‘ಪದ್ಮನಾದ’ ಕೃತಿ ಪರಿಚಯ :  ಎನ್.ಎಸ್.ಶ್ರೀಧರ ಮೂರ್ತಿ

ಬೆಂ.ಶ್ರೀ.ರವೀಂದ್ರ ಅವರು ಬರೆದ ವಿದ್ವಾನ್ ಆರ್.ಕೆ.ಪದ್ಮನಾಭ ಅವರ ಜೀವನದ ಮುಖ್ಯ ಘಟನೆಗಳನ್ನು ಒಳಗೊಂಡ ‘ಪದ್ಮನಾದ’ ಎನ್ನುವ ಜೀವನ ಚಿತ್ರಣದ ಕೃತಿ ಬಿಡುಗಡೆ ಆಗಿದ್ದು, ಸಂಗೀತದ ಶಾಸ್ತ್ರೀಯ ಕಲಿಕೆ ಇಲ್ಲದ ನನ್ನಂತವನಿಗೆ ಆರ್.ಕೆ.ಪದ್ಮನಾಭ ಅವರಂತಹ ಮೇರು ಸಂಗೀತಗಾರರ ನಿಕಟ ಒಡನಾಟ ಸಿಕ್ಕಿದ್ದು ಪುಣ್ಯ ಎನ್ನುತ್ತಾರೆ ಖ್ಯಾತ ಪತ್ರಕರ್ತರಾದ  ಎನ್.ಎಸ್.ಶ್ರೀಧರ ಮೂರ್ತಿ ಅವರು, ತಪ್ಪದೆ ಮುಂದೆ ಓದಿ…

‘ಮಧುರ ಮಧುರವೀ ಮಂಜುಳ ಗಾನ’ ದ ಘಂಟಸಾಲ ವಿಶೇಷ ಕಾರ್ಯಕ್ರಮಕ್ಕೆ ಘಂಟಸಾಲ ಅವರ ಮಗ ಬಂದಿದ್ದರು. ತಮ್ಮ ತಂದೆಯ ಕುರಿತು ಮಾತನಾಡುತ್ತಾ ಅವರು ‘ವೀರಕೇಸರಿ’ ಚಿತ್ರದ ‘ಮೆಲ್ಲುಸಿರೀ ಸವಿಗಾನ’ ಗೀತೆಯನ್ನು ತಮ್ಮ ತಂದೆ ಸುಮನಸ ರಂಜಿನಿ ರಾಗದಲ್ಲಿ ಸೃಷ್ಟಿ ಮಾಡಿದ್ದಾರೆಂದೂ ಅಲ್ಲಿಯವರೆಗೂ ಮತ್ತು ಅಲ್ಲಿಂದ ಮುಂದೆಯೂ ಭಾರತೀಯ ಚಿತ್ರರಂಗದಲ್ಲಿ ಆ ರಾಗವನ್ನು ಯಾರೂ ಬಳಸಿಲ್ಲವೆಂದೂ ಹೇಳಿದರು. ನನಗೆ ಈ ರಾಗದ ಹೆಸರೇ ಕುತೂಹಲ ಹುಟ್ಟಿಸಿತು. ಅಲ್ಲಿಯವರೆಗೂ ನಾನು ಈ ರಾಗದ ಹೆಸರನ್ನೇ ಕೇಳಿರಲಿಲ್ಲ. ಯಾವ ಶಾಸ್ತ್ರಗ್ರಂಥ ತಡಕಾಡಿದರೂ ಈ ರಾಗದ ವಿವರ ಸಿಕ್ಕಲಿಲ್ಲ.

ಸಾಮಾನ್ಯವಾಗಿ ಹೀಗೆ ನನಗೆ ರಾಗಗಳ ಕುರಿತು ಅನುಮಾನ ಬಂದಾಗ ನಾನು ಕೇಳುವುದು ಗಾಯಕಿ ಎಂ.ಡಿ.ಪಲ್ಲವಿಯವರನ್ನು ಈ ಸಲವೂ ಅವರನ್ನೇ ಕೇಳಿದೆ. ಆದರೆ ಅವರು ಅದು ಕರ್ನಾಟಕಿ ಸಂಗೀತದ ರಾಗವಾದ್ದರಿಂದ ಯಾರಾದರೂ ಕರ್ನಾಟಕಿ ಸಂಗೀತದ ಪರಿಣಿತರನ್ನು ಕೇಳುವುದು ಸೂಕ್ತ ಎಂದು ಸೂಚಿಸಿದರು. ಹಲವು ಹೆಸರು ಚರ್ಚೆಗೆ ಬಂದು ಕೊನೆಗೆ ನನಗೆ ಬಹಳ ಜನ ವಿದ್ವಾನ್ ಆರ್.ಕೆ.ಪದ್ಮನಾಭ ಅವರ ಹೆಸರನ್ನು ಸೂಚಿಸಿದರು. ನನಗೆ ಅವರು ಆಗ ಪರಿಚಿತರಾಗಿರಲಿಲ್ಲ. ಒಮ್ಮೆ ಎನ್.ಆರ್.ಕಾಲೋನಿ ರಾಮಮಂದಿರದಲ್ಲಿ ಅವರ ಕಚೇರಿ ಇತ್ತು ಧೈರ್ಯ ಮಾಡಿ ಕಚೇರಿ ನಂತರ ಭೇಟಿ ಮಾಡಿದೆ. ಆದರೆ ನನಗೆ ಅಚ್ಚರಿಯಾಗುವಂತೆ ‘ನಿಮ್ಮ ಲೇಖನಗಳನ್ನು ಓದಿದ್ದೇನೆ.. ನಾನೇ ನಿಮ್ಮನ್ನು ಭೇಟಿ ಮಾಡ ಬೇಕು ಎಂದಿದ್ದೆ ಮನೆಗೆ ಬನ್ನಿ’ ಎಂದರು. ಅವರ ಮನೆಗೆ ಹೋದಾಗ ಅಮೃತವರ್ಷಿಣಿ ಜನ್ಯ ಸುಮನಸ ರಂಜಿನಿ ರಾಗವನ್ನು ವಿವರಿಸಿ ಅದು ಬಳಕೆಯಾಗಿರುವ ಬೇರೆ ಬೇರೆ ಸಂದರ್ಭಗಳು ಕೀರ್ತನೆಗಳನ್ನೂ ತಿಳಿಸಿದರು. ಹೀಗೆ ನನ್ನ ಅವರ ನಡುವೆ ರಾಗದ ಅನುಬಂಧ ಬೆಳೆಯಿತು. ಕಲ್ಯಾಣಿ, ಶಿವರಂಜಿನಿ, ಹಿಂದೋಳ, ಮೋಹನ, ಅಭೇರಿ ಹೀಗೆ ಬೇರೆ ಬೇರೆ ಕರ್ನಾಟಕಿ ರಾಗಗಳನ್ನು ಅದನ್ನು ಆಧರಿಸಿದ ಚಿತ್ರಗೀತೆಗಳನ್ನು ಚರ್ಚಿಸುವ ಪರಿಪಾಠ ಬೆಳೆದಿದ್ದು ಅವರ ಜೊತೆಗಿನ ಒಡನಾಟ ನಿರಂತರವಾಗಲು ಕಾರಣವಾಯಿತು. ಹಿತವಾದ ಸಂಗೀತ, ಸುಗ್ರಾಸ ಭೋಜನ ಹೀಗೆ ಆರ್.ಕೆ.ಪದ್ಮನಾಭ ಅವರ ಮನೆಯಲ್ಲಿ ಮುಂದೆ ನನಗೆ ಅನೇಕ ಸುಂದರ ದಿನಗಳು ಲಭಿಸಿದವು.

‘ಕನ್ನಡ ಚಿತ್ರಗೀತೆಗಳಲ್ಲಿ ರಾಗಗಳ ಬಳಕೆ’ ಎನ್ನುವ ವಿಷಯದ ಕುರಿತು ಪುಸ್ತಕ ಬರೆಯುತ್ತೇನೆ ಎಂದು ಅವರಿಗೆ ಮಾತು ಕೂಡ ಕೊಟ್ಟೆ. ನನ್ನ ಅಧ್ಯಯನ ಪೂರ್ಣವಾಗದೆ ಇನ್ನೂ ಆ ಪುಸ್ತಕ ಬಂದಿಲ್ಲ. ಆದರೆ ಅವರು ನನ್ನ ಬಗ್ಗೆ ಇಟ್ಟ ವಿಶ್ವಾಸ ಕಡಿಮೆಯಾಗಿಲ್ಲ. ನಾನು ಹೊನ್ನಪ್ಪ ಭಾಗವತರ್ ಅವರ ಬಗ್ಗೆ ಪುಸ್ತಕ ಬರೆಯುವಾಗ ಅವರ ಕೃತಿಗಳನ್ನು ದೊರಕಿಸಿ ಕೊಡುವಲ್ಲಿ, ಅದರ ಸ್ವರೂಪವನ್ನು ಅರ್ಥ ಮಾಡಿ ಕೊಳ್ಳುವಲ್ಲಿ ಆರ್.ಕೆ.ಪದ್ಮನಾಭ ಅವರು ನೀಡಿದ ಮಾರ್ಗದರ್ಶನ ಬಹಳ ಮುಖ್ಯವಾದದ್ದು. ಜಿ.ಕೆ.ವೆಂಕಟೇಶ್ ಬಹಳ ವರ್ಷಗಳ ಕೆಳಗೆ ಸೂಚಿಸಿದ್ದ ವಸ್ತುವನ್ನು ಕಾದಂಬರಿ ಮಾಡುತ್ತೇನೆ ಎಂದವನು ಅಸಾಧ್ಯ ಎಂದು ಕೈ ಚೆಲ್ಲಿದ್ದ ನನಗೆ ಉತ್ಸಾಹ ತುಂಬಿದವರು ಆರ್.ಕೆ.ಪದ್ಮನಾಭ ಅವರೇ ನನ್ನ ‘ನಾದದ ನೆರಳು’ ಕಾದಂಬರಿಯಲ್ಲಿ ಸಂಗೀತದ ಶಾಸ್ತ್ರೀಯ ವಿಷಯಗಳು ಗಟ್ಟಿಯಾಗಿ ಬರಲು ಅವರ ಸಲಹೆಗಳೇ ಕಾರಣ. ಕಾದಂಬರಿಯಲ್ಲಿನ ಒಂದೆರಡು ಘಟನೆಗಳು ನೇರವಾಗಿ ಅವರ ಜೀವನದ ಅನುಭವಗಳೇ ಹೀಗೆ ಆರ್.ಕೆ.ಪದ್ಮನಾಭ ಕಳೆದ ಹದಿನೈದು ವರ್ಷಗಳಲ್ಲಿ ನನ್ನ ಜೀವನದಲ್ಲಿ ವಹಿಸಿದ ಪಾತ್ರ ಬಹಳ ಮುಖ್ಯವಾದದ್ದು.

ಆರ್.ಕೆ. ಪದ್ಮನಾಭ ಶ್ರೇಷ್ಠ ಸಂಗೀತಗಾರರು, ಗಾಯನ ಸಮಾಜ ಗಟ್ಟಿಗೊಳ್ಳುವಲ್ಲಿ ಮುಖ್ಯಪಾತ್ರ ವಹಿಸಿದವರು. ಉತ್ತಮ ಬರಹಗಾರರೂ ಕೂಡ ಸಂಗೀತದ ಕುರಿತು ಕಾದಂಬರಿಯೊಂದನ್ನೂ ಕೂಡ ಅವರು ಬರೆದಿದ್ದಾರೆ. ಉತ್ತಮ ನಟರೂ ಕೂಡ ‘ವಾದಿರಾಜ’ರ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದವರು. ತಮ್ಮ ಸ್ವಂತ ಊರಾದ ರುದ್ರಪಟ್ಟಣಂನಲ್ಲಿ ನಾದ ಗ್ರಾಮವನ್ನೇ ರೂಪಿಸಿದವರು. ಇಂತಹ ಆರ್.ಕೆ.ಪದ್ಮನಾಭ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಕೂಡ ಆಗಿದ್ದರು. ಈಗ ಅವರಿಗೆ ಕೇಂದ್ರ ಸಂಗೀತ ನೃತ್ಯ ಅಕಾಡಮಿಯ ಪುರಸ್ಕಾರ ದೊರೆತ ಸಂದರ್ಭದಲ್ಲಿ ಎಸ್.ಬಿ.ಐ ಗೆಳೆಯರ ಬಳಗದವರು ಅವರಿಗೆ ಸನ್ಮಿತ್ರ ಸಂಗೀತ ಸುಧಾರತ್ನ’ ಎನ್ನುವ ಬಿರುದನ್ನು ಸನ್ಮಾನದ ಜೊತೆ ನೀಡುತ್ತಿದ್ದಾರೆ ಇದೇ ಸಂದರ್ಭದಲ್ಲಿ ಬೆಂ.ಶ್ರೀ.ರವೀಂದ್ರ ಅವರು ಬರೆದ ವಿದ್ವಾನ್ ಆರ್.ಕೆ.ಪದ್ಮನಾಭ ಅವರ ಜೀವನದ ಮುಖ್ಯ ಘಟನೆಗಳನ್ನು ಒಳಗೊಂಡ ‘ಪದ್ಮನಾದ’ ಎನ್ನುವ ಜೀವನ ಚಿತ್ರಣದ ಕೃತಿ ಬಿಡುಗಡೆ ಆಗಿದೆ. ಆರ್.ಕೆ.ಪದ್ಮನಾಭ ಈಗ ಕೆಲವು ದಿನಗಳ ಹಿಂದೆ ಪೋನ್ ಮಾಡಿ ‘ಈ ಪುಸ್ತಕಕ್ಕೆ ನೀನು ಮುನ್ನುಡಿ ಬರೆಯ ಬೇಕು’ ಎಂದರು. ನನಗೆ ಅಚ್ಚರಿ ಮತ್ತು ಆತಂಕ ‘ನಿನಗಿಂತ ನನ್ನನ್ನು ಚೆನ್ನಾಗಿ ಬಲ್ಲವರು ಯಾರಿದ್ದಾರೆ’ ಎಂದಾಗ ಧನ್ಯತೆ. ಮುನ್ನುಡಿ ಬರೆಯುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದೇ ಭಾವಿಸುತ್ತೇನೆ.

ಸಂಗೀತದ ಶಾಸ್ತ್ರೀಯ ಕಲಿಕೆ ಇಲ್ಲದ ನನ್ನಂತವನಿಗೆ ಆರ್.ಕೆ.ಪದ್ಮನಾಭ ಅವರಂತಹ ಮೇರು ಸಂಗೀತಗಾರರ ನಿಕಟ ಒಡನಾಟ ಸಿಕ್ಕಿದ್ದು ಪುಣ್ಯ ವಿಶೇಷವೆಂದೇ ಭಾವಿಸಿದ್ದೇನೆ. ಅವರ ಪ್ರೀತಿ ವಿಶ್ವಾಸ, ಮಾರ್ಗದರ್ಶನ ಹೀಗೇ ಸದಾ ನನ್ನ ಪಾಲಿಗೆ ಲಭಿಸುತ್ತಿರಲಿ ಎನ್ನುವುದೇ ಭಗವಂತನಲ್ಲಿ ನನ್ನ ಪ್ರಾರ್ಥನೆ.


  •  ಎನ್.ಎಸ್.ಶ್ರೀಧರ ಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading