ಜೋಗ ಜಲಪಾತದ ಎತ್ತರ ಮೊದಲು ಅಳೆದವರು ಯಾರು? ಮತ್ತು ಹೇಗೆ? ಎನ್ನುವ ಕುತೂಹಲಕಾರಿ ಅನುಭವಗಳನ್ನು ಹೊತ್ತು ತಂದಿದ್ದಾರೆ ಲೇಖಕರಾದ ಡಾ. ಡಾಕ್ಟರ್ ಗಜಾನನ ಶರ್ಮ ಅವರು. ಜೊತೆಗೆ ರಾಜಾ, ರಾಣಿ, ರೋರರ್, ರಾಕೆಟ್ ಕುರಿತು ಸಾಕಷ್ಟು ಕುತೂಹಲ ವಿಷಯಗಳನ್ನುಈ ಲೇಖನವನ್ನೊಳಗೊಂಡಿದೆ…
ಇವತ್ತು ಪಠ್ಯ ಪುಸ್ತಕದಿಂದ ಹಿಡಿದು ಪ್ರವಾಸಿಗಳ ಕೈಪಿಡಿಯವರೆಗೆ ಜೋಗ ಜಲಪಾತ ಎತ್ತರ ೮೩೦ ಅಡಿ ಎಂಬುದು ದಾಖಲಾಗಿ ಅದು ಜನಜನಿತವಾಗಿದೆ. ಆದರೆ ಇದನ್ನು ಮೊದಲು ಅಳೆದವರು ಯಾರು? ಅಳೆದದ್ದು ಹೇಗೆ ಮತ್ತು ಯಾವಾಗ ಮತ್ತು ಇಂದಿನಂತೆ ಮಾಪನ ಉಪಕರಣಗಳು ಇಲ್ಲದಿದ್ದ ಆ ಕಾಲದಲ್ಲಿ ಅದು ಎಂತಹ ಸಾಹಸ ಕಾರ್ಯವಾಗಿತ್ತು ಎಂಬುದರ ಮಾಹಿತಿ ಬಹುತೇಕ ಅಪರಿಚಿತವಾಗಿಯೇ ಉಳಿದಿದೆ.
ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಈ ಪ್ರದೇಶದಲ್ಲಿ ಸುತ್ತಾಡಿದ್ದ ವಿದೇಶೀ ಪ್ರವಾಸಿ ಫ್ರಾನ್ಸಿಸ್ ಬುಕಾನಿನ್ ಈ ಪ್ರಾಂತ್ಯದ ಬಗ್ಗೆ ವಿವರವಾಗಿ ಅನೇಕ ಸಂಗತಿಗಳನ್ನು ದಾಖಲಿಸಿದ್ದರೂ, #ಜೋಗ್_ಜಲಪಾತದ ಬಗ್ಗೆ ಒಂದಿನಿತೂ ಪ್ರಸ್ತಾಪಿಸಿಲ್ಲ. ಅದನ್ನು ಗಮನಿಸಿದಾಗ, ಆ ಕಾಲದಲ್ಲಿ ಜೋಗ್ ಜಲಪಾತ ಹೊರಜಗತ್ತಿಗೆ ಅಪರಿಚಿತವಾಗಿತ್ತೆಂದೇ ಅಭಿಪ್ರಾಯ. ನಂತರದ ಮೂರನೇ ದಶಕದ ಅಂತ್ಯದ ಹೊತ್ತಿಗೆ ಅಂದರೆ ೧೮೩೦ರ ದಶಕಾಂತ್ಯದಲ್ಲಿ ಕಾರವಾರದ ಬ್ರಿಟಿಷ್ ಸೈನ್ಯಾಧಿಕಾರಿಗಳ ಮೂಲಕ ಜೋಗ ಜಲಪಾತ ಹೊರಜಗತ್ತಿಗೆ ಪರಿಚಯವಾಯಿತೆಂಬುದು ಬಹುತೇಕ ಇತಿಹಾಸಕಾರರ ಅಭಿಪ್ರಾಯ.

ಫೋಟೋ ಕೃಪೆ : reddit.
ಹಾಗೆಂದು ಮಲೆನಾಡಿನ ಮಂದಿಗೆ ಜೋಗ ಜಲಪಾತವೇನೂ ಅಪರಿಚಿತವಾಗಿರಲಿಲ್ಲ. ಜೋಗದ ಸುತ್ತಮುತ್ತಲ ಗ್ರಾಮಗಳ ಜನರು ಅಲ್ಲಿಗೆ ಹೋಗಿ ಆನಂದಿಸುತ್ತಿದ್ದ, ಹೊಳೆಯೂಟ ಮಾಡುತ್ತಿದ್ದ ಕುರಿತು ಮತ್ತು ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ಇಲ್ಲಿಗೆ ಸಮೀಪದ ಕಣೇಕಾರಿನಲ್ಲಿ ( ತಲಕಳಲೆ ಹೊಳೆಯ ಮಡು) ಆಗಾಗ ಹೊಳೆಸ್ನಾನ ಮಾಡುತ್ತಿದ್ದ ಕುರಿತು ಐತಿಹ್ಯಗಳಿವೆ.
ಜೋಗದ ಸಮೀಪದ ‘ಕಾಳೀಬೀಡು’ ( ಮುಳುಗಡೆಯಾಗಿ ಈಗ ಕಾರ್ಗಲ್ಲಿನಿಂದ ಏಳು ಕಿಲೋಮೀಟರ್ ದೂರದ ಹುಕ್ಕಲು ಎಂಬ ಹಳ್ಳಿಯಲ್ಲಿ ಪುನರ್ಸ್ಥಾಪನೆಗೈಯ್ಯಲ್ಪಟ್ಟಿರುವ ) ದೇವಾಲಯದ ಅರ್ಚಕರಾಗಿದ್ದ ಸುಬ್ರಹ್ಮಣ್ಯ ಕವಿ ಎನ್ನುವವರು ವಾರ್ಧಕ ಷಟ್ಪದಿಯಲ್ಲಿ ಬರೆದ “ಶರಾವತೀ ಮಹಾತ್ಮೆ” ಎಂಬ ಗ್ರಂಥದಲ್ಲಿ, ‘ಭಾರ್ಗವನು ಅಂಬಿನಿಂ ಕೊರೆದ ಜೋಗಿನಲ್ಲಿಳಿದು’ ಶರಾವತಿ ನದಿ ಮುಂದೆ ಸಾಗುತ್ತದೆ ಎಂದು ವರ್ಣಿಸಿದ್ದಾನೆ. ( ಈ ಗ್ರಂಥವು ಕೂಡಲಿ ಜಗನ್ನಾಥ ಶಾಸ್ತ್ರಿಗಳ ಪ್ರಯತ್ನದಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ೧೯೭೦ರ ದಶಕದಲ್ಲಿ ಪ್ರಕಟಿಸಲ್ಪಟ್ಟಿದೆ). ಪರಶುರಾಮನು ಬಾಣದಿಂದ ಕೊರೆಯುವ ಮೂಲಕ ಜೋಗದ ಜಲಪಾತ ಮತ್ತು ಪ್ರಪಾತ ಸೃಷ್ಟಿಯಾಯಿತು ಎಂಬ ಈ ಕೃತಿಯ ಉಲ್ಲೇಖವೇ ಜೋಗದ ಸೃಷ್ಟಿಯ ಕುರಿತು ದಾಖಲಾಗಿರುವ ಪ್ರಪ್ರಥಮ ಮಾಹಿತಿ. ಜೊತೆಗೆ ಜೋಗ ಎಂಬ ಹೆಸರೂ ಮೊಟ್ಟಮೊದಲು ಉಲ್ಲೇಖವಾದದ್ದು ಇದೇ ಕಾವ್ಯದ ಮೂಲಕ.

ಫೋಟೋ ಕೃಪೆ : thedailyvoice
ಹತ್ತೊಂಬತ್ತನೇ ಶತಮಾನದ ಮೊದಲ ದಶಕದಲ್ಲೇ ಮೈಸೂರು ಅರಸರು ತಮ್ಮ ಭಾಗದಲ್ಲಿ ಅಂದರೆ ಜಲಪಾತದ ಎಡದಂಡೆಯಲ್ಲಿ ಮೊದಲಿಗೆ ಧರ್ಮಶಾಲೆಯೊಂದನ್ನು ನಿರ್ಮಿಸಿ ಅದರ ಉಸ್ತುವಾರಿಯನ್ನು ಅದಕ್ಕೂ ಮೊದಲು ಗೇರುಸೊಪ್ಪೆ ರಾಣಿಯ ಕೊತವಾಲರ ವಂಶವಾಗಿದ್ದ ವಟ್ಟಕ್ಕಿ ಕೊತವಾಲರಿಗೆ ವಹಿಸಿದ್ದರೆಂದು ಹೇಳಲಾಗಿದೆ. ಅದಾಗಿ ಎರಡು ಮೂರು ದಶಕದ ನಂತರ ಅಂದರೆ ಸುಮಾರು 1842ರ ಹೊತ್ತಿಗೆ ಬೊಂಬಾಯಿ ಪ್ರಾಂತ್ಯದ ಬ್ರಿಟಿಷ್ ಅಧಿಕಾರಿಗಳು ಜಲಪಾತದ ಬಲದಂಡೆಯಲ್ಲಿ ( ಈಗಿನ ಬ್ರಿಟಿಷ್ ಬಂಗಲೆ) ಬಂಗಲೆಯೊಂದನ್ನು ನಿರ್ಮಿಸುತ್ತಾರೆ. ಆದರೆ ಬಹುತೇಕ ನಿರ್ವಸಿತ ಪ್ರದೇಶವಾಗಿದ್ದ ಈ ಪ್ರದೇಶದಲ್ಲಿ ಉಸ್ತುವಾರಿ ಕಷ್ಟವಾಗಿ ಅದರ ಉಸ್ತುವಾರಿಯನ್ನೂ ವಟ್ಟಕ್ಕಿ ಕುಟುಂಬಕ್ಕೇ ವಹಿಸಿಕೊಡುತ್ತಾರೆ. ಕ್ರಮೇಣ ಹೊರಜಗತ್ತಿಗೆ ಪರಿಚಯವಾಗುತ್ತ ಹೋದ ಜಲಪಾತಕ್ಕೆ ಪ್ರವಾಸಿಗಳು ಬರಲಾರಂಭಿಸುತ್ತಾರೆ.

ಫೋಟೋ ಕೃಪೆ : twitter
ಈ ನಡುವೆ ಬ್ರಿಟಿಷ್ ಸರ್ಕಾರ ಜಲಪಾತದ ಎತ್ತರವನ್ನು ಅಳೆಯಲು ಚಿಂತಿಸುತ್ತದೆ. ಈ ನಿರ್ಜನ ಅರಣ್ಯ ಮಧ್ಯದ ಜಲಪಾತವನ್ನು ಅಳೆಯಲು ಸಿವಿಲ್ ಅಧಿಕಾರಿಗಳು ಅಸಹಾಯಕರೆಂಬುದನ್ನು ಮನಗಂಡ ಆಂಗ್ಲ ಆಡಳಿತ ಅದಕ್ಕಾಗಿ ೧೮೫೬ ರಲ್ಲಿ ಕ್ಯಾಪ್ಟನ್ ಗ್ರೇ ಎಂಬ ಸೈನ್ಯಾಧಿಕಾರಿಯನ್ನೂ , ವಿಲಿಯಂ ಮತ್ತು ಟೇಲರ್ ಎಂಬ ಇಬ್ಬರು ಸಹಾಯಕ ಅಧಿಕಾರಿಗಳನ್ನೂ ನೇಮಕ ಮಾಡುತ್ತದೆ.
೧೮೫೬ ರ ಮಾರ್ಚ್ ತಿಂಗಳಲ್ಲಿ, ಟೇಲರ್ ಮತ್ತು ವಿಲಿಯಂ ಎನ್ನುವ ತನ್ನ ಇಬ್ಬರು ಸಹಾಯಕರ ನೆರವಿನಿಂದ ಜಲಪಾತದ ಎತ್ತರವನ್ನು ಅಳೆದ ಕ್ಯಾಪ್ಟನ್ ಆರ್ ಎಸ್ ಗ್ರೇ ಸ್ವತಃ ತನ್ನ ಶಬ್ಧಗಳಲ್ಲೇ ಅದನ್ನು ತಾನು ಅಳೆದ ವಿವರಣೆಯನ್ನು ತುಂಬ ಸುಂದರವಾಗಿ ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ ವಿವರಿಸಿದ್ದ. ದುರದೃಷ್ಟವಶಾತ್ ಈಗ ಆ ಸಂದರ್ಶಕರ ಪುಸ್ತಕ ಅಲಭ್ಯವಾದರೂ, ಅದರ ವಿವರಣೆಗಳು ನಮಗೆ ಬಿ ಎಲ್ ರೈಸರ ಗೆಜೆಟೀರಿನಲ್ಲಿ ಲಭ್ಯವಿದೆ.
ಬ್ರಿಟಿಷ್ ಸರ್ಕಾರದಿಂದ ಜಲಪಾತ ಅಳೆಯಲು ನೇಮಕಗೊಂಡ ಭಾರತೀಯ ನೌಕಾದಳದ ಹದಿನಾರನೇ ರೆಜಿಮೆಂಟಿನ ಮೇಲ್ಕಂಡ ಮೂವರೂ ಅಧಿಕಾರಿಗಳು ೧೮೫೬ರ ಮಾರ್ಚ್ ಆರನೇ ತಾರೀಖು ಇಲ್ಲಿನ ಬ್ರಿಟಿಷ್ ಬಂಗಲೆಗೆ ಬರುತ್ತಾರೆ. ಇಲ್ಲಿ ತಾವು ಗೈದ ಸಾಹಸವನ್ನು ಅವರು ತುಂಬ ಸುಂದರವಾಗಿ ಹೀಗೆ ವರ್ಣಿಸಿದ್ದಾರೆ. .
೧೮೫೬ರ ಮಾರ್ಚ್ ತಿಂಗಳ ಆರನೇ ತಾರೀಖು ನಾವು ಹೊನ್ನಾವರದ ಮೂಲಕ ಜೋಗದ ಬೊಂಬಾಯಿ ಬಂಗಲೆಯನ್ನು ತಲುಪಿದೆವು. ಮೊದಲು ಐದು ದಿನಗಳ ಕಾಲ ನಾವು ಜಲಪಾತದ ಹತ್ತಿರದ ವಿವಿಧ ಸ್ಥಳಗಳಲ್ಲಿ ನಿಂತು, ವಿವಿಧ ಕೋನಗಳಿಂದ ಜಲಪಾತವನ್ನು ವೀಕ್ಷಿಸಿ, ಅಲ್ಲಿದ್ದ ಮರ ಬಂಡೆ, ಏರು- ತಗ್ಗುಗಳನ್ನು ಹತ್ತಿಳಿದು, ಜಲಪಾತದ ಅಡಿಯವರೆಗೂ ಹೋಗಿ, ಮಣ್ಣು, ಮರ, ಗಿಡ, ಬಳ್ಳಿ, ಬಂಡೆಗಳನ್ನು ಪರೀಕ್ಷಿಸಿ ನಮ್ಮ ಮಾಪನಕ್ಕೆ ಅಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸಿಕೊಂಡೆವು. ಸೂಕ್ಷ್ಮವಾಗಿ ಜಲಪಾತದ ಅಳತೆಯನ್ನು ಎಲ್ಲಿಂದ, ಹೇಗೆ ಆರಂಭಿಸಬಹುದು ಎಂಬುದರ ಕುರಿತು ಅಧ್ಯಯನ ನಡೆಸಿದೆವು. ಮಾಪನಕ್ಕೆ ಅಗತ್ಯವಿದ್ದ ಸೀಸದ ಗುಂಡು, ಅದನ್ನು ಜೋಡಿಸುವ ಲೋಹದ ಉಂಗುರ, ಅದನ್ನು ನೀರಿಗಿಳಿಸಿದಾಗ ಅದು ಮುಳುಗದಂತೆ ತೇಲಿಸಬಲ್ಲ ಸಲಕರಣೆ, ಅದನ್ನು ಸಿಕ್ಕಿಸಲು ಬೇಕಾದ ಕೊಕ್ಕೆ, ಹಗ್ಗ, ಹುರಿ, ತಂತಿ, ಮೊಳೆ, ಚಾಕು, ಕತ್ತಿ, ಸುತ್ತಿಗೆ, ಕೊಡಲಿ, ಗುದ್ದಲಿ, ಕಂಪಾಸ್, ಥಿಯೋಡಲೈಟ್, ಟೇಪು, ಚೈನು ಮುಂತಾದ ಅನೇಕ ತಾಂತ್ರಿಕ ಸಲಕರಣೆಗಳೊಂದಿಗೆ ಮೊದಲೇ ಸಿದ್ಧರಾಗಿಯೇ ಬಂದಿದ್ದೆವು. ಹಾಗಿದ್ದೂ ಸ್ಥಳೀಯವಾಗಿ ಲಭಿಸುವ ಬೊಂಬು, ಹಲಗೆ, ಅಡ್ಡಪಟ್ಟಿ, ಮುಂತಾದ ವಸ್ತುಗಳನ್ನು ಸುತ್ತಮುತ್ತಲ ಹಳ್ಳಿಗಳಿಂದ ಸಂಗ್ರಹಿಸಿಕೊಂಡೆವು.
ಮಾರ್ಚ್ ಹನ್ನೆರಡರಂದು ನಾವು ಜಲಪಾತವನ್ನು ಅಳೆಯಲು ಆರಂಭಿಸಿದೆವು. ಜಲಪಾತದ ಅಂಚಿನ ರಾಜಾ ಮತ್ತು ರೋರರ್ ಧಾರೆಗಳ ನಡುವಿನ ಬಂಡೆಗಳ ತುದಿಯಿಂದ ಕಾಣುವ ಪ್ರಪಾತ ಭಯಾನಕವಾಗಿತ್ತು. ಹಾಗಿದ್ದೂ ಅಳತೆಯೆಂಬ ನಮ್ಮ ಅಭಿಯಾನವನ್ನು ನಾವು ಶಾಂತಚಿತ್ತರಾಗಿ ಆರಂಭಿಸಿದೆವು…..

ಫೋಟೋ ಕೃಪೆ : hotstar
ಅದೃಷ್ಟವಶಾತ್ ರೋರರ್ ಧಾರೆಯ ಎಡಬದಿಯ ಕಲ್ಲುಬಂಡೆಗಳ ನಡುವೆ ಗಟ್ಟಿಮುಟ್ಟಾದ ಮರವೊಂದು ಬೆಳೆದಿತ್ತು. ಹಾಗೆಯೇ ರಾಜಾಧಾರೆಯ ಪಶ್ಚಿಮದ ಅಂಚಿನಲ್ಲಿ ಬೃಹತ್ ಬಂಡೆಯೊಂದು ಪ್ರಪಾತದ ಕಡೆಗೆ ತನ್ನ ಮೂತಿಯನ್ನು ಚಾಚಿ ಹಬ್ಬಿಕೊಂಡಿತ್ತು.(ಈಗ ನಾವು ಜಲಪಾತವನ್ನು ಬಗ್ಗಿ ನೋಡುವ, ‘ಮುಂಗಾರು ಮಳೆ’ ಚಿತ್ರೀಕರಣದ ಕಾರಣದಿಂದ ಪ್ರಸಿದ್ಧವಾದ ಬಂಡೆ.)
ಅವೆರಡನ್ನೂ ಸೂಕ್ಷ್ಮವಾಗಿ ಗಮನಿಸಿದ ನಾವು ಸೊಂಟಕ್ಕೆ ಹಗ್ಗಬಿಗಿದುಕೊಂಡು ಹಲವು ಬಾರಿ ಆ ಬಂಡೆ ಮತ್ತು ರೋರರ್ ಪಕ್ಕದ ಮರದ ಬುಡದವರೆಗೂ ಹೋಗಿ ಅದರ ಗಟ್ಟಿತನವನ್ನು ಪರೀಕ್ಷಿಸಿದೆವು. ನಂತರ ಇವೆರಡರ ಬುಡಕ್ಕೆ ಎರಡು ಗಟ್ಟಿ ಹಗ್ಗ ಕಟ್ಟಿ ಅವುಗಳ ನಡುವೆ ಬಿದಿರಿನ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಿಸಿದೆವು. ಅದರ ಮೇಲ್ಭಾಗದಲ್ಲಿ ಹಿಡಿದುಕೊಳ್ಳಲು ಅನುವಾಗುವಂತೆ, ಒಂದು ಬದಿಗೆ ಡಬಲ್ ಪುಲ್ಲಿ ಅಳವಡಿಸಿ ಅವುಗಳ ಮೂಲಕ ಮತ್ತೆರಡು ಹಗ್ಗವನ್ನು ಪೋಣಿಸಿದೆವು. ಪುಲ್ಲಿಯ ಮುಖಾಂತರ ಪೋಣಿಸಿದ ಹಗ್ಗಕ್ಕೆ ಇನ್ನೆರಡು ಹಗ್ಗವನ್ನು ಕಟ್ಟಿ ಅದನ್ನು ಆ ತುದಿಯಿಂದ ಈ ತುದಿಯವರೆಗೂ ಸಂಚರಿಸುವಂತೆ ಎಳೆದು, ಬಿಟ್ಟು ಮಾಡಿ ಅದು ಬೇಕೆಂದಲ್ಲಿ ಸ್ಥಿರವಾಗಿ ನಿಲ್ಲುವುದನ್ನು ದೃಡಪಡಿಸಿಕೊಂಡೆವು. ನಂತರ, ಮೊದಲೇ ನಿರ್ಮಿಸಿ ಇಟ್ಟುಕೊಂಡಿದ್ದ ಇಬ್ಬರ ಭಾರವನ್ನು ಹೊರಬಲ್ಲ ಸಾಕಷ್ಟು ದೊಡ್ಡದಾದ ಬಿದಿರಿನ ತೊಟ್ಟಿಲೊಂದನ್ನು ಹಗ್ಗಕ್ಕೆ ತೂಗುಬಿಟ್ಟು ಅದನ್ನು ಪುಲ್ಲಿಗೆ ತೂರಿಸಿದ ಹಗ್ಗದ ಮೂಲಕ ಎಳೆಯುತ್ತ ಪ್ರಪಾತದ ಮಧ್ಯದವರೆಗೂ ಕೊಂಡೊಯ್ದೆವು. ತೊಟ್ಟಿಲು ಈಗ ರಾಜಾಧಾರೆಯ ನೀರು ಬೀಳುವ ತಾಣದಿಂದ ಸುಮಾರು ೪೭ ಅಡಿಗಳಷ್ಟು ಅಂತರದಲ್ಲಿ ಇತ್ತು. ತೊಟ್ಟಿಲಲ್ಲಿ ಕುಳಿತು ಬಗ್ಗಿ ನೋಡಿ ಜಲಪಾತದ ತಳದ ನೀರಿನ ಕೊಳ ಲಂಬಕೋನದಲ್ಲಿ ತೊಟ್ಟಿಲ ಕೆಳಗೇ ಬರುವುದನ್ನು ಧೃಡಪಡಿಸಿಕೊಂಡೆವು. ಯಾಕೆಂದರೆ ಅಲ್ಲಿಂದ ತೂಗುಗುಂಡನ್ನು ಇಳಿಬಿಟ್ಟರೆ ಅದು ಜಲಪಾತದಂಚಿನ ಬಂಡೆಗಳಿಗೆ ತಗಲದೇ ನೇರವಾಗಿ ಜಲಪಾತದ ತಳದ ಹೊಂಡಕ್ಕೆ ತಲಪುವುದು ಅಳತೆಯ ನಿಖರತೆಯ ದೃಷ್ಟಿಯಿಂದ ಬಹು ಮುಖ್ಯವಾಗಿತ್ತು.
ಪೂರ್ವತಯಾರಿಗಳು ಮುಗಿದ ನಂತರ ನಾವು ಅಳತೆಯನ್ನು ಆರಂಭಿಸಿದೆವು. ವಿಲಿಯಂ ಮತ್ತು ಪೀಟರ್ ಇಬ್ಬರನ್ನೂ ತೊಟ್ಟಿಲೊಳಗೆ ಕುಳ್ಳಿರಿಸಿ, ನಾನು ( ಕ್ಯಾಪ್ಟನ್ ಗ್ರೇ) ನಿಧಾನವಾಗಿ ಪುಲ್ಲಿಗೆ ಪೋಣಿಸಿದ ಹಗ್ಗವನ್ನೆಳೆಯುತ್ತಾ, ತೊಟ್ಟಿಲನ್ನು ಮೊದಲಿನಂತೆ ಪ್ರಪಾತದ ಮಧ್ಯಭಾಗಕ್ಕೆ ಹೋಗುವಂತೆ ನೋಡಿಕೊಂಡೆ. ಅವರು ತೊಟ್ಟಿಲೊಳಗಿಂದ ತೇಲಬಲ್ಲ ಸಾಧನವೊಂದಕ್ಕೆ ಜೋಡಿಸಲ್ಪಟ್ಟ ಲೋಹದ ಉಂಗುರದಲ್ಲಿದ್ದ ಏಳು ಪೌಂಡ್ ತೂಕದ ಸೀಸದ ಗುಂಡನ್ನು ಹಗ್ಗದ ತುದಿಗೆ ಕಟ್ಟಿ ನಿಧಾನವಾಗಿ ಪ್ರಪಾತದೊಳಗೆ ಇಳಿಸತೊಡಗಿದರು. ಲೋಹದ ಅಳವಡಿಕೆ, ತೇಲುವ ಸಾಧನ, ಗುಂಡು ಎಲ್ಲವೂ ಸೇರಿ ಅದು ಒಟ್ಟು ಹದಿನೆಂಟು ಪೌಂಡ್ ಭಾರವಿತ್ತು. ಅದು ಜಲಪಾತದ ತಳದ ಕೊಳದ ಮೇಲ್ಮೈಯ್ಯನ್ನು ತಲುಪಿದ್ದನ್ನು ಇದ್ದಕ್ಕಿದ್ದಂತೆ ಅದರ ತೂಕ ಕಡಿಮೆಯಾಗುವ ಅನುಭವದ ಮೂಲಕ ಗ್ರಹಿಸಿ, ಅದನ್ನು ಹಲವು ಬಾರಿ ಎಳೆದು ಬಿಟ್ಟು ಮಾಡಿ ಅವರು ಖಾತ್ರಿಪಡಿಸಿಕೊಂಡರು. ನಂತರ ಇಳಿಬಿಟ್ಟ ಹಗ್ಗವನ್ನು ಮೇಲಕ್ಕೆಳೆದು ಅದರ ಉದ್ದವನ್ನು ಅಳತೆ ಮಾಡಿದೆವು. ಅದು ೮೧೫ ಅಡಿ ಉದ್ದವಿತ್ತು. ನಂತರ ಮತ್ತೆ ಅದನ್ನು ಹಿಂದಕ್ಕೆಳೆದು ತೇಲುವ ಸಾಧನವನ್ನು ಕಳಚಿ ಗುಂಡನ್ನು ನೀರಿನಾಳಕ್ಕೆ ಬಿಟ್ಟು ಜಲಪಾತದ ತಳದ ಕೊಳದ ಆಳವನ್ನೂ ಅಳೆದೆವು. ಆದರೆ ಈ ಎಲ್ಲ ಪ್ರಕ್ರಿಯೆ ನಡೆಯುವಾಗ ತೊಟ್ಟಿಲು, ಅದರಲ್ಲಿದ್ದ ಇಬ್ಬರು ಮನುಷ್ಯರು, ಹಗ್ಗ ಮತ್ತು ಉಪಕರಣಗಳ ಒಟ್ಟು ಭಾರದಿಂದ ತೊಟ್ಟಿಲು ಮೊದಲು ಗುರುತಿಸಿಕೊಂಡಿದ್ದ ಬೇಸ್ ಲೈನ್ ಮಟ್ಟಕ್ಕಿಂತ ಸಾಕಷ್ಟು ಕೆಳಕ್ಕೆ ಇಳಿದಿತ್ತು. ಥಿಯೋಡಲೈಟ್ ಮೂಲಕ ಬೇಸ್ ಲೈನಿಗೂ ತೊಟ್ಟಿಲು ಇಳಿದ ಮಟ್ಟಕ್ಕೂ ಇರುವ ಅಂತರವನ್ನು ಲೆಕ್ಕ ಹಾಕಿದೆವು. ಅದು ಒಟ್ಟು ಹದಿನಾಲ್ಕು ಅಡಿ ಕೆಳಕ್ಕೆ ಇಳಿದಿತ್ತು. ಮೊದಲು ಅಳೆದ ೮೧೫ ಅಡಿಗೆ ಈ ಹದಿನಾಲ್ಕು ಅಡಿ ಕೂಡಿಸಿ ಜಲಪಾತದ ಒಟ್ಟು ಎತ್ತರ ೮೨೯ ಅಡಿಗಳೆಂದು ನಿರ್ಧರಿಸಿದೆವು. ಒಟ್ಟೂ ಅಳತೆಯ ಪ್ರಕ್ರಿಯೆಯನ್ನು ಒಂದೆರಡು ಬಾರಿ ಪುನರಾವರ್ತಿಸಿ ಅದನ್ನು ಧೃಢಪಡಿಸಿಕೊಂಡು, ಜಲಪಾತದ ಎತ್ತರ ೮೨೯ ಅಡಿಗಳೆಂದು ಘೋಷಿಸಿದೆವು.

ಫೋಟೋ ಕೃಪೆ : Public tv
ಮಾರನೆಯ ದಿನ ಮೈಸೂರು ಬಂಗಲೆ ಕಡೆಯಿಂದ ಜಲಪಾತದ ತಳಕ್ಕೆ ಇಳಿದು ಒಂದು ಬೊಂಬಿನ ತೆಪ್ಪ ಮತ್ತು ಮೂರು ತಟ್ಟೆದೋಣಿಗಳ ಸಹಾಯದಿಂದ ಕೆಳಭಾಗದ ನೀರಿನ ಕೊಳದ ಆಳವನ್ನು ಹಲವು ಜಾಗದಲ್ಲಿ ಅಳೆದೆವು. ಅದರ ಅತ್ಯಂತ ಹೆಚ್ಚಿನ ಆಳವೆಂದರೆ ೧೩೨ ಅಡಿಗಳೆಂಬುದು ನಿಕ್ಕಿಯಾಯಿತು. ಅದು ರಾಜಾಧಾರೆಯ ನೀರು ಬೀಳುವ ಜಾಗದಿಂದ ಸುಮಾರು ಮೂವತ್ತು ಅಡಿ ದೂರದಲ್ಲಿ ಕಂಡುಬಂದ ಆಳ. ನಂತರ ನಾವು ಹಗ್ಗದ ಮೂಲಕ ರೋರರ್ ಧಾರೆಯ ಕೆಳಗಿನ ಬಂಡೆಯನ್ನು ಹತ್ತಿದೆವು. ಸುಮಾರು ಮೂವತ್ತು ಅಡಿ ಎತ್ತರಕ್ಕೇರಿದಾಗ ಮೇಲಿನಿಂದ ಬೀಳುವ ನೀರಿನ ರಭಸ ಮತ್ತು ಗಾಳಿಯ ಹೊಡೆತಕ್ಕೆ ನಮಗೆ ಕಣ್ಣು ತೆರೆಯಲಾಗಲಿಲ್ಲ ಉಸಿರು ಕಟ್ಟಿದಂತಾಗಿ ಮೇಲೇರಲಾಗದೇ ಕೆಳಗಿಳಿದುಬಿಟ್ಟೆವು.
ಮುಂದೆ ನಾವು ನೇರವಾಗಿ ಬ್ರಿಟಿಷ್ ಬಂಗಲೆ ಮತ್ತು ಮೈಸೂರು ಬಂಗಲೆಯ ನೇರದಲ್ಲಿ ಆ ಕಣಿವೆಯ ಅಗಲವನ್ನು ಅಳೆಯಲು ಮುಂದಾದೆವು. ಜಲಪಾತದ ಅಡಿಯಿಂದ ಮೇಲೆ ಬಂದು ಮೇಲ್ಭಾಗದ ದೂರವನ್ನೂ ಸೇರಿಸಿ ಒಟ್ಟೂ ಕಣಿವೆಯ ಅಗಲ ಏಳುನೂರಾ ಹತ್ತು ಗಜಗಳೆಂದು ಲೆಕ್ಕ ಹಾಕಿದೆವು. ಇದಾದ ನಂತರ ನಾವು ಮತ್ತೆ ಬ್ರಿಟಿಷ್ ಬಂಗಲೆಯ ಸಮೀಪ ಹೋಗಿ ಅಲ್ಲಿ ರಾಜಾಧಾರೆಯ ತುದಿಗೂ, ರೋರರ್ ಅದನ್ನು ಸೇರುವ ಜಾಗಕ್ಕೂ ಇರುವ ಕಮರಿಯ ಅಗಲ ಮತ್ತು ಆಳವನ್ನು ಅಳೆದೆವು. ರಾಜಾ – ರೋರರ್ ನಡುವಿನ ಕಮರಿಯ ಆಳ ಒಟ್ಟು ೩೧೫ ಅಡಿಗಳೆಂಬುದು ಅಳತೆಗೆ ಸಿಕ್ಕಿತು.
ಮಾರ್ಚ್ ತಿಂಗಳ ಹದಿನೈದನೇ ತಾರೀಖಿನ ಬೆಳಿಗ್ಗೆ, ರಾಜಾಧಾರೆಯ ಪಕ್ಕದ ಬಂಡೆಗೂ, #ರೋರರ್ ಧಾರೆಯ ಪಕ್ಕದ ಮರಕ್ಕೂ ನಡುವೆ ತಾತ್ಕಾಲಿಕವಾಗಿ ನಾವು ಕಟ್ಟಿದ್ದ ಬೊಂಬಿನ ಸೇತುವೆ ಕಿತ್ತುಹಾಕಿದೆವು. ಕಾರಣ ಯಾರಾದರೂ ಅದರ ಮೇಲೆ ಕುರುಡು ಸಾಹಸ ಮಾಡಲು ಹೋಗಿ ಅಪಾಯಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿದ್ದವು. ನಂತರ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ರಾಜಾ ಮತ್ತು ರೋರರ್ ಧಾರೆಗಳ ನಡುವಿನ ಕಣಿವೆಯ ಆಳಕ್ಕೆ ಇಳಿದು ಅಂದಿನ ನಮ್ಮ ಬೆಳಗಿನ ಉಪಹಾರವನ್ನು ಆ ಬಂಡೆಗಳ ಮೇಲೆ ಕುಳಿತು ಸೇವಿಸಿ, ಕೆಲಹೊತ್ತು ಅಲ್ಲಿಯ ಸೊಭಗನ್ನು ಅನುಭವಿಸಿದೆವು. ನಂತರ ಮೇಲೆ ಬಂದ ನಾವು ರಾಜಾ ಧಾರೆಯ ನೀರು ಧುಮುಕುವ ಸ್ಥಳದಲ್ಲಿರುವ ಬಂಡೆಯೊಂದನ್ನು ಹತ್ತಿ ಅಲ್ಲಿಂದ ಜಲಪಾತದ ಕೋನವನ್ನು ಅಳೆದೆವು. ಸಂಜೆ ಐದುಗಂಟೆಗೆ ಈಚೆ ಬಂದು ಬ್ರಿಟಿಷ್ ಬಂಗಲೆ ಸಮುದ್ರ ಮಟ್ಟದಿಂದ ೧೬೭೦ ಅಡಿ ಎತ್ತರಕ್ಕೂ, ಅಲ್ಲಿ ಇದಕ್ಕೂ ಮೊದಲು ಇತ್ತು ಎಂದು ಹೇಳಲಾದ ಇನ್ನೊಂದು ಹಳೆಯ ಬಂಗಲೆಯ ತಳಪಾಯ ೧೬೫೦ ಅಡಿ ಎತ್ತರಕ್ಕೂ ಇರುವುದನ್ನು ಲೆಕ್ಕಹಾಕಿದೆವು. ಹಾಗೆಯೇ ಮೈಸೂರು ಬಂಗಲೆ, ಸಮುದ್ರಮಟ್ಟದಿಂದ ೧೬೪೦ ಅಡಿ ಎತ್ತರಕ್ಕಿದೆಯೆಂದು ಅಧಿಕೃತವಾಗಿ ಘೋಷಿಸಿದೆವು. ಒಟ್ಟಿನಲ್ಲಿ ಈ ಜಲಪಾತದ ಮಾಪನಕಾರ್ಯ ನಮಗೊಂದು ರೋಚಕ ಅನುಭವ ನೀಡಿದ್ದು ಸುಳ್ಳಲ್ಲ………”
ತನ್ನದೇ ಸ್ವಂತಮಾತುಗಳಲ್ಲಿ ಕ್ಯಾಪ್ಟನ್ ಗ್ರೇ ವರ್ಣಿಸಿದ್ದನ್ನು ಓದಿದರೆ ನಾವು ಇಂದಿಗೂ ಪುಳಕಿತರಾಗುತ್ತೇವೆ. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಬ್ರಿಟಿಷ್ ಅಧಿಕಾರಿಗಳು ಎವರೆಸ್ಟ ಶಿಖರದ ಎತ್ತರವನ್ನು ಅಳೆದದ್ದೂ ೧೮೫೬ರ ಮಾರ್ಚ್ ತಿಂಗಳಲ್ಲೇ.
- ಡಾಕ್ಟರ್ ಗಜಾನನ ಶರ್ಮ (ಹಿರಿಯ ಖ್ಯಾತ ಲೇಖಕರು)
