‘ಇರುವೆಗಳು ಮತ್ತು ಆಗಂತುಕ’ ಪುಸ್ತಕ ಪರಿಚಯ

‘ಇರುವೆಗಳು ಮತ್ತು ಆಗಂತುಕ’ ಎಂಬ ಮಕ್ಕಳ ಕಥೆ ಪುಸ್ತಕ ಬಂದಿದೆ. ಇದನ್ನು ಅನುಪಮಾ ಕೆ. ಬೆಣಚಿನಮರ್ಡಿ ಅವರು ಮಕ್ಕಳಿಗಾಗಿ ಹೊರಗೆ ತಂದಿದ್ದಾರೆ, ರಘು ರಾಮ್ ಅವರು ಪುಸ್ತಕದ ಕುರಿತು ಓದುಗರ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಇರುವೆಗಳು ಮತ್ತು ಆಗಂತುಕ
ಲೇಖಕಿ : ಅನುಪಮಾ ಕೆ. ಬೆಣಚಿನಮರ್ಡಿ
ಪ್ರಕಾರ : ಮಕ್ಕಳ ಕತೆಗಳು

ಸಾಕು ಪ್ರಾಣಿಗಳಿಗೆ ಹೆಸರನ್ನು ಇಡುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಹಸುಗಳಾದರೆ ಗಂಗೆ, ಗೌರಿ, ತುಂಗಭದ್ರಾ ಹೆಸರುಗಳು ಎಲ್ಲರ ಬಾಯಲ್ಲಿ ಬಹಳ ಕಾಲದಿಂದ ನಲಿದಾಡುತ್ತಿವೆ. ಟಾಮಿ, ರೂಬಿ, ಚಾರ್ಲಿ ಎಂಬ ಮುದ್ದು, ಮುದ್ದಾದ ಹೆಸರುಗಳು ಸಾಕು ನಾಯಿಗಳ ಪಾಲಾಗಿವೆ. ಸಾಕು ಪ್ರಾಣಿಗಳಿಗೆ ಇರುವ ಈ ಸವಲತ್ತು ಬೇರೆ ಪ್ರಾಣಿಗಳಿಗಿಲ್ಲ. ಅದರಲ್ಲೂ ಸಣ್ಣ ಕೀಟ (ಇನ್ಸೆಕ್ಟ್)ವಾದ, ಸಾಲು ಸಾಲಾಗಿ ಹರಿದು ಹೋಗುವ ಇರುವೆಗೆ ಹೆಸರಿಡಲು ಸಾಧ್ಯವೇ?. ಗೊತ್ತಿಲ್ಲ ಬಿಡಿ!

ನಿಮ್ಮ ಮನೆಯಲ್ಲಿ ಎಲ್ಲಾದರೂ ಒಂದು ನಾಲ್ಕು ಕಾಳು ಸಕ್ಕರೆ ಚೆಲ್ಲಿ. ನಿಮ್ಮ ಫ್ಲಾಟ್ ಬಹು ಮಹಡಿಯ ಕಟ್ಟಡದ ತುಟ್ಟ ತುದಿಯಲ್ಲಿ ಇದ್ದರೂ, ಇರುವೆಗಳು ಎಲ್ಲಿಂದಲೋ ಪ್ರತ್ಯಕ್ಷವಾಗುತ್ತವೆ. ಈ ಇರುವೆಗಳಿಗೆ ಹೆಸರಿಟ್ಟು ಕಥೆ ಬರೆಯಲು ಸಾಧ್ಯವೇ?. ಮನಸ್ಸಿದ್ದರೆ ಮಾರ್ಗ. ಈಗ ಇಲ್ಲೊಂದು ‘ಇರುವೆಗಳು ಮತ್ತು ಆಗಂತುಕ’ ಎಂಬ ಮಕ್ಕಳ ಕಥೆ ಪುಸ್ತಕ ಬಂದಿದೆ. ಕನ್ನಡ ವರ್ಣಮಾಲೆಯ ‘ಕಚಟತಪ’ವನ್ನ ಆಧಾರಿಸಿ, ಇಲ್ಲಿ ಕಿಟ್ಟಿ, ಚಿಟ್ಟಿ, ಟಿಟ್ಟಿ, ತಿಟ್ಟಿ, ಮತ್ತು ಪಿಟ್ಟಿಯೆಂಬ ಇರುವೆಗಳಿಗೂ ಮುದ್ದಾದ ಹೆಸರುಗಳನ್ನು ಇಟ್ಟಿರುವ ಕಥೆ ಈ ಪುಸ್ತಕ ದಲ್ಲಿದೆ. ಈ ಇರುವೆಗಳು ಆಹಾರ ಹುಡುಕಿ ಹೊರಟಾಗ ಒಬ್ಬ ಆಗಂತಕ ಎದುರಾಗುತ್ತಾನೆ. ಅವನ್ಯಾರು? ಸ್ನೇಹಿತನೇ ಅಥವಾ ಶತ್ರುವೇ? ಅವನೇನು ಮಾಡಿದ? ನಮ್ಮ ಜೀವನದಲ್ಲಿ ಆಗಂತಕರನ್ನು ಬಂದಾಗ ಆಗುವ ರೀತಿಯಲ್ಲಿ, ಕಿಟ್ಟಿ, ಚಿಟ್ಟಿ, ಟಿಟ್ಟಿ, ತಿಟ್ಟಿ ಮತ್ತು ಪಿಟ್ಟಿ ಜೀವನದಲ್ಲೂ ಆಯಿತಾ? ಇದೆಲ್ಲವನ್ನ ಕಥೆ ಓದಿ ತಿಳಿದರೆ ಚೆನ್ನ.

ಅಂದಹಾಗೆ, ಈ ಕಥೆ ಬರೆದವರು ವೃತ್ತಿಯಲ್ಲಿ ಇಂಜನೀಯರ್ ಆದರೂ ಪ್ರವೃತ್ತಿಯಲ್ಲಿ ಸೃಜನಶೀಲ ಬರಹಗಾರರಾದ ಶ್ರೀಮತಿ ಅನುಪಮಾ ಕೆ. ಬೆಣಚಿನಮರ್ಡಿಯವರು. ‌ ಈ ಮಕ್ಕಳ ಪುಸ್ತಕವನ್ನು ದಿನಾಂಕ 13.4.24ರಂದು ‘ಅಟ್ಟ ಗಲಾಟ’ ಪುಸ್ತಕ ಮಳಿಗೆಯಲ್ಲಿ ಸಣ್ಣ ಸಮಾರಂಭದಲ್ಲಿ ಬಿಡುಗಡೆ ಮಾಡಿದ್ದಾರೆ. ಪುಸ್ತಕ ಬಿಡುಗಡೆಯ ನೆವದಲ್ಲಿ, ಎರಡು ಮಾತು ಎಂದು ಹೇಳಿ ಉದ್ದದ ಭಾಷಣ ಮಾಡದೆ, ಮಕ್ಕಳ ಕೈಲಿ ಇರುವೆಯ ಚಿತ್ರ ಬರೆಸುವುದರ ಜೊತೆಗೆ ರಾಜನಿಗೆ ಉಬ್ಬುಬ್ಬಾಗಿ, ಬಿಸಿ ಬಿಸಿಯಾಗಿ, ಮೆತ್ತ ಮೆತ್ತಗೆ, ಹೀಗೆ ಹರಿದು, ಹೀಗೆ ತಿಂದರೆ, ಹಾಗೇ ಕರಗಿ ಹೋಗುವ ಚಪಾತಿ ಮಾಡುವ ಕಥೆ ಹೇಳುತ್ತಾ ಇರುವೆಯ ಜೀವನದ ಬಗ್ಗೆ ಕುತೂಹಲ ಹುಟ್ಟಿಸಿದ ಸುಂದರ, ಸಮಾರಂಭದಲ್ಲಿ ಆ ಮಕ್ಕಳ ಕೈಲೇ ಪುಸ್ತಕ ಬಿಡುಗಡೆ ಮಾಡಿಸಿದ್ದು ಒಂದು ವಿಶೇಷವೇ ಸರಿ. ಅದನ್ನು ನೋಡುವ ಭಾಗ್ಯ ನನಗೆ ಸಿಕ್ಕಿತ್ತು.

ಇದೊಂದು ವರ್ಣರಂಜಿತ ಪುಸ್ತಕ. ನೋಡಿದ ತಕ್ಷಣ ಮನ ಸೆಳೆಯುವ, ಸಂದರ್ಭದಕ್ಕೆ ತಕ್ಕಂತೆ ಇರುವೆಗಳ ನೈಜ ಜೀವನದ ಚಿತ್ರಗಳನ್ನು ಹೊಂದಿರುವ ಪುಸ್ತಕ. ಈ ಚಿತ್ರಗಳನ್ನು ಬರೆದವರು ವೃತ್ತಿಯಲ್ಲಿ ಇಂಜನೀಯರ್ ಆದರೂ ಪ್ರವೃತ್ತಿಯಲ್ಲಿ ಮಕ್ಕಳ ಚಿತ್ರಕಲೆಯಲ್ಲಿ ವಿಶೇಷವಾಗಿ ಅಭ್ಯಾಸ ಮಾಡಿರುವ ಶೈಲಜಾ. ಎಸ್. ರವರು. ಕಾಲ್ಪನಿಕ ಕಥೆಗೆ ವೈಜ್ಞಾನಿಕ ಸ್ಪರ್ಷ ನೀಡಿರುವುದು ಈ ಪುಸ್ತಕದ ವಿಶೇಷ ಎಂದು ಬೆನ್ನುಡಿಯಲ್ಲಿ ಡಾ.ಅಭಿಜಿತ್ ರವರು ಹೇಳಿರುವುದು ಸರಿಯಾಗಿದೆ. ಈ ಪುಸ್ತಕ “Ants and the Stranger” ಎಂದು ಇಂಗ್ಲಿಷ್ನಲ್ಲೂ ಬಿಡುಗಡೆಯಾಗಿದೆ.

ಶ್ರೀಮತಿ ಅನುಪಮಾ ಕೆ ಬೆಣಚಿನಮರ್ಡಿಯವರು ಈಗಾಗಲೇ “ಕೊಂಚಿಗೆಯ ಸಾಹಸ” ಮತ್ತು ಅದರ ಇಂಗ್ಲಿಷ್ ಅವತರಣಿಕೆ “Adventures of Konchige” ಮತ್ತು “ಡಿಟೆಕ್ಟೀವ್ ಪ್ರಣವ್” ಎಂಬ ವರ್ಣರಂಜಿತ ಮಕ್ಕಳ ಪುಸ್ತಕಗಳನ್ನು ಬರೆದು ಬಿಡುಗಡೆ ಮಾಡಿದ್ದಾರೆ. ‘ಅವ್ವ ಪುಸ್ತಕ’ ಈ ಪುಸ್ತಕಗಳನ್ನು ಕೈಗೆಟೆಕುವ ಬೆಲೆಯಲ್ಲಿ ಸುಂದರವಾಗಿ ಮುದ್ರಣ ಮಾಡಿ ತಂದಿರುವುದು ಸಂತೋಷದ ವಿಷಯವೇ ಸರಿ.

ಮಕ್ಕಳ ಕಥೆಗಳು ಎಂದು ತಕ್ಷಣ ನೆನಪಿಗೆ ಬರುವುದೇ ‘ಪಂಚ ತಂತ್ರ’ದ ಕಥೆಗಳು. ಈ ಪಂಚತಂತ್ರದ ಕಥೆಗಳಲ್ಲಿ ಪ್ರಾಣಿಗಳ ಮೂಲಕ ಜೀವನದ ಮೌಲ್ಯಗಳ ಬಗ್ಗೆ ತಿಳಿಸುವ ಪ್ರಯತ್ನವಿದ್ದು, ಅದು ಬಹಳ ಕಾಲ ಸಣ್ಣವರಿಗೆ ಮಾತ್ರವಲ್ಲದೆ ದೊಡ್ಡವರಿಗೂ ಇಷ್ಟವಾಗಿತ್ತು. ಈ ಕಥೆಗಳು ಅಜ್ಜಿ, ಅಜ್ಜಿಯರ ಮೂಲಕ ಮೊಮ್ಮಕ್ಕಳಿಗೆ ಅನೇಕ ಶತಮಾನಗಳಿಂದ ಹರಿದು ಬಂದಿದೆ. ನಂತರ ಆದ ಅಕ್ಷರ ಕ್ರಾಂತಿಯ ಪರಿಣಾಮವಾಗಿ, ಈ ರೀತಿಯ ಕಥೆಗಳು ಪುಸ್ತಕ ರೂಪದಲ್ಲೂ ಬಂದವು. ಈ ರೀತಿಯ ಕಥೆಗಳು ನಂತರ ಕಾರ್ಟೂನ್ ರೂಪದಲ್ಲಿ ಬಂದಾಗ ಮಕ್ಕಳಿಗೆ ಇಷ್ಟವಾಗಿದ್ದು ಆಶ್ಚರ್ಯವಿಲ್ಲ.

ಆದರೆ ಈಗ ಸಣ್ಣ ಕುಟುಂಬದ ವ್ಯವಸ್ಥೆ ಅಜ್ಜಿ, ಅಜ್ಜಿಯರ ಒಡನಾಟ ಕಡಿಮೆ ಮಾಡಿದ್ದರೆ, ತಂತ್ರಜ್ಞಾನದ ಅವಿಷ್ಕಾರ ಅನೇಕ ಮನ ಸೆಳೆಯುವ ವಿಷಯಗಳನ್ನು ಹೊತ್ತು ಮಕ್ಕಳ ಕೈಗೆ ಕರೆವಾಣಿಯ ರೂಪದಲ್ಲಿ ಬಂದಿರುವಾಗ ಮಕ್ಕಳಲ್ಲಿ ಓದುವ ಗುಣ ಮತ್ತು ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಗೊಣಗಾಟವಂತು ಇದೆ. ನಿಮಗೆ ನಿಜವಾಗಿಯೂ ಮಕ್ಕಳು/ಮೊಮ್ಮಕ್ಕಳನ್ನು ಕರೆವಾಣಿಯಿಂದ ವಿಮುಖರನ್ನಾಗಿ ಮಾಡಲು ಇಷ್ಟವಿದ್ದರೆ, ಅವರ ಹುಟ್ಟು ಹಬ್ಬದ ಸಮಯದಲ್ಲಿ ಅಥವಾ ಬೇಸಿಗೆಯ ರಜೆಯ ಸಮಯದಲ್ಲಿ ಬಾರ್ಬಿ ಗೊಂಬೆಯ ಜೊತೆಗೋ ಅಥವಾ ಲಿಯೋ ಟಾಯ್ಸ್ ಜೊತೆಗೆ ಒಂದು ಮಕ್ಕಳ ಈ ರೀತಿಯ ಪುಸ್ತಕ ಕೂಡ ಕೊಡಿ. ಕೆಲವು ಮಕ್ಕಳಾದರೂ ಆ ಪುಸ್ತಕವನ್ನು ಓದುತ್ತಾರೆ. ಇದು ಮುಂದೆ ಒಂದು ಓದುವ ಹೊಸ ಸಮುದಾಯವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ ವಿದ್ಯುತ್, ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW