ವಿಭಿನ್ನ ಸಂಸ್ಕೃತಿಯ ಕಥೆಯನ್ನು ಕನ್ನಡದ್ದೇ ಎನಿಸುವಂತೆ ಅನುವಾದ ಮಾಡಿದ್ದಾರೆ. ಅಪರಿಚಿತವಾದ ಸಂಸ್ಕೃತಿಯನ್ನು ನಮ್ಮ ಹತ್ತಿರಕ್ಕೆ ತಂದಿದ್ದಾರೆ ಲೇಖಕಿ ಭೂಮಿಕಾ.ಆರ್ ಅವರು, ಮಾಲ್ಸಾವ್ಮಿ ಜೇಕಬ್ ಅವರ ಇಂಗ್ಲಿಷ್ ಮೂಲದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಹೆಸರು ‘ಜೊರಾಮಿ’. ಇದನ್ನು ಓದುಗರಿಗೆ ಪರಿಚಯಿಸಿದ್ದಾರೆ ಡಾ ಗಿರಿಜಾ ಶಾಸ್ತ್ರಿ ಅವರು ತಪ್ಪದೆ ಮುಂದೆ ಓದಿ…
ಇಂಗ್ಲಿಷ್ ಮೂಲ: ಮಾಲ್ಸಾವ್ಮಿ ಜೇಕಬ್
ಕನ್ನಡಕ್ಕೆ : ಭೂಮಿಕಾ.ಆರ್
ಪ್ರಕಾಶನ: ನವಕರ್ನಾಟಕ ಪ್ರಕಾಶನ ೨೦೨೫
ಪ್ರಕಾರ : ಕಾದಂಬರಿ
ಬೆಲೆ : ೩೫೦
ಒಂದು ವಿಮೋಚನೆಯ ಹಾಡಿನ ಪಲ್ಲವಿ.
ಈಶಾನ್ಯರಾಜ್ಯಗಳ ಸಂಸ್ಕೃತಿಯೆಂದರೆ, ಕಾಲೇಜು ವಾರ್ಷಿಕೋತ್ಸವಗಳಲ್ಲೋ, ಸಾಂಸ್ಕೃತಿಕ ಉತ್ಸವಗಳಲ್ಲೋ ಕಾಣಿಸಿಕೊಳ್ಳುತ್ತಿದ್ದ ನಾಗಾ ನೃತ್ಯಗಳು, ಬೊಂಬಿನ ನೃತ್ಯಗಳು, (ಮಿಜೋರಾಮ್) , ಮಣಿಪುರಿ ನೃತ್ಯಗಳು . ಇವುಗಳನ್ನೇ ನಾವು ಈಶಾನ್ಯದೇಶಗಳ ಸಂಸ್ಕೃತಿ ಎಂದು ತಿಳಿದುಕೊಂಡಿದ್ದೆವು. ಭೂಗೋಳ ಪಾಠಗಳಲ್ಲಿ ‘ಸಪ್ತಕನ್ಯೆಯರ ನಾಡು’, ‘ಕೋಳಿ ಕುತ್ತಿಗೆ’ಯ ಪ್ರದೇಶ ಇಂತಹ ಹೆಸರುಗಳ ಹೊರತು, ಈಶಾನ್ಯದೇಶಗಳು ಭಾರತಕ್ಕೆ ಸಂಬಂಧವೇ ಇಲ್ಲದಂತೆ ನಮ್ಮ ಭಾವಕೋಶದಾಚೆಗೇ ಉಳಿದುಬಿಟ್ಟಿದ್ದವು. ಆದರೆ, ಅದು ಅಷ್ಟೇ ಅಲ್ಲ ಎಂದು ಅದರ ಅನೇಕ ಆಯಾಮಗಳನ್ನು ಅನಾವರಣ ಮಾಡಿರುವುದು ಭೂಮಿಕಾ ಅವರ ‘ಜೊರಾಮಿ’ ಕಾದಂಬರಿ. ಮಾಲ್ಸಾವ್ಮಿ ಜೇಕಬ್ ಅವರ ಮಿಜೋರಾಮಿನ ‘ವಿಮೋಚನೆಯ ಹಾಡ’ನ್ನು ಕನ್ನಡಕ್ಕೆ ತಂದಿದ್ದಾರೆ.

ಭೂಮಿಕಾ ಅವರ ‘ಜೊರಾಮಿ’ ಓದುತ್ತಿದ್ದ ಹಾಗೆ , ಅನೇಕ ನೆನಪುಗಳು ಸುಳಿದು ಹೋದವು. ಮೈಸೂರಿನ ‘ಅಕ್ಕ’ ಉತ್ಸವದಲ್ಲಿ ಮಣಿಪುರದ ಕನ್ಹಯ್ಯ ಲಾಲ್ ಥಿಯೇಟರಿನ ಪ್ರಸಿದ್ಧ ನಟಿ ಸಾಬಿತ್ರಿ ಹೀಸ್ನಾಮ್ ಮೈಸೂರಿನ ರಂಗಾಯಣದ ರಂಗದ ಮೇಲೆ ಬೆತ್ತಲಾದಾಗಿದ್ದಳು. ಸಭಾಗೃಹ ಅಕ್ಷರಶಃ ಸ್ತಬ್ಧವಾಗಿತ್ತು .
ಮಾರನೆಯ ದಿನ ಈಶಾನ್ಯದೇಶಗಳ ಸಂಸ್ಕೃತಿಯ ಚರ್ಚೆ ನಡೆದಿತ್ತು ಎಂಬ ನೆನಪು. “ಇವರೆಲ್ಲ ಯಾವ ಭಾಷೆ ಆಡುತ್ತಾರೆ” ಎಂದು ನಾನು ಪಕ್ಕದ ಗೆಳತಿಯನ್ನು ಕೇಳಿದ್ದೆ. ಆಗ ಹಿಂದೆಯೇ ಕುಳಿತಿದ್ದ ಅರುಂಧತಿ ನಾಗ್ “ನೋಡಿ ನಮಗೆ ಈಶಾನ್ಯ ದೇಶಗಳ ಬಗ್ಗೆ ಎಷ್ಟು ಅಜ್ಞಾನವಿದೆ ಎಂದರೆ – ಅವರು ನಮ್ಮದೇ ದೇಶವಾಸಿಗಳು ಎಂಬುದನ್ನು ಮರೆಸುವಷ್ಟು” ಎಂದಿದ್ದರು.
“Indian Army Rape us ” ಎನ್ನುವ ಬ್ಯಾನರ್ ಹಿಡಿದು ಮಣಿಪುರದ ಹೆಂಗಸರು ಬತ್ತಲು ಮೆರವಣಿಗೆ ಹೊರಟ ಚಿತ್ರ.
ಮಣಿಪುರದ ಉಕ್ಕಿನ ಮಹಿಳೆಯೆಂದೇ ಖ್ಯಾತಳಾದ ಇರೋಮ್ ಶರ್ಮಿಳಾ Armed Forces (Special Powers) Act, ವಿರುದ್ಧ ಹದಿನಾರು ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಚಿತ್ರ ಕಣ್ಣ ಮುಂದೆ ಬಂದಿತು.
‘ಜೊರಾಮಿ’ ಓದಿದಾಕ್ಷಣ ಈ ನೆನಪುಗಳೆಲ್ಲಾ ಮುನ್ನೆಲೆಗೆ ಬಂದದ್ದು ಕಾಕತಾಳೀಯವೇನಲ್ಲ. ಬತ್ತಲು ಮೆರವಣಿಗೆ ಒಂದು ಸಶಕ್ತ ಪ್ರತಿಭಟನೆಯೂ ಆಗಬಲ್ಲುದು. Scribbles on akka ಸಾಕ್ಷ್ಯ ಚಿತ್ರದಲ್ಲೂ ಬೆತ್ತಲಾದವಳು ಮಣಿಪುರದ ಸಾಬಿತ್ರಿಯೇ!
ಅಕ್ಕನ ಬತ್ತಲು ಆತ್ಯಂತಿಕ ಬಿಡುಗಡೆಯ ಸಂಕೇತವೇ ಆದರೂ ಅದು ಒಂದು ಪ್ರತಿಭಟನೆಯ ಸ್ವರೂಪವೂ ಹೌದು! ಹೆಣ್ಣನ್ನು ಬತ್ತಲು ಮಾಡುವುದರ ಮೂಲಕವೇ ಹೀನಾಯವಾಗಿ ಒಂದು ಸಂಸ್ಕೃತಿಯನ್ನು/ ಜಾತಿಯನ್ನು ಹಣಿಯವುದಾದರೆ, ಬತ್ತಲ ಮೂಲಕವೇ ಉತ್ತರ ಕೊಡಬೇಕು. ಬಟ್ಟೆಯನ್ನು ಕಿತ್ತು ನಿರ್ವಾಣಗೊಳಿಸಬಹುದಾದರೆ, ನಿರ್ವಾಣದಿಂದ ಏನು ತಾನೇ ಕಿತ್ತುಕೊಳ್ಳಲು ಸಾಧ್ಯ? ( ಕೈಸಿರಿಯ ದಂಡವ ಕೊಳಬಹುದಲ್ಲದೆ) ಬತ್ತಲಾಗುವ ಪ್ರತಿಭಟನೆಯ ಮುಂದೆ ಬೇರೆ ಯಾವ ಸ್ವರೂಪದ ಪ್ರತಿಭಟನೆಯೂ ಎದುರಿಗಿರುವ ವ್ಯಕ್ತಿಯನ್ನು ಅಧೀರಗೊಳಿಸಲಾರದು.
ಮೇಲಿನ ಹೆಣ್ಣುಮಕ್ಕಳ ಬತ್ತಲ ಪ್ರತಿಭಟನೆ ಪಿತೃಪ್ರಧಾನತೆಗೆ, ಸರ್ವಾಧಿಕಾರೀ ಪ್ರಭುತ್ವದ ಆಳ್ವಿಕೆಗೆ ಯಾವ ಕಾಲಕ್ಕೂ ಒಂದು ಸಶಕ್ತ ಸಂದೇಶವನ್ನು ರವಾನಿಸುತ್ತದೆ. ಭಾರತ ಶಾಂತಿಪ್ರಿಯ ದೇಶ. ಅದರದು ಅಲಿಪ್ತ ನೀತಿ ಎಂಬೆಲ್ಲಾ ಪಾಠವನ್ನು ನಾವು ಪಠ್ಯಗಳ ಮುಖೇನ ಕಲಿತಿದ್ದೆವು. ಆದರೆ ಅದು ಬುಡಮೇಲಾಗಿದ್ದು ‘ಜೊರಾಮಿ’ಯನ್ನು ಓದಿದ ಮೇಲೆ. ಕೇವಲ ಸುದ್ದಿಯಾಗಿ ಉಳಿದಿದ್ದ ಮೇಲೆ ಹೇಳಿದ ಘಟನೆಗಳಿಗೆ ಜೀವ ಬಂದದ್ದು ‘ಜೊರಾಮಿ’ಯನ್ನು ಓದಿದನಂತರವೇ. ಸಪ್ತಕನ್ಯೆಯರ ನಾಡಿನ ಸಂಸ್ಕೃತಿಯ ಮೇಲೆ ನಡೆದ ಬರ್ಬರ ಹತ್ಯೆ, ದಬ್ಬಾಳಿಕೆಯ ಪ್ರತೀಕವಾಗಿ ‘ಜೊರಾಮಿ’ ನಿಲ್ಲುತ್ತದೆ. ‘ಜೊರಾಮಿ’ ಯನ್ನು ಹಿಂದುಮುಂದು ಮಾಡಿದರೆ ‘ಮಿಜೋರಾಮಿ’ಯೂ ಆಗುತ್ತಾಳೆ ಎಂದು ಶೈಲಜಾ ವೇಣುಗೋಪಾಲ್ ಹೇಳುತ್ತಾರೆ. ‘ಜೊರಾಮಿ’ ಕೇವಲ ‘ಮಿಜೋರಾಮಿ’ ಮಾತ್ರವಲ್ಲ. ಅವಳು ಇಡೀ ಈಶಾನ್ಯ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರದ ಸೇನಾಪಡೆ ನಡೆಸಿದ ಹಲ್ಲೆಗೆ , ಅಮಾನುಷ ಕೃತ್ಯಕ್ಕೆ ಎದುರಾಗಿ ನಿಂತ ದಿಟ್ಟ ಪ್ರತಿಮೆಯಾಗಿ ಕಾಣುತ್ತಾಳೆ.

ಜೀವ ವೈವಿಧ್ಯತೆಯಿಂದ ಕೂಡಿದ, ಬೆಟ್ಟಗುಡ್ಡ, ಜಲಪಾತಗಳಿಂದ , ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳಿಂದ ಕೂಡಿದ ಸುಂದರ ದೇಶ ಎಂದು ಮಿಜೋರಾಮ್ ನ್ನು ಗೂಗಲ್ ವರ್ಣಿಸುತ್ತದೆ. ಅದೇ ಸುಂದರ ಮಿಜೋರಾಮನ್ನು ಪ್ರಭುತ್ವದ ಅಹಂಕಾರವೆಂಬುದು ಕೊಲೆ, ಸುಲಿಗೆ, ರಕ್ತಪಾತ, ಅತ್ಯಾಚಾರಗಳಿಂದ ಹೇಗೆ ಕುರೂಪಗೊಳಿಸಿತ್ತು. ಅದನ್ನು ನೆಲಸಮ ಮಾಡಲಾಗಿತ್ತು ಎಂಬುದನ್ನು ಬಹಳ ಮಾರ್ಮಿಕವಾಗಿ ಕಟ್ಟಿಕೊಡುವ ‘ಜೊರಾಮಿ’ ಮಿಜೊರಾಮ್ ಭೂಪ್ರದೇಶದ ಅನನ್ಯ ಸೌಂದರ್ಯದ ವ್ಯಂಗ್ಯವೂ ಆಗಿದೆ.
ಟಿಬೆಟಿಯನ್ ಮತ್ತು ಬರ್ಮನ್ ಭಾಷಾ ಪ್ರಬೇಧಕ್ಕೆ ಸೇರಿರುವ ಮಿಜೋರಾಮ್ ಭಾಷೆ ಎಲ್ಲ ರೀತಿಯಿಂದಲೂ ಅಖಂಡ ಭಾರತ ( pan indian) ಎಂದು ನಾವೇನು ಕರೆಯುತ್ತೇವೆಯೋ ಅದಕ್ಕೆ ಸರಿಹೊಂದುವುದೇ ಇಲ್ಲ. ಅಲ್ಲಿನ ಊಟ ಉಪಚಾರಗಳು, ಮನುಷ್ಯರ ಹೆಸರುಗಳು, ಉಡುಗೆತೊಡುಗೆಗಳು, ಭಾಷೆ – ಹೀಗೆ ಎಲ್ಲ ಸಾಂಸ್ಕೃತಿಕ ಸ್ವರೂಪ ನಮಗಿಂತ ಭಿನ್ನ. ಸಾಂಸ್ಕೃತಿಕವಾಗಿ ಮೇಲು ನೋಟಕ್ಕೆ ಚೀನಾ ದೇಶದ ವಾಸನೆಯನ್ನು ಹೊಂದಿರುವಂತೆ ಕಾಣುತ್ತದೆ. ಮಿಜೋ ಜನರನ್ನು ದಕ್ಷಿಣ ಚೀನಾದ ಮಂಗೋಲಿಯಾ ಪ್ರಸ್ಥಭೂಮಿಯಿಂದ ವಲಸೆ ಬಂದ ಜನಾಂಗವೆಂದು ಹೇಳಲಾಗುತ್ತದೆ. ಆದರೂ ಅದು ತನ್ನ ವಲಸೆ ಬಂದ ನಾಡಿಗಿಂತ ಬೇರೆಯದೇ ಆದ ಬಹಳ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿದೆ ಎಂದೂ ತಿಳಿದುಬರುತ್ತದೆ.
೧೯೬೬-೮೬ ರ ನಡುವಿನ ಕಾಲವನ್ನು ಮಿಜೋರಾಮಿನ ಕತ್ತಲಕಾಂಡ ‘ರಾಮ್ ಬುವಾಯಿ’ ( Troubled Land) ಎಂದು ಕರೆಯಲಾಗುತ್ತದೆ. ಈ ಕಾಲದ ಜನರ ಅನುಭವ ಕಥನ ಮಿಜೋ ಸಾಹಿತ್ಯದ ಪ್ರಮುಖ ಮೈಲಿಗಲ್ಲಾಗಿದೆ. ಭಾರತ ಕೇಂದ್ರ ಸರ್ಕಾರದ ಹಿಡಿತದ ಜೊತೆಗೆ, ಅಸ್ಸಾಮಿನ ಹಿಡಿತದಿಂದಲೂ ತಾವು ಸ್ವತಂತ್ರರಾಗಬೇಕೆಂದು ಮಿಜೋ ಜನಾಂಗ ತನ್ನ ಸ್ವಾಯತ್ತತೆಗಾಗಿ ಹೋರಾಡಿದ ಕಾಲ ಇದು.
ಮಿಜೋ ಜನಗಳ ಈ ಹೋರಾಟವನ್ನು ಹತ್ತಿಕ್ಕಲು ಭಾರತದ / ಅಸ್ಸಾಮಿನ ಸೇನೆ ನಡೆಸಿದ ಜನಾಂಗ ಹತ್ಯೆಯ, ಅದರ ವಿರುದ್ಧ ಹೋರಾಡಿದ ಎಮ್ ಎನ್ ಎಫ್ ( ಮಿಜೋರಾಮ್ ನ್ಯಾಷನಲ್ ಫ್ರಂಟ್) ನಡುವಿನ ಸಂಘರ್ಷದ ಕಥೆಯೇ ‘ಜೊರಾಮಿ’ ಕಾದಂಬರಿಯ ಕೇಂದ್ರ. ಅದಕ್ಕೆ ಬಲಿಯಾದವರು ಮಾತ್ರ ಅಮಾಯಕರು ಎನ್ನುವುದನ್ನೂ ಇದು ಹೇಳುತ್ತದೆ.
ಇಂತಹ ವಿಭಿನ್ನವಾದ ಸಂಸ್ಕೃತಿಯ ಜೊತೆಗೆ ನಾವು ಯಾವರೀತಿಯಲ್ಲಿಯೂ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಹೀಗೆ ನಮ್ಮನ್ನು ಕನೆಕ್ಟ್ ಮಾಡುವುದು ಮನುಷ್ಯರ ನೋವು, ಸಾವು, ಸಂಕಟ, ಪ್ರೀತಿ,ಸ್ನೇಹ, ದೇಶಪ್ರೇಮ, ಅಂತಃಕರಣಗಳು.
ವಿದ್ಯಾವಂತಳಾದ ‘ಜೊರಾಮಿ’ ಮೂಲಕ ಈ ಸಂಘರ್ಷದ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಅವಳು ಇಂಗ್ಲಿಷ್ ಎಂ.ಎ. ಪದವೀಧರೆ, ಕಾಲೇಜು ಶಿಕ್ಷಕಿ. ಬಾಲ್ಯದಲ್ಲಿ ಸೈನಿಕರಿಂದ ಅತ್ಯಾಚಾರಕ್ಕೆ ಒಳಗಾಗಿರುತ್ತಾಳೆ. ಆ ಆಘಾತದ ಕರಿ ನೆರಳು ಅವಳನ್ನು ಕಾದಂಬರಿಯುದ್ದಕ್ಕೂ ಆವರಿಸಿಕೊಳ್ಳುತ್ತದೆ. ಹಿಂದೂ ಸಂಸ್ಕೃತಿಯಿಂದ ಭಿನ್ನವಾದ ಮಿಜೋರಾಮ್ ಸಂಸ್ಕೃತಿಯ ಮೇಲೂ ‘ಪಾತಿವ್ರತ್ಯ’ದ ಗರ ಬಡಿದದ್ದು, ಅದರ ಕರಾಳ ಪ್ರಭಾವವನ್ನು ತೋರಿಸುತ್ತದೆ.
ಪ್ರಭುತ್ವಕ್ಕಾಗಿ ನಡೆಯುವ ಹೋರಾಟದಲ್ಲಿ ಬಲಿಯಾಗುವವರೆಂದರೆ ಆಯಾ ಜನಾಂಗದ ಸಂಸ್ಕೃತಿಗೆ ಸೇರಿದ ಹೆಣ್ಣುಮಕ್ಕಳೇ. ಅವರ ಮೇಲೆ ಅತ್ಯಾಚಾರವೆಸಗಿ ಅವರ ಗಂಡ ಮಕ್ಕಳನ್ನು ಕೊಲ್ಲುವುದರ ಮೂಲಕ ಯುದ್ಧ ತನ್ನ ತೆವಲನ್ನು ತೀರಿಸಿಕೊಳ್ಳುತ್ತದೆ. ಇದು ಲಾಗಾಯ್ತಿನಿಂದ ನಡೆದು ಬರುತ್ತಿದೆ. ಅದರ ಪ್ರತೀಕವಾಗಿ ಜೊರಾಮಿ ಇದ್ದಾಳೆ. ಆದರೆ ಹಿಂಸೆ, ದಬ್ಬಾಳಿಕೆಗೂ ಒಂದು ಅಂತ್ಯವಿದ್ದೇ ಇದೆ. ಎಲ್ಲಾ ನಾಶಮಾಡಿದ ಮೇಲೆ ಉಳಿಯುವುದಾದರೂ ಏನು? ಭೌತಿಕ ಸಂಗತಿಗಳನ್ನಾದರೂ ನಾಶಗೊಳಿಸಬಹುದು, ನಾಶಗೊಳಿಸಿದ ಆನಂತರ ಉಳಿಯುವ ಬಯಲನ್ನು ಹೇಗೆ ನಾಶಗೊಳಿಸಲು ಸಾಧ್ಯ? ಕೇಂದ್ರಸರ್ಕಾರದೊಂದಿಗೆ ಶಾಂತಿ ಒಪ್ಪಂದವಾಗಿ ಮಿಜೋರಾಮಿಗೆ ಸ್ವತಂತ್ರ ರಾಜ್ಯದ ಪಟ್ಟಸಿಗುತ್ತದೆ. ಕಾದಂಬರಿ ಶಾಂತಿಯಿಂದ ಮುಕ್ತಾಯವಾಗುತ್ತದೆ. ಜೊರಾಮಿಗೆ ತನ್ನ ಗಂಡ ಸಂಗನ ಬಗೆಗಿನ ತಪ್ಪು ಕಲ್ಪನೆ ನಿವಾರಣೆಯಾಗುತ್ತದೆ.
ಯುದ್ಧದ ವಿವರಗಳು, ಅದರ ಉಪಾಯಗಳು, ಗುಳೆ ಹೊರಡುವುದು, ಇಡೀ ಹಳ್ಳಿಗೆ ಹಳ್ಳಿಯೇ ಸುಟ್ಟು ಬೂದಿಯಾದಾಗ ಜನರ ಅತಂತ್ರ ಸ್ಥಿತಿ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಒಂದು ಭೀಭತ್ಸ ಲೋಕವನ್ನು ಸೃಷ್ಟಿಸುತ್ತವೆ. ಆದರೆ ಇದರ ಎಡೆಯಲ್ಲೇ ಜೊರಾಮಿ ಮತ್ತು ಕಿಮಿಯ ಸ್ನೇಹ, ಕಷ್ಟಕಾಲದಲ್ಲಿ ನೆರವಾಗುವ ಗ್ರಾಮಸ್ಥರು, ತನ್ನ ಜೀವವನ್ನೇ ಪಣಕ್ಕಿಟ್ಟು, ಶಾಂತಿದೂತನಾಗಿ ಹೊರಡುವ ಪಾದ್ರಿ, ಮತ್ತೆ ಪ್ರೇಮದ ಟ್ರ್ಯಾಕಿಗೆ ಬರುವ ಜೊರಾಮಿ ಮತ್ತು ಅವಳ ಗಂಡನ ಅನುಬಂಧ- ಇವು ಕಾದಂಬರಿ, ಹಿಂಸೆಯ ಮೇಲೆ ಸಾಧಿಸಿದ ಜಯವಾಗಿದೆ.
ಕೇಡಿಗೂ ಕೂಡ ಕೇಡುಗಾಲವಿದ್ದೇ ಇದೆ. ಕಾಲನ ದೈತ್ಯ ದಾಪುನಡಿಗೆಯ ಕೆಳಗೆ ಎಲ್ಲಾ ನಾಶವಾಗಲೇ ಬೇಕು. ಹಾಗೆ ನಾಶಹೊಂದಿದ ಬೂದಿಯಿಂದಲೇ ಹೊಸಹುಟ್ಟು ಅರಳಬೇಕು. ಕೇಡಿನ ಅಮಂಗಲಸ್ಥಿತಿಯಿಂದ, ಶಾಂತಿಯ ಮಂಗಲ ಸ್ಥಿತಿಗೆ ತಲಪುವ ಸೇತುವೆಯಾಗಿ ಯೇಟ್ಸ್, ಥಾಮಸ್ ಹಾರ್ಡಿ,ಕಾಫ್ಕಾ, ಜೇನ್ ಏಯರ್ ಬಂದಿದ್ದಾರೆ. ಜೊತೆಗೆ ಮಿಜೋ ಹಾಡುಗಳೂ ಕೂಡಿಕೊಂಡಿವೆ. ಎಲ್ಲವೂ ಸೇರಿ ಒಂದು ಅಪರೂಪದ ಘಮಲನ್ನು ಈ ಕೃತಿ ಹೊರಸೂಸುತ್ತದೆ.
ಪ್ರಭುತ್ವ ಹಿಂಸೆಯ ಕಡೆಗಿದ್ದರೆ, ‘ಮನುಷ್ಯಕುಲ’ ವನ್ನು ಒಂದು ಮಾಡುವ ಸಾಹಿತ್ಯ ಎಂದೂ ಶಾಂತಿ, ಪ್ರೀತಿಯ ಕಡೆಗೇ ತಾನೇ? ಈ ಕೃತಿಯಲ್ಲಿ ಮಿಜೋರಾಮಿನ ಭಾಷೆ ಕೆಲವು ಸಲ ಅನುವಾದಗೊಳ್ಳದೇ ಉಳಿದಾಗಲೂ ಹೃದ್ಗತವಾಗುತ್ತವೆ. (ಕೊನೆಯ ಪುಟದಲ್ಲಿ ಅನುವಾದ ಒದಗಿಸಿರುವುದು ಬಹಳ ಸಂಗತವಾಗಿದೆ) ಕಾರಣ ಅವು ಸೃಷ್ಟಿಸುವ ಪರಿಣಾಮಕಾರೀ ಸನ್ನಿವೇಶ, ಸಂದರ್ಭಗಳು. ಭೂಮಿಕಾ , ಹೀಗೆ ವಿಭಿನ್ನ ಸಂಸ್ಕೃತಿಯ ಕಥೆಯನ್ನು ಕನ್ನಡದ್ದೇ ಎನಿಸುವಂತೆ ಅನುವಾದ ಮಾಡಿದ್ದಾರೆ. ಅಪರಿಚಿತವಾದ ಸಂಸ್ಕೃತಿಯನ್ನು ನಮ್ಮ ಹತ್ತಿರಕ್ಕೆ ತಂದಿದ್ದಾರೆ. ಅವರಿಗೆ ಅಭಿನಂದನೆಗಳು.
- ಡಾ ಗಿರಿಜಾ ಶಾಸ್ತ್ರಿ
