ಇಂಗು ತಿಂದರೆ ಭಂಗವಿಲ್ಲ! : ಡಾ. ಯಲ್ಲಮ್ಮ ಕೆ

ಸಾಮಾನ್ಯವಾಗಿ ಇಂಗು ಒಂದು ಔಷಧಿಗುಣವುಳ್ಳ ಮಸಾಲೆ ಪದಾರ್ಥಗಳ ಗುಂಪಿಗೆ ಸೇರಿಸಲ್ಪಟ್ಟ ಒಂದು ಅಮೂಲ್ಯ ವಸ್ತು. ಹನ್ನೆರಡನೆಯ ಶತಮಾನದ ಶರಣರ ಕಾಲದಿಂದಲೂ ʼಇಂಗು’ ವಿನ ಬಳಕೆ ಇದೆ. ಲೇಖಕಿ ಡಾ. ಯಲ್ಲಮ್ಮ ಕೆ ಅವರ ಸಂಶೋಧನಾತ್ಮಕ ಲೇಖನವಿದು, ತಪ್ಪದೆ ಮುಂದೆ ಓದಿ…

ಜನಪದ ಸಾಹಿತ್ಯದಲ್ಲಿ ಗಾದೆ ಮಾತುಗಳು. ಪಡೆನುಡಿಗಳು, ನಾಣ್ಣುಡಿಗಳು ಸೂಳ್ನುಡಿಗಳು ಹೇರಳವಾಗಿ ಕಂಡು ಬರುತ್ತವೆ. ಇವುಗಳನ್ನು ಕಟ್ಟಿದ ಸಮಯ ಮತ್ತು ಸಂದರ್ಭಗಳ ಹಿನ್ನಲೆಯಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ನೋಡುವ ಅಗತ್ಯವಿದೆ, ನಾವು ಈಗಾಗಲೇ ಅರ್ಥೈಸಿಕೊಂಡು ಬಂದಿರುವ ಸಂಗತಿಗಳನ್ನು ಮತ್ತೆ ಮತ್ತೆ ಮರುಓದಿಗೆ ಒಳಪಡಿಸಿ ನೋಡಿದಾಗ ಹೊಸದೊಂದು ಹೊಳವು ನಮಗೆ ಸಿಗುತ್ತದೆ ಎಂಬ ಆಶಯದಿ ನನ್ನೀ ಅಂಕಣ ಬರಹ ಮುನ್ನಡೆಯುತ್ತಿದೆ.

ಸಾಮಾನ್ಯವಾಗಿ ಇಂಗು ಒಂದು ಔಷಧಿಗುಣವುಳ್ಳ ಮಸಾಲೆ ಪದಾರ್ಥಗಳ ಗುಂಪಿಗೆ ಸೇರಿಸಲ್ಪಟ್ಟ ಒಂದು ಅಮೂಲ್ಯ ವಸ್ತುವೆನಿಸಿದೆ. ʼಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲʼ ಎರಡನ್ನೂ ಬಲ್ಲ ಒಂದು ವರ್ಗದ ಜನರಲ್ಲಿ ಇಂಗು ಇಲ್ಲದೇ ನಿತ್ಯ ಅಡುಗೆಯೇ ಇಲ್ಲವೆನ್ನಿ, ಇಂಗಿನ ಕುರಿತಾಗಿ ಇರುವ ಜನಜನಿತ ಮಾತುಗಳನ್ನು ನೋಡುವುದಾದರೆ : ‘ಇಂಗು ಮತ್ತು ತೆಂಗು ಇವೆರಡು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ’! ಇಂಗು ತಿಂದರೆ ಭಂಗವಿಲ್ಲ! ಇಂಗು ತಿಂದ ಮಂಗನ ಹಾಗೆ ಆಡಬೇಡ! ಎನ್ನುವ ಮಾತುಗಳನ್ನು ನೀವು ಕೇಳಿರುತ್ತೀರಿ, ಇದನ್ನು ನಮ್ಮ ಜನಪದರ ಮಾತಿಲ್ಲಿ ನೋಡುವುದಾದರೆ ʼಎಚ್ಚಯಿದ್ದರ ಹುಚ್ಚೀನೂ ಅಡಿಗಿ ಮಡ್ತಾಳ!ʼ ಈ ಎಚ್ಚದಲ್ಲೂ ಕೂಡ ಇಂಗಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ.

ಫೋಟೋ ಕೃಪೆ : google

ಇಂಗನ್ನು ಅಸಾಫೋಟಿಡಾ (ಫೆರುಲಾ ಅಸ್ಸಾಫೋಟಿಡಾ) (ಪರ್ಷಿಯನ್ -ಅಂಗೆಡಾನ್), ಪರ್ಯಾಯ ಕಾಗುಣಿತ ಅಸಾಫೆಟಿಡಾ , (ಇದನ್ನು ದೆವ್ವದ ಹೊಲಸು , ದುರ್ಗಂಧದ ಅಂಟು , ಅಸಾಂತ್ , ದೇವರ ಆಹಾರ , ಕಾಯಮ್ (ಮಲಯಾಳಂ), ಹಿಂಗ್ (ಬಂಗಾಳೀ, Marathi, ಗುಜರಾತಿ, ಹಿಂದಿ, ಉರ್ದು, ನೇಪಾಳೀ), ಇಂಗುವಾ (ತೆಲುಗು), ಇಂಗು (ಕನ್ನಡ), ಪೆರುಂಗಾಯಂ (ತಮಿಳು), ಹಿಲ್ಟೀಟ್ (ಮಿಷ್ನಾಯಿಕ್ ಹೀಬ್ರ್ಯೂ), ಹಾಗೂ ಜೈಂಟ್ ಫೆನ್ನೆಲ್ ಎಂದೆಲ್ಲಾ ಕರೆಯಲಾಗುತ್ತದೆ) ಪರ್ಷಿಯಾ (ಇರಾನ್) ಮೂಲದ ಫೆರುಲಾ ತಳಿಗೆ ಸೇರಿದೆ. ಅಸಾಫೋಟಿಡಾ ಕಚ್ಚಾ ಸ್ಥಿತಿಯಲ್ಲಿದ್ದಾಗ ಕಟುವಾದ, ಅಹಿತಕಾರಿ ವಾಸನೆಯನ್ನು ಹೊಂದಿರುತ್ತದೆ, ಆದರೆ ಅಡಿಗೆಯಲ್ಲಿ ಬಳಸಿದಾಗ, ಅದು, ಲೀಕ್ಗಳನ್ನು ನೆನಪಿಗೆ ತರುವ ಪರಿಮಳವನ್ನು ಬೀರುತ್ತದೆ.

ಹಲವು ವೈದ್ಯಕೀಯ ಪ್ರಯೋಜನಗಳನ್ನು ಹೊಂದಿರುವುದರ ಜೊತೆಗೆ ಬೇಟೆ ಸೆಳೆ ಆಹಾರ, ಆತ್ಮಗಳನ್ನು ದೂರವಿರಿಸಲು, ಯಾರಾದರೂ ಕೇವಲ ಇದರ ರುಚಿ ನೋಡಿದರೂ ಸಾಕು, ದೇಹಾದ್ಯಂತ ದೈಹಿಕ ಧಾತುವನ್ನು ಪಸರಿಸುತ್ತದೆ ಹಾಗೂ ಉಸಿರಿನ ಮೂಲಕ ತಿಳಿಯದಂತಹಾ ಅಥವಾ ತಿಳಿದರೂ ಸ್ವಲ್ಪ ಮಾತ್ರ ಗಮನಕ್ಕೆ ಬರುವಂತಹ ಆರೋಗ್ಯಕರ ಸುವಾಸನೆಯನ್ನು ನೀಡುತ್ತದೆ ; ಹೀಗೆ ಇದು ಬಹು-ಉಪಯೋಗಿ ಪದಾರ್ಥವಾಗಿ ಬಳಸಲಾಗುತ್ತದೆ.

ಇಂಗಿನ ಮೂಲವನ್ನು ಬೆನ್ನತ್ತಿ ಹೋದಾಗ ನನಗೆ ಸಿಕ್ಕಿದ್ದು ಹನ್ನೆರಡನೆಯ ಶತಮಾನದ ಶರಣರ ಕಾಲದಿ ಕಟ್ಟಿಕೊಟ್ಟಿರುವ ವಚನವೊಂದರಲ್ಲಿ ಇದುವರೆಗೂ ಸರ್ವಋತು ಸಸ್ಯಮೂಲದಿಂದ ಸಿಗಬಹುದೆಂದು ತಿಳಿಯಲಾದ ʼಇಂಗುʼವಿನ ಲಭ್ಯತೆಯ ಕುರಿತಾದ ವೈಶಿಷ್ಟ್ಯಪೂರ್ಣ ಉಲ್ಲೇಖವನ್ನು ನೋಡುವುದಾದರೆ…

“ವಾಸನೆಯ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು,
ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ,
ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ,
ಕೂಡಲಸಂಗಮದೇವಾ”. ||1352||

ವಾಸನೆಯ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿದಂತೆ, “ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತು!” ಈ ಮಾತನ್ನು ನೋಡಿದರೆ ಸಸ್ಯಮೂಲದಿಂದ ದೊರೆಬಹುದಾದ ಇಂಗಿಗೂ ಕೋಣನ ಮಾಂಸವು ಹೊಂದಿರುವ ಪರಿಮಳದ ಕಾರಣ ವಾಣಿಜ್ಯತೆಯ ಇಂಗು ಎನಿಸುವುದಾದರೆ ಇಂಗಿಗೂ ಕೋಣನ ಮಾಂಸಕ್ಕೂ ಸಾಮ್ಯತೆ ಇದೆಯೇ? ಸಸ್ಯಮೂಲದಂತೆ ಕೋಣನ ಮಾಂಸ ಮೂಲದಿಂದಲೂ ಪಡೆಯಬಹುದಾದ ಸಾಧ್ಯತೆಯಿದೆ ಇದೆಯೇ? ಈ ಬಗೆಗೆ ಏನಾದರೂ ಮಾಹಿತಿ ಸಿಗಬಹುದೇ ಎಂದು ಗೂಗಲ್ ನಲ್ಲಿ ತಡಕಾಡಿದರೂ ಹತ್ತಾರೂ ಪುಸ್ತಕಗಳನ್ನು ತಡಕಾಡಿದರೂ ಏನೊಂದು ಸುಳಿವು ಸಿಗಲಿಲ್ಲ.

ಫೋಟೋ ಕೃಪೆ : google

ಈ ಬಗೆಗೆ ಹಿರಿತಲೆಯ ಅಜ್ಜನೊಬ್ಬನನ್ನು ಮುಖತಃ ಭೇಟಿಯ ಸಂದರ್ಭದಲ್ಲಿ ಚರ್ಚಿಸಿದ್ದೆ ಆತನ ವಿವರಣೆಯನ್ನು ನೋಡುವುದಾದರೆ ; ಈ ಹಿಂದೆ ಬ್ಯಾಟಿಜಾತ್ರಿ, ಎಂದು ಕರೆಯಲ್ಪುಡುವ, ಗ್ರಾಮದೇವತೆಯ ಉತ್ಸವಗಳ ಸಂದರ್ಭದಿ ದೇವಿಗೆ ಕೋಣ,ಕುರಿ-ಕೋಳಿಗಳನ್ನು ಬಲಿನೀಡುವುದು ಅನುಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯವಾಗಿದ್ದು, ನಮ್ಮ ಬೀಗರು ದೇವರ ಮಡ್ಯಾರ ಎಂದ್ಹೇಳಿ ತೆರಳುವ ಗ್ರಾಮಸ್ಥರು, ಬಂಧು-ಬಾಂಧವರು ಬಂದು-ಹೋಗುವದನ್ನು ಕಾಣಬಹುದಾಗಿದೆ. ಸರ್ಕಾರದ ನಿಯಮಗಳು, ಕಾಯ್ದೆ, ಕಾನೂನು, ಕಟ್ಟಳೆಗಳೇನೇಯಿದ್ದರೂ ದೇವರು ಮತ್ತು ದೈವದ ಹೆಸರಿನಲ್ಲಿ ನಡೆಯಬಹುದಾದ ಬಲಿಯಂತಹ ಆಚರಣೆಗಳನ್ನು ಕಟ್ಟಿಹಾಕಲಾದೀತೇ? ಅವು ರಾತ್ರೋ ರಾತ್ರಿ ಸದ್ದಿಲ್ಲದಂತೆ, ಕಂಡು ಕಾಣದಂತೆ, ಕಣೀದ್ದೂ ಕುರುಡರಂತೆ ಭಕ್ತಿ-ಭಾವದಿ ತಲೆಬಾಗಿ ನಮಿಸುತ್ತಾರೆ, ಮಾಂಸ – ಬಾಡೂಟವೆಂದಮೇಲೆ ಅಲ್ಲಿ ಮದ್ಯದ ಸಮಾರಾಧನೆಯೂ ಬಂದ ಬೀಗರು-ಬಿಜ್ಜರಿಗೆಂದು ವ್ಯವಸ್ಥೆಮಾಡಲಾಗಿರುತ್ತದೆ ಬಂದವರು ಬರೀ ತಿಂದುಂಡು ಹೋಗುವುದನ್ನು, ಮನೆಮಂದಿಯೆಲ್ಲ ಸಂಭ್ರಮಿಸುವುದನ್ನು ಕಾಣುತ್ತೇವೆ.

ಹೀಗೆ ಪ್ರತಿವರುಷ ಇಲ್ಲವೇ ಮೂರು ಮತ್ತು ಐದು ವರುಷಗಳಿಗೊಮ್ಮೆ ನಡೆಯುವ ಗ್ರಾಮದೇವತೆಯ ಜಾತ್ರೆಗೆ, ದೇವಿಗೆ ಬಲಿ ನೀಡಲೆಂದು ಯುಗಾದಿ ಹಬ್ಬದಂದು ಕೋಣಗಳನ್ನು ನೇಮಿಸಿ, ಪೂಜಿಸಿ ಬಿಡಲಾಗುತ್ತದೆ, ಮೂರು ಅಥವಾ ಐದು ವರುಷಗಳಲ್ಲಿ ಆ ಕೋಣಗಳು ಊರು-ಕೇರಿ, ಕಾಡು-ಮೇಡು, ಹೊಲ-ಗದ್ದೆಗಳೆನ್ನದೇ ಮೆಯ್ದು ಕೊಬ್ಬಿ ಬೆಳೆದು ನಿಂತಿರುತ್ತವೆ. ಜಾತ್ರೆ ಮುನ್ನ ಐದಾರು ದಿನಗಳ ಮುಂಚೆ ಅವುಗಳನ್ನು ಹುಡುಕಿ, ಹಿಡಿದು ತಂದು ಸುಣ್ಣದ ನೀರನ್ನು ಕುಡಿಸಲಾಗುತ್ತದೆ, ಯಾಕಂದರೆ ಕೊಬ್ಬಿದ ಕೋಣಗಳು ಹತ್ತಾರು ಜನರಿಗೆ ಅಸುವಾಗುವುದಿಲ್ಲ, ಸುಣ್ಣದ ನೀರು ಕುಡಿದ ಕೋಣಗಳು ದೈಹಿಕವಾಗಿ ನಿತ್ರಾಣಗೊಂಡಿರುತ್ತವೆ, ಆಗ ಸುಲಭವಾಗಿ ಅವುಗಳನ್ನು ಬಲಿ ನೀಡಬಹುದು, ಹೀಗೆ ʼಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು; ಎಂಬ ಬಸವಣ್ಣನವರ ಮಾತಿನಂತೆ ಕೋಣವನ್ನು ಇಳಿಸಂಜೆ ಹೊತ್ತಲ್ಲಿ, ಇಲ್ಲವೇ ಸರಿರಾತ್ರಿ ಹೊತ್ತಲ್ಲಿ ಬಲಿನೀಡಿ ಅದರ ಮುಂಗಾಲನ್ನು ಮಣಿಕಟ್ಟಿನವರೆಗು ಕಡಿದು ಅದರ ಬಾಯಲ್ಲಿಟ್ಟು ದೇವಿಯ ಲಲಾಟಬಿಂಬದ ಎದಿರು ಇಡಲಾಗುತ್ತದೆ. ಕೋಣನ ದೇಹಭಾಗವನ್ನು ನಾಲ್ಕುಕಾಲುಗಳಿಗೆ ಹಗ್ಗಕಟ್ಟಿ ಹತ್ತಾರು ಮಂದಿ ಎತ್ತಿ-ಹೊತ್ತೋಯ್ದು, ಊರಹೊರಗಡೆ ಗುಡ್ಡದಲ್ಲಿ ದೇವಿಪಾದಗಟ್ಟೆಯ ಹತ್ತಿರ ರಾತ್ರಿ ಇಡೀ ಇದನ್ನು ಬೇಯಿಸಲಾಗುತ್ತದೆ, ಮುಂಜಾನೆ ಉದಯಕ್ಕೆ ತಾಯಿ ಗ್ರಾಮದೇವತೆಯೂ ಪಲ್ಲಕ್ಕಿಯಲ್ಲಿ ಭಾಜಾಭಜಂತ್ರಿಯೊಂದಿಗೆ ಮೆರವಣಿಗೆ ಬರುತ್ತಾಳೆ, ಅಲ್ಲಿ ಧೂಪ-ದೀಪದಾರತಿ ಎತ್ತಿ ತಾಯಿಗೆ ನೈವೇಧ್ಯ ಸಮರ್ಪಣೆಯಾದಮೇಲೆ ಗ್ರಾಮದ ಭಕ್ತಾದಿಗಳು ದೇವರ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೊಬ್ಬಿದ ಕೋಣನ ಮಾಂಸವನ್ನು ದೊಡ್ಡದಾದ ಕೊಪ್ಪರಕಿಯಲ್ಲಿ ದಿನರಾತ್ರಿ ಬೇಯಿಸುವಾಗ – ಹೇಗೆ ಕಬ್ಬಿನಿಂದ ಬೆಲ್ಲ ತಯಾರಿಸುವಾಗ ಪಾಕದ ಮೇಲೆ ಉಕ್ಕಿ ಬರುವ ಕಾಕಂಬಿ ರೀತಿಯಲ್ಲಿ ಉಗಿ/ಹಬೆಯೊಂದಿಗೆ ಮೇಲೆ ಉಕ್ಕಿಬರುವ ಹಳದಿ ಬಣ್ಣದ ಎಣ್ಣೆಯಂತಹ ಅಂಶವೇ ತಣ್ಣಗಾದ ಮೇಲೆ ದೊರೆಯುವ ವಸ್ತುವೇ ಇಂಗು! ಎಂಬುದು ಗಮನಾರ್ಹ ಸಂಗತಿ, ಇದನ್ನು ಪುರೋಹಿತಶಾಹಿ / ಅರ್ಚಕರ ಕೈಗೆ ನೀಡಲಾಗುತ್ತಿತ್ತು, ಔಷಧಿರೂಪದಲ್ಲಿ ಬಳಕೆಯಾಗುತ್ತದೆ ಎಂದು ಅವರು ಸಂಗ್ರಹಿಸುತ್ತಿದ್ದರಂತೆ, ಅದರ ಮೂಲ ಮತ್ತು ಬಹುಪ್ರಯೋಜನವನ್ನೇ ಅವರೇ ಪಡೆಯುತ್ತಿದ್ದರು ಎನ್ನಬಹುದು, ಮಾಂಸ ತಿನ್ನದೇ ಇದ್ದರೂ ಅದರಿಂದ ದೊರೆತ ಇಂಗನ್ನು ಮಾತ್ರ ನಿತ್ಯ ಅಡುಗೆಯಲ್ಲಿ ಬಳಸುತ್ತಾ ಬಂದಿದ್ದಾರೆ ಎನ್ನಬಹುದು, ಕರ್ನಾಟಕದಲ್ಲಿ ಮಲೆನಾಡಿನ ಘಟ್ಟದಿ ಹೆಚ್ಚು ತೆಂಗು ಬೆಳೆಯುವುದರಿಂದ, ಅಲ್ಲಿನ ಬ್ರಾಹ್ಮಣ ಸಮುದಾಯದವರಲ್ಲಿ ‘ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ’! ಎಂಬ ಗಾದೆಮಾತು ಚಾಲ್ತಿಯಲ್ಲಿರುವುದನ್ನು ಕಾಣಬಹುದು.

 

“ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ”, ಎಂಬುದರ ಬಗೆಗಿನ ಲಿಖಿತ ವಿವರಣೆ ನನಗೆ ಸಿಗಲಿಲ್ಲವಾದರೂ ಇಲ್ಲಿ ನಾನು ಉಲ್ಲೇಖಿಸಿದ ಅಂಶ ಗಮನೀಯವಾದದ್ದು, ಬಸವಣ್ಣನೂ ಕೂಡ ಮೂಲದಲ್ಲಿ ಬ್ರಾಹ್ಮಣನಾಗಿದ್ದು ತದನಂತರ ಶೈವಮತಕ್ಕೆ ವಾಲಿದ್ದು ಚರಿತ್ರೆಯಿಂದ ತಿಳಿದು ಬಂದಿರುವ ಸತ್ಯ, ಶುದ್ಧ ಶಾಖಾಹಾರಿಗಳಾದ ಬ್ರಾಹ್ಮಣರು ಮೀನನ್ನು ಮಾಂಸವೆಂದು ಅವರು ಒಪ್ಪದೆ ಅಪ್ಪಿದ್ದಾರೆ ಆ ಮಾತು ಬೇರೆ ; ಕೋಣನ ಮಾಂಸವನ್ನು ಅವರು ವಿರೋಧಿಸಿದ್ದಾಗ್ಯೂ ಅದರಿಂದ ದೊರೆಯಬಹುದಾದ ಇಂಗುವಿನ ಲಭ್ಯತೆಯ ಸಂಗತಿಯನ್ನು ಮರೆಮಾಚಿದ್ದಾರೆಯೇ? ಇಲ್ಲವೆಂದರೆ ಬಸವಣ್ಣನ ವಚನದ ತಾತ್ಪರ್ಯವೇನು?

ಇದಕ್ಕೆ ಪೂರಕವಾಗಿ ಪುಣ್ಯಸ್ತ್ರೀ ಕಾಳವ್ವೆಯ ಮತ್ತೊಂದು ವಚನ ನೋಡುವುದಾದರೆ.. “ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು. ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು. ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ? ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು. ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು. ಅದೆಂತೆಂದಡೆ: ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು. ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ. ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.

ಸಿದ್ದಲಿಕೆಯ ತುಪ್ಪವನ್ನು [ಆಕಳು ಇಲ್ಲವೇ ದನದ ಚರ್ಮದಿಂದ ಮಾಡಿದ ಚೀಲ, ಇದರಲ್ಲಿ ಇರಿಸಿದ ತುಪ್ಪ ಬಹುದಿನವರೆಗೂ ಕೆಡುವುದಿಲ್ಲ] ಸಗ್ಗಳೆಯ ನೀರನ್ನು [ಆಕಳು ಇಲ್ಲವೇ ದನದ ಚರ್ಮದಿಂದ ಮಾಡಿದ ಚೀಲ, ಇದರಲ್ಲಿ ತುಂಬಿಟ್ಟ ನೀರು ತಣ್ಣಗೆ ಇರುತ್ತವೆ] ಶುದ್ಧವೆಂದು ಕುಡಿಯುವ ನೀವು ಎಂಬ ಅಂಶವನ್ನು ಗಮನಿಸಲಾಗಿ ಪರಿಮಳದ ಕಾರಣ ಕೋಣನ ಮಾಂಸದ ವಾಣಿಜ್ಯತೆಯ ಇಂಗು ಎನಿಸಿತ್ತು ಎಂಬ ಅಂಶವನ್ನು, ಅದನ್ನು ನಿತ್ಯ ಅಡುಗೆಯಲ್ಲಿ ಬಳಸುವುದನ್ನು ನೋಡಿದರೆ ಅವರ ಬ್ರಾಹ್ಮಣ್ಯಕ್ಕೆ ಚ್ಯುತಿಬಾರದೇ?

ಇಂಗು ತಿಂದ ಮಂಗನ ಹಾಗೆ ಆಡಬೇಡ! ಚೇಷ್ಟೆ ಮಾಡಬೇಡ ಎಂಬ ಅರ್ಥದಲ್ಲಿ, ಇಂಗು ತಿಂದ ಮಂಗನಂತಾದೆ ಎಂಬ ಮಾತನ್ನು ದಾರಿ ಕಾಣದೆ, ದಿಕ್ಕು ತೋಚದೆ ಕಂಗಾಲಾದ ಸ್ಥಿತಿ ಎಂಬ ಅರ್ಥದಲ್ಲಿ ಬಳಕೆಯಲ್ಲಿರುವುದನ್ನು ಕಾಣುತ್ತೇವೆ ; ಇಂಗಿಗೂ ಮಂಗಗೂ ಸಮೀಕರಿಸಿ ಮತ್ತು ಮನುಷ್ಯನಿಗೆ ಉಪದೇಶಿಸಿದ ಕಾರ್ಯ ಕಾರಣ ಸಂಬಂಧವೇನು? ಎಂಬ ಬಗೆಗೆ ನನಗೆ ತೋಚಿದ್ದು – ಮಂಗ ಅಂದ್ರೆ ಚೇಷ್ಟೆಗೆ ಹೆಸರುವಾಸಿ, ಮಂಗನಿಂದ ಮಾನವನಾದ ಎಂಬ ಜೀವವಿಕಾಸದ ಸಿದ್ಧಾಂತವನ್ನು ಒಪ್ಪಿರುವ ನಾವು ನಮ್ಮ ಪೂರ್ವಜರಿಂದ ಹಲವು ಚೇಷ್ಟೆಗಳನ್ನೂ ಬಳುವಳಿಯಾಗಿ ಪಡೆದಿರುವಂತದ್ದು ದಿಟ! ಅಂತೆಯೇ ಮನುಷ್ಯನ ಮನಸ್ಸನ್ನು ಮರ್ಕಟ ಮನಸ್ಸು ಎಂದು ಕರೆದಿರುವುದು, “ಇಂಗನ್ನು ಯಾರಾದರೂ ಕೇವಲ ಇದರ ರುಚಿ ನೋಡಿದರೂ ಸಾಕು, ದೇಹಾದ್ಯಂತ ದೈಹಿಕ ಧಾತುವನ್ನು ಪಸರಿಸುತ್ತದೆ” ಇಂಗಿನ ಗುಣಸ್ವಭಾವದ ಕುರಿತಾದ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ನೋಡುವುದಾದರೆ – ಚೇಷ್ಟೆ ಮನಸ್ಸಿನ ಮಂಗನಿಗೆ ಇಂಗನ್ನು ಮೂಸಿಸುವುದಲ್ಲ, ತಿನ್ನಿಸಿಬಿಟ್ಟರೆ ಹೇಗೆ ಆಡಬೇಡ? ಆ ವಿಷಮಸ್ಥಿತಿಯ ಕುರಿತಾಗಿ “ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸೀತು” ಎಂಬ ಹುಟ್ಟಿ -ಕೊಂಡಿರಬಹುದು. ಇಂತಹ ಉದ್ಧೀಪನಾ ಶಕ್ತಿಯನ್ನು ಹೊಂದಿರುವ ಇಂಗನ್ನು ಮನುಷ್ಯ ನಿತ್ಯ ಅಡುಗೆಯಲ್ಲಿ ಬಳಸಿದಾಗ, ಮನುಷ್ಯ- ಊಟಕ್ಕೆ ಉಪ್ಪಿನಕಾಯಿ ಇಲ್ಲದೆ ಚಡಪಡಿಸುವಂತಹ ಸ್ಥಿತಿ, ಮನೋಕಾಮನೆ ದಹಿಸುವ, ವಿರಹ ವೇದನೆಯನ್ನು ಸಹಿಸುವ ಸ್ಥಿತಿಗೆ “ಇಂಗು ತಿಂದ ಮಂಗನಂತಾದೆ” ಎಂಬ ನುಡಿಗಟ್ಟನ್ನು ಕಟ್ಟಿರಬಹುದೇ..? ಈ ಕುರಿತು ಕುತೂಹಲಕ್ಕಾದರೂ ಇನ್ನು ಮುಕ್ತವಾದ ವಿಸ್ತೃತ ಸಂಶೋಧನೆ ನಡೆಯಬೇಕಿದೆ ಎಂಬುದು ನನ್ನ ಮನದಿಂಗಿತ.


  • ಡಾ. ಯಲ್ಲಮ್ಮ ಕೆ – ಸಹಾಯಕ ಪ್ರಾಧ್ಯಾಪಕರು, ವಿಜಯನಗರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW