‘ಜೀವನ ಪ್ರೀತಿ’ ಕವನ : ಡಿ.ಶಬ್ರಿನಾ ಮಹಮದ್ ಅಲಿ

ಹೂವಿನ ‘ಜೀವನ ಪ್ರೀತಿ’ ಅದೆಷ್ಟು ಚೆಂದ ಗೆಳತಿ…ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ನಾ ಮುಡಿದಿರುವ ಈ
ಹೂವಿನ ‘ಜೀವನಪ್ರೀತಿ’
ಅದೆಷ್ಟು ಚೆಂದ ಗೆಳತಿ.

ಮುಂಜಾವಿನ‌‌ ನಸುಕಲಿ
ಅರಳಿ ಇಳಿಸಂಜೆಯಲಿ
ಬಾಡಿ ನೆಲತಬ್ಬುವುದು.

ಆದರೂ…
ದಿನದ ತನ್ನ ಆಯಸ್ಸಿನಲಿ
ಅದು ನಮ್ಮಂತೆ ಎಂದೂ
ಕೊರಗದು,ಮರುಗದು!

ಹಾಗಾದರೆ ಈ ಹೂವಿಗೆ
ದುಃಖ ದುಮ್ಮಾನಗಳಿಲ್ಲವೇ!
ಇಲ್ಲ ಅಂದವರು ಯಾರು?

ಅರಳಿ ನಗುವ ಅದನು
ಕೈಯಿಂದ ಚಿವುಟಿದವರೆಷ್ಟು,
ಹರಿತವಾದ ಆಯುಧಗಳಿಂದ
ಕೊಯ್ದವರೆಷ್ಟು,

ಕಿತ್ತರೂ,ಕೊಯ್ದರೂ
ದಾರದಿ ತನ್ನನು ಬಿಗಿದರೂ
ಒಳಗಿನ ಜೀವನಪ್ರೀತಿಯಿಂದ
ನಗುವುದಿಲ್ಲವ ಹೇಳು,

ನಾವಿನ್ನು ಮನುಜರು,
ಲೆಕ್ಕವಿಲ್ಲದಷ್ಟು ವಸಂತಗಳನು,
ಸೃಷ್ಡಿಕರ್ತನು ಕರೆವವರೆಗೂ
ಕಳೆಯಬೇಕಾದವರು!

ಕಷ್ಟಗಳು ಅಲೆಗಳಂತೆ
ಅಪ್ಪಳಿಸಿದರೆನಂತೆ
ನೋವು ನಿಂದನೆಗಳು
ಹಗಲು ರಾತ್ರಿಯಂತೆ
ಜೊತೆಯಾದರೆನಂತೆ
ಅಂಜದಿರು,ಅಳುಕದಿರು!

ಗಾಯಕೆ ಮುಲಾಮಿನಂತೆ
ಆ ಕ್ಷಣ ನೊಂದ ಮನಕೆ
ಹಿಡಿಪ್ರೀತಿಯ ತಾಕಿಸಿ
ಮಗುವಂತೆ ಸಂತೈಸಿ
ಬದುಕ ಸಂಭ್ರಮಿಸಿಬಿಡು
ನಾ ಮುಡಿದ ಈ ಹೂವಿನಂತೆ!


  • ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading