ಕಾಗೆ ಹಾರಿಸೋದು ಅಂದ್ರೆ ಇದೇನಾ?…ಪಶು ವೈದ್ಯರಾದ ಡಾ. ಎನ್.ಬಿ.ಶ್ರೀಧರ ಅವರು ಇದರ ಬಗ್ಗೆ ಏನೆನ್ನುತ್ತಾರೆ, ಅದರ ಶಬ್ಧಕ್ಕೆ ಏನಾದರೂ ಐತಿಹಾಸಿಕ ಹಿನ್ನೆಲೆ ಇದೆಯೇ? ಮುಂದೆ ಓದಿ…
“ನೋಡಿ ಆತ ಹೇಗೆ ಕಾಗೆ ಹಾರಿಸಿದಾ?” ಕಾಗೆ ಹಾರ್ಸಾತ್ತಿದ್ದಾನೆ ಹುಶಾರಮ್ಮ… ಎಂದೆಲ್ಲಾ ಉದ್ಗಾರ ಕೇಳೇ ಇದ್ದೇ ಇದೆ. ಕೆಲವು ವಾಹಿನಿಗಳೆಲ್ಲಾ ದಿನವೆಲ್ಲಾ ಕಾಗೆ ಹಾರ್ಸಾತ್ತಾನೇ ಇರ್ತಾವೆ. ಅನೇಕ ರೇಡಿಯೋ ಜಾಕಿಗಳು ಕಾಗೆ ಹಾರ್ಸಿಯೇ ಫೇಮಸ್ಸಾಗಿರೋದು ಅಂದರೆ ತಪ್ಪಿಲ್ಲ. ಯಾರಿಗೋ ಕರೆ ಮಾಡಿ ಯಾಮಾರಿಸುವುದು, ಅಣಕ ಮಾಡುವುದು ಇದಕ್ಕೆಲ್ಲಾ “ಕಾಗೆ ಹಾರಿಸುವುದು” ಎನ್ನುವುದು ವಾಡಿಕೆ. ಈ ಶಬ್ಧ ಇತ್ತೀಚೆಗೆ ಜನಪ್ರಿಯವಾಗಿರುವುದು. ನಟ ಜಗ್ಗೇಶ್ ಕೊಡುಗೆ ಈ ಶಬ್ಧಕ್ಕೆ ಅಪಾರ. ಅವರ ಅನೇಕ ಸಿನಿಮಾಗಳಲ್ಲಿ ಅವರು ಅನೇಕ ಬಾರಿ “ಕಾಗೆ ಹಾರಿಸಿ” ಮನರಂಜನೆ ನೀಡಿದ್ದಾರೆ. ಕೆಲವು ವಿಶೇಷ ಶಬ್ಧಕ್ಕೆ ಅರ್ಥ ಹುಟ್ಟಿಕೊಂಡಿರುವುದೇ ಜಗ್ಗೇಶ್ ಸಿನಿಮಾಗಳಿಂದ. ಅವರ ಸರ್ವರ್ ಸೋಮಣ್ಣ, ತರ್ಲೆ ನನ್ಮಗ, ಅಲಿಯ ಅಲ್ಲ ಮಗಳ ಗಂಡ ಇತ್ಯಾದಿ ಚಿತ್ರಗಳಲ್ಲಿ ಹೊಸ ಹೊಸ ಶಬ್ಧಗಳಾದ “ಡಬ್ಬಾ ನನ್ಮಗ” “ಡಗಾರ್”, ಕಾವ್ ಕಾವ್, ಕಾಗೆ ಹಾರ್ಸೋದು, ಇನ್ನು ಏನ್ನೇನೋ ಶಬ್ಧಗಳು ಹುಟ್ಟಿಕೊಂಡವು ಅನಿಸುತ್ತೆ.

ಫೋಟೋ ಕೃಪೆ : fallsavenueresort
ಅಷ್ಟಕ್ಕೂ ಏನಿದು ಕಾಗೆ ಹಾರಿಸೋದು? ಇದಕ್ಕೆ ಗುಬ್ಬಿ ಹಾರಿಸುವುದು, ಪಾರಿವಾಳ ಹಾರಿಸೋದು, ಇಲಿ ಹಾರಿಸುವುದು, ದನ ಹಾರಿಸುವುದು, ನವಿಲು ಹಾರಿಸುವುದು ಎಂದು ಯಾಕೆ ಕರೆಯಲ್ಲ? ಕಾಗೆ ಕಪ್ಪಗಿದೆ ಎಂಬುದಕ್ಕೂ ಕಾಗೆ ಹಾರಿಸುವುದಕ್ಕೂ ಏನಾದರೂ ಸಂಬಂಧವಿದೆಯೇ? ಕೋಗಿಲೆಯೂ ಸಹ ಕಪ್ಪು. ಇನ್ನೂಕಪ್ಪು ಬಣ್ಣದ ಅನೇಕ ಹಕ್ಕಿಗಳಿದ್ದರೂ ಸಹ ಕಾಗೆ ಹಾರಿಸೋದು ಮಾತ್ರ ಜನಮನದಲ್ಲಿ ಸ್ಥಿರಸ್ಥಾಯಿಯಾಗಿದ್ದು ಪ್ರತಿ ದಿನ ಜನ “ಕಾಗೇ ಹಾರಿಸ್ತಾನೇ” ಇದ್ದಾರೆ.
ಹೋಗಲಿ !. ಈ ಶಬ್ಧಕ್ಕೆ ಏನಾದರೂ ಐತಿಹಾಸಿಕ ಹಿನ್ನೆಲೆ ಇದೆಯೇ? ಗೊತ್ತಿಲ್ಲ. ೧೯೯೦ ರ ದಶಕಕ್ಕಿಂತ ಹಿಂದೆ ಈ ಶಬ್ಧ ಇರಲಿಲ್ಲವೇನೋ?

ಫೋಟೋ ಕೃಪೆ : pixabay
ಆದರೆ ಇದಕ್ಕೊಂದು ವೈಜ್ಞಾನಿಕ ಅನ್ನಬಹುದಾದ ಹಿನ್ನೆಲೆಯನ್ನು ತಳುಕು ಹಾಕಬಹುದಾದರೂ ಸಹ ಈಗಿನ ಭಾವಾರ್ಥಕ್ಕೂ ಅದಕ್ಕೂ ಸಂಬಂಧವಿಲ್ಲ. ಕಾಗೆ ನೇರವಾಗಿ ಹಾರುತ್ತದೆ ಎಂಬುದು ಒಂದು ನಂಬಿಕೆ. ಈಗಿನ ಆಧುನಿಕ ಹಡಗುಗಳಲ್ಲಿ ಜಿಪಿಎಸ್ ಮತ್ತು ಉಪಗ್ರಹದ ಸಂಪರ್ಕ ಇತ್ಯಾದಿ ಅನೇಕ ಸಂಪರ್ಕ ಸಾಧನಗಳಿವೆ. ಆದರೆ ಇದ್ಯಾವುದೂ ಇರದ ಕಾಲದಲ್ಲಿ ಹಡಗಿನ ನಾವಿಕರು ಅವರೊಂದಿಗೆ ಒಂದಿಷ್ಟು ಕಾಗೆಗಳ ಗೂಡನ್ನು ಅವುಗಳ ಸಂಸಾರ ಸಮೇತ ಕೊಂಡೊಯ್ಯುತ್ತಿದ್ದರ೦ತೆ.!
ಅವರಿಗೆ ದಾರಿ ತಪ್ಪಿದೆ ಅನಿಸಿದಾಗ ಅಥವಾ ಯಾವುದಾದರೂ ಸಮೀಪದ ಭೂಭಾಗಕ್ಕೆ ಹೋಗಬೇಕೆಂದು ಅನಿಸಿದರೆ ನಾವಿಕರು “ಕಾಗೆಗಳನ್ನು ಹಾರಿ”ಸುತ್ತಿದ್ದರಂತೆ. ಕಾಗೆ ಸಮುದ್ರದಲ್ಲಿ ಎಷ್ಟೆಂದು ಹಾರುತ್ತದೆ? ಅದು ನೆಲ ಇರುವ ದಿಕ್ಕಿನಡೆ ಹಾರುತ್ತದೆ. ಆ ದಿಕ್ಕಿನೆಡೆ ಹಡಗು ನಡೆಸಿದರೆ ಭೂಭಾಗ ಸಿಗುತ್ತದೆ ಎಂಬುದು ನಾವಿಕರ ಲೆಕ್ಕಾಚಾರವಾಗಿತ್ತು ಎನ್ನುತ್ತಾರೆ. ಈವತ್ತಿಗೂ ಸಹ ಹಡಗಿನಲ್ಲಿ “ಕಾಗೆ ಗೂಡು” ಎನ್ನುವ ಒಂದು ಸ್ಥಳ ಇಡುವುದು ಸಂಪ್ರದಾಯದಂತೆ ರೂಢಿಯಾಗಿದೆಯಂತೆ. ಎರಡು ಸ್ಥಳಗಳ ನೇರ ಅಂತರವನ್ನು ಅಳೆಯಲು ಸಹ “ಕಾಗೆ ಹಾರಿಸಿದಂತೆ” ಎಂದು ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ. ಈವತ್ತಿಗೂ ಸಹ ಕಾಗೆ ಹಾರಿದಂತೆ ( ಯಾಸ್ ಥೆ ಕ್ರೊವ್ ಪ್ಲಾಯ್ಸ್ ) ಎಂದು ಗೂಗಲಿಸಿದರೆ ತರಾವರಿ ಮಾಹಿತಿಗಳು ದೊರಕುತ್ತವೆ !!
ಕೊನೆಗೂ ನಾನು ಹಾರಿಸಿದ್ದು ಕಾಗೇನಾ ಅಲ್ಲವಾ ಅನ್ನೋದನ್ನು ನೀವೇ ಹೇಳಬೇಕು !
- ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತç ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ
