿನಗ್ಯಾಕಿನ್ನು ನನ್ನ ಮೇಲೆ ಮೋಹ ತೀರಲಿಲ್ಲವೇ, ನನ್ನ ಇನ್ನೆಷ್ಟು ಕಾಡುವೆ. ಬೇಗ ಕರೆದುಕೊಳ್ಳಬಾರದೆ ನಿನ್ನ ಬಳಿಗೆ. ನನಗೀ ನೋವು, ಸಂಕಟ, ನರಳುವಿಕೆ ಎಷ್ಟಂತ ಸಹಿಸಲೀ.
ಹೀಗೆ ಅವರಾಗಿಯೇ ಮಾತಾಡಿಕೊಂಡು ಊಟಕ್ಕೆದ್ದರು. ಈ ವೇಳೆ ಅವರನ್ನು ಯಾವ ರೀತಿ ಸಮಾಧಾನಿಸಬೇಕೆಂದೇ ತಿಳಿಯದೆ ನನಗೂ ನೋವು ಬಿಟ್ಟರೆ ಬೇರೇನೂ ಗೊತ್ತಾಗಲಿಲ್ಲ. ನನ್ನದೂ ಆಫೀಸಿಗೆ ಹೊರಡುವ ಅವಸರ. ಸಮಯಕ್ಕೆ ಅವರಿಗೆ ಊಟ, ಗುಳಿಗೆ, ಮದ್ದು, ನೀರು, ಅವರ ಅಗತ್ಯಗಳೆಲ್ಲಾ ಪೂರೈಸಿ ಹೊರಡುವ ಆತುರ. ಅವೆಲ್ಲಾ ಮುಗಿಸಿದ ಬಳಿಕ ಆಫೀಸಿಗೆ ಹೋಗುವ ದಾರಿಯುದ್ದಕ್ಕೂ ಈ ವೃದ್ಧರ ಆಲೋಚನೆಗಳೇ ಆಲೋಚನೆಗಳು. ಎಷ್ಟು ಜನ ವೃದ್ದರು ಹೀಗೆ ನರಳ್ತಿರಬಹುದೂಂತ.
ಹಿಂದಿನ ಸಂಚಿಕೆಗಳು :
- ಇಳಿಸಂಜೆ ‘ಇಳಿಸಂಜೇಲೊಂದು ಮುಂಜಾವು’ – (ಭಾಗ-೧)
- ಇಳಿಸಂಜೆ ‘ಆ ಸ್ವೆಟರಿನಲ್ಲೇನುಂಟು ಅಜ್ಜಿ?’ (ಭಾಗ-೨)
- ಇಳಿಸಂಜೆ ‘ಹಿರಿಯರನ್ನು ಗಮನಿಸಿಕೊಳ್ಳುವುದು ಹೇಗೆ?’ (ಭಾಗ-೩)
- ಇಳಿಸಂಜೆ ‘ಸಮಸ್ಯೆಯಿರಲಿ, ಖಿನ್ನತೆಯಿರಲಿ, ಸಾವು ಪರಿಹಾರವೇ ಅಲ್ಲ’ (ಭಾಗ-೪)
- ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.
