‘ಮಡಿಲು’ ಕೃತಿ ಪರಿಚಯ

ಲೇಖಕಿ ಶೋಭಾ ಹೆಗಡೆ ಅವರ ‘ಮಡಿಲು’ ಕೃತಿಯ ಕುರಿತು ಪತ್ತೇದಾರಿ ಕಾದಂಬರಿಗಾರ್ತಿ ಹೆಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮಡಿಲು
ಲೇಖಕಿ :ಶೋಭಾ ನಾರಾಯಣ ಹೆಗಡೆ
ಪ್ರಕಾಶಕರು : ವಿಜಯಲಕ್ಷ್ಮಿ ಪ್ರಕಾಶನ
ಬೆಲೆ: 195/-
ಮೋ. ಸಂಖ್ಯೆ : 9886069116

ಮಡಿಲು ಕಾದಂಬರಿಯಲ್ಲಿ ‘ಮಡಿಲು’ ಹಾಗೂ ‘ಬಿಡುಗಡೆ’ ಎಂಬ ಎರೆಡು ಕಥೆಗಳಿವೆ. ಕಥೆಯ ನಿರೂಪಣ ಶೈಲಿಯು ನಮ್ಮ ನಾಡಿನ ಖ್ಯಾತ ಲೇಖಕರಾದ ಸಾಯಿಸುತೆ, ತ್ರಿವೇಣಿ, ಅನುಪಮಾ ನಿರಂಜನ ರವರ ಬರಹ ಶೈಲಿಯನ್ನು ಹೋಲುತ್ತದೆ ಎಂಬುದು ಕಾದಂಬರಿಯನ್ನು ಓದಿದ ಮೇಲೆ ನನಗಾದ ಅನುಭವ. ಕಥೆ ವಾಸ್ತವತೆ ಹೊಂದಿದ್ದು ಕಥೆಯ ಸಂಭಾಷಣೆಗಳನ್ನು ಲೀಲಾಜಾಲವಾಗಿ ಪೋಣಿಸುವ ಕಾರ್ಯದಲ್ಲಿ ಶೋಭಾ ಅವರು ಪಳಗಿದ್ದಾರೆ.

‘ಮಡಿಲು’ ಎಂದಾಕ್ಷಣ ಎಲ್ಲರಿಗೂ ಅಮ್ಮ ಹಾಗೂ ಅಮ್ಮನ ಮನೆಯ ನೆನಪು ಕಾಡುವುದು. ಅಮ್ಮನ ಮಡಿಲಲ್ಲಿ ಅದೇನೋ ಒಂದು ನೆಮ್ಮದಿಯ ಭಾವನೆ ಮೂಡುವುದಂತೂ ಸತ್ಯ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ವಿಧವೆಯಾದವಳು ಅನುಭವಿಸುವ ಅವಮಾನಗಳ ನೋವು.

ಗಂಡನಿದ್ದರೆ ಮಾತ್ರ ಹೆಂಡತಿಗೆ ಸಮಾಜದಲ್ಲಿ ಗೌರವ ದೊರಕುವುದೇ!? ಎಂಬ ಪ್ರಶ್ನೆ ನನ್ನಲ್ಲಿ ಅದೆಷ್ಟೋ ಬಾರಿ ಕಾಡಿದೆ. ಮಲೆನಾಡಿನ ತುಂಬು ಕುಟುಂಬದ ಮೊದಲ ಸಂತಾನ ಕಥಾ ನಾಯಕಿ ಲತಾ ಮದುವೆಯಾಗಿ ಕೆಲವೇ ದಿನಗಳಲ್ಲಿ ಜೀವಕ್ಕಿಂತ ಹೆಚ್ಚು ಪ್ರೀತಿಸುವ ತನ್ನ ಗಂಡ ರಮೇಶನನ್ನು ಅಪಘಾತದಲ್ಲಿ ಕಳೆದುಕೊಳ್ಳುತ್ತಾಳೆ. ನಂತರ ಅಮ್ಮನ ಮನೆಯೇ ಅವಳ ಸರ್ವಸ್ವವಾಗಿದ್ದಾಗ ಅವಳ ಪರಿವಾರದವರೇ ಅವಳನ್ನು ತಿರಸ್ಕಾರ ದಿಂದ ಕಾಣುತ್ತಿದ್ದರು. ಆದರೇ ಲತಾಳ ತಂಗಿ ಕವಿತಾಳು ತನ್ನ ಗಂಡನಿಂದ ವಿಚ್ಛೆದನೆ ಪಡೆದಿದ್ದು ಅವಳು ಕೂಡ ಅಮ್ಮನ ಮನೆಯಲ್ಲೇ ಇದ್ದಳು. ಅವಳಿಗೆ ಯಾವುದೇ ಕಟ್ಟುಪಾಡುಗಳಿಲ್ಲದೆ ಎಲ್ಲಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ತಂಗಿ ಗಂಡನನ್ನು ಬಿಟ್ಟು ಬಂದವಳು, ಲತಾ ಗಂಡನನ್ನು ಕಳೆದುಕೊಂಡವಳು. ಇಬ್ಬರಿಗೂ ಎರಡು ರೀತಿಯ ನಿಯಮಗಳು. ಹೀಗಿದ್ದಾಗ ಗೀತಾಳ ತಂಗಿಗೆ ಮರುಮದುವೆಗೆ ವರ ಸಿಕ್ಕಿದಾಗ.. ತನ್ನ ಹಿರಿಯ ಮಗಳು ಲತಾಳನ್ನು ನೆನೆದು ಕಣ್ಣೀರಿಡುತ್ತಿದ್ದ ಜಾನಕಮ್ಮನ್ನನ್ನು ನೋಡಿ ಪುರೋಹಿತರು “ತಾಯಿ ಅಳಬೇಡಿ ವಿಧವೆಯನ್ನು ಮದುವೆ ಆಗುವವರು ಅಪರೂಪ. ಹಾಗಾಗಿ ಹೆಚ್ಚು ಯೋಚಿಸದೆ ಎರಡನೇ ಮಗಳ ಮದುವೆ ಮಾಡಿ ಮುಂದೆ ಲತಾಳ ಬಗ್ಗೆ ಚಿಂತಿಸೋಣ” ಎಂದು ಸಮಾಧಾನ ಪಡಿಸುವುದು ಗೀತಾಳ ಕಿವಿಗೆ ಬೀಳುತ್ತದೆ.

ನೆರೆಹೊರೆಯವರ ಹಾಗೂ ಒಡಹುಟ್ಟಿದವರ ನಡತೆಗೆ ಮಾನಸಿಕವಾಗಿ ಕುಗ್ಗಿದ್ದ ಲತಾ, ತನ್ನ ಅಮ್ಮನ ಮನೆಯನ್ನು ತೊರೆದು ಮಲೆನಾಡಿನ ದೂರದ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಹಳ್ಳಿಯ ಜನರ ಪ್ರೀತಿಯನ್ನು ಪಡೆದು ಅನೇಕ ಸನ್ಮಾನಗಳಿಗೆ ಪಾತ್ರಳಾಗಿ ನೋವಿನಲ್ಲೂ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾಗ ಅವಳ ಬಾಳು ಅನಿರೀಕ್ಷಿತವಾಗಿ ಒಂದು ತಿರುವನ್ನು ಪಡೆಯುತ್ತದೆ. ಮುಖ ಪುಟದಲ್ಲಿ ಲತಾಳಿಗೆ ಕುಮಾರ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಕುಮಾರ್ ರವರಿಗೆ ಪೂರ್ವಿ ಎಂಬ ಮಗಳಿದ್ದು, ಅವಳಿಗೆ ತಾಯಿಯಿಲ್ಲದ ನೋವು ಕಾಡುತ್ತಿರುತ್ತದೆ. ಲತಾಳಿಗೆ ಪೂರ್ವಿಯ ಪರಿಚಯವಾಗಿ ನಂತರ ಪೂರ್ವಿಯ ತಂದೆ ಕುಮಾರ್ ರವರನ್ನು ಮದುವೆಯಾಗುವ ಸನ್ನಿವೇಶಗಳು ಸೃಷ್ಟಿಗೊಂಡು ಲತಾ ಮದುವೆಗೆ ಒಪ್ಪಿಕೊಳ್ಳಬೇಕಾಗುತ್ತದೆ. ಲತಾ, ಕುಮಾರ್ ರವರನ್ನು ಮದುವೆಯೇನೋ ಆದಳು ಆದರೇ ತನ್ನ ಮೊದಲ ಗಂಡ ರಮೇಶನನ್ನು ಮರೆಯಲು ಸಾಧ್ಯವಾಗಲಿಲ್ಲ. ದಿನಗಳು ಕಳೆದಂತೆ ಕುಮಾರ್ ರವರು ತೋರುತ್ತಿದ್ದ ಪ್ರೀತಿಗೆ ಸೋಲಲೇ ಬೇಕಾಗುತ್ತದೆ. ಆಶ್ಚರ್ಯವೇನೆಂದರೆ ಲತಾಳಿಗೆ ಕುಮಾರ್ ರವರ ಸ್ಪರ್ಶವು ರಮೇಶನ ಸ್ಪರ್ಶದಂತೆ ಭಾಸವಾಗುತ್ತದೆ. ಕುಮಾರ ಹಾಗೂ ರಮೇಶ್ ಇಬ್ಬರೂ ಒಂದೇ ಎಂಬ ಸಂಶಯ ಲತಾಳಲ್ಲಿ ಮೂಡುತ್ತದೆ. ಮುಂದೇನಾಯಿತು!? ಕುತೂಹಲದಿಂದ ಕೊನೆಗೊಳ್ಳುವ ಈ ಕಥೆಯ ಮೂಲ ಸಂದೇಶ ಪತಿ ಪತ್ನಿಯ ನಡುವೆ ಮೂಡುವ ಪ್ರೀತಿ, ಗೌರವ ಹಾಗೂ ಒಬ್ಬರ ಸಾಧನೆಯ ಹಿಂದೆ ಮತ್ತೊಬ್ಬರ ತ್ಯಾಗ ಮನೋಭಾವವನ್ನು ಎತ್ತಿ ಹಿಡಿದಿದೆ.

“ಬಿಡುಗಡೆ” ಇದು ಮಡಿಲು ಪುಸ್ತಕದ ಮತ್ತೊಂದು ಕಥೆ. ಮಲೆನಾಡಿನ ಹಚ್ಚ ಹಸಿರು ಪಕ್ಷಿಗಳಿಗೆ ಸುಭದ್ರವಾದ ಬೀಡಾಗಿರುತ್ತದೆ. ಗಿಣಿಯ ಸಂಸಾರವು ಹರುಷದಿಂದ ಸೃಷ್ಟಿಯಿಂದ ಪಡೆದ ತನ್ನ ಸ್ವಾತಂತ್ರ ಜೀವನದ ಸುಖವನ್ನು ಆನಂದಿಸುತ್ತಿರುತ್ತವೆ. ಹೆಣ್ಣು ಗಿಣಿ ಗರ್ಭವತಿಯಾಗಿದ್ದು ಹದ್ದಿನ ಕಣ್ಣಿಗೆ ಬಿದ್ದರೆ ಕಷ್ಟ ಎಂದು ಆಹಾರ ತರಲು ಹೊರಗೆ ಹೋಗುವ ಪರಿಸ್ಥಿಯಲ್ಲಿರಲಿಲ್ಲ. ಹಸಿವು ಅವಳನ್ನು ಕಾಡುತ್ತಿತ್ತು. ತನ್ನ ಮುದ್ದಿನ ಮಡದಿ ಹಸಿವಿನಿಂದ ನಿಶಕ್ತಳಾಗಿದ್ದಾಳೆ ಎಂದು ಅರಿತ ಗಂಡು ಗಿಣಿ ಆಹಾರವನ್ನು ಹುಡುಕುತ್ತಾ ಬಲು ದೂರ ಸಾಗಿ ಪಟ್ಟಣದತ್ತ ಸಾಗಿದಾಗ ಆ ಗಂಡು ಗಿಣಿಗೆ ವಿದ್ಯುತ್ ತಂತಿ ತಗುಲಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದುಬಿಡುತ್ತದೆ. ಆಗ ಆ ರಸ್ತೆಯಲ್ಲಿ ಬೈಕ್ ಓಡಿಸುತ್ತಾ ಬರುತ್ತಿದ್ದ ಪ್ರಶಾಂತ್ ತನ್ನ ಬೈಕ್ ನಿಂದ ಇಳಿದು ಆ ಗಿಣಿಗೆ ನೀರನ್ನು ಸಿಂಪಡಿಸಿ ಹಾರಲಾಗದ ಗಿಣಿಯನ್ನು ತನ್ನ ಮನೆಗೆ ಕರೆದೊಯ್ದು ಔಷಧಿ ನೀಡಿ ಉಪಚಾರ ಮಾಡುತ್ತಾನೆ. ಪ್ರಶಾಂತನ ಕರುಣೆ, ಪ್ರೀತಿಗೆ ಗಿಣಿಯ ಕಣ್ಣಲಿಗಳು ತುಂಬಿ ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ಕೃತಜ್ಞತೆಗಳನ್ನು ತನ್ನ ಕಣ್ಣಲ್ಲೇ ತೋರಿಸುತ್ತದೆ. ಇಲ್ಲಿಂದ ಹಾರಿ ಹೋಗಿ ನನಗಾಗಿ ಕಾದಿರುವ ನನ್ನ ಮುದ್ದಿನ ಗಿಣಿಗೆ ಆಹಾರವನ್ನು ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿದ್ದಾಗ ಪ್ರಶಾಂತ್ ಆ ಗಿಣಿಯನ್ನು ಒಂದು ಪಂಜರದಲ್ಲಿ ಇಟ್ಟು ಪಂಜರದ ಚೀಲಕವನ್ನು ಹಾಕಿಬಿಡುತ್ತಾನೆ. ಮಾನಸಿಕ ನೋವನ್ನು ಅನುಭವಿಸುತ್ತಿದ್ದ ಪ್ರಶಾಂತ್ ಆ ಪಂಜರದಲ್ಲಿ ಬಂಧಿ ಯಾಗಿರುವ ಗಿಣಿಯೊಂದಿಗೆ ಮಾತನಾಡುತ್ತಾ ಆನಂದವನ್ನು ಪಡೆಯುತ್ತಾನೆ. ಗಿಣಿಯ ವೈಯಕ್ತಿಕ ಜೀವನದ ಬಗ್ಗೆ ಯಾರೂ ಯೋಚಿಸಲೇ ಇಲ್ಲ. ಹೀಗೆಯೇ ತಿಂಗಳುಗಳು ಕಳೆದುಹೋಗುತ್ತವೆ. ಪಂಜರದಲ್ಲಿ ಗಿಣಿ ನೋವನ್ನು ಅನುಭವಿಸುತ್ತಿರುತ್ತದೆ. ಮುಂದೇನಾಯಿತು? ಗಿಣಿಯು ತನ್ನ ಸ್ವಾತಂತ್ರ್ಯವನ್ನು ಮತ್ತೆ ಪಡೆಯುವುದೇ? ತನ್ನ ಮಡದಿಯ ಬಳಿ ಹೋಗಿ ತನ್ನ ಮುದ್ದಿನ ಮಕ್ಕಳನ್ನು ನೋಡಿ ಆನಂದಿಸುವ ಭಾಗ್ಯ ಸಿಗುವುದೇ?

ಮನುಷ್ಯ ತನ್ನ ಮಾನಸಿಕ ಸುಖಕ್ಕಾಗಿ ಪ್ರಾಣಿ ಪಕ್ಷಿಗಳ ಬದುಕಿನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಎಷ್ಟರಮಟ್ಟಿಗೆ ಸರಿ?ಸಾಂಸಾರಿಕ ನೋವು, ನಲಿವು, ಪತಿ ಪತ್ನಿಯ ನಡುವಿನ ಪ್ರೀತಿ ಪ್ರಣಯ, ಅನಿರೀಕ್ಷಿತ ಘಟನೆಗಳನ್ನು ಎರಡೂ ಕಥೆಗಳಲ್ಲಿ ಲೇಖಕಿ ಶ್ರೀಮತಿ ಶೋಭಾ ಹೆಗಡೆಯವರು ಕಥೆಯನ್ನು ಉತ್ತಮವಾಗಿ ಪ್ರಸ್ತುತ ಗೊಳಿಸಿದ್ದಾರೆ.

ಶೋಭಾ ಹೆಗಡೆಯವರಿಂದ ಮತ್ತಷ್ಟು ಕೃತಿಗಳು ಮೂಡಿಬರಲಿ ಎಂದು ಶುಭ ಹಾರೈಕೆಗಳೊಂದಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.


  • ಹೆಚ್ ವಿ ಮೀನಾ – ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading