‘ಕಡಮ್ಮಕಲ್ಲು ಎಸ್ಟೇಟ್’ ಬಗ್ಗೆ ನನ್ನ ಅಭಿಪ್ರಾಯ

ನೌಶಾದ್ ಜನ್ಮತ್ತ್ ಅವರ ಮೊದಲ ಕಿರು ಕಾದಂಬರಿ ‘ಕಡಮ್ಮಕಲ್ಲು ಎಸ್ಟೇಟ್’. ಲೇಖಕ ನೌಶಾದ್ ಜನ್ನತ್ತ್ ಮೂಲತಃ ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ ಗ್ರಾಮದವರು. ಕೊಡಗಿನ ಎಸ್ಟೇಟ್ ಒಂದರಲ್ಲಿ ನಡೆಯುವ ಕತೆಯನ್ನು ಲೇಖಕರು ಕಾದಂಬರಿ ರೂಪ ಕೊಟ್ಟು, ಓದುಗರ ಗಮನ ಸೆಳೆದಿದ್ದಾರೆ, ‘ಕಡಮ್ಮಕಲ್ಲು ಎಸ್ಟೇಟ್’ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ ತಪ್ಪದೆ ಓದಿ…

ಪುಸ್ತಕ : ಕಡಮ್ಮಕಲ್ಲು ಎಸ್ಟೇಟ್
ಲೇಖಕರು : ನೌಶಾದ್ ಜನ್ನತ್ತ್
ಪ್ರಕಾಶಕರು : ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್
ಬೆಲೆ : ೧೦೦/
ಪ್ರಕಾರ : ಕಾದಂಬರಿ

‘ಕಡಮ್ಮಕಲ್ಲು ಎಸ್ಟೇಟ್’ ಕಿರು ಕಾದಂಬರಿ ಕುರಿತು ಈ ಹಿಂದೆ ಹೇಮಂತ್ ಪಾರೇರ ಅವರು ಬರೆದಿದ್ದರು, ಈ ಪುಸ್ತಕವನ್ನು ನಾನು ಕೂಡಾ ಓದಬೇಕು ಎಂದು ಕುತೂಹಲವನ್ನ ವ್ಯಕ್ತ ಪಡಿಸಿದ್ದೆ, ಅದನ್ನು ತಿಳಿದು ‘ಕಡಮ್ಮಕಲ್ಲು ಎಸ್ಟೇಟ್’ ಲೇಖಕ ನೌಶಾದ್ ಜನ್ನತ್ತ್ ಅವರು ಪ್ರೀತಿಯಿಂದ ಪುಸ್ತಕವನ್ನು ನನಗೆ ಕಳುಹಿಸಿ ಕೊಟ್ಟರು. ಪುಸ್ತಕ ಓದುವುದು ತಡವಾದರೂ ಅದರಲ್ಲಿನ ಇಂಚಿಂಚೂ ಅಕ್ಷರವನ್ನು ಬಿಡದೆ ಓದಿದ್ದೇನೆ. ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ .

ನನ್ನನ್ನು ಮೊದಲು ಆಕರ್ಷಿಸಿದ್ದು ‘ಕಡಮ್ಮಕಲ್ಲು ಎಸ್ಟೇಟ್’  ಎನ್ನುವ ಶೀರ್ಷಿಕೆ. ಎಸ್ಟೇಟ್ ಎಂದಾಗ ನಮ್ಮ ಮಸ್ತಕಕ್ಕೆ ಬರುವುದು ಬೆಟ್ಟ, ಗುಡ್ಡ, ಕಾಡು, ನದಿ, ಪ್ರಕೃತಿ ಸೌಂದರ್ಯಗಳ ಮಧ್ಯೆ ಇರುವ ಕಾಫಿ ತೋಟ. ಈ ಎಲ್ಲ ಸಮೃದ್ಧಿ ಸಿಗುವುದು ಕೊಡಗು ಜಿಲ್ಲೆಯಲ್ಲಿ.  ಅಲ್ಲಿನ ಎಸ್ಟೇಟ್ ನಲ್ಲಿ ನಡೆದ ನೈಜ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕಾದಂಬರಿಯನ್ನು ಓದುಗರ ಮುಂದಿಟ್ಟಿರುವುದಾಗಿ ಲೇಖಕರು ಅವರ ಮನದ ಮಾತಿನಲ್ಲಿ ಹೇಳಿದ್ದಾರೆ. ದೊಡ್ಡದಾದ ಕಾಫಿ ಬೆಳೆ, ಮೆಣಸು, ದೊಡ್ಡದಾದ ಮನೆ, ಜಿಪ್ ಇತರೆ ವಾಹನಗಳನ್ನು ನೋಡಿದಾಗ ಕೊಡಗು ಕಾಫಿ ನಾಡಿನ ಜೊತೆಗೆ ಶ್ರೀಮಂತರ ನಾಡು ಅನ್ನೋದು ನಮ್ಮಂತ ಪ್ರವಾಸಿಗರಿಗೆ ಅನಿಸುವುದು ಸಹಜ. ಕೊಡಗು ತನ್ನ ರಮಣೀಯ ದೃಶ್ಯಗಳಿಂದ ಪ್ರವಾಸಿಗರನ್ನು ಸೆಳೆಯುತ್ತಾ ಬಂದಿದೆ, ಅದರ ಒಳಗೆ ಏನಿದೆ ಅನ್ನೋದು ಯಾವ ಪ್ರವಾಸಿಗರು ಹೊಕ್ಕಿ ನೋಡಿಲ್ಲ. ಆದರೆ ಈ ಕಾದಂಬರಿ ‘ಸ್ವರ್ಗದ ಭೂಮಿಯಲ್ಲಿ ನರಕದ ದರ್ಶನ” ಮಾಡಿಸುತ್ತದೆ ಅಂತ ಈ ಕಾದಂಬರಿಗೆ ಮುನ್ನುಡಿ ಬರೆದ ಕೊಡಗಿನ ಹಿರಿಯ ಲೇಖಕರಾದ ಭಾರದ್ವಾಜ್ ಅವರು ಹೇಳುತ್ತಾರೆ. ಅದರಂತೆ ಒಂದೊಂದು ಪುಟ ತಿರುವುತ್ತಾ ಹೋದಂತೆ ನರಕದ ದರ್ಶನವಾಗುತ್ತದೆ. ಮಾಲೀಕರು ತಮ್ಮ ಕೆಳಗೆ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ನೋಡುವ ಪರಿ, ಹಣದ ದುರಾಸೆಗೆ ಇನ್ನೊಬ್ಬರನ್ನು ಮುಳುಗಿಸಿ ಅವರ ಹೆಣದ ಮೇಲೆ ನಿಲ್ಲುವ ಕ್ರೂರ ಮನಸ್ಸುಗಳು ಈ ಕಾದಂಬರಿಯಲ್ಲಿ ಕಾಣಬಹುದು.

ಈ ಕಾದಂಬರಿ ಮುಸ್ಲಿಂ ಕುಟುಂಬದ ಸುತ್ತ ಹೆಣೆಯಲಾಗಿದೆ. ಮಹಮ್ಮದ್, ಫಾತಿಮಾ, ನಿಂಗೇಗೌಡ, ತಮ್ಮೆಗೌಡ, ಚೆಟ್ಟಿಯರ್, ಖತೀಜಾ, ಜಾರ್ಜ್, ಅಹಮ್ಮದ್, ಸುಶೀಲ್, ಚೆಟ್ಟಿಯಾರ್ ಇವು ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳು.

ಒಂದೊಂದು ಪಾತ್ರಗಳು ಒಂದೊಂದು ಕತೆಯನ್ನು ಹೇಳುತ್ತವೆ.  ಒಂಟಿ ಹೆಣ್ಣುಮಗಳಿಗೆ ಮೋಸ ಮಾಡುವ ಚಿತ್ರಣ , ಹೆಣ್ಣು ತನ್ನ ಮಾಯೆಯಲ್ಲಿ ಕಾಮುಕನನ್ನು ಬಂಧಿಸುವ ಚಿತ್ರಣ, ಎಸ್ಟೇಟ್ ನಲ್ಲಿ ನಡೆಯುವ ಅವ್ಯವಹಾರಗಳು ಮತ್ತು ಅವು ಕಣ್ಣಿಗೆ ಕಂಡರೂ ಕಾಣದಂತೆ ಬದುಕುವ ಜನರ ಪರಿಸ್ಥಿತಿಯನ್ನು ನೌಶಾದ್ ಅವರು ಕಾದಂಬರಿಯಲ್ಲಿ ಚನ್ನಾಗಿ ಹಿಡಿದಿಟ್ಟಿದ್ದಾರೆ. ಕಾದಂಬರಿಯಲ್ಲಿ ಬರುವ ಪ್ರೇಮಿಗಳ ಕತೆ ಓದುವಾಗ ನನ್ನ ಕಾಲೇಜ್ ದಿನಗಳಲ್ಲಿ ನಡೆಯುತ್ತಿದ್ದ ಸ್ನೇಹಿತರ ಪ್ರೇಮ ಕತೆ ನೆನಪಾಯಿತು, ಜೊತೆಗೆ ಅಂದಿನ ಪ್ರೇಮದಲ್ಲಿದಂತಹ ನಿಷ್ಕಲ್ಮಶ ಪ್ರೀತಿ ಇಂದಿನ ದಿನದಲ್ಲಿ ಸಿಗುವುದು ಕಷ್ಟವೆನ್ನಿಸಿತು.

ಕಡಮ್ಮಕಲ್ಲು ಎಸ್ಟೇಟ್ ಲೇಖಕ ನೌಶಾದ್ ಜನ್ನತ್ತ್

ನೌಶಾದ್ ಅವರು ಧರ್ಮದ ವಿಚಾರದಲ್ಲಿ ಸೂಕ್ಷ್ಮತೆಯನ್ನು ಕಾಯ್ದುಕೊಂಡು, ಕತೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇದು ಒಬ್ಬ ಉತ್ತಮ ಲೇಖಕನ್ನಲ್ಲಿ ಇರಬೇಕಾದ ಲಕ್ಷಣವನ್ನು ಎತ್ತಿ ತೋರಿಸುತ್ತದೆ.

ನೌಶಾದ್ ಅವರು ಕಾದಂಬರಿಯಲ್ಲಿ ಎಲ್ಲಿ ಸರಿಯಾಗಿದ್ದಾರೆ, ಎಲ್ಲಿ ತಪ್ಪಿದ್ದಾರೆ ಅಂತ ನಾನು ಹೇಳಲು ಹೋಗುವುದಿಲ್ಲ. ನಾನು ವಿಮರ್ಶಕಿಯಂತೂ ಅಲ್ಲ, ಆದರೆ ಕತೆ ಓದುವಾಗ ಮಧ್ಯೆದಲ್ಲಿ ಕತೆ ಬಿಟ್ಟು ಹೋದಂತೆ ಅಲ್ಲಲ್ಲಿ ಅನಿಸಿದ್ದು ಬಿಟ್ಟರೆ, ಓದುಗಳಾಗಿ ಕಾದಂಬರಿಯನ್ನು ಕಷ್ಟ ಪಟ್ಟು ಓದಲಿಲ್ಲ, ಇಷ್ಟ ಪಟ್ಟು ಓದಿದ್ದೇನೆ ಎಂದು ಹೇಳುತ್ತೇನೆ . ನೀವುಗಳು ಓದಿ, ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.

ಕೊನೆಯದಾಗಿ ಸಮಾಜ ಸೇವೆಯ ಜೊತೆಗೆ ನೌಶಾದ್ ಅವರು ಸಾಹಿತ್ಯದ ಕೃಷಿ ಹೀಗೆ ಮುಂದೆವರೆಯಲಿ ಎಂದು ಶುಭ ಕೋರುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW