‘ಜಾನಕಿಯ ಪ್ರಶ್ನೆ’ ಕವನ – ಜ್ಯೋತಿ ಕುಮಾರ್.ಎಂ

ಮರಳಿ ಕರೆತಂದ ಮಾರುತಿ ತಾಯಿ ಜಾನಕಿಯ ಅಂಗೈಲಿ,ಅಳುಕದಂತೆ. ಒಪ್ಪಿದನಾ, ಒಪ್ಪಿಸಿಕೊಂಡನ ರಾಮ?ಅಥವಾ ಒಪ್ಪಿದಂತೆ ನಟಿಸಿದನಾ?. ಜ್ಯೋತಿ ಕುಮಾರ್.ಎಂ(ಜೆ.ಕೆ.) ಅವರ ಲೇಖನಿಯಲ್ಲಿ ಜಾನಕಿಯ ವ್ಯಥೆ, ತಪ್ಪದೆ ಮುಂದೆ ಓದಿ…

ಅವಳು ಬೆಂಕಿ, ಬಿರುಗಾಳಿ.
ಯಾರ ಮೋಹಕ್ಕೂ ಅವಳು
ಸಿಲುಕಿರಲಿಲ್ಲ.
ಯಾರನ್ನು ಕೂಡ ಮನಸಿನಲಿ
ನೆನದಿರಲಿಲ್ಲ.
ತಾಳ್ಮೆಯಿಂದಲೆ ಎಲ್ಲವ ಸಹಿಸಿದಳು.||1||

ಮದುವೆಯಾಗಿ ಸರಿಯಾಗಿ
ತಿಂಗಳುಗಳು ಕಳೆಯಲಿಲ್ಲ
ಅರಮನೆಯಲಿ.
ಮರುಮಾತನಾಡದೇ
ಉಟ್ಟ ಬಟ್ಟೆಯಲಿ ಬರೀ ಕೈಲಿ
ಹಿಂಬಾಲಿಸಿದಳು ಅವಳು,ರಾಮನ.||2||

ಹದಿನಾರು ವರ್ಷಗಳು
ಏನನ್ನೂ ಕೇಳಿರಲಿಲ್ಲ
ರಾಮನ ನಿಷ್ಕಲ್ಮಶ
ಅನುರಾಗವ
ಹೊರೆತು ಪಡಿಸಿ.
ಕೇಳಿದ್ದು ಒಂದೇ ಒಂದು
ಬಂಗಾರದ ಜಿಂಕೆ.||3||

ರಾವಣ ಸೆರೆ ಹಿಡಿದರೆ
ಅವಳೆದೇನು ತಪ್ಪು?
ಜಿಂಕೆಯು ದಕ್ಕಲಿಲ್ಲ
ದಶಮುಖನ ಕಪಿ ಮುಷ್ಟಿಯು
ಸಹ.
ಒಮ್ಮೆಯೂ ನೋಡಲಿಲ್ಲ
ದಶಕಂಠನ ಮುಖವ,
ರಾಮ ನಾಮ ಜಪದ ಹೊರೆತು.||||4||

ಮರಳಿ ಕರೆತಂದ ಮಾರುತಿ
ತಾಯಿ ಜಾನಕಿಯ
ಅಂಗೈಲಿ,ಅಳುಕದಂತೆ.
ಒಪ್ಪಿದನಾ,ಒಪ್ಪಿಸಿಕೊಂಡನಾ
ರಾಮ?ಅಥವಾ
ಒಪ್ಪಿದಂತೆ ನಟಿಸಿದನಾ?.||5||

ಸಾಮಾನ್ಯ ಪ್ರಜೆಯ ಮಾತು
ಕೇಳಿ ಧರಣಿಯಂತಹ
ಜಾನಕಿಯ ಬೆಂಕಿಗೆ
ದೂಡಿದನು,ರಾಮ.
ನಿಜಕ್ಕೂ
ಸೀತೆ ಅಂದೆ,ಬೆಂದು ಹೋದಳು.
“ಒಂದೇ,ಒಂದು ಮಾತು ಕೇಳು
ವಲ್ಲಭ!,ಈ ಸೀತಾ
ಅಗ್ನಿಯಷ್ಟೆ ಪವಿತ್ರಳು,
ಸಾಕು ನನ್ನೀ ಜನುಮ,
ನೀನು ನನ್ನ ನಂಬದಾದ ಮೇಲೆ”.||6||

ಇನ್ನು ನಾನು
ಇದ್ದರೂ ಸತ್ತಂತೆ.
ಸತ್ತರೂ ನಾನು
ನಿನಗೆ ಮಾತ್ರ
ಸ್ವಂತ.
“ನೀನು ಕರೆದಾಗ ಯಾವುದಕ್ಕೂ,
ಏನನ್ನೂ ನಾನು ಕೇಳಿರಲಿಲ್ಲ.
ಆದರೆ,ನೀನು
ಯಾಕೆ
ನನ್ನ ಏನೂ
ಕೇಳಲಿಲ್ಲ”.||8||


  • ಜ್ಯೋತಿ ಕುಮಾರ್.ಎಂ(ಜೆ.ಕೆ.) ಜ್ಯೋತಿ ಕುಮಾರ್.ಎಂ(ಜೆ.ಕೆ.),ಇವರು ಓದಿದ್ದು,ಎಮ್,ಎಸ್ಸಿ.ಎಮ್,ಇಡಿ.ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು.ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.ಸದ್ಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ಹವ್ಯಾಸಿ ಬರಹಗಾರರಾಗಿದ್ದು,ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು,ಮಂಗಳ,ನಿಮ್ಮೆಲ್ಲರ ಮಾನಸ,ಜೀವನಾಡಿ ಪತ್ರಿಕೆ, ಬುಕ್ ಬ್ರಹ್ಮ,ಸಂಗಾತಿ,ಕೆಂಡಸಂಪಿಗೆ,ಮಿಂಚುಳ್ಳಿ,ಪಂಜು,ಆಕೃತಿ,ಶ್ರಾವಣ ಮ್ಯಾಗಝೀನ್ ಇವುಗಳಲ್ಲಿ ಪ್ರಕಟವಾಗಿವೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading