ಆ ಇಪ್ಪತ್ತು ನಿಮಿಷಗಳು – ಆರ್. ಪಿ. ರಘೋತ್ತಮ



‘ಆ ಇಪ್ಪತ್ತು ನಿಮಿಷ’ದಲ್ಲಿ ಅಪರಿಚಯಿತ ವ್ಯಕ್ತಿಯಿಂದ ನನ್ನ ಹೆಂಡತಿಗೆ ತೊಂದರೆಯಾಗಿದ್ದರೆ ಏನು ಗತಿ? ಎನ್ನುವ ಭಯ ಒಂದೆಡೆ ಇತ್ತು, ಆದರೆ ‘ಆ ಇಪ್ಪತ್ತು ನಿಮಿಷ’ದಲ್ಲಿ ಅದೇ ಅಪರಿಚಯಿತ ವ್ಯಕ್ತಿಯಿಂದ ಆದ ಸಹಾಯವನ್ನು ಇಂದಿಗೂ ನೆನಪಿಸಿಕೊಳ್ಳುವಂತೆ ಮಾಡಿದೆ ಎಂದು ತಮ್ಮ ಅನುಭವದ ಬುತ್ತಿಯನ್ನು ಲೇಖಕರಾದ ಆರ್. ಪಿ. ರಘೋತ್ತಮ ಅವರು ಕತೆಯ ರೂಪಕೊಟ್ಟು ಓದುಗರಿಗೆ ಮನ ಮುಟ್ಟುವಂತೆ ಬರೆದಿದ್ದಾರೆ. ಮುಂದೆ ಓದಿ…

ಇತ್ತೀಚೆಗೆ #ಬೆಂಗಳೂರಿನಲ್ಲಿ ಸಂಬಂಧಿಕರೊಬ್ಬರ ಮದುವೆಯ ಆರತಕ್ಷತೆಗೆ ಹೋಗಿದ್ದೆವು. #ಪೆಟ್ರೋಲ್_ದರ ದಿನೇದಿನೇ ಗಗನ ತಲುಪುತ್ತಿರುವ ಕಾರಣ #ದ್ವಿಚಕ್ರ_ವಾಹನದಲ್ಲಿಯೇ ಹೋಗಿ ಬರುವ ನಿರ್ಧಾರ ಮಾಡಿದೆವು.

ಛತ್ರವಿದ್ದದ್ದು ಬೆಂಗಳೂರು ದಕ್ಷಿಣ ಭಾಗದಲ್ಲಿ. ನಮ್ಮ ಮನೆಯಿರುವುದು ಬೆಂಗಳೂರು ಉತ್ತರದ ತುತ್ತತುದಿಯಲ್ಲಿ. ದಾಂಪತ್ಯಜೀವನಕ್ಕೆ ಕಾಲಿಡಲಿರುವ ಜೋಡಿಯನ್ನು ಸಾಧ್ಯವಾದಷ್ಟು ಬೇಗನೆ ಮಾತಾಡಿಸಿ, ಶುಭಾಶಯಗಳನ್ನು ತಿಳಿಸಿ, ಊಟ ಮಾಡಿಕೊಂಡು ಹೊರಟೆವು. ಹೊರಟಾಗಲೇ ಸಮಯ ಸುಮಾರು ಹತ್ತು ಗಂಟೆಯಾಗಿತ್ತು. ನಾವು ಹೊರಟಿದ್ದು ಹೋಂಡಾ ಆಕ್ಟೀವಾದಲ್ಲಿ.
ಸುಮಾರು ೧೦ ಕಿಲೋಮೀಟರುಗಳಷ್ಟು ದಾರಿ ಕ್ರಮಿಸಿ ಹೆಬ್ಬಾಳದ ಸನಿಹದಲ್ಲಿರುವ ಕೊಡಿಗೇಹಳ್ಳಿ ಗೇಟಿಗೆ ಬರುವ ವೇಳೆಗೆ ಕೆಂಪು ಸಿಗ್ನಲ್ ಬಿತ್ತು. ಈ ಸರ್ವಹೊತ್ತಿನಲ್ಲೂ ಸಿಗ್ನಲ್ಗಾಗಿ ನಿಲ್ಲಬೇಕಲ್ಲ ಎಂಬ ಅಸಹನೆಯಿಂದಲೇ ಗಾಡಿಯನ್ನು ನಿಲ್ಲಿಸಿದೆ. ದುರದೃಷ್ಟವಶಾತ್ ಗಾಡಿಯ ಇಂಜಿನ್ ಆಫ್ ಆಯಿತು. ಎಷ್ಟು ಪ್ರಯತ್ನಿಸಿದರೂ ಮತ್ತೆ ಆನ್ ಆಗಲಿಲ್ಲ. ತಕ್ಷಣವೇ ಗಾಡಿಯನ್ನು ರಸ್ತೆಯ ಬದಿಗೆ ನೂಕಿದೆ.

ಫೋಟೋ ಕೃಪೆ : Youmotorcycle

ಗಾಡಿಯ ಇಂಜಿನ್ನಿನ ಉಷ್ಣತೆ ಅತಿರೇಕಕ್ಕೆ ಹೋಗಿರಬೇಕು ಅಂತ ಊಹಿಸಿ, ಐದು ನಿಮಿಷಗಳ ತರುವಾಯ ಸ್ಟಾರ್ಟ್ ಮಾಡಲು ಪ್ರಯತ್ನಿಸಿದೆ. ಉಹು, ಜಪ್ಪಯ್ಯ ಅಂದರೂ ಸ್ಟಾರ್ಟ್ ಆಗಲಿಲ್ಲ. ಸದರಿ ಗಾಡಿ ತೀರಾ ಹೊಸತಲ್ಲದಿದ್ದರೂ, ಅದರೊಟ್ಟಿಗಿನ ನನ್ನ ಸಾಂಗತ್ಯಕ್ಕೆ ಇನ್ನೂ ಮೂರು ವರ್ಷ ಕೂಡ ತುಂಬಿಲ್ಲ. ಹೀಗಾಗಿ ಗಾಡಿಯಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದೆನ್ನುವ ಅವಕಾಶವನ್ನು ಸುಲಭವಾಗಿ ತಳ್ಳಿಹಾಕಬಹುದು.

ಆಗ ಸಮಯ ರಾತ್ರಿ ೧೦.೩೫ ನಾವಿನ್ನೂ ಸುಮಾರು ಮೂವತ್ತು ಕಿಲೋಮೀಟರ್ ದಾರಿ ಕ್ರಮಿಸಬೇಕು. ಏನೇ ಮಾಡಿದರೂ ಗಾಡಿ ಸ್ಟಾರ್ಟ್ ಆಗುತ್ತಿಲ್ಲ. ಹಾಗೇ ನಿಂತು ಸಮಾಧಾನದಿಂದ ನನ್ನ ಹೆಂಡತಿಯೊಡನೆ ಏನು ಮಾಡಬಹುದೆಂದು ಚರ್ಚಿಸಿದೆ. ಅವಳೂ ನನ್ನಷ್ಟೇ ಗಾಬರಿಯಲ್ಲಿದ್ದಳು.

ಇಷ್ಟೆಲ್ಲ ಪ್ರಹಸನ ನಡೆಯುತ್ತಿರುವಾಗ ನಮ್ಮಿಂದ ಮೂರ್ನಾಲ್ಕು ಅಡಿ ಅಂತರದಲ್ಲಿ ಒಬ್ಬ ವ್ಯಕ್ತಿ ಗಾಡಿ ನಿಲ್ಲಿಸಿಕೊಂಡು ನಮ್ಮನ್ನೇ ವೀಕ್ಷಿಸುತ್ತಿದ್ದರು. ನಾನು ಅವರ ಮುಖ ನೋಡಿದ್ದೇ ತಡ, ಹತ್ತಿರ ಬಂದು ಮಾತಾಡಿಸಿದರು. ಏನು ತೊಂದರೆಯಾಗಿದೆ ಎಂದು ಕೇಳಿ, ತಾವೂ ಬಂದು ನಮ್ಮ ಆಕ್ಟೀವಾವನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಿ ಸೋತರು. ತಕ್ಷಣ “ಮೇಡಮ್ ಅವರನ್ನು ಇಲ್ಲೇ ಕೂಡಿಸಿ, ನೀವು ನನ್ನ ಜೊತೆ ಬನ್ನಿ ಸರ್, ಇಲ್ಲೊಂದಷ್ಟು ಮೆಕಾನಿಕ್ ಅಂಗಡಿಗಳಿವೆ. ನಿಮ್ಮ ಅದೃಷ್ಟ ನೆಟ್ಟಗಿದ್ದರೆ ಯಾರಾದರೂ ಬಾಗಿಲು ತೆರೆದಿರಬಹುದು” ಎಂದರು. ನನಗೂ ಅದು ಸರಿ ಅನ್ನಿಸಿ ಅವರೊಡನೆ ಹೊರಟೆ. ಪುಣ್ಯಾತ್ಮ ತನಗೆ ಗೊತ್ತಿದ್ದ ಎಲ್ಲ ಮೆಕಾನಿಕ್ ಅಂಗಡಿಗಳನ್ನೂ ಸುತ್ತಿಸಿದರು. ಪ್ರಯೋಜನ ಮಾತ್ರ ಶೂನ್ಯ.

ಫೋಟೋ ಕೃಪೆ : The Better India

“ಹತ್ತಿರದಲ್ಲಿರುವ ಯಾವುದಾದರೂ ಪೆಟ್ರೋಲ್ ಬಂಕಿನಲ್ಲಿ ಗಾಡಿ ನಿಲ್ಲಿಸಿ ಬಸ್ಸಿನಲ್ಲಿ ಹೊರಟುಬಿಡಿ ಸರ್ ” ಎಂದು ಅಮೂಲ್ಯವಾದ ಸಲಹೆಯನ್ನಿತ್ತು, ನನ್ನನ್ನು ಅಲ್ಲೇ ಬಿಟ್ಟು ತಮ್ಮ ಮನೆಯ ದಾರಿಯನ್ನು ಹಿಡಿದರು ಆ ವ್ಯಕ್ತಿ.

ಅಲ್ಲಿಂದ ಆಟೋದಲ್ಲಿ ಆಕ್ಟೀವಾ ನಿಲ್ಲಿಸಿದ್ದ ಜಾಗಕ್ಕೆ ಬಂದು, ಮತ್ತೊಮ್ಮೆ ಸ್ಟಾರ್ಟ್ ಮಾಡಲು ಯತ್ನಿಸಿ, ಸೋತು ಹತ್ತಿರದಲ್ಲಿದ್ದ ಪೆಟ್ರೋಲ್ ಬಂಕಿನ ಕಡೆಗೆ ಗಾಡಿಯನ್ನು ತಳ್ಳುತ್ತಿದ್ದೆ. ಅಷ್ಟರಲ್ಲಿ ಒಬ್ಬರು ಮದ್ಯವಯಸ್ಕರು ಗಾಡಿಯಲ್ಲಿ ನಮ್ಮ ಬಳಿ ಬಂದು ಏನಾಗಿದೆ ಎಂದು ವಿಚಾರಿಸಿದರು. ಆಗಿದ್ದನ್ನೆಲ್ಲ ವಿವರಿಸಿ ಪೆಟ್ರೋಲ್ ಬಂಕ್ ಕಡೆಗೆ ಹೊರಡಲು ಸಿದ್ಧನಾದೆ. ಅಷ್ಟರಲ್ಲಿ ಆ ವ್ಯಕ್ತಿ, “ಒಂದು ಕೆಲಸ ಮಾಡಿ ಸರ್, ನೀವಿಬ್ಬರೂ ನಿಮ್ಮ ಗಾಡಿಯಲ್ಲಿ ಕುಳಿತುಕೊಳ್ಳಿ. ನಾನು ನಿಮ್ಮ ಗಾಡಿಯನ್ನು ಮುಂದೆ ಸಿಗುವ ಪೆಟ್ರೋಲ್ ಬಂಕ್ ವರೆಗೆ ತಳ್ಳುತ್ತೇನೆ” ಅಂದರು. ಗತ್ಯಂತರವಿಲ್ಲದೆ ತೀರಾ ಸಂಕೋಚದಿಂದಲೇ ಒಪ್ಪಿಕೊಂಡೆ.



ಒಂದರ್ಧ ಕಿಲೋಮೀಟರ್ ಹೋಗಿರಬಹುದು ನಾವು, ಅಲ್ಲೊಂದು ಬುಲೆಟ್‌ಗಳನ್ನು ಮಾತ್ರ ರಿಪೇರಿ ಮಾಡುವ ಮೆಕಾನಿಕ್ ಅಂಗಡಿ ಬಾಗಿಲು ಮುಚ್ಚುತ್ತಿರುವುದು ಕಂಡಿತು. ಅವನಿಗೆ ದಮ್ಮಯ್ಯ ಅಂದು ಗಾಡಿ ರಿಪೇರಿ ಮಾಡಿಸಿಕೊಂಡೆವು. ಗಾಡಿ ರಿಪೇರಿ ಆಗುವವರೆಗೂ ನಮಗೆ ಸಹಾಯ ಮಾಡಿದ ವ್ಯಕ್ತಿ ನಮ್ಮೊಡನೆಯೇ ಇದ್ದು, ನಾವು ಪುನಃ ಹೊರಟ ಮೇಲೂ ನಾಲ್ಕು ಕಿಲೋಮೀಟರುಗಳಷ್ಟು ದೂರ ನಮ್ಮೊಡನೆ ಬಂದು ನಮ್ಮನ್ನು ಬೀಳ್ಕೊಟ್ಟರು.

#ಇಪ್ಪತ್ತು_ನಿಮಿಷಗಳ ಇಡೀ ಪ್ರಕರಣವನ್ನು ಈಗ ಕಣ್ಮುಂದೆ ತಂದುಕೊಂಡರೂ ಒಮ್ಮೆ ನಖಶಿಖಾಂತ ರೋಮಾಂಚನವಾಗುತ್ತದೆ. ಹೆಂಡತಿಯನ್ನು ಅಂತಹ ಸಮಯದಲ್ಲಿ ಒಬ್ಬಳನ್ನೇ ಬಿಟ್ಟು ಹೋಗುವುದು ಎಂತಹ ಅಪಾಯದ ಕೆಲಸವಾಗಿತ್ತು! ಮೊದಲ ವ್ಯಕ್ತಿಯ ಜೊತೆಗೆ ಸುಮಾರು ಐದಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೋಗಿದ್ದೆ. ಆತ ನನ್ನ ಅಲ್ಲೇ ಬಿಟ್ಟು ಹೊರಟಿದ್ದ. ಒಂದು ವೇಳೆ ಅದೇ ವ್ಯಕ್ತಿ ವಾಪಸ್ ಬಂದು ನಿಮ್ಮ ಮನೆಯವರ ಬಳಿ ಬಿಡ್ತೀನಿ ಬನ್ನಿ ಅಂತ ಗಾಡಿ ಹತ್ತಿಸಿಕೊಂಡು ಹೊರಟಿದ್ದರೆ? ಅಥವಾ ಹಾದಿಹೋಕರಿಂದ ಆಕೆಗೆ ತೊಂದರೆಯಾಗಿದ್ದರೆ? ಬೆಂಗಳೂರಿನಂತಹ ಮಹಾನಗರದಲ್ಲಿ ಯಾರನ್ನು ನಂಬಲು ಸಾಧ್ಯ ಹೇಳಿ? ಈ ಎಲ್ಲಾ ಸಾಧ್ಯತೆಗಳನ್ನ ನೆನಪಿಸಿಕೊಂಡರೆ ನಡುಕ ಹುಟ್ಟುತ್ತದೆ.

ಆದರೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಯಕ್ಕೆ ಸರಿಯಾಗಿ ಬಂದು ನಮ್ಮ ಕಷ್ಟಕ್ಕಾದ ಆ ಇಬ್ಬರು ಮಹನೀಯರು ನನ್ನ ದೃಷ್ಟಿಯಲ್ಲಿ ನಿಜವಾದ ಹೀರೋಗಳು. ಇಂತಹವರ ಸಂತತಿ ಸಾವಿರವಾಗಲಿ. ಮಾಡಿದ ಸಹಾಯವನ್ನು ನೆನಪು ಮಾಡಿಕೊಳ್ಳುವುದೇ ಮಹಾಪಾಪ ಎನ್ನುವಂತಹವರೇ ತುಂಬಿರುವ ಈ ಕಾಲದಲ್ಲಿ, ಸಹಾಯ ಮಾಡಿದವರಿಗೇ ಎರವಾಗುವವರ ನಡುವೆ ಕರೆಯದೇ ಬಂದು ಸಹಾಯ ಮಾಡಿಹೋದ ಈ ಇಬ್ಬರೂ ಅನಾಮಿಕರು ಅನುಕರಣೀಯರು. ಅವರು ಮಾಡಿದ ಸಹಾಯ ಬಹುಕಾಲ ನೆನಪಿನಲ್ಲುಳಿಯುವಂತದ್ದು. ಇಂತಹ ಘಟನೆಗಳು ಆದಾಗಲೇ ಮನುಷ್ಯನಲ್ಲಿ ಇನ್ನೂ ಒಳ್ಳೆಯತನ ಉಳಿದಿದೆ ಎಂದು ಪದೇ ಪದೇ ಮನವರಿಕೆಯಾಗುವುದು. ಹೌದಲ್ಲವೇ?


  • ಆರ್. ಪಿ. ರಘೋತ್ತಮ

 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW