ಉಡಗಳ ಇರುವಿಕೆ ಶುಭಶಕುನದ ಸಂಕೇತ

ಉಡಗಳು ರೈತ ಸ್ನೇಹಿಗಳು, ಜಮೀನಿನಲ್ಲಿ ಕೀಟಗಳನ್ನು ಹಿಡಿದು ತಿಂದು ಬೆಳೆ ರಕ್ಷಣೆಯಲ್ಲಿ ಪಾತ್ರವಹಿಸುತ್ತವೆ. ಉಡಗಳ ಕುರಿತು ಪಶು ವೈದ್ಯರಾದ ಡಾ.ಯುವರಾಜ ಹೆಗಡೆ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…

ಇತ್ತೀಚೆಗೆ ಚಿಕಿತ್ಸೆಗೆಂದು ಸರಳ ಗ್ರಾಮಕ್ಕೆ ಹೋದಾಗ , ಅವರ ಮನೆಯ ಬಳಿ ಸಾಧಾರಣ ಗಾತ್ರದ ಉಡವೊಂದು ಕಂಡುಬಂದಿತು. ಗೊಡೆಯ ಬಳಿಯಿದ್ದ ಕೀಟವನ್ನು ಅರಸಿ ಮಧ್ಯಾಹ್ನದ ಬಿಸಿಲಿನಲ್ಲಿ ಬಂದಿದ್ದ ಉಡ ನನ್ನ ಕಣ್ಣಿಗೆ ಬಿದ್ದಾಗ ಒಂದೆರಡು ಫೋಟೋ ಕ್ಲಿಕ್ಕಿಸಿ, ಮನೆಮಾಲಿಕರಿಗೆ ತಿಳಿಸಿದೆ.

ಇದನ್ನು ನೋಡಿ ಆನಂದಿಸುತ್ತಾರೆ ಎಂದು ತಿಳಿದಿದ್ದ ನಾನು ಭ್ರಮೆಯಲ್ಲಿದ್ದೇನೆ ಎಂದು ತಿಳಿಯಲು ಕ್ಷಣಮಾತ್ರವೇ ಸಾಕಾಯಿತು. ಅದನ್ನು ನೋಡುತ್ತಿದ್ದಂತೆ ಮನೆ ಮಾಲಿಕ ಗಾಬರಿಯಾಗಿ, ಅಯ್ಯೋ “ಅಪಶಕುನ” ಬಂದಿದೆ ಎನ್ನುತ್ತಾ ಕೋಲು ಹುಡುಕಿದರು. ಅದನ್ನು ಹೊಡೆಯದಂತೆ ತಡೆಯಲು ನನಗೆ ಸಾಕುಸಾಕಾಯಿತು. ಅಂತೂ ಬೇಲಿಯ ಬಳಿ ಓಡಿಸಿದೆ.
ಉಡಗಳು ಸೀಳು ನಾಲಿಗೆ (ಎರಡು ನಾಲಿಗೆ ಎಂದು ಹೇಳುತ್ತಾರೆ) ಹೊಂದಿರುವ ಕಾರಣ ಅದು ಅಪಶಕುನವೆಂಬ ಪಟ್ಟ ಕಟ್ಟಲಾಗಿದೆ. ಈ ಮೂಡನಂಬಿಕೆ ಎಷ್ಟು ದಟ್ಟವಾಗಿದೆಯೆಂದರೆ, ಹಿಂದ್ಯಾರೋ ಕಟ್ಟಿದ ಅಪಶಕುನದ ಪಟ್ಟ ತಿದ್ದಲಾಗದಷ್ಟು ಆಳವಾಗಿ ಹಣೆಬರಹದಲ್ಲಿ ಗೀಚಲ್ಪಟ್ಟಿದೆ. ವಿಪರ್ಯಾಸ ನೋಡಿ, ಅವುಗಳನ್ನು ಹೊಡೆದು ಮಾಂಸವಾಗಿ ತಿನ್ನುವ ಮಾನವ, ಜೀವಂತ ಉಡ ಮನೆಯ ಬಳಿ ಬಂದರೆ ಮಾತ್ರ ಅಪಶಕುನ!!! ಅವುಗಳ ಹೆಸರನ್ನೂ ಕೆಲವರು ಉಚ್ಚರಿಸಲು ಇಷ್ಟ ಪಡುವುದಿಲ್ಲ.

ವಾಸ್ತವವಾಗಿ, ಉಡಗಳು ರೈತ ಸ್ನೇಹಿ. ಜಮೀನಿನಲ್ಲಿ ಕೀಟಗಳನ್ನು ಹಿಡಿದು ತಿಂದು ಬೆಳೆ ರಕ್ಷಣೆಯಲ್ಲಿ ಪಾತ್ರ ವಹಿಸುತ್ತವೆ. ಈ ಮೂಲಕ ಜೈವಿಕ ಸರಪಳಿಯ ಭಾಗವಾಗಿವೆ ಕೂಡ. ಇವುಗಳ ಇರುವಿಕೆಯು ನಿಮ್ಮ ಜಮೀನಿನ ಆರೋಗ್ಯವನ್ನು ಸೂಚಿಸುತ್ತದೆ. ಈಗ ಹೇಳಿ, ರೈತ ಸ್ನೇಹಿಯಾಗಿ ಕೆಲಸ ಮಾಡುವ ಇವುಗಳಿಗೆ “ಅಪಶಕುನದ ಪಟ್ಟ” ಸರಿಯೆ? ಅವುಗಳನ್ನು ಕೊಂದು ತಿನ್ನುವುದರಿಂದ ಕೀಟಭಕ್ಷಕ ಪ್ರಾಣಿಯನ್ನು ನಾಶಪಡಿಸಿ, ಜಮೀನಿನ ಬೆಳೆ ಹಾಳುಮಾಡಿಕೊಂಡಂತೆ ಹಾಗೂ ಜೈವಿಕ ಸರಪಳಿಯ ಕೊಂಡಿಯೊಂದನ್ನು ತುಂಡರಿಸಿದಂತೆ. ಇವು ನಿಮ್ಮ ಜಮೀನಿನಲ್ಲಿ, ಸುತ್ತಲಿನ ಕುರುಚಲಿನಲ್ಲಿ ಇವೆಯೆಂದರೆ ಅದು ಅಪಶಕುನವಲ್ಲ ಬದಲಿಗೆ ಶುಭಶಕುನವೆಂದು ಭಾವಿಸೋಣ.


  • ಡಾ.ಯುವರಾಜ ಹೆಗಡೆ – ಪಶುವೈದ್ಯರು, ತೀರ್ಥಹಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW