ಯಾರೋ ಕಟುಕರು ಬಂದರು. ಈ ಕಲ್ಲುಬಂಡೆ ತುಂಬಾ ಚೆನ್ನಾಗಿದೆ, ಇದೇ ಆಗುತ್ತದೆಂದು ನನ್ನನ್ನು ಪರೀಕ್ಷಿಸಿದರು. ಇನ್ಯಾರೋ ನನ್ನನ್ನು ಗುತ್ತಿಗೆಗೆ ತೆಗೆದುಕೊಂಡರು. ನನ್ನನ್ಯಾರು ಕೇಳಲೂ ಇಲ್ಲ, ನನಗೆ ಯಾರು ಹೇಳಲೂ ಇಲ್ಲ. ಮಂಗಳ ಎಂ ನಾಡಿಗ್ ಅವರು ಬರೆದ ಕಲ್ಲಿನ ನೋವಿನ ಕುರಿತಾದ ಪ್ರಬಂಧವನ್ನು ತಪ್ಪದೆ ಮುಂದೆ ಓದಿ…
ಹಾ! ನಾನು ಯಾರೆಂದು ತಿಳಿಯಿತೇ? ಅದೇ ನೀವೆಲ್ಲರೂ ಕಲ್ಲುಬಂಡೆ, ಕಲ್ಲುಹೃದಯ ಎಂದೆಲ್ಲಾ ನನ್ನ ಹೆಸರನ್ನು ಸೇರಿಸಿ ಬೈಯುತ್ತೀರಲ್ಲ ಅವನೇ ನಾನು. ನಾನು ಕಲ್ಲಾಗಿ ಇಷ್ಟು ಕಠಿಣವಾಗಿರದಿದ್ದರೆ ನಿಮ್ಮ ಉಪಯೋಗಕ್ಕೆ ಬಾರದ ವಸ್ತುವಾಗುತ್ತಿದ್ದೆ. ಅದರ ಅರಿವು ನಿಮಗಿಲ್ಲ, ಹೋಗಲಿಬಿಡಿ. ಯಾರ ತಂಟೆಗೂ ಹೋಗದೇ, ಯಾರಿಗೂ ತೊಂದರೆ ಕೊಡದೇ, ಬಿಸಿಲು, ಮಳೆ, ಚಳಿಗೆ ಎದೆಯೊಡ್ಡಿ ನಿಂತವನು ನಾನು. ನನ್ನಲ್ಲಿ ಅಲ್ಲಲ್ಲಿ ಚಿಕ್ಕಪುಟ್ಟ ಗಿಡಗಳು ಬೆಳೆದವು. ಕಪ್ಪೆ ಮುಂತಾದ ಕ್ರಿಮಿಕೀಟಗಳು ನನ್ನ ಸಂದಿಗೊಂದಿಗಳಲ್ಲಿ ನೆಲೆಸಿದವು. ಅನೇಕರು ಬಂದರು. ನನ್ನ ಮೇಲೆ ಕಾಲುಚಾಚಿ ಕುಳಿತರು. ನನ್ನ ಚಿಕ್ಕ ಚಿಕ್ಕ ಭಾಗವನ್ನು ಅವರ ಸಮಯ ಕಳೆಯಲೆಂದು ತೆಗೆದುಕೊಂಡು ಗುರಿಯಿಟ್ಟು ಎದುರಿಗಿರುವ ಹೊಳೆಗೆ ಹೊಡೆದರು. ಶುಭ್ರವಾದ ನೀರು ಒಮ್ಮೆ ಕಲಕಿತು. ಇಬ್ಬರು ಪ್ರೇಮಿಗಳು ಬಂದು ಜೊತೆಯಾಗಿ ಕೈಕೈ ಹಿಡಿದು ಪ್ರೇಮರಾಗ ಹಾಡಿದರು. ಅವರ ಮಾತು ಕೇಳಿ ಕಲ್ಲೆದೆಯ ನನಗೂ ಮೊದಲಬಾರಿ ನಾಚಿಕೆಯಾಯಿತು. ನಾಚಿಕೊಳ್ಳಬೇಕೆಂಬಷ್ಟರಲ್ಲಿಯೇ ಚೂಪಾದ ವಸ್ತುವನ್ನು ತೆಗೆದುಕೊಂಡು ನನ್ನನ್ನು ಕೆತ್ತಿದರು, ಅವರ ಪ್ರೀತಿಯ ಪ್ರದರ್ಶನಕ್ಕೆಂದು. ಏಕೆಂದರೆ, ಅವರ ಹೃದಯ ತೆಗೆದು ತೋರಿಸಲಾಗುವುದಿಲ್ಲವಲ್ಲ. ಕೆತ್ತುವಾಗ ನನಗಾದ ಹೃದಯದ ನೋವು ಅವರಿಗೆ ಕೇಳಿಸಲೇ ಇಲ್ಲ. ತಮ್ಮಿಬ್ಬರ ಹೆಸರು ಬರೆದು ಏನನ್ನೋ ಸಾಧಿಸಿದ ತೃಪ್ತಿಯಲ್ಲಿ ಹಿಂದಿರುಗಿದರು. ಆ ಕತ್ತಲೆಯ ರಾತ್ರಿ ನನ್ನ ಪಾಲಿಗೆ ಕರಾಳವಾಗಿ ಕಣ್ಣೀರು ಸುರಿಸುತ್ತಲೇ ಇದ್ದೆ.

ಫೋಟೋ ಕೃಪೆ : google
ಸ್ನೇಹಿತರು, ಕುಟುಂಬದವರು ಎಲ್ಲರೂ ಬಂದು ನನ್ನ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ತಂದ ಬುತ್ತಿಗಳ ಬಿಚ್ಚಿ, ಹಂಚಿ ತಿಂದು, ಹರಟುತ್ತಾ ತಮ್ಮ ದಿನವನ್ನು ಸಿಹಿ ನೆನಪಾಗಿಸಿಕೊಳ್ಳುತ್ತಿದ್ದರು. ಚೆಂದದ ಪರಿವಾರ, ಮುದ್ದು ಮಕ್ಕಳ ತೊದಲು ಮಾತು,ಅವರ ಆಟ, ಓಟ, ಸ್ನೇಹಿತರ ಗಟ್ಟಿ ಸ್ನೇಹ ಎಲ್ಲವೂ ನನಗೆ ಖುಷಿ ಕೊಡುತ್ತಿತ್ತು. ಕೆಲವೊಮ್ಮೆ ಎಷ್ಟು ದಿನ ಕಳೆದರೂ ಯಾರೂ ಬರುತ್ತಿರಲಿಲ್ಲ. ಕಾಯುತ್ತಲೇ ದಿನ ಕಳೆಯುತ್ತಿತ್ತು. ಬಿಸಿಲಿಗೆ ಕಾದ ನನ್ನ ಮೈಗೆ ವರುಣ ತಂಪೆರೆಯುತ್ತಿದ್ದ. ಹಕ್ಕಿ,ಪಕ್ಷಿಗಳು ಬಂದು ಕುಳಿತಾಗ ಹಗುರಾದ ಅನುಭವ. ಅವುಗಳ ಚಿಲಿಪಿಲಿ ನಾದ ಜೋಗುಳದಂತೆನಿಸಿ, ನನ್ನ ಮೇಲೆ ಬೆಳೆದ ಪಾಚಿಯೇ ಹೊದಿಕೆಯಂತಾಗಿ ಸುಖವಾಗಿ ನಿದ್ರಿಸುತ್ತಿದ್ದೆ. ಬೆಳಿಗ್ಗೆ ಮೂಡಿದ ರವಿಯೇ ನನ್ನನ್ನು ಎಚ್ಚರಿಸುತ್ತಿದ್ದ. ಎಳೆಬಿಸಿಲು ಮೈಮೇಲೆ ಬಿದ್ದಾಗ ಹಾಯಾದ ಅನುಭವ. ರವಿಯನ್ನೊಮ್ಮೆ ನೋಡಿ ಕಣ್ಣು ಮಿಟುಕಿಸುತ್ತಿದ್ದೆ. ಅವನೂ ಒಂದು ಮುಗುಳ್ನಗೆ ಬೀರುತ್ತಿದ್ದ.
ಹೀಗಿರುವಾಗ ಯಾರೋ ಕಟುಕರು ಬಂದರು. ಈ ಕಲ್ಲುಬಂಡೆ ತುಂಬಾ ಚೆನ್ನಾಗಿದೆ, ಇದೇ ಆಗುತ್ತದೆಂದು ನನ್ನನ್ನು ಪರೀಕ್ಷಿಸಿದರು. ಇನ್ಯಾರೋ ನನ್ನನ್ನು ಗುತ್ತಿಗೆಗೆ ತೆಗೆದುಕೊಂಡರು. ನನ್ನನ್ಯಾರು ಕೇಳಲೂ ಇಲ್ಲ, ನನಗೆ ಯಾರು ಹೇಳಲೂ ಇಲ್ಲ. ನೂರಾರು ಕೆಲಸಗಾರರು ಬಂದರು. ನನ್ನನ್ನು ಅವರಿಗೆ ಬೇಕಾದಂತೆ ಭಾಗ ಮಾಡಿಕೊಂಡೊಯ್ದರು. ಅತ್ತೆ,ಅತ್ತೆ, ಅವರಿಗೆ ಕೇಳಲೆಂದು ಜೋರಾಗಿ ಅತ್ತೆ. ಅವರ ಕಿವುಡಿಗೆ ನಾ ಮೂಕವಾಗಿ ಬಿಕ್ಕಳಿಸಿದೆ. ಏಕೆಂದರೆ, ಉಳಿಯ ಪೆಟ್ಟಿಗೆ ಅಳುವ ಶಕ್ತಿಯೂ ನನ್ನಲ್ಲಿರಲಿಲ್ಲ. ಸುಸ್ತಾಗಿ ಮೈಯ್ಯಲ್ಲಿ ಶಕ್ತಿಯೇ ಇಲ್ಲದಂತಾಗಿ ಕುಸಿದುಬಿದ್ದೆ.

ಫೋಟೋ ಕೃಪೆ :google
ಹಗಲು-ರಾತ್ರಿಯ ಅರಿವಿಲ್ಲದೆ ಕಳೆದೆ. ಒಂದು ದಿನ ದಾರಿಹೋಕರ ಮಾತು ಕೇಳಿಸಿತು. ನನ್ನ ಮುಂದಿರುವ ಹೊಳೆಯ ಎದುರೇ ದೇವಸ್ಥಾನ ಕಟ್ಟುತ್ತಾರೆಂದು. ಅದಕ್ಕೆ ಈ ಕಲ್ಲನ್ನೇ ಉಪಯೋಗಿಸುತ್ತಾರೆಂದು. ಎಲ್ಲೋ ಒಂದುಕಡೆ ಆಶಾಭಾವನೆ ಮೂಡಿತು. ನನ್ನ ಭಾಗ ನನ್ನ ಕಣ್ಣೆದುರೇ ಇರುತ್ತದೆ. ನಾನು ದಿನಾ ನೋಡಬಹುದೆಂದು. ಅಂತೆಯೇ ತಿಂಗಳಾನುಗಟ್ಟಲೆ ನಡೆದ ದೇವಸ್ಥಾನದ ಕಟ್ಟಡದ ಕೆಲಸ ಮುಗಿಯಿತು. ನನ್ನ ಭಾಗ ಅದರ ಮೆಟ್ಟಿಲಾಯಿತು. ಕಂಡು ಖುಷಿಯಾಯಿತು. ಕಳೆದುಕೊಂಡದ್ದು ಮತ್ತೆ ಸಿಕ್ಕಂತ ಅನುಭವ. ಹೀಗೆ ಸಂತೋಷದಿಂದಿರುವಾಗಲೇ ಎಲ್ಲರೂ ತುಳಿಯಲು ಪ್ರಾರಂಭಿಸಿದರು. ನನ್ನ ಹೃದಯವನ್ನೇ ಕಿತ್ತಂತಾಯಿತು. ನೋವಾಯಿತು, ಕಣ್ಣೀರು ಸುರಿಯಿತು. ಅಂದೂ ನಾನು ಅಸಹಾಯಕ, ಇಂದೂ ಅಸಹಾಯಕ. ಕಾಲ ಬದಲಾದರೂ,ಜನ ಬದಲಾದರೂ ನನ್ನ ಬದುಕಂತೂ ದಿನದಿನಕ್ಕೂ ಶೋಚನೀಯ. ರಾತ್ರಿಯಾಗುವ ಮೊದಲೇ ಮುಸುಕೆಳೆದು ಮಲಗಿಬಿಟ್ಟೆ. ಬೆಳಿಗ್ಗೆ ಎಚ್ಚರಾದರೂ ಏಳುವ ಮನಸ್ಸಿಲ್ಲ. ಹಾಗಿರುವಾಗಲೇ ಕೇಳಿದ ಮಾತು ನನ್ನನ್ನು ಚೆಂಗನೆ ಏಳುವಂತೆ ಮಾಡಿದ್ದು. ” ಆ ದೇವರ ಮೂರ್ತಿ ಇದ್ಯಲ, ಅದು ಈ ಕಲ್ಲಿಂದಲೇ ಮಾಡಿದ್ದು”. ನಾಳೆ ಅದರ ಪ್ರತಿಷ್ಠಾಪನೆ ಇದೆ. ಊರವರೆಲ್ಲ ಸೇರುತ್ತಾರೆ. ಬೆಳಿಗ್ಗೆಯೇ ಹೋಮ-ಹವನ ಎಲ್ಲ ವಿಧಿಯುಕ್ತವಾಗಿ ಪುರೋಹಿತರಿಂದ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತದೆ. ಅಂತೂ ನಮ್ಮ ಊರಲ್ಲೂ ಒಂದು ಆಂಜನೇಯ ದೇವಸ್ಥಾನವಾಯಿತು. ಅದೇ ಖುಷಿ ಎಂದು ತಮ್ಮಷ್ಟಕ್ಕೆ ಮಾತನಾಡುತ್ತಾ ಮುಂದೆ ಸಾಗಿದರು.
ನನಗೋ ಮತ್ತೊಮ್ಮೆ ಜನ್ಮಪಡೆದ ಸಾರ್ಥಕಭಾವ. ನಂಬಲಾಗದೇ ಸುತ್ತಮುತ್ತ ನೋಡಿದೆ. ತಂಗಾಳಿ ಬೀಸುತ್ತಿತ್ತು. ಹೂಗಳೆಲ್ಲ ಅರಳಿ ನಗುತ್ತಾ ಶುಭ ಕೋರುತ್ತಿದ್ದವು. ಕೊರೆಸಿಕೊಂಡ, ತುಳಿಸಿಕೊಂಡ ನೋವೆಲ್ಲ ಮಾಯವಾಗಿತ್ತು. ದೇವರ ಪಾದದ ಧೂಳಾದರೂ ಸಾಕೆಂದಿದ್ದ ನನಗೆ ದೇವರ ವಿಗ್ರಹವಾಗುವ ಯೋಗ. ಆ ದಿನವೆಲ್ಲಾ ನಿದ್ರೆಯೇ ಬರಲಿಲ್ಲ. ರವಿಗೂ ಏಳಿಸುವ ಕೆಲಸವಿಲ್ಲ. ಅವನಿಗಿಂತ ಮುಂಚೆ ನಾನೇ ಎದ್ದಿದ್ದೆ. ಗುಡಿಯ ಬಾಗಿಲು ತೆರೆದಿತ್ತು. ಜನಸಂದಣಿ ಸೇರಿತ್ತು. ಮಂತ್ರ-ಘೋಷಗಳು ಮೊಳಗಿದ್ದವು. ಘಂಟೆ -ಜಾಗಟೆಗಳ ಸದ್ದು ಇಡೀ ಊರಿಗೇ ಕೇಳಿಸುತ್ತಿತ್ತು. ವಿಧಿಯುಕ್ತವಾಗಿ ಮೂರ್ತಿ ಪ್ರತಿಷ್ಠಾಪನೆಯಾಗಿತ್ತು. ನನ್ನ ಅದೃಷ್ಟಕ್ಕೆ ನನ್ನ ಎದುರಲ್ಲೇ ಗರ್ಭಗುಡಿಯ ಬಾಗಿಲು. ಇಲ್ಲಿಂದಲೇ ನನ್ನ ಭಾಗದ ಪೂಜೆ ನೋಡಿ ತೃಪ್ತಿಪಟ್ಟೆ.
- ಮಂಗಳ ಎಂ ನಾಡಿಗ್
