‘ಇಂತೀ ನಿಮ್ಮ ಪ್ರೀತಿಯ ರಾಮಕೃಷ್ಣ’ ಕೃತಿ ಪರಿಚಯ

ಕನ್ನಡದ ಜನಪ್ರಿಯ ಸಿನಿಮಾ ನಟರಾದ ರಾಮಕೃಷ್ಣ ಅವರು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನಿರ್ನಳ್ಳಿ ಎಂಬ ಪುಟ್ಟ ಗ್ರಾಮದವರಾಗಿದ್ದು ಅವರ ಕುರಿತು ಅವರ ಆಪ್ತ ಸ್ನೇಹಿತರಾದ ವಾಸುದೇವ ಶ್ಯಾನಭಾಗರು ಅವರ ‘ಇಂತೀ ನಿಮ್ಮ ಪ್ರೀತಿಯ ರಾಮಕೃಷ್ಣ ‘ ಜೀವನಚರಿತ್ರೆಯ ಪುಸ್ತಕವನ್ನು ಹೊರ ತಂದಿದ್ದಾರೆ.  ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಇಂತೀ ನಿಮ್ಮ ಪ್ರೀತಿಯ ರಾಮಕೃಷ್ಣ.
ಲೇಖಕರು: ವಾಸುದೇವ ಶ್ಯಾನಭಾಗ ಶಿರಸಿ.
ವಿಜಯಲಕ್ಷ್ಮಿ ಪ್ರಕಾಶನ ಮೈಸೂರು.
ಮುದ್ರಣದ ವರ್ಷ: ೨೦೨೫.
ಪುಟಗಳು: ೧೪೦.
ಬೆಲೆ: ರೂ. ೧೭೦.

ಕನ್ನಡದ ಜನಪ್ರಿಯ ಸಿನಿಮಾ ನಟರಾದ ಶ್ರೀ ರಾಮಕೃಷ್ಣ ಅವರು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನಿರ್ನಳ್ಳಿ ಎಂಬ ಪುಟ್ಟ ಗ್ರಾಮದವರು. ಅವರನ್ನು ಹತ್ತಿರದಿಂದ ಬಲ್ಲ ಆಪ್ತ ಸ್ನೇಹಿತರಾದ ವಾಸುದೇವ ಶ್ಯಾನಭಾಗರು ಜೀವನಚರಿತ್ರೆಯ ರೂಪದಲ್ಲಿ ಪುಸ್ತಕವನ್ನು ನಿರೂಪಿಸಿದ್ದಾರೆ. ಇದಕ್ಕೆ ಖ್ಯಾತ ಸಾಹಿತಿಗಳಾದ ಎಚ್. ಎಸ್.ವೆಂಕಟೇಶ ಮೂರ್ತಿ ಅವರು ಮುನ್ನುಡಿಯನ್ನೂ,ಜಯಂತ ಕಾಯ್ಕಿಣಿಯವರು ಬೆನ್ನುಡಿಯನ್ನೂ ಬರೆದಿದ್ದಾರೆ.

ಈಗ ೭೩ರ ಪ್ರಾಯದಲ್ಲೂ ಹುಟ್ಟೂರಲ್ಲಿ ಕೃಷಿ,ಬೆಂಗಳೂರಿನ ವ್ಯವಹಾರ ಹಾಗೂ ಬಣ್ಣದ ಜಗತ್ತಿನಲ್ಲೂ ನಟಿಸುತ್ತಾ ಚಟುವಟಿಕೆಯಿಂದ ಇರುವ ಇವರು ನಡೆದು ಬಂದ ಹಾದಿ ಸುಲಭವಾಗಿರಲಿಲ್ಲ. ಐದು ವರ್ಷದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಚಿಕ್ಕಪ್ಪ -ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಗ್ರಾಮೀಣ ಶಾಲೆಯಲ್ಲಿ ಓದುತ್ತಿದ್ದಾಗಲೇ ಕಲಾಪ್ರೇಮಿ ಸಿಕ್ಷಕರಿಂದ ಕಲಿತ ಪಾಠಗಳು, ಊರಲ್ಲಿ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಲೆ ಇವುಗಳಿಂದ ಆಕರ್ಷಿತರಾಗಿದ್ದರು. ಅವರು ೬ ಮೈಲಿ ನಡೆದು ಕಲೆಯ ಹೆಬ್ಬಾಗಿಲೆಂದೇ ಹೇಳುವ ಮಾರಿಕಾಂಬಾ ಹೈಸ್ಕೂಲಿಗೆ ಬರುತ್ತಿದ್ದರು. ಆಗಲೇ ಜಾತ್ರೆಗೆ ಬರುತ್ತಿದ್ದ ಗುಬ್ಬಿನಾಟಕ ಕಂಪನಿಗಳಿಂದ ನಟನೆಯ ಆಸಕ್ತಿ ಹುಟ್ಟಿತ್ತು.

ಒಮ್ಮೆ ಮಳೆಯಲ್ಲಿ ನಾಟಕದ ಸ್ಟೇಜನ್ನು ಹತ್ತಿರದಿಂದ ನೋಡುತ್ತಿದ್ದ ರಾಮಕೃಷ್ಣರನ್ನು ಗ್ರೀನ್ ರೂಮಿನಿಂದ ಕಂಡ ಗುಬ್ಬಿ ವೀರಣ್ಣನವರ ಮಗಳು ಸ್ವರ್ಣಮ್ಮನವರು ಹತ್ತಿರ ಬಂದು ಟವೆಲ್ ನಿಂದ ತಲೆಯೊರೆಸಿ, ಮಗನತೆ ಕಂಡು ಮಾತಾಡಿಸಿ,ದೂರದ ಊರಿಗೆ ಮಳೆಯಲ್ಲಿ ನಡೆದು ಹೋಗಲು ಕಷ್ಟವೆಂದು ತಮ್ಮ ಬಿಡಾರದಲ್ಲಿ ಆಶ್ರಯ ಕೊಟ್ಟರು. ನಂತರ ಅವರ ವಿಳಾಸ ತೆಗೆದುಕೊಂಡಿದ್ದರು. ವಿಷಯ ಕೇಳಿ ಮನೆಯಲ್ಲಿ ಛಡಿ ಏಟು ಬಿದ್ದಿತ್ತು.

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ ಸ್ವರ್ಣಮ್ಮನವರನ್ನು ಕಾಣಬೇಕೆಂದು ಬೆಂಗಳೂರಿಗೆ ಬಂದಾಗ,ಅವರ ಹಣ ಲಪಟಾಯಿಸಿದದ ಅಪರಿಚಿತನ ಮೋಸ, ಹೊಟ್ಟೆ ಪಾಡಿಗಾಗಿ ಬಾತ್ ರೂಮಿಗೆ ನೀರು ಹಾಕಿ ಸ್ವಚ್ಛ ಮಾಡುವ ಕೆಲಸ ಒಪ್ಪಿಕೊಂಡಿದ್ದುಕಲ್ಲು ಬೆಂಚಿನ ಮೇಲೆ ಮಲಗುತ್ತಿದ್ದದ್ದು ಮುಂತಾದ ಕಷ್ಟ ಅನುಭವಿದ್ದರು. ವಿಳಾಸ ಕಳೆದು ಸ್ವರ್ಣಮ್ಮ ಸಿಗದಿದ್ದರೂ, ಕಂಪನಿಯಲ್ಲಿದ್ದ ಇತರರು ಮುಂದಕ್ಕೆ ಓದು ಎಂದು ಬುದ್ಧಿವಾದ ಹೇಳಿ ಊರಿಗೆ ಕಳಿಸಿದ್ದರು.

ಶಿರಸಿಯ ಕಾಲೇಜಿಗೆ ಹೋಗುವಾಗ ಸಂಗೀತ ಹಾಗೂ ಸಾಹಿತ್ಯ ಅಚ್ಚುಮೆಚ್ಚಿನ ವಿಷಯವಾಗಿದ್ದವು.ಆಗಾಗ ಕನ್ನಡ ಸಿನೆಮಾಗಳನ್ನು ನೋಡುವುದೂ,ಹಾಡುಗಳನ್ನು ಕಲಿತು ಗ್ಯಾದರಿಂಗ್ ನಲ್ಲಿ ಹಾಡಿ ಬಹುಮಾನ ಪಡೆದಿದ್ದನ್ನೂ, ರಾಣಾ ಅಮರಸಿಂಹ ಎಂಬ ನಾಟಕವನ್ನು ಧಾರವಾಡದ ಯೂತ್ ಫೆಸ್ಟಿವಲ್ನಲ್ಲಿ ಅಭಿನಯಿಸಿದ್ದನ್ನು ಸ್ಮರಿಸಿದ್ದಾರೆ.

೧೯೭೨ ರಲ್ಲಿ ಬಿ. ಎ.ಮುಗಿಸಿದ ಮೇಲೆ ತಾಯಿಯ ಆಶೀರ್ವಾದ ಪಡೆದು ಕಲಾವಿದನಾಗಿ ಗುಬ್ಬಿ ಕಂಪನಿ ಸೇರಲು ಬಯಸಿ ಬೆಂಗಳೂರಿಗೆ ಬಂದರು.ವೀರಣ್ಣನವರ ಮಾತಿನಿಂದ ಚೆನ್ನಬಸಪ್ಪನವರ ಧಾರವಾಡದ ಕ್ಯಾಂಪಿಗೆ ಸೇರ್ಪಡೆಯಾಗಿ ಗೇಟ್ ಕೀಪರ್,ಹೋಟೆಲ್ ಬಾಯ್ ಕೆಲಸ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟನೆ ಮಾಡುತ್ತಾ ೪೦ರೂಪಾಯಿ ಸಂಬಳ ಪಡೆಯುವಂತಾದರು.

ಒಮ್ಮೆ ಸ್ವರ್ಣಮ್ಮನವರ ಮನೆಯಲ್ಲಿ ನಿರ್ದೇಶಕ ಎಂ ಎನ್.ಪ್ರಸಾದರ ಭೇಟಿಯಾದಾಗ ತಮಗೆ ಏನಾದರೂ ಅವಕಾಶ ಕೇಳಿದಾಗ ಅವರು ನೋಡೋಣ…ಅದುವರೆಗೆ ನನ್ನ ಆಫೀಸ್ ಬಾಯ್ ಕೆಲಸ ಮಾಡು ಎಂದು ಸೇರಿಸಿ ಕೊಂಡಿದ್ದರು.ಸಂಬಳ ಅಂತೇನೂ ಇಲ್ಲದೆ ಬಂದವರು ಕೊಟ್ಟ ಟಿಪ್ಸ್ ನಲ್ಲಿ ದಿನ ದೂಡುತ್ತಿದ್ದರು. ಹನುಮಂತನಗರದಿಂದ ಗಾಂಧೀ ನಗರಕ್ಕೆ ದಿನವೂ ಬಸ್ಸಲ್ಲಿ ಓಡಾಡುತ್ತಿದ್ದಾಗ ಬಿಎಂಟಿಸಿ ಬಸ್ಸಿನ ಕಂಡೆಕ್ಟರ್ ಶಿವಾಜಿರಾವ್ ಗಾಯಕವಾಡ ಆಗಿದ್ದ ಈಗ ದೊಡ್ಡ ನಟರಾದ ರಜನೀಕಾಂತ್ ಅವರ ಪರಿಚಯವಾಗಿತ್ತು. ಕಾಸಿಲ್ಲದ ಗಿರಾಕಿ ಯಾದ ತಮ್ಮನ್ನು ಅವರು ಡೋರ್ ಹತ್ತಿರ ನಿಲ್ಲಿಸಿ, ಚೆಕ್ಕಿಂಗ್ ನವರು ಬಂದರೆ ತೊಂದರೆಯಾಗದಂತೆ ಬಸ್ ನಿಂತ ತಕ್ಷಣ ಇಳಿಯುವ ಸಲಹೆ ಕೊಟ್ಟು ಪುಕ್ಕಟೆ ಕರೆದೊಯ್ಯುತ್ತಿದ್ದರಂತೆ!!.

ಸ್ವರ್ಣಮ್ಮನವರು ಚಾಮುಂಡಿ ಸ್ಟುಡಿಯೋಕ್ಕೆ ಹೋದಾಗ ರಾಜ್ ಕುಮಾರ್ ಅವರನ್ನು ಪರಿಚಯ ಮಾಡಿಸಿದರು.ಅಲ್ಲಿ ಮೇಕಪ್ ಟೆಸ್ಟ್ ಮಾಡಿಸಿ “ಬಭ್ರುವಾಹನ” ಚಿತ್ರದ ಕೃಷ್ಣನ ಪಾತ್ರಕ್ಕೆ ಆಯ್ಕೆ ಮಾಡಿದ್ದರು.ಆದರೆ ಅರ್ಧಕ್ಕೆ ಶೂಟಿಂಗ್ ನಿಂತು ನಿರಾಶೆಯಾಗಿತ್ತು.

ಪುಟ್ಟಣ್ಣನವರ ಚಿತ್ರದಲ್ಲಿ ನಟಿಸಲು ಉದಯೋನ್ಮುಖ ನಟರು ಬೇಕಾಗಿದ್ದಾರೆ.ಎಂಬ ಜಾಹೀರಾತು ನೋಡಿ ಹೋಟೆಲ್ಗೆ ಹೋದರೆ ಅಲ್ಲಿ ಆಗಲೇ ಸಾವಿರಾರು ಜನರು ನಿಂತಿದ್ದರು.ಆದರೆ ಇವರು ಆಯ್ಕೆಯಾಗಿದ್ದರು!. ಅದೃಷ್ಟವೆಂದರೆ ಇದೇ ಎಂಬಂತೇ ನಿಂತು ಹೋಗಿದ್ದ ಬಬ್ರುವಾಹನ ಚಿತ್ರ ಮತ್ತೆ ಪ್ರಾರಂಭವಾಗಿತ್ತು.ಆಗಿನ ಸಂಧಿಗ್ಧ ಪರಿಸ್ಥಿತಿಯನ್ನು ಬಹಳ ಮನೋಜ್ಞವಾಗಿ ಇಲ್ಲಿ ವಿವರಿಸಲಾಗಿದೆ.

ಮುಂದೆ ಭಾಗ್ಯವಂತರು ಚಿತ್ರದಲ್ಲಿ ರಾಜ್ ಕುಮಾರ್ ಅವರ ಅಳಿಯನ ಪಾತ್ರ,ಪಡುವಾರಳ್ಳಿ ಪಾಂಡವರು, ಕೆಲವು ತಮಿಳು ಚಿತ್ರ, ಬೆಂಕಿಯಲ್ಲಿ ಅರಳಿದ ಹೂವು ರಂಗನಾಯಕಿ, ಚೆಲ್ಲಿದ ರಕ್ತ, ಮಾನಸ ಸರೋವರ, ತಾಯಿಯ ನುಡಿ, ಅಮೃತ ಘಳಿಗೆ , ಋಣ ಮುಕ್ತಳು ಮುಂತಾದ ಚಿತ್ರಗಳಲ್ಲಿ ನಟಿಸುವ ಅವಕಾಶ, ೧೯೮೩ರಲ್ಲಿ ಬೆಂಗಳೂರಲ್ಲಿ ಜಾಗಕೊಂಡು ಮನೆ ಕಟ್ಟಿದ್ದು, ೧೯೮೩ರಲ್ಲಿ ಮಂಗಳಾ ಅವರನ್ನು ಮದುವೆಯಾಗಿದ್ದು, ತಮ್ಮ ಇಬ್ಬರು ಗಂಡುಮಕ್ಕಳು, ಹಾಗೂ ಹುಟ್ಟೂರು ಶಿರಸಿಯಲ್ಲಿ ಚಿತ್ರೀಕರಣವಾದ ಮರ್ಯಾದೆ ಮಹಲು ಕುರಿತು ಅನೇಕ ವಿಷಯಗಳನ್ನು ತೆರೆದಿಟ್ಟಿದ್ದಾರೆ.

ತಾವು ಮೊದಲ ಕಾರನ್ನು ಕೊಂಡಿದ್ದು, ಅನೇಕ ದಿಗ್ಗಜ ನಟ ನಟಿಯರ ನಿರ್ದೇಶಕರ ಜೊತೆ ಸಹ ಕಲಾವಿದನಾಗಿ ನಟಿಸಿದ್ದು,ಒಲಿದ ಪ್ರಶಸ್ತಿಗಳು, ವಿದೇಶ ಪ್ರವಾಸ, ರಾಜಕೀಯ ನಂಟು, ಇತರ ಖ್ಯಾತ ನಟರಿಗೆ ಕಂಠದಾನ ನೀಡಿದ್ದು,ಕಿರುತೆರೆ ಅಭಿನಯ ಹೀಗೆ ಎಲ್ಲವನ್ನೂ ಸ್ಮರಿಸಿದ್ದಾರೆ.

ಪುಸ್ತಕದ ಕೊನೆಯಲ್ಲಿ ಶ್ರೀಯುತರು ನಡೆದು ಬಂದ ಹಾದಿಯಲ್ಲಿ ಚಿತ್ರ ಜಗತ್ತಿನ ಅನೇಕ ಗಣ್ಯರ ಜೊತೆಗಿರುವ ಬಣ್ಣದ ಚಿತ್ರಗಳು ಸೊಗಸಾಗಿವೆ. ಈ ಕೃತಿಯನ್ನು ಕಳೆದ ೨೬.೧೦.೨೦೨೫ ರಂದು ಶಿರಸಿಯ ಗಣೇಶ ನೇತ್ರಾಲಯದ ಸಭಾಂಗಣದಲ್ಲಿ ನಟಿ ಶ್ರೀಮತಿ ಪದ್ಮಾವಾಸಂತಿಯವರು ಬಿಡುಗಡೆ ಮಾಡಿದ್ದಾರೆ. ಇನ್ನಷ್ಟು ಮಾಹಿತಿಯನ್ನು ತಿಳಿಯಲು
ನೀವೂ ಪುಸ್ತಕ ಓದಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  •  ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW