ಇಳಿಸಂಜೆ (ಭಾಗ-೬)

ಮಕ್ಕಳೇ ಸರ್ವಸ್ವವೆಂದುಕೊಂಡಿದ್ದ ಆ ತಾಯಿಯನ್ನು ನೋಡಲು ಮಕ್ಕಳು ಬರಲೇ ಇಲ್ಲ…ತಾಯಿಯ ಬೆಚ್ಚಗಿನ ಆ ಅಪ್ಪುಗೆ ಮಕ್ಕಳು ಮರೆತರೇ?.. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ‘ಇಳಿಸಂಜೆ’ ಅಂಕಣದಲ್ಲಿ ‘ಮಕ್ಕಳ ಮೇಲೆ ಅತೀವ ಪ್ರೀತಿ ’, ತಪ್ಪದೆ ಮುಂದೆ ಓದಿ… 

ನಾವು ತಮಿಳುನಾಡಲ್ಲಿದ್ದಾಗ ನಮ್ಮತ್ತೆ ನಾವಿದ್ದ ಕನ್ಯಾಕುಮಾರಿ ಸಮೀಪದ ಕುರುವೀಕುಲಂಗೆ ಬಂದಿದ್ದರು. ಆಗ ನನ್ನ ಮಗಳಿನ್ನು ಚಿಕ್ಕವಳು. ಸ್ವಲ್ಪ ದಿನ ಅಲ್ಲಿದ್ದರು. ಅವರು ಮತ್ತೆ ಊರಿಗೆ ಬರಬೇಕೆಂದರೆ ಅವರನ್ನು ಯಾರಾದರೂ ಕರೆತರಬೇಕು. ಹಾಗಾಗಿ ಅವರ ಮಗಳು-ಅಳಿಯ ಬರುವುದಾಗಿ ತಿಳಿಸಿದ್ದರು. ಅವರಿಗಾಗಿ ಎದುರು ನೋಡುತ್ತಿದ್ದಿವಿ. ಅವರಿಗೆ ಭಾಷೆ ಬಾರದ ನಾಡಲ್ಲಿರಲು ಏನೋ ಕಸಿವಿಸಿ. ಅವರ ಮಕ್ಕಳು, ಮೊಮ್ಮಕ್ಕಳ ಬಿಟ್ಟು ದೂರದ ಊರಲ್ಲಿರಲು ಅವರ ಮನ ಒಪ್ಪಿರಲಿಲ್ಲ. ಮಗಳು-ಅಳಿಯ ಬರುವರು, ಇನ್ನೇನು ನಾನು ಹೊರಡಬಹುದೆಂಬ ಉತ್ಸಾಹದಲ್ಲಿದ್ದ ಅವರಿಗೆ, ಅಂದು ಅವರು ಬರಲಿಲ್ಲ. ಏನೋ ಕಾರಣಾಂತರಗಳಿಂದ ಅವರು ಬರುವುದು ಪೋಸ್ಟ್‌ ಪೋನಾಯಿತು.

ಆದರೆ, ಇವರ ತಲೆಯಲ್ಲಿ ಏನೇನೋ ಚಿಂತೆಗಳು ಹೊಕ್ಕಿ ಕುಳಿತಿತು. ಅವರು ಬರುವಾಗ ದಾರಿಯ ಮಧ್ಯೆ ಅಪಘಾತ ಅಥವಾ ಮತ್ತೇನಾದರೂ ಸಂಭವಿಸಿತೋ, ಅದಕ್ಕೆ ಅವರು ಬರಲಿಲ್ಲವೇನೋ, ಅವರಿಗೇನಾಯಿತೋ ಏನೋ ಅಂತ ತುಂಬಾ ತಲೆಗಚ್ಚಿಕೊಂಡವರು. ರಾತ್ರಿ ನಿದ್ರೆ ಮಾಡುವುದು ಬಿಟ್ಟು ಎದ್ದು ಕುಳಿತು ಯೋಚನೆಗೆ ಬಿದ್ದಿದ್ದರು. ನನಗೋ ಸಿಟ್ಟು ನೆತ್ತಿಗೇರಿತ್ತು. ಏನೋ ಅನಿವಾರ್ಯ ಕೆಲಸದ ಒತ್ತಡಗಳಿಂದ ಬರಲಾಗದಿರಬಹುದು. ಹಾಗೆಂದು ಊಟ, ನಿದ್ದೆ ಬಿಟ್ಟು ಯೋಚನೆ ಮಾಡಿ ಕುಳಿತುಕೊಳ್ತಾರಾ ಅಂತ. ನನ್ನ ಅತ್ತೆ ಮನೆಯ ಸಂಸ್ಕೃತಿ, ವಾತಾವರಣ, ಮಕ್ಕಳ ಬೆಳೆಸುವಿಕೆಗೂ, ನಾನು ನಮ್ಮನೆಯಲ್ಲಿ ಬೆಳೆದ ರೀತಿಗೂ ತುಂಬಾನೆ ವ್ಯತ್ಯಾಸವಿತ್ತು. ನಮ್ಮನೆಯಲ್ಲಿ ನಾವು ಯಾವುದೇ ವಿಷಯವಾಗಲಿ, ವಸ್ತುವಾಗಲಿ, ಮತ್ತೊಂದಾಗಲಿ ಹಠ ಮಾಡುವಂತೆಯೇ ಇಲ್ಲ. ಅದು ನಮ್ಮನೆಯಲ್ಲಿ ಮಕ್ಕಳಿಗೆ ಗೊತ್ತೇ ಇಲ್ಲ. ಈ ಮನೆಯಲ್ಲಿ ಅದು ತದ್ವಿರುದ್ದ, ನನ್ನತ್ತೆಯ ಮೊಮ್ಮಕ್ಕಳು ಸಣ್ಣಸಣ್ಣ ವಿಷಯಗಳಿಗೂ ಊಟ ಬಿಟ್ಟು ಹಠ ಮಾಡುವರು. ಆಗ ನಮ್ಮನೆಯಲ್ಲಿ ಆದರೆ, ಹಸಿವಾದರೆ ಅವರೇ ತಿಂತಾರೆಂದು ಬಿಟ್ಟುಬಿಡುವರು. ಆದರೆ, ನಮ್ಮತ್ತೆ ಹಾಗಲ್ಲ, ಪದೇಪದೇ ಮಕ್ಕಳನ್ನು ಊಟ ತಿನ್ನಲು ಗೋಗರೆಯುವರು. ಅವರು ಮಲಗಿದರೂ ಬಿಡ್ತಿರಲಿಲ್ಲ. ಅವರ ತಲೆಯ ಬಳಿ ಊಟದ ತಟ್ಟೆಯಿಟ್ಟು ಮತ್ತೆಮತ್ತೆ ಮಕ್ಕಳನ್ನು ಕೇಳಿಕೊಳ್ಳುವರು. ಅವರು ರೇಗಿದರೂ ಬಿಡ್ತಿರಲಿಲ್ಲ. ಕೊನೆಗೆ ತಿನ್ನಿಸಿಯೇ ಮಲಗಿಸುವರು. ಈ ಪರಿಪಾಠ ನನ್ನಲ್ಲಿ ಬಾರಿ ಸಿಟ್ಟು ಬರಿಸುತ್ತಿತ್ತು.

ಫೋಟೋ ಕೃಪೆ : ಗೂಗಲ್

ಅಷ್ಟೇ ಅಲ್ಲ, ಮಕ್ಕಳು ಏನೇ ತಪ್ಪು ಮಾಡಿದರೂ, ಅವರನ್ನು ಹೊಡೆಯುವುದಿರಲಿ, ದಂಡಿಸುವುದು ಮಹಾ ಅಪರಾಧವೆಂಬಂತೆ ಸಿಡುಕುವರು. ಹೀಗೂ ಮಕ್ಕಳನ್ನ ಬೆಳೆಸ್ತಾರಾಂತ ನನಗನಿಸುತ್ತಿತ್ತು. ಮಕ್ಕಳು ಸ್ನೇಹಿತರು ಹೊಡೆದರೆಂದೋ, ಜಗಳವಾಡಿದರೆಂದೋ ಕೂಡಲೇ ಅವರ ಮೇಲೆ ಜಗಳಕ್ಕೆ ನಿಲ್ಲುವರು. ನಾವು ಹಾಗಲ್ಲ, ಹೊರಗಿನವರು ನಮ್ಮನ್ನು ಹೊಡೆದರೂ ನಾವು ಮನೆಯಲ್ಲಿ ಹೇಳಲು ಹೆದರಿತಿದ್ವಿ. ಕಾರಣ ನಿಮ್ಮದೇನು ತಪ್ಪಲ್ಲದೆ ಅವರೇಕೆ ಹೊಡೀತಾರೆ ಎಂಬ ಪ್ರಶ್ನೆ ನಮಗೆ ತಿರುಗುತ್ತಿತ್ತು. ಹಾಗಾಗಿ ನಮ್ಮ ತಪ್ಪಿಲ್ಲದಿದ್ದರೂ ನಾವು ಮನೆಯಲ್ಲಿ ಹೇಳ್ತಿರಲಿಲ್ಲ. ಮಕ್ಕಳೆಂದರೆ ಹಾಗೆ ಕಿತ್ತಾಟಗಳು ಇರುತ್ತವೆ. ಮತ್ತೆ ಸರಿ ಹೋಗ್ತೀರಿ. ಹಾಗೆಲ್ಲಾ ಮನೆಯಲ್ಲಿ ಚಾಡಿ ಹೇಳಬಾರದೆಂಬ ನಿಯಮ ನಮಗೆ ವಿಧಿಸಲಾಗಿತ್ತು. ಅದನ್ನು ನಾನೆಷ್ಟೋ ಬಾರಿ ನಮ್ಮತ್ತೆಗೂ, ಆ ಮನೆಯ ಮಕ್ಕಳಿಗೂ ಹೇಳಿ ಸೋತೆ.

ಅಯ್ಯೋ ವಿಷಯ ಬೇರೇಡೆ ತಿರುಗಿಬಿಡ್ತು. ಏನೇಳ್ತಿದ್ದೆ?… ನಮ್ಮತ್ತೆ ಮಗಳು-ಅಳಿಯ ಬರಲಿಲ್ಲವೆಂದು ನಿದ್ರಾಹಾರ ಬಿಟ್ಟು ಯೋಚನಾ ತಪಸ್ಸಿಗೆ ಕುಳಿತರಾ, ನಮ್ಮನೆಯವರು ಅವರಿಗೇನೂ ಆಗಿರಲ್ಲಾ ಸುಮ್ಮನೆ ಊಟ ಮಾಡಿ ಮಲಗಮ್ಮ ಅಂತ ಎಷ್ಟೇ ಹೇಳಿದರೂ ಕೇಳದೆ, ಮಾರನೇ ದಿನಕ್ಕೆ ನೀನೇ ಬಂದು ನನ್ನ ಬಿಟ್ಟು ಬಂದು ಬರುವಿಯಂತೆ ಬಾ ಅಂತ ಪಟ್ಟುಹಿಡಿದರು. ಇವರಿಗೋ ಇತ್ತ ಬಾಣಂತಿ ಹೆಂಡ್ತಿ, ಸಣ್ಣ ಮಗುವನ್ನು ಬಿಟ್ಟು ನಾನೇಗೆ ಬರಲಿ ಅಂದರೂ ಅವರು ಅರ್ಥ ಮಾಡಿಕೊಳ್ಳದೆ, ನಿನ್ನಿಷ್ಟ ನೀ ಏನಾರು ಮಾಡಿಕೋ ನಂಗೊತ್ತಿಲ್ಲ. ನನ್ನ ಮಗಳು-ಅಳಿಯನಿಗೆ ಏನಾಯಿತೋ ಅಂತ ಮಗನ ಮೇಲೆ ಜಗಳಕ್ಕಿಳಿದರು. ಅದು ಎಲ್ಲಿಯವರೆಗೂ ಅಂದರೆ ನಿನಗೆ ನಿನ್ನ ಹೆಂಡ್ತೀ ಮಗಳೇ ಹೆಚ್ಚಾಯಿತಲ್ಲ. ಹಾಗೆಯೇ ನನಗೂ ನನ್ನ ಮಗಳಿಗೇನಾಯಿತೋ ಅಂತ ಇರಲ್ಲವಾ ಅನ್ನುವ ಮಟ್ಟಕ್ಕೆ ಬಂದರು. ಆಗ ನಾನೇ ಆ ಡ್ರಾಮಾ ಎಲ್ಲಾ ನನಗೆ ನೋಡಿಕೊಂಡಿರಲಾಗದೆ, ನನಗೇನು ಭಯವಿಲ್ಲ ನಾನು ಮ್ಯಾನೇಜ್‌ ಮಾಡಿಕೊಳ್ಳುವೆ ನೀವು ಹೋಗಿ ಅವರನ್ನು ಬಿಟ್ಟು ಬಂದುಬಿಡಿ ಎಂದು ಬಲವಂತ ಮಾಡಿ ಕಳಿಸಿಬಿಟ್ಟೆ. ಆ ಮಟ್ಟಕ್ಕೆ ಅವರಿಗೆ ಅವರ ಮಕ್ಕಳ ಮೇಲಿನ ಅತೀವ ಪ್ರೀತಿ, ಕಾಳಜಿ ಇತ್ತು. ಮನೆಗೆ ಹೋಗಿ ಮಗಳನ್ನು ಕಂಡ ಮೇಲೆ ಅವರು ನೆಮ್ಮದಿಯಾಗಿ ಊಟ, ತಿಂಡಿ, ನಿದ್ದೆ ಮಾಡಿದರೆಂದು ಹೇಳಿದಾಗ, ನನಗಂತು ಇಂತ ಜನರೂ ಇರ್ತಾರಾ ಎನಿಸಿತ್ತು.

ಹೀಗೆ ನಮ್ಮತ್ತೆ ಮಕ್ಕಳು, ಮೊಮ್ಮಕ್ಕಳ ಮೇಲೆ ತೋರಸ್ತಿದ್ದ ಅತೀವ ಪ್ರೀತಿ, ಮದ್ದು ಮಾಡ್ತಿದ್ದ ಬಹಳಷ್ಟು ಉದಾಹರಣೆಗಳಿವೆ. ಆದರೆ ಆ ಪ್ರೀತಿ, ವಾತ್ಸಲ್ಯದಲ್ಲಿ ಮಿಂದೆದ್ದ ಮಕ್ಕಳಿಗೆ ಕಳೆದ 5 ವರ್ಷಗಳಿಂದ ಒಮ್ಮೆಯೂ ಕಾಣಲು ಬರದಿದ್ದಾಗ ಅವರಿಗೆ ಈ ಅಮ್ಮ ನೆನಪಾಗಲ್ಲವೇ ಅಂತನಿಸುತ್ತೆ. ಆಕೆ ಈಗ ಮೌನಿಯಾಗಿದ್ದಾಳೆ. ಅದರರ್ಥ ಅವರ ಮೇಲೆ ಪ್ರೀತಿ ಇಲ್ಲವೆಂದಲ್ಲ, ಅವರಿಗೇ ಆಕೆಯ ಮೇಲೆ ಆ ಪ್ರೀತಿಯ ಅಪ್ಪುಗೆ ನೆನಪಾಗಲಿಲ್ಲವೆನಿಸುತ್ತೆ.

ಹಿಂದಿನ ಸಂಚಿಕೆಗಳು :


  • ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW