ಸೂರ್ಯದೇವ ಮರ-ಗಿಡಗಳ ನಡುವಿಂದ ನಲಿಯುತ ಹೊಳೆಯುತ ಒಮ್ಮೆ ಬರಬಾರದೆ ?…ಯುವ ಕವಿಯತ್ರಿ ಗೀತಾಂಜಲಿ ಎನ್ ಎಂ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಾದಿಹೆವು ನೇಸರ ನಿನ್ನ ರಂಗಿನ ರಶ್ಮಿಗಳಿಗಾಗಿ
ಹಂಬಲಿಸುತಿಹೆವು ನೇಸರ ನಿನ್ನೆಳೆ ಬಿಸಿಲಿಗಾಗಿ
ಬೇಡುತಿಹೆವು ನೇಸರ ನಿನ್ನ ಬಿಸಿ ತಾಪಕ್ಕಾಗಿ !
ವರ್ಷಾಧಾರೆಯ ಅಬ್ಬರಕ್ಕೆ ನರಳಿ
ನಲುಗಿದ ಮರಗಿಡಗಳು ನಿನ್ನೊಲವ
ಬಿಸಿಯಪ್ಪುಗೆಯನು ಬಯಸುತಿಹವು
ಕೊರೆವ ಚಳಿಯಲಿ ಸುರಿವ ಮಳೆಯಲಿ
ನೊಂದ ಪಶು~ಪಕ್ಷಿಗಳು ನಿನ್ನ ಸ್ಪರ್ಶವನು
ಕೇಳುತಿಹವು !
ಕಾದಿಹವು ಮೊಗ್ಗುಗಳು ಸುಮಗಳಾಗಲು
ಕಾದಿಹವು ಹಕ್ಕಿಗಳು ಬಾನಲ್ಲಿ ಹಾರಾಡಲು
ಕಾದಿಹವು ಬಿತ್ತಿದ ಬೀಜಗಳು ಬೆಳೆಗಳಾಗಲು
ಕಾದಿಹಳು ಇಳೆ ಕುಸಿದ ತನ್ನೊಡಲನು ಸೇರಲು !
ಹೇ….
ಸೂರ್ಯದೇವ ನಮ್ಮಯ ಕರೆಯನ್ನೊಮ್ಮೆ
ಆಲಿಸುತ ಅವನಿಯನು ಬಣ್ಣ ಬಣ್ಣದಿ
ರಂಗೇರಿಸುತ ; ಬಾನಂಚಿನ ಮರೆಯಿಂದ
ಮರ-ಗಿಡಗಳ ನಡುವಿಂದ ನಲಿಯುತ
ಹೊಳೆಯುತ ಒಮ್ಮೆ ಬರಬಾರದೆ ?
- ಗೀತಾಂಜಲಿ ಎನ್ ಎಂ – ಕೊಡಗು
