ಈ ತುರಿಕೆ ಯಾಕೆ ಆಗುತ್ತೆ, ಹೇಗೆ ಆಗುತ್ತೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ?. ಲೇಖಕ ಸುದರ್ಶನ ಪ್ರಸಾದ್ ಅವರು ತುರಿಕೆಯ ಕುರಿತು ಬರೆದ ಒಂದು ಚಿಂತನ ಲೇಖನ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿದೆ, ತಪ್ಪದೆ ಓದಿ…
‘ಈ ದಿಲ್, ಹೃದಯ, ಹಾರ್ಟ್ ಅಂತಾರಲ್ಲಾ ಅದುಕ್ ಕೈ ಹಾಕಿ ಪರ ಪರ ಪರ ಅಂತ ಕೆರ್ಕೊಂಡ್ಬಿಟ್ಟಿದೀನಿ ಕಂಡ್ರೀ…’ ಅಂತ ಮುಂಗಾರುಮಳೆ ಚಿತ್ರದಲ್ಲಿ ಗಣೇಶ್ ಹೇಳುವ ಡೈಲಾಗ್ ಯಾರಿಗೆ ತಾನೇ ನೆನಪಿಲ್ಲ. ಹೃದಯಕ್ಕೆ ಕೈ ಹಾಕಿ ಕೆರೆದುಕೊಳ್ಳೋದು ಸಾಧ್ಯವೋ ಇಲ್ಲವೋ ಬೇರೆ ಮಾತು ಆದ್ರೆ ಎಲ್ಲರೂ ಆಗಾಗ ಮೈ ಕೈ ಕೆರೆತ ಅನುಭವಿಸಿಯೇ ಅನುಭವಿಸಿರುತ್ತೇವೆ ಅಲ್ವಾ. ಹಾಗಾದರೆ ಈ ತುರಿಕೆ ಯಾಕೆ ಆಗುತ್ತೆ, ಹೇಗೆ ಆಗುತ್ತೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ. ಒಮ್ಮೆ ಈ ಬರಹ ಓದುತ್ತಾ ಯೋಚಿಸಿ ನೋಡಿ..
ತುರಿಕೆ ಅಥವಾ ಕಡಿತ ಎನ್ನುವುದು ನಮ್ಮ ದೇಹ ನೀಡುವ ಒಂದು ಎಚ್ಚರಿಕೆ. ನಮ್ಮ ಸುತ್ತಮುತ್ತಲಿನ ಯಾವುದೋ ಒಂದು ವಸ್ತು ನಮ್ಮ ದೇಹಕ್ಕೆ ಸರಿಬರುತ್ತಿಲ್ಲ ಎಂದಾಗ ಅದರಿಂದ ದೂರವಾಗುವಂತೆ ನೀಡುವ ಸೂಚನೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಾವು ತುರಿಸುವ ಭಾಗವನ್ನು ಕೆರೆದುಕೊಳ್ಳುತ್ತೇವೆ. ಈ ಕೆರೆದುಕೊಳ್ಳುವಿಕೆ ಸಹಾ ಪ್ರಚೋದನೆಯ ರೀತಿ ವರ್ತಿಸಿ ಮತ್ತಷ್ಟು ತುರಿಕೆ ಉಂಟಾಗುತ್ತದೆ. ಒಂದು ಹಂತದವರೆಗೆ ಹೋಗುವ ಅದು ತಾನಾಗಿಯೇ ಮಾಯವಾಗಬಹುದು ಅಥವಾ ದೊಡ್ಡ ಗಾಯವೂ ಆಗಬಹುದು. ಗಾಯವಾದಲ್ಲಿ ಅದಕ್ಕೆ ಔಷಧೀಯ ಚಿಕಿತ್ಸೆ ಬೇಕು ಎನ್ನುವುದು ಸಹಾ ನಿಮಗೆಲ್ಲ ಗೊತ್ತೇ ಇದೆ. ಹಾಗಾದ್ರೆ ಈ ತುರಿಕೆ ಉಂಟಾಗುವುದು ಹೇಗೆ? ತುರಿಕೆ ಉಂಟಾದಾಗ ದೇಹದಲ್ಲಿ ಏನಾಗುತ್ತದೆ? ಕೆರೆದರೂ ಮತ್ತೇಕೆ ತುರಿಸುತ್ತದೆ? ಬನ್ನಿ ಒಂದಿಷ್ಟು ಚರ್ಚೆ ಮಾಡೋಣ.
ತುರಿಕೆಯನ್ನು ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಬಹುದು.

ಫೋಟೋ ಕೃಪೆ : israel21c
1. Inflammatory itching : ವೈದ್ಯಕೀಯ ಭಾಷೆಯಲ್ಲಿ pruritis ಎಂದು ಕರೆಯುವ ಇವು ದೇಹಕ್ಕೆ ಯಾವುದಾದರೂ ಅನಗತ್ಯ ವಸ್ತುಗಳು ತಾಗಿದಾಗ ಉಂಟಾಗುವ ತುರಿಕೆ. ಅಲರ್ಜಿ, ಇನ್ಫೆಕ್ಷನ್ ಹೀಗೆ ಇತ್ಯಾದಿ ಕಾರಣಗಳಿಂದ ಉಂಟಾಗುವ ಎಲ್ಲಾ ತುರಿಕೆಗಳು ಇದೇ ವಿಭಾಗದಲ್ಲಿ ಬರುತ್ತವೆ. ಸಾಮಾನ್ಯವಾಗಿ ಇವು ಚರ್ಮ ಕೆಂಪಾಗುವುದು, ಉರಿ, ನೋವು ಇತ್ಯಾದಿ ಇತರ ಲಕ್ಷಣಗಳನ್ನು ಸಹಾ ತೋರಿಸುತ್ತವೆ.

ಫೋಟೋ ಕೃಪೆ : prevention
2. Neuropathic itching: ಇದೊಂದು ನರ ಸಂಬಂಧಿ ಸಮಸ್ಯೆ ಎನ್ನಬಹುದು. ನರಗಳ ರಿಸೆಪ್ಟಾರ್ ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವಾಗ ಉಂಟಾಗುವ ತುರಿಕೆ. ಈ ತುರಿಕೆಯ ಜೊತೆ ನೋವು ಬೆಸೆದುಕೊಂಡಿರುವುದು ಸಾಮಾನ್ಯ.

3. Phycogenic itching: ತುಂಬಾ ವಿಚಿತ್ರವಾದ ಈ ತುರಿಕೆ ಮಾನಸಿಕ ಸಮಸ್ಯೆಯಿಂದ ಬರುವಂತದ್ದು. ದೇಹದ ಯಾವುದೋ ಭಾಗದಲ್ಲಿ ಏನೋ ಸರಿ ಇಲ್ಲ ಎಂದು ಮನಸ್ಸು ಆಗಾಗ್ಗೆ ಪ್ರಚೋದಿಸುವುದರಿಂದ ತುರಿಕೆ ಉಂಟಾಗುತ್ತದೆ. ಇದನ್ನು ತುರಿಕೆಯ ಗೀಳು ಅಂತಲೂ ಹೇಳಬಹುದು.
ಮೊದಲಿನ ತುರಿಕೆ ಉಂಟಾಗುವುದು ಬಾಹ್ಯ ಪ್ರಚೋದನೆಗಳಿಂದ Pollen allergy, dust allergy, food allergy ಮುಂತಾದ ಅಲರ್ಜಿಗಳು, ಚರ್ಮ ರೋಗಗಳಾದ Eczema, Psoriasis, ಒಣ ಚರ್ಮ, Pinworms, Scabies ಮುಂತಾದ ಇನ್ಫೆಕ್ಷನ್ ಗಳು ಈ ರೀತಿಯ ತುರಿಕೆ ಉಂಟುಮಾಡುತ್ತವೆ. ಇದಲ್ಲದೇ ಗರ್ಭಿಣಿಯರಲ್ಲಿ ಮತ್ತು ದೇಹದಾಢ್ಯ ವ್ಯಕ್ತಿಗಳಲ್ಲಿ ಚರ್ಮ ಹಿಗ್ಗುವಾಗ ಸಹಾ ಈ ತುರಿಕೆ ಉಂಟಾಗುತ್ತದೆ. ಈ ತುರಿಕೆ ಉಂಟಾದಾಗ ಎಲ್ಲರೂ ಎಚ್ಚೆತ್ತುಕೊಂಡು ಔಷಧಿಗಳ ಮೊರೆ ಹೋಗುತ್ತಾರೆ. ನಾನಾ ವಿಧಧ ಕ್ರೀಂ ಗಳು, ಮಾಯ್ಸ್ಚರೈಸರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ತುರಿಕೆ ನಿವಾರಿಸಲು ಸಹಾಯ ಮಾಡುತ್ತವೆ.

ಫೋಟೋ ಕೃಪೆ : google
ತುರಿಕೆ ಆರಂಭವಾಗುವುದು ಚರ್ಮದಲ್ಲಿರುವ specific sensory nerve terminal ಗಳು ಮೇಲೆ ಹೇಳಿದ ಪ್ರಚೋದನೆಗಳಿಗೆ ಒಳಪಟ್ಟಾಗ. ಈ ಪ್ರಚೋದನೆಗಳನ್ನು sensory nerve fibers ಗಳು ಮೆದುಳಿನ somatosensory ಭಾಗಕ್ಕೆ ಕೊಂಡೊಯ್ಯುತ್ತವೆ. ಇದರಿಂದ ಚಟುವಟಿಕೆ ಆರಂಭಿಸುವ primary motor cortex ಮತ್ತು supplementary motor area ಗಳು ಕಣ್ಣು, ಕೈಗೆ ಸಿಗ್ನಲ್ ರವಾನಿಸಿ ತುರಿಸುವ ಆ ಭಾಗವನ್ನು ಗಮನಿಸಲು, ಕೆರೆದುಕೊಳ್ಳಲು ಸೂಚಿಸುತ್ತದೆ. ಇವೆಲ್ಲವೂ ಎಷ್ಟು ವೇಗವಾಗಿ ನಡೆಯುತ್ತವೆ ಎಂದರೆ ಪ್ರಚೋದನೆ ಉಂಟಾದ ಸೆಕೆಂಡುಗಳ ಒಳಗಾಗಿ ನಾವು ಆ ಜಾಗವನ್ನು ನೋಡಿರುತ್ತೇವೆ, ನೋಡಿ ಮುಂದೇನು ಮಾಡಬೇಕು ಎಂಬುದನ್ನೂ ಯೋಚಿಸಿ ಅದನ್ನೂ ಮಾಡಿರುತ್ತೇವೆ. ಅದಾಗಲೇ ಚಟುವಟಿಕೆಯಲ್ಲಿ ನಿರತವಾಗಿರುವ ಸೂಕ್ಷ್ಮ nerve terminal ಗಳು ಕೆರೆದುಕೊಂಡದ್ದನ್ನೇ ಪ್ರಚೋದನೆ ಎಂದು ಭಾವಿಸಿ ನಿರಂತರವಾಗಿ ಮೆದುಳಿಗೆ ಸಿಗ್ನಲ್ ಕೊಡುತ್ತಲೇ ಇರುತ್ತವೆ. ಆದ್ದರಿಂದಲೇ ಈ ಪ್ರಕ್ರಿಯೆ ನಿರಂತರ.
ತುರಿಕೆಯ ಸಂದರ್ಭದಲ್ಲಿ ಮೆದುಳು ಬಿಡುಗಡೆ ಮಾಡುವ ಎರಡು ರಾಸಾಯನಿಕಗಳು Serotonin ಮತ್ತು Acetylcholine. ಈ Serotonin ನಮಗೆ ಖುಷಿಯ ಭಾವನೆ ನೀಡುವುದರಿಂದಲೇ ತುರಿಕೆಯನ್ನು ಕೆರೆದಾಗ ಹಿತ ಎನ್ನಿಸುವುದು, ಮತ್ತು Acetylcholine ತುರಿಕೆಯ ಭಾಗಕ್ಕೆ ಹೆಚ್ಚು ರಕ್ತ ರವಾನೆಯಾಗುವಂತೆ ರಕ್ತ ನಾಳಗಳನ್ನು ಹಿಗ್ಗಿಸುವುದರಿಂದಲೇ ಆ ಭಾಗ ಕೆಂಪಾಗುವುದು. ಹ್ಞಾಂ ಹಾಗೆಯೇ ಕೆರೆಯುವಾಗ ನಮ್ಮ ಕೈಯನ್ನು ಕಂಟ್ರೋಲ್ ಮಾಡುವುದು ಸಹಾ ಇದೇ acetylcholine.

ಫೋಟೋ ಕೃಪೆ : health.harvard
ಒಂದುವೇಳೆ ನರಮಂಡಲದ ಈ ಚಟುವಟಿಕೆಗಳು ವ್ಯತ್ಯಾಸವಾದರೆ ಉಂಟಾಗುವುದು Neuropathic itching. ನರಗಳು ಸರಿಯಾಗಿ ಸಿಗ್ನಲ್ ಕೊಂಡೊಯ್ಯಲು ಸೋಲುವುದು ಇದಕ್ಕೆ ಕಾರಣ. Nerve injury ಯಿಂದ Nerve damage ಆದಾಗ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ಮೆದುಳಿಗೆ ನೋವು ಮತ್ತು ತುರಿಕೆಯ ವಿಪರೀತ ಸಿಗ್ನಲ್ ಗಳು ರವಾನೆಯಾಗಿ ಆ ವ್ಯಕ್ತಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಸಾಧ್ಯವಾದಷ್ಟು ಬೇಗ ವೈದ್ಯಕೀಯ ನೆರವು ಪಡೆಯುವುದು ಇಂತಹಾ ವ್ಯಕ್ತಿಗಳಿಗೆ ಅತ್ಯವಶ್ಯಕ.
ಇದೆಲ್ಲದರ ಹೊರತಾಗಿ ಕಾಣಸಿಗುವ Psychogenic itching ಒಂದು ಅಪರೂಪದ ದೈಹಿಕ ಮಾನಸಿಕ ಸಮಸ್ಯೆ. ದೈಹಿಕವಾಗಿ ಆರೋಗ್ಯವಾಗಿರುವ ವ್ಯಕ್ತಿಗಳು ಸಹಾ ಒಂದಿಲ್ಲೊಂದು ದಿನ ಈ ಸಮಸ್ಯೆ ಅನುಭವಿಸಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಆತಂಕ ಮತ್ತು ಒತ್ತಡ. ಬೇಕಿದ್ದರೆ ಗಮನಿಸಿ ನೋಡಿ ನೀವು ಯಾವುದೇ ವಿಷಯಕ್ಕೆ ಹೆದರಿಕೊಂಡಾಗ, ಯಾವುದಾದರೂ ಕೆಲಸವನ್ನು ಅತೀ ಒತ್ತಡದಿಂದ ಮಾಡುತ್ತಿರುವಾಗ ನಿಮ್ಮ ದೇಹ ತುರಿಕೆಯ ಸಿಗ್ನಲ್ ಕೊಟ್ಟು ನಿಮ್ಮ ಗಮನವನ್ನು ಅದರತ್ತ ಸೆಳೆಯುತ್ತದೆ. ಮುಖವನ್ನೋ, ಕೈಯನ್ನೋ ಅಥವಾ ದೇಹದ ಇನ್ಯಾವುದೋ ಭಾಗವನ್ನು ಮುಟ್ಟಿಕೊಳ್ಳುವ ಅಥವಾ ತುರಿಸಿಕೊಳ್ಳಬೇಕೆಂಬ ಹಂಬಲ ನಿಮಗಾಗುತ್ತದೆ. ಇದೇ Psychogenic itching ನ ಲಕ್ಷಣ. ಸಾಮಾನ್ಯ ತುರಿಕೆ ಸಮಸ್ಯೆಯ ಪರಿಹಾರಕ್ಕೆ dermatologist ಬಳಿ ಹೋದರೆ ಈ ಸಮಸ್ಯೆ ಇರುವವರು ಮಾತ್ರ psychiatrist ಬಳಿ ಹೋಗಬೇಕಾಗುತ್ತದೆ, ಹಾಗೇ ದೈಹಿಕ ಲಕ್ಷಣಗಳು ಇದ್ದಲ್ಲಿ dermatologist ಬಳಿ ಔಷಧಿಯನ್ನು ಸಹಾ ಪಡೆಯಬೇಕಾಗುತ್ತದೆ. ಕೆಲವರಲ್ಲಿ ಇದೊಂದು ಗೀಳು ರೋಗವಾಗಿ ಕಾಡಬಹುದಾಗಿದ್ದು ಅಂತವರು ನಿರ್ಲಕ್ಷ್ಯ ವಹಿಸಬಾರದು.
ಒಟ್ಟಿನಲ್ಲಿ ತರಾವರಿ ತುರಿಕೆಯ ಕಥೆ ಹೇಳುತ್ತಾ ಹೋದರೆ ಇನ್ನೂ ಅನೇಕಾನೇಕ ವಿಷಯಗಳು ತೆರೆದುಕೊಳ್ಳುತ್ತವೆ. ಎಲ್ಲಾ ತುರಿಕೆಗಳಿಗೂ ಅಪಾಯಕಾರಿ ಅಲ್ಲದೇ ಇರುವುದರಿಂದ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅದರಲ್ಲೂ ತುರಿಕೆಯ ಕುರಿತು ಗರ್ಭಿಣಿ ಸ್ತ್ರೀಯರು ಅತೀ ಹೆಚ್ಚು ದೂರು ನೀಡುವುದನ್ನು ನೋಡುತ್ತೇವೆ, ಆದರೆ ಅದು ಆ ಸಮಯದ ಸಾಮಾನ್ಯ ದೈಹಿಕ ಲಕ್ಷಣವಾಗಿದ್ದು ಗುಳ್ಳೆ, ಕಜ್ಜಿ ಮುಂತಾದವು ಕಾಣಿಸಿದರೆ ಮಾತ್ರ ನಿರ್ಲಕ್ಷ್ಯಿಸದೇ ಇದ್ದರೆ ಮತ್ತೇನೂ ಸಮಸ್ಯೆಯಿಲ್ಲ. ಇನ್ನು ತುರಿಕೆಯ ಗೀಳು ನಿಮ್ಮನ್ನು ಕಾಡುತ್ತಿದ್ದರೆ ನೀವು ಮಾನಸಿಕವಾಗಿ ಒತ್ತಡದಲ್ಲಿದ್ದೀರಿ ಎಂದರ್ಥ. ಈ ಸಮಯದಲ್ಲಿ ಅಗತ್ಯಬಿದ್ದರೆ ಮಾನಸಿಕ ತಜ್ಞರ ಸಹಾಯ ಪಡೆದು ಒತ್ತಡವನ್ನು ಕಡಿಮೆ ಮಾಡಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ನಿಮಗೆ ಯಾವುದೇ ಆಹಾರ, ಔಷಧ ಮುಂತಾದವುಗಳ ಅಲರ್ಜಿಯಿದ್ದರೆ ನಿಮ್ಮ ವೈದ್ಯರ ಬಳಿ ಅದನ್ನು ಮುಕ್ತವಾಗಿ ಹೇಳಿಕೊಳ್ಳುವುದು ಸುರಕ್ಷಿತ. ದೇಹದ ಯಾವುದೇ ಭಾಗದಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್, ರಿಂಗ್ ವರ್ಮ್ ಇತ್ಯಾದಿ ಇದ್ದಲ್ಲಿ ಅದು ಅತೀ ಗುಪ್ತ ಭಾಗವಾಗಿದ್ದರೂ ಅಂಜದೇ ವೈದ್ಯಕೀಯ ನೆರವು ಪಡೆದು ಸಾಧ್ಯವಾದಷ್ಟು ಬೇಗ ಪರಿಹಾರ ಕಂಡುಕೊಳ್ಳುವುದು ಉತ್ತಮ. ಈ ತುರಿಕೆಯ ಕಥೆ ಓದಿದ ನಿಮಗೆಲ್ಲರಿಗೂ ತುರಿಕೆ ಸಮಸ್ಯೆಯಾಗಿ ಬಾಧಿಸದಿರಲಿ ಎಂದು ಕೋರುತ್ತಾ.
ಧನ್ಯವಾದಗಳೊಂದಿಗೆ…
- ಸುದರ್ಶನ ಪ್ರಸಾದ್
